ಯಾವ ಗೋರಿಯಲಿ ಯಾರ ಶವವಿದೆ
ಏನು ಹೆಸರು ನನಗೇನು ಗೊತ್ತು?
ಯಾವ ಚಹರೆ, ಯಾವ ಬಣ್ಣ, ಯಾರಿಗೆ ಗೊತ್ತು?
ಯಾಕೆ ಕೊಲೆಯಾದೆ, ಯಾರು ಕೊಂದರು
ಕೊಲೆಗಾರನ ಹೆಸರು ಗೊತ್ತಿಲ್ಲ ನನಗೆ,
ಗೋರಿಗಳ ನಿಶಾನೆ ಅಳಿಸಿ ಹೋಗುತ್ತಿವೆ
ಹೊದಿಸಿದ ಆ ಚಾದರದ ಮೇಲಿನ ಹೂ
ತುಸುವೇ ಪಕ್ಕಕ್ಕೆ ಸರಿಸಿ ನೋಡಿದೆ
ಅಲ್ಲಿರುವ ರಕ್ತದ ಕಲೆಗಳು ಯಾರವು?
ಯಾರಿಗೆ ಗೊತ್ತು ಕೊಲೆಗಡುಕನ ಹೆಸರು?
ಆ ಗೋರಿಯ ಬಳಿ ನಿಂತ ಅವರು
ಎರಡೂ ಕೈಗಳ ಮೇಲೆತ್ತಿ ಅಲ್ಲಾಹ್‌ನಲಿ
ಪ್ರಾರ್ಥಿಸುತ್ತಾರೆ – ದುವಾ ಹೇಳುತ್ತಿದ್ದಾರೆ ನೋಡು
ಅದು ಪುಣ್ಯವಂತರ ಸಮಾಧಿಯಿರಬೇಕು
ಹೊಸ ಚಾದರ ಹೊದಿಸಿದ್ದಾರೆ
ಮಕಮಲ್ಲಿನ ಮೃದು, ಮಲ್ಲಿಗೆ ಸುವಾಸನೆ
ಅತ್ತರು ಸಿಡಿಸಿ, ಊದುಬತ್ತಿ ಹಚ್ಚಿದ್ದಾರೆ
ಕೆತ್ತಿದ ಕುಸುರಿ ಕಲ್ಲು ನೆಟ್ಟಿದ್ದಾರೆ
ಗೋರಿಯ ನಿಶಾನೆ ಹಾಗೇ ಉಳಿದಿದೆ ನೋಡು
ನನ್ನ ಗೋರಿಯ ನಿಶಾನೆ ಅಳಿಸಿ ಹೋಗುತ್ತಿದೆ,
ನನ್ನ ಮುಖವೇ ನನಗೆ ಕಾಣುತ್ತಿಲ್ಲ
ಕಫನ್ನಿನ ಬಟ್ಟೆಯಿಂದ ಮುಚ್ಚಿದ್ದಾರೆ ನೋಡು
ನನ್ನ ಕೊಲೆಗಾರ ಗೋರಿ ಗಿಡುಗನೇ
ನಿನ್ನ ಪಾಪದ ಕೃತ್ಯಗಳನ್ನು
ನನ್ನ ಚಾದರಕ್ಕೆ ತಗುಲಿದೆ
ಈ ರಕ್ತ ಕಲೆಗಳೇ ಹೇಳುತ್ತಿವೆ
ನನ್ನ ಕೊಂದವರು ಯಾರು ಎಂದು.
ನಾನೇಕೆ ಸಾಬೀತು ಪಡಿಸಲಿ ಹೇಳು?
*****