ದೇವರಲ್ಲಿ ಹಸಿದನಂತೆ,
ಎನಿತಿತ್ತರು ಸಾಲದಂತೆ,
ಹಾಳುಹೊಟ್ಟೆ ಹಿಂಗದಂತೆ,
ಅದಕೆ ಜೀವ ಬಲಿಗಳಂತೆ,
ಹೋದಳುಷೆ – ಬಂತು ನಿಶೆ!
ನಾವಿಬ್ಬರು ಕೂಡಿದಾಗ,
ಎರಡು ಹೃದಯದೊಂದು ರಾಗ
ಮೋಡಿಯಿಡಲು, ಕಾಲನಾಗ
ಹರಿದು ಕಚ್ಚಿತವಳ ಬೇಗ.
ಹೋದಳುಷೆ – ಬಂತು ನಿಶೆ!
ಜೀವ ಜೀವವೊಂದುಗೂಡಿ,
ಒಲವು ನಲವು ಬೆಸೆಯೆ ಜೋಡಿ,
ಸುಖ ನಗೆಗಳ ಆಟ ಹೂಡಿ,
ಕುಣಿವೆವೆನಲು- ಕಾಲ ಕಾಡಿ,
ಹೋದಳುಷೆ – ಬಂತು ನಿಶೆ!
ಒಲವ ರಾಸಿ, ರೂಪ ಬಲುಮೆ,
ನನ್ನ ಹೃದಯದಲ್ಲ ಹಿರಿಮೆ,
ನಾಡಿ ನಾಡಿಯೊಳಗ ನುಡಿಮೆ
ನಲ್ಮೆ ನವಿಲು, ಚೆಲುವ ಚಿಲುಮೆ
ಹೋದಳುಷೆ – ಬಂತು ನಿಶೆ!
ಹೊಸ ಹರಯದ ಹೊಸಲಿನ ದೆಸೆ
ನಾಳೆ ನಲಿವ ಜೀವದಾಸೆ
ಮೊಗ್ಗಿನಲ್ಲಿ ಮುಕ್ಕಾಗಿಸೆ
ನನ್ನುಷೆಗಿನ್ನೆಲ್ಲಿ ಉಷೆ ?
ಹೋದಳುಷೆ – ಬಂತು ನಿಶೆ!
ಸೂರೆಗೊಂಡರೆದೆಯ ಸಂತೆ !
ಉಳಿದುದಲ್ಲಿ ಶೂನ್ಯ ಬೊಂತೆ.
ನಾಳೆ ಬಾಳು ಅಂತೆ ಕಂತೆ.
ನಾನುಳಿಯುವ ಜಗವಿದಂತೆ !
ಕತ್ತಲೆಲ್ಲ,
ಕಿರಣವಿಲ್ಲ;
ಇದೆ ಒಲವಿನ ಹಾದಿಯಂತೆ !
ಹೋದಳುಷೆ – ಬಂತು ನಿಶೆ!
*****