ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು.
“ಹಾಯ್, ಈಸ್ ಸಂತಿಂಗ್ ರಾಂಗ್ ವಿತ್ ಯೂ?” ಎಂದು ಜಾರ್ಜ್ ಪಕ್ಕದಲ್ಲಿ ಕುಳಿತರು. ದುಃಖ ಕಟ್ಟೆಯೊಡೆಯುತ್ತಿದ್ದ ಎಲೆನಾಗೆ ಸಹಾನುಭೂತಿ ತೋರುವ ಮಾನವೀಯತೆಯಿಂದ ತುಂಬಿದ ಅಪರಿಚಿತನಲ್ಲೂ ಏನೋ ಆಸರೆ ಕಂಡಿತು; ದುಃಖ ಸಾಗರದಲ್ಲಿ ಈಜುವವರಿಗೆ ಹುಲ್ಲು ಕಡ್ಡಿಯಂತೆ, ಅವಳೂ ಕಣ್ಣು ಒರೆಸಿಕೊಂಡು ಕೃತಕ ಮುಗುಳುನಗೆ ನಕ್ಕು “ಲೈಫ್ ಈಸ್ ಸಂ ಟೈಂಸ್ ವೆರಿ ಕ್ರೂಯಲ್!” ಎಂದಳು.
ಪಾರ್ಕಿನಲ್ಲಿ ಅಲ್ಲಲ್ಲಿ ಕುಳಿತಿದ್ದ, ಓಡಾಡುತ್ತಿದ್ದ, ಆಡುತ್ತಿದ್ದ ಮಕ್ಕಳ ಯಾವ ಪರಿವೆಯೂ ಇಲ್ಲದೆ ಅವರು ಕಷ್ಟ ಸುಖಗಳನ್ನು ಹಂಚಿಕೊಂಡರು. ಬಾಳ ಮುಚ್ಚಂಜೆಯಲ್ಲಿದ್ದ ಡಾ|| ಜಾರ್ಜ್ ೬೨ ವರ್ಷದ ಸದೃಢ ವ್ಯಕ್ತಿಯಾಗಿದ್ದರು. ಎಲೆನಾ ೫೨ ವರ್ಷದಲ್ಲಿ ಬಾಳಿನ ಸಾಕಷ್ಟು ಕಹಿ ಉಂಡು ಸ್ವಲ್ಪ ಸೊರಗಿದ್ದರೂ ಆಕರ್ಷಕವಾಗಿದ್ದಳು.
ಕ್ಷಣಾರ್ಧದಲ್ಲಿ ಅವರಿಬ್ಬರಲ್ಲಿ ಆಕರ್ಷಣೆ ಉಂಟಾಗಿ ಒಬ್ಬರು ಇನ್ನೊಬ್ಬರಿಗೆ ಸ್ಪಂದಿಸುವಾಗ ಅವರ ಸಂವೇದನೆಗಳು ಒಂದೇ ನಿಟ್ಟಿನಲ್ಲಿ ಸಾಗತೊಡಗಿದವು.
“ನನ್ನ ಜೀವನ ಇಂದು ಬರಿದಾಗಿದೆ. ನನ್ನ ಹತ್ತು ವರ್ಷದ ಮಗಳು, ನಾನು ಇಬ್ಬರೇ ಈ ಬಾಳ ಹಾದಿಯಲ್ಲಿ ಸಾಗಿದ್ದೇವೆ. ಕಷ್ಟ ಸುಖಗಳನ್ನು ನುಂಗುತ್ತಿದ್ದೇವೆ” ಎಂದಳು ಎಲೆನಾ ಸ್ಪಂದಿಸಿದ ಜಾರ್ಜ್‌ನೊಡನೆ.
“ನಿನ್ನ ಕಥೆ ಏನೆಂದು ಪೂರ್ತಿ ಹೇಳಬಾರದೇ?” ಎಂದರು ಜಾರ್ಜ್.
“ನಿಮ್ಮ ಸಹಾನುಭೂತಿ, ಸ್ಪಂದನೆಯಿಂದ ನಾನು ಧನ್ಯಳಾಗಿರುವೆ. ನಮ್ಮ ಈ ದಿನದ ಮೊದಲ ಪರಿಚಯದಲ್ಲಿ ನಿಮ್ಮ ಸ್ನೇಹ ಸಿಂಚನದಿಂದ ನನ್ನ ಹೃದಯ ಬಿಚ್ಚಿ ಮಾತಾಡಬೇಕೆನಿಸುತ್ತದೆ. ಆದರೆ ಇಂದು ನಾನು ಇಷ್ಟು ಮಾತ್ರ ಹೇಳಬಲ್ಲೆ: “ನಾನೊಂದು ದುರ್ದೈವಿ, ನನ್ನ ಮದುವೆ ಮಹಲು ಕುಸಿದು ಬಿದ್ದು ನನ್ನ ಕೆಟ್ಟ ಚಾಳಿಯ ಗಂಡನಿಂದ ಡೈರ್ವೋಸ್ ಪಡೆದಿರುವೆ. ಅದಕ್ಕಾಗಿ ನಾನು ಪರಿತಪಿಸುತ್ತಿಲ್ಲ. ನನ್ನ ಈ ಕಣ್ಣೀರು, ದುಃಖ ಎಲ್ಲವೂ ನನ್ನ ಹತ್ತು ವರ್ಷದ ಮಗಳಿಗಾಗಿ. ಅವಳಿಗೆ ಈಗ ತಂದೆಯಿಲ್ಲ. ಅವಳ ಬಾಳಿಗೆ ನಾನೊಬ್ಬಳೇ ತಾಯಿತಂದೆ. ಎರಡರ ಸ್ಥಾನವನ್ನು ನಾನೇ ತುಂಬಬೇಕು” ಎಂದು ಹೇಳುತ್ತಾ ಕರವಸ್ತ್ರದಿಂದ ಕಣ್ಣು ಒರೆಸಿಕೊಂಡಳು.
ಡಾ|| ಜಾರ್ಜ್ ಸುಸಂಸ್ಕೃತ ಜೀವಿ. ಇತರರ ವೇದನೆಯನ್ನು ಅರ್ಥೈಸುವ ಸಂಪನ್ನ ಹೃದಯ ಅವರದು. ಸಂಜೆ ಸೂರ್ಯ ಮುಳುಗಿ ಕತ್ತಲಾಗುತ್ತ ಬಂದಾಗ ಇಬ್ಬರೂ ಪಾರ್ಕಿನಿಂದ ಹೊರಬಂದು ಬೀಳ್ಕೊಡುವಾಗ “ನಾಳೆ ಮತ್ತೆ ಸಂಧಿಸೋಣ” ಎಂದು ಸ್ನೇಹದ ಹಸ್ತಲಾಘವ ಮಾಡಿದರು. ಹೀಗೆ ಎಲೆನಾ ಹಾಗೂ ಡಾ|| ಜಾರ್ಜ್‌ರ ಸಾಕಷ್ಟು ಭೇಟಿಗಳು ಸಾಗಿದವು. ಅವರಲ್ಲಿ ಗಾಢ ಸ್ನೇಹ ಬೆಳೆಯಿತು. ಡಾ|| ಜಾರ್ಜ್‌ರ ಪರಿಚಯ ಸ್ನೇಹವಾದ ಮೇಲೆ ಎಲೆನ ಒಂದಲ್ಲ ಒಂದು ರೀತಿಯಲ್ಲಿ ತನ್ನ ಹೃದಯದ ಭಾವನೆಗಳನ್ನು ತೋಡಿಕೊಂಡು ಡಾ|| ಜಾರ್ಜ್‌ರೊಂದಿಗೆ ಇನ್ನಷ್ಟು ಹತ್ತಿರವಾದಳು.
ಅಂದು ಅವರು ಕ್ಯಾಂಡಲ್ ಲೈಟ್ ಡಿನ್ನರ್‌ಗೆಂದು ಹೊಟೇಲಿಗೆ ಬಂದಿದ್ದರು. ಊಟ ಸವಿಯುತ್ತಾ ಅವರಿಬ್ಬರ ಬಾಳಿನ ಬಾಗಿಲು ವಿಸ್ತಾರವಾಗಿ ತೆರೆಯಿತು. ಎಲೆನಾಗೆ ಡಾ|| ಜಾರ್ಜ್ ಅವರ ಬಾಳ ಬಗ್ಗೆ ತಿಳಿಯುವ ಹೆಚ್ಚಿನ ಕುತೂಹಲಕ್ಕೆ ಅವಕಾಶ ಇಂದಿನವರೆಗೂ ಬಂದಿರಲಿಲ್ಲ. ಅರವತ್ತರ ಜಾರ್ಜ್ ಅವರ ಬಾಳಿನಲ್ಲಿ ಮದುವೆ, ಹೆಣ್ಣು, ಮಕ್ಕಳು ಇದ್ದಿರಬಹುದೆಂಬ ಶಂಕೆ ಅವಳಿಗಿತ್ತು.
“ಎಲೆನಾ! ನಾನು ಈಗ ಒಬ್ಬಂಟಿಯಾಗಿ ಹಲವು ವರ್ಷಗಳಾದವು. ನನ್ನ ಹನ್ನೆರಡು ವರ್ಷದ ಮಗಳನ್ನು, ನನ್ನನ್ನು ತೊರೆದು ನನ್ನ ಪತ್ನಿ ಹೋಗಿಬಿಟ್ಟಳು. ಅವಳಿಗೆ ಅವಳ ವೃತ್ತಿರಂಗದಲ್ಲಿ ಹೊಸ ಪರಿಚಯವಾಗಿ ನನ್ನಿಂದ ಡೈವೋರ್ಸ್ ಪಡೆದು ನಮ್ಮ ಬಾಳನ್ನು ಬರಿದುಮಾಡಿಬಿಟ್ಟಳು”, ಎಂದರು ಡಾ|| ಜಾರ್ಜ್. ಇಷ್ಟು ದಿನವೂ ಎಲೆನಾಳಿಗೆ ಹೇಳದಿದ್ದ ಬಾಳಿನ ಒಂದು ಮಹತ್ತರ ವಿಷಯ ಇಂದು ಬಾಯಿ ಬಿಟ್ಟು ಹೇಳಿದ್ದರು.
“ತಾವಿಬ್ಬರೂ ಒಂದೇ ರೀತಿಯ ದೋಣಿಯಲ್ಲಿ ಹೋಗುತ್ತಿರುವ ಹಾಗೆ ಎಲೆನಾಳಿಗೆ ಅನಿಸಿತು. ಇಬ್ಬರೂ ಪರಿತ್ಯಕ್ತರು, ಇಬ್ಬರಿಗೂ ಒಂದೊಂದು ಹೆಣ್ಣು ಮಗು. ಇದೆಂತಹ ಸಾಮ್ಯತೆ ಇಬ್ಬರ ಬಾಳಲ್ಲಿ” ಎಂದು ನಿಟ್ಟುಸಿರು ಬಿಟ್ಟಳು ಎಲೆನಾ.
ಇಬ್ಬರ ಬರಿದಾದ ಬಾಳ ಬಟ್ಟಲು ಪರಸ್ಪರ ಸ್ನೇಹ ಪ್ರೀತಿಯಿಂದ ಮತ್ತೆ ತುಂಬುತ್ತಾ ಬಂತು. ಹೀಗೆ ಸಾಗಿತು ಎರಡುಮೂರು ವಸಂತಗಳು. ಒಮ್ಮೆ ಡಾ|| ಜಾರ್ಜ್‌ರವರಿಗೆ ಭಾರತಕ್ಕೆ ಹೋಗುವ ಅವಕಾಶ ಬಂತು.
“ಎಲೆನಾ! ಭಾರತಕ್ಕೆ ನನ್ನೊಡನೆ ಬರುವಿಯಾ, ನನ್ನ ಗೆಳೆಯನ ಮದುವೆಗೆ ಹೊರಟಿರುವೆ?” ಎಂದರು. “ಓ! ಐ ಲವ್ ಇಂಡಿಯಾ. ಇಟ್ ವುಡ್ ಬಿ ಎ ಗ್ರೇಟ್ ಅಪಾರ್ಚ್ಯನಿಟಿ ಟು ಸೀ ಅನ್ ಇಂಡಿಯನ್ ಮ್ಯಾರೇಜ್ ಟೂ” ಎಂದಳು ಎಲೆನಾ.
“ನೀನು ಭಾರತದ ರಾಜಧಾನಿ ದೆಹಲಿ ಬಗ್ಗೆ ಕೇಳಿರಬಹುದು. ಆದರೆ ಪ್ರೇಮ ಸ್ಮಾರಕವಿರುವ ಪ್ರೇಮನಗರಿ ಆಗ್ರಾದ ಹೆಸರನ್ನು ಕೇಳಿರುವೆಯಾ?” ಎಂದರು.
“ಸ್ವಲ್ಪ ಚರಿತ್ರೆ, ಭೂಗೋಳ ಗೊತ್ತು. ಆದರೆ ನನಗೆ ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಗೌರವವಿದೆ. ಅದು ಸನಾತನ ದೇಶ. ಅಲ್ಲಿಯದು ಪವಿತ್ರ ಪುರಾತನ ಸಂಸ್ಕೃತಿ ಅಲ್ಲಿಯ ಮದುವೆಗಳ ಬಗ್ಗೆ ಬಹಳಷ್ಟು ಕೇಳಿರುವೆ” ಎಂದಳು.
“ನನ್ನೊಡನೆ ನನ್ನ ಮಗಳು ಎಲೆಜೆಬತ್ ಬರುವುದು ನಿಮಗೆ ಅಭ್ಯಂತರವಿಲ್ಲವೇ?” ಎಂದಳು.
“ಇದೇ ಪ್ರಶ್ನೆ ನಾನು ನಿನ್ನ ಕೇಳುವೆ ಎಲೆನಾ. ನಾನು ನನ್ನ ಮಗಳು ಲೀಸಾ ಜೊತೆ ಬರುವುದು ನಿನಗೆ ಅಡ್ಡಿಯಿಲ್ಲ ತಾನೇ?” ಎಂದರು ಜಾರ್ಜ್.
ಇಬ್ಬರೂ ಮನಸಾರ ನಕ್ಕು, “ಅದು ಬಹಳ ಒಳ್ಳೆಯದೇ ಆಯಿತು. ಎಲಿಜೆಬತ್, ಲೀಸಾ ಒಬ್ಬರನ್ನೊಬ್ಬರು ಸಂಧಿಸಬಹುದು. ಇಬ್ಬರಿಗೂ ಒಳ್ಳೆಯ ಕಂಪನಿ ಸಿಗುತ್ತದೆ” ಎಂದಳು ಎಲೆನಾ.
ಅವರ ಪ್ರಯಾಣದ ಪಾಸ್ಪೋರ್ಟ್, ವೀಸಾ ಎಲ್ಲ ತಿಂಗಳಲ್ಲೇ ಸಿದ್ಧವಾಗಿ ಅವರು ಆಗ್ರಾಕ್ಕೆ ನವೆಂಬರ್ ತಿಂಗಳಲ್ಲಿ ಬಂದಿಳಿದರು. ಹೋಟೆಲಿನಲ್ಲಿ ತಂಗಿ ದಿನವೂ ಪ್ರವಾಸಿಗಳ ಬಸ್ಸುಗಳಲ್ಲಿ ಹೊರಟು ಚಾರಿತ್ರಿಕ ಸ್ಥಳಗಳನ್ನು ನೋಡಿದರು.
ಅಂದು ಪೌರ್ಣಿಮೆ. ರಾತ್ರಿಯ ಬೆಳದಿಂಗಳ ಸೊಬಗಿನಲ್ಲಿ ಅವರಿಬ್ಬರೂ ಅವರವರ ಮಕ್ಕಳೊಂದಿಗೆ ಪ್ರೇಮಸ್ಮಾರಕ ತಾಜ್‌ಮಹಲ್ ಮುಂದೆ ಲಾನ್‌ನಲ್ಲಿ ಕುಳಿತು ಸ್ವರ್ಗೀಯ ಸೌಂದರ್ಯ ಅನಿರ್ವಚನೀಯ ಆನಂದವನ್ನು ಆಹ್ಲಾದಿಸುತ್ತಿದ್ದರು. ಮಕ್ಕಳು ಕೈ ಕೈಹಿಡಿದು ಹತ್ತಿರದಲ್ಲೇ ತಿರುಗಾಡುತ್ತಿದ್ದರು. ಎಲೆನಾ, ಜಾರ್ಜ್‌ರವರು ತಾವು ವೀಕ್ಷಿಸಿ ಬಂದ ಗೆಳೆಯನ ಮದುವೆಯ ಸಂಭ್ರಮವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಂಡು ಮಾತನಾಡುತ್ತಿದ್ದರು.
“ಭಾರತೀಯ ಮದುವೆಗಳು ಬಹುಕಾಲ ನಿಲ್ಲುತ್ತವೆ. ನಮ್ಮ ದೇಶದ ಮದುವೆಗಳಂತೆ ಬಹುಬೇಗ ಮುರಿದುಬೀಳುವುದಿಲ್ಲ” ಎಂದಳು.
“ಹೌದು, ಇಲ್ಲಿಯ ಮದುವೆಗಳು ಬಹು ಪವಿತ್ರ ರೀತಿಯಲ್ಲಿ ನಡೆಯುತ್ತವೆ. ಗಂಡು ಹೆಣ್ಣು ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಬಾಳಿನ ಕೊನೆಯವರೆಗೂ ಹೊಂದಿಕೊಂಡು ಬಾಳುತ್ತಾರೆ” ಎಂದು ಸಮರ್ಥಿಸಿ ಹೇಳಿದರು ಜಾರ್ಜ್. ಇವರು ಗಹನವಾದ ಚರ್ಚೆ ನಡೆಸುತ್ತಿರುವಾಗ ಎಲಿಜೆಬತ್, ಲೀಸಾ ಒಂದು ಪ್ರಶ್ನೆಯನ್ನು ಬಗೆಹರಿಸಿಕೊಳ್ಳಲು ಓಡಿ ಬಂದರು.
“ಯೂ ಆರ್ ಮೈ ಮಮ್ಮಿ, ಅಂಡ್ ಹೀ ಈಸ್ ಲೀಸಾ’ಸ್ ಡ್ಯಾಡಿ. ಐ ವಾಂಟ್ ಮೈ ಡ್ಯಾಡಿ ಅಂಡ್ ಲೀಸಾ ವಾಂಟ್ಸ್ ಹರ್ ಮಮ್ಮಿ” ಎಂದಳು ಎಲಿಜೆಬತ್.
ಅವರ ಸ್ನೇಹ ಪ್ರೀತಿ ಎಷ್ಟು ಪರಿಪಕ್ವವಾಗಿತ್ತೆಂದರೆ ಒಡನೆ ಎಲೆನಾ ಹೇಳಿದಳು “ಐ ಆಮ್ ಯುವರ್ ಮಮ್ಮಿ, ಹೀ ಈಸ್ ಯುವರ್ ಡ್ಯಾಡಿ ಅಂಡ್ ಫಾರ್ ಲೀಸಾ ಐ ಆಮ್ ಹರ್ ಮಮ್ಮಿ ಟೂ” ಎಂದಳು.
ಮಕ್ಕಳ ಸಂತಸದಲ್ಲಿ ಒಬ್ಬರಿಗೊಬ್ಬರು ತಮಗರಿವಿಲ್ಲದಂಥೆ ಮದುವೆಗೆ ಸಮ್ಮತಿಸಿದ್ದರು. ಜಾರ್ಜ್‌ಗೆ ಬಹುದಿನದಿಂದ ಮನಸ್ಸಿನಲ್ಲಿದ್ದುದನ್ನು ಎಲೆನಾ ಮಕ್ಕಳ ಪ್ರಶ್ನೆಯ ಉತ್ತರದಲ್ಲಿ, ಉತ್ತರ ಹೇಳಿದಂತೆ ಎನಿಸಿ ಧನ್ಯತೆ ಸೂಚಿಸಿದರು. ಅಂದೇ ಆ ಪ್ರೇಮ ಸ್ಮಾರಕದ ಎದುರಿನಲ್ಲಿ ಅವರಿಬ್ಬರೂ ಭಾರತೀಯ ರೀತಿಯಲ್ಲಿ ಶಾಸ್ತ್ರೋಕ್ತ ಮದುವೆಯಾಗಲು ನಿರ್ಧರಿಸಿದರು.
ಒಂದು ವಾರದೊಳಗೆ ಎಲ್ಲಾ ತಯಾರಿಯಾಗತೊಡಗಿತು. ಡಾ|| ಜಾರ್ಜ್‌ರವರ ಗೆಳೆಯ ಇವರ ಮದುವೆಗೆ ಬಹಳಷ್ಟು ನೆರವು ನೀಡಿ ಎಲ್ಲಾ ಸಿದ್ಧತೆಗಳನ್ನು ಮಾಡಿದರು.
ಷಹನಾಯಿ ವಾದನ, ಹೂ, ತಳಿರು ತೋರಣದಿಂದ ತುಂಬಿದ ಷಾಮಿಯಾನ ಅಥಿತಿಗಳು, ಸ್ನೇಹಿತರಿಂದ ತುಂಬಿಹೋಯಿತು. ವೇದೋಕ್ತ ಮಂತ್ರ ಘೋಷಣೆ, ಸಂಗೀತ, ನೃತ್ಯ, ಮೃಷ್ಟಾನ್ನ ಭೋಜನ ಎಲ್ಲವೂ “ಬಾರಾತಿ” ಕುದರೆಯ ಮೇಲೆ ಬಂದ ಮಧುಮಗ, ಮದುಮಗಳು ಹಾರ ವಿನಿಮಯ, ಸಿಂಧೂರ ಮಾಂಗಲ್ಯಧಾರಣೆ ಶಾಸ್ತ್ರೋಕ್ತವಾಗಿ ನಡೆಯಿತು. ವಿದೇಶದ ಅರವತ್ನಾಲ್ಕನ್ನು ದಾಟಿದ ಜಾರ್ಜ್ ಪೇಟಾ ಪೈಜಾಮ ಕುರ್ತಾ ಧರಿಸಿ ಉತ್ತರ ಭಾರತೀಯ ಉಡುಪಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ತುಂಬಿ ಬಂದ ಸಂತಸ ಜಾರ್ಜ್‌ನ್ನು ಯುವಕನಂತೆ ಕಂಗೊಳಿಸುವಂತೆ ಮಾಡಿತ್ತು. ಇನ್ನು ಬಿಳಿಯ ಸುಂದರಿ ಎಲೆನಾ ಉತ್ತರ ಭಾರತದ ಮದುವಣಗಿತ್ತಿಯಾಗಿ ಅತ್ಯಂತ ಝಗಮಗಿಸುವ ವಸ್ತ್ರ ಆಭರಣ ಅಲಂಕಾರಗಳಿಂದ ಐವತ್ತರಕ್ಕಿಂತಲೂ ಬಹಳ ಚಿಕ್ಕವಳಾಗಿ ಕಾಣುತ್ತಿದ್ದಳು. ತಲೆಯಲ್ಲಿ ಸಿಂಧೂರ, ಕೈಯಲ್ಲಿ ಬಳೆ, ಕಿವಿಯಲ್ಲಿ ಜೋಲಾಡುವ ಝುಮುಕಿ, ಎಲ್ಲವೂ ಅವಳನ್ನು ಸುರಸುಂದರಿಯಂತೆ ಕಾಣುವ ಹಾಗೆ ಮಾಡಿತ್ತು.
“ಭಾರತೀಯ ಮದುವೆಯಲ್ಲಿ ಎಂತಹ ದಿವ್ಯ ಭವ್ಯತೆ ಇದೆ ಅಲ್ಲವೆ?”
“ಯಾ, ದೇರ್ ಈಸ್ ಸಂತಿಂಗ್ ಡಿವೈನ್ ಅಬೌಟ್ ಇಟ್” ಎಂದಳು ಎಲೆನಾ.
“ಈಸ್ ಇಟ್ ನಾಟ್ ಎ ವಂಡರ್‌ಫುಲ್ ಎಕ್ಸ್‌ಪೀರಿಯನ್ಸ್? ಐ ಲೌ ಎವ್ರಿತಿಂಗ್ ಅಬೌಟ್ ಇಟ್. ಐ ಅಡ್ಮೈರ್ ದ ಮ್ಯಾರೇಜ್ ಬಿಕಾಸ್ ದೇ ಆರ್ ಮೇಡ್ ಫಾರ್ ಎ ಲೈಫ್ ಟೈಮ್”.
ಎಲೆನಾಗೆ ಭಾರತೀಯ ಶಾಸ್ತ್ರೀಯ ಪದ್ಧತಿಯ ವೇದ ಘೋಷಣೆ, ಮದುವೆಯ ಮೆರವಣಿಗೆ, ಸಂಭ್ರಮ, ಸಂತಸ, ಅಗ್ನಿಸಾಕ್ಷಿಯ ಸಪ್ತಪದಿ, ಅರಿಶಿನ, ಕುಂಕುಮ, ಚಂದನ, ಗಂಧ, ಸಿಂಧೂರ ಹೂವು ಮಾವು, ಬಾಳೆ, ತಳಿರು, ತೋರಣ ಅಲಂಕಾರ, ರೇಷ್ಮೆ ಉಡುಗೆ ತೊಡುಗೆಗಳ ಸೌಂದರ್ಯ, ಚಿನ್ನ ಬೆಳ್ಳಿ ಆಭರಣಗಳ ಝಗಮಗ, ಅದರ ಜೊತೆ ಮೃಷ್ಟಾನ್ನ ಭೋಜನ, ಸಿಹಿ ಖಾರ ಖಾದ್ಯಗಳು, ಪಾನೀಯ, ಪಾಯಸ, ಅತಿಥಿ ಕೂಟ ಎಲ್ಲವೂ ಅವಳ ಮನಸ್ಸನ್ನು ತುಂಬಿ ಅವರ ಮಾತುಕತೆಯ ಎಳೆ ಎಳೆಯಲ್ಲಿ ಬಂದು ಅವರಿಗೆ ಅನಿರ್ವಚನೀಯ ಅನುಭವವನ್ನೀಯುತ್ತಿದ್ದವು.
ಅವರಿಬ್ಬರ ಮಕ್ಕಳು ಭಾರತೀಯ ಉಡುಪುಗಳನ್ನು ಧರಿಸಿ ಮಲ್ಲಿಗೆ ಮುಡಿದು ಸಿಹಿ ಮೆದ್ದು ಆಹ್ಲಾದ ಆನಂದದಿಂದ ಕುಣಿದಾಡುತ್ತಿದ್ದರು. ನೆರೆದ ಭಾರತೀಯರಿಗೆ ಈ ವಯಸ್ಸಾದವರ ಮದುವೆ ಅದು ಭಾರತೀಯ ಶಾಸ್ತ್ರೋಕ್ತ ರೀತಿಯಲ್ಲಿ ಆಗಿದ್ದು ಒಂದು ಅದ್ಭುತದಂಥೆ ಅನಿಸುತಿತ್ತು.
ಡಾ|| ಜಾರ್ಜ್ ಮತ್ತು ಎಲೆನಾ ದಂಪತಿಗಳನ್ನು ಹಲವು ಸ್ನೇಹಿತರು “ನೀವು ಭಾರತೀಯ ವಿವಾಹ ಬಯಸಿದ್ದು ಏಕೆ?” ಎಂದು ಕೇಳಿದರು.
“ನಮ್ಮ ಪಾಶ್ಚಿಮಾತ್ಯ ಮದುವೆಗಳಿಗೆ ಭದ್ರತೆಯಿಲ್ಲ. ಅವು ಬಹುಬೇಗನೆ ಮುರಿದು ಬೀಳುತ್ತವೆ. ಭಾರತೀಯ ಶಾಸ್ತ್ರೀಯ ವೇದೋಕ್ತ ರೀತಿಯ ಅಗ್ನಿ ಸಾಕ್ಷಿಯ ಮದುವೆಯಲ್ಲಿ ನಾವು ನಂಬುಗೆ ಇಟ್ಟಿದ್ದೇವೆ. ಆದ್ದರಿಂದಲೇ ನಾವಿಬ್ಬರೂ ಇಲ್ಲಿ ಭಾರತದಲ್ಲಿ, ಭಾರತೀಯ ರೀತಿಯಲ್ಲಿ ಮದುವೆಯಾಗಿದ್ದೇವೆ” ಎಂದಾಗ ನೆರೆದಿದ್ದ ಜನರು, ಸ್ನೇಹಿತರು ಹರ್ಷೋದ್ಗಾರ ಮಾಡಿದರು. ಭಾರತೀಯ ಮೌಲ್ಯಗಳನ್ನು ಬಿಟ್ಟು ಪಾಶ್ಚಿಮಾತ್ಯರನ್ನು ಅನುಕರಿಸುತ್ತಿರುವ ಎಷ್ಟೋ ಭಾರತೀಯರಿಗೆ ಜಾರ್ಜ್ ಮತ್ತು ಎಲೆನಾರ ಮದುವೆ ಒಂದು ರೀತಿಯ ಜಾಗೃತಿ ಮೂಡಿಸದೇ ಇರದು. ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಮೆಚ್ಚುವಾಗ ನಾವು ಅದರ ಮೌಲ್ಯವನ್ನು ಮರೆಯಬಹುದೇ?
*****