ಹೈದರಬಾದ್‌ನಿಂದ ಕಂಪನಿಯವರು Pace Maker ತಂದು ಕೊಡುತ್ತಿದ್ದರು. ಅವ್ವನ ಶಸ್ತ್ರಕ್ರಿಯೆ ಯಶಸ್ವಿಯಾಗಿತ್ತು. ನಾನು ಭಾವೋದ್ವೇಗದಿಂದ ಅತ್ತುಬಿಟ್ಟಿದ್ದೆ. ಬೆಂಗಳೂರಿನಲ್ಲಿದ್ದಾಗ ಇಷ್ಟು ಭಾವೋದ್ವೇಗಕ್ಕೊಳಗಾಗಿರಲಿಲ್ಲ. ಇದು ನನ್ನ ಬಂಧುಗಳು, ಅವ್ವನ ಸಾಮೀಪ್ಯ ಕಾರಣವಾಗಿರಬೇಕೆಂದುಕೊಂಡಿದ್ದೆ. ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವ್ವನನ್ನು ಡಿಸ್‌ಚಾರ್ಜು ಮಾಡಿಸಿಕೊಂಡು ಬಂದೆ. ಈ ಬಾರಿ, ನನ್ನ ದೂರದ ಸಂಬಂಧಿ ಅಂಜನಿ ಮತ್ತವನ ಹೆಂಡತಿಯನ್ನು ಮನೆಗೆ ಕರೆಯಿಸಿಕೊಂಡೆ. ಜಯಶ್ರೀ ಅಡಿಗೆಮನೆ ಜವಾಬ್ದಾರಿ ವಹಿಸಿಕೊಂಡರೆ, ನಾನು ಅವ್ವನ ಜವಾಬ್ದಾರಿ ವಹಿಸಿಕೊಂಡೆ. ಮೊದಲೆರಡು ವಾರ ಅವ್ವನನ್ನು ನೋಡಲು ಬರುತ್ತಿದ್ದ ನನ್ನ ತಂಗಿ ಮತ್ತೆ ಬರಲಿಲ್ಲ. ಅವಳು ಭದ್ರಾವತಿ ಬಳಿಯಿದ್ದ ತನ್ನ ತೋಟದ ಮನೆಯಲ್ಲಿ ಗಂಡನ ಜೊತೆಯಿರುತ್ತಿದ್ದ ಕಾರಣವಿರಬೇಕೆಂದು ಕೊಂಡೆ.
ಅವ್ವನ ಅಶುದ್ಧವಾದ ಬಟ್ಟೆಗಳನ್ನು ಬೇರೆ ಯಾರಿಗೂ ಕೊಡುತ್ತಿರಲಿಲ್ಲ. ಬೇರೆಯವರು ಅಸಹ್ಯಪಟ್ಟುಕೊಳ್ಳಬಾರದೆಂದು ನಾನೇ ತೊಳೆಯುತ್ತಿದ್ದೆ. ಅವ್ವ ಒಂದೆರಡು ತಿಂಗಳುಗಳಲ್ಲಿಯೇ ಚೇತರಿಸಿಕೊಂಡಳು. ವೈದ್ಯರು ಒಂದೆರಡು ಬಾರಿ ಪರೀಕ್ಷೆ ಮಾಡಿ ಏನೂ ತೊಂದರೆಯಿಲ್ಲವೆಂದು ಹೇಳಿದ್ದು ನನಗೆ ಸಮಾಧಾನವಾಗಿತ್ತು. ಕೊಂಡಜ್ಜಿ ಮೋಹನ್ ಅವರ ಸಂಬಂಧಿಕರು ಹೈಟೆಕ್ ಸೂಪರ್ ಸ್ಪೆಷಾಲಿಟಿಯ ಆಸ್ಪತ್ರೆಯ ಡೈರೆಕ್ಟರ್ ಆಗಿದ್ದರು. ಮೋಹನ್ ಅವರ ಪ್ರಭಾವದಿಂದ ನನಗೆ ಅಲ್ಲಿ ಕೆಲಸ ಸಿಕ್ಕಿತು. ಸೇರಿಕೊಂಡೆ. ಅವ್ವನಿಗೂ ಸಮಾಧಾನವಾಗಿತ್ತು. ನನ್ನ ಆರ್ಥಿಕ ಸಮಸ್ಯೆಯೂ ಸುಧಾರಿಸತೊಡಗಿತ್ತು. ಶಸ್ತ್ರಕ್ರಿಯೆಯಿಂದ ಅವ್ವ ಸುಧಾರಿಸಿಕೊಂಡಿದ್ದರಿಂದ ನನಗೆ ಆತಂಕ ಕಡಿಮೆಯಾಗಿತ್ತು. ಅಂಜನಿ ಮತ್ತು ಅವನ ಹೆಂಡತಿ ಆರು ತಿಂಗಳ ನಂತರ ಹೊರಟು ಹೋಗಿದ್ದರು. ನಾನು ಅವ್ವ ಇಬ್ಬರೇ ಆಗಿದ್ದೆವು. ದಾವಣಗೆರೆಗೆ ಬಂದು ಏಳು ವರ್ಷಗಳು ತುಂಬುತ್ತಿದ್ದ ಹಾಗೆಯೇ ಅವ್ವ ಮಂಚದ ತುದಿಯಿಂದ ಕೆಳಗೆ ಕುಸಿದು ಕುಳಿತುಕೊಂಡಿದುದ್ದುರ ಪರಿಣಾಮ, ಆಕೆಯ ಕಾಲಿನ ತೊಡೆಯ ಮೂಳೆ ಮುರಿದಿತ್ತು!
ಹತ್ತಿರವಿದ್ದ ನರ್ಸಿಂಗ್ ಹೋಮ್‌ಗೆ ಸೇರಿಸಿದ್ದಾಯ್ತು. ವೈದ್ಯರು ಶಸ್ತ್ರ ಚಿಕಿತ್ಸೆ ಸಾಧ್ಯವಿಲ್ಲವೆಂದರು. ಅವ್ವನ ಸ್ಕೂಲಕಾಯ, ಏರಿದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಎಲ್ಲದಕ್ಕೂ ಹೆಚ್ಚಾಗಿ Pace Maker ಅಳವಡಿಕೆಯಿಂದಲೂ, ವಯಸ್ಸೂ ಕೂಡಾ, ಶಸ್ತ್ರಕ್ರಿಯೆಯು ಸಾಧ್ಯವಿಲ್ಲವೆಂದಿದ್ದರು. ಕಾಲಿಗೆ ಮರಳು ತುಂಬಿದ ಚೀಲವನ್ನು ಕಟ್ಟಿದ್ದರು. ಒಂದು ವಾರದ ನಂತರ ಡಿಸ್ಚಾರ್ಜ್ ಮಾಡಿ, “ಇದೇ ಎರಡು ತಿಂಗಳಿರಲಿ. ಮನೆಗೆ ಬಂದು ನೋಡುತ್ತೇನೆ” ಎಂದಿದ್ದರು. ಮನೆಗೆ ಬಂದೆವು.
“ಈ ವಯಸ್ಸಿನಲ್ಲಿ ಕಾಲು ಮೂಳೆ ಮುರಿದರೆ ಒಳ್ಳೆಯದಲ್ಲ. ಬೇಗ ಸುಧಾರಿಸಿಕೊಳ್ಳೋದಿಲ್ಲ…” – ಕೆಲವರು ಹೇಳುತ್ತಿದ್ದರು. ಹೌದು… ನಿಜವಾಗಿತ್ತು. ಮೂಳೆ ಮುರಿದುಕೊಂಡಿದ್ದೇ ನೆಪವಾಗಿ ಪೂರ್ತಿ ಹಾಸಿಗೆ ಹಿಡಿದು ಬಿಟ್ಟಳು. ಬಲವಂತದಿಂದ ಉಣ್ಣಿಸುತ್ತಿದ್ದೆ. ಕಾಲಕಾಲಕ್ಕೆ ಮಾತ್ರೆಗಳನ್ನು ಕೊಡುತ್ತಿದ್ದೆ. ಅವ್ವ, ಹೆಚ್ಚು ನೀರು ಕುಡಿಯದಿದ್ದ ಕಾರಣಕ್ಕೆ ಮುಖ್ಯ ಅಂಗಾಂಗಗಳ ತೊಂದರೆಯಿಂದಲೋ ಅವ್ವನ ಆರೋಗ್ಯ ಸ್ಥಿತಿ ಕಂಗೆಡುತ್ತಾ ಹೋಯಿತು. ಎಲ್ಲಾ ಹಾಸಿಗೆಯ ಮೇಲೆ ಆಗುತ್ತಿದ್ದ ಕಾರಣ ಅವ್ವನಿಗೆ ದುಃಖ, ಬೇಸರವಾಗಿತ್ತು.
“ಇಂತಹ ಸ್ಥಿತಿ ನನಗಿಷ್ಟವಿಲ್ಲ. ಅವಲಂಬನೆ ಅಸಹ್ಯವಾಗ್ತಿದೆ” ಎಂದೂ ನೋವಿನಿಂದ ಆಗಾಗ್ಗೆ ಹೇಳುತ್ತಿದ್ದಳು. ಅವಳು ಮಾನಸಿಕವಾಗಿಯೂ ಬದುಕುಳಿಯಲು ತಯಾರಾಗಿರಲಿಲ್ಲ!
ನಾನು ಕೆಲಸಬಿಟ್ಟೆ. ಅವ್ವನ ಬಳಿಯೇ ಇರುತ್ತಿದ್ದೆ. ಆಗಿನ ಸಂಕಟ, ನೋವು, ದುಃಖ ಯಾರೊಂದಿಗೂ ಹೇಳಿಕೊಳ್ಳುವ ಹಾಗೆಯೂ ಇರಲಿಲ್ಲ. ಐದು ತಿಂಗಳ ನಂತರ ಅವ್ವ ಮೂಂತ್ರಪಿಂಡಗಳ ವೈಫಲ್ಯದಿಂದಲೇ ನನ್ನನ್ನು ಬಿಟ್ಟು ಹೋಗಿಯೇ ಬಿಟ್ಟಿದ್ದಳು ಚಿನ್ನು. ಕರ್ಮ ಕಾರ್ಯಗಳನ್ನು ಮುಗಿಸುವವರೆಗೂ ಮನೆಗೆ ಬರುತ್ತಿದ್ದ ನನ್ನ ಬಂಧುಗಳೆಂದುಕೊಳ್ಳುತ್ತಿದ್ದವರು ಬರುವುದು ನಿಂತೇ ಹೋಯಿತು. ಅವ್ವ ಸಾಯುವ ಎರಡು ದಿನಗಳ ಮೊದಲೇ ಮಾತು ನಿಲ್ಲಿಸಿಬಿಟ್ಟಿದ್ದಳು. ಬರೀ ಕಣ್ಣುಗಳಿಂದಲೇ ನನ್ನನ್ನು ನೋಡುತ್ತಿದ್ದಳು. ಪದೇ ಪದೇ ಬಾಗಿಲ ಕಡೆ ನೋಡುತ್ತಿದ್ದಳು. ಕಾಲಿಂಗ್ ಬೆಲ್ಲಾದರೆ ನನ್ನ ತಂಗಿ ಮಕ್ಕಳ ಜೊತೆ ಬಂದಳೆಂದು ಕಣ್ಣು ತಿರುಗಿಸಿ ನೋಡುತ್ತಿದ್ದಳು. ಕಾತುರತೆ ಅವಳ ದೊಡ್ಡ ಕಣ್ಣುಗಳಲ್ಲಿ ಕಾಣುತ್ತಿತ್ತು. ಅವಳು ಬರಲಿಲ್ಲವೆಂತಾದರೆ ಆ ಕಣ್ಣುಗಳಲ್ಲಿ ಶೂನ್ಯತೆ ತುಂಬುತ್ತಿತ್ತು. ಆಯಾಸಗೊಂಡವಳಂತೆ ಕಣ್ಣು ಮುಚ್ಚಿಕೊಳ್ಳುತ್ತಿದ್ದಳು. ಕೊನೆಯ ಎರಡು ದಿನಗಳು ಅವ್ವ ಯಾವ ವೇದನೆಯನ್ನೂ ಬಾಯಿಬಿಟ್ಟು ಹೇಳಿಕೊಳ್ಳಲಾಗಿರಲಿಲ್ಲ. ಊಟ, ಮಾತು ನಿಲ್ಲಿಸಿದ್ದಳು. ಅವ್ವ ಜೀವಂತವಾಗಿದ್ದಾಳೆ ಎನ್ನುವುದಕ್ಕೆ ಎಲ್ಲವನ್ನೂ ನೋಡುತ್ತಿದ್ದ ಅವ್ವನ ಕಣ್ಣುಗಳಿಂದ ತಿಳಿಯುವಂತಾಗಿತ್ತು. ನೀರನ್ನೂ ಸಹಾ ಬಲವಂತದಿಂದ ಕುಡಿಸಬೇಕಾಗಿತ್ತು. ಸಂಕ್ರಾಂತಿಯ ನಂತರದ ಮರುದಿನ ಅವ್ವ ಕೊನೆಯುಸಿರೆಳೆದಿದ್ದಳು. ಸಾವಿನ ಸಂಕಟವನ್ನು ಡಾಕ್ಟರಾಗಿದ್ದರೂ ಅವ್ವನ ಕಿವುಚಿದ ಮುಖದಲ್ಲಿ ಕಂಡಿದ್ದೆ. ಈಗಲೂ ಕಣ್ಣುಗಳ ಮುಂದೆ ಬರುತ್ತದೆ. ಸಾವು ಅಷ್ಟು ತೀವ್ರ ತೆರನಾದ ನೋವನ್ನು ಕೊಡುತ್ತದೆಯೇ? ನಂಗೊತ್ತಿಲ್ಲ. ಅವ್ವನನ್ನು ತಬ್ಬಿಕೊಂಡು ಚಿಕ್ಕ ಮಗುವಿನಂತೆ ಅಳತೊಡಗಿದ್ದೆ. ನನಗೆ ಅವ್ವನೊಂದಿಗಿರುವ ಯೋಗವಿರಲಿಲ್ಲ. ಆರು ವರ್ಷಗಳು ಮಾತ್ರ ನಾನವಳ ಸಾಂಗತ್ಯ ಪಡೆದುಕೊಂಡು ಬಂದಿದ್ದೆ ಕಣೆ. ನನ್ನ ಭದ್ರತೆಯ ಕೋಟೆ ಛಿದ್ರವಾಗಿತ್ತು! ಮತ್ತೇ ಒಂಟಿಯಾಗಿ ದೊಡ್ಡ ಬಯಲೊಂದರಲ್ಲಿ ಒಬ್ಬಳೇ ನಿಂತುಕೊಂಡಿದ್ದೆ…!
*****
ಮುಂದುವರೆಯುವುದು