ಸತ್ಯಾನಂದ ಪಾತ್ರೋಟ ಅವರ ‘ಹಂಗಿಲ್ಲದ ಅಂಗಳ’ ಎಂಬ ಹೊಸ ಸಂಕಲನದ ಕುರಿತು ಒಂದಿಷ್ಟು ಟಿಪ್ಪಣಿಗಳನ್ನು ಮಾಡಬೇಕೆಂದಿದ್ದಾಗ ಈ ಕವಿ ನಡೆದ ದಾರಿಯ ಕಡೆ ಹೊರಳಿ ನೋಡುವುದು ಉಚಿತ ಎಂದುಕೊಂಡಿದ್ದೇನೆ. ಪಾತ್ರೋಟ ಅವರು ಕವಿ. ಅವರಿಗೆ ಹಾಡು ಮತ್ತು ಕವನಗಳನ್ನು ಬರೆಯುತ್ತಾ ಒಂದು ಲಯ ಸಿಕ್ಕಿದೆ. ಬಂಡಾಯ ಮನೋಧರ್ಮವನ್ನು ಎಗ್ಗಿಲ್ಲದೆ ಪ್ರಕಟಿಸುತ್ತಾ ಬಂದ ಸತ್ಯಾನಂದ ಅವರಿಗೆ ಬಂಡಾಯ ಎನ್ನುವುದು ಸಹಜವಾಗಿ ಒಗ್ಗಿರುವ ಗುಣ ಎಂಬುದು ಅವರ ಈ ಹಿಂದಿನ ಸಂಕಲನಗಳನ್ನು ಸೇರಿದಂತೆ ಪ್ರಸ್ತುತ ಸಂಕಲನದಲ್ಲೂ ಎದ್ದು ಕಾಣುವ ಗುಣ. ಜಾತಿ, ಪ್ರಾದೇಶಿಕತೆ ಇತ್ಯಾದಿ ನಿಶ್ಚಿತತೆಗಳ ಹಿನ್ನೆಲೆಯಿಂದ ಈ ಮಾತು ಹೇಳುತ್ತಿಲ್ಲ. ಒಂದು ಕಡೆಯಿಂದ ಇವು ಸಹ ಕಾರಣಗಳೆಂಬಂತೆ ಇದ್ದರೂ ಅವರು ಬಂಡಾಯದ ತಾತ್ವಿಕತೆಯ ಜೊತೆಗೆ ಗುರುತಿಸಿಕೊಂಡಿದ್ದು ಒಂದು ಚಳವಳಿಯ ಭಾಗವಾಗಿ ಎನ್ನುವುದು ಸಹ ಇಲ್ಲಿ ಮುಖ್ಯವಾಗುತ್ತದೆ. ಬಂಡಾಯ ಕಾವ್ಯದ ಸಿಟ್ಟು, ಆಕ್ರೋಶಗಳ ಏದುಸಿರಿನ ಲಯ ದಾಟಿ ವಿಷಾದ ಮತ್ತು ಪ್ರೇಮಮಯ ಬದುಕಿನ ಹದಕ್ಕಾಗಿ ಕಾತರಿಸುವ ಪಾತ್ರೋಟ ಅವರ ಕವಿತೆಗಳಲ್ಲಿ ಬಂಡಾಯ ಮತ್ತು ಪ್ರೇಮ ಇವೆರಡೂ ಭಿನ್ನವಾದ ಸಂಗತಿಗಳಲ್ಲ. ಪಾತ್ರೋಟ ಅವರ ‘ಕರಿಯ ಕಟ್ಟಿದ ಕವನ’ ಸಂಕಲನಕ್ಕೆ ಮುನ್ನುಡಿ ಬರೆದ ಎಚ್.ಎಸ್.ರಾಘವೇಂದ್ರರಾವ್ ಅವರು ಸಹ ಈ ಅಂಶವನ್ನು ಗುರುತಿಸುತ್ತಾ “ಪ್ರತಿಭಟನೆ, ಆಕ್ರೋಶಗಳಿಗಿಂತ ವಿಷಾದ, ವಿಶ್ಲೇಷಣೆಗಳೇ ಸಂಕಲನದ ಸ್ಥಾಯಿಗಳಾಗಿವೆ” ಎಂದಿರುವುದು ಪ್ರಸ್ತುತ ಸಂಕಲನಕ್ಕೂ ಒಪ್ಪಬಹುದಾದ ಅಂಶವೇ. ಇವರ ಪ್ರಕಾರ ಬಂಡಾಯ ಎನ್ನುವುದು ಸಾಮಾಜಿಕ ಕಾರಣಗಳಿಗಾಗಿ ಅಷ್ಟೇ ಅಲ್ಲದೆ ಆಂತರಂಗಿಕವಾಗಿಯೂ ಒಳಬಂಡಾಯಗಳಿರುತ್ತವೆ ಎನ್ನುವ ಸಾಧ್ಯತೆಗಳತ್ತ. ಈ ಒಳಹೊರಗಿನ ದ್ವಂದ್ವವನ್ನು ನೀಗದ ಕ್ರಾಂತಿ ಫಲ ಕೊಡದೆಂಬ ನಂಬಿಕೆ ಇಲ್ಲಿದೆ. ಹಿಂದ್ ಸ್ವರಾಜ್‌ನಲ್ಲಿ ಗಾಂಧಿ ಒತ್ತುಕೊಡುವ ಅಂತರಂಗ ಮತ್ತು ಬಹಿರಂಗಗಳ ಏಕಪ್ರಕಾರದ ಕ್ರಾಂತಿಯ ಮಾತೇ ಇದು. ಆದುದರಿಂದಲೇ ಪೊಲಿಟಿಕಲ್ ಆದ ಆಶಯಗಳು ಅನುಭಾವದ ಮಿಡಿತವನ್ನು ಕೇಳಿಸಬೇಕೆನ್ನುವ ಒಂದು ಹೊಸ ಸಿದ್ಧಾಂತವೇ ಗಾಂಧಿಯವರಿಂದ ಹೊಮ್ಮಿತು. ಕನ್ನಡ ಕಾವ್ಯದಲ್ಲಾದರೋ ಲೌಕಿಕಾಗಮಗಳ ಅನುಸಂಧಾನವು ವಿಶಿಷ್ಟವಾಗಿ ಸಂಯೋಜಿತಗೊಂಡಿದ್ದು ಒಳಬಂಡಾಯದ ದನಿಗಳು ಇಂತಹ ಪ್ರಯತ್ನಗಳಲ್ಲಿ ನಿಚ್ಚಳವಾಗಿವೆ. ಈ ವಿಶಿಷ್ಟತೆಯಲ್ಲಿಯೇ ರಾಜಕೀಯ ದನಿಗಳು ಹೊರಹೊಮ್ಮಿ ಒಂದು ಪ್ರಜ್ಞಾವಂತಿಕೆಯ ಸಂವೇದನೆಯನ್ನು ಕಾಣಿಸಿರುವುದು ಕನ್ನಡದ ಮಟ್ಟಿಗೆ ಸಹಜವೆನ್ನಿಸುವ ಪ್ರಕ್ರಿಯೆ.
ಬಂಡಾಯ ಕಾವ್ಯದ ಒಕ್ಕೊರಲ ಅಭಿವ್ಯಕ್ತಿಯಾಗಿ ಸಾಮಾಜಿಕತೆ ಕಾಣಿಸಿಕೊಂಡಾಗ ಅದರಲ್ಲಿ ಒಂದು ಮುಖ್ಯವಾದ ಪ್ರಶ್ನೆ ಎದ್ದಿತ್ತು. ಅದೆಂದರೆ, ಕವಿ ಕೇವಲ ಒಬ್ಬ ಈಸ್ತೇಟ್ ಆಗಿ ಉಳಿಯಬಹುದೇ? ಎಂಬುದು. ರಸಾಭಿಮುಖತೆಯ ಸೆಳೆತ ತೀವ್ರವಾಗಿದ್ದ ನವೋದಯ ಕವಿಗಳು ಬಂಡಾಯ ಮನೋಧರ್ಮವನ್ನೂ ಅಂತೆಯೇ ಆಶಯಗಳನ್ನೂ ಧಾರಾಳವಾಗಿ ಪ್ರಕಟಪಡಿಸಿದ್ದರಾದರೂ ರಸತತ್ವದಿಂದ ಹೊರತಾಗಿ ತಮ್ಮ ಕಾವ್ಯವನ್ನು ವಿವೇಚಿಸಲು ಒಪ್ಪದವರಾಗಿದ್ದರು. ಹಾಗೆ ನೋಡಿದರೆ ಕುವೆಂಪು ಅವರಂತಹ ಸಬಾಲ್ಟ್ರನ್ ಮನೋಧರ್ಮದ ಕವಿ ಸಹ ರಸಾನುಭೂತಿಯನ್ನು ಒಂದು ಮುಖ್ಯ ಕ್ರಮವಾಗಿ ಭಾವಿಸುತ್ತಾರೆ. ರೈತನ ಬಗ್ಗೆ, ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಇತ್ಯಾದಿಗಳ ಬಗ್ಗೆ ಬರೆದ ಅವರ ಕೆಲವು ಉಜ್ವಲ ಕವಿತೆಗಳ ಹೊರತಾಗಿಯೂ ಕುವೆಂಪು ತಮ್ಮ ಈಸ್ತೇಟ್ ಗುಣವನ್ನು ಬಿಟ್ಟುಕೊಟ್ಟವರಲ್ಲ. ನವೋದಯ ಕಾಲ ಸಂವೇದನೆಗೆ ಹತ್ತಿರವಿರುವ ಬಂಡಾಯದ ಸಂದರ್ಭದಲ್ಲಿ ಕವಿ ಮತ್ತು ಈಸ್ತೆಟಿಕ್ಸ್‌ನ ಸಂಬಂಧ ಸೂಕ್ಷ್ಮವಾದ ಸಂದಿಗ್ಧಕ್ಕೆ ಒಯ್ದುದಲ್ಲದೆ ಸಾಮಾಜಿಕ ಜವಾಬ್ದಾರಿಯ ನೈತಿಕತೆಯ ಪ್ರಶ್ನೆ ಮುಖ್ಯವಾಗಿದ್ದು ಈ ಕಾಲಘಟ್ಟದ ಹೊರಳು. ಸಾಮಾಜಿಕತೆಯ ಶಿಲುಬೆ ಹೊತ್ತು ನಡೆಯಬೇಕಾದ ನೋವಿನ ದಾರಿ ತುಳಿದ ಕವಿಗಳ ಯಾದಿಯಲ್ಲಿ ಬರುವ ಕವಿಗಳು ತಮ್ಮ ನೋವುಗಳನ್ನ ಹಾಡುಗಳನ್ನಾಗಿ ಮಾಡಿಕೊಳ್ಳಬೇಕು ಎನ್ನುವತ್ತ ಗಮನ ಹರಿಸಿದರು. ಒಂದೆಡೆ ಸಾಮಾಜಿಕ ನ್ಯಾಯದ ವಾಸ್ತವ ಇನ್ನೊಂದೆಡೆ ರಮ್ಯ ಭಾವಗೀತಾತ್ಮಕವಾದ ಸಬ್‌ಜೆಕ್ಟಿವ್ ಆದ ಪ್ರೇಮ ಮತ್ತು ಭಾವಗಳ ಅನುಭೂತಿ ಇವೆರೆಡೂ ಈ ಹಂತದಲ್ಲೇ ಕಾಣಿಸಿಕೊಂಡಿದ್ದು ಒಂದು ರೀತಿಯಲ್ಲಿ ಎರಡನ್ನೂ ತೂಗಿಸುವ ಪರಿಯಿರಬೇಕು. ಆದರೆ ಇದೊಂದು ಮುಖ್ಯವಾದ ಹೊರಳು ಎನ್ನಿಸುತ್ತದೆ.
ಸತ್ಯಾನಂದ ಪಾತ್ರೋಟ ಅವರು ಬರೆಯುವ ಕಾವ್ಯದಲ್ಲಿ ಮಾತುಗಾರಿಕೆಯೂ ಹಾಡಿನ ಲಯವೂ ಒಟ್ಟೋಟ್ಟಿಗೆ ಕಾಣಿಸಿಕೊಳ್ಳುತ್ತದೆ. ಇದನ್ನು ಸಂರಚನಾತ್ಮಕವಾದ ಅಂಶ ಎಂದಷ್ಟೇ ಭಾವಿಸದೆ ಒಟ್ಟಾರೆ ಬಂಡಾಯದ ಪರಿಪ್ರೇಕ್ಷ್ಯದಲ್ಲಿ ನೋಡಿದಾಗ ಅವರ ಕಾವ್ಯದ ಮನೋಧರ್ಮ ಕಾಲಸಂವೇದಿಯಾಗಿರುವುದು ತಿಳಿಯುತ್ತದೆ. ಕಾವ್ಯದ ವಸ್ತುವನ್ನು ಬಿಡಿಸುವಾಗ ಅವರು ಎರಡು ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ಒಂದು, ವೈಚಾರಿಕವಾಗಿ ಕಾವ್ಯವನ್ನು ಕಟ್ಟುವುದು. ಇಲ್ಲಿ ಶಿಲ್ಪವನ್ನು ಗ್ರಹಿಸುವುದು ವಿಷಯ ಮತ್ತು ತಾತ್ವಿಕತೆಗಳನ್ನು ಅನುಸರಿಸಿ ಎನ್ನಬಹುದು. ಇನ್ನೊಂದು, ಭಾವಗೀತಾತ್ಮಕವಾದ ಅಭಿವ್ಯಕ್ತಿಗೆ ಮರಳುವುದು. ಇದು ಕಾವ್ಯವನ್ನು ಆಶಯಗಳಿಗೆ ಒಗ್ಗಿಸುತ್ತಾ ವೈಯಕ್ತಿಕ ಸಂಬಂಧಗಳ ಪಾತಳಿಯಲ್ಲಿ ಉದಾತ್ತತೆಯನ್ನು ಮೆರೆಯುವುದಾಗಿರುತ್ತದೆ. ಮೊದಲ ಕ್ರಮದಲ್ಲಿ ಪಾತ್ರೋಟರ ರೀತಿ ಸ್ಪಷ್ಟವಾಗಿಯೇ ಗದ್ಯವಾಚಿಯಾಗಿದ್ದು, ಅದರಲ್ಲಿ ಪ್ರತಿಮೆಗಳನ್ನು ಬಳಸದೇ ಸಹಜೋಕ್ತಿಯಲ್ಲಿ ಕಾವ್ಯವನ್ನು ಗ್ರಹಿಸುವ ಯತ್ನ ಮಾಡುತ್ತದೆ. ಮಾತಿನ ಲಯದಲ್ಲೇ ಕಾವ್ಯ ಕಟ್ಟುವ ಅಡಿಗರು ಪ್ರತಿಮಾ ನಿಷ್ಠರಾಗಿ ಬರೆಯುವ ಹಾಗೆ ಇವರ ಕ್ರಮವಲ್ಲ. ಬಂಡಾಯ ಕಾವ್ಯ ಕಾವ್ಯ ದಾರಿಯನ್ನು ಸುಗಮಗೊಳಿಸಿಕೊಂಡು ಹಿಂದಿನ ಕ್ಲಿಷ್ಟತೆಯನ್ನು ಪ್ರಜ್ಞಾಪೂರ್ವಕವಾಗಿ ಕೈಬಿಟ್ಟಂತೆ ಪಾತ್ರೋಟ ಅವರಂತಹ ಕವಿಗಳಲ್ಲಿಯೂ ಅದರ ಗುಣ ಇಣುಕುತ್ತದೆ. ಹಂಗುಗಳಿಂದ ಮುಕ್ತವಾದ ಅಂಗಳದಲ್ಲಿ ಆಡಬಯಸುವ ಕವಿಗೆ ಬಹುಶಃ ಈ ಕ್ರಮ ಸೂಕ್ತವೆನ್ನಿಸಿದೆ.
ಸತ್ಯಾನಂದ ಪಾತ್ರೋಟ ಅವರ ಈ ಸಂಕಲನ ಕವಿತೆಗಳ ಆಂತರ್ಯವು ಪರಿಶುದ್ಧತೆಯ ಮೂಲ ಪ್ರಮಾಣವನ್ನು ಬಯಸುವಂತದ್ದು. ಇಲ್ಲಿನ ಕವಿತೆಗಳು ಎತ್ತುವ ಬಹುಮುಖ್ಯ ಆತಂಕದ ಸಂಗತಿಯೆಂದರೆ ಮಾತಿನ ಮಲಿನತೆಯನ್ನು, ಇಲ್ಲಿನ ಅನೇಕ ಕವಿತೆಗಳಲ್ಲಿ ಮಾತಿನ ಬಗೆಗಿನ ಆತಂಕ ಕಾಣುತ್ತದೆ. ಮಾತಿನ ಸೂತಕದಿಂದ ಇಡೀ ಜಗತ್ತಿನ ಸಂಬಂಧಗಳು ಕಳಂಕಿತವಾಗುತ್ತಿರುವುದನ್ನು ಅವರ ಕವಿತೆಗಳು ಬಿಚ್ಚಿಡುತ್ತಾ ಹೋಗುತ್ತವೆ. ಇದಕ್ಕಾಗಿ ಅವರು ಬಯಸುವ ಹೋಲಿಕೆ ಎಂದರೆ ವಚನಕಾರರ ನಡೆ ಮತ್ತು ನುಡಿಗಳ ಅಭಿನ್ನತೆಯನ್ನು. ವಚನಗಳ ಸಂರಚನೆಯಲ್ಲಿ ಇದೊಂದು ನೈತಿಕವಾದ ಜವಾಬ್ದಾರಿಯ ಜೊತೆಗೆ ಆಧ್ಯಾತ್ಮಿಕತೆಯತ್ತ ನಡೆಯುವ ದಾರಿ ಕೂಡ ಆಗಿದೆ.
ಮಾತಿರಬೇಕು, ಮಾತಾಡಬೇಕು
ಮನಕರಗಿ ಹಗುರಾಗುವಂತೆ
ಕಲ್ಲುಕರಗಿ ನೀರಾಗುವಂತೆ
ಮಾತಾಡಬೇಕು
ಗಾಳಿಯೊಳಗೆ ಗಂಧ ತೀಡಿದಂತೆ
(ಮಾತು, ಮಾತು)
ಈ ಸಾಲುಗಳು ಬಸವಣ್ಣನವರ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ವಚನವನ್ನು ಬಹುವಾಗಿ ನೆನಪಿಸುತ್ತವೆ. ಆದರೆ ಪಾತ್ರೋಟ ಅವರು ಮುಂದೆ ಹೋಗಿ ‘ಮಾತು ಅಚ್ಛೋದದ ಸರೋವರದಂತೆ ಇರಬೇಕು’ ಎನ್ನುವ ಆಶಯವನ್ನು ವ್ಯಕ್ತ ಪಡಿಸಿದ್ದು ವಚನಕಾರರ ಆಶಯದೊಂದಿಗೆ ಸಾಮರಸ್ಯದ ಬನಿಯನ್ನು ಕಾಪಾಡಿಕೊಳ್ಳುವ ಯತ್ನವೂ ಆಗಿದೆ. ಶುದ್ಧತೆ ಎನ್ನುವ ಆಶಯ ಇಲ್ಲಿ ಇನ್ನಷ್ಟು ಉಜ್ವಲಗೊಳ್ಳುತ್ತದೆ. ಶುದ್ಧತೆಯ ಸಂಕೇತವಾಗಿ ಬರುವ ಮಾತು ಆಧ್ಯಾತ್ಮಿಕ ಶಕ್ತಿಯಾಗಿ, ಇಪ್ಪತ್ತನೇ ಶತಮಾನದಲ್ಲಿ ಗಾಂಧಿ ರೂಪಿಸಿದ ಸತ್ಯದ ಪರಿಕಲ್ಪನೆಯನ್ನೂ ಒಳಗೊಳ್ಳಬೇಕಾದ ಅಗತ್ಯವನ್ನು ಇಲ್ಲಿನ ಕವಿತೆ ಹೇಳುತ್ತಿದೆ ಎನ್ನಿಸುತ್ತದೆ. ಇಲ್ಲಿ ಕವಿ ಒಂದು ಮಾತಿನ ಸತ್ಯದ ಪರಂಪರೆಯನ್ನು ಗುರುತಿಸಿಕೊಳ್ಳುತ್ತಿದ್ದು, ಸೂತಕವಾಗುವ ಮಾತಿಗೆ ಆಮಿಷಳಿಗೆ ಬಲಿಯಾಗುವ ಲಾಲಸೆ, ವಂಚನೆಗಳು ಕಾರಣವಿರಬಹುದೆನ್ನುವ ಅರಿವನ್ನು ಕಂಡುಕೊಳ್ಳುತ್ತಾರೆ. ಇದಕ್ಕಾಗಿ ನೀಗಿಕೊಳ್ಳುವ ಉಪಾಯಗಳನ್ನು ಕಂಡುಕೊಳ್ಳಬೇಕು. ಆದರೆ ಅದು ಸುಲಭವಾದುದಲ್ಲ. ಆದುದರಿಂದಲೇ ಒಂದು ಬಗೆಯ ಆತಂಕ ಮನೆ ಮಾಡಿದ್ದು ಮಾತಿನ ಮಲಿನತೆ ಬಗೆಗೆ ಆತಂಕ ಮೂಡಿದೆ. ಬಸವಾದಿ ಶರಣರು ಹಾಗು ಬುದ್ಧನನ್ನು ಮೂಲ ಮಾದರಿಗಳಾಗಿ ಸ್ವೀಕರಿಸಿದ್ದರೂ ಸಹ ಆಳದಲ್ಲಿ ಕವಿಗೆ ಈ ಆತಂಕ ಇದ್ದೇ ಇದೆ. ಆದುದರಿಂದ ಆಶಯ ಎನ್ನುವುದರ ಒಳಗೆ ಕೇಳುವ ಆತಂಕದ ದನಿ ಕಾವ್ಯವನ್ನು ಜೀವಂತವಾಗಿಡುವಂತಾಗಿದೆ.
ಬುದ್ಧ ಪಾತ್ರೋಟ ಅವರ ಮೂಲಮಾದರಿಗಳಲ್ಲಿ ಅತಿ ಮುಖ್ಯವಾದವನು. ಅವರ ಕವಿತೆಗಳು ಬುದ್ಧನ ಬಗೆಗೆ ತೋರುವ ಪ್ರೀತಿ ಗೌರವಗಳು ಪರ್ಯಾಯವನ್ನು ಹೇಳುವಂತಿದೆ. ಇಂದಿನ ಅಮಾನುಷ ಜಗತ್ತಿನಲ್ಲಿ ಬುದ್ಧನನ್ನು ನೆನೆಯುವ ಮೂಲಕ ಪರ್ಯಾಯವನ್ನು ಸೂಚಿಸಲಾಗುತ್ತಿದೆ.
ಬೆಳ್ಳಂಬೆಳಕಿನಲ್ಲಿ ಸಿಗಲಾರ
ನಮ್ಮೊಳಗಿನ ಭಯೋತ್ಪಾದಕ
ನರಹಂತಕ
.. .. .. ..
ಎಂದು ಹೇಳುತ್ತಲೇ
ಬುದ್ಧನಿಗೊಂದಿಷ್ಟು ದಾರಿಬಿಡಿ
ಹೃದಯದಲ್ಲೊಂದಿಷ್ಟು ಜಾಗಬಿಡಿ
(ಬುದ್ಧ)
ಎನ್ನುತ್ತಾರೆ. ದಲಿತ ಕಾವ್ಯದ ಸಂದರ್ಭದಲ್ಲಿ ಬುದ್ಧ ಒಂದು ಬೇರೆಯದೇ ಆದ ಬಿಡುಗಡೆಯ ಸಂಕೇತವಾಗುತ್ತಾನೆ. ರಾಜಕೀಯವಾಗಿ ಅಂಬೇಡ್ಕರ್ ಅವರು ಕಂಡುಕೊಂಡ ಬಿಡುಗಡೆ ಬುದ್ಧಧರ್ಮದ ಜೊತೆ ಇತ್ತು ಎನ್ನುವುದನ್ನು ನೆನಪಿಸಿಕೊಂಡರೆ ಬುದ್ಧನ ವೈಶಾಖ ಶುದ್ಧ ಹುಣ್ಣಿಮೆಯ ಬೆಳಕು ಆಂತರಂಗಿಕವಾದ ಆಧ್ಯಾತ್ಮಿಕ ಸತ್ಯವಷ್ಟೇ ಅಲ್ಲದೆ, ವೈರತ್ವವನ್ನು ಅವೈರದಿಂದ, ವೈದಿಕತೆಯನ್ನು ಅವೈದಿಕತೆಯಿಂದ ಎದುರಿಸಿದ ಸಂಕೇತವಾಗಿಯೂ ಕಾಣುತ್ತದೆ. ಬುದ್ಧ ಆದುದರಿಂದಲೇ ಪಾತ್ರೋಟ ಅವರಂತಹ ಕವಿಗಳಿಗೆ ಶುದ್ದೀಕರಣದ ಮೂಲಮಾದರಿಯಾಗಿ ನಿಲ್ಲುತ್ತಾನೆ.
ಶುದ್ಧ ಪೂರ್ಣಿಮೆಯ ದಿನ
ಸಿದ್ಧಾರ್ಥ
ಬರೀ ಬುದ್ಧನಾಗಲಿಲ್ಲ
ಮಗುವಾದ, ಶುದ್ಧ ಮನುಷ್ಯನಾದ
(ಬೆಳಕಿನ ಸುತ್ತ)
ಈ ಸಾಲುಗಳನ್ನು ಗಮನಿಸಿದರೆ ‘ಮಗುವಾದ’ ಎನ್ನುವ ಮಂಡನೆಯು ಮುಖ್ಯ ವೆನಿಸುತ್ತದೆ. ಮೂಲತಃ ರಮ್ಯವಾದಿಗಳ ಪರಿಕಲ್ಪನೆಗೆ ಹತ್ತಿರವಿರುವ ಮಗುವಾಗುವುದು ಎನ್ನುವ ಕ್ರಿಯೆ ಮನುಷ್ಯನನ್ನು ರೂಪಿಸುವ ಪ್ರಜ್ಞೆಯ ಮೂಲ ಅವತರಿಣಿಕೆ, ಯೇಟ್ಸ್ ಕವಿಯ ‘ಸ್ಕೂಲ್ ಚಿಲ್ಡ್ರನ್’ ಕವಿತೆಯಲ್ಲಿ ಗಾಢವಾದ ಆಧ್ಯಾತ್ಮಿಕ ಗುರುತುಗಳು ಮತ್ತು ಹುಡುಕಾಟಗಳ ಸಂಕೀರ್ಣತೆಯನ್ನು ಗಮನಿಸಿದರೆ ಮಗುವಾಗುವ ಸಂಕೀರ್ಣ ಸ್ಥಿತಿ ಅರಿವಾಗುತ್ತದೆ. ಅದರಂತೆ ಇಲ್ಲಿ ಬುದ್ಧ ಮಗುವಾದ ಎನ್ನುವುದು ತಾತ್ವಿಕತೆಯ ಪ್ರಮಾಣವನ್ನು ಸೂಚಿಸುತ್ತಿದ್ದರೆ ಮುಂದೆ `ಆದುದರಿಂದಲೇ ಮನುಷ್ಯನಾದ’ ಎನ್ನುವ ಸಮೀಕರಣದ ಸಾಲು ತುಸು ವಾಚ್ಯವಾಗಿಬಿಡುತ್ತದೆ. ಅದನ್ನು ಇಲ್ಲಿ ಅಧ್ಯಾಹಾರಕ್ಕೆ ಬಿಡಬಹುದಿತ್ತು. ಸಾಮಾನ್ಯವಾಗಿ ಪಾತ್ರೋಟ ಅವರ ಕವಿತೆಗಳಲ್ಲಿ ಇಂತದಕ್ಕೆ ಅವಕಾಶವಿಲ್ಲ. ಅವರ ಕಾವ್ಯ ತೋರುಬೆರಳಂತೆ ಮಾತ್ರ ಉಳಿಯದೆ ನಿರ್ದೇಶಿಸುವ ವಸ್ತುವನ್ನು ಸ್ಪರ್ಶಿಸಿ ತೋರಿಸುವ ರೀತಿಯದ್ದಾಗಿರುತ್ತದೆ. ಹಾಗೆಂದೇ ಅವರ ಸಾಲುಗಳಲ್ಲಿ ಪರಿಹಾರಾತ್ಮಕವಾಗಿ ಅನೇಕ ಸಾಲುಗಳು ಕಾಣಿಸಿಕೊಳ್ಳುವುದು.
ಪಾತ್ರೋಟ ಅವರ ಕವಿತೆಗಳಲ್ಲಿ ಬುದ್ಧನನ್ನು ಬಿಟ್ಟರೆ ಅಂತರಂಗ ಶುದ್ಧಿಗೆ ನಿಂತ ಬಸವಾದಿ ಶರಣರು ಮಾದರಿಯಾಗಿ ಒದಗುತ್ತಾರೆ. ಇದು ಸಾಮಯಿಕ ಎನ್ನಿಸುವಂತದ್ದು. ಏಕೆಂದರೆ ಸಮಕಾಲೀನ ಜಗತ್ತಿನಲ್ಲಿ ಜಾತಿಗಳು ಪುನಾ ಪುನಾ ಒಡೆದುಕೊಳ್ಳುತ್ತಾ ಸಂಕೀರ್ಣ ಅಸ್ಮಿತೆಗಳನ್ನು ಸೃಷ್ಟಿಸುತ್ತಿರುವ ಸಂದರ್ಭದಲ್ಲಿ ಜಾತಿ ಬಗ್ಗೆ ದನಿ ಎತ್ತಿದ ಶರಣರನ್ನು ಇಲ್ಲಿ ಎತ್ತಿಕೊಳ್ಳುವುದು ಸಾಮಯಿಕವಾಗುತ್ತದೆ. ಆದರೆ ಇಲ್ಲಿ ಕವಿ ಗುರುತಿಸುವುದು ವಚನ ಚಳವಳಿ ನಡೆದು ಮಾದರಿಯಾಗಿ ನಿಲ್ಲುವ ಹೊತ್ತಿನಲ್ಲಿ ಅಲ್ಲಿಯೇ ವಿಘಟನೆಗಳು ಕಾಣಿಸಿಕೊಳ್ಳುತ್ತಲ್ಲಿದ್ದು ಶರಣರನ್ನು ಒಂದೊಂದು ಜಾತಿಗೆ ಮೀಸಲಿಡುವ ಪ್ರಕ್ರಿಯೆಗಳು ಚಾಲನೆಗೆ ಬಂದಿವೆ. ಈ ವೈರುಧ್ಯವನ್ನು ಅವರು ಹೀಗೆ ಗಮನಿಸುತ್ತಾರೆ:
ಇವ ನಮ್ಮ ಮನೆಯ ಮಗನೆಂದಿರಯ್ಯಾ
ಎಂದ ಶರಣರ
ಮೂಲ ಹುಡುಕುತ್ತಾ
ಅವರು ನಡೆದಾಡಿದ ನಾಡಿನಲಿ
ನಿತ್ಯ, ಕಟ್ಟಿ ಹಾಕುತ್ತಿದ್ದೇವೆ
ಜಾತಿಯ ಬೇಲಿಯಲಿ
(ಬಸವಾದಿ ಶರಣದು)
ಹಾಗೂ
ಶರಣರ ದಾರಿಯಲಿ
ಬೀಜಬಿತ್ತಿ, ಬೆಳೆ ಬೆಳೆದಿದ್ದರೆ
ಆ ಆತ್ಮ, ಈ ಪರಮಾತ್ಮ
ಹೊಲೆಯ ಹದಿನೆಂಟು ಜಾತಿಗೊಂದೊಂದು ಆತ್ಮ
ಕಾಣುತ್ತಿರಲಿಲ್ಲ ಕಣ್ಮನಗಳಿಗೆ ಶರಣರ ದಾರಿಯಲಿ
ಬೀಜಬಿತ್ತಿ, ಬೆಳೆ ಬೆಳೆದಿದ್ದರೆ
ಆ ಆತ್ಮ, ಈ ಪರಮಾತ್ಮ
ಹೊಲೆಯ ಹದಿನೆಂಟು ಜಾತಿಗೊಂದೊಂದು ಆತ್ಮ
ಕಾಣುತ್ತಿರಲಿಲ್ಲ ಕಣ್ಮನಗಳಿಗೆ
(ಕೂಸೇ ಕೂಸೇ!)
ಇಲ್ಲಿನ ವಿಷಾದವಾದರೂ ನೇರವಾಗಿಯೇ ಕಾಣುವಂತದ್ದು. ಇಂತಹ ಸಾಲುಗಳು ವಾಚ್ಯವೆನ್ನಿಸಿದರೂ ಬಹಳ ಮುಖ್ಯವಾದ ಪ್ರಶ್ನೆಯನ್ನು ಎತ್ತಿವೆ ಎನ್ನಿಸುತ್ತದೆ.
(೨)
ಸತ್ಯಾನಂದರು ಬರೆಯುತ್ತಿರುವ ವಸ್ತುವಾಗಲೀ ಬಳಸುತ್ತಿರುವ ಭಾಷೆಯಾಗಲೀ ‘ಪೊಲಿಟಿಕಲಿ ಕರೆಕ್ಟ್’ ಎನ್ನಿಸುವಂತವು. ಕರೆಕ್ಟ್ನೆಸ್‌ಗಾಗಿ ಬರೆಯುತ್ತಿರುವ ಬರಹಗಳ ವ್ಯಾಪ್ತಿ ಒಂದರ್ಥದಲ್ಲಿ ವೈಶಾಲ್ಯತೆಯನ್ನು ಸಾಧಿಸುತ್ತಿದ್ದರೆ ಇನ್ನೊಂದು ನೆಲೆಯಿಂದ ಸೀಮಿತವಾಗುವ ಅಪಾಯವನ್ನು ಹೊಂದಿರುತ್ತದೆ. ಎಲ್ಲವನ್ನೂ ಎಲ್ಲರನ್ನೂ ಸಾಮಾಜಿಕ ನ್ಯಾಯದ ಚೌಕಟ್ಟಿನೊಳಗೆ ತರುವ ಮೂಲಕ ಅತಿವ್ಯಾಪ್ತಿಯ ವಸ್ತುಗಳನ್ನು ನಿರ್ವಹಿಸುವ ಇಕ್ಕಟ್ಟು ಬಿಕ್ಕಟ್ಟುಗಳನ್ನು ಅವು ಆಹ್ವಾನಿಸುತ್ತಿರುತ್ತವೆ. ಕೊಂಚ ಹಿಂದೆ ಕನ್ನಡದಲ್ಲಿ ಬಂದ ಮಂಡೇಲಾ ಕುರಿತ ಕವನಗಳು ಉದಾಹರಣೆಗೆ ಹೇಗೆ ಉದಾರ ಧೋರಣೆಯನ್ನು ಪ್ರತಿಧ್ವನಿಸಿದವು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು. ಉದಾರ ಮಾನವೀಯ ಧೋರಣೆಗಳನ್ನು ಹೊಂದಿದ ಕಾವ್ಯವು ಒಂದು ಹಂತದಲ್ಲಿ `ಪ್ರಾಣಮಿತ್ರನಾಗುವ’ ಕೆಲಸವನ್ನು ಮಾಡಬೇಕಾದ ಹೊಣೆಯನ್ನು ಹೊತ್ತುಕೊಂಡಿದ್ದರಿಂದ ಬಂದಿರಬಹುದು. ಪಾತ್ರೋಟ ಅವರಾದರೋ ಇದೇ ಕಾವ್ಯದ ಫುಟ್ ಬೋರ್ಡ್‌ನಿಂದ ಜಿಗಿದವರು. ಅವರಲ್ಲಿ ವಸ್ತು ಬಿಡುಗಡೆ ಮತ್ತು ಸಾಮರಸ್ಯದ ಆಶಯಗಳನ್ನು ಒಂದು ತೂಕ ಹೆಚ್ಚಾಗಿಯೇ ಹೊಂದಿದೆ. ಈ ಕಾರಣದಿಂದ ಅವರ ಕಾವ್ಯ ಈ ಮೊದಲೇ ಹೇಳಿದಂತೆ ದೊಡ್ಡ ಭಿತ್ತಿಯಲ್ಲಿ ಸಾಮಾಜಿಕ ಅಸಮಾನತೆ ಹಾಗು ಬಿರುಕುಗಳನ್ನು ಕುರಿತು ಮಾತನಾಡುತ್ತಾ ಅಗಲ ಅಗಲವಾಗುತ್ತಾ ಹೋಗುತ್ತದೆ. ಹೀಗಾಗಿ ಕಾವ್ಯದಲ್ಲಿ ಒಮ್ಮೊಮ್ಮೆ ಆಶಯಗಳೇ ಮಾತನಾಡುವುದುಂಟು.
ಸತ್ಯಾನಂದ ಪಾತ್ರೋಟ ಅವರಲ್ಲಿ ಪ್ರಕೃತಿ ಮತ್ತು ಸಾಮಾಜಿಕತೆಗಳನ್ನು ಬೆಸೆಯುವ ತಂತನ್ನು ಕಾಣುತ್ತೇವೆ. ಅವರು ಪ್ರಕೃತಿಯನ್ನು ಒಂದು ಶಕ್ತ ಹೋಲಿಕೆಯಾಗಿ, ಪರ್ಯಾಯವಾಗಿ ಬಳಸುತ್ತಾರೆ. ಒಂದು ಹಂತದಲ್ಲಿ ಕುವೆಂಪು ಅವರಲ್ಲಿ ಕಾಣುವ ಪ್ರಕೃತಿ ಮತ್ತು ಸಾಮಾಜಿಕ ಅಸಮಾನತೆಗಳ ತುಲನೆ ಇಲ್ಲಿಯೂ ಕಾಣುತ್ತದೆ. ಇದಕ್ಕೆ ಒಂದು ಉದಾಹರಣೆಯೆಂದರೆ ‘ಗುಬ್ಬಚ್ಚಿ-ಗುಜರಾತ್’ ಕವಿತೆ.
ಜಾತಿ, ಮತ ವರ್ಣಗಳ ಕಿತ್ತಾಟ
ಗುಬ್ಬಚ್ಚಿಗೇಕೆ ಕಾಡುತ್ತಿಲ್ಲ
ಇದೇಕೆ ಇವುಗಳ ಹೆಸರಿನಲಿ ಕಿತ್ತಾಡುವುದಿಲ್ಲ
ಹಾಗೂ
`ನೀರ ಕಂಡಲ್ಲಿ ಮುಳುಗಿ
ಮರವ ಕಂಡಲ್ಲಿ ಸುತ್ತಿ’
ಕಣ್ಣುಮುಚ್ಚಾಲೆ ಆಟ ಆಡುವುದಿಲ್ಲ
ರಕ್ತದೋಕುಳಿ ಹರಿಸುವುದಿಲ್ಲ
ಇದರ ಜೊತೆ ಜೊತೆಗೇ ಗಮನಿಸಬೇಕಾದುದು ಪಾತ್ರೋಟ ಅವರ ವೈಯಕ್ತಿಕ ಸಂಬಂಧಗಳ ಮಾಧುರ್ಯವನ್ನು. ಅವು ಮಧುರ ಎನ್ನುವುದು ಸಾಮರಸ್ಯದ ನೆಲೆಯಲ್ಲಿ ಅಷ್ಟೇ ಅಲ್ಲದೆ, ಬಂಧುತ್ವದ ಪರಮೋಚ್ಚ ಸಂಗತಿಯಾಗಿ ಕಾಣುವುದರಿಂದ.
ನಿನಗೆ ಏನೆನ್ನಲಿ ನಾನು ನಿನ್ನ
.. .. ..
ಶಬ್ದಗಳಾಚೆ ನಿಶ್ಯಬ್ದ
ನಿಶ್ಯಬ್ದಗಳಾಚೆ ಶಬ್ದ
ತಡಕಾಡಿದರೂ ಸಿಗುತ್ತಿಲ್ಲ
ಶಬ್ದಕೋಶದಲ್ಲೂ
ನಿನಗೆ ಸರಿ ಸಮ, ಮಿಗಿಲಾದ ಹೆಸರು (ಇದ್ದಷ್ಟು ದಿನ ನೀ ನನ್ನ ಉಸಿರು) ಇಂತಹ ಕವಿತೆಗಳಲ್ಲಿ ಬಂಧುತ್ವವನ್ನು ಗುರುತಿಸಬಹುದು.
(೩)
ಒಟ್ಟಾರೆ ವರ್ತಮಾನದ ಬಿರುಕುಗಳು ಮತ್ತು ಅವನ್ನು ಒಂದು ಮಾಡಬಲ್ಲ ಸಾಮರಸ್ಯದ ಅಂಟು ಯಾವುದಿರಬೇಕೆನ್ನುವುದು ಪಾತ್ರೋಟ ಅವರ ಕವಿತೆಗಳ ಮೂಲ ಆಶಯವಾಗಿದೆ. ತೀವ್ರ ವಿಷಾದದೊಂದಿಗೆ ಬೆಳೆಯುತ್ತಾ ಅನುಭಾವಿಕ ನೆಲೆಗಟ್ಟಿನ ಶುದ್ದೀಕರಣಕ್ಕೆ ಆಶಿಸುವ ಮನೋಧರ್ಮ ಇಲ್ಲಿನ ಕವಿತೆಗಳಲ್ಲಿ ವ್ಯಕ್ತವಾಗಿದೆ. ಬಂಡಾಯ ಚಳವಳಿಯ ಜೊತೆ ಗುರುತಿಸಿಕೊಂಡ ಪಾತ್ರೋಟ ಅವರ ಕವಿತೆಗಳಲ್ಲಿ ಒಂದು ಓಘವಿದೆ. ಒಳಿತನ್ನು ಕಂಡು ಕೊಳ್ಳುವ ಮನಸ್ಸೂ ಇದೆ. ಇದು ಅವರು ಕವಿಯಾಗಿ ಸಾಧಿಸುವ ಯಶಸ್ಸು. ಇದೇ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತಬೇಕು. ಪಾತ್ರೋಟ ಅವರ ಕವಿತೆಗಳ ಭಾಷೆಯು ಬಂಡಾಯ ಕಾವ್ಯದ ಸಿದ್ಧ ಮಾದರಿಯನ್ನು ಬಳಸುತ್ತಿದ್ದು ಏಕತಾನತೆಗೆ ಕಾರಣವಾಗುತ್ತಿಲ್ಲವೇ? ಪ್ರಾದೇಶಿಕತೆಯ ಕಾರಣದಿಂದಲೂ ಜಾತಿಯ ಕಾರಣದಿಂದಲೂ ತಮ್ಮದೇ ಆದ ಭಾಷೆಯನ್ನು ಬಳಸುವ ವಿಫುಲಾವಕಾಶಗಳಿರುವಾಗ ಈ ಕವಿ ಏಕೆ ಅವನ್ನು ದುಡಿಸಿಕೊಳ್ಳುತ್ತಿಲ್ಲ? ನನ್ನ ಅರ್ಥ ಒಬ್ಬ ಕವಿ ಇಂತಹದೇ ಭಾಷೆ ಬಳಸಬೇಕೆಂದಲ್ಲ. ಅಥವಾ ಒಂದು ನಿರ್ದಿಷ್ಟ ಭಾಷೆಯನ್ನು ಬಳಸಿದ ಮಾತ್ರಕ್ಕೆ ಒಬ್ಬ ಬರಹಗಾರ ಯಶಸ್ವಿ ಎನ್ನಿಸಿ ಬಿಡುವುದೂ ಇಲ್ಲ. ಆದರೆ ಮುಖ್ಯವಾಹಿನಿಯ ಭಾಷೆಯ ಆಯ್ಕೆಯೇ ಉಪರಾಷ್ಟ್ರೀಯತೆಯ ಸಂದರ್ಭದಲ್ಲಿ ನಿರ್ಣಾಯಕ ಎನ್ನಿಸುವಂತದ್ದು. ನಾನು-ನೀನು, ನಾವು-ನೀವು ಎನ್ನುವ ದ್ವಿತ್ವಗಳನ್ನು ದಾಟಿ ಬಹುತ್ವವನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತಿರುವ ಹಂತದಲ್ಲಿ ನಿಶ್ಚಿತತೆಗಳು ಹಾಗೂ ಅಲ್ಲಿಂದ ಹೊರಡುವ ಭಾಷೆ ಬಹುಮುಖ್ಯ ಪಾತ್ರ ವಹಿಸಬಲ್ಲವು.
ಹಳೆಯ ಸಂಕಥನಗಳನ್ನೂ ಅವುಗಳ ಪರಿಭಾಷೆಯನ್ನೂ ಒಡೆದು ಕಟ್ಟಿಕೊಳ್ಳುವ ಗುರುತರ ಜವಾಬ್ದಾರಿ ಚಳವಳಿಕಾರನಿಗೂ ಕವಿಗೂ ಇದ್ದೇ ಇರುತ್ತದೆ. ತನ್ನ ಚಳವಳಿ ತನ್ನ ಭಾಷೆಯನ್ನೇ ಮುರಿದು ಕಟ್ಟಿಕೊಳ್ಳುವ ಹುಮ್ಮಸ್ಸನ್ನು ಅವನು ತೋರಬೇಕು ಎಂಬುದು ಎರಡನೆಯ ಹಂತದಲ್ಲಿ ಹುಟ್ಟುವ ಅಪೇಕ್ಷೆಯಾಗಿರುತ್ತದೆ.
ಸತ್ಯಾನಂದ ಪಾತ್ರೋಟ ಅವರ ‘ಹಂಗಿಲ್ಲದ ಅಂಗಳ’ ಕೃತಿ ಓದಿದಾಗ ನನ್ನನ್ನು ಕಾಡಿದ ಅನೇಕ ಸಂಗತಿಗಳನ್ನು ಇಲ್ಲಿ ವ್ಯಕ್ತ ಪಡಿಸಿದ್ದೇನೆ. ಕವಿಯಾಗಿ ಈಗಾಗಲೇ ಪರಿಚಿತರಾಗಿರುವ ಪಾತ್ರೋಟ ಅವರನ್ನೂ ಸೇರಿದಂತೆ ನಮ್ಮೆಲ್ಲರನ್ನೂ ಕಾಡುವ ಕೆಲವು ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಇದು ಒಂದು ರೀತಿಯಲ್ಲಿ ನನಗೇ ಹೇಳಿಕೊಂಡ ಮಾತುಗಳು ಸಹ. ಪಾತ್ರೋಟ ಅವರ ಈ ಸಂಕಲನವು ನನ್ನನ್ನು ಇಷ್ಟು ಯೋಚಿಸಲು ಅನುವು ಮಾಡಿಕೊಟ್ಟಿದೆ. ಅದಕ್ಕಾಗಿ ಕವಿಗೆ ಧನ್ಯವಾದಗಳು.
*****