ಮೂಲ: ವಿಲಿಯಂ ಬಟ್ಲರ್ ಏಟ್ಸ್
ಜೊತೆಯಲ್ಲೋದುವ ಖಾಸಾ ಗೆಳೆಯರಿಗೆ ಅನಿಸಿತ್ತು
ಖ್ಯಾತನಾಗಿಯೆಬಿಡುವ ಈತ ಎಂದು.
ಅವನೂ ಹಾಗೇ ತಿಳಿದ, ನಿಯಮ ಬಿಡದೇ ನಡೆದ,
ಶ್ರಮಿಸುತ್ತಲೇ ಕಳೆದ ಹರೆಯವನ್ನು;
‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು?’
ಜನತೆ ಓದಿತು ಅವನು ಬರೆದೆಲ್ಲವನ್ನೂ
ದುಡಿದ ಕೆಲದಿನದಲ್ಲೆ ತನ್ನೆಲ್ಲ ಅಗತ್ಯಕ್ಕೆ
ಸಾಕೆನಿಸುವಂತೆ ಕೈತುಂಬ ಹಣವನ್ನು
ಗೆಳೆಯರಾದರು ಆಗಬೇಕಾದಂಥವರೇ;
‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು?’
ಸುಖದ ಕನಸುಗಳೆಲ್ಲ ನನಸಾಗಿ ಎಟುಕಿದವು.
ಪುಟ್ಟ ಹಳೆ ಮನೆ, ಮಡದಿ, ತಕ್ಕ ಮಗ, ಮಗಳು
ಮಾವು ಕೋಸುಗಳ ಹುಲುಸಾಗಿ ಬೆಳೆಯುವ ತೋಟ,
ಸುತ್ತ ನೆರೆದರು ಬುದ್ದಿಜೀವಿಗಳು, ಕವಿಗಳು
‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು?’
ಮುದುಕನಾದಂತೆ ಅನಿಸಿತು, ‘ಎಲ್ಲ ನಡೆಯಿತು
ಹುಡುಗುತನದಲಿ ಕನಸಿದಂತೆ ನಾನು;
ಮೂರ್‍ಖರರಚಿದರೇನು, ನಾನು ಗುರಿಗೆಡಲಿಲ್ಲ
ಪರಿಪೂರ್‍ಣವಾಗಿಸಿದೆ ಸ್ವಲ್ಪವನ್ನು;’
ಮೊದಲಿಗಿಂತ ಭೂತ ಜೋರಾಗಿ ಹಾಡಿತು, ‘ಮತ್ತೇನು, ಮತ್ತೇನು?’
*****