Home / ಕಥೆ / ಸಣ್ಣ ಕಥೆ / ದೊಡ್ಡದು

ದೊಡ್ಡದು

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು.

ತಿಮ್ಮಪ್ಪನ ಕೃಪಾಕಟಾಕ್ಷವೋ ಏನೋ ತಿಪ್ಪಾಭಟ್ಟರಿಗೆ ಹರಕೆ ಹೊತ್ತು ವರ್ಷಕ್ಕೆ ಗಂಡು ಸಂತಾನವಾಯಿತು. ಅದಕ್ಕೆ ಮಗನಿಗೆ ತಿಮ್ಮಣ್ಣ ಅಂತ ತಿಮ್ಮಪ್ಪನ ಹೆಸರಿಟ್ಟರು.

ತಿಮ್ಮಣ್ಣ ನಮ್ಮ ಶಾಲೆಗೆ ಬರುತ್ತಿದ್ದ. ತಿಮ್ಮಣ್ಣನ ಶಾಲೆಯಲ್ಲಿ ಶತದಡ್ಡ ವಿದ್ಯಾರ್ಥಿ. ಶಾಲೆಗೆ ಬಯಲುಸೀಮೆ ಕಡೆಯಿಂದ ಬರುವ ಮಾಸ್ತರರ ವಾಸ್ತವ್ಯ ಮತ್ತು ಊಟ ತಿಪ್ಪಾಭಟ್ಟರ ಮನೆಯಲ್ಲಿ ನಡೆಯುತ್ತಿದ್ದ ಕಾರಣದಿಂದಾಗಿ ತಿಮ್ಮಣ್ಣನು ಶಾಲಾಮಾಸ್ತರರಿಗೆ ಅಚ್ಚುಮೆಚ್ಚಿನ ಹುಡುಗನಾಗಿದ್ದ. ಶಾಲೆಯಲ್ಲಿ ಏನೇ ನಡೆದರೂ ತಿಪ್ಪಾಭಟ್ಟರು ಬರಲೇ ಬೇಕು. ಸ್ವಾತಂತ್ರ್ಯ ದಿನಾಚರಣೆ ಇರಲಿ, ಸರಸ್ವತಿ ಪೂಜೆ ಇರಲಿ ತಿಪ್ಪಾಭಟ್ಟರು ಮುಖ್ಯ ಅತಿಥಿ.

ಒಮ್ಮೆ ಶಾಲೆಗೆ ತಪಾಸಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಓರ್ವ ಇನ್ಸ್‌ಪೆಕ್ಟರ್ ಬಂದಿದ್ದರು. ಆಗಿನ ಕಾಲದಲ್ಲಿ ಶಾಲೆಯ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಪರೀಕ್ಷೆ ನಡೆಯುತ್ತಿದಿದ್ದು ಇಂತಹ ಸಂದರ್ಭಗಳಲ್ಲಿ ಮಾತ್ರವೇ. ಇನ್ಸ್‌ಪೆಕ್ಟರ್‌ ಬಂದವರೇ ಶಾಲೆಗೆ ಭೇಟಿ ನೀಡಿ ಮೇಷ್ಟ್ರು ಹೇಗೆ ಪಾಠ ಮಾಡಿರಬಹುದೆಂಬ ಕುತೂಹಲದಿಂದಾಗಿ ಐದನೇ ತರಗತಿ ಕಲಿಯುತ್ತಿದ್ದ ನಮ್ಮನ್ನು ಕುರಿತು ಹಲವಾರು ಪ್ರಶ್ನೆ ಕೇಳಿದರು, ಕೊನೆಗೆ

“ಬರ್‍ಡ್ ಎಂದರೇನು?” ಎಂದು ಕೇಳಿದಾಗ.

ತಿಮ್ಮಣ್ಣ ಕೈ ಎತ್ತಿದಾಗ ಹೆಡ್‌ಮಾಸ್ತರಿಗೆ ಖುಷಿಯೋ ಖುಷಿ. ಇನ್ಸ್‍ಪೆಕ್ಟರ್ ಹೇಳಿದ್ರು

– “ಏನು ಹೇಳು?”

ತಿಮ್ಮಣ್ಣ ಹೇಳಿದ

“ಕರುಹಾಕದ ದನ”

ತಿಮ್ಮಣ್ಣನ ಮಾತು ಕೇಳಿ ಮೇಷ್ಟ್ರು ಸುಸ್ತಾಗಿಹೋಗಿದ್ರು.

ತಿಮ್ಮಣ್ಣ ಸುಮಾರು ಮೂರು ನಾಲ್ಕು ವರ್ಷ ಏಳನೆ ತರಗತಿಯಲ್ಲಿ ದಂಡಯಾತ್ರೆ ಮುಗಿಸಿ ಶಾಲೆಗೆ ನಮಸ್ಕಾರ ಹೇಳಿ ಮನೆಗೆ ಬಂದು ತಂದೆ ಜೊತೆ ಸಹಾಯಕನಾಗಿ ಕೆಲಸಕ್ಕೆ ಸೇರಿದ.

ಕಾಲ ಸಾಗಿದ್ದೆ ತಿಳಿಯಲಿಲ್ಲ. ತಿಮ್ಮಣ್ಣನಿಗೆ ಪ್ರಾಯ ಹೆಚ್ಚಾಗುತ್ತಲೇ ಇತ್ತು. ತಂದೆ-ತಾಯಿ ತಾವು ಸಾಯುವುದರೊಳಗಾಗಿ ತಿಮ್ಮಣ್ಣನಿಗೊಂದು ಮದುವೆ ಮಾಡಬೇಕೆಂದು ಶಪಥ ಮಾಡಿದರು. ತಿಮ್ಮಣ್ಣನ ಪೆದ್ದತನದಿಂದಾಗಿ ಬಂದ ಎಲ್ಲಾ ಸಂಬಂಧಗಳು ತಪ್ಪಿಹೋಗುತಿತ್ತು. ಈ ಬಾರಿ ಕೊಪ್ಪ ಕಡೆಯ ಸಂಬಂಧವೊಂದು ಬಂದಿತ್ತು. ತೀರ್ಥಹಳ್ಳಿ ಭಾಗದ ಪ್ರಸಿದ್ಧ ದಲ್ಲಾಳಿಯೊಬ್ಬರು ಹೇಗೋ ಸಂಬಂಧವನ್ನು ಕುದಿರಿಸಿದ್ದರು. ಕೊಪ್ಪ ನಗರದ ಸಮೀಪದಲ್ಲಿ ಬರುವ ಬಾಳ ಗಡಿಯಲ್ಲಿ ಹುಡುಗಿ ಮನೆ ಇತ್ತು.

ಶ್ರಾವಣಮಾಸದ ಒಂದು ಶುಕ್ರವಾರ ಹುಡುಗಿಯನ್ನು ನೋಡಲು ಹೋಗಲು ನಿಗದಿಯಾಗಿತ್ತು. ದಲ್ಲಾಳಿ ಶ್ರೀಧರರಾಯರು, ತಿಮ್ಮಣ್ಣ, ತಿಪ್ಪಾಭಟ್ಟರು ಮತ್ತವರ ಹೆಂಡತಿ ಹುಡುಗಿಯನ್ನು ನೋಡಲು ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೊರಟರು. ತೀರ್ಥಹಳ್ಳಿಯಿಂದ ಸಹಕಾರ ಸಾರಿಗೆ ಬಸ್ಸು ಹತ್ತಿ ಕುಳಿತಾಗ ತಾಯಿ ತಿಮ್ಮಣ್ಣನ ಬಳಿ ಹುಡುಗಿ ಮನೆಯಲ್ಲಿ ಹೇಗಿರಬೇಕೆಂದು ಉಪದೇಶ ನೀಡ ತೊಡಗಿದರು. ಅಲ್ಲಿ ನೀನು ಪೆದ್ದನ ತರಹ ಆಡಬೇಡ. ಜಾಸ್ತಿಯಾಗಿ ಮಾತಾಡಲೇ ಬಾರದು. ಆಡಿದ ಒಂದೊಂದು ಮಾತು ತೂಕ ಮಾತಾಗಿರಲಿ, ಬಸವಣ್ಣ ಹೇಳಿದ ಹಾಗೆ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದೆಲ್ಲಾ ಮಗನಿಗೆ ಉಪದೇಶ ನೀಡುತ್ತಾ ಕೊನೆಯಲ್ಲಿ ನೀನು ಆಡುವ ಮಾತುಗಳು ದೊಡ್ಡ ದೊಡ್ಡ ಮಾತುಗಳು ಆಗಿರಲಿ, ಅದು ಈ ಸಂಬಂಧವನ್ನು ಮತ್ತಷ್ಟು ಬಲ ಪಡಿಸುತ್ತದೆ ಎಂದು ಮಗನ ಮುಂದೆ ಉಪದೇಶ ನೀಡಿದರು.

ಬಸ್ಸು ದೇವಂಗಿ, ಕುವೆಂಪು ಜನ್ಮಸ್ಥಳ ಕುಪ್ಪಳ್ಳಿ, ಗಡೀಕಲ್ ಸೂರ್‍ಯ ದೇವಸ್ಥಾನ ದಾಟಿ ಕೊಪ್ಪಗೆ ಬಂತು. ಕೊಪ್ಪ ಮುಖ್ಯ ಬಸ್ಸು ನಿಲ್ದಾಣದಲ್ಲಿ ಶ್ರೀಧರರಾಯರು. ತಿಪ್ಪಾಭಟ್ಟರು, ಮತ್ತವರ ಹೆಂಡತಿ ಹಾಗೂ ವರಮಹಾಶಯ ತಿಮ್ಮಣ್ಣ ಬಸ್ಸು ಇಳಿದು ಗಜಾನನ ಭವನದಲ್ಲಿ ತಿಂಡಿ ತಿಂದರು.

ಶ್ರೀಧರರಾಯರ ಮಾತಿನಂತೆ ಕೊಪ್ಪದಿಂದ ಬಾಳಗಡಿಗೆ ರಾಯರ ಪರಿಚಿತರ ಕಾರೊಂದರಲ್ಲಿ ಹೊರಟರು. ಕಾರಣ ಹುಡುಗಿ ಕಡೆಯವರು ಹುಡುಗ ಸಿರಿವಂತನೆಂದು ಭಾವಿಸಲಿ ಎಂಬ ದೂರದ ಅಸೆ ಇದರಲ್ಲಿ ಅಡಗಿತ್ತು. ಕಾರು ಹುಡುಗಿಯ ಮನೆ ತಲುಪಿದಾಗ ತಂದೆ-ತಾಯಿಯ ಜೊತೆಯಲ್ಲಿ ತಿಮ್ಮಣ್ಣ ಕಾರು ಇಳಿದನು.

ಹುಡುಗಿಯ ತಾಯಿ ಪಾರ್ವತಮ್ಮನವರು ಓಡಿ ಬಂದು ಹುಡುಗನ ಕಡೆಯವರನ್ನು ಎದುರುಗೊಂಡವರು ಲೋಕಾಭಿರಾಮವಾಗಿ ಕೇಳಿದರು.

– “ಏನು ಕಾರಿನಲ್ಲೇ ಬಂದಿರಾ?”

ತಿಮ್ಮಣ್ಣ ಕೂಡಲೇ ಉತ್ತರಿಸಿದ

– “ಇಲ್ಲಮ್ಮ ತೀರ್ಥಹಳ್ಳಿಯಿಂದ ಕೊಪ್ಪದ ವರೆಗೆ ಸಹಕಾರಿಸಾರಿಗೆ ಬಸ್ಸಿನಲ್ಲೇ ಬಂದೆವು. ಅಲ್ಲಿಂದ ನಾವು ಕೊಪ್ಪದ ಬಸ್ಸು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಾವು ಕಾರು ಮಾಡಿಕೊಂಡು ಬಂದೆವು”

ಯಾಕೆಂದರೆ ಕಾರಿಗಿಂತ ಬಸ್ಸು ದೊಡ್ಡದಲ್ಲವೇ ಎನ್ನುವ ತರ್‍ಕ ತಿಮ್ಮಣ್ಣದಾಗಿತ್ತು.

ಸರಿ, ತಿಮ್ಮಣ್ಣ ತಾಯಿ ತಂದೆ ಜೊತೆ ಹುಡುಗಿಯ ಮನೆಯ ಎದುರು ಬಂದಾಗ ಹುಡುಗಿ ತಾಯಿ ಕಾಲು ತೊಳೆಯಲು ತಂಬಿಗೆಯಲ್ಲಿ ನೀರು ಕೊಟ್ಟಾಗ

ತಿಮ್ಮಣ್ಣ ಹೇಳಿದ.

– “ನಮ್ಮ ಮನೆಯಲ್ಲಿ ಹಂಡೆಯಲ್ಲೇ ನಾವು ಕಾಲನ್ನು ತೊಳೆಯುವುದು”

ಚಂಬಿಗಿಂತ ಹಂಡೆ ದೊಡ್ಡದೆಂಬ ತರ್ಕ ತಿಮ್ಮಣ್ಣನದು. ಸರಿ ತಿಮ್ಮಣ್ಣ ಹುಡುಗಿ ಮನೆ ಪ್ರವೇಶ ಮಾಡಿದವನೇ ಕೂರಲು ಖುರ್ಚಿ ಕೊಟ್ಟಾಗ ತಿಮ್ಮ ಹೇಳಿದ.

– “ನಮ್ಮ ಮನೆಯಲ್ಲಿ ನಾವು ಮಂಚದ ಮೇಲೆಯೇ ಕುಳಿತು ಕೊಳ್ಳುವುದು”

ಕುರ್‍ಚಿಗಿಂತ ಮಂಚವೇ ದೊಡ್ಡ ದೆಂಬ ತರ್ಕ ತಿಮ್ಮಣ್ಣನದು. ಹುಡುಗಿ ತಿಮ್ಮಣ್ಣನಿಗೆ ಕುಡಿಯಲು ಕಾಫಿಯನ್ನು ಲೋಟದಲ್ಲಿ ತಂದು ಕೊಟ್ಟಾಗ

ತಿಮ್ಮಣ್ಣ ಮತ್ತೆ ಹೇಳಿದ

– “ನಮ್ಮ ಮನೆಯಲ್ಲಿ ನಾನು ನಮ್ಮಪ್ಪ ಮತ್ತು ನಮ್ಮಮ್ಮ ಬಕೆಟು, ಚಂಬುಗಳಲ್ಲೇ ಕಾಫಿ, ಟೀ ಹಾಗೂ ಹಾಲುನ್ನು ಕುಡಿಯುವುದು…”

ಬಕೇಟು, ಚಂಬುಗಳು, ಲೋಟಕ್ಕಿಂತಲೂ ದೊಡ್ಡದಾಗಿದೆ ಎನ್ನುವ ತರ್ಕ ತಿಮ್ಮಣ್ಣನದಾಗಿತ್ತು.

ಹುಡುಗಿ ತಿಮ್ಮಣ್ಣನಿಗೆ ತಿನ್ನಲು ಮೈಸೂರುಪಾಕ್‌ನ ಒಂದು ಪೀಸ್ ತಂದು ಕೊಟ್ಟಾಗ ತಿಮ್ಮಣ್ಣನು ಹೇಳಿದ.

“ನಮ್ಮ ಮನೆಯಲ್ಲಿ ನಾವು ಹತ್ತಿಪ್ಪತ್ತು ಮೈಸೂರು ಪಾಕ್ ತಿನ್ನುತ್ತೇವೆ…”

ಒಂದಕ್ಕಿಂತ ಹತ್ತು ದೊಡ್ಡದಂಬ ತರ್ಕ ತಿಮ್ಮಣ್ಣನದಾಗಿತ್ತು. ಎಲ್ಲಾ ಶಾಸ್ತ್ರ ಮುಗಿಸಿ ಕೊನೆಯಲ್ಲಿ ತಿಮ್ಮಣ್ಣನ ಹುಡುಗಿ ನೋಡುವ ಶಾಸ್ತ್ರ ಕ್ಕೆ ಸಿದ್ಧವಾಗಿತ್ತು ಹುಡುಗಿ ಚಂದಾಗಿ ಡ್ರೆಸ್ ಮಾಡಿಕೊಂಡು ಬಂದಳು.

ತಿಮ್ಮಣ್ಣ ಹುಡುಗಿಯನ್ನು ನೋಡಿ ಸಣ್ಣದಾಗಿ ಕೆಮ್ಮಿದ.

ಹುಡುಗಿ ಕೇಳಿದಳು

– “ನಿಮಗೆ ಕೆಮ್ಮು ಇದೆಯಾ?”

ಅದಕ್ಕೆ ತಿಮ್ಮಣ್ಣ ಕೂಡಲೇ ಹೇಳಿದ.

– “ಇಲ್ಲ ನನಗೆ ಟಿ.ಬಿ.ಕಾಯಿಲೆ ಇದೆ”

ಕೆಮ್ಮಿಗಿಂತ ಟಿ.ಬಿ. ಕಾಯಿಲೆ ದೊಡ್ಡದಾಗಿತ್ತು ಎನ್ನುವ ತರ್ಕ ತಿಮ್ಮನದು.

ಹುಡುಗಿಯ ತಾಯಿ ಬಂದು ಹುಡುಗಿ ನಿನಗೆ ಒಪ್ಪಿಗೆಯೇ ಎಂದು ತಿಮ್ಮಣ್ಣನನ್ನು ಕೇಳಿದಳು.

ಆಗ ತಿಮ್ಮಣ್ಣ ಹೇಳಿದ

– “ನನಗೆ ಹುಡುಗಿ ಒಪ್ಪಿಗೆ ಇಲ್ಲ”

ತಿಮ್ಮಣ್ಣನ ತಾಯಿ, ತಂದೆ ಕೇಳಿದರು

– “ಯಾಕೋ ಹೀಗೆ?”

ಆಗ ತಿಮ್ಮಣ್ಣ ಹೇಳಿದ

– “ನನಗೆ ಹುಡುಗಿ ಬೇಡ ಹುಡುಗಿಯ ತಾಯಿಯೇ ಬೇಕು”

ಹುಡುಗಿಗಿಂತ ಹುಡುಗಿಯ ತಾಯಿ ದೊಡ್ಡವಳೆಂಬ ತರ್ಕ ತಿಮ್ಮಣ್ಣನದಾಗಿತ್ತು.

ದೊಡ್ಡ ಮಾತು ಹೇಳುವಂತೆ ಉಪದೇಶ ಮಾಡಿದ್ದ, ತಿಮ್ಮಣ್ಣನ ತಾಯಿಯ ತಲೆ ತಲೆ ಚಚ್ಚಿಕೊಳ್ಳುವುದೊಂದು ಮಾತ್ರ ಬಾಕಿ ಉಳಿದಿತ್ತು.
*****
(ಹಂಸರಾಗ ಮಾಸಿಕದಲ್ಲಿ ಪ್ರಕಟಿತ)

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...