ಎದುರು ಮನೆಯ ಕಂಪೌಂಡಿನಲಿ
ಎದ್ದು ನಿಂತು ಪಸರಿಸಿದ ಹಳದಿ ಹೂಗಳು
ಎವೆಗಳು ತೆರೆದು ನೋಡುತ್ತಿವೆ
ಅಲ್ಲೊಂದು ಪುಟ್ಟ ದುಂಬಿ ಝೇಂಕಾರ
ಗಾಳಿಗೆ ಮೆಲ್ಲಗೆ ಹರಿದಾಡಿದ ಬಾವುಟ
ಕಣ್ಣ ತುಂಬ ತುಂಬಿದ ಬಣ್ಣದ ಮೋಡಗಳು.
ಶಾಲೆಗೆ ಹೋಗುವ ಪುಟ್ಟ ಮಕ್ಕಳು
ಕೈಗಳು ಚಾಚುತ್ತವೆ ನಿಲುಕದ ರೆಂಬೆಗಳು
ಜಿಗಿದು ಜಿಗಿದು ದಣಿದ ಪಾದಗಳು
ಹಗುರಾಗಿ ಸರಿದು ಹೋದವು ಸಿಗದ ಹಳದಿ
ಹೂಗಳ ಹಳಹಳಿ ತಿರುಗಿ ತಿರುಗಿ ಬೀರಿದ
ನೋಟಗಳು ಎದೆಯಲ್ಲಿ ಹರಿದ ಹಳ್ಳ.
ಹಳದಿ ಹೂಗಳಿಗೇಕೆ ಇಲ್ಲ ಸೌರಭ
ಇದೆಯಲ್ಲ ಸಾಕಷ್ಟು ಸೌಂದರ್ಯ
ಭ್ರಮೆಯಲಿ ಆಲಾಪಿಸುವ ಕವಿ
ಎಲ್ಲ ಭಾವಗಳ ಬಯಲ ಗಾಳಿ ತುಂಬ
ನೀಲಿ ಬಾನಿನಲಿ ಹಾರಿಸಿದ ಗಾಳಿಪಟ
ಭಾವಗಳ ಬಿರಿದ ದಳ ಗುಲಾಬಿ
ಎಲ್ಲ ಬಣ್ಣಗಳ ದಾಟಿ ಜಿಗಿದು ಹಾರಿದ
ಚಿಟ್ಟೆ ಹೂಗಳ ಅರಸಿ ತಂದಿದೆ ತನ್ನ
ಮೈ ಬಣ್ಣಕೆ, ಗಾಳಿಗೆ ಹಿತ ನೀಡಿ ತೇಲಿ
ತೇಲಿದ ಕವಿತೆಯ ಸಾಲುಗಳು
ಹೂವ ಸ್ಪರ್ಶನೋಟ ಹಾಯಿ ಹರಿಯಲಿ
ಎದೆಯುಕ್ಕಿಸುವ ಸಮುದ್ರ ಅಲೆಗಳು.
*****