ಪ್ರಗತಿಪರ ಚಳುವಳಿಯ ಗೆಳೆಯ ಆರ್‌. ವಿ. ಭಂಡಾರಿ

ಪ್ರಗತಿಪರ ಚಳುವಳಿಯ ಗೆಳೆಯ ಆರ್‌. ವಿ. ಭಂಡಾರಿ

ಪ್ರಗತಿಪರ ಚಳವಳಿಗಳ ಗೆಳೆಯ, ನನ್ನ ಆತ್ಮೀಯ, ಆರ್‌.ವಿ. ಭಂಡಾರಿಯವರು ಇನ್ನಿಲ್ಲ. ಅಕ್ಟೋಬರ್ ೨೫ರಂದು ಸಾಯಂಕಾಲ ಅವರ ನಿಧನದ ಸುದ್ದಿ ನನಗೆ ತಲುಪಿದಾಗ ತಬ್ಬಲಿತನದ ಅನುಭವವಾಯಿತು. ನನಗೆ ತಬ್ಬಲಿತನ ಕಾಡಿದ್ದು ಯಾಕೆಂದು ಪ್ರಶ್ನಿಸಿಕೊಂಡಾಗ ಭಂಡಾರಿಯವರ ಮಹತ್ವ ಅರ್ಥವಾಗುತ್ತದೆ. ಅವರು ನನಗೆ ತೀರಾ ಹತ್ತಿರವಾದದ್ದು ಕೇವಲ ವೈಯುಕ್ತಿಕವಾಗಿರದೆ ಸಾಮಾಜಿಕವೂ ಆಗಿತ್ತೆಂಬ ಅಂಶದಲ್ಲಿ ಆತ್ಮೀಯತೆಯ ಅರ್ಥ ಅಡಗಿದೆ.

ಆರ್.ವಿ. ಭಂಡಾರಿಯವರು ಮೂರು ನೆಲೆಗಳಿಂದ ಮುಖ್ಯವಾಗುತ್ತಾರೆ. ಸಂಘಟನೆ, ಸಾಹಿತ್ಯ ಮತ್ತು ಸ್ನೇಹ- ಈ ಮೂರು ನೆಲೆಗಳ ಮೂಲಕ ರಾಜಧಾನಿಯಾಚೆಗೆ ಸೃಜನಶೀಲ ಸೈದ್ದಾಂತಿಕ ಬದ್ಧತೆಯಿಂದ ಬದುಕಿ ಸ್ಥಳೀಯ ಸಾಂಸ್ಕೃತಿಕ ಕ್ರಿಯೆಯಿಂದ ನಾಡಿಗೆ ಸಾಂಸ್ಕೃತಿಕ ಕೊಡುಗೆ ಕೊಟ್ಟ ಭಂಡಾರಿಯಂಥವರ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳುವುದು ಅಗತ್ಯ. ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಗಳಲ್ಲಿ ನೆಲೆಸಿ ಸುದ್ದಿ ಮಾಧ್ಯಮಗಳಿಂದ ದೂರವುಳಿದು ಕಟ್ಟುವ ಕೆಲಸದಲ್ಲಿ ತೊಡಗಿದ ಎಷ್ಟೋ ಜನರು ನಮ್ಮಲ್ಲಿದ್ದಾರೆ. ಮುನ್ನೆಲೆಯಲ್ಲಿ ಪ್ರಸಿದ್ದರಾದವರು ಸಾಂಸ್ಕೃತಿಕ ಚರಿತ್ರೆಯ ಭಾಗವಾದಷ್ಟು ಪ್ರಮಾಣದಲ್ಲಿ ಈ ಸ್ಥಳೀಯ ಸಾಂಸ್ಕೃತಿಕ ಇತಿಹಾಸದ ರಚನೆಯಾಗಬೇಕೆಂದು ನಾನು ಪ್ರತಿಪಾದಿಸುತ್ತ ಬಂದಿದ್ದೇನೆ. ಈ ಇತಿಹಾಸದಲ್ಲಿ ಭಂಡಾರಿಯವರು ಖಂಡಿತ ಮೊದಲನೇ ಸಾಲಿನಲ್ಲಿರುತ್ತಾರೆ. ಯಾಕೆಂದರೆ ಸ್ಥಳೀಯವಾಗಿ ಜನಸಂಸ್ಕೃತಿಯನ್ನು ಕಟ್ಟಿದ ಜೀವವಾಗಿದ್ದರು.

ಭಂಡಾರಿಯವರ ಸಂಘಟನೆಯ ನೆಲೆ ಪರಿಶುದ್ಧವಾದುದು. ತಾವು ನಂಬಿದ ತಾತ್ವಿಕ ತಿರುಳಿಗೆ ಅವರು ಯಾವತ್ತೂ ದ್ರೋಹ ಮಾಡಲಿಲ್ಲ. ಮಾರ್ಕ್ಸ್‌ವಾದಿ ಚಿಂತನೆಯಿಂದ ಪ್ರೇರಿತರಾಗಿ ಅದರಾಚೆಯಿಂದಲೂ ಸಮಾಜವನ್ನು ಗ್ರಹಿಸುವ ಅಪರೂಪದ ಸೈದ್ದಾಂತಿಕ ಸಮತೋಲನವನ್ನು ಕಾಪಾಡಿಕೊಂಡಿದ್ದ ಭಂಡಾರಿಯವರು ಸಾಮಾಜಿಕ ಕಾಳಜಿಯನ್ನು ಕೊನೆಯುಸಿರಿನವರೆಗೂ ಕಾಪಾಡಿಕೊಂಡು ಬದುಕಿದರು. ಎಲ್ಲ ಪ್ರಗತಿಪರ ಚಳವಳಿಗಳ ಜೊತೆ ಸಂಬಂಧವಿಟ್ಟುಕೊಂಡು ಕ್ರಿಯಾತ್ಮಕ ಕೊಡುಗೆ ನೀಡಿದರು. ಸ್ವಾರ್ಥಕ್ಕಾಗಿ ಸೈದ್ದಾಂತಿಕ ಆಶಯಗಳನ್ನು ಆಪೋಶನ ಮಾಡುವವರ ಮಧ್ಯೆ ನಿಸ್ವಾರ್ಥ ಜೀವಿಯಾಗಿ ಬಾಳಿದರು. ಯಾವತ್ತೂ ತಮ್ಮ ಸೈದ್ಧಾಂತಿಕ ಬದ್ಧತೆಗೆ ಚ್ಯುತಿತಾರದೆ ಬೆಳಗಿದರು.

ಸಾಹಿತ್ಯ ನೆಲೆಯಲ್ಲೂ ಅವರ ಕೊಡುಗೆ ಗಮನೀಯ. ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ- ಹೀಗೆ ಎಲ್ಲ ಪ್ರಕಾರಗಳಲ್ಲೂ ಅವರ ಕೃತಿಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಚಿಂತನಶೀಲತೆ ಅಪರೂಪದ್ದು. ಸೃಜನಶೀಲತೆ ಮತ್ತು ಚಿಂತನಶೀಲತೆಗಳನ್ನು ಹದವಾಗಿ ಬೆಸೆದು ಬರೆಯುತ್ತ ಭಂಡಾರಿಯವರು ಮೊದಲಿಂದ ಕಡೆಯವರೆಗೂ ಬಂಡಾಯ ಸಾಹಿತ್ಯ ಚಳವಳಿಯ ಭಾಗವಾಗಿದ್ದರು. ಇತ್ತೀಚೆಗೆ ಸಾಹಿತ್ಯ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೂ ಪಾತ್ರರಾಗಿದ್ದರು.

ಭಂಡಾರಿಯವರದು ಅಬ್ಬರದಲ್ಲಿ ಅನಾವರಣಗೊಳ್ಳುವ ಸ್ನೇಹವಲ್ಲ. ಅಂತರಂಗದ ಆಪ್ತಭಾವದ ಸ್ನೇಹ. ಒಂದು ಪ್ರಸಂಗವನ್ನು ಇಲ್ಲಿ ಹೇಳಬಯಸುತ್ತೇನೆ. ನಾನು ಮನೆ ಕಟ್ಟಿಸುತ್ತಿದ್ದ ಸಂದರ್ಭ. ಭಂಡಾರಿಯವರು ನನ್ನನ್ನು ಕಾಣಲು ಬಂದರು. “ನನ್ನ ನಿವೃತ್ತಿ ನಂತರ ಅರವತ್ತು ಸಾವಿರ ರೂಪಾಯಿಗಳು ಬಂದಿವೆ. ಅದರಲ್ಲಿ ನಿಮಗೆ ಮೂವತ್ತು ಸಾವಿರ ಕೊಡ್ತೇನೆ. ನನ್ನ ಮಗಳ ಮದುವೆ ಸಂದರ್ಭಕ್ಕೆ ವಾಪಸ್ ಕೊಟ್ಟರೆ ಸಾಕು” ಎಂದು ಮೂವತ್ತು ಸಾವಿರ ರೂಪಾಯಿಗಳನ್ನು ಮುಂದಿಟ್ಟರು. ನನಗೆ ಮಾತೇ ಹೊರಡಲಿಲ್ಲ. ನಾನು ಕಷ್ಟದಲ್ಲಿದ್ದೇನೆಂದು ಅವರಿಗೆ ಗೊತ್ತಾಗಿತ್ತು. ಕೆಲ ಸ್ನೇಹಿತರನ್ನು ಕೇಳಿ ಸಾಲ ಪಡೆದಿದ್ದು ಅವರಿಗೆ ತಿಳಿದಿತ್ತು. ಹೀಗಾಗಿ ನಾನು ಕೇಳದೆಯೇ ಅವರು ಹಣ ತಂದು ಕೊಟ್ಟರು. (ನಾನೂ ಸಕಾಲಕ್ಕೆ ಹಿಂತಿರುಗಿಸಿದೆ) ಇದು ಅವರ ಸ್ನೇಹದ ಒಂದು ಉದಾಹರಣೆ.

ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿದ್ದ ಅವರು ದೂರ ಶಿಕ್ಷಣದ ಮೂಲಕ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮುಗಿಸಿದರು. ನಿವೃತ್ತಿಯ ಅಂಚಿನಲ್ಲಿದ್ದಾಗ ಸ್ವಂತ ಆಸಕ್ತಿ ಮಾತ್ರದಿಂದಲೇ ಪಿ.ಎಚ್.ಡಿ. ಮಾಡಿದರು. ನಿರಂತರ ಸಾಹಿತ್ಯಾಸಕ್ತಿಗೆ ಲಾಭ ದೂರವಾದ ಈ ವ್ಯಾಸಂಗ ಒಂದು ಉತ್ತಮ ಉದಾಹರಣೆ. ಆರ್.ವಿ. ಭಂಡಾರಿಯವರು ನನಗೆ ನಿಯತವಾಗಿ ಪತ್ರ ಬರೆಯುತ್ತಿದ್ದರು. ಅವರು ಬರೆಯುತ್ತಿದ್ದುದು ಕಾರ್ಡಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದ ಕಾರ್ಡಿನ ಅಕ್ಷರಗಳು ಈ ವರ್ಷದ ಆರಂಭದಿಂದ ಮಸುಕಾಗತೊಡಗಿದವು. ಅಸ್ಪಷ್ಟವಾಗುತ್ತ ಬಂದವು. ಭಂಡಾರಿಯವರು ಸಾಗುತ್ತಿದ್ದ ಸಾವಿನ ಹಾದಿಯನ್ನು ಅಸ್ಪಷ್ಟ ಅಕ್ಷರಗಳು ಸ್ಪಷ್ಟಪಡಿಸತೊಡಗಿದ್ದವು. ಇನ್ನು ಕಾರ್ಡು ಬರುವುದಿಲ್ಲ. ಅವರಿಗೆ ಕಾರ್ಡು ಬರೆಯೋಣವೆಂದರೆ ವಿಳಾಸ ಗೊತ್ತಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೮
Next post ಹೆಣ್ಣು ಮತ್ತು ವಾಹನ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…