ಕತ್ತಲು, ಕತ್ತಲು, ಸುತ್ತಲು ಕವಿದಿದೆ
ಬೆಳಕೆಂಬುವದನು ತೋರುವಿರಾ?
ಅಪಾರ ಗಗನವು ಇರತಿಹುದಂತೆ!
ತಾರಾಗಣದಿಂ ತೋರುವುದಂತೆ!
ಕಾರ್‍ಮೋಡಗಳಿಂ ಮುಸುಕಿಹುದಂತೆ!
ಚಂದ್ರ ಸೂರ್ಯರಲ್ಲಿರುತಿಹರಂತೆ!
ಜಗವನು ಬೆಳಗಲು ನಿಂದಿಹರಂತೆ!
ರಾಹು ಕೇತುಗಳು ಪೀಡಿಪವಂತೆ!
ಇಲ್ಲದ ಸೌಖ್ಯವು ಅಲ್ಲಿಹುದಂತೆ!
ಕಣ್ಣುಗಳಿಲ್ಲದ ಕುರುಡನು ನಾನಿಹೆ,
ಕತ್ತಲು, ಕತ್ತಲು, ಸುತ್ತಲು ಕವಿದಿದೆ
ಬೆಳಕೆಂಬುವದನು ತೋರುವಿರಾ? ||೧||
ಭಾರತ ನಾಡೊಂದಿರುತಿಹುದಂತೆ!
ಹಳ್ಳಿಗಳಿಂದದು ತುಂಬಿಹುದಂತೆ!
ಕಷ್ಟದಿ, ತಾಪದಿ, ಬಳಲುವುದಂತೆ!
ಗಾಂಧಿ, ಜವಾಹರರಿರುತಿಹರಂತೆ!
ದೀನೋದ್ಧಾರಕೆ ಹೆಣಗುವರಂತೆ!
ಅರಿಗಳ ತಾಪವ ಸಹಿಸುವರಂತೆ!
ರಾಟಿಯ ತಿರುಹಲು ಬೋಧಿಪರಂತೆ!
ಹೊಲೆಯರ ಮುಟ್ಟಲು ಹೇಳುವರಂತೆ!
ಸ್ವಾತಂತ್ರ್ಯವ ಸಲೆ ಗಳಿಸುವರಂತೆ!
ಕಣ್ಣುಗಳಿದ್ದೂ ಕುರುಡನು ನಾನಿಹೆ,
ಕತ್ತಲು, ಕತ್ತಲು, ಸುತ್ತಲು ಕವಿದಿದೆ
ಬೆಳಕೆಂಬುವದನು ತೋರುವಿರಾ? ||೨||
*****

















