ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ

ಮೂರ್ತಿಯು ಸಂಜೆ ಕಛೇರಿ ಮುಗಿಸಿ ಮನೆಗೆ ವಾಪಾಸಾಗುವಾಗ ದಾರಿಯಲ್ಲಿ ಆ ನಾಯಿಮರಿಯನ್ನು ಕಂಡನು. ಅದು ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಸರಿ ಒಡಾಡಲೂ ಆಗದೆ ದೈನಾವಸ್ಥೆಯಲ್ಲಿ ಜೋಲು ಮೋರೆ ಹಾಕಿ ಕೂತಿತ್ತು. ಇನ್ನೇನು ಯಾವುದಾದರೂ ಕಾರು, ಆಟೋ, ಬಸ್ಸಿನ ಅಡಿ ಬಿದ್ದು ಅಪ್ಪಚ್ಚಿಯಾಗುವುದರಲ್ಲಿತ್ತು. ಅದರ ಎರಡು ಉದ್ದನೆ ಕಿವಿ, ಕಪ್ಪು ಬಿಳಿ ಬಣ್ಣ, ಹಣೆಯಲ್ಲೊಂದು ಬಿಳಿ ಮಚ್ಚೆ, ಅದನ್ನು ಅತ್ಯಂತ ಆಕರ್ಷಕವನ್ನಾಗಿಸಿತ್ತು. ಅವನ ಗಮನ ಸೆಳೆದದ್ದು ಅದರ ಮುದ್ದಾದ ಮೈಬಣ್ಣ.

ಅವನ ಪುಟಾಣಿ ಮಗಳು ಮನೆಗೊಂದು ನಾಯಿಮರಿ ಬೇಕೆಂದು ಅವನನ್ನು ಪೀಡಿಸುತ್ತಿದ್ದಳು. ಅಣ್ಣ ಶಾಲೆಗೆ ಹೋದ ಮೇಲೆ ಮನೆಯಲ್ಲಿ ಅವಳಿಗೆ ತುಂಬಾ ಬೋರಾಗುತ್ತಿತ್ತು. ನಾಯಿ ಬೇಕೆಂದು ಅದೆಷ್ಟು ಸಲ ಅಂಗಲಾಚಿದ್ದಳೋ. ಅವಳಿಗೆ ನಾಯಿಮರಿ ಪದ್ಯವೆಂದರೆ ಪ್ರೀತಿ. ಅವಳ ಆಸೆ ಅತಿಯಾದಾಗ ಅವಳಪ್ಪ ನಾಯಿಮರಿಗಳ ಎರಡು ಗೊಂಬೆ ತಂದುಕೊಟ್ಟಿದ್ದ. “ಇದಲ್ಲಾ… ನನಗೆ ನಿಜವಾದ ನಾಯಿಮರಿಯೇ ಬೇಕು” ಎಂದು ಚಂಡಿ ಹಿಡಿದ ಅವಳನ್ನು ಸಮಾಧಾನಿಸಲು ಅವಳಪ್ಪ ಅಮ್ಮನಿಗೆ ಸಾಕಾಗಿ ಹೋಯ್ತು.

ಈಗ ಪುಟಾಣಿ ನಾಯಿ ಮರಿಯೊಂದು ಕಣ್ಣಿಗೆ ಬಿದ್ದಾಗ ನಾಯಿಮರಿಗಾಗಿ ಚಂಡಿ ಹಿಡಿಯುವ ಮಗಳ ಮುಖ ಮೂರ್ತಿಯ ಕಣ್ಣಿಗೆ ಕಟ್ಟಿದಂತಾಯಿತು. ಅವನಿಗೆ ಖಚಿತವಾಗಿ ಗೊತ್ತಿತ್ತು ಅದೊಂದು ಹೆಣ್ಣು ಮರಿಯೆಂದು. ಹೆಣ್ಣು ಮರಿಗಳನ್ನು ಯಾರೂ ಸಾಕುವುದಿಲ್ಲ. ಅವನ್ನು ಎಲ್ಲೆಲ್ಲೋ ಬಿಟ್ಟು ಬಿಡುತ್ತಾರೆ. ಅವು ಹೊಟ್ಟೆಗಿಲ್ಲದೆ ಅರಚಿ ಯಾವುದೋ ವಾನಗಳ ಕೆಳಗೆ ಬಿದ್ದು ಅಪ್ಪಚ್ಚಿಯಾಗುತ್ತವೆ. ಅಥವಾ ದೊಡ್ಡ ಗಂಡು ಬೀದಿ ನಾಯಿಗಳು ಅವುಗಳನ್ನು ಕೊಂದು ಹಾಕಿ ಬಿಡುತ್ತವೆ. ಅವನಿಗೆ ಮನುಷ್ಯರ ವರ್ತನೆಯೇ ವಿಚಿತ್ರವೆನಿಸಿತು. ಎಲ್ಲಾ ಮನುಷ್ಯರು ಹೇಂಟೆ ಇರಲಿ ಎಂದು ಬಯಸುತ್ತಾರೆ. ಮೊಟ್ಟೆ ಸಿಗತ್ತದಲ್ಲಾ! ಆಕಳು ಮರಿ ಬರಲೆಂದು ಹಾರೈಸುತ್ತಾರೆ. ಹಾಲು ಕೊಡುತ್ತದಲ್ಲಾ? ಹೆಣ್ಣು ನಾಯಿಮರಿ ಯಾರಿಗೂ ಬೇಡ. ಅವನ್ನು ಹೇಗೋ ನಿವಾರಿಸಿಕೊಳ್ಳುತ್ತಾರೆ. ಪಾಪ ಶ್ರಾವಣದಲ್ಲಿ ಗಂಡು ನಾಯಿಗಳ ಪಾಡು ಯಾರಿಗೂ ಬೇಡ.

ಮೂರ್ತಿ ನಾಯಿ ಮರಿಯೊಂದನ್ನು ತರುವ ಬಗ್ಗೆ ಹೆಂಡತಿಯೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದನು. ಅವಳು “ಪಮೇರಿಯನ್ ಆದರೆ ತನ್ನಿ. ಅಥವಾ ಆಲ್‌ಶೇಷಿಯನ್. ಅದಿಲ್ಲದಿದ್ದರೆ ಮುದೋಳದ ಬೇಟೆನಾಯಿಯೂ ಆದೀತು. ಕಂತ್ರಿ ನಾಯಿ ಬೇಡವೇ ಬೇಡ” ಎಂದಿದ್ದಳು. ಅವಳು ಹೇಳಿದಂತಹ ನಾಯಿಮರಿಗಳನ್ನು ತಂದು ಸಾಕಲು ತನ್ನ ಸಂಬಳ ಸಾಲದೆನ್ನುವುದು ಅವನಿಗೆ ಖಚಿತವಾಗಿ ಗೊತ್ತಿತ್ತು. ಒಂದು ಪಮೇರಿಯನ್ ಅಥವಾ ಆಲ್‌ಶೇಷಿಯನ್ ಸಾಕುವ ಖರ್ಚಲ್ಲಿ ಇಬ್ರು ಮನುಷ್ಯರನ್ನು ಧಾರಾಳ ಸಾಕಬಹುದು ಎಂದು ಅವನು ಹೆಂಡತಿಯೊಡನೆ ಹೇಳಿದ್ದ. ನಾಯಿಮರಿ ಸಾಕುವ ಆಲೋಚನೆಯನ್ನೇ ಕೈಬಿಟ್ಟಿದ್ದ.

ಆದರೆ, ಈಗ ಈ ಕಪ್ಪು ಬಿಳಿ ಹೆಣ್ಣು ಮರಿಯನ್ನು ಕಾಣುವಾಗ ಅವನ ಹೃದಯ ಬಾಯಿಗೆ ಬಂದಂತಾಯಿತು. ಪಾಪ! ಎಷ್ಟು ಮುದ್ದಾಗಿದೆ. ಈ ಮಾನವ ಎಷ್ಟು ನಿಷ್ಕರುಣಿ. ಹೆಣ್ಣಿಗಾಗಿ ಹಂಬಲಿಸುತ್ತಾನೆ. ಅವಳಿಗಾಗಿ ಸಮಯ, ಹಣ ವ್ಯಯಿಸುತ್ತಾನೆ. ಹೆಣ್ಣನ್ನು ಸ್ಪೂರ್ತಿ ಅಂದುಕೊಳ್ಳುತ್ತಾನೆ. ಆದರೆ ಹೆಣ್ಣು ನಾಯಿಮರಿಯನ್ನು ಬೀದಿಗೆ ಬಿಡುತ್ತಾನೆ. ಅವನದೇ ಸ್ವಂತ ಮಗು ಹೆಣ್ಣಾದರೆ ಅದನ್ನು ಬೀದಿಪಾಲು ಮಾಡುತ್ತಾನೆಯೆ? ಇಂಥವರನ್ನು ಪಾಪ ಪ್ರಜ್ಞೆ ಏಕೆ ಕಾಡುವುದಿಲ್ಲ?

ಮೂರ್ತಿ ನಾಯಿಮರಿಯತ್ತ ಧಾವಿಸಿದ. ಅದನ್ನು ಬಾಚಿ ಎತ್ತಿಕೊಂಡ. ಅದು ನಡುಗುತ್ತಾ ಮುಲುಗುಟ್ಟಿತು. ಯಾವಾಗಲೂ ಸಿಟಿಬಸ್ಸಿಗೆ ಕಾಯುವ ಮೂರ್ತಿ ಅಂದು ಆಟೋವೊಂದನ್ನು ನಿಲ್ಲಿಸಿ ನಾಯಿಮರಿಯೊಡನೆ ಅದರೊಳಗೆ ನುಗ್ಗಿದ. ದಾರಿಯಲ್ಲಿ ಬೇಕರಿಯೊಂದರಿಂದ ಬ್ರೆಡ್ಡು, ರಸ್ಕು ಮತ್ತು ನಂದಿನಿ ಮಿಲ್ಕ್ ಪಾರ್ಲರಿನಿಂದ ಹಾಲು ತೆಗೆದುಕೊಂಡು ಬಂದ.

ಬೇಗ ಬಂದ ಗಂಡನ ಕೈಯಲ್ಲಿನ ಹೆಣ್ಣು ನಾಯಿಮರಿಯನ್ನು ನೋಡಿ ಅವನ ಹೆಂಡತಿಯ ಮುಖ ದಪ್ಪಗಾಯಿತು. “ಈ ದರಿದ್ರದ್ದನ್ನು ಯಾಕೆ ತಂದ್ರಿ? ಕಂತ್ರಿ ಹೆಣ್ಣು ನಾಯಿಮರಿಯನ್ನು?” ಎಂದು ಗಂಡನನ್ನು ಗದರಿಕೊಂಡಳು. “ಬಿಡೇ, ಪಾಪ ಸಾಯೋದ್ರಲ್ಲಿತ್ತು. ನಮ್ಮ ಪಾಪು ನಾಯಿಮರಿಗೆ ಅಲವತ್ತು ಕೊಳ್ಳುತ್ತಿತ್ತಲ್ಲಾ? ಹಾಗೆ ತಂದು ಬಿಟ್ಟೆ” ಎಂದ. ಮಗಳಿಗೆ ನಾಯಿಮರಿಯನ್ನು ನೋಡಿ ತುಂಬಾ ಖುಷಿಯಾಯಿತು. ಅದು ಹಾಲು ಕುಡಿಯುವುದನ್ನು, ಬ್ರೆಡ್ಡು ತಿನ್ನುವುದನ್ನು ನೋಡಿ ಕೈ ತಟ್ಟಿ ಕುಣಿದಳು. ಮೂರ್ತಿ ಅದಕ್ಕೆ ಶಾಂಪೂ ಹಾಕಿ ಬೆಚ್ಚನೆಯ ನೀರಲ್ಲಿ ಸ್ನಾನ ಮಾಡಿಸಿ ಹಳೆಯ ಟವಲೊಂದರಲ್ಲಿ ಮೈ ಉಜ್ಜಿದ. ಅದು ಅವನ ಮಗಳೊಡನೆ ಮಲಗಿ ಹಾಯಾಗಿ ನಿದ್ದೆ ಮಾಡಿತು.

ಮರುದಿನ ಬೆಳಿಗ್ಗೆ ಮೂರ್ತಿ ಏಳುವ ಮೊದಲು ಅವನ ಹೆಂಡತಿ ಸುಪ್ರಭಾತ ಆರಂಭಿಸಿದಳು. “ಹಾಳಾದ ನಾಯಿ, ಎಲ್ಲೆಂದರಲ್ಲಿ ಇಸ್ಸಿ ಹೊಯ್ದಿದೆ. ಎರಡು ಕಡೆ ಕಕ್ಕ ಮಾಡಿದೆ. ನಾನು ನೋಡದೆ ತುಳಿದುಬಿಟ್ಟೆ. ಛೀ! ಅಸಹ್ಯ. ಸುಮ್ಮನೆ ಆ ನಾಯಿಮರಿಯನ್ನು ಎಲ್ಲಾದರೂ ಬಿಟ್ಟು ಬನ್ನಿ.”

ಗಡಬಡಿಸಿ ನಿದ್ದೆಯಿಂದೆದ್ದ ಮೂರ್ತಿಗೆ ವಸ್ತುಸ್ಥಿತಿ ಏನೆಂದು ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು. ಅವನು ನಾಯಿಮರಿಯನ್ನು ನೋಡಿದ. ಅದು ಮಗಳೊಟ್ಟಿಗೆ ಮಲಗಿ ಕೊಂಡಿದೆ. “ಏನೇ ನಿನ್ನದು ಪಿರಿಪಿರಿ? ಆ ನಾಯಿಮರಿಗೆ ಎಷ್ಟು ಬುದ್ಧಿ ಇದೆ ನೋಡು. ಅದು ಹಾಸಿಗೆಯಲ್ಲಿ ಇಸ್ಸಿ, ಕಕ್ಕ ಮಾಡಿಲ್ಲ. ನಿನ್ನ ಮಗಳು ಹಾಸಿಗೆಯಲ್ಲೇ ಮಾಡ್ತಿದ್ಲಲ್ಲಾ? ಆಗ ಹೇಗೆ ಸಹಿಸಿಕೊಂಡಿ? ಇನ್ನು ಮುಂದೆ ರಾತ್ರೆ ಮತ್ತು ಬೆಳಿಗ್ಗೆ ನಾನದನ್ನು ಹೊರಗೆ ಕರಕೊಂಡು ಹೋಗ್ತೇನೆ. ಮಧ್ಯಾಹ್ನ ಮಗಳು ಹೊರಗೆ ಕರಕೊಂಡು ಹೋಗಿ ಇಸ್ಸಿ ಮತ್ತು ಕಕ್ಕ ಮಾಡಿಸಲಿ.”

ಮೂರ್ತಿಯ ಮಾತು ನಿಜವಾಯಿತು. ಹಾಗೆ ರಾತ್ರೆ ಮತ್ತು ಬೆಳಿಗ್ಗೆ ಅವನು, ಮಧ್ಯಾಹ್ನ ಅವನ ಮಗಳು ನಾಯಿ ಮರಿಯನ್ನು ಇಸ್ಸಿ ಮತ್ತು ಕಕ್ಕಕ್ಕೆ ಮನೆಯಿಂದ ಹೊರಗೆ ಕರಕೊಂಡು ಹೋಗಲು ತೊಡಗಿದ ಮೇಲೆ ಅದು ಮನೆಯೊಳಗೆ ಗಲೀಜು ಮಾಡಲೆ ಇಲ್ಲ. ಈಗೀಗ ಮೂರ್ತಿಯ ಹೆಂಡತಿಗೂ ನಾಯಿಮರಿ ಇಷ್ಟವಾಗತೊಡಗಿತು. ಅದಕ್ಕೆ ಜ್ಯೋತಿ ಎಂದು ಅವಳೇ ಹೆಸರಿಟ್ಟು ಬಿಟ್ಟಳು. ಮೂರ್ತಿಗೂ ಆ ಹೆಸರು ಪ್ರಿಯವಾಯಿತು.

ನಾಯಿಮರಿ ಈಗ ಬಲಿತು ಹೆಣ್ಣು ನಾಯಿಯಾಯಿತು. ಆ ವರ್ಷದ ಶ್ರಾವಣ ಬಂದಾಗ ಮೂರ್ತಿಯ ಮನೆಯೆದುರು ಗಂಡುನಾಯಿಗಳು ಜಮಾವಣೆಯಾಗಿ ತೃತೀಯ ಮಹಾಯುದ್ಧ ಆರಂಭಿಸಿದವು. ಅವುಗಳ ಚಿತ್ರವಿಚಿತ್ರ ಆರ್ತನಾದ, ಬೊಗಳುವಿಕೆ, ವಿಶಿಷ್ಟ ನಾದದ ಸ್ವರಗಳು ಮೂರ್ತಿಯ ಮನೆಯವರ ನಿದ್ದೆಕೆಡಿಸತೊಡಗಿದವು. ಜ್ಯೋತಿಯನ್ನು ಹೊರಗಡೆ ಇಸ್ಸಿ ಮತ್ತು ಕಕ್ಕಕ್ಕೆ ಕರಕೊಂಡು ಹೇದಾಗಲೆಲ್ಲಾ ಗಂಡುನಾಯಿಗಳು ಮೂರ್ತಿಯನ್ನು ಕ್ಯಾರೇ ಮಾಡದೆ ಜ್ಯೋತಿಯನ್ನು ಹಿಂಬಾಲಿಸಿ ಬಿಡುತ್ತಿದ್ದವು. ಮೂರ್ತಿ ಕಲ್ಲೆತ್ತಲೆಂದು ಬಾಗಿದರೆ ಅವನನ್ನೆ ಗುರ್‍ರೆಂದು ಹೆದರಿಸತೊಡಗಿದವು. ಜ್ಯೋತಿಯೂ ಸರಪಣಿ ಬಿಚ್ಚಿ ಅವುಗಳೊಡನೆ ಹೋಗಲು ಹೆಣಗಾಡ ತೊಡಗಿತು. ಅದು ಹೇಗೋ ಮೂರ್ತಿ ಅದನ್ನು ಸಂಭಾಳಿಸಿ ಮನೆಗೆ ಕರಕೊಂಡು ಬಂದ. ಅವ ಬಾಗಿಲು ತೆಗೆದು ಒಳ ನುಗ್ಗುವಾಗ ಗಂಡುನಾಯಿಗಳ ಒಂದು ಹಿಂಡೇ ಅವನ ಹಿಂದೆ ನುಗ್ಗಿ ಬಿಟ್ಟಿತು. ಅವುಗಳನ್ನು ನೋಡಿ ಅವನ ಹೆಂಡತಿ, ಮಗ, ಮಗಳು ಏನು ಮಾಡುವುದೆಂದು ದಿಗ್ಬ್ರಾಂತರಾಗಿ ನಿಂತು ಬಿಟ್ಟರು. ಕೊನೆಗೆ ಮೂರ್ತಿ ಜ್ಯೋತಿಯನ್ನು ಮಂಚದ ಕಾಲಿಗೆ ಕಟ್ಟಿ ಹಾಕಿ ಮೂಲೆಯಲ್ಲಿದ್ದ ಸರಳೊಂದರಿಂದ ಒಂದು ನಾಯಿಗೆ ಬಡಿದ. ಅದು ಕಿರ್‍ರೋ ಮರ್‍ರೋ ಎಂದು ಹೊರಗೆ ಓಡಿತು. ಈಗ ಮೂರ್ತಿಯ ಹೆಂಡತಿಗೆ ಧೈರ್ಯ ಬಂದು ಕಸಬರಿಕೆ ತಂದು ನಾಯಿಯೊಂದರ ಮುಖ ಮೂತಿ ನೋಡದೆ ಚಚ್ಚಿದಳು. ಮಗ ಕ್ರಿಕೆಟ್ಟು ಬ್ಯಾಟು ತಂದು ಎರಡು ನಾಯಿಗಳಿಗೆ ಬೌಂಡರಿ ಬಾರಿಸಿದ. ಹಾಗೂ ಹೀಗೂ ನಾಯಿಗಳೆಲ್ಲಾ ಒಡಿ ಹೋದ ಮೇಲೆ ಮೂರ್ತಿ ಉಸ್ಸಪ್ಪಾ ಎಂದು ಉಸಿರುಬಿಟ್ಟ.

ಅಂದು ಅವನಿಗೆ ಕಛೇರಿಯಲ್ಲಿ ಮನಸ್ಸಿಟ್ಟು ಕೆಲಸ ಮಾಡಲಾಗಿಲಿಲ್ಲ. ನಾಯಿಗಳು ಇನ್ನು ಏನೇನು ಮಾಡಿ ಹಾಕುತ್ತವೋ ಎಂಬ ಗಾಬರಿಯಲ್ಲಿ ದಿನ ಕಳೆಯಿತು. ಯಾರಿಗಾದರೂ ಈ ಬೀದಿನಾಯಿಗಳು ಕಚ್ಚಿ ಬಿಟ್ಟರೇನು ಗತಿ? ಮತ್ತೆ ಹೊಕ್ಕುಳ ಸುತ್ತ ೧೩ ಇಂಜೆಕ್ಷನ್ನು ತೆಗೆದುಕೊಳ್ಳಬೇಕಲ್ಲಪ್ಪಾ. ದೇವ್ರೇ ಎಂದು ಚಿಂತಾಕ್ರಾಂತನಾದ. ಹಾಗೂ ಹೀಗೂ, ಹೇಗೋ ಮನೆಗೆ ಬಂದು ತಲುಪಿದ.

ಮನೆಯ ಹೊರಗೆ ಒಂದೇ ಒಂದು ನಾಯಿ ಅವನಿಗೆ ಕಾಣಸಿಗಲಿಲ್ಲ. ಯಾವ ದೇವರು ಅದೇನು ಪವಾಡ ಮಾಡಿ ಬಿಟ್ಟನೋ ಎಂದು ಅವ ಖುಷಿಯಿಂದ ಕಾಲಿಂಗ್ ಬೆಲ್ಲು ಒತ್ತಿದ. ಮಗಳು ಓಡಿ ಬಂದು ಬಾಗಿಲು ತೆರೆದಳು. ಅವಳ ಮುಖ ಮೌನವಾಗಿತ್ತು. “ಏನಾಯಿತು ಮಗಳೇ” ಎಂದು ಮೂರ್ತಿ ಕೇಳಿದ್ದಕ್ಕೆ “ಮಧ್ಯಾಹ್ನ ನಾನು ಜ್ಯೋತಿನ ಹೊರಗೆ ಕರ್ಕೊಂಡು ಹೋಗಿದ್ದೆ. ಅದು ನನ್ನ ಕೈಯಿಂದ ಬಿಡಿಸಿಕೊಂಡು ನಾಯಿಗಳೊಟ್ಟಿಗೆ ಓಡಿ ಹೋಯ್ತು” ಎಂದು ಅತ್ತೇ ಬಿಟ್ಟಳು. ಮೂರ್ತಿ ಹೆಂಡತಿಯ ಮುಖ ನೋಡಿದ. ಹಾಳಾಗಿ ಹೋಗಲಿ ದರಿದ್ರದ್ದು ಎಂಬಂತಿತ್ತು ಅವಳ ಮುಖ ಭಾವ. ಮೂರ್ತಿ ಮಗಳನ್ನು ಅಪ್ಪಿ ಸಂತೈಸಿದ. “ಹೋಗಲಿ ಮಗಳೇ, ನಿನಗೆ ಇನ್ನೊಂದು ಮರಿ ತಂದು ಕೊಡುತ್ತೇನೆ” ಎಂದ. ಮೂರ್ತಿಯ ಹೆಂಡತಿ “ನೀವು ಒಂದು ತಂದದ್ದೇ ಸಾಕು. ಇನ್ನೆಂದು ಈ ಮನೆಗೆ ನಾಯಿಮರಿ ತರಬೇಡಿ” ಎಂದು ಸಿಡುಕಿದಳು.

ಶ್ರಾವಣ ಮುಗಿದು ಮೂರು ದಿನ ಆಗಿತ್ತು. ಒಂದು ಬೆಳಿಗ್ಗೆ ಯಾರೋ ಬಾಗಿಲು ಬಡಿದಂತಾಗಿ ಮೂರ್ತಿ ಹೋಗಿ ನೋಡಿದರೆ ಜ್ಯೋತಿ ಬಾಲವನ್ನು ಬಾಗಿಲಿಗೆ ಬಡಿಯುತ್ತಾ ನಿಂತುಕೊಂಡಿದೆ. ನೆಟ್ಟಗೆ ಒಳಗೆ ಬಂದ ಜ್ಯೋತಿ ಮೂರ್ತಿಯ ಮಗಳ ಹಾಸಿಗೆಯ ಬಳಿಗೆ ಬಂದು ಅವಳನ್ನು ನೆಕ್ಕಿ ಎಬ್ಬಿಸಿಯೇ ಬಿಟ್ಟಿತು. “ಅಮ್ಮಾ…. ಜ್ಯೋತಿ ಬಂದ್ಲು” ಎಂದು ಸಂಭ್ರಮದಿಂದ ಮಗಳು ನುಡಿದಳು. ಅಮ್ಮ, ಅಣ್ಣ ಜ್ಯೋತಿಯ ಬಳಿಗೆ ಬಂದಾಗ ಅದು ಕುಯಿಂ ಕುಯಿಂ ಮಾಡುತ್ತಾ ಎಲ್ಲರನ್ನೂ ಮೂಸಿ ಮೂಸಿ ನೆಕ್ಕಿ ಮುಜುರೆ ಸಲ್ಲಿಸಿತು.

“ಈ ದರಿದ್ರಕ್ಕೆ ಕಳೆದ ಇಪ್ಪತ್ತು ದಿನ ನಾವು ಯಾರೂ ಬೇಕಿರಲಿಲ್ಲ. ಈಗ ಬಂದಿದೆ ಮುಂಡೇದು. ಎಲ್ಲಾದ್ರೂ ಕೊಂಡು ಹೋಗಿ ಬಿಟ್ಟು ಬನ್ನಿ” ಎಂದು ಮೂರ್ತಿಯ ಹೆಂಡತಿ ಸಿಡುಕಿದಳು. ಅವಳ ಕೋಪ ಅರ್ಥವಾದಂತೆ ಜ್ಯೋತಿ ಮೂರ್ತಿಯ ಮಗಳ ಹತ್ತಿರ ಬಂದು ಮಲುಗತೊಡಗಿತು. ಮೂರ್ತಿಯ ಮಗಳು ಜ್ಯೋತಿಯ ಕುತ್ತಿಗೆಯನ್ನು ತಬ್ಬಿಕೊಂಡು “ಇಲ್ಲ. ಇದನ್ನು ಕೊಂಡು ಹೋಗಲಿಕ್ಕೆ ನಾನು ಬಿಡುವುದಿಲ್ಲ” ಎಂದಳು.

ದಿನಗಳು ಉರುಳಿದವು. ಜ್ಯೋತಿ ಈಗ ತುಂಬು ಗರ್ಭಿಣಿ. “ಇನ್ನೀಗ ಇದು ನಾಯಿ ಮನೆ ಆಗಿ ಬಿಡುತ್ತದೆ ನೋಡಿ” ಎಂದು ಮೂರ್ತಿಯ ಹೆಂಡತಿ ಆಗಾಗ ಸಿಡುಕತೊಡಗಿದಳು. ಮೂರ್ತಿಯ ಮಗಳು “ಎಷ್ಟು ನಾಯಿ ಮರಿಗಳಿದ್ದರೂ ನನಗೆ ಬೇಕು. ಅವುಗಳನ್ನು ನಾನು ಸಾಕುತ್ತೇನೆ” ಎಂದು ಮರು ನುಡಿಯತೊಡಗಿದಳು.

ಕೆಲವು ವಾರಗಳ ಬಳಿಕ ಮೂರ್ತಿಗೆ ಬೆಳಿಗ್ಗೆ ಸಂಭ್ರಮದ ಕೇಕೆ ಕೇಳಿ ಎಚ್ಚರವಾಯಿತು. ಮಗಳು ಕರೆಯುತ್ತಿದ್ದಳು. “ಅಪ್ಪಾ ಬಂದು ನೋಡಿ. ಎಷ್ಟೊಂದು ಮರಿಗಳು.”

ಮೂರ್ತಿ ಗಡಬಡಿಸಿ ಎದ್ದು ಬಂದು ನೋಡಿದರೆ ಅವನ ಮುದ್ದಿನ ಜ್ಯೋತಿ ಎಂಟು ಮರಿಗಳನ್ನು ಈದು ಅವನನ್ನು ಹೆಮ್ಮೆಯಿಂದ ನೋಡುತ್ತಿದೆ. ಅವ ಜ್ಯೋತಿಯ ಒಂದೊಂದೆ ಮರಿಗಳನ್ನು ಎತ್ತಿ ಲಿಂಗ ಪರೀಕ್ಷೆ ಮಾಡತೊಡಗಿದ. ಎಂಟರಲ್ಲಿ ಏಳು ಹೆಣ್ಣು ಮರಿಗಳು! ಮೂರ್ತಿ ತಲೆಗೆ ಕೈ ಇಟ್ಟು ಕುಳಿತು ಬಿಟ್ಟ.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಡಗಡಂಗಿನ ಚಿತ್ರ
Next post ಉತ್ತಮ ಸೆಳಕಿನಿಂದ ಆರಂಭವಾಗುವ ಜನ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…