೧
ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ ಆಟವನ್ನಾಡುತ್ತಿದ್ದರು. ಆಟದ ಮಧ್ಯದಲ್ಲಿ ಭಾಗೀರಥಮ್ಮನು ತನ್ನ ಸರದಿಯ ಆಟವನ್ನೂ ಗಮನಿಸದೆ, ಜೋಯಿಸರಂತೆ ಅಂಗೈ ಬೆರಳುಗಳನ್ನು ಮಡಿಸುತ್ತ, “ಭಾದ್ರಪದ ಒಂದು, ಆಶ್ವೀಜ ಎರಡು, ಕಾರ್ತಿಕ ಮೂರು, ಕಾರ್ತಿಕಾ ಮೂರೂ?” ಎಂದು ತನ್ನ ಜೊತೆಯವರಿಗೂ ಕೇಳಿಸುವಂತೆ ಆಕಾಶ ಭಾಷಣ ಮಾಡಿದಳು.
ಅದನ್ನು ನೋಡಿ ಹುಡುಗಿಯರೆಲ್ಲರೂ ನಕ್ಕರು. ರಂಗಮ್ಮನು ನಗುವನ್ನು ನಿಲ್ಲಿಸಿ “ಭಾಗು, ಭಾಗು, ಅದೇನೆ ನೀನು ಲೆಕ್ಕಾಚಾರ ಹಾಕಿದ್ದು? ಭಾದ್ರಪದ ಒಂದು, ಆಶ್ವೀಜ ಎರಡು, ಕಾರ್ತಿಕ ಮೂರು ಎಂದು ಆಚೆ ಮನೆ ಸುಬ್ಬಾಜೋಯಿಸರ ಹಾಗೆ ಬೆಟ್ಟು ಮಡಿಸಿ ಗುಣಿತ ಹಾಕಿದೆಯಲ್ಲ. ಮಾರ್ಗಶಿರ ಮಾಸದಲ್ಲಿ ನಿನ್ನ ಮದುವೆಯೇನೆ?” ಎಂದಳು. ಆ ಬಳಿಕ ಹುಡುಗಿಯರೆಲ್ಲರೂ ಗಹಗಹಿಸಿ ನಕ್ಕರು. ನಗುವನ್ನು ನಿಲ್ಲಿಸಿದವರು ಕೂಡ, ಇತರರು ಇನ್ನೂ ನಗುತ್ತಿರುವುದನ್ನು ನೋಡಿ ಮತ್ತೆ ನಗುವನ್ನು ಪ್ರಾರಂಭಿಸುತ್ತಿದ್ದುದರಿಂದ, ನಗುವ ಯಾವಾಗ ನಿಲ್ಲುವುದೆಂಬುದನ್ನು ಯಾರೂ ಹೇಳುವಂತಿರಲಿಲ್ಲ. ಆದರೆ ಒಂದು ವಿಶೇಷ. ಭಾಗೀರಥಮ್ಮನು ಜೋಲುಮೋರೆ ಹಾಕಿಕೊಂಡಾಗಲಿ, ಗಂಟುಮುಖದಿಂದ “ದುಮದುಮ”ಗುಟ್ಟುತ್ತಲಾಗಲಿ ಕುಳಿತುಕೊಳ್ಳದೆ ತಾನೂ ನಗುತ್ತಿದ್ದಳು. ಆದುದರಿಂದ ಅವರೆಲ್ಲರ ನಗುವಿಗೂ ಕಳೆಯೇರಿ, ಎಷ್ಟು ನಕ್ಕರೂ ತೃಪ್ತಿಯಾಗದಷ್ಟು ಉತ್ಸಾಹ ಹುಟ್ಟಿತು.
ಎಲ್ಲರೂ ನಕ್ಕು ಸಾಕಾದ ಮೇಲೆ ಭಾಗೀರಥಮ್ಮನು ರಂಗಮ್ಮನನ್ನು ಕುರಿತು “ರಂಗು, ರಂಗು, ಮಾರ್ಗಶಿರ ಮಾಸದಲ್ಲಿ ನನಗೆ ಮದುವೆಯಾಗುವುದಕ್ಕೆ ನಿನ್ನ ಹಾಗೆ ನನಗೇನು ಮಾಲಗಣ್ಣಿದೆಯೆ?” ಎಂದಳು. ರಂಗಮ್ಮನೂ ಸುಮ್ಮನಿರಲಿಲ್ಲ. ಭಾಗೀರಥಮ್ಮನೊಡನೆ “ಭಾಗು, ಭಾಗು, ನಿನಗೇನು ಗೊತ್ತು, ಮಾಲಗಣ್ಣಿನ ಮಹಿಮೆ! ಮಾಲಗಣ್ಣಿನ ಹೆಣ್ಣು ಕೈಹಿಡಿದರೆ ಮೂಲೆಯಲ್ಲಿದ್ದವರೂ ಮಹಡಿಯನ್ನೇರುತ್ತಾರೆ” ಎಂದಳು. ಮತ್ತೆ ನಗುವಿನ ಲಹರಿಯು ಪ್ರಾರಂಭವಾಯಿತು.
ಅಷ್ಟರಲ್ಲಿ ಭಾಗೀರಥಮ್ಮನ ತಾಯಿ ಸುಬ್ಬಮ್ಮನವರು ಹುಡುಗಿಯರಿಗೆಲ್ಲ ಕೊಡುವುದಕ್ಕಾಗಿ ಕಳಿತ ಬಾಳೆಯ ಹಣ್ಣುಗಳನ್ನು ಬೆಳ್ಳಿಯ ತಟ್ಟೆಯಲ್ಲಿಟ್ಟುಕೊಂಡು ಅಲ್ಲಿಗೆ ಬಂದರು. ಅವರ ಮುಖದ ಮೇಲೆ ಮುಗುಳು ನಗೆಯು ಮೂಡಿದ್ದಿತು. ಅವರು ಅಲ್ಲಿಗೆ ಬಂದೊಡನೆಯೆ ನಗುವಿನ ಲಲ್ಲೆಯು ನಿಂತು ಹೋಯಿತು. ಸುಬ್ಬಮ್ಮನವರು ನಗುತ್ತಿದ್ದುದನ್ನು ಕಂಡು, ತಮ್ಮ ಮಾತುಗಳನ್ನು ಅವರೆಲ್ಲಿ ಕೇಳಿಬಿಟ್ಟರೋ ಎಂದು ಭಾಗೀರಥಮ್ಮನಿಗೂ ರಂಗಮ್ಮನಿಗೂ ಕಳವಳವಾಯಿತು. ಅವರಿಬ್ಬರೂ ನೆಲವನ್ನೇ ದೃಷ್ಟಿಸಿ ನೋಡುತ್ತ ತಲೆತಗ್ಗಿಸಿ ಕುಳಿತುದನ್ನು ಕಂಡು, ಇತರ ಹುಡುಗಿಯರು ಅವರ ಕಡೆಗೇ ನೋಡಿ ನಿಶ್ಯಬ್ದವಾಗಿ “ಮುಸಿ ಮುಸಿ” ನಗುತ್ತಿದ್ದರು. ಆ ಅಣಕದ ನಗುವಿನ ಆಶಯವು ಅವರಿಗೆ ಗೊತ್ತಾಯಿತು. ಆದರೂ ಬೋನಿನಲ್ಲಿ ಬಿದ್ದ ಹುಲಿಗಳಂತೆ, ಏನು ಮಾಡುವುದಕ್ಕೂ ಅವರಿಗೆ ಸಾಧ್ಯವಿರಲಿಲ್ಲ.
ಭಾಗೀರಥಮ್ಮನು ತನ್ನ ತಾಯಿಯು ತನಗೆ ಕೊಡುವುದಕ್ಕೆ ಮೊದಲೇ ಆಕೆಯಿಂದ ಬಾಳೆಯ ಹಣ್ಣುಗಳನ್ನು ಕಸಿದುಕೊಳ್ಳಲಿಚ್ಚಿಸಿದವಳಂತೆ ನಟಿಸುತ್ತ ಕೈ ನೀಡಿದಳು. ಏನನ್ನಾದರೂ ಮಾಡಿ ಇತರರೆಲ್ಲರ ಮನಸೂ ಬೇರೆ ವಿಷಯಕ್ಕೆ ತಿರುಗುವಂತೆ ಮಾಡಬೇಕೆಂಬುದು ಅವಳ ಅಭಿಲಾಷೆ. ಸುಬ್ಬಮ್ಮನವರು “ಹೀಗೆ ಆತುರಪಟ್ಟರೆ ಹೇಗೆ ಹೇಳು. ಎಲ್ಲರಿಗೂ ಕೊಟ್ಟಮೇಲೆ ನಿನಗೆ. ಸ್ವಲ್ಪ ತಡಿ” ಎಂದರು.
ಭಾಗೀರಥಮ್ಮನು ನಾಲಿಗೆಯಿಂದ ತುಟಿಗಳನ್ನು ಸವರಿಕೊಂಡು, ತಲೆಯು ಕಡಿಯದಿದ್ದರೂ ಕೆರೆದುಕೊಳ್ಳುತ್ತ ಕೊರಳನ್ನು ಕೊಂಕಿಸಿ, “ಬಾಳೆಹಣ್ಣು ಸೊಗಸಾಗಿ ಕಳಿತಿದೆಯಮ್ಮ, ಆಶೆಗೆ ಬಾಯಲ್ಲಿ ನೀರೂರಿತು. ಅದಕ್ಕೆ ಕೈನೀಡಿದೆ” ಎಂದಳು.
ಸುಬ್ಬಮ್ಮನವರು ನಗುತ್ತ “ಹೌದು ಕಣೆ, ಮರಳೀ ಮರಳಿ ಮಂಚಕ್ಕೆಷ್ಟು ಕಾಲೇ ಅಂದರೆ ಮೂರು ಮತ್ತೊಂದು ಅಂತ. ನಿಮ್ಮ ಚೆಲ್ಲಾಟ ನಂಗೂ ಗೊತ್ತಿದೆ. ಕಣ್ಣಿಗೆ ಮಣ್ಣೆರಚಬೇಡ” ಎಂದರು. ಭಾಗೀರಥಮ್ಮನು ಸೋಲುವ ಜಾತಿಗೆ ಸೇರಿದವಳಲ್ಲ. ಅವಳು ದಿಟ್ಟತನದಿಂದ “ನಾನೇನಮ್ಮ ಮಾಡಿದ್ದು?” ಎಂದಳು. ಸುಬ್ಬಮ್ಮನವರ ನಗುವು ಹೆಚ್ಚಿತು. ಅವರು “ನೀನು ಮಾಡಿದ್ದೇನೇ, ಹೇಳ್ತಿನಿ ಕೇಳು. ಭಾದ್ರಪದ, ಆಶ್ವೀಜ, ಕಾರ್ತಿಕ, ಅದೆಲ್ಲಾ ಏನೆ? ಯಾರಿಗೆ ಮದುವೆಯೆ? ಅಯ್ಯೋ ಗಂಡುಬೀರಿ! ನಾಚಿಕೆಯಿಲ್ಲದೆ ನಿನ್ನ ಮದುವೆ ಮಾತು ನೀನೇ ಆಡೋದೇ? ನೀನೇನೋ ಮಾತಿನಮಲ್ಲಿ ಅಂತಿದ್ದೆ. ಆದರೆ ನಿನ್ನ ಬಾಯಿ ಇಂಥಾ ಭಾರಿ ಬುಡುಬುಡಿಕೆ ಅಂತಿರಲಿಲ್ಲ. ಮಾಘ ಮಾಸಕ್ಕೆ ಮದುವೆ ಮಾಡಬೇಕು ಅಂತ ನಾವು ಮಾತಾಡಿಕೊಂಡರೆ ಅದನ್ನ ಹೊಂಚು ಕೇಳಿದಾಳೆ. ಮಾಘಕ್ಕೆ ಬದಲು ಮಾರ್ಗಶಿರ ಮಾಸಕ್ಕೆ ಮದುವೆ ಅಂತ ಡಂಗುರ ಹೊಡೆದು ಗೆಜ್ಜೆ ಕಟ್ಟಿಕೊಂಡು ಕುಣೀತಾಳೆ” ಎಂದರು. ಎಲ್ಲವನ್ನೂ ಪೂರ್ತಿಯಾಗಿ ಕೇಳದೆ ಒಂದೊಂದು ಮಾತನ್ನು ಕಿವಿಯ ಮೇಲೆ ಹಾಕಿಕೊಂಡುದರ ಪರಿಣಾಮವಾಗಿ ಸುಬ್ಬಮ್ಮನವರು ಈ ರೀತಿ ಹೇಳಬೇಕಾಯಿತು.
ಭಾಗೀರಥಮ್ಮನು ಜಗ್ಗಲಿಲ್ಲ. ಸುಬ್ಬಮ್ಮನವರೊಡನೆ “ಅಮ್ಮಾ, ಅಮ್ಮಾ, ನೀನು ಪೂರ್ತಿ ಕೇಳಲಿಲ್ಲ. ನನ್ನ ಮದುವೆ ಮಾತಲ್ಲಮ್ಮ ನಾನಾಡಿದ್ದು” ಎಂದಳು. ರಂಗಮ್ಮನು “ಇಲ್ಲ, ಸುಬ್ಬಮ್ಮನೋರೆ, ಮದುವೆ ಮಾತಲ್ಲ ಅವಳಾಡಿದ್ದು” ಎಂದಳು. ಸುಬ್ಬಮ್ಮನವರು ಅವಳ ಕೈಗೆರಡು ಬಾಳೆಯ ಹಣ್ಣುಗಳನ್ನು ಕೊಟ್ಟು “ಸರಿಯಮ್ಮ ರಂಗು. ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ. ಅದಿರಲಿ, ನೀನು ಸರಿಯಮ್ಮ. ಬಂಗಾರದಂಥ ಹುಡುಗಿ, ನೀನೇ ಕ್ಲಾಸಿನಲ್ಲಿ ಫಷ್ಟಂತೆ, ನಿನ್ನ ಬುದ್ದಿಯಲ್ಲಿ ಸ್ವಲ್ಪ ತೆಗೆದು ನನ್ನ ಪೆದ್ದು ಭಾಗೂ ತಲೆಗೂ ತುಂಬಬಾರದೆ, ಹೇಳು. ಅವಳು ಎಡಗಡೆಯಿಂದ ಫಷ್ಟು; ಶುದ್ದ ಶುಂಠಕಾಯಿ” ಎಂದರು. ಭಾಗೀರಥಮ್ಮನು ನಗುತ್ತ “ಬುದ್ದಿಯನ್ನ ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ ತುಂಬೋಕೆ ಅದೇನು ದೋಸೆ ಹಿಟ್ಟೇನಮ್ಮ? ತಲೆಗಳೇನು ಕೊಳದಪ್ಪಲೆಗಳೊ? ನೀನು ಹೋಗಮ್ಮ, ನಾವು ಕವಡೆ ಆಡಬೇಕು? ಎಂದಳು.
ಸುಬ್ಬಮ್ಮನವರು “ಕವಡೆ ಆಡಬೇಕೊ, ಲಲ್ಲೆ ಹೊಡೀಬೇಕೋ, ಏನಾದರೂ ಮಾಡಿಕೊಳ್ಳಿ. ನಾನು ಅಡ್ಡಿಯಾಗೋದಿಲ್ಲ. ಇಗೋ ಹೊರಟೆ” ಎಂದು ಹೇಳಿ ನಗುತ್ತ ಅಡಿಗೆಯ ಮನೆಯ ಕಡೆಗೆ ಹೊರಟುಹೋದರು. ಭಾಗೀರಥಮ್ಮನು ಸರಕ್ಕನೆ ಮೇಲಕ್ಕೆದ್ದು ತಾವು ಕುಳಿತಿದ್ದ ಕೊಟಡಿಯ ಬಾಗಿಲನ್ನು ಹಾಕಿ ಭದ್ರಪಡಿಸಿ ದೊಡ್ಡದಾಗಿ ಉಸಿರು ಬಿಟ್ಟು “ಇನ್ನು ಬದುಕಿದೆನಮ್ಮ” ಎಂದು ಆಕಳಿಸಿದಳು. ಎಲ್ಲರೂ ಮತ್ತೆ ನಕ್ಕರು.
ರಂಗಮ್ಮನು “ಇನ್ನು ಹಾಸ್ಯವೆಲ್ಲಾ ಸಾಕಮ್ಮ, ಭಾಗು, ನೀನು ಗುಣಿಸಿ ನೋಡಿದ್ದೇನು?” ಎಂದಳು. ಕೆಲವರು ಹುಡುಗಿಯರು ಸಡಗರದಿಂದ ಮತ್ತೆ ನಗಲಾರಂಭಿಸಿದರು. ಭಾಗೀರಥಮ್ಮನು ಬಿಂಕದ ಮುಗುಳು ನಗೆಯಿಂದ “ನಿನಗಂತು ತಲೆಯಲ್ಲಿ ಬುದ್ದಿಯಿದೆ. ಇನಾಂ ಬರುತ್ತೇ ಅಂತ ಭರವಸೆ” ಎಂದು ಹೇಳಿ ಆ ಬಳಿಕ ತನ್ನ ಬಲಗೈ ತರ್ಜಿನಿಯನ್ನು ಎತ್ತಿ ಹಿಡಿದು ಅಲ್ಲಾಡಿಸುತ್ತ “ರಂಗೂ, ರಂಗೂ, ಬರೆದಿಟ್ಟುಕೊ, ಬೇಕಾದರೆ. ಸೆರಗಿಗೆ ಗಂಟು ಹಾಕಿಟ್ಟುಕೊ. ನೀವೆಲ್ಲ ಓದಿನಲ್ಲಿ ಇನಾಂ ಪಡೆದರೆ, ನಾನು ನಿಮಗೆ ಇನಾಂ ಬರೋ ದಿನ ನಾಟಕದಲ್ಲಿ ಚೆನ್ನಾಗಿ ಭೇಷ್ ಅನ್ನಿಸಿ ಕೊಂಡು ಅದಕ್ಕಾದರೂ ಇನಾಂ ಹೊಡೆದೇ ಹೊಡೀತೀನಿ” ಎಂದಳು.
ಆಗ ಅಚ್ಮು ಸುಮ್ಮನಿರದೆ ಕೀಟಲೆಗೆ “ಲೇ ಭಾಗು, ಸೆರಗಿಗೆ ಗಂಟು ಹಾಕಿಟ್ಟುಕೊ ಅಂದೆ. ರಂಗು ಲಂಗ ಹಾಕಿಕೊಂಡಿದ್ದಾಳಲ್ಲೆ? ನಿನ್ನ ಮಾತು ಗಂಟು ಹಾಕಿಕೊಳ್ಳೋದಕ್ಕೆ ಸೀರೆಯೆಲ್ಲಿದೆ, ಸೆರಗಲ್ಲಿದೆ?” ಎಂದು ನಕ್ಕಳು. ಭಾಗೀರಥಮ್ಮನು ವಿಷಯವೇ ತಿಳಿಯದೆ ರೈಲು ಬಿಡಬೇಡವೇ, ಅಚ್ಮಕ್ಕ. ಮುಂದಿನ ಶುಕ್ರವಾರದ ದಿನದಿಂದ ರಂಗು ಸೀರೇನೇ ಉಡಬೇಕೆಂತ ಗೊತ್ತಾಗಿದೆಯಂತೆ. ಈಗ ಸದ್ಯಕ್ಕೆ ಅವಳು ಸುಮ್ಮನೇ ಇದ್ದು ಆಮೇಲೆ ಸೀರೆ ಸೆರಗಿಗೆ ಗಂಟುಹಾಕಿಕೊಳ್ಳಲೇಳು” ಎಂದಳು. ಅಚ್ಮು “ಭಲಾ, ಚೆನ್ನಾಗಿ ಹೇಳಿದೆ. ನನ್ನ ಹೆಸರು ಲಕ್ಷ್ಮಿಂದ ಲಕ್ಷ್ಮುವಾಗಿ ಕೊನೆಗೆ ಅಚ್ಮುವಾಯಿತು. ನೀನು ಅಚ್ಮಕ್ಕ ಅಂತ ಬೇರೆ ಬಿರುದುಕೊಟ್ಟೆ. ಅದಿರಲಿ, ಮೂರು ತಿಂಗಳು ಲೆಕ್ಕಾ ಹಾಕಿ ಬೆರಳು ಮಡಿಸಿ ಮಾರ್ಗಶಿರ ಮಾಸ ಗೊತ್ತು ಮಾಡಿದ್ದೇಕೆ ಹೇಳೇ ಅಂದರೆ, ಅವಳ ಜಂಭವೇ ಜಂಭ” ಎಂದು ಉತ್ತರ ಹೇಳಿದಳು. ಅಂದಿನ ಅಮೃತ ಘಳಿಗೆಯ ಫಲ. ಅವರಲ್ಲಿ ಯಾರ ಮುಖದಲ್ಲಿ ನೋಡಿದರೂ ನಗುವಿನ ಸರಿಮಳೆಯೇ, ಹಲವು ಸಂದರ್ಭದಲ್ಲಿ ಮುಂದಿನ ಅಳುವಿಗೆ ಇಂದಿನ ನಗುವೇ ನಾಂದಿ.
ಭಾಗೀರಥಮ್ಮನು ಚಪ್ಪಾಳೆ ತಟ್ಟುತ್ತ “ಅಬ್ಬಾ ಅಬ್ಬಾ ಒಬ್ಬರಿಗಿಂತ ಒಬ್ಬರು ಬುದ್ದಿವಂತರಂತೆ. ಆದರೂ ಒಬ್ಬರ ತಲೆಯಲ್ಲಿ ಬುದ್ದಿಯಿಲ್ಲ. ಇಷ್ಟೂ ತಿಳಿಯಲಿಲ್ಲವೆ? ನಮ್ಮ ಮೇಡಂ ನಮ್ಮಿಂದ ರುಕ್ಮಾಂಗದ ನಾಟಕದ ಸೀನುಗಳನ್ನ ಆಡಿಸುವ ದಿನ ಇನ್ನೂ ಮೂರು ತಿಂಗಳಿದೆಯೆಂದು ಲೆಕ್ಕಾ ಹಾಕಿದೆ. ಆ ದಿನ ನಮ್ಮ ಸ್ಕೂಲಿಗೆ ದೊಡ್ಡ ದೊಡ್ಡವರೆಲ್ಲ ಬರ್ತಾರೆ. ಪಾಠಕ್ಕಾಗಿ ರಂಗುವಿಗೆ ಇನಾಂ. ನಾಟಕಕ್ಕಾಗಿ ನನಗೆ ಇನಾಂ” ಎಂದಳು.
ಅಚ್ಮು ಸುಮ್ಮನಿರದೆ “ಅದೇಕೇ ಹಾಗೆಂದೆ? ನಾಟಕದಲ್ಲಿ ರಂಗುವಿಗೂ ಇನಾಂ ಬರಕೂಡದೋ, ಹಾಗಾದರೆ? ನನಗೂ ನಾಟಕದಲ್ಲಿ ಪಾರ್ಟು ಕೊಟ್ಟೇ ಕೊಡುತ್ತಾರೆ. ನನಗೆ ಬರಕೂಡದೋ, ಇನಾಮು?” ಎಂದಳು. ಭಾಗೀರಥಮ್ಮನು ನಗುತ್ತ “ಕೂಡದೆಂದವರು ಯಾರೆ? ನಿಮಗೆ ಫಷ್ಟು, ಸೆಕೆಂಡು, ಎಲ್ಲಾ ಇನಾಮುಗಳೂ ಓದಿನಲ್ಲಿ ಮೀಸಲಾಗೇ ಇವೆ. ಇದರಲ್ಲಿ ಬೇಕಾದರೆ ಬರಲಿ. ನನಗೆ ಅದರಲ್ಲಂತೂ ಸೌತೇಕಾಯಿ ಸೊನ್ನೆ, ಇದರಲ್ಲಾದರೂ ಬರಲಿ ಅಂತ ಹಾಳು ಆಸೆ, ಅಷ್ಟೆ, ಇದರಲ್ಲಿ ಇನಾಂ ಬಂದೇ ಬರುತ್ತೆ, ಬರದೇ ಇದ್ದರೆ ನಾನು ಬದುಕಿರೋದೇ ಬೇಡ” ಎಂದಳು.
ರಂಗಮ್ಮನು ಭಾಗೀರಥಮ್ಮನೊಡನೆ “ನಿನಗೆ ಒಳ್ಳೇ ಇನಾಂ ಬರಲಮ್ಮ. ಎಲ್ಲಾ ಇನಾಮೂ ನನಗೇ ಬರಬೇಕೆಂತ ನನಗೇನೂ ದುರಾಸೆಯಿಲ್ಲ. ಎಲ್ಲರಿಗೂ ಇನಾಂ ಬಂದರೇ ಚೆನ್ನ” ಎಂದಳು.
ಸಾತಿಯು ತನ್ನ ಕೀರಲು ಧ್ವನಿಯಲ್ಲಿ “ಈ ಬೇಳುವೆ ಮಾತಿಗೇನಂತೆ. ನೀನು ಪಾರ್ಟು ಮಾಡಿದರೆ ಅವಳಿಗೆ ಸೊನ್ನೆ ಬಿದ್ದರೆ?” ಎಂದಳು. ಅದಕ್ಕೆ ರಂಗಮ್ಮನು “ಸಾತಿ, ಸಾತಿ, ನೀನೂ ನಾನೂ ಯಾರು ಪಾರ್ಟು ಮಾಡಿದರೂ ಭಾಗೂ ಇನಾಮು ತಪ್ಪುವಹಾಗಿಲ್ಲ. ಅವಳಿಗೇನೆ, ಚಿನ್ನದ ಬೊಂಬೆ ಹಾಗಿದ್ದಾಳೆ. ಬಣ್ಣವಿಲ್ಲದೆ ಅವಳು ಬಂದರೂ ಜನರೆಲ್ಲ ಬೆರಗಾಗಿ ಚಪ್ಪಾಳೆ ತಟ್ಟುತ್ತಾರೆ” ಎಂದು ಉತ್ತರ ಹೇಳಿದಳು. ಸಾತಿಯು “ಈ ಬೆಡಗೆಲ್ಲ ಕಟ್ಟಿಡೆ. ಅಲ್ಲಿ ರೂಪಕ್ಕೆ ಮಾತ್ರವೇ ಅಲ್ಲ, ಇನಾಮು ಬರೋದು. ನಿನ್ನ ಹಾಗೆ ಚೆನ್ನಾಗಿ ಮಾತನಾಡಿ ಆಟ ಕಟ್ಟಿ ನಟನೆ ಹೂಡೋದಕ್ಕೂ ಬರಬೇಕು. ಬಣ್ಣ ಹಚ್ಚಿಕೊಂಡ ಮೇಲೆ ನಿನ್ನಂಥ ಎಣ್ಣೆಗೆಂಪಿನ ಹೆಣ್ಣೂ ಭಾಗೂಗಿಂತ ಹೆಚ್ಚಿನ ಚಿನ್ನದ ಬೊಂಬೆಯೇ ಆಗ್ತಾಳೆ” ಎಂದಳು.
ರಂಗಮ್ಮನು “ಹಾಗೂ ಆಗಲಮ್ಮ, ನಾನು ಮೇಡಂ ಕೈಲಿ ನನಗೆ ಯಾವ ವೇಷವೂ ಬೇಡವೆಂತ ನಾಡಿದ್ದು ಹೇಳಿಯೇ ಬಿಡ್ತೀನಿ. ನಮ್ಮ ಭಾಗೂಗೇ ಇನಾಮು ಬರಲಮ್ಮ, ಅದೇ ನನಗೆ ಬೇಕಾದ್ದು. ನನಗೆ ಪಾರ್ಟು ಮಾಡೋದಕ್ಕೆ ಇಷ್ಟವಿಲ್ಲವೆಂತ ಹೇಳಿದರೆ ಅವರೇನು ಮಾಡುತ್ತಾರೆ? ನಮ್ಮ ಭಾಗು ಇನಾಂ ಹೊಡೆದರೆ ಸಾಕು. ಅವಳು ಬರಿಯ ಕೈಯಲ್ಲಿ ಬರುವ ಹಾಗೆ ಮಾಡಲೇ ಕೂಡದು” ಎಂದಳು. ಭಾಗೀರಥಮ್ಮ ಅವಳ ಬೆನ್ನಿನ ಮೇಲೆ ಪ್ರೀತಿಯಿಂದ ಕೈಹಾಕಿ “ನಮ್ಮಮ್ಮ ಹೇಳಿದ್ದು ಸರಿ, ರಂಗೂ ಬಂಗಾರದಂಥ ಹುಡುಗಿ” ಎಂದು ಹೇಳಿ ಆದರದಿಂದ ಅವಳ ಕೊರಳನ್ನು ತಬ್ಬಿಕೊಂಡಳು.
ಸಾತಿಯು ಸುಮ್ಮನಾಗದೆ “ಈ ಹೊಗಳಿಕೆ, ಈ ಉಪಚಾರ, ಹಾಗಿರಲಿ. ಭಾಗು ಪಾರ್ಟು ಮಾಡೋದು, ಮೇಡಂ ಅವಳಿಗೆ ಪಾರ್ಟು ಕೊಟ್ಟರೆ ತಾನೆ? ತೊನ್ನು ಹುಡುಗಿ ನಂಜಮ್ಮನ್ನ ಇವಳು ಕುಚೋದ್ಯ ಮಾಡಿದ್ದಕ್ಕೆ ಮೇಡಂ ಕೋಪಿಸಿಕೊಂಡಿದ್ದಾರೆ. ಆ ದಿನವೇ ಇವಳಿಗೆ ಈ ಪೆಟ್ಟೂ ಬಿತ್ತು. ಇವಳಿಗೆ ವೇಷಕ್ಕೆ ಚಕ್ಕರ್ ಬೀಳಬಹುದೆಂತ ನನಗೆ ಅನುಮಾನ” ಎಂದಳು. ಕಳ್ಳನಿಗೆ ಚೇಳು ಬಡಿದ೦ತಾಯಿತು ; ಭಾಗೀರಥಮ್ಮನು ತನ್ನ ಮನಸ್ಸನ್ನು ಕೊರೆಯುತ್ತಿದ್ದ ಅನುಮಾನವನ್ನೇ ಸಾತಿಯ ಬಾಯಿಂದ ಕೇಳಿದಳು, ಭಾಗೀರಥಮ್ಮನಿಗೆ ಪಾತ್ರ ಧರಿಸಬೇಕೆಂದು ಬಹಳ ಆಸೆಯಿದ್ದಿತು. ಸುಭದ್ರಾ ಪರಿಣಯ ನಾಟಕದ ಅಭಿನಯವನ್ನು ಅವಳು ಮೂರು ಸಾರಿ ನೋಡಿದ್ದಳು. ಆ ನಾಟಕದಲ್ಲಿ ಸುಭದ್ರೆಯ ಪಾತ್ರವನ್ನು ಧರಿಸಿದ್ದವನನ್ನು ಕುರಿತು ಶ್ರೀ ಕೃಷ್ಣನ ಪಾತ್ರವನ್ನು ಧರಿಸಿದ್ದವನು ಮನೋಹರವಾಗಿ ಹೇಳಿದ್ದ “ಬಾರಮ್ಮ ಬಾರೆ ಸೋದರೀ” ಎಂಬ ಹಾಡು ಅವಳ ತಂದೆಯಂತೆಯೇ ಅವಳಿಗೆ ಅಚ್ಚುಮೆಚ್ಚು. ಭಾಗೀರಥಮ್ಮನ ತಂದೆಯು ಮೂರು ಸಾರಿ ಅದೇ ನಾಟಕವನ್ನು ನೋಡಿದುದಕ್ಕೆ ಆ ಹಾಡನ್ನು ಕೇಳಬೇಕೆಂಬ ಆಸೆಯೇ ಕಾರಣ. ಭಾಗೀರಥಮ್ಮನು ಆ ಹಾಡಿನ ರಾಗಕ್ಕೆ ಬಹು ದೂರವಾದ ತನ್ನದೇ ಆದೊಂದು ರಾಗದಲ್ಲಿ ಆ ಹಾಡನ್ನು ಕಲಿತಿದ್ದಳು. ರುಕ್ಮಾಂಗದ ನಾಟಕದಲ್ಲಿ ವೇಷ ಹಾಕಿದಾಗ ಅದನ್ನು ಹಾಡಬೇಕೆಂಬ ಆಸೆಯೂ ಅವಳ ಮನಸ್ಸಿನಲ್ಲಿದ್ದಿತು.
ಸಾತಿಯ ಮಾತಿಗುತ್ತರವಾಗಿ ಭಾಗೀರಥಮ್ಮನು “ಸಾತಿ! ನನ್ನ ಕಣ್ಣಾಣೆಗೂ ನಾನು ಅವಳನ್ನು ಹಾಸ್ಯ ಮಾಡುವದಕ್ಕೆ ಹೇಳಲಿಲ್ಲ. ಅವಳ ಮುಖವೆಲ್ಲ ಬೆಳ್ಳಗಿರುವುದರಿಂದ ಅವಳ ಮುಖಕ್ಕೆ ಬಣ್ಣವನ್ನೇ ಹಾಕದೆ ಪಾರ್ಟು ಮಾಡಿಸಬಹುದೆಂತ ನಾವು ನಾವು ಮಾತಾಡುತ್ತಿದ್ದಾಗ ಹೇಳಿದೆ. ನಂಜಮ್ಮ ಗೋಳಾಡುತ್ತೆ ಮೇಡಂಗೆ ದೂರು ಹೇಳಿಬಿಟ್ಟಳು. ನಿಜವಾಗಿ ನನಗೆ ತೋರಿದ್ದನ್ನ ಹೇಳಿಯೂ ಹೀಗೆ ಹಗರಣವಾಯಿತು, ನೋಡು” ಎಂದಳು. ಸಾತಿ ನಗುತ್ತ “ಅನೇಕ ಸಲ ನಿಜ ಹೇಳೋದರಂಥ ತಪ್ಪು ಕೆಲಸ ಇನ್ನೊಂದಿಲ್ಲ, ನೋಡಮ್ಮ. ಸಂಗೀತದ ಮೇಷ್ಟರಿಗೆ ಹಲ್ಲುಬ್ಬು ಅಂತ ಹೇಳಿ ನಾನು ಬೆನ್ನು ಮುರಿಯುವ ಹಾಗೆ ಬಿಸಿ ಬಿಸಿ ಒಬ್ಬೊಟ್ಟು ತಿಂದದ್ದಕ್ಕಿಂತಲೆ?” ಎಂದಳು. ಎಲ್ಲರೂ ಸ್ವಲ್ಪ ಸ್ವಲ್ಪ ನಕ್ಕರು.
ಆ ಬಳಿಕ ಅಚ್ಚು “ಅಲ್ಲವೇ ಭಾಗು, ಮೇಡಂ ಯಾರಿಗೆ ಯಾವ ಪಾರ್ಟು ಕೊಡ್ತಾರೋ, ಯಾರಾರಿಗೆ ಪಾರ್ಟೇ ಕೊಡೋದಿಲ್ಲವೋ ಒಂದೂ ಗೊತ್ತಿಲ್ಲ. ಇನ್ನೂ ನಾಡಿದ್ದು ಅದೆಲ್ಲಾ ಹೇಳ್ತಾರೆ. ಅದಕ್ಕೋಸ್ಕರ ಅವರ ಮನೆಗೇ ನಮ್ಮೆಲ್ಲರನ್ನೂ ಬರಹೇಳಿದ್ದಾರೆ. ನೀನು ಊರಿಗೆ ಮುಂಚೆ ನಂಜಮ್ಮನ ಮಾತೇಕಮ್ಮ ಎತ್ತಬೇಕಾಗಿತ್ತು?” ಎಂದಳು. ಭಾಗೀರಥಮ್ಮನು ಯಾವುದೊಂದು ಉತ್ತರವನ್ನೂ ಹೇಳಲಿಲ್ಲ.
– ೨ –
ಕ್ಲುಪ್ತವಾಗಿದ್ದ ದಿನ “ಮೇಡಂ” ಮನೆಗೆ ಹುಡುಗಿಯರೆಲ್ಲರೂ ಸಡಗರದಿಂದ ಹೊರಟರು. ಭಾಗೀರಥಮ್ಮನಿಗೆ ಮಾತ್ರ ಬಹಳ ಯೋಚನೆ. ಸಾತಿಯು ಶಂಕಿಸಿದ್ದಂತೆ-ತನಗೂ ಅನುಮಾನವಿದ್ದಂತೆ-“ಮೇಡಂ” ಕೋಪಿಸಿಕೊಂಡು ತನಗೆಲ್ಲಿ ಯಾವ ಪಾತ್ರವನ್ನೂ ಕೊಡದೆ ಹೋಗುತ್ತಾರೋ ಎಂದು ಅವಳಿಗೆ ಚಿಂತೆ. ಅವಳು ಸ್ವಲ್ಪ ದೂರ ಸುಮ್ಮನೆ ಬರುತ್ತಿದ್ದು ತಟಕ್ಕನೆ ಸ್ವಲ್ಪ ನಿಂತುಕೊಳ್ಳಿರಮ್ಮ, ನಾನು ಮನೆಗೆ ಓಡಿಹೋಗಿ ನಾಯಿಮರಿ ಕಟ್ಟಿಹಾಕಿ ಬರ್ತೀನಿ, ಮರೆತುಬಂದೆ” ಎಂದು ಹೇಳಿ ಸ್ವಲ್ಪ ದೂರ ಹಿಂದಕ್ಕೆ ಓಡಿದಳು. ಸೀತಮ್ಮನೆಂಬ ಹುಡುಗಿ “ಇವಳ ರಗಳೆಯೇ ಹೀಗಮ್ಮ, ಹೊತ್ತಾಯಿತು. ಮೇಡಂ ಕಾದಿರ್ತಾರೆ. ರೈಲಿಗೆ ಅವಸರವಾಗಿರುವಾಗ ಹಾಲಿಗೆ ಹೆಪ್ಪು ಹಾಕೋದು ಮರೆತುಬಂದೆ ಅಂತ ಹಿಂದಕ್ಕೆ ಓಡುವ ಹೆಂಗಸು ಇವಳು” ಎಂದಳು.
ಭಾಗೀರಥಮ್ಮನು ಸ್ವಲ್ಪ ದೂರ ಓಡಿ ಮತ್ತೆ ಹಿಂದಕ್ಕೆ ಓಡಿಬಂದು ಓದುತ್ತ “ನನ್ನ ಬುದ್ದಿಯೇ ನನ್ನ ಸ್ವಾಧೀನದಲ್ಲಿಲ್ಲ” ಎಂದಳು. ರಂಗಮ್ಮನು “ಹೌದಮ್ಮ, ನೀನು ಇವೊತ್ತು, ಬೆಳಗ್ಗೆ ಏನೋ ಒಂದು ಬಗೆಯಾಗಿದ್ದೀಯೆ. ನಾನೇ ಕೇಳಬೇಕೆಂದಿದ್ದೆ. ಮೈಗೆ ಸ್ವಷ್ಟವಿಲ್ಲವೆ?” ಎಂದಳು. ಭಾಗೀರಥಮ್ಮನು ಬಲವಂತವಾಗಿ ನಗುತ್ತ “ಒಂದು ಒಗೆಯಾಗಿಯೂ ಇಲ್ಲ; ಏನೂ ಇಲ್ಲ. ನನಗೇನು, ಸ್ವಷ್ಟವಾಗಿದ್ದೇನೆ” ಎಂದು ಉತ್ತರ ಹೇಳಿದಳು. ಅಚ್ಮು “ಅದಿರಲಿ, ಸಾಹೇಬರ ಸವಾರಿ ಓಡಿಹೋದ್ದೇನು. ಹೀಗೇ ಓಡಿ ಬಂದದ್ದೇನು? ನಾಯಿಮರಿ ಕಟ್ಟಿ ಹಾಕದೆ ಹೋಗಿದ್ದರೆ ಪ್ರಪಂಚ ಮುಳುಗಿ ಹೋದದ್ದೇನು? ” ಎಂದು ಕೇಳಿದಳು.
ಭಾಗೀರಥಮ್ಮನು “ಯಾಕೋ ಏನೋ ನಾನು ನಾಯಿಮರಿ ಕಟ್ಟಿ ಹಾಕಿ ಬಂದದ್ದೇ ಮರೆತುಹೋಗಿತ್ತು. ಸ್ವಲ್ಪ ದೂರ ಓಡಿದಮೇಲೆ ಜ್ಞಾಪಕ ಬಂದು ಹಿಂದಕ್ಕೆ ಒಂದೆ. ಹಾಳು ಮರಿ ಮೊನ್ನೆ ದೇವರ ಮನೆಗೆ ನುಗ್ಗಿ ಬಿಟ್ಟಿತಮ್ಮ, ದೇವರ ಪೆಟ್ಟಿಗೆ ಮುಟ್ಟದಂತೆ ಓಡಿಹೋಗಿ ಹಿಡಿದು ತಂದೆ” ಎಂದಳು.
ಹುಡುಗಿಯರೆಲ್ಲರೂ “ಮೇಡಂ” ಮನೆಗೆ ಹೋದರು. ಅವರೆಲ್ಲರಿಗೂ ಒಡನೆಯೇ ಅಲ್ಲಿ ಉಪ್ಪಿಟ್ಟು ಕಾಫಿ ಸತ್ಕಾರವಾಯಿತು. ಮುಖ್ಯೋಪಾಧ್ಯಾಯಿನಿಯಾದ ಅಲಮೇಲಮ್ಮನವರು (“ಮೇಡಂ”) ವಿದ್ಯಾರ್ಥಿನಿಯರಿಗೆ ತಾಯಿ, ಅಕ್ಕ, ಜೊತೆಗಾತಿ, ಮೂವರೂ ಒಟ್ಟುಗೂಡಿ ಒಂದೇ ವ್ಯಕ್ತಿಯಲ್ಲಿ ನೆಲೆಯಾಗಿದ್ದಂತಿದ್ದರು. ಪಾಠ ಪ್ರವಚನಗಳ ವಿಚಾರವಂತು, ಅವರಲ್ಲಿ ಸಿದ್ಧಾನ್ನದ ಚೊಕ್ಕ ಭೋಜನ. ಗುಣವತಿಯಾದ ರಂಗಮ್ಮನು ಪಾಠ ಶಾಲೆಯಲ್ಲೆಲ್ಲ ಅವರಿಗೆ ಅಚ್ಚುಮೆಚ್ಚಾದ ಮೇಧಾವಿನಿಯಾದ ಪ್ರಿಯ ಶಿಷ್ಯೆ.
ಕಾಫಿಯನ್ನು ಕುಡಿಯುವ ಸಡಗರವು ಮುಗಿದ ಮೇಲೆ ನಾಟಕದ ಸುದ್ದಿಯು ಪ್ರಾರಂಭವಾಯಿತು. ಅಲಮೇಲಮ್ಮನವರು ರಂಗಮ್ಮನ ಹೆಗಲಿನ ಮೇಲೆ ಕೈಯಿಟ್ಟು “ರಂಗೂ, ನಿನಗೆ ಧರ್ಮಾಂಗದನ ಪಾತ್ರ” ಎಂದರು. ಉಳಿದ ಹುಡುಗಿಯರೆಲ್ಲರೂ ಚಪ್ಪಾಳೆ ತಟ್ಟಿ ತಮ್ಮ ಭಾಗಕ್ಕೇನು ಬರುವದೋ ಎಂದು ಕುತೂಹಲದಿಂದ ಅಲಮೇಲಮ್ಮನವರ ಕಡೆಗೇ ನೋಡುತ್ತಿದ್ದರು. ರಂಗಮ್ಮನು “ನಾನು ಪಾರ್ಟು ಮಾಡೋದಿಲ್ಲ, ಮೇಡಂ” ಎಂದಳು. ಅಲಮೇಲಮ್ಮನು ಆಶ್ಚರ್ಯಪಟ್ಟು, ಹೊಗಳಿಕೆಯಿಂದ ಹುಡುಗಿಗೆ ಸ್ವಲ್ಪ ಜಂಭ ಒಂದಿರಬಹುದೆಂದು ಭಾವಿಸಿ, ಉದಾಸೀನವೇ ಅದಕ್ಕೆ ಔಷಧವೆಂದು ಸುಮ್ಮನಾದರು.
ಅಚ್ಮು ಸುಮ್ಮನಿರದೆ “ಮೇಡಂ, ಭಾಗೂಗೆ ಯಾವ ವೇಷ?” ಎಂದು ಕೇಳಿದಳು. ಅಲಮೇಲಮ್ಮನವರು ಹುಡುಗಿಯಲ್ಲಿ ಪ್ರೀತಿಯಿದ್ದರೂ ದರ್ಪವನ್ನು ಬಿಟ್ಟುಕೊಡದೆ “ಅವಳ ಮಾತು ಹಾಗಿರಲಮ್ಮ, ಹೇಳಿದಷ್ಟು ಕೇಳಿ” ಎಂದರು. ಭಾಗೀರಥಮ್ಮನ ಮನಸ್ಸಿಗೆ ತನಗೆ ಪಾತ್ರವಿಲ್ಲವೆಂದು ಖಂಡಿತವಾಯಿತು. ಅವಳ ಕಣ್ಣಿನಲ್ಲಿ ನೀರು ಬರುವಂತಾಯಿತು. ಆದರೂ ಆ ಸಂದರ್ಭದಲ್ಲಿ ಕಣ್ಣೀರು ಸುರಿಸಿದರೆ ಅತ್ತು ಔತಣ ಹೇಳಿಸಿಕೊಂಡಂತಾಗುವದೆಂದು ಅವಳು ದುಃಖವನ್ನು ತಡೆದುಕೊಂಡಳು.
ಅಲಮೇಲಮ್ಮನವರು “ಸೀತು, ನಿನಗೆ ಮೋಹಿನೀ ವೇಷ, ನಿನ್ನ ಮುಖ ಮೋಹಿನೀ ವೇಷಕ್ಕೆ ಮುದ್ದಾಗಿದೆ” ಎಂದರು. ಸೀತಮ್ಮನು “ಕೊನೆಯ ಸೀನೊಂದರಲ್ಲೇ ನಾನು ಒರಬೇಕು. ಇನ್ನೂ ಒಂದೆರಡು ಸಲ ಬರುವಹಾಗೆ ಮಾಡಿ, ಮೇಡಂ” ಎಂದಳು. ಎಲ್ಲರೂ ಘೋಳ್ ಎಂತ ನಕ್ಕರು. ಆ ಬಳಿಕ ಅಲಮೇಲಮ್ಮನವರು “ಅಚ್ಮು, ನಿನಗೆ ರುಕ್ಮಾಂಗದನ ಹೆಂಡತಿ ಪಾರ್ಟು” ಎಂದರು. ಅಚ್ಮು “ಮೇಡಂ, ಮೇಡಂ, ನಿಮ್ಮ ದಮ್ಮಯ್ಯ, ಹೇಳಿ ಮೇಡಂ, ಭಾಗುವಿಗೆ ಯಾವ ಪಾರ್ಟು” ಎಂದು ಅಂಗಲಾಚಿ ಬೇಡಿದಳು.
ಅಲಮೇಲಮ್ಮನವರು ಅದಕ್ಕೆ ಉತ್ತರವಾಗಿ “ಭಾಗುವಿಗೆ ದೊಡ್ಡ ಪಾರ್ಟು. ಅವಳು ಎಲ್ಲರಿಗಿಂತ ಉದ್ದವಾಗಿ ಬೆಳೆದು ದಪ್ಪವಾಗಿರುವುದಕ್ಕೆ ತಕ್ಕ ಪಾರ್ಟು, ಯಾವದಿರಬಹುದು ಹೇಳಿ ನೋಡೋಣ” ಎಂದರು. ತನಗೂ “ಪಾರ್ಟು” ಉಂಟೆಂದು ತಿಳಿದು ಭಾಗೀರಥಮ್ಮನ ಮುಖವು ಊರಗಲವಾಯಿತು. ಅವಳ ಸಂತೋಷವು ಅವಳ ತುಂಬು ಕೆನ್ನೆಗಳನ್ನೊಡೆದುಕೊಂಡು ಹೊರಹೊಮ್ಮುವಂತಿದ್ದಿತು. ಸಾತಿಯು “ಜವಾನನ ಪಾರ್ಟಿರಬಹುದು ಅಲ್ಲವೇ, ಮೇಡಂ?” ಎಂದು ಕೇಳಿದಳು. ಅಲಮೇಲಮ್ಮನವರು ಸ್ವಲ್ಪ ನಕ್ಕು “ಅದು ನಿನ್ನ ಪಾರ್ಟಮ್ಮ, ಅವಳು ಅದನ್ನು ಮಾಡುವ ಹಾಗಿಲ್ಲ” ಎಂದರು.
ಸಾತಿಯು “ಮತ್ತೆ ಅವಳಿಗೆ ಯಾವ ಪಾರ್ಟು, ಮೇಡಂ? ಸೂತ್ರಧಾರನ ಪಾರ್ಟೆ? ನಾವೂ ಆ ಸೀನ್ ಆಡಬೇಕೆಂದೇ ಇಲ್ಲವಲ್ಲ” ಎಂದಳು. ಅಲಮೇಲಮ್ಮನವರು ನಕ್ಕು “ಇನ್ನೂ ಗೊತ್ತಾಗಲಿಲ್ಲವೆ? ನಿನ್ನ ಬುದ್ದಿ ಒನಕೆ ತುಂಡಿನಂತೆ ಚಿಗುರುತ್ತಿದೆ. ಅವಳಿಗೆ ರುಕ್ಮಾಂಗದನ ಪಾರ್ಟು” ಎಂದರು. ಸಾತಿಯ ಹೊಟ್ಟೆಯಲ್ಲಿ ಮೆಣಸಿನಕಾಯಿ ಕಿವುಚಿದಂತಾಯಿತು. ಅವಳು “ಭಾಗು ಆ ಪಾರ್ಟು ಚೆನ್ನಾಗಿ ಮಾಡ್ತಾಳೆಯೆ, ಮೇಡಂ? ಕ್ಲಾಸಿನಲ್ಲಿ ನಾನು ಸೆಕೆಂಡ್, ಅವಳು ಎಲ್ಲರಿಗಿಂತ ಕಡೆ, ಎಡಗಡೆಯಿಂದ ಫಸ್ಟ್” ಎಂದಳು.
ಅಲಮೇಲಮ್ಮನವರು ನಕ್ಕು “ನಿನಗೆ ಚಾರನ ಪಾರ್ಟೆಂತ ಅಸಮಾಧಾನವೊ? ಪಾರ್ಟು ಯಾವುದಾದರೇನು? ಆದರೆ ಗುಣಕ್ಕೆ ಮತ್ಸರವಿರಬಾರದಮ್ಮ, ಪಾಠದಲ್ಲಿ ಕೊನೆಯಾದರೂ ಭಾಗು ನಾಟಕದಲ್ಲಿ ಚೆನ್ನಾಗಿ ಪಾರ್ಟು ಮಾಡ್ತಾಳೆ” ಎಂದರು. ಸಾತಿಯು ಕೀರಲು ಧ್ವನಿಯ ತಾರಸ್ವರ ದಲ್ಲಿ “ಮಾಡ್ಯಾಳೊ ಅವಳು? ಇನಾಮ ಬರಬಹುದು. ಅಲ್ಲವೆ, ಮೇಡಂ?” ಎಂದು ನಕ್ಕಳು. ಆಲಮೇಲಮ್ಮನವರು “ಮಾಡದೆ ಅವಳಿಗೇನು ಚಿನ್ನದ ಬೊಂಬೆ ಹಾಗಿರ್ತಾಳೆ, ಸೊಗಸಾಗಿ ಪಾರ್ಟು ಮಾಡ್ತಾಳೆ, ಇನಾಮೂ ಬರುತ್ತೆ. ನಮ್ಮ ಹುಡುಗಿಯರಲ್ಲೊಬ್ಬರು ದೊಡ್ಡವರಿಗೆ ಪ್ರತಿಷ್ಠೆ ಬಂದಿದೆ. ಅವರು ಪಾರ್ಟುಮಾಡುವುದಿಲ್ಲವಂತೆ, ಅವರಿಗೆ ಮೊದಲನೆಯ ಇನಾಮು ಬರುತ್ತಿತ್ತು. ಇವಳಿಗೆ ಎರಡನೆಯ ಇನಾಮು ಬರುತ್ತಿತ್ತು. ಈಗೇನು, ಇವಳಿಗೇ ಎರಡು ಇನಾಮು ಕೊಟ್ಟರಾಯಿತು” ಎಂದು ಹೇಳಿ ಗಂಭೀರವಾಗಿ ರಂಗಮ್ಮನ ಕಡೆಗೆ ತಿರುಗಿ ನೋಡಿದರು.
ರಂಗಮ್ಮನು ಸಂತೋಷದಿಂದ “ಹಾಗೇ ಮಾಡಿ ಮೇಡಂ, ನನಗೆ ಹೇಗೂ ಕ್ಲಾಸಿನಲ್ಲಿ ಫಸ್ಟ್ ಆದ ಇನಾಂ ಬರುತ್ತೆ, ಭಾಗುವಿಗೂ ನಾಟಕದಲ್ಲಿ ಫಸ್ಟ್ ಆದ ಇನಾಂ ಬರಲಿ. ಮೇಡಂ, ಮೇಡಂ, ಭಾಗು ಚಿನ್ನದ ಬೊಂಬೆ ಹಾಗಿರ್ತಾಳೆ ಅಂದಿರಿ, ಮೊನ್ನೆ ನಾನೂ ಹಾಗೇ ಹೇಳಿದ್ದೆ, ಮೇಡಂ. ಇವರನ್ನೆಲ್ಲಾ ಕೇಳಿ ಬೇಕಾದರೆ” ಎಂದಳು. ಅಲಮೇಲಮ್ಮನವರಿಗೆ ಆಶ್ಚರ್ಯವಾಯಿತು. ರಂಗಮ್ಮ ತಮ್ಮ ಮಾತನ್ನು ನಡೆಸಲಿಲ್ಲವೆಂತ ಅಲ್ಪಸ್ವಲ್ಪ ಅಸಮಾಧಾನವೂ ಆಯಿತು.
ಭಾಗೀರಥಮ್ಮನು “ಮೇಡಂ, ರಂಗೂ ದೇವಲೋಕದ ಹುಡುಗಿ, ನನಗೆ ಇನಾಂ ಬರಬೇಕೆಂತ ತಾನು ಪಾರ್ಟು ಮಾಡುವುದಿಲ್ಲವೆಂದು ಹೇಳಿದ್ದಾಳೆ. ಮೊನ್ನೆ ನಮ್ಮ ಮನೆಯಲ್ಲಿ ನಮ್ಮ ನಮ್ಮಲ್ಲಿ ಮಾತು ಬಂತು. ಇವಳು ಪಾರ್ಟು ಮಾಡಿದರೆ ನನಗೆ ಇನಾಮು ಬರುವುದಿಲ್ಲವೆಂತ ಸಾತಿ ಚಂಡಿಸಿ ಹೇಳಿದಳು. ನಾನು ಚಿನ್ನದ ಬೊಂಬೆ ಹಾಗಿದ್ದೇನೆಂತಲೂ ಇನಾಮು ಬರುತ್ತೆಂತಲೂ ಇವಳು ಹೇಳಿದಳು. ಸಾತಿ ಸುಮ್ಮನಾಗಲಿಲ್ಲ. ಅದೆಲ್ಲಾ ಬೇಳುವೆ ಮಾತು ಎಂತ ಸಾತಿ ಹೇಳಿದ್ದಕ್ಕೆ ರಂಗು ತಾನು ಪಾರ್ಟೇ ಮಾಡುವುದಿಲ್ಲವೆಂತ ನಿರ್ಧರ ಮಾಡಿದಳು. ಅಷ್ಟೇ ಅಲ್ಲ, ನಮ್ಮ ಭಾಗು ಇನಾಂ ಹೊಡೆದರೆ ಸಾಕು. ಅವಳು ಬರಿಯ ಕೈಯಲ್ಲಿ ಬರುವಹಾಗೆ ಮಾಡಲೇಕೂಡದು’ ಎಂತ ಕೂಡ ಹೇಳಿದ್ದಳು, ಮೇಡಂ. ಅವಳಿಗೇ ಮೊದಲನೇ ಇನಾಂ ಬರಲಿ, ನನಗೆ ಎರಡನೇ ಇನಾಮೇ ಸಾಕು. ಅವಳ ಮಾತು ಕೇಳದೆ ಅವಳ ಕೈಲಿ ಪಾರ್ಟು ಮಾಡಿಸಲೇ ಬೇಕು, ಮೇಡಂ” ಎಂದಳು.
ರಂಗಮ್ಮನ ಸದ್ಗುಣವನ್ನು ಕಂಡು ಅಲಮೇಲಮ್ಮನವರಿಗೆ ಅತ್ಯಂತ ಸಂತೋಷವಾಯಿತು. ಅವರು ಅವಳನ್ನು ಆದರದಿಂದ ಮೈದಡವಿ “ನಂಬುವುದೇ ಕಷ್ಟವಾಗಿದೆ. ಬುದ್ಧಿಯ ಜೊತೆಗೆ ನಿನಗೆಷ್ಟು ಗುಣವಮ್ಮ, ನನ್ನಮ್ಮಾ ಸುಖವಾಗಿ ಬಾಳು. ಸಾತಮ್ಮ, ಹೀಗಿರಬೇಕು ಸ್ವಾರ್ಥತ್ಯಾಗ, ನೀನೂ ಹಾಗೆ ಕಲಿಯಮ್ಮ” ಎಂದರು. ರಂಗಮ್ಮನು “ಹೀಗೆಲ್ಲ ಹೊಗಳಬೇಡಿ, ಮೇಡಂ; ನಿಮ್ಮ ಮನಸ್ಸು ಎಲ್ಲಕ್ಕಿಂತ ದೊಡ್ಡದು. ಅದಕ್ಕೆ ಇಷ್ಟು ಜನಕ್ಕೂ ನೀವೊಬ್ಬರು ತಾಯಿಯಂತೆ ಇದ್ದೀರಿ. ನಿಮ್ಮೊಬ್ಬರಿಗೆ ಈ ಸ್ಕೂಲಿನವರಿಷ್ಟು ಜನ ಮಕ್ಕಳು” ಎಂದಳು. ತಾನಾಡಿದ ಮಾತುಗಳ ಭಾವವೆಷ್ಟು ದೊಡ್ಡದೆಂಬುದು ಅವಳ ಚಿಕ್ಕ ಹೃದಯಕ್ಕೆ ತಿಳಿಯಲಿಲ್ಲ. ಮಕ್ಕಳೂ ಇಲ್ಲದೆ ಗಂಡನನ್ನೂ ಕಳೆದುಕೊಂಡು ವಿದ್ಯಾರ್ಥಿನಿಯರೇ ತಮ್ಮ ಸರ್ವಸ್ವವೆಂಬ ಭಾವನೆಯಿಂದ ಕೆಲಸಮಾಡುತ್ತಿದ್ದ ಅಲಮೇಲಮ್ಮನವರು ಅದನ್ನು ಗ್ರಹಿಸಿದರು. ಸಾತಿಯು “ಹಾಗೇ ಆಗಲಿ ಮೇಡಂ, ಸರ್ಕಾರಿ ಜವಾನರು ಕೂಡ ಭೇಷ್ ಅನ್ನೋ ಹಾಗೆ ಚಾರನ ಪಾರ್ಟು ಮಾಡಿಬಿಡ್ತೀನಿ, ಅದೇ ನನ್ನ ಸ್ವಾರ್ಥತ್ಯಾಗ. ಸ್ವಾರ್ಥ ತ್ಯಾಗವೆಂದರೇನು, ಮೇಡಂ?” ಎನ್ನದೆ ಹೋಗಿ-ಅವರಿಗೆ ಫಕ್ಕನೆ ನಗು ಬರದೆ ಹೋಗಿದ್ದರೆ-ಕಣ್ಣಿನಲ್ಲಿ ಕಂಬನಿಯು ಕೋಡಿಗಟ್ಟಿ ಹರಿಯುತ್ತಿದ್ದಿತು. ಅಲ್ಲಿಗೂ ನಗುವಿನ ಮಧ್ಯೆ, ಅವರ ಕಣ್ಣುಗಳಿಂದ ಒಂದೆರಡು ನೀರಿನ ಹನಿಗಳುದುರಿದುವು. ಆದರೆ ಹೆಚ್ಚಾಗಿ ನಕ್ಕುದರಿಂದ ಹಾಗಾಯಿತೆಂದು ಹುಡುಗಿಯರು ಭಾವಿಸಿದರು. ಸೀತಮ್ಮನು ಎಷ್ಟು ಚೆನ್ನಾಗಿ ನಗುತ್ತೀರಿ, ಮೇಡಂ! ನಾನು ಗಟ್ಟಿಯಾಗಿ ನಕ್ಕರೇ ನಮ್ಮ ತಾಯಿಗೆ ಸರಿಬೀಳುವುದಿಲ್ಲ. ಬೇಡವೆನ್ನುತ್ತಾರೆ” ಎಂದಳು.
ಅಷ್ಟರಲ್ಲಿ ಭಾಗೀರಥಮ್ಮನು “ಮೇಡಂ, ಮೇಡಂ, ನನ್ನ ಮಾತೊಂದು ನಡೆಸಿಕೊಡಿ, ಮೇಡಂ, ರುಕ್ಮಾಂಗದನಿಗೊಬ್ಬ ತಂಗಿ ಪಾರ್ಟು ಹಾಕಿಸಿ ನಾನು ಬಾರಮ್ಮಾ ಬಾರೆ ಸೋದರಿ’ ಎಂಬ ಹಾಡು ಹೇಳುವಂತೆ ಮಾಡಿ, ಮೇಡಂ” ಎಂದಳು. ಆಲಮೇಲಮ್ಮನವರು ನಕ್ಕು “ಅದೆಲ್ಲಾ ಸಾಧ್ಯವಿಲ್ಲಮ್ಮ, ನೀನೂ ಸರಿಯೆ, ಒಳ್ಳೆಯ ಹುಡುಗಿ” ಎಂದರು. ಭಾಗೀರಥಮ್ಮನಿಗೆ ತನಗೆ ರುಕ್ಕಾಂಗದನ “ಪಾರ್ಟು ” ದೊರೆತುದೇ ದೊಡ್ಡ ಸಂತೋಷ. ತಲೆಹರಟೆಯಾಡಿದರೆ ಅಸಲಿಗೆಲ್ಲಿ ಮೋಸವೋ ಎಂಬ ಭಯ. ಆದುದರಿಂದ ಅವಳು “ಆಗಲಿ, ಮೇಡಂ, ದೊಡ್ಡವರು ಹೇಳಿದಂತೆ ಕೇಳುವುದೇ ನಮ್ಮ ಧರ್ಮ. ಆದರೆ, ಆದರೆ, ಇನ್ನೊಂದು ಮಾತು” ಎಂದು ಹೇಳಿ ನಕ್ಕಳು. ಅಲಮೇಲಮ್ಮನವರು “ಅದನ್ನು ಪೂರ್ತಿಯಾಗಿ ಹೇಳಿದಮೇಲೆ ನಗಮ್ಮ” ಎಂದರು.
ಭಾಗೀರಥಮ್ಮನು “ಆಗಲಿ, ಮೇಡಂ. ರಂಗು ಮೊನ್ನೆತಾನೆ ಹೇಳಿದ್ದಾಳೆ. ಅವಳ ಮಾಲಗಣ್ಣಿಗೆ ಬಹಳ ಮಹಿಮೆಯಂತೆ. ಮಾಲಗಣ್ಣಿನ ಹೆಣ್ಣು ಕೈಹಿಡಿದರೆ ಮೂಲೆಯಲ್ಲಿದ್ದವರೂ ಮಹಡಿಯನ್ನೇರುತ್ತಾರಂತೆ. ಅವಳೇ ಹೇಳಿದ್ದಾಳೆ, ರಂಗೂಗೆ ಸಂಧ್ಯಾವಳಿ ಪಾರ್ಟು ಕೊಟ್ಟು ಅವಳು ನನ್ನ ಹೆಂಡತಿಯಾಗುವಂತೆ ಮಾಡಿ, ನನಗೆ ಮಹಡಿಯನ್ನೇರಲು ಬಹಳ ಆಸೆ” ಎಂದಳು. ರಂಗಮ್ಮನ ಮುಖವು ಪೆಚ್ಚಾಯಿತು. ಉಳಿದವರೆಲ್ಲರೂ ಬಿದ್ದು ಬಿದ್ದು ನಕ್ಕರು.
ರಂಗಮ್ಮನು “ತಮಾಷೆಗೆ ನಾನು ಹಾಗೆ ಹೇಳಿದರೆ ಇವಳು ಹೀಗೆಲ್ಲಾ ಹೇಳ್ತಾಳೆ, ನೋಡಿ ಮೇಡಂ” ಎಂದಳು. ಅವಳ ಕಣ್ಣಿನಿಂದ ನೀರುರುಳುವಂತಿದ್ದಿತು. ಅಲಮೇಲಮ್ಮನವರು ಆದರದಿಂದ ತಮ್ಮ ಪ್ರಿಯ ಶಿಷ್ಯೆಯ ತಲೆಯನ್ನು ಸವರಿ “ನನಗೆ ಹೇಳಿದರೇನಾಯಿತು, ಕಂದ? ನೀನು ಹೇಳಿದ್ದು ನಿಜವೂ ನಿಜ, ಮಾಲಗಣ್ಣಿದ್ದವರೆಲ್ಲರ ಮಾತೂ ಹೇಗೋ ಕಾಣೆ, ನಿನ್ನ ವಿಷಯದಲ್ಲೇನೊ ನೀನು ಹೇಳಿದ್ದು ಖಂಡಿತವಾಗಿಯೂ ನಿಜ, ನೀನು ಕೈಹಿಡಿಯುವವನು ನಿಜವಾಗಿಯೂ ಭಾಗ್ಯಶಾಲಿ. ಇದೇ ರೀತಿ ಹೇಳಿ ಅವಳು ಬಾಯಿ ಮುಚ್ಚುವಂತೆ ಮಾಡು. ಇನ್ನೊಂದು ಮಾತು. ಉತ್ಸವದ ದಿನ ಹತ್ತಿರವಾಗುವ ತನಕ ನಾಟಕವಾಡುವ ವಿಷಯ ಯಾರೊಡನೆಯ ತುಟಿಪಿಟಕ್ಕೆನ್ನ ಬೇಡಿ. ನಿಮ್ಮ ನಿಮ್ಮ ಮನೆಯಲ್ಲೂ ಯಾರಿಗೂ ಹೇಳಬೇಡಿ. ಒಬ್ಬರಿಗೂ ತಿಳಿಸದೆ ರಹಸ್ಯವಾಗಿಟ್ಟಿದ್ದು ನಿಮ್ಮ ನಿಮ್ಮ ಮನೆಯವರಿಗೂ ಕೂಡ ಆಶ್ಚರ್ಯವಾಗುವ ಹಾಗೆ ಮಾಡೋಣ. ಈಗಲೇ ಊರಿಗೆಲ್ಲಾ ತಿಳಿಸಿ ಡಂಗುರ ಹಾಕಿದರೆ, ಆಮೇಲೆ ಎಲ್ಲರಿಗೂ ಅದರ ವಿಚಾರ ತಂಗಳೂಟವಾಗುತ್ತೆ. ಬಿಸಿ ಬಿಸಿಯಾಗಿದ್ದ ಊಟ ಸೊಗಸು. ಜೋಕೆ, ಯಾರಿಗೂ ತಿಳಿಸಬೇಡಿ. ಭಾಗು, ನೀನು ಬುಡುಬುಡಿಕೆ ಬಾಯಿಯವಳು” ಎಂದರು. ಭಾಗೀರಥಮ್ಮನು “ನೀವು ಹೇಳಿದಹಾಗೆ ಕೇಳ್ತೇವೆ, ಮೇಡಂ. ನಿಮ್ಮಾಣೆಗೂ, ನಾನು ಕೂಡ ಯಾರಿಗೂ ಹೇಳೋದಿಲ್ಲ” ಎಂದಳು. ಹುಡುಗಿಯರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟರು.
– ೩ –
ಭಾಗೀರಥಮ್ಮನು ತಮ್ಮ ಮನೆಯ ಬಾಗಿಲಿನ ಬಳಿಗೆ ಬರುವ ವೇಳೆಗೆ ಸರಿಯಾಗಿ ಅವಳ ತಮ್ಮ “ಪಾಚ್ಚು” ಕಿವಿಯ ಸಂದಿಯಲ್ಲಿ ಒಂದು ಸೀಸದ ಕಡ್ಡಿಯನ್ನು ಸಿಕ್ಕಿಕೊಂಡು ಗಂಭೀರವಾದ ಆಲೋಚನೆಯಲ್ಲಿ ಮಗ್ನನಾಗಿ ಒಳಬಾಗಿಲಿನಲ್ಲಿಯೇ ನಿಂತಿದ್ದನು. ಹುಡುಗನಿಗೆ ಒಂದು ಕಾಲು ಉಳುಕಿ ಅವನು ಕುಂಟುತ್ತಿದ್ದಾಗ ಅವನನ್ನು “ಕುಂಟ ಪಾಚ್ಚ” ಎಂದು ಕರೆದು ಭಾಗೀರಥಮ್ಮನು ಅವನನ್ನು ರೇಗಿಸುತ್ತಿದ್ದ ಹೆಸರೇ ಮುದ್ದಿಗಾಗಿ “ಪಾಚ್ಚು” ಎಂಬ ರೂಪಾಂತರವನ್ನು ಹೊಂದಿ ಅವನ ನಿಜವಾದ ಹೆಸರಿಗಿಂತಲೂ ಅವನಿಗೇ ಅಚ್ಚುಮೆಚ್ಚಾಗಿದ್ದಿತು. ಪಾಚ್ಚು ಏನನ್ನೋ ಜ್ಞಾಪಿಸಿ ಕೊಳ್ಳುತ್ತಲೂ, ತುಟಿಗಳನ್ನು ಅಲುಗಿಸುತ್ತಲೂ, ಯೋಚಿಸುತ್ತಲೂ ನಿಂತಿದ್ದುದನ್ನು ಕಂಡು ಭಾಗೀರಥಮ್ಮನು “ತನಗೆ ಸಿಕ್ಕಲಾರದ ಸೀಬೆ ಹಣ್ಣು ಕಂಡ ಹಣ್ಣು ಕೀತೀ ತಿಮ್ಮಣ್ಣನ ಹಾಗೆ ಕಣ್ಣು ಕಣ್ಣು ಬಿಡ್ತಾ ನಿಂತಿದ್ದೀಯೆ? ಏನೋ ಪಾಚ್ಚು ನಿನಗೆ ಬಂದಿರುವ ಕಷ್ಟ?” ಎಂದು ಹೇಳಿ ನಕ್ಕಳು.
ಪಾಚ್ಚು “ಅಕ್ಕ, ಅಕ್ಕ, ಒಳ್ಳೆಯ ಸಮಯಕ್ಕೆ ಬಂದೆ. ಅಮರಾ ನಿರ್ಜರಾ ದೇವಾ ಆದಮೇಲೆ ಮುಂದಕ್ಕೇನು ಹೇಳು. ನನ್ನ ಅಮರ ಎಲ್ಲೋ ಹೋಗಿಬಿಟ್ಟಿದೆ. ಇದು ಎಷ್ಟು ಜ್ಞಾಪಿಸಿಕೊಂಡರೂ ಜ್ಞಾಪಕಕ್ಕೆ ಬರೋಗಿಲ್ಲ, ಶಾಸ್ತ್ರಿಗಳು ಬಂದುಬಿಡ್ತಾರೆ” ಎಂದನು. ಭಾಗೀರಥಮ್ಮನು “ಈಗಿನ ಪದ್ದತಿಗಳೊಂದೂ ಅಣ್ಣಂಗೆ ಸರಿಬೀಳೋದಿಲ್ಲ. ಶಾಸ್ತ್ರಿಗಳ ಕೈಲಿ ಅಮರ ಹೇಳಿಸಿ ನಿನ್ನ ಪ್ರಾಣ ಹಿಂಡೋದೇಕೋ ಕಾಣೆ. ನೀನು ಕೇಳಿದ್ದು ನಂಗೆ ಬರೋದಿಲ್ಲ ಪಾಚು” ಎಂದು ಉತ್ತರ ಹೇಳಿದಳು. ಪಾಚುವಿಗೆ ಸ್ವಲ್ಪ ಕಿರಿಕಿರಿಯಾಯಿತು. ಅವನು “ಅಕ್ಕ, ಕೇಳಿದ್ದೊಂದು ಹೇಳೋಕೂ ನಿನಗೆ ಬರೋದಿಲ್ಲ, ನೀನೊಂದು ಶುದ್ಧ ಮಣ್ಣು ಬೊಂಬೆ” ಎಂದನು. ಭಾಗೀರಥಮ್ಮನು ಸಂತೋಷಭರದಲ್ಲಿ “ಮಣ್ಣಿನ ಬೊಂಬೆಯಲ್ಲವೋ; ಚಿನ್ನದ ಬೊಂಬೆ, ನಾನು ಚಿನ್ನದ ಬೊಂಬೆ ಹಾಗಿರ್ತೇನೆ, ನಮ್ಮ ಮೇಡಂ….” ಎಂದು ಹೇಳಿ ಅಷ್ಟರಲ್ಲಿಯೇ ನಾಲಿಗೆಯನ್ನು ಕಚ್ಚಿಕೊಂಡು ಮಾತನ್ನು ನಿಲ್ಲಿಸಿದಳು. ತನ್ನಿಂದಲೇ ಗುಟ್ಟು ರಟ್ಟಾದೀತೆಂಬ ಭಯದಿಂದ ಅವಳು ಒಳಕ್ಕೆ ಹೋದಳು.
ಪಾಚುವೂ ಅವಳನ್ನು ಹಿಂಬಾಲಿಸುತ್ತ “ಹಾಗೇ ಮಾಡು, ಚಿನ್ನದ ಬೊಂಬೆಯೇ ಆಗು, ದೇವರ ಮನೆಯಲ್ಲಿ ಈಗಿರುವ ಅರಿಸಿನ ಬಣ್ಣದ ಮಣ್ಣಿನ ಗೌರೀಗೆ ಬದಲಾಗಿ ನಿನ್ನೆ ಕೂರಿಸಿದರಾಯಿತು” ಎಂದನು. ಅಷ್ಟರಲ್ಲಿ ಸುಬ್ಬಮ್ಮನವರು ತನ್ನ ಬಳಿಗೆ ಬಂದುದನ್ನು ಕಂಡು ಪಾಚ್ಚು, “ಅಮ್ಮ, ಅಮ್ಮ, ಇಲ್ಲಿ ಕೇಳಮ್ಮ, ಅಕ್ಕ ಚಿನ್ನದ ಬೊಂಬೆಯಾಗ್ತಾಳಂತೆ, ಮಣ್ಣಿನ ಗೌರಮ್ಮನ ಹತ್ತಿರ ಆ ಚಿನ್ನದ ಬೊಂಬೆಯನ್ನೂ ಕೂರಿಸಬೇಕಮ್ಮ, ಬಹಳ ಚೆನ್ನಾಗಿರುತ್ತೆ” ಎಂದು ಹೇಳಿ ಚಪ್ಪಾಳೆ ಹೊಡೆದು ನಕ್ಕನು. ಸುಬ್ಬಮ್ಮನವರು “ತಾನೇ ರೂಪವತಿಯೆಂದು ಎಷ್ಟು ಬಿಗು ಮಾನವೋ ನಮ್ಮ ಭಾಗೂಗೆ, ಪ್ರತಿಷ್ಟೆ ಹುಡುಗಿ” ಎಂದರು.
ಅಷ್ಟರಲ್ಲಿ ಭಾಗೀರಥಮ್ಮನು ಒಂದು ಕೋಟಡಿಗೆ ಓಡಿ ಹೋಗಿದ್ದಳು. ಅಲ್ಲಿ ಗೋಡೆಯಮೇಲೆ ನೇತುಹಾಕಿದ್ದ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡು, ಹುಬ್ಬುಗಳ ಮಧ್ಯದಲ್ಲಿ ಚಿವುಟಿಗೊಳ್ಳುತ್ತ ಅವಳು “ಇಗೋ, ಇಗೋ, ಈ ನೋವು ಜ್ಞಾಪಕವಿರಲಿ, ಯಾರಿಗಾದರೂ ನಾಟಕದ ವಿಷಯ ಹೇಳಿಬಿಟ್ಟು ರಗಳೆ ಮಾಡೀಯೆ. ಮೇಡಂ ಮೇಲೆ ಆಣೆಯಿಟ್ಟಿರೋದು ದಂಡಮಾಡೀಯೆ. ಜೋಕೆ, ಜೋಕೆ, ಹಾಗೆ ಮಾಡಿದರೆ ನಾನು ಬೇರೆ ಸುಮ್ಮನಿರೋದಿಲ್ಲ, ಜೊಕೆ, ಜೋಕೆ” ಎಂದಳು.
ಗುಟ್ಟನ್ನು ಕಾಪಾಡುವುದು ಭಾಗೀರಥಮ್ಮನಿಗೆ ನಿಜವಾಗಿಯೂ ಕಷ್ಟವಾಯಿತು. ಅಲಮೇಲಮ್ಮನವರು ಆಗಾಗ ಎಚ್ಚರಿಕೆ ಹೇಳುತ್ತಲೇ ಇದ್ದುದರ ಫಲಿತಾಂಶವಾಗಿ ಅವಳು ಮನಸ್ಸನ್ನು ಬಿಗಿಹಿಡಿದು ಗುಟ್ಟನ್ನು ಕಾಪಾಡಿಕೊಂಡು ಬರುತ್ತಿದ್ದಳು. ಆದರೂ ಚಪಲ. ತಮ್ಮ ಅಕ್ಕನ ಮಕ್ಕಳನ್ನು ಮುದ್ದಿಸುವಾಗಲೆಲ್ಲ “ನೀವೂ ಮುಂದೆ ಚಿನ್ನದ ಬೊಂಬೆಗಳಾಗಬೇಕು, ಚಿನ್ನದ ಬೊಂಬೆಗಳಾಗದೆ ಹೋದರೆ ನಾನು ಬಿಡೋದಿಲ್ಲ” ಎಂದು ಹೇಳಿ ಹೇಳಿ ತನ್ನ ಚಾಪಲ್ಯವನ್ನು ತೀರಿಸಿಕೊಳ್ಳುತ್ತಿದ್ದಳು. ಸುಬ್ಬಮ್ಮನವರು ಈ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಒಂದು ದಿನ “ಭಾಗು, ಮಕ್ಕಳು ತೊಳೆದ ಮುತ್ತಿನ ಹಾಗಿವೆ, ಚಿನ್ನದ ಬೊಂಬೆಯಾಗಬೇಕು, ಚಿನ್ನದ ಬೊಂಬೆಯಾಗಬೇಕು, ಅಂತ ಒರಲು ಸಂತೆ ಹಾಕ್ತಾ ಇರ್ತಿಯೆ; ಅವೇನು ಮುದ್ದಾಗಿಲ್ಲವೆ? ನೀನೇ ರೂಪವತಿ ಅಂತ ಬಹಳ ಜಂಭ ನಿನಗೆ” ಎಂದರು. ಭಾಗೀರಥಮ್ಮನ ಕಷ್ಟ ಅವರಿಗೆ ಹೇಗೆ ತಿಳಿಯಬೇಕು?
ಪಾಠಶಾಲೆಯಲ್ಲಿ ನಾಟಕದ ಅಭ್ಯಾಸವು ಪ್ರಾರಂಭವಾದಾಗಿನಿಂದ ಭಾಗೀರಥಮ್ಮನಿಗೆ ತಾನು ಓದಿನಲ್ಲಿಲ್ಲದಿದ್ದರೂ ನಾಟಕದಲ್ಲಿಯ ಮನೆಯ ಕೆಲಸಗಳಲ್ಲಿಯೂ “ಸೈ” ಎನ್ನಿಸಿಕೊಂಡು ಅಲಮೇಲಮ್ಮನವರನ್ನೂ ತನ್ನ ತಾಯಿತಂದೆಗಳನ್ನೂ ಮೆಚ್ಚಿಸಬೇಕೆಂಬ ಹುರುಡು ಹುಟ್ಟಿತು. ಒಂದು ದಿನ ಅಲಮೇಲಮ್ಮನವರು “ಭಾಗು, ನಿನ್ನ ರುಕ್ಮಾಂಗದನ ಪಾರ್ಟಿ, ರಂಗೂ ಧರ್ಮಾಂಗದನ ಪಾರ್ಟೂ ನೋಡಿ ಗಂಡು ಹುಡುಗರು ಕೂಡ, ಗಂಡು ಪಾರ್ಟೇ ತಾವು ಹಾಗೆ ಮಾಡೋಕಾಗುವುದಿಲ್ಲವೆಂತ ನಾಚಿಕೊಳ್ಳು ವಷ್ಟು ಭರ್ಜರಿಯಾಗುತ್ತಮ್ಮ. ಅವಳ ಅಭಿನಯ ಫಸ್ಟ್, ನಿನ್ನದು ಸೆಕೆಂಡ್, ಚಿನ್ನದ ಬೊಂಬೆ, ಚಿನ್ನದ ಬೊಂಬೆ ಹಾಗಿರುತ್ತೀಯಮ್ಮ, ನಿಮ್ಮಿಂದ ನನಗೆ ಹೆಸರು ಬರುತ್ತೆ” ಎಂದರು. ಆಗ ಭಾಗೀರಥಮ್ಮನು ಸಂತೋಷದಿಂದ ಉಬ್ಬಿ, ವಿಶಾಲವಾಗಿ ಬಾಯ್ದೆರೆದು ಹಿಗ್ಗಿದ ವೈಖರಿಯಲ್ಲಿ ದಂತ ವೈದ್ಯನು ಅತಿ ಸುಲಭವಾಗಿ ಅವಳಿಗಿರುವ ಹಲ್ಲುಗಳನ್ನೆಲ್ಲ ಎಣಿಕೆ ಮಾಡಬಹುದಾಗಿದ್ದಿತು.
ಇನ್ನುಳಿದಿದ್ದುದು ಮನೆಯ ಕೆಲಸಗಳಲ್ಲಿ ತಾಯಿತಂದೆಗಳ ಮೆಚ್ಚಿಕೆ. ಅವಳ ಮನಸ್ಸು “ಚಿನ್ನದ ಬೊಂಬೆ, ಚಿನ್ನದ ಬೊಂಬೆ” ಎಂದು ಜಪಿಸಿ ಅದಕ್ಕೆ ಸರಿಯಾಗಿ ಅವಳ ಹೃದಯದ ತಾಳ ಹಾಕುತ್ತಿದ್ದ ಉತ್ಸಾಹದಲ್ಲಿ ಅವಳು ಹುಡುಕಿ ಹುಡುಕಿ ಕೆಲಸಗಳನ್ನು ಮಾಡುತ್ತಿದ್ದಳು. ಅಕ್ಕನ ಮಗಳಿಗೆ ಅಭ್ಯಂಜನ ಮಾಡಿಸುವವಳೂ ಅವಳೆ. ಊಟಕ್ಕೆ ಎಲೆ ಹಾಕಿ, ಮಣೆಗಳನ್ನು ಸಿದ್ದ ಪಡಿಸುವವಳೂ ಅವಳೆ, ಹಾಲು ಕರೆಯುವವಳೂ ಅವಳೆ, ಬಾಣಂತಿಯಾಗಿದ್ದ ತಮ್ಮ ಅಕ್ಕನ ಸೇವೆ ಮಾಡುವವಳೂ ಅವಳೆ. ಅಗಸರವನು ಮಡಿಯ ಬಟ್ಟೆಗಳನ್ನು ತಂದುಕೊಟ್ಟರೆ ತಂದೆಯ ಅಂಗಿಗಳಲ್ಲಿ ಅವನು ಒಡೆದುಹಾಕಿದ್ದ ಗುಂಡಿಗಳಿಗೆ ಬದಲಾಗಿ ಹೊಸ ಗುಂಡಿಗಳನ್ನು ಹಾಕುವುದು ಮೊದಲುಗೊಂಡು ಬಗೆ ಬಗೆಯ ಕೆಲಸಗಳನ್ನೂ ಮಾಡುವವಳೂ ಅವಳೆ, ಎಲ್ಲ ಕೆಲಸಗಳಲ್ಲಿಯೂ ಪ್ರೀತಿ; ಎಷ್ಟು ಕೆಲಸಮಾಡಿದರೂ ತೃಪ್ತಿಯಿಲ್ಲ; ಹೊಸ ಕೆಲಸವು ದೊರೆತರೆ ಅತ್ಯಂತ ಹುಮ್ಮಸ್ಸು; ಹೀಗಿದ್ದಿತು ಭಾಗೀರಥಮ್ಮನ ಕೆಲಸದ ವಿಚಕ್ಷಣೆ,
ಒಂದು ದಿನ ಕೊನೇ ಮನೆ ”ಕಾವೇರಮ್ಮನವರು ಸುಬ್ಬಮ್ಮ ನವರೊಡನೆ“ ಮಗಳ ಬಾಣಂತನ ಮಾಡಿ ಗೆದ್ದಿರಿ, ಎರಡನೆ ಮಗಳ ಮದುವೆಯ ಮಾಡಿಬಿಟ್ಟರೆ, ಅಲ್ಲಿಗೆ ಗಡ್ಡೆಗೆ ಬಿದ್ದ ಹಾಗೆ” ಎಂದರು. ಸುಬ್ಬಮ್ಮನವರು “ನಾನೇನಮ್ಮ ಬಾಣಂತನಕ್ಕೆ ಕಷ್ಟ ಪಟ್ಟಿದ್ದು! ಎಲ್ಲಾ ನಮ್ಮ ಭಾಗೂ ಕೆಲಸ, ಬಾಣಂತಿ ಸೇವೆ, ನನ್ನ ಸೇವೆ ಎರಡೂ ಮಾಡಿದ್ದಾಳೆ. ಅವಳಂಥವಳು ಮನೆಯಲ್ಲಿದ್ದರೆ ಹತ್ತು ಬಾಣಂತನವಾದರೂ ಮಾಡಿ ಅನಾಯಾಸವಾಗಿ ಹೆಸರು ಪಡೆಯಬಹುದು, ನೋಡಿ” ಎಂದರು. ಕಾವೇರಮ್ಮನವರು “ಎಷ್ಟು ಜಾಣೆಯಮ್ಮಾ ನಿಮ್ಮ ಹುಡುಗಿ, ನಮ್ಮ ಗೌರಿ ಬೆಳಗ್ಗೆ ಎಂಟು ಗಂಟೆಯಾದರೂ ರಗ್ಗಿನ ಮುಸುಕು ಬೀರಿಕೊಂಡೇ ಮಲಗಿರ್ತಾಳೆ ನೋಡಿ” ಎಂದರು. ಸುಬ್ಬಮ್ಮನವರು ಹೆಮ್ಮೆಯಿಂದ ಹಿಗ್ಗುತ್ತ,, “ನಾನು ಬಹಳ ಮುಂಚೆಯೇ ಏಳ್ತೀನಿ. ಆದರೆ ನಮ್ಮ ಭಾಗು ನನಗಿಂತ ಮುಂಚೆಯೇ ಎದ್ದು ಕೆಲಸ ಮಾಡ್ತಾ ಇರ್ತಾಳೆ, ಬಹಳ ಜಾಣೆ ಯಾಗಿದ್ದಾಳಮ್ಮ, ತನ್ನ ಮದುವೇಲಿ ತಾನೇ ಅಡಿಗೆ ಮಾಡಿಟ್ಟು ಹಸೆ ಮೇಲಕ್ಕೆ ಬರ್ತಾಳೋ ಏನೋ! ಅಂತು, ಕೆಲಸದಲ್ಲಿ ರಥ, ರಥ, ನೋಡಿ” ಎಂದು ಉತ್ತರ ಹೇಳಿದರು.
ಕಾವೇರಮ್ಮನವರ ಹೊಟ್ಟೆಯಲ್ಲಿ ಏಕೋ ಕೊಂಚ ಉರಿಯೆದ್ದಿತು. ಅಷ್ಟರಲ್ಲಿ, ತಮ್ಮ ತಾಯಿ ಸುಬ್ಬಮ್ಮನವರೂ, ಕಾವೇರಮ್ಮನವರೂ ಆಡಿದ ಮಾತುಗಳನ್ನು ಮರೆಯಲ್ಲಿ ನಿಂತು ಕೇಳುತ್ತಿದ್ದ ಭಾಗೀರಥಮ್ಮನು ತಾನು ಮುಡಿದುಕೊಳ್ಳುವುದಕ್ಕಾಗಿ ಮೇಲಕ್ಕೆತ್ತಿದ್ದ ದೊಡ್ಡದೊಂದು ಗುಲಾಬಿ ಹೂವನ್ನು ಹಿಡಿದುಕೊಂಡು ಓಡಿಬಂದು “ಇದನ್ನು ಮುಡಿದುಕೊಳ್ಳಿ ಕಾವೇರಮ್ಮನವರೇ, ಇದು ಪನ್ನೀರು ರೋಜಾ ಜಾತಿಯ ಗುಲಾಬಿ ಹೂವು, ಮೂಗೇ ದಣಿದು ಹೋಗುವಷ್ಟು ಸುವಾಸನೆಯುಳ್ಳ ಸೊಗಸಾದ ಹೂವು” ಎಂದು ಹೇಳಿ ಹೂವನ್ನು ಕೊಟ್ಟಳು. ಹುಡುಗಿಯ ಸದ್ಗುಣವನ್ನು ಕಂಡು ಕಾವೇರಮ್ಮನವರ ಹೊಟ್ಟೆಯಲ್ಲಿದ್ದ ಕಿಚ್ಚು ಕೂಡ ಕೊಂಚ ಕಡಮೆಯಾಯಿತು. ಆದರೂ ಅದು ಪೂರ್ತಿಯಾಗಿ ಶಾಂತವಾಗಲಿಲ್ಲ. ಅವರು ಬಲವಂತವಾಗಿ ನಗುತ್ತ “ಎಷ್ಟು ಒಳ್ಳೆ ಗುಣವಮ್ಮಾ, ರತ್ನದಂಥ ಹುಡುಗಿ. ಚೆನ್ನಾಗಿ ಪುಟಕ್ಕಿಟ್ಟ ಅಪ್ಪಟ ಚಿನ್ನದ ಬೊಂಬೆ” ಎಂದರು. ಅವರೂ ಚಿನ್ನದ ಬೊಂಬೆಯೆನ್ನಬೇಕೆ! ಮೊದಲೇ ಚನ್ನಪಟ್ಟಣದ ಬಣ್ಣದ ಬುಗುರಿಯಂತೆ ತಿರುಗುತ್ತಿದ್ದ ಭಾಗೀರಥಮ್ಮನ ಮನಸ್ಸು ಈಗ ಜೀರು ಬುಗುರಿಯೇ ಆಯಿತು.
– ೪ –
ಪಾಠಶಾಲೆಯ ವಾರ್ಷಿಕೋತ್ಸವದ ದಿವಸವು ಸಮೀಪಿಸಿದ ಹಾಗೆಲ್ಲ, ಆ ದಿನ ನಡೆಯಬೇಕೆಂದು ಗೊತ್ತಾಗಿದ್ದ ನಾಟಕದ ದೃಶ್ಯಗಳಲ್ಲಿ ಪಾತ್ರಗಳನ್ನು ವಹಿಸುವವರಾಗಿದ್ದ ಭಾಗೀರಥಮ್ಮನೇ ಮುಂತಾದ ಹುಡುಗಿಯರ ಉತ್ಸಾಹವೂ ಸಂತೋಷವೂ ಹೆಚ್ಚಿದುವು. ಆಗ (ಎಂದರೆ ೧೯೧೯ನೆಯ ಇಸವಿಯಲ್ಲಿ) ಬೆಂಗಳೂರು ಮೈಸೂರು ನಗರಗಳನ್ನು ಬಿಟ್ಟು ಇತರ ಊರುಗಳಲ್ಲಿ ಪಾಠಶಾಲೆಗಳ ವಾರ್ಷಿಕೋತ್ಸವಗಳು ಈಗಿನಂತೆ ವಿಜೃಂಭಣೆಯಿಂದ ನಡೆಯುತ್ತಿರಲಿಲ್ಲ. ಆದಾಗ್ಯೂ ಅಲಮೇಲಮ್ಮನವರು ಸಾಧ್ಯವಾದಷ್ಟು ವಿಜೃಂಭಣೆಯಿಂದ ಪಾಠಶಾಲೆಯ ವಾರ್ಷಿಕೋತ್ಸವವನ್ನು ನಡೆಯಿಸಬೇಕೆಂದು ಆಗಿನ ಆ ದಿನಗಳಲ್ಲಿ ಕೂಡ ಉತ್ಸಾಹಪರರಾಗಿದ್ದುದು ಶ್ಲಾಘನೆಗೆ ಅರ್ಹವಾದ ಅಂಶ. ಆಗ ಅದೇ ಊರಿನಲ್ಲಿ ನಾಟಕದ ಸಂಘದವರೂ ಇದ್ದುದರಿಂದ, ಅಲಮೇಲಮ್ಮನವರಿಗೆ ಅವರ ಸಹಾಯದಿಂದ ನಾಟಕ ಮಂದಿರವು ಎಲ್ಲ ಸೌಕರ್ಯಗಳೊಡನೆ ದೊರೆಯುವುದಾಗಿದ್ದಿತು. ರುಕ್ಮಾಂಗದ ಪಾತ್ರವನ್ನು ಧರಿಸಲು ಭಾಗೀರಥಮ್ಮನಿಗೆ ಬೇಕಾದ ಉಡುಪುಗಳಲ್ಲಿ ಮೊಕಮಲ್ ಅಂಗಿ, ರೇಷ್ಮೆಯ ಪೇಟ ಮುಂತಾದವುಗಳೆಲ್ಲ ದೊರೆಯುವಂತಿದ್ದುವಾದರೂ, ಅವಳು ಧರಿಸಲು ಸರಿಹೋಗುವ ಷರಾಯಿ ಮಾತ್ರ ದೊರೆಯಲಿಲ್ಲ. ರುಕ್ಮಾಂಗದನ ಪಾತ್ರಕ್ಕೆ ಷರಾಯಿ ಬೇಕೆ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ನಾವು ಹೇಳುವುದಿಷ್ಟೆ: ಬೆಂಗಳೂರಿನಂತಹ ನಾಗರಿಕತೆಯಿಂದ ತುಂಬಿರುವುದಾಗಿ ನಾವುಗಳು ಭಾವಿಸಿರುವ ದೊಡ್ಡ ಪಟ್ಟಣದಲ್ಲಿ ತುಲಸಿ ತೋಟದ ಶ್ರೀರಾಮದೇವರ ಉತ್ಸವದಲ್ಲಿ ಶ್ರೀರಾಮಚಂದ್ರ ವಿಗ್ರಹಕ್ಕೆ ಹಸಿರು ಮೊಕಮಲಿನ ಷರಾಯಿ ಹಾಕುವಾಗ, ಷರಾಯಿ ಹಾಕದೆ ರುಕ್ಮಾಂಗದ ನಾಟಕವಾಗಲಿ, ಇತರ ಯಾವ ನಾಟಕವಾಗಲಿ, ನಡೆಯುವ ಬಗೆ ಹೇಗೋ ನಮಗೆ ತಿಳಿಯದು.
ಅಲಮೇಲಮ್ಮ ನವರು ಭಾಗೀರಥಮ್ಮನನ್ನು ಕುರಿತು “ನಾಟಕದ ದಿನ ಇನ್ನೂ ಒಂದು ವಾರದಷ್ಟು ದೂರವಿದೆ. ನಿಮ್ಮ ತಂದೆ ಹೇಗೂ ಹಣಗಾರರಾದ ಲಾಯರು. ಒಂದು ಭರ್ಜರಿ ಪಾಪ್ಳಿನ್ ಷರಾಯಿ ಹೋಲಿಸಿ ಬಿಡಮ್ಮ, ನಿನ್ನ ಸೊಗಸು ನೋಡಿ ನಮ್ಮ ಕಣ್ಣುಗಳೆಲ್ಲ ಸಾರ್ಥಕವಾಗಲಿ” ಎಂದು ಹೇಳಿದರು. ಎಗರುವ ಕರುವಿಗೆ ಎಳೆಗರಿಕೆಯು ದೊರೆತ ಹಾಗಾಯಿತು. ಆ ದಿನ ಭಾನುವಾರವೂ ಆಗಿದ್ದಿತು. ಆದಕಾರಣ, ತಮ್ಮ ತಂದೆಯು ಮನೆಯಲ್ಲಿ ವಿರಾಮವಾಗಿ ಕಾಲವನ್ನು ಕಳೆಯುವವರಾಗಿದ್ದ ಅಂಶವು ಭಾಗೀರಥಮ್ಮನ ಉಲ್ಲಾಸವನ್ನು ಹೆಚ್ಚಿಸಿತು.
ಅಂದು ಮಧ್ಯಾಹ್ನದ ಮೇಲೆ ಭಾಗೀರಥಮ್ಮನು ಕೈಯಲ್ಲಿ ಒಂದು ದಂತದ ಬಾಚಣಿಗೆಯನ್ನೂ ಕಾಮಿನಿಯಾ ಎಣ್ಣೆಯ ಸೀಸೆಯನ್ನೂ ಹಿಡಿದು ಕೊಂಡು ತಮ್ಮ ತಂದೆಯ ಸಮೀಪಕ್ಕೆ ಹೋದಳು. ನರಸಿಂಹಯ್ಯನವರು ಮಗಳನ್ನು ಕುರಿತು ಆದರದಿಂದ “ಏನು, ಸವಾರಿ ಇಲ್ಲಿಗೆ ಚಿತ್ತೈಸಿದ್ದು” ಎಂದು ಕೇಳಿದರು. ಭಾಗೀರಥಮ್ಮನು ನಗುತ್ತ “ಹೋಗಣ್ಣ, ಸವಾರಿ ಗಿವಾರಿ ಅನ್ನ ಬೇಡ, ನಿನ್ನ ತಲೆ ಬಾಚೋಣವೆಂತ ಬಂದೆ. ಕಾಮಿನಿಯಾ ತೈಲ ಹಚ್ಚಿ ದಂತದ ಬಾಚಣಿಗೆಯಲ್ಲಿ ಬಾಚಿದರೆ ಬಹಳ ಸೊಗಸಾಗಿರುತ್ತಣ್ಣ” ಎಂದಳು. ನರಸಿಂಹಯ್ಯನವರು “ನನಗೇಕಮ್ಮ ಇದೆಲ್ಲಾ? ಇಷ್ಟಕ್ಕೂ ಹೊಸ ಹೊಸ ಕೆಲಸ ಹುಡುಕುವುದೇ ತಾನೆ ನಿನ್ನ ಯೋಚನೆ? ಹೋಗಲಿ ಬಾಚಮ್ಮ. ಎಣ್ಣೆ ಮಾತ್ರ ಹೆಚ್ಚಾಗಿ ಸವರಬೇಡ” ಎಂದರು.
ಭಾಗೀರಥಮ್ಮನು ತಂದೆಯ ತಲೆಯನ್ನು ಬಾಚುತ್ತ ‘ಏನಣ್ಣ, ತೆಂಗಿನ ಜುಂಗಿನ ಹಾಗಿದೆ ನಿನ್ನ ತಲೆ ಕೂದಲು? ಅಮ್ಮನ ಕೂದಲು ಸರಿಯಪ್ಪ. ಒಳ್ಳೆ ರೇಷ್ಮೆ ಹಾಗಿದೆ. ಇನ್ನು ಮೇಲೆ ಕಾಮಿನಿಯಾ ಎಣ್ಣೆ ಹಚ್ಚಿ ಬಾಚಿ ನೋಡೋಣ. ನಿನ್ನ ತಲೆಕೂದಲು ಮೃದುವಾಗದೆ ಹೋಗಲಿ, ವೃತ್ತಾಂತ ಪತ್ರಿಕೆಗೆ ಬರೀತೀನಿ, ಕಾಮಿನಿಯಾ ಎಣ್ಣೆಯವರ ಮಾತೆಲ್ಲಾ ಸುಳ್ಳು.
ನಮ್ಮ ತಂದೆ ತಲೆ ಕೂದಲು ಚಕಚಕಿಸಲಿಲ್ಲ. ರೇಷ್ಮೆ ಹಾಗೆ ಬೆಳೆಯಲಿಲ್ಲ-ಅಂತ. ನೀನೂ ಕ್ರಾಪ್ ಬಿಡಿಸಿದ್ದರೆ ಚೆನ್ನಾಗಿತ್ತಣ್ಣ’ ಎಂದಳು. ನರಸಿಂಹಯ್ಯನವರು “ಈ ಬಗೆ ಉಪಚಾರ ನೋಡಿದರೆ ಸ್ವಲ್ಪ ಅನುಮಾನ. ಅಮ್ಮಾವರಿಗೆ ನನ್ನಿಂದ ಏನೋ ಕೆಲಸವಿರಬೇಕು” ಎಂದರು. ಭಾಗೀರಥಮ್ಮನು ಅದೇ ತಕ್ಕ ಸಮಯವೆಂದು ಭಾವಿಸಿ “ಕೆಲಸವಿದೆಯಣ್ಣ. ನಿನ್ನ ಕೇಳದೆ ಎದುರು ಮನೆ ಡಾಕ್ಟರನೋ ಆಚೆ ಬೀದಿ ಶಾಸ್ತ್ರಿಗಳನ್ನೋ ಕೇಳಲೇನು? ಅಣ್ಣ, ಅಣ್ಣ, ನನಗೊಂದು ಪಾಪ್ಳಿನ್ ಷರಾಯಿ ಹೊಲಿಸಿ ಕೊಡಣ್ಣ” ಎಂದಳು. ನರಸಿಂಹಯ್ಯನವರು ನಕ್ಕು “ಇದೂ ಒಳ್ಳೆ ಆಸೆ. ಹೆಣ್ಣು ಹುಡುಗಿಗೆ ಷರಾಯಿ ಏಕಮ್ಮ? ಅದೆಲ್ಲಾ ಬಾರದು. ಸುಮ್ಮನಿರು” ಎಂದರು.
ಅಷ್ಟು ಹೊತ್ತಿಗೆ ಸರಿಯಾಗಿ ಬೀದಿಯಲ್ಲೊಬ್ಬ ಹುಡುಗನು ಗಟ್ಟಿಯಾಗಿ “ಬಾರಮ್ಮ ಬಾರೆ ಸೋದರೀ” ಎಂದು ಹಾಡಿಕೊಂಡು ಹೋಗುತ್ತಿದ್ದ ಧ್ವನಿಯು ಕೇಳಿಸಿತು. ತಂದೆಯ ಮಗಳೂ ಇಬ್ಬರೂ ನಕ್ಕರು. ನರಸಿಂಹಯ್ಯನವರು “ಎಷ್ಟು ಒಳ್ಳೆಯ ಹಾಡು, ಸಿಕ್ಕಿದವರೆಲ್ಲಾ ಹುಚ್ಚು ಹುಚ್ಚಾಗಿ ಹೇಳಿ ಹಾಳುಮಾಡುತ್ತಿದ್ದಾರೆ. ಆ ನಾಟಕ ಇನ್ನೊಂದು ಸಲ ನೋಡಬೇಕು. ಆ ಹಾಡು ಕೇಳಬೇಕು” ಎಂದರು. ಭಾಗೀರಥಮ್ಮನು “ನಾಟಕ ಇರೋದು ಅಷ್ಟು ಒಳ್ಳೆಯದೇನಣ್ಣ?” ಎಂದು ಕೇಳಿದಳು. ನರಸಿಂಹಯ್ಯ ನವರು “ಹೌದಮ್ಮ, ನಾಟಕ ಬೆಳೆದರೇ ನಾಗರಿಕತೆ ಬೆಳೆಯೋದು” ಎಂದು ಉತ್ತರ ಕೊಟ್ಟರು. ಭಾಗೀರಥಮ್ಮನು “ನಮ್ಮ ಮೇಡಂ ನಮ್ಮ ಕೈ ನಾಟಕ ಆಡಿಸಬೇಕೆಂದಿದ್ದಾರೆ. ಅದಕ್ಕೇ ಅಣ್ಣ, ನಾನು ಷರಾಯಿ ಕೇಳಿದ್ದು, ಹೊಲಿಸಿಕೊಡಣ್ಣ” ಎಂದಳು. ನರಸಿಂಹಯ್ಯನವರು ಪ್ರತಿಭರಾಗಿ “ಏನೆಂದೆ?” ಎಂದು ಕೇಳಿದ ರಭಸಕ್ಕೆ ಭಾಗೀ ರಥಮ್ಮನು ಬೆಚ್ಚಿದಳು.
ಅಷ್ಟರಲ್ಲಿ ಸುಬ್ಬಮ್ಮನವರು ಅಲ್ಲಿಗೆ ಬಂದು “ನೀವು ಏನೇ ಹೇಳಿ, ಗಂಡಸರು ಬಹಳ ಒರಟು, ನೋಡಿ, ನೀವು ಆಡಿದ ಮಾತಿಗೆ ಭಾಗು ಬಿಚ್ಚಿದಳು. ಷರಾಯಿ ಹೋಲಿಸಿ ಕೊಡಿ. ಚಿಕ್ಕವಯಸ್ಸು, ಆಡಲಿ, ನಾವೂ ಹೋಗಿ ನೋಡೋಣ” ಎಂದರು. ನರಸಿಂಹಯ್ಯನವರು “ಈಗಿನ ಕಾಲದ ಈ ಕುಣಿತಗಳೆಲ್ಲ ನನಗೆ ಸರಿಬೀಳೋದಿಲ್ಲ. ನನ್ನ ಮಗಳು ಷರಾಯಿ ಹಾಕಿಕೊಳ್ಳುವದೆಂದರೇನು? ನಾಟಕದಲ್ಲಿ ಕುಣಿಯುವುದೆಂದರೇನು? ಅದೊಂದೂ ಖಂಡಿತ ಕೂಡದು” ಎಂದರು. ಭಾಗೀರಥಮ್ಮನು “ಈಗ ತಾನೆ ಹೇಳಿದೆಯಲ್ಲಣ್ಣ, ನಾಟಕ ಬೆಳೆದರೇ ನಾಗರಿಕತೆ ಬೆಳೆಯೋದೆಂತ. ನಿಮ್ಮನ್ನು ಸಂತೋಷಪಡಿಸಬೇಕಂತ ಬೆನ್ನು ಮುರಿಯುವಂತೆ ಕೆಲಸ ಮಾಡಿದ್ದೇನಲ್ಲಣ್ಣ. ನಾಟಕದಲ್ಲಿ ಭರ್ಜರಿ ಪಾರ್ಟು ಕೊಟ್ಟಿದ್ದಾರೆ ನಮ್ಮ ಮೇಡಂ, ರುಕ್ಮಾಂಗದನ ಪಾರ್ಟು, ಚಿನ್ನದ ಬೊಂಬೆ ಹಾಗಿರ್ತೇನಂತೆ ನಾನು. ನಾಟಕದ ದಿನ ನೀವೆಲ್ಲಾ ಬನ್ನಿ, ಸಂತೋಷ ಪಡಿಸಬೇಕೆಂತ ಆಸೆಯಣ್ಣ” ಎಂದಳು. ನರಸಿಂಹಯ್ಯನವರು ರೇಗಿ “ಅದೆಲ್ಲಾ ಕೂಡದು. ಬಾಯಿಮುಚ್ಚು, ಹೆಣ್ಣು ಹುಡುಗಿ, ಗಂಡುವೇಷವಂತೆ. ನಾಟಕವಂತೆ. ಷರಾಯಂತೆ” ಎಂದರು.
ಭಾಗೀರಥಮ್ಮನು ಜೋಲು ಮೋರೆ ಹಾಕಿಕೊಂಡು “ಹೋಗಲಣ್ಣ, ಷರಾಯಿ ಬೇಡ. ನಿನ್ನ ಜರತಾರಿ ಪಂಚೆಯನ್ನೊ ರೇಷ್ಮೆ ಮಗುಟವನ್ನೋ ಉಟ್ಟುಕೊಂಡು ಪಾರ್ಟು ಮಾಡ್ತೀನಣ್ಣ” ಎಂದಳು. ಸುಬ್ಬಮ್ಮನವರು “ಒಂದು ದಿನ, ಅದೂ ನಾಟಕದಲ್ಲಿ, ಷರಾಯಿ ಹಾಕಿಕೊಳ್ಳಲೇಳಿ, ಪಾಪ, ಹುಡುಗಿಗೆ ಆಸೆ, ಅವರ ಮೇಡಂ ಹೇಳಿದ್ದಾರಂತೆ. ಇಷ್ಟಕ್ಕೂ ಆ ದಿನ ರೇಷ್ಮೆ ಚಡ್ಡಿ ಹಾಕಿಕೊಂಡು ಎಣ್ಣೆಗೆಂಪಿನ ಮೊಕಮಲ್ ಅಂಗಿಗಳನ್ನು ತೊಟ್ಟುಕೊಂಡು ಮ್ಯಾಜಿಸ್ಟ್ರೇಟರ ಹುಡುಗಿಯರು ಅವರ ತಂದೆ ಸಂಗಡ ದೇವಸ್ಥಾನಕ್ಕೆ ಬಂದಿದ್ದಾಗ, ನೀವು ಆ ಹುಡುಗಿಯರ ತಲೆಸವರಿದ್ದೆಷ್ಟು. ನಗೂ ಬರಿಸಿಕೊಂಡು ನಗುತ್ತ, ‘ನಿಮ್ಮ ಮಕ್ಕಳಿಗೆ ರೇಷ್ಮೆ ಚಡ್ಡಿ ಬಲು ಸೊಗಸಾಗಿ ಒಪ್ಪುತೆ, ಸಾರ್’ ಅಂದದ್ದೆಷ್ಟು. ಅದೆಲ್ಲಾ ಜ್ಞಾಪಿಸಿಕೊಳ್ಳಿ ಅಂದರೆ; ನಮ್ಮ ಹುಡುಗಿಯೂ ಅದರ ಆಸೆ ತೀರಿಸಿಕೊಳ್ಳಲಿ” ಎಂದರು. ನರಸಿಂಹಯ್ಯನವರು ಸಸೇಮಿರಾ. ಅವರು ಮತ್ತಷ್ಟು ರೇಗಿ “ಅವರು ಚಿಕ್ಕ ಹುಡುಗಿಯರು. ನೀನೂ ಬುದ್ಧಿಗೇಡಿಯಾಗಿ, ಕುಣಿಯುವ ಕಾಲಿಗೆ ಗೆಜ್ಜೆ ಕಟ್ಟಬೇಡ, ಸಾಕು ಸುಮ್ಮನಿರು” ಎಂದರು. ಸುಬ್ಬಮ್ಮನವರು “ಈ ಸ್ವಲ್ಪ ಮಾತಿಗೆ ಇಷ್ಟೇಕೆ ಕೋಪ? ಅವರು ಚಿಕ್ಕ ಹುಡುಗಿಯರು; ನಿತ್ಯ ಚಡ್ಡಿ ಹಾಕೋತಾರೆ. ನಮ್ಮ ಭಾಗು ದೊಡ್ಡ ಹುಡುಗಿ; ನಾಟಕಕ್ಕಾಗಿ
ಒಂದು ದಿನ ಷರಾಯಿ ಹಾಕಿಕೊಳ್ಳುತ್ತೆ. ಅಲ್ಲಿಗಲ್ಲಿಗೆ ಸರಿ ತಾನೆ?” ಎಂದು ಕೇಳಿದರು. ನರಸಿಂಹಯ್ಯನವರು ಮೊದಲಿಗಿಮ್ಮಡಿಯಾಗಿ ರೇಗಿದರು. ಭಾಗೀರಥಮ್ಮನು ಅಳತೊಡಗಿದಳು.
ಭಾಗೀರಥಮ್ಮನ ಸಂತೋಷಕ್ಕಾಗಿ ಸುಬ್ಬಮ್ಮನವರು ಒಂದು ಪಾನ್ ಷರಾಯಿ ಹೊಲಿಸಿಕೊಟ್ಟರು. ನರಸಿಂಹಯ್ಯನವರಿಗೆ ಅದನ್ನು ತಿಳಿಸಿರಲಿಲ್ಲ. ಷರಾಯಿ ದರ್ಜಿಯವನಿಂದ ಬಂದಾಗ ನರಸಿಂಹಯ್ಯನವರು ಕೋರ್ಟಿಗೆ ಹೋಗಿದ್ದರು. ಆ ದಿನ ಭಾರಿ ಮೊಕದ್ದಮೆಯೊಂದು ನಡೆಯಬೇಕಾಗಿದ್ದಿತು. ಕೋರ್ಟಿನಿಂದ ಬರುವುದು ಹೊತ್ತಾಗುವುದೆಂದೂ ತಿಳಿಸಿದ್ದರು. ಸುಬ್ಬಮ್ಮನವರು ದರ್ಜಿಯವರನ್ನು ಕಳುಹಿಸಿ, “ಬಾರೆ ಭಾಗು, ಷರಾಯಿ ಹಾಕಿ, ಅದರ ಮೇಲೆ ಪಾಚಿ ಮೊಕಮಲಿನ ಅಂಗಿ ಹಾಕಿಕೊ. ತಲೆಗೆ ನೆವಕ್ಕೆ ಅವರ ರುಮಾಲು ಇಟ್ಟುಕೊ, ನೋಡೋಣ” ಎಂದರು. ತಮ್ಮನ ಅಂಗಿ ಅಕ್ಕನಿಗೆ ಸರಿಹೋದ ಬಗೆ ಹೇಗೆಂದು ಯಾರೂ ಸಂಶಯಪಡಬೇಕಾಗಿಲ್ಲ. “ಬೆಳೆಯುವ ಹುಡುಗ, ನೋಡಿ ಹೊಲಿಯಪ್ಪ” ಎಂದು ತನಗೆ ಬಂದಿದ್ದ (ಸುಬ್ಬಮ್ಮನವರ) ಅಪ್ಪಣೆಯ ಪ್ರಕಾರ, ಒಂಬತ್ತು ವರುಷ ವಯಸ್ಸಿನ ಪಾಚ್ಚು ಹದಿಮೂರನೆಯ ವಯಸ್ಸಿನಲ್ಲಿ ಬೇಕಾದರೂ ಹಾಕಿಕೊಳ್ಳಲಾಗುವಂತೆ ಧಾರಾಳ ಬುದ್ದಿಯಿಂದ ದರ್ಜಿಯು ಅಂಗಿಯನ್ನು ಹೊಲಿದಿದ್ದನು.
ಒಂಬತ್ತು ವರುಷಗಳ ವಯಸ್ಸಿನ ಹುಡುಗರು ಮೊಕಮಲಿನ ಅಂಗಿಯನ್ನು ಹಾಕಿಕೊಳ್ಳುವುದು ಬೆಂಗಳೂರು ಮೈಸೂರು ನಗರಗಳಲ್ಲಿ ಅಸಂಭವವಾಗಿದ್ದರೂ, ೧೯೧೯ನೆಯ ಇಸವಿಯಲ್ಲಿ ಇತರ ಸ್ಥಳಗಳಲ್ಲಿ ಅದೇನೂ ಅಸಂಭವವಾಗಿರಲಿಲ್ಲ. ಮಗಳ ಅಲಂಕಾರವನ್ನು ನೋಡಿ ಸುಬ್ಬಮ್ಮನವರೂ ಅವರ ಇತರ ಮಕ್ಕಳೂ ಆನಂದಪಟ್ಟರು. ಸುಬ್ಬಮ್ಮ ನವರು “ಮುದ್ದಾಗಿದೆಯಮ್ಮ” ಎನ್ನುವ ಹೊತ್ತಿಗೆ ಸರಿಯಾಗಿ ನರಸಿಂಹಯ್ಯನವರು ನಡುವೆಯಿಂದಲೇ “ನೀನು ಹೀಗೆ ಮುದ್ದು ಮಾಡಿ ಕುಣಿಸಿದರೆ ಮುದ್ದಾಗಿರದೆ ಏನು” ಎಂದು ರೇಗುತ್ತ ಬಂದು ಭಾಗೀ ರಥಮ್ಮನ ಬೆನ್ನಿನ ಮೇಲೆ ಗುದ್ದಿದರು. ಆ ಬಳಿಕ ನಡೆದ ಹಗರಣವನ್ನು
ವರ್ಣಿಸುವುದಕ್ಕಿಂತ ಊಹಿಸಿಕೊಳ್ಳುವುದೇ ಮೇಲು. ಮೊಕದ್ದಮೆಯು ನಡೆಯದೆ ಹೋದುದೇ, ಅವರು ಬೇಗ ಮನೆಗೆ ಬಂದುದಕ್ಕೆ ಕಾರಣ.
ನರಸಿಂಹಯ್ಯನವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಷರಾಯಿ ಹೋಲಿಸಿದವರಾರೆಂದೂ ಅವರು ಕೇಳಲಿಲ್ಲ. ಅಲಮೇಲಮ್ಮನವರೇ ಅದಕ್ಕೆಲ್ಲ ಕಾರಣವೆಂದು ಅವರ ಮನಸ್ಸಿಗೆ ನಿರ್ಧರವಾಗಿದ್ದಿತು. ಅವರು ತಮ್ಮ ಸ್ನೇಹಿತರು ನಾಲ್ಕೈದು ಮಂದಿಗಳನ್ನು ಕರೆದುಕೊಂಡು, ಅದೇ ಊರಿನಲ್ಲಿದ್ದ ವಿದ್ಯಾಭ್ಯಾಸದ ಅಧಿಕಾರಿಯವರಲ್ಲಿಗೆ (ಇನ್‌ಸ್ಪೆಕ್ಟರವರಲ್ಲಿಗೆ) ಹೋಗಿ ಮದುವೆಯಾಗುವ ವಯಸ್ಸಿನ ಹೆಣ್ಣು ಮಕ್ಕಳನ್ನು ನಾಟಕದಲ್ಲಿ ಕುಣಿಸಿದರೆ ಹಿಂದೂ ಧರ್ಮವೇ ಮುಳುಗಿ ಹೋಗುವುದೆಂದೂ, ಆ ಹುಡುಗಿಯರನ್ನು ಯಾರೂ ಮದುವೆ ಮಾಡಿಕೊಳ್ಳದೆ ಹೋಗಬಹುದೆಂದೂ, ದೂರು ಹೇಳಿದರು; ಅಲ್ಲದೆ, ಹುಡುಗಿಯರನ್ನು ನಾಟಕದಲ್ಲಿ ಕುಣಿಸಿದ ಮರುದಿನದಿಂದ ಒಬ್ಬರೂ ತಮ್ಮ ಮಕ್ಕಳನ್ನು “ಸ್ಕೂಲಿಗೇ” ಕಳುಹಿಸುವುದಿಲ್ಲವೆಂದೂ ತಿಳಿಸಿಬಿಟ್ಟರು.
ಅದರ ಪರಿಣಾಮವಾಗಿ, ರುಕ್ಮಾಂಗದ ನಾಟಕದ ದೃಶ್ಯಗಳನ್ನು ಪಾಠಶಾಲೆಯಲ್ಲಿಯೇ ಆಡಿಸಬೇಕೆಂದೂ, ರುಕ್ಮಾಂಗದ ಧರ್ಮಾಂಗದ ಪಾತ್ರಗಳವರೂ ಸೀರೆಗಳನ್ನುಟ್ಟುಕೊಂಡೇ ‘ಪಾರ್ಟು’ ಮಾಡಬೇಕೆಂದೂ, ಬೇಕಾದರೆ ಅವರು ಭಾರಿ ಭಾರಿ ಸೀರೆಗಳನ್ನುಟ್ಟು, ಗಂಡುವೇಷವೆಂದು ಗೊತ್ತಾಗುವುದಕ್ಕಾಗಿ ಸೆರಗಿನ ಮೇಲೆ ಬಿಳಿಯ ಒಲ್ಲೆಗಳನ್ನು ಪಟ್ಟಿ ಹಿಡಿದು ಹೊದೆದುಕೊಂಡಿರಬಹುದೆಂದೂ ಗೊತ್ತಾಯಿತು. ಭಾಗೀರಥಮ್ಮನು ಪಾತ್ರ ವಹಿಸುವುದಂತು ಅವಳ ಕನಸಿನಲ್ಲಿ ಮಾತ್ರ ಸಾಧ್ಯವಾಗ ಬಹುದಾಗಿದ್ದಿತು. ಅವಳು ವಹಿಸಬೇಕಾಗಿದ್ದ ರುಕ್ಮಾಂಗದನ ಪಾತ್ರವು ಸಾತಿಯ ಪಾಲಿಗೆ ಬಂದಿತು. ಅಲಮೇಲಮ್ಮನವರ ಉತ್ಸಾಹ ಭಂಗಕ್ಕೆ ಪರಿಮಿತಿಯೇ ಇರಲಿಲ್ಲ. ಅವರು ನಿರ್ವಾಹವಿಲ್ಲದೆ ಯಂತ್ರದ ಬೊಂಬೆಯಂತೆ ಕೆಲಸಮಾಡುತ್ತಿದ್ದರು. ಪಾತ್ರಗಳನ್ನು ಧರಿಸತಕ್ಕವರಿಗೆ, ಆಗಿನ ಪರಿಸ್ಥಿತಿಯಲ್ಲಿಯೂ ಅವರು ಉತ್ಸಾಹವನ್ನು ತುಂಬಲು ಪ್ರಯತ್ನಿಸುತ್ತಿದ್ದರು. ಭಾಗೀರಥಮ್ಮನು ಗೋಳಾಡುತ್ತ “ನಾನು ಇನ್ನೂ ಏಕೆ ಬದುಕಿದ್ದೀನಿ, ಮೇಡಂ?” ಎಂದು ಹೇಳಿದಾಗಿನ ಅವಳ ಮುಖದ ಚಿತ್ರವು ಅಲಮೇಲಮ್ಮನವರ ಮನಸ್ಸಿನೆದುರಿಗೆ ಬಂದಾಗಲೆಲ್ಲ ಅವರು ಕಂಬನಿದುಂಬುತ್ತಿದ್ದರು. ಅವರು ಎಷ್ಟು ಸಮಾಧಾನ ಹೇಳಿದರೂ ಭಾಗೀರಥಮ್ಮನು ಸಮಾಧಾನ ಹೊಂದಲಿಲ್ಲ.
– ೫ –
ಹುಡುಗಿಯರು ನಾಟಕವಾಡಿದ ದಿನ ಧರ್ಮಾಂಗದನ ಪಾತ್ರವನ್ನು ವಹಿಸಿದ್ದ ರಂಗಮ್ಮನ ಅಭಿನಯವನ್ನೂ ವಾಗ್ಧೋರಣೆಯನ್ನೂ ನೋಡಿ ಪ್ರೇಕ್ಷಕರೆಲ್ಲರೂ ಬೆರಗಾದರು. ಆ ತರುವಾಯ ನಡೆದ ಅಧ್ಯಕ್ಷ ಭಾಷಣ ಮುಂತಾದವು ನಮಗೆ ಅಪ್ರಕೃತ. ಆಗ್ಗೆ ಅಲ್ಲಿಗೆ ಬಂದಿದ್ದ ನಾಟಕ ಸಂಘದ ಯಜಮಾನರು ಎದ್ದು ನಿಂತು “ಬಣ್ಣವಿಲ್ಲದೆ, ಗಂಡುವೇಷದ ಡ್ರೆಸ್ಸಿಲ್ಲದೆ, ಧರ್ಮಾಂಗದನ ಪಾತ್ರವನ್ನು ಅಭಿನಯಿಸಿದ ಹುಡುಗಿಯ ಕೌಶಲವನ್ನು ನೋಡಿ ನಮ್ಮಲ್ಲಿ ಹುಡುಗರ ಪಾತ್ರಗಳನ್ನು ವಹಿಸುವುದರಲ್ಲಿ ಪ್ರಸಿದ್ದರಾಗಿರುವಂಥ ಬಾಲಕರು ಕೂಡ ನಾಚಿಕೊಳ್ಳಬೇಕಾಗಿದೆಯೆಂದು ನಿಷ್ಪಕ್ಷಪಾತ ಬುದ್ದಿಯಿಂದ ಅನುಭವದಾರನಾದ ನಾನು ಹೇಳುತ್ತೇನೆ. ಅಭಿನಯವು ಇಷ್ಟು ಚೆನ್ನಾಗಿರುವುದೆಂದು ನಾನು ನಿರೀಕ್ಷಿಸಿರಲಿಲ್ಲವಾದ ಕಾರಣ, ನಾನು ಬರಿಯ ಕೈಯಲ್ಲಿ ಬರಬೇಕಾಯಿತು. ನಾನು ಆ ಹುಡುಗಿಗೊಂದು ಬೆಳ್ಳಿಯ ಕಪ್ ಮತ್ತು ಸಾಸರ್ ಇನಾಮಾಗಿ ತರಿಸಿ ಕೊಡಬೇಕೆಂದಿದ್ದೇನೆ. ಅಧ್ಯಕ್ಷರ ಅನುಮತಿಯಾಗಬೇಕೆಂದು ಪ್ರಾರ್ಥನೆ” ಎಂದು ಮುಂತಾಗಿ ಭಾಷಣ ಮಾಡಿದರು. ಚಪ್ಪಾಳೆಗಳ ಸುರಿಮಳೆಯಾಯಿತು.
ಭಾಗೀರಥಮ್ಮನು ಕಣ್ಣೀರು ಸುರಿಸುತ್ತ ಕುಳಿತಿದ್ದಳು. ಪ್ರೇಕ್ಷಕರೆಲ್ಲರೂ ಹೊರಟುಹೋದ ಮೇಲೆ ಅಲಮೇಲಮ್ಮನವರು ಆದರದಿಂದ ರಂಗಮ್ಮನ ಬೆನ್ನಿನಮೇಲೆ ಕೈಹಾಕಿ “ಎಷ್ಟು ಸೊಗಸಾಗಿ ಅಭಿನಯಮಾಡಿದೆ ಯಮ್ಮ, ಅರಗಿಣಿಯಂತಾಡಿಬಿಟ್ಟೆಯಲ್ಲೇ ತಾಯಿ. ಭಾಗೂ ಮಾತ್ರ ರುಕ್ಮಾಂಗದ ಪಾತ್ರ ವಹಿಸಿ ನೀವೆಲ್ಲರೂ ಬಣ್ಣ ಹಾಕಿಸಿಕೊಂಡು ಮೊದಲು ನಾನು ಯೋಚಿಸಿದ್ದಂತೆ ನಾಟಕವಾಗಿದ್ದರೆ ಇನ್ನೂ ಹೇಗಿರುತ್ತಿತ್ತೋ! ಚಿಕ್ಕವರಿಗಾಗಿ ನಾಟಕಗಳು ಇನ್ನೂ ಏರ್ಪಟ್ಟಿಲ್ಲದ ಈ ಸ್ಥಿತಿಯಲ್ಲೂ ಭಾವಗಳು ಪೂರ್ತಿಯಾಗಿ ನಿಮಗೆ ಅರ್ಥವಾಗದ ನಾಟಕವೂ ಇಷ್ಟು ಚೆನ್ನಾಗಿ ಆಯಿತಲ್ಲ’ ಎಂದರು. ಅಷ್ಟರಲ್ಲಿ ಕಂಬನಿದುಂಬಿ ತಮ್ಮ ಬಳಿಗೆ ಬಂದು
ನಿಂತ ಭಾಗೀರಥಮ್ಮನ ತಲೆಯನ್ನು ಸವರಿ “ಅಳಬೇಡ, ಕಂದ, ನಿನಗಿಂತ ನಮ್ಮ ನಷ್ಟ ಹೆಚ್ಚು. ಆಡಿ ಫಲವಿಲ್ಲ ತಾಯಿ, ನಿನ್ನ ದುಃಖ ನಾನು ಬಲ್ಲೆ” ಎಂದರು. ರಂಗಮ್ಮನೂ ಇತರ ಹುಡುಗಿಯರೂ ಪ್ರೀತಿಯಿಂದ ಸಮಾಧಾನ ಹೇಳಿದರು. ಭಾಗೀರಥಮ್ಮನು ರೋದಿಸುತ್ತ “ಎದುರು ಮನೆ ಡಾಕ್ಟರ ಮಗಳು ಕೂಡ ಸತ್ತುಹೋದಳು. ನಾನೇಕೆ ಸಾಯಲಿಲ್ಲ, ಮೇಡಂ?” ಎಂದಳು. ಅಲಮೇಲಮ್ಮನವರು ವಿಧ ವಿಧವಾಗಿ ಸಂತೈಸಿದರು.
ಮಾರನೆಯ ದಿನ ಬೆಳಗ್ಗೆ ಭಾಗೀರಥಮ್ಮನು ಮಂಕಾಗಿ ಎಳೆಬಿಸಿಲಿನಲ್ಲಿ ಕುಳಿತಿದ್ದಳು. ಅವಳಲ್ಲಿ ಅನುಕಂಪ ಬುದ್ದಿಯಿಂದ ಸುಬ್ಬಮ್ಮನವರೂ ಆಗಾಗ ಸಮಾಧಾನ ಹೇಳುತ್ತಿದ್ದರು. ಆದರೂ ಭಾಗೀರಥಮ್ಮನು ಮೇಲಕ್ಕೇಳಲಿಲ್ಲ. ಕಾಫಿಯ ಬೇಡವೆಂದಳು. ಒಂಬತ್ತು ಗಂಟೆಯ ವೇಳೆಗೆ ಮನೆಯಲ್ಲಿಯೇ ಇದ್ದ ತಮ್ಮ ತಂದೆಯ “ಆಫೀಸು” ಕೊಟಡಿಗೆ ಹೋದಳು. ನರಸಿಂಹಯ್ಯನವರು ಆ ಕೊಟಡಿಯಲ್ಲಿ ತುಂಬಿದ್ದ ಕಕ್ಷಿಗಾರರೆದುರಿಗೆ ತಮ್ಮ ವಾಗ್ಝರಿಯನ್ನು ಪ್ರದರ್ಶಿಸುತ್ತ ಒಂದು ಮೊಕದ್ದಮೆಯ ಸಂಬಂಧದಲ್ಲಿ ತಾಳ್ಮೆ ಶಾಂತಿಗಳ ಮೇಲೆ ಒಬ್ಬ ಕಕ್ಷಿಗಾರನಿಗೆ ನೀತಿಬೋಧೆ ಮಾಡುತ್ತಿದ್ದರು. ಭಾಗೀರಥಮ್ಮನು ಮೇಜಿನ ಮೇಲಿದ್ದ “ಬಿಗ್ ಬೆನ್” ಗಡಿಯಾರವನ್ನು ತಂದೆಯ ಕೈಗೆ ಕೊಟ್ಟು “ಇದರ ಮೇಲು ಮುಖದ ತಗಡಿನಲ್ಲಿ ಇಳಿಜಾರಿನ ಕಡೆ ಮುಖ ನೋಡಿಕೊಳ್ಳಣ್ಣ” ಎಂದು ಹೇಳಿ ನಕ್ಕಳು. ಮಗಳ ಮನಸ್ಸು ನೊಂದಿದ್ದುದು ನರಸಿಂಹಯ್ಯನವರಿಗೂ ಗೊತ್ತು. ಆದಕಾರಣ ಅವರು ಅವಳಿಗೆ ಅಸಮಾಧಾನವಾಗಕೂಡದೆಂಬ ಭಾವನೆಯಿಂದ ಅವಳು ಹೇಳಿದಂತೆ ಮಾಡಿ “ನನ್ನ ಮುಖ ಇದರಲ್ಲಿ ಬಹಳ ವಕ್ರವಾಗಿ ಹೇಗೆ ಹೇಗೋ ಅಸಹ್ಯವಾಗಿ ಕಾಣುತ್ತಮ್ಮ” ಎಂದು ಹೇಳಿ ನಕ್ಕರು. ಭಾಗೀರಥಮ್ಮನು “ಹೌದಣ್ಣ, ಅದರಲ್ಲಿ ನಿನ್ನ ಮುಖ ಎಷ್ಟು ವಕ್ರವಾಗಿ ಕಾಣುತ್ತೋ ಅದಕ್ಕಿಂತ ಸಾವಿರ ಸಾಲು ನಿನ್ನ ಮನಸ್ಸು ವಕ್ರ; ಕಲ್ಲಿಗಿಂತ ಕಠಿಣ” ಎಂದಳು. ನರಸಿಂಹಯ್ಯನವರು ಅವಮಾನವನ್ನು ತಾಳಲಾರದೆ “ಏನೆಂದೆ?” ಎಂದು ಗರ್ಜಿಸಿದರು. ಭಾಗೀರಥಮ್ಮನು ಮುಖವನ್ನು ಕೊಟ್ಟು ಮಾಡಿ ಅಣಕಿಸಿ “ಅದಂದೆ” ಎಂದು ಹೇಳಿ ಮನೆಯೊಳಕ್ಕೆ ಹೋಗಿ ಮಲಗಿದಳು. ತಾಳ್ಮೆ ಶಾಂತಿಗಳ ಮೇಲೆ ನೀತಿ ಬೋಧೆ ಮಾಡುತ್ತಿದ್ದುದರಿಂದ ನಿರ್ವಾಹವಿಲ್ಲದೆ ಕಕ್ಷಿಗಾರರೆದುರಿಗೆ ನರಸಿಂಹಯ್ಯನವರು ತಾತ್ಕಾಲಿಕವಾಗಿ ತಮ್ಮ ಮನಸ್ಸಿಗೆ ಸೈರಣೆಯ ತೆರೆಯನ್ನೆಳೆದಿದ್ದರು. ಅತ್ತ, ಮಗಳೇಕೆ ಮಲಗಿದಳೆಂದು ಸುಬ್ಬಮ್ಮನವರಿಗೆ ದಿಗಿಲಾಯಿತು. ಮೈ ಮುಟ್ಟಿ ನೋಡಿದರೆ ಭಾಗೀರಥಮ್ಮನಿಗೆ ಜ್ವರ.
ಎಷ್ಟೆಷ್ಟು ಬಗೆಗಳಿಂದ ವೈದ್ಯ ಮಾಡಿಸಿದರೂ ಭಾಗೀರಥಮ್ಮನ ವಿಷಮಶೀತಜ್ವರವು ಗುಣವಾಗಲಿಲ್ಲ. ಸನ್ನಿಯಾಗಿ ಜ್ಞಾನವೂ ತಪ್ಪಿ ಹೋಯಿತು. ಅವಳು ಮನಸ್ವಿಯಾಗಿ ಮಾತನಾಡುತ್ತಿದ್ದಳು. ಮುಖ್ಯವಾಗಿ “ಚಿನ್ನದ ಬೊಂಬೆಯಾಗಲಿಲ್ಲ,” “ಯಾರೋ ತಪ್ಪಿಸಿಬಿಟ್ಟರು,” “ನನ್ನ ಹಾಗೆ ಚಿನ್ನದ ಬೊಂಬೆ ಮಾಡಿಸಿ ಗೌರಮ್ಮನ ಹತ್ತಿರ ಇಡಿಸುವುದಾಗಿ ಪಾಚು ಹೇಳಿದ್ದ,” “ಪಾಚು ಸುಖವಾಗಿರಲಿ,” “ಅಮ್ಮ, ಚಿನ್ನದ ಬೊಂಬೆಯಾದರೂ ಮಾಡಿಸಮ್ಮ” ಎಂಬಿವೇ ಅವಳು ಪದೇ ಪದೇ ಆಡುತ್ತಿದ್ದ ಮಾತುಗಳು. ಸನ್ನಿಯು ಇಳಿಯಲೇ ಇಲ್ಲ. ಭಾಗೀರಥಮ್ಮನು ವಿಷಮಸೀತಜ್ವರಕ್ಕೆ ಬಲಿಯಾದಳು. “ಚಿನ್ನದ ಬೊಂಬೆ, ಚಿನ್ನದ ಬೊಂಬೆ” ಎಂಬಿವೇ ಅವಳ ಕೊನೆಯ ಮಾತುಗಳು.
*****


















