ಮೂಲ: ವಿಲಿಯಂ ಬಟ್ಲರ್ ಏಟ್ಸ್
ದೂರ ಆ ಕಂಬಕ್ಕೆ ಕಟ್ಟಿಬಿಡಿ ಕುದುರೆ,
ನಾಯಿ ಬೊಗಳದೆ ಇರಲಿ,
ಘೋರ ಕಾಳಗ ನಾಳೆ, ಸೋತು ನಾಗರಿಕತೆ
ಮಣ್ಣಾಗದಿರಲಿ;
ಡೇರೆಯೊಳಗಡೆ ಸೀಜರ್, ಕೈಯಲ್ಲೂರಿದ ತಲೆ
ಯಾವುದೋ ಧ್ಯಾನ,
ಶೂನ್ಯ ಸುರಿಯುವ ನೋಟ, ಎದುರು ಹರಡಿದ ನಕ್ಷೆ
ಎಲ್ಲಿಯೋ ಜ್ಞಾನ.
ನೀರ ಹಾಳೆಯ ಮೇಲೆ ಉದ್ದಕಾಲಿನ ಕೀಟ ಸರಿವ ಚಿತ್ರ,
ಮೌನದಾಳದ ಮೇಲೆ ಚಲಿಸಿದೆ ನಿಧಾನ ಅವನ ಚಿತ್ತ.
ಯಾರೂ ಬಾರದ ಜಾಗ, ಬರಬೇಕೇ ನೀವು?
ಬನ್ನಿ ಮೆಲ್ಲಗೆ ಹೆಜ್ಜೆಯಿರಿಸಿ,
ನೆತ್ತಿ ಕಾಣದ ಕೋಟೆ ಹೊತ್ತಿ ಉರಿಯಲಿ ಅವಳ
ಮುಖವ ನೆನಪಿಗೆ ತರಿಸಿ,
ಕಾಲುಭಾಗಕ್ಕಷ್ಟೆ ಪ್ರೌಢೆ, ಮುಕ್ಕಾಲು ಬಾಲೆ
ಯಾರೂ ಕಾಣರು ಎಂಬ ಮರುಳು,
ಯಾವ ಗಲ್ಲಿಯೊಳೊ ಹೆಕ್ಕಿದ ನಡಿಗೆ ಬಿನ್ನಾಣ
ಅಭ್ಯಾಸ ಮಾಡುತಿದೆ ಕಾಲು.
ನೀರ ಹಾಳೆಯ ಮೇಲೆ ಉದ್ದಕಾಲಿನ ಕೀಟ ಸರಿವ ಚಿತ್ರ,
ಮೌನದಾಳದ ಮೇಲೆ ಚಲಿಸಿದೆ ನಿಧಾನ ಅವರ ಚಿತ್ತ.
ಚರ್‍ಚಿನ ದ್ವಾರವನು ಮುಚ್ಚಿಬಿಡಿ, ಮಕ್ಕಳನು
ಕಳಿಸಿಬಿಡಿ ಹೊರಗೆ,
ಮೊದಲ ಆದಮ ಬರಲಿ, ಮೈನೆರೆದ ಹೆಣ್ಣುಗಳ
ಹೂಗನಸಿನೊಳಗೆ,
ಮೇಲೆ ಸಾರುವೆ ಹತ್ತಿ ಒರಗಿ ಕೂತಿದ್ದಾನೆ
ಮೈಕೇಲೇಂಜಲೊ,
ಅಷ್ಟಿಷ್ಟೆ ಸರಿವ ಕೈ, ತೀರ ಸಣ್ಣಗೆ ಸದ್ದು
ಚಿಕ್ಕ ಇಲಿ ಸರಿದಂತೆ ಎಲ್ಲೊ.
ನೀರ ಹಾಳೆಯ ಮೇಲೆ ಉದ್ದಕಾಲಿನ ಕೀಟ ಸರಿವ ಚಿತ್ರ,
ಮೌನದಾಳದ ಮೇಲೆ ಚಲಿಸಿದೆ ನಿಧಾನ ಅವನ ಚಿತ್ತ.
*****