ಅವ್ವ ತೀರಿಕೊಂಡ ನಂತರ ಆ ದೊಡ್ಡ ಮನೆಯಲ್ಲಿ ನಾನೊಬ್ಬಳೇ… ಊಹಿಸಿಕೋ… ಇಡೀ ದಿನ… ಇಡೀ ರಾತ್ರಿ ಅವ್ವನ ರೂಮಿನಲ್ಲಿಯೇ, ಮಂಚದ ಬಳಿಯೇ ಕುಳಿತುಬಿಡುತ್ತಿದ್ದೆ. ಅವ್ವನ ಬಟ್ಟೆಗಳು, ಸೀರೆಗಳನ್ನಪ್ಪಿಕೊಂಡು ಹುಚ್ಚಿಯಂತೆ ಅಳುತ್ತಿದ್ದೆ. ಹಗಲು-ರಾತ್ರಿ, ದಿನಾಂಕ-ವಾರ ಯಾವುದೂ ತಿಳಿಯುತ್ತಿರಲಿಲ್ಲ. ನಾನು ನನ್ನ ಪ್ರೀತಿಯ ಅವ್ವನನ್ನು ಕಳೆದುಕೊಂಡಿದ್ದೆ. ಅವ್ವ ನನಗೆ ಎಲ್ಲವೂ ಆಗಿದ್ದಳು. ಮತ್ತೆ ಎಲ್ಲವನ್ನು ಕಳೆದುಕೊಂಡಿದ್ದೆ! ನನ್ನ ತಮ್ಮ ಅವನ ಹೆಂಡತಿಯೊಂದಿಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಊಟವನ್ನು ಕಳುಹಿಸುತ್ತಿದ್ದ. ನನಗೆ ಯಾವುದೂ ಬೇಡವಾಗಿತ್ತು. ನಾನು ಖಿನ್ನತೆಯ ಆಳಕ್ಕಿಳಿಯತೊಡಗಿದ್ದೆ. ಅಳುವುದನ್ನು ನಿಲ್ಲಿಸಿದ್ದೆ. ಒಂದೇ ಕಡೆ ಕುಳಿತುಬಿಡುತ್ತಿದ್ದೆ. ಎಲ್ಲೆಲ್ಲೂ ಶೂನ್ಯತೆ. ಉಸಿರು ನೀಡುವ ಗಾಳಿಯಲ್ಲೂ ವಿಷ ತುಂಬಿದೆಯೆಂಬಂತೆ ಉಸಿರಿಗಾಗಿ ಚಡಪಡಿಸುವಂತೆ, ಹೃದಯ ಹಿಂಡಿದಂತಾದ ನೋವು, ಏಳಲೂ ಆಗದೆ ಕುಳಿತುಕೊಳ್ಳಲು ಆಗದಂತೆ ಕುಳಿತ ಜಾಗದಲ್ಲಿಯೇ ಮಲಗಿಬಿಡುತ್ತಿದ್ದೆ. ಅವ್ವ ಕರೆದ ಹಾಗೆ ಆಗುತ್ತಿತ್ತು. ಏನಾಗ್ತಿದೇಂತಾನೇ ತಿಳಿಯದಾಗಿತ್ತು. ನನಗೆ ‘ಖಿನ್ನತೆ’ ಆಗ್ತಿದೆ… ಎಂದಿತ್ತು ವೈದ್ಯೆ ಮನಸ್ಸು. ಆಗ ನೆನಪಾದವರು, ನನ್ನ ಆಪ್ತ ಗೆಳೆಯರಾದ ಡಾ|| ಸಿ.ಆರ್. ಚಂದ್ರಶೇಖರ್ ಅವರು, ಅಂದೇ ಫೋನ್ ಮಾಡಿದ್ದೆ. ಅವರ ಆತ್ಮೀಯತೆ ಸ್ನೇಹದ ಮಾತುಗಳಿಂದ ನನ್ನ ಮಡುಗಟ್ಟಿದ್ದ ಭಾವನೆಗಳನ್ನು ಹೊಡೆದೆಬ್ಬಿಸಿದಂತಾಗಿತ್ತು. ಅವರ ಬಳಿ ಫೋನಿನಲ್ಲಿ ನನಗಾಗುತ್ತಿರುವ ನೋವುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದೆ. ಅಳುವಂತಾಗಿತ್ತು. ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅವರು, ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದರು.
“ನಂಗೇನಾಗ್ತಿದೆ ಸರ್…? ಹುಚ್ಚು ಹಿಡಿದಿಲ್ಲ ತಾನೆ?”
“ಛೇ…! ಅಮ್ಮನ ಸಾವಿನಿಂದ ನೀವು ಖಿನ್ನತೆಗೊಳಗಾಗ್ತಾಯಿದೀರಿ. ಈ ಮಾತ್ರೆಗಳನ್ನು ಕೆಲವು ಕಾಲ ತೆಗೆದುಕೊಳ್ಳಿ. ನಿಮ್ಮ ಕೆಲಸಕ್ಕೆ ಹೋಗಿ ಸರಿಯಾಗುತ್ತೆ. ಮನೇಲಿದ್ದರೆ ಒಂಟಿತನ ನಿಮ್ಮನ್ನು ಕಾಡುತ್ತದೆ…” ಎಂದಿದ್ದರು.
ಅವರು ಹೇಳಿದಂತಹ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದೆ. ಆಸ್ಪತ್ರೆಗೂ ಹೋಗಲಾರಂಭಿಸಿದೆ. ಆದರೆ ಮನೆಗೆ ಬಂದರೆ, ಆ ಮನೆಯಲ್ಲಿರೋ ‘ಮೌನ’ ಅವ್ವನ ನೆನಪು ನನ್ನನ್ನು ಹೆಚ್ಚು ಬಾಧಿಸತೊಡಗಿತ್ತು. ನಿತ್ಯ ಜೀವನದಲ್ಲಿ ನಿರಾಸಕ್ತಿ ಮೂಡತೊಡಗಿತ್ತು. ಯಾಂತ್ರಿಕವಾಗಿ ಓಡಾಡುತ್ತಿದ್ದೆ. ಮಾತು ನಿಂತುಹೋದಂತೆ ಕಡಿಮೆಯಾಗತೊಡಗಿತ್ತು. ನಿನ್ನ ಫೋನ್ ಕಾಲ್‌ಗಳಿಗೆ ಉತ್ತರಿಸುತ್ತಿದ್ದೆ. ಎಲ್ಲಿಗೆ ಹೋದರೂ ಒಂಟಿತನವೇ, ನನಗೆ ಕಾಡುತ್ತಿದ್ದ ಭೂತವಾಗಿತ್ತು. ಅವ್ವನಿಗೆ ಶಸ್ತ್ರ ಕ್ರಿಯೆಯಾಗುವ ಮೊದಲು ದಾವಣಗೆರೆಗೆ ಬಂದ ನಂತರ, ‘ಸುಧಾ’, ‘ಮಯೂರ’ ಪತ್ರಿಕೆಗಳಿಗೆ, ವೈದ್ಯಕೀಯದ ಬಗ್ಗೆ ನಾಲ್ಕಾರು ಪುಸ್ತಕಗಳು, ಕಾದಂಬರಿ, ಕತೆಗಳನ್ನು ಬರೆದಿದ್ದೆನಲ್ಲ. ಅವುಗಳನ್ನು ಪುಸ್ತಕವಾಗಿ ಪ್ರಕಟಿಸುತ್ತೇವೆಂದು, ನಾನು ಕೇಳಿದ್ದಕ್ಕೆ ನಿಡಸಾಲೆ ಪುಟ್ಟಸ್ವಾಮಯ್ಯನವರು. ಅಂದದ ಪುಸ್ತಕಗಳನ್ನಾಗಿ, ಮಾಡಿ Com- plimentary Copies ಕಳುಹಿಸಿದಾಗ ಕಳೆದುಕೊಂಡಿದ್ದು ಸಿಕ್ಕ ಹಾಗೆ, ನನ್ನ ಮಾನಸ ಶಿಶುಗಳಾದ ನನ್ನ ಪುಸ್ತಕಗಳ ಕಟ್ಟನ್ನು ಅಪ್ಪಿಕೊಳ್ಳುತ್ತಿದ್ದೆ. ಎಷ್ಟೇ ಲೇಖನಗಳನ್ನು ಬರೆಯುವಾಗ ಉಳಿದೆಲ್ಲವನ್ನು ಆ ಕ್ಷಣ ಮರೆತುಬಿಡುತ್ತಿದ್ದೆ… ನಿಂಗೆ ಗೊತ್ತಲ್ವಾ ಚಿನ್ನೂ…?
ಯಾರ ಜೀವನದಲ್ಲಾಗದ್ದು ನನ್ನ ಜೀವನದಲ್ಲಾಗಿರಲಿಲ್ಲ… ನಿಜ. ಆದರೆ ಅನೇಕ ಡಿಗ್ರಿಗಳನ್ನು ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ನೌಕರಿ ಮಾಡುತ್ತಿದ್ದ, ಭಾಷಣ ಮಾಡಿಬರುತ್ತಿದ್ದ ನಾನು ನನ್ನ ಬದುಕನ್ನು ಸರಿಯಾಗಿ ರೂಪಿಸಿಕೊಂಡಿರಲಿಲ್ಲ ಕಣೆ. ಬದುಕಲು ಡಿಗ್ರಿಗಳು ಬೇಕಾಗಿಲ್ಲ, ಜಾಣತನ, ಸಮಯ ಸ್ಫೂರ್ತಿಬೇಕೆಂದು ನನಗೆ ಈಗ ತಿಳಿಯುತ್ತಿದೆ. ಭಾವುಕತೆ, ಮಾನವೀಯತೆ, ಕರುಣೆಯೆಂಬುದು ನನಗೆ ಘಟಸರ್ಪಗಳಂತೆ ಸುತ್ತಿಕೊಂಡು ನಾನು ಸೋಲುವಂತೆ ಮಾಡುತ್ತಿದ್ದವು. ಹೀಗಾಗಿ ನಿನಗೆ ನನ್ನ ಕಹಿ ನೆನಪುಗಳನ್ನು ನಿನಗೆ ಬರೆದು ತಿಳಿಸುತ್ತಿದ್ದೇನೆ. ನೀನು ಜಾಣೆ. ಆದರೆ ನನ್ನ ಅನುಕರಣೆ ವೈದ್ಯಕೀಯ ವೃತ್ತಿಯಲ್ಲಿ ಮಾಡು. ಬೇರೆ ಇನ್ನಾವುದರಲ್ಲೂ ಮಾಡಬೇಡಾ, ಮಗಳೇ. ಕೆಟ್ಟ ಉದಾಹರಣೆ ಎಂಬುದನ್ನು ಅರ್ಥ ಮಾಡಿಕೊಂಡುಬಿಡು. ಒಳ್ಳೆಯ ಕ್ಷಣಗಳು, ನೆನಪುಗಳು,ಒಳ್ಳೆಯ ಸ್ನೇಹಿತರು, ನನ್ನನ್ನು ಪ್ರೀತಿ, ಆತ್ಮೀಯತೆ, ಸ್ನೇಹವನ್ನು ಕೊಟ್ಟವರ ಆ ಕ್ಷಣಗಳು, ಹೆಸರುಗಳನ್ನು ನನ್ನ ಹೃದಯದಲ್ಲಿ ಬಂಧಿಸಿಟ್ಟುಕೊಂಡಿದ್ದೇನೆ. ಆ ಕ್ಷಣಗಳು, ಹೆಸರುಗಳ ನೆನಪುಗಳು ನನ್ನ ಹೃದಯವನ್ನು ಮೃದುವಾಗಿಸುತ್ತವೆ. ಮತ್ತೆ ಕನಸುಗಳನ್ನು ಕಾಣತೊಡಗುತ್ತೇನೆ. ನನ್ನ ಕನಸುಗಳೆಂದೂ ನನಸಾಗಿರಲಿಲ್ಲ. ನನಸಾಗದ ಕನಸುಗಳು, ನೆನಪುಗಳಾಗಿ ಕಾಡತೊಡಗುತ್ತವೆ. ಆ ಭಯ ನನಗೆ…!
ವೈದ್ಯಕೀಯ ವೃತ್ತಿಯಲ್ಲಿ ಏನನ್ನೂ ಸಾಧಿಸಲಿಲ್ಲ. ಡಾಕ್ಟರ್ ಕೊಟ್ನೀಸ್, ಮದರ್ ತೆರೇಸಾ, ಪ್ಲಾರೆನ್ಸ್ ನೈಟಿಂಗೇಲ್ ಮಾಡಿದಂತೆ ಜನ ಸೇವೆಗಳನ್ನು ಮಾಡಲಿಲ್ಲ. ಯುದ್ಧಕ್ಕೆ ಹೋಗಿ ಗೆದ್ದು ಬಂದಿರಲಿಲ್ಲ… ನಾನೇನೂ ಆಗಿರಲಿಲ್ಲ. ಆದರೂ ಈ ಪುಸ್ತಕ ಬರೆಯಲು ಮನಸ್ಸು ಮಾಡಿದ್ದು, ಮೂರ್ಖತನವಾಯಿತಾ ಎಂದೆನ್ನಿಸುತ್ತದೆ. ಆದರೂ ನಾನು ಅನುಭವಿಸಿದ್ದನ್ನು ನೀನು ಅನುಕರಣೆ ಮಾಡಬಾರದು. ನೀನೇ ಯಾಕೆ ಬೇರೆ ಯಾರೂ ಮಾಡಬಾರದು. ನೀನೂ ನನ್ನನ್ನು ಅನುಕರಣೆಯನ್ನು ಎಂದೆಂದೂ ಮಾಡಬಾರದು. ನನ್ನ ವೃತ್ತಿಯ ಪ್ರಾಮಾಣಿಕತೆ, ಮಾನವೀಯತೆ, ಕರುಣೆಯನ್ನು ಬೇಕಾದರೆ ನೆನಪಿಸಿಕೋ. ನಿನ್ನದೇ ಆದ ವ್ಯಕ್ತಿತ್ವನು ಗಟ್ಟಿಮಾಡಿಕೊಂಡು ಬದುಕನ್ನು ಅರ್ಥಮಾಡಿಕೊಂಡು ಕಟ್ಟಿಕೋ. ಹೀಗಾಗಿಯೇ ನಾನು ನಿನ್ನ ಸ್ಕೂಲ್ ದಿನಗಳು ಮುಗಿಯುತ್ತಿದ್ದ ಹಾಗೆಯೇ ನಿನ್ನ ಸ್ವಂತ ತಾಯಿ-ತಂದೆಯರ ಬಳಿ ಕಳುಹಿಸಿದ್ದು. ನನ್ನ ನೆರಳು ನೀನಾಗಬಾರದು ಎಂದು ಹಾಗೆ ಮಾಡಿದ್ದೆ. ನಿನ್ನ ಜಾತಿ, ಸಂಪ್ರದಾಯ ಸಂಸ್ಕಾರಗಳಲ್ಲಿ ನೀನು ಬೆಳೆಯಬೇಕಿತ್ತು. ಸಂಬಂಧ, ಬಾಂಧವ್ಯಗಳ ಗಂಟು ನಿನ್ನಲ್ಲಿ ಬೆಳೆಯಬೇಕು, ಎಂದೂ ನೀನು ನನ್ನ ಹಾಗೆ ಒಂಟಿಯಾಗಬಾರದು… ಸುತ್ತಲೂ ಬಂಧು- ಬಾಂಧವರ ಆಚಾರ-ವಿಚಾರಗಳ, ಸಂಪ್ರದಾಯ ಸಂಸ್ಕಾರಗಳ ಭದ್ರ ಕೋಟೆಯಲ್ಲಿ ನೀನು ಸುರಕ್ಷಿತವಾಗಿರಬೇಕೆಂಬ ಆಸೆಯೇ, ನಿನ್ನನ್ನು ದತ್ತು ತೆಗೆದುಕೊಳ್ಳಲು ತಡೆದಿದ್ದು. ನಿನ್ನ ತಾಯಿ-ತಂದೆಯರ ವಿಶ್ವಾಸ, ಪ್ರೀತಿ ನನಗೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ಕೊಟ್ಟಿದೆ ಕಣೆ.
*****
ಮುಂದುವರೆಯುವುದು