ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರಿಸುವುದೇ ಪೋಲೀಸರಿಗೆ ಒಂದು ದೊಡ್ಡ ಕೆಲಸವಾಗಿತ್ತು.
ಯುವತಿ ಕೊಲೆಯಾದ ರೀತಿಯಂತೂ ಭಯಾನಕವಾಗಿತ್ತು. ಯುವತಿಯು ಮುಖಕ್ಕೆ ಆ್ಯಸಿಡ್ ಎರಚಲಾಗಿತ್ತು. ಮುಖವೆಲ್ಲಾ ಸುಟ್ಟು ಕರಕಲಾಗಿತ್ತು. ಆ್ಯಸಿಡ್‌ನ ಪರಿಣಾಮದಿಂದಲೇ ಯುವತಿ ಮರಣಪಟ್ಟಿರಬೇಕೆಂಬುವುದು ಪೋಲೀಸರ ಊಹೆಯಾಗಿತ್ತು. ಮರಣ ಹೊಂದುವ ಸಮಯದಲ್ಲಿ ಆಕೆ ಅನುಭವಿಸಿರುವ ಯಾತನೆಯ ತೀವ್ರತೆಯನ್ನು ಸೆಟೆದುಕೊಂಡಿರುವ ಆಕೆಯ ಬೆರಳುಗಳು ಎತ್ತಿ ತೋರಿಸುತ್ತಿತ್ತು.
ಹೆಣವನ್ನು ಜಾಗದಿಂದ ತೆರವುಗೊಳಿಸಿದ ಪೋಲೀಸರು ಆ ಯುವತಿ ಯಾರೆಂದು ಪತ್ತೆಹಚ್ಚುವ ಯತ್ನಕ್ಕೆ ತೊಡಗಿದರು. ಇದೇ ವೇಳೆಗೆ ಆ ಯುವತಿ ಉಳಿದುಕೊಂಡಿದ್ದ ಕೋಣೆಯಲ್ಲಿ ದೊರತಿದ್ದ ಮೊಬೈಲ್‌ಗೆ ಕರೆಮಾಡಿದ ಪೊಲೀಸರು ಆಕೆಯ ಹೆತ್ತವರನ್ನು ಠಾಣೆಗೆ ಕರೆಸಿಕೊಂಡಿದ್ದರು.
ಯುವತಿಯ ದೇಹದಲ್ಲಿದ್ದ ಅರೆಬೆಂದ ಬಟ್ಟೆ, ಕೈ ಬಳೆಗಳಿಂದ ತಮ್ಮ ಮಗಳ ಶವವನ್ನು ಗುರುತಿಸಿದ ಆ ಯುವತಿಯ ತಂದೆ ತಾಯಿಯರ ಅಳುವಿಗೆ ತಡೆಯೇ ಇಲ್ಲದಂತಾಗಿತ್ತು. ಮಗಳ ಸಾವಿನಿಂದ ದುಃಖಿತರಾಗಿದ್ದ ಅವರನ್ನು ಸಂತೈಸುವಷ್ಟರಲ್ಲಿ ಪೋಲೀಸರಿಗೆ ಸಾಕು ಸಾಕಾಗಿ ಹೋಗಿತ್ತು.
ತಮಗೆ ತೋರಿದ ರೀತಿಯಲ್ಲಿ ಅವರನ್ನು ಸಮಾಧಾನಿಸಿದ ಪೋಲೀಸರು, ಕೊಲೆಯಾದ ಯುವತಿಯ ಬಗೆಗೆ ವಿಚಾರಿಸತೊಡಗಿದರು. ಯುವತಿಯ ಹೆಸರು ರೇಖಾ, ಊರು ಮಂಗಳೂರು, ಬಿ.ಎ. ಕಲಿತಿದ್ದ ಅವಳು ಇಂಟರ್‌ವ್ಯೂಗೆ ಹಾಜರಾಗಲು ಮೈಸೂರಿಗೆ ಬಂದಿದ್ದಳೆಂಬುವುದನ್ನು ಅವಳ ಹೆತ್ತವರು ತಿಳಿಸಿದ್ದರು. ಅಲ್ಲದೆ, ಅವಳ ಜೊತೆಗೆ ಯಾರೋ ಒಬ್ಬಳು ಸ್ನೇಹಿತೆಯೂ ಮೈಸೂರಿಗೆ ಬಂದಿದ್ದಳು. ಆ ಸ್ನೇಹಿತೆಯ ಹೆಸರು, ವಿಳಾಸ ತಮಗೆ ತಿಳಿದಿಲ್ಲ ಎಂಬ ವಿಚಾರವನ್ನು ತಿಳಿಸಿದರು. ಪೋಲೀಸರಿಗೆ ಈ ಮಾತನ್ನು ಕೇಳಿದ ಬಳಿಕವಂತೂ, ಮೊದಲೇ ಗೊಂದಲದ ಗೂಡಾಗಿದ್ದ ಈ ಪ್ರಕರಣ ಮತ್ತಷ್ಟು ಜಟಿಲವಾದಂತೆ ಅನಿಸತೊಡಗಿತ್ತು. ಹೆತ್ತವರು ನೋಡಿದರೆ ಸ್ನೇಹಿತೆಯೊಂದಿಗೆ ರೇಖಾ ಮೈಸೂರಿಗೆ ಬಂದಿದ್ದಳೆಂದು ಹೇಳುತ್ತಿದ್ದಾರೆ. ಆದರೆ ಸ್ನೇಹಿತೆಯ ಸುಳಿವೇ ಲಭ್ಯವಿಲ್ಲ.
ಹೆತ್ತವರಿಂದ ರೇಖಾಳ ಫೋಟೋ ಪಡೆದ ಪೋಲೀಸರಿಗೆ ಇದೊಂದು ದುರಂತ ಪ್ರೇಮ ಪ್ರಕರಣ ಎಂದು ಅನ್ನಿಸತೊಡಗಿತ್ತು. ಕಾರಣ, ಆಕೆಯ ರೂಪ. ಅತ್ಯಂತ ಸುಂದರಿಯಾಗಿದ್ದ ಆಕೆಗೆ ಯಾರೊಂದಿಗಾದರೂ ಪ್ರೇಮ ಸಂಬಂಧ ಇದ್ದಿರಬಹುದು. ಸ್ನೇಹಿತೆ ಎಂದು ಮನೆಯವರಲ್ಲಿ ಹೇಳಿ ಪ್ರೇಮಿಯೊಂದಿಗೆ ಆಕೆ ಮೈಸೂರಿಗೆ ಬಂದಿರಬಹುದು, ಆ ಪ್ರೇಮಿ ಆಕೆಯನ್ನು ಕೊಂದು ಹೋಗಿದ್ದಾನೋ ಏನೋ! ಮೊದಲಾದ ಸಂಶಯಗಳು ಪೋಲೀಸರಲ್ಲಿ ಹುಟ್ಟಲಾರಂಭಿಸಿತ್ತು.
ಆದರೆ ರೇಖಾಳ ದೇಹದಲ್ಲಿದ್ದ ಚಿನ್ನಾಭರಣಗಳು ಆ್ಯಸಿಡ್‌ನಿಂದಾಗಿ ಕರಗಿ ಹೋಗಿದ್ದವೇ ಹೊರತು ಅವುಗಳನ್ನು ದೋಚಿರಲಿಲ್ಲ. ಒಟ್ಟಾರೆ ಈ ಪ್ರಕರಣ ಪೋಲೀಸರ ಎದುರು ತಲೆಕೊರೆಯುವ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಇದಾಗಿ ಒಂದು ತಿಂಗಳ ನಂತರ, ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ವಿನುತಾ ಎಂಬ ಮತ್ತೊಬ್ಬಳು ಯುವತಿಯ ಕೊಲೆ ನಡೆದಿದೆ. ತಿಂಗಳ ಹಿಂದೆ ನಡೆದ ರೇಖಾಳ ಕೊಲೆ ನಡೆದ ಮಾದರಿಯಲ್ಲೇ ಆ್ಯಸಿಡ್ ಎರಚಿ ವಿನುತಾಳನ್ನೂ ಕೊಲೆ ಮಾಡಲಾಗಿದೆ. ರೇಖಾಳ ಕೊಲೆ ಮಾಡಿದ ವ್ಯಕ್ತಿಯೇ ಈ ಕೊಲೆಯನ್ನೂ ನಡೆಸಿದ್ದಾನೆ ಎನ್ನುವುದು ಪೋಲೀಸರಿಗೆ ಸ್ಪಷ್ಟವಾಗಿತ್ತು. ಆದರೆ ಕೊಲೆ ನಡೆಸಿದವರು ಯಾರೆಂಬುವುದರ ಕುರಿತು ಒಂದು ಸಣ್ಣ ಸುಳಿವೂ ಲಭ್ಯವಾಗಿರಲಿಲ್ಲ.
ರೇಖಾ ಮತ್ತು ವಿನುತಾರ ಕೊಲೆಯಲ್ಲಿದ್ದ ಸಾಮ್ಯವೆಂದರೆ – ಕೊಲೆಯಾದ ರೀತಿ ಮತ್ತು ಇಬ್ಬರೂ ಅತ್ಯಂತ ಸುಂದರಿಯರಾಗಿದ್ದದ್ದು. ಪ್ರೇಮದ ಹೆಸರಲ್ಲಿ ಯುವತಿಯರನ್ನು ಬಳಸಿಕೊಂಡು ಬಳಿಕ ಅವರನ್ನು ಕೊಂದುಹಾಕಲಾಗಿದೆ ಎಂಬ ತೀರ್ಮಾನಕ್ಕೆ ಪೋಲೀಸರು ಬಂದದ್ದಾಗಿತ್ತು.
ಇದೇ ವೇಳೆಗೆ ಪೋಲೀಸರಿಗೆ ಮಹತ್ವದ ಮಾಹಿತಿಯೊಂದು ದೊರಕಿತ್ತು. ಬೆಂಗಳೂರಿನ ಲಾಡ್ಜ್‌ನಲ್ಲಿ ಕೊಲೆಯಾಗಿದ್ದ ಯುವತಿಯೊಂದಿಗೆ ಮತ್ತೊಬ್ಬ ಯುವತಿಯೂ ಬಂದಿದ್ದಳು ಎಂಬ ಮಾಹಿತಿಯನ್ನು ಆ ಲಾಡ್ಜ್‌ನ ಸಪ್ಲೇಯರ್ ಒಬ್ಬ ಪೋಲೀಸರಿಗೆ ನೀಡಿದ್ದ. ಅಲ್ಲದೆ ರಾತ್ರಿ ಒಂಭತ್ತರ ವೇಳೆಗೆ ಅವರ ಕೋಣೆಗೆ ತಾನೇ ಊಟವನ್ನು ಪೂರೈಸಿದ್ದಾಗಿಯೂ ತಿಳಿಸಿದ್ದ.
ಆತ ಹೇಳಿದ ರೀತಿಯಲ್ಲೇ ಸಂಶಯಾಸ್ಪದ ಯುವತಿಯ ಕರಡು ಚಿತ್ರವೊಂದನ್ನು ರಚಿಸಿದ ಪೋಲೀಸರು, ಎಲ್ಲಾ ಪತ್ರಿಕೆಗಳಲ್ಲಿ, ಎಲ್ಲಾ ದೃಶ್ಯ ಮಾದ್ಯಮಗಳಲ್ಲಿ ಆ ಯುವತಿಯ ಕರಡು ಚಿತ್ರವನ್ನು ಬಿತ್ತರಿಸಿ, ಆ ಯುವತಿಯ ಬಗೆಗೆ ಮಾಹಿತಿ ನೀಡಿದಲ್ಲಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಪೋಲೀಸರು ಈ ಎರಡು ಕೊಲೆ ಪ್ರಕರಣಗಳ ತನಿಖೆಯಲ್ಲಿ ತೊಡಗಿರಬೇಕಾದರೆ ಮತ್ತೊಂದು ಭಯಾನಕ ಕೊಲೆ ಚಿಕ್ಕಮಗಳೂರಿನ ಹಳ್ಳಿಯ ಮನೆಯೊಂದರಲ್ಲಿ ನಡೆದಿತ್ತು. ಹಿಂದಿನೆರಡು ಕೊಲೆ ಪ್ರಕರಣಗಳ ರೀತಿಯಲ್ಲಿಯೇ ಈ ಯುವತಿಯ ಕೊಲೆಯೂ ನಡೆದಿತ್ತು. ಆದರೆ ಹಿಂದಿನ ಪ್ರಕರಣಗಳಂತೆ ಈ ಪ್ರಕರಣದಲ್ಲಿ ಲಾಡ್ಜ್‌ನಲ್ಲಿ ಯುವತಿಯನ್ನು ಕೊಲೆ ಮಾಡಲಾಗಿಲ್ಲ. ರಾತ್ರಿ ಹೊತ್ತಿನಲ್ಲಿ ಪಾತ್ರೆ ತೊಳೆಯಲೆಂದು ಮನೆಯಿಂದ ಹೊರಬಂದ ಯುವತಿಯ ಮುಖಕ್ಕೆ ಆ್ಯಸಿಡ್ ಎರಚಿ ವಾಹನ ಹತ್ತಿ ಹೋದ ಯುವತಿ ಯಾರೆಂದು ಮನೆಯವರಿಗೆ ಗೊತ್ತಾಗಿರಲಿಲ್ಲ. ಹಿಂದಿನ ಎರಡು ಪ್ರಕರಣದಲ್ಲಿ ಶಾಮೀಲಾಗಿದ್ದ ಯುವತಿಯೇ ಈ ಕೊಲೆಗೂ ಕಾರಣ ಎಂಬುವುದು ಪೋಲೀಸರಿಗೆ ಸ್ಪಷ್ಟವಾಗಿತ್ತು. ಆದರೆ ಆ ಯುವತಿ ಈ ರೀತಿ ಕೊಲೆ ನಡೆಸಲು ಕಾರಣ ಏನೆಂಬುವುದು ಮಾತ್ರ ಇನ್ನು ನಿಗೂಢವಾಗಿಯೇ ಉಳಿದಿತ್ತು.
ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಲಾರಂಭಿಸಿತು. ಈ ಮೂರು ಪ್ರಕರಣಗಳ ಕೊಲೆಗೆ ಕಾರಣ ಒಬ್ಬಳು ಯುವತಿ. ಅವಳ ಕರಡು ಚಿತ್ರವನ್ನು ಪ್ರಕಟಿಸಿದ್ದರೂ ಕೂಡಾ ಪೋಲೀಸರ ಪ್ರಯತ್ನವೆಲ್ಲಾ ನಿಷ್ಪಲವಾಗಿತ್ತು. ಇದೇ ಸಮಯದಲ್ಲಿ ಪೋಲೀಸ್ ಠಾಣೆಗೆ ಕರೆ ಮಾಡಿದ ಗ್ರಾಮಸ್ಥನೊಬ್ಬ ಪತ್ರಿಕೆಯಲ್ಲಿ ಪ್ರಕಟಿಸಿರುವ ಫೋಟೋದಲ್ಲಿರುವ ಯುವತಿಯನ್ನು ತಾನು ನೋಡಿದ್ದಾಗಿಯೂ, ಅವಳು ಬಿಜಾಪುರದ ಹಳ್ಳಿಯೊಂದರ ಚಿಕ್ಕ ಮನೆಯೊಂದರಲ್ಲಿರುವುದಾಗಿಯೂ ತಿಳಿಸಿದ. ಬಂದ ಕರೆಯನ್ನಾಧರಿಸಿ, ಬಹು ಸಮಯದಿಂದ ನಿರೀಕ್ಷಿಸಿದ್ದನ್ನು ಎದುರುಗೊಳ್ಳಲು ಆತುರಾತುರವಾಗಿ ಬಿಜಾಪುರಕ್ಕೆ ಹೊರಟಿದ್ದರು ಪೋಲೀಸರು.
ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಬಿಜಾಪುರದಲ್ಲಿ ಭೇಟಿ ಮಾಡಿದ ಪೋಲೀಸರು ಆ ವ್ಯಕ್ತಿ ತೋರಿಸಿದ ಮನೆಯ ಕಡೆಗೆ ಹೊರಟಿದ್ದರು. ಮನೆಯನ್ನು ಸುತ್ತುವರಿದ ಪೊಲೀಸರು ಬೀಗ ಹಾಕಲಾಗಿದ್ದ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದರು. ಆದರೆ ಅಲ್ಲಿ ಯಾವುದೇ ಯುವತಿಯ ಪತ್ತೆಯಿಲ್ಲ.
ಯುವತಿ ಹೊರಹೋಗಿರಬಹುದೆಂದು ಭಾವಿಸಿದ ಪೋಲೀಸರು ಆಕೆಯ ಪತ್ತೆಗಾಗಿ ರಾತ್ರಿ ಅಲ್ಲೇ ಉಳಿಯುವುದಾಗಿ ನಿರ್ಧರಿಸಿದರು. ಅಲ್ಲದೇ ಕಾಯಾಚರಣೆಯ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾದರೆ ಆ ಯುವತಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮಾಧ್ಯಮಗಳಿಗೆ ಈ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ.
ರಾತ್ರಿ ವೇಳೆಯಲ್ಲಿ ಪೋಲೀಸರು ತಮ್ಮ ವಾಹನವನ್ನು ಮರೆಯಲ್ಲಿಟ್ಟು, ತಾವೂ ಮರೆಯಲ್ಲಿ ಅಡಗಿ ಕುಳಿತಿದ್ದರು. ಅದೇ ಸಮಯಕ್ಕೆ ಬಿಳಿ ಬಣ್ಣದ ಸ್ಕಾರ್ಫಿಯೋ ಗಾಡಿಯೊಂದು ಮನೆಯ ಸಮೀಪದಲ್ಲಿ ನಿಂತಿತ್ತು. ಡ್ರೈವರ್ ಸೀಟಿನಲ್ಲಿ ಕುಳಿತಿದ್ದವಳು ಯುವತಿ. ಅವಳನ್ನು ಬಿಟ್ಟರೆ ಬೇರೆ ಯಾರೂ ಆ ಗಾಡಿಯಲ್ಲಿರಲಿಲ್ಲ.
ಆಕೆಯ ಮುಖದ ಮುಕ್ಕಾಲು ಭಾಗವು ಸುಟ್ಟ ಗಾಯಗಳಿಂದ ಕೂಡಿತ್ತು. ಉದ್ದ ತೋಳಿನ ಚೂಡಿದಾರ್ ಧರಿಸಿದ್ದ ಅವಳು ಕಾರಿನಿಂದ ಇಳಿದು ಸೀದಾ ಮನೆಯೊಳಕ್ಕೆ ಹೋದಳು. ಜಾಗೃತರಾದ ಪೊಲೀಸರು ಅವಳು ಮನೆಯೊಳಕ್ಕೆ ಪ್ರವೇಶಿಸಿ ಬಾಗಿಲನ್ನು ಮುಚ್ಚುತ್ತಿರಬೇಕಾದರೆ, ಬಾಗಿಲನ್ನು ತಳ್ಳಿ ಅವಳ ಕಡೆಗೆ ಪಿಸ್ತೂಲನ್ನು ಗುರಿಯಿರಿಸಿಯಾಗಿತ್ತು. ಅನಿರೀಕ್ಷಿತ ದಾಳಿಯಿಂದ ಬೆಚ್ಚಿದ ಆ ಯುವತಿ ಸದ್ದಿಲ್ಲದೆ ಪೋಲೀಸರಿಗೆ ಶರಣಾಗಿದ್ದಳು. ಅದಲ್ಲದೆ ಅವಳಿಗೆ ಬೇರೆ ದಾರಿಯೇ ಇರಲಿಲ್ಲ. ಪೋಲೀಸರು ತಮ್ಮ ಕಾರ್ಯಾಚರಣೆ ಯಶಸ್ವಿಯಾದುದಕ್ಕೆ ನಿಟ್ಟುಸಿರುಬಿಟ್ಟಿದ್ದರು.
ಕೇವಲ ಮೂರು ತಿಂಗಳಲ್ಲಿ ಮೂರು ಯುವತಿಯರನ್ನು ಭಯಾನಕವಾಗಿ ಕೊಲೆಮಾಡಿದ್ದ ಯುವತಿಯ ವಿಚಾರಣೆ ನಡೆಯುತ್ತಿದೆ. ಏನೇ ಮಾಡಿದರೂ ಆ ಯುವತಿ ತಾನು ಕೊಲೆ ಮಾಡಿದ್ದೇನೆಂಬ ಸಂಗತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಮಹಿಳಾ ಪೋಲೀಸರು ತಮ್ಮ ಧಾಟಿಯಲ್ಲೇ ವಿಚಾರಿಸಿದಾಗ ಆ ಯುವತಿಯ ಜೀವನದ ಒಂದೊಂದೇ ಪುಟಗಳು ತೆರೆದುಕೊಳ್ಳಲಾರಂಭಿಸಿತು…
ಬೆಂಗಳೂರಿನ ಶ್ರೀಮಂತ ಕುಟುಂಬದಲ್ಲಿ ತಂದೆ-ತಾಯಿಗೆ ಪ್ರೀತಿಯ ಏಕಮಾತ್ರ ಮಗಳಾಗಿ ಜನಿಸಿದ್ದ ಆ ಯುವತಿಯ ಹೆಸರು ಸುಜಾತ. ಶ್ರೀಮಂತಿಕೆಗೆ ತಕ್ಕುದಾದ ರೂಪ, ರೂಪಕ್ಕೆ ತಕ್ಕದಾದ ಗುಣ, ಗುಣಕ್ಕೆ ತಕ್ಕುದಾದ ಪ್ರತಿಭೆ. ಇವೆಲ್ಲ ಸುಜಾತಳಿಗೆ ದೇವರೇ ಕರುಣಿಸಿದ ಸೌಭಾಗ್ಯ ಎನ್ನಬಹುದೇನೋ.
ಅವಳು ಮನೆಯಿಂದ ಹೊರಟರೆ ಸಾಕು, ಕನಿಷ್ಠ ಹತ್ತು ಜೋಡಿ ಕಣ್ಣುಗಳಾದರೂ ಅವಳ ಮೇಲೆಯೇ ನೆಟ್ಟಿರುತ್ತಿತ್ತು. ಅವಳ ಜೊತೆಗೇ ಕಲಿಯುತ್ತಿದ್ದ ಹುಡುಗಿಯರು ತಮಗೆ ಅವಳಲ್ಲಿರುವ ಸೌಂದರ್ಯದ ಅರ್ಧದಷ್ಟಾದರೂ ಇರಬಾರದಿತ್ತೇ ಎಂದು ಮರುಗುತ್ತಿದ್ದರು. ಯುವಕರಂತೂ ಅವಳನ್ನು ಮೆಚ್ಚಿಸಿ. ಅವಳನ್ನು ಮದುವೆಯಾಗಿ, ಮೊದಲ ರಾತ್ರಿಯ ಮಧು ಸವಿಯುವವರೆಗೆ ತಮ್ಮ ಕಲ್ಪನೆಯನ್ನು ವಿಸ್ತರಿಸಿಬಿಡುತ್ತಿದ್ದರು.
ಸಂಜೆಯ ಸಮಯ. ಕಾಲೇಜು ಮುಗಿಸಿ ಕಾರಿನಲ್ಲಿ ಮನೆಗೆ ಹೊರಟಿದ್ದಳು ಸುಜಾತ. ಅದೊಂದು ಜನಸಂಚಾರ ಕಡಿಮೆ ಇರುವ ಪ್ರದೇಶ. ಡ್ರೈವರ್ ಇದ್ದಕ್ಕಿದ್ದಂತೆ ಕಾರನ್ನು ನಿಲ್ಲಿಸಿದ್ದ. ಏನಾಗಿದೆಯೆಂದು ಸುಜಾತ ನೋಡುವಷ್ಟರಲ್ಲಿ ಎದುರಿನಿಂದ ರಭಸದಲ್ಲಿ ಬಂದ ಕಾರಿನಿಂದ ಭರಭರನೆ ಇಳಿದ ಐದು ಜನ ದಾಂಡಿಗರು, ಅವಳನ್ನು ತಮ್ಮ ಕಾರಿನೊಳಕ್ಕೆ ಬಲವಂತವಾಗಿ ತಳ್ಳಿ, ಅಷ್ಟೇ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದರು. ಸುಜಾತಳ ಕಾರಿನ ಡ್ರೈವರ್ ಸದ್ದಿಲ್ಲದೆ ಅಲ್ಲಿಂದ ತಲೆಮರೆಸಿಕೊಂಡಿದ್ದ.
ಮಗಳ ಸುಳಿವಿಲ್ಲದೆ ಚಿಂತಾಕ್ರಾಂತರಾಗಿದ್ದ ಸುಜಾತಳ ತಂದೆ-ತಾಯಿಗೆ ಎದುರಾದದ್ದು ಅತ್ಯಾಚಾರದ ಹೀನಕೃತ್ಯಕ್ಕೆ ಸಿಲುಕಿದ್ದ ಮಗಳು. ಅವಳನ್ನು ಅತ್ಯಾಚಾರ ಮಾಡಿ, ಅವಳ ಮುಖಕ್ಕೆ ಆ್ಯಸಿಡ್ ಎರಚಲಾಗಿತ್ತು. ಪ್ರಾಣ ಉಳಿಸಿಕೊಂಡ ಸುಜಾತಳ ಮುಖ ಶಸ್ತ್ರಚಿಕಿತ್ಸೆಯ ಬಳಿಕವೂ ಮೊದಲಿನ ಸೌಂದರ್ಯವನ್ನು ಮರಳಿ ಪಡೆಯಲಿಲ್ಲ. ರಣಹದ್ದುಗಳ ಕೈಗೆ ಸಿಕ್ಕ ಕೋಳಿ ಮರಿಯಂತಾಗಿ ಹೋಗಿತ್ತು ಅವಳ ಪಾಡು. ಇಷ್ಟೆಲ್ಲಾ ಆಗಿಯೂ ಅವಳು ಬದುಕಿ ಉಳಿದದ್ದೇ ಒಂದು ಪವಾಡ. ಮೊದಲೆಲ್ಲಾ ಅವಳ ಸೌಂದರ್ಯ ಕಂಡು ಮತ್ಸರಪಡುತ್ತಿದ್ದ ಓರಗೆಯ ಹುಡುಗಿಯರಿಗೆ ಈಗ ಅವಳ ಮುಖವನ್ನು ಕಂಡೊಡನೆ ನಗು ಉಕ್ಕಿ ಬರುತ್ತಿತ್ತು. ಪ್ರೇಮನಿವೇದನೆ ಮಾಡಿ ಅವಳಿಂದ ಉಗಿಸಿಕೊಂಡಿದ್ದ ಪಡ್ಡೆ ಹುಡುಗರು ಈಗ ಸುಟ್ಟು ಕರಕಲಾಗಿದ್ದ ಅವಳ ಮುಖ ಕಾಣಲು ಹೇಸುತ್ತಿದ್ದರು.
ಸೌಂದರ್ಯ ದೇವತೆಯಂತೆ ಮೊದಲು ಮೆರೆದಿದ್ದ ಸುಜಾತಳಿಗೆ ಈ ಅನುಭವವೆಲ್ಲಾ ಸಹಿಸಲಸಾಧ್ಯವಾಗಿತ್ತು. ಕನ್ನಡಿಯ ಎದುರಿಗೆ ನಿಂತರೆ ಸಾಕು, ಕನ್ನಡಿಯನ್ನೇ ಪುಡಿಗೈಯ್ಯುವಷ್ಟು ಕೋಪ ಹೊಮ್ಮುತ್ತಿತ್ತು. ಇದಾದ ಬಳಿಕ, ಸೌಂದರ್ಯ ಎಂಬ ಪದ ಕೇಳಿದರೆ ಸಾಕು, ಅವಳ ರಕ್ತವೆಲ್ಲಾ ಕುದಿಯುತ್ತಿತ್ತು. ಸುಂದರ ಹುಡುಗಿಯರನ್ನು ಕಂಡಾಗಲೆಲ್ಲಾ ಅವಳ ಅಂತರಾಳದಲ್ಲಿದ್ದ ಮತ್ಸರ ಅವಳಿಗರಿವಿಲ್ಲದೆಯೇ ಜಾಗೃತಗೊಳ್ಳುತ್ತಿತ್ತು. ಈ ಲೋಕದಲ್ಲಿರುವ ಚೆಲುವನ್ನೆಲ್ಲಾ ಒಮ್ಮೆಲೇ ನಾಶಮಾಡಬೇಕೆಂಬ ಯೋಚನೆಯೂ ಆಗಾಗ ಅವಳ ಮನಸ್ಸಲ್ಲಿ ನಿರ್ಮಾಣಗೊಳ್ಳುತ್ತಿತ್ತು.
ತಾನು ಕಳೆದುಕೊಂಡಿರುವ ಸೌಂದರ್ಯ ಇನ್ನಾರಲ್ಲೂ ಇರಬಾರದೆನ್ನುವ ಭಾವನೆ, ಸುಂದರಿಯರ ಬಗೆಗೆ ದ್ವೇಷದ ಮನೋಭಾವವನ್ನು ಬೃಹದಾಕಾರವಾಗಿ ಸೃಷ್ಟಿಸತೊಡಗಿತ್ತು. ಸುಂದರಿಯರನ್ನು ಆ್ಯಸಿಡ್ ಎರಚಿ ಕೊಲೆಮಾಡುವಷ್ಟರ ಮಟ್ಟಿಗೆ ಇಳಿಯಲು ಆಕೆಯ ಅಂತರಾಳ ಪ್ರೇರೇಪಣೆ ನೀಡಲಾರಂಭಿಸಿತ್ತು.
ತನಗೆ ಎದುರಾಗುತ್ತಿದ್ದ ಸುಂದರಿಯರ ಪರಿಚಯ ಮಾಡಿಕೊಳ್ಳುತ್ತಿದ್ದ ಸುಜಾತ, ಏನಾದರೊಂದು ನೆಪವನ್ನೊಡ್ಡಿ, ಅವರನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ, ಆ್ಯಸಿಡ್ ಎರಚಿ ಕೊಲೆಮಾಡುತ್ತಿದ್ದಳು. ತನಗೆ ಎದುರಾಗುವ ಸುಂದರಿಯರನ್ನೆಲ್ಲಾ ನಾಶಪಡಿಸಬೇಕೆಂಬ ಉದ್ದೇಶ ಅವಳದ್ದಾಗಿತ್ತು.
…ಪೋಲೀಸರೆದುರು ತನ್ನ ಜೀವನಗಾಥೆಯನ್ನು ಬಿಚ್ಚಿಟ್ಟ ಸುಜಾತ ಆ ಗುಂಗಿನಿಂದ ಇನ್ನೂ ಹೊರಬರುವ ಸ್ಥಿತಿಯಲ್ಲಿರಲಿಲ್ಲ. ಪೋಲೀಸರಿಗೂ ಸುಜಾತಳ ಈ ಮನೋಸ್ಥಿತಿ ಹೊಸತಾಗಿತ್ತು. ಗಂಡಸರಿಂದ ಅತ್ಯಾಚಾರಕ್ಕೊಳಗಾದ ಯುವತಿಯೊಬ್ಬಳು ಗಂಡಸರನ್ನು ದ್ವೇಷಿಸುವ ಬದಲು ಸುಂದರ ಯುವತಿಯರನ್ನು ಕೊಲೆ ಮಾಡಲು ತೊಡಗಿದ್ದು ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು.
ಅವಳಿಂದ ಹೇಳಿಕೆಯನ್ನು ಬರೆಸಿಕೊಂಡ ಪೋಲೀಸರು ಆಕೆಯ ಸೆಲ್‌ಗೆ ಬೀಗ ಹಾಕಿ ತೆರಳಿದರು. ಚೂಡಿದಾರ್‌ನ ವೇಲ್‌ನಿಂದ ಮುಖ ಮುಚ್ಚಿಕೊಂಡ ಆಕೆಯ ಕಣ್ಣೀರು, ಬಾಗಶಃ ಸುಟ್ಟು ಹೋಗಿದ್ದ ಅವಳ ಮುಖವನ್ನು ತೋಯಿಸಿತು.
*****









