‘ಪೇಳಿದರು ಕೆಟ್ಟ ಸುದ್ದಿಯ; ನೀನು ಪೋದುದನು.’
ಹೀಗೆ ಸಾಯುವುದುಂಟೆ, ತೊರೆದೆಲ್ಲ ಬಿನ್ನಾಣ?
ಈ ಭೂಮಿಯಿತ್ತಯ್ಯ ನಿನಗೆ ಪಂಚಪ್ರಾಣ.
ಇದು ಸ್ವರ್‍ಗವೆನುತಿದ್ದೆ. ಚಹ-ಕಾಫಿ-ಪಾನವನು
ಮಾಡಿ ಭೂಸುರನಾದೆ. ಭಾಸುರಾಂಗನೆ ತಾನು
ಕೃಷ್ಣ! ನಿನ ರುಕ್ಷ್ಮಿಣಿಯು. ನೀನಹುದು ತುಸು ಜಾಣ;
ಗರ್‍ಭ ಶ್ರೀಮಂತಿಕೆಯೆ ನಿನ್ನ ಮುಖ್ಯ ತ್ರಾಣ.
ತಾರುಣ್ಯ ಮುಗಿದಿಲ್ಲ; ಮುಗಿಸುವರೆ ಲೀಲೆಯನು?
ಇನ್ನೆಂದು ಮಾಗುವದು ಫೋರ್‍ಡುಕಾರಿನ ಬಯಕೆ?
ಬರಿ ವಿದೂಷಕನೆಂದು ಹೆಸರಾದ ನೀನೆಂದು
ತೆನ್ನಾಲನಾಗುವದು? ಸೊಗಸುಗಾರನ ಭಾಗ್ಯ-
ವೊಂದು ಲಭಿಸಿತು ನಿನಗೆ. ಅಂತಿರಲಿ ನಿನ್ನಾಕೆ
ಇನ್ನು ಕಾಣುವದೇನು? ಪರಮ ವಸ್ತುವನಿಂತು
ಬಿಟ್ಟು ತೆರಳಿದೆಯಯ್ಯ! ಅದು ಅವಳ ದುರ್‍ಭಾಗ್ಯ!
*****