ಶಿವಾಪುರಕ್ಕೆ ಹೋಗಬೇಕು ಎನ್ನುವ ತುಡಿತ ಹಳೆಯದು. ಪ್ರತಿ ಬಾರಿ ಅಲ್ಲಿಗೆ ಹೋಗುವ ಪಯಣವು ಕೊಡುವ ಅರಿವು ಆನಂದಗಳೇ ಬೇರೆ ಅಂತ ಬಲ್ಲವರು ಹೇಳುವುದನ್ನು ಕೇಳುತ್ತಾ ಶಿವಾಪುರಕ್ಕೆ ಹೋಗುವ ಕನಸು ಕೆನೆಗಟ್ಟುತ್ತಿತ್ತು. ಅಲ್ಲಿಗೆ ಹೋಗಲೆಂದು ಇದ್ದಬದ್ದ ಮ್ಯಾಪುಗಳನ್ನೆಲ್ಲ ತಡಕಾಡಿದ್ದಾಯಿತು. ಈ ಹಿಂದೆ ಅದನ್ನು ಹೊಕ್ಕು ಬಂದವರು ಒಂದಷ್ಟು ಪಯಣದ ವಿವರಗಳನ್ನು ಹೇಳಿದರು. ಅದರಿಂದ ನನ್ನೊಳಗೆ ಒಂದು ಶಿವಾಪುರ ಮೊಳೆತು ಬೆಳೆಯುತ್ತ ಬಂದಿತು. ಶಿವಾಪುರಕ್ಕೆ ಹೋಗುವ ದಾರಿ ಇಂತಿಷ್ಟು ಸರಳ ಅಂತಲ್ಲ. ನಗರದ ಕೊಪ್ಪಲುಗಳನ್ನು ದಾಟಿದರೆ ಸಿಕ್ಕಿಬಿಡುವ ಸೀಮೆಯೂ ಅದಲ್ಲ. ಮೇಲು ನೋಟಕ್ಕೆ ಹಳ್ಳಿಯಂತೆ ಕಾಣುವುದಾದರೂ ಶಿವಾಪುರ ವಿಚಿತ್ರವಾದ ಊರು ಎಂದು ಹೇಳುವುದನ್ನು ಕೇಳಿದ್ದೆ. ಆದರೂ ಶಿವಾಪುರವನ್ನು ಕಲ್ಪಿಸಿಕೊಳ್ಳುವಾಗಲೆಲ್ಲಾ ನನ್ನ ಮನಸಿಗೆ ನಗರ ನಾಗರಿಕತೆಗೆ ಭಿನ್ನವಾದ ರಮ್ಯ ಹಳ್ಳಿಯ ಚಿತ್ರ ಮೂಡುತ್ತ ಅದನ್ನೊಂದು ನಗರಪರ್ಯಾಯದ ಸ್ಥಳವಾಗಿ ಕಾಣುತ್ತಿತ್ತು. ಶಿವಾಪುರಕ್ಕೆ ಹೋಗಬೇಕಿದೆ ಎಂದು ಹಿರಿಯ ಲೇಖಕ ಮಿತ್ರರಿಗೆ ಹೇಳಿದಾಗ ‘ಅದೇನು ರಾಮೊಜಿ ಫಿಲಂ ಸಿಟಿಯಲ್ಲಿ ಅಡ್ಡಾಡಿದಂತಲ್ಲ. ಶಿವಾಪುರದಲ್ಲಿ ಬೇಕಾದಷ್ಟು ಲೋಕೇಶನ್ನುಗಳಿವೆ. ಆದರೆ ಪ್ರವಾಸಿ ದೃಷ್ಟಿಯಿಂದ ಶಿವಾಪುರವನ್ನು ನೋಡಿದರೆ ದಕ್ಕುವುದು ಅದರ ಸುಂದರ ಹೊರ ಮೈ ಮಾತ್ರ’ ಎಂದರು. ಕನ್ನಡದಲ್ಲಿ ಕೆಲವು ಪ್ರದೇಶಗಳಿವೆ ಅದೇ ಈ ದ್ಯಾವನೂರು, ಹನೇಹಳ್ಳಿ, ಸಿಂಬಾವಿ, ಕಾನೂರು ಹೀಗೆ. ಇವುಗಳಲ್ಲಿ ಮನಸ್ಸು ಹೇಗೆ ವ್ಯವಹರಿಸುತ್ತದೆ ಎಂದರೆ ಅಲ್ಲಿನ ಪ್ರತಿ ಕೇರಿ, ಬೀದಿ, ತಿರುವುಗಳನ್ನೂ ನಾನು ಯಾವುದೋ ಜನ್ಮದಲ್ಲಿ ಒಮ್ಮೆ ನೋಡಿದ್ದೆ ಎನ್ನುವಂತೆ. ಹೂವಯ್ಯ ಬಿದ್ದ ಕಲ್ಲುದಾರಿ, ನವಿಲುತೀರ್ಥ, ಹುಲಿನೆತ್ತಿಕಲ್ಲು, ಹನೇಹಳ್ಳಿಯ ದಣಪೆಗಳು, ದ್ಯಾವನೂರಿನ ಹಟ್ಟಿಗಳು ಇವೆಲ್ಲಾ ಪೂರ್ವಜನ್ಮದ ನೆನಪಿನ ಕುರುಹುಗಳಂತೆ ಕನ್ನಡದ ಓದುಗರಿಗೆ ಭಾಸವಾದರೆ ಅದರಲ್ಲಿ ತಪ್ಪೇನು? ಈ ಗುರುತುಗಳೆಲ್ಲ ಒಮ್ಮೆ ನೆಟ್ಟು ಬಿಟ್ಟರೆ ಆಯ್ತು. ಆ ಲ್ಯಾಂಡ್ ಸ್ಕೇಪ್ ಸೇವ್ ಆಯ್ತು ಅಂತಾನೆ ಇಟ್ಟುಕೊಳ್ಳಿ. ಈ ಜಾಗಗಳ ಪಟ್ಟಿಯಲ್ಲಿ ಶಿವಾಪುರವನ್ನು ಧಾರಾಳವಾಗಿ ಸೇರಿಸಬಹುದು. ಆದರೆ ಇವೆಲ್ಲಾ ಒಂದು ತೂಕವಾದರೆ ಶಿವಾಪುರವೇ ಒಂದು ತೂಕ, ಶಿವಾಪುರ ಮಾತ್ರ ಬೇರೆ ಜಾಗಗಳಿಗಿಂತ ಅತೀತವಾದದ್ದೇನೊ ಇಟ್ಟು ಕೊಂಡ ನಾಡಿನಂತೆ ಕಾಣುತ್ತದೆ. ಯಾಕೆಂತ ಹುಡುಕ ಹೋದರೆ ಶಿವಾಪುರದಲ್ಲಿನ ಗೌಡ-ಗೌಡ್ತಿಯರು, ಜೋಕುಮಾರರು, ಕ್ರಾಂತಿಕಾರರು ಒಂದೆಡೆ ನೆಲದ ವಾಸನೆ ಉಂಟು ಮಾಡುತ್ತಿದ್ದರೆ ಚಪ್ಪರದವರೆಯ ಮೇಲೆ ಸಾಗಿ ಸ್ವರ್ಗ ಕಾಣಿಸುವ ಯಕ್ಷಿ ಸಂಕುಲ ಶಿವಾಪುರವನ್ನು ನೆಲದ ಮೇಲಿಂದ ಮೇಲಕ್ಕೇ ಹಾರಿಸುತ್ತಾ ಅದನ್ನೊಂದು ತೇಲುವ ನಾಡನ್ನಾಗಿ ನಿರೂಪಿಸುತ್ತದೆ. ಈ ದಿಢೀರ್ ಹಾರಾಟ, ಅಪ್ಪಟ ನೆಲದ ತಾಜಾ ವಾಸನೆ ಬೆರೆತ ಶಿವಾಪುರ ಚಾರಿತ್ರಿಕ, ಸಾಮಾಜಿಕ, ರಾಜಕೀಯ ಎಂಬ ಎಲ್ಲದರ ಕುದಿಪಾಕವಾಗಿ ರೂಪಕ ಪಕ್ಷಿಯಾಗಿ ಹಾರಾಡತೊಡಗಿತೊ ಎನ್ನುವಂತಿದೆ. ಆದುದರಿಂದ ಅದರ ಬಗೆಗಿನ ಮೋಹ ಸಕಾರಣವಾದುದು ಎಂದೇ ಭಾವಿಸುವೆ. ಇಂತ ನಾಡು ಯಾರನ್ನು ಸೆಳೆಯುವುದಿಲ್ಲ ಹೇಳಿ?
ಇಂತಿಪ್ಪ ಅಮೆಜಾನ್ ತೀರದ ಕಾಡಿನಂತೆ ತೇಲುತ್ತಾ ಕರಗುತ್ತಾ ಇರುವ ನಾಡಿನ ಆಸೆ ಯಾಕೆ ಉಂಟಾಯಿತೊ. ಆಧುನಿಕ ಮನುಷ್ಯ ತಬ್ಬಿಬ್ಬಾಗಿ ಹೋಗುವಂತ ಜಾಗವದು ಎಂತಹುದೊ? ಕಾರು ಬಸ್ಸು ವಿಮಾನಗಳಲ್ಲಿ ಸಂಚರಿಸುವ ಕರೆ ಬಂದರೆ ಮಾತಾಡುತ್ತ ತಮ್ಮದೇ ಲೋಕವನ್ನು ಸೃಷ್ಟಿಸಿಕೊಳ್ಳುವ ಆಧುನಿಕರಿಗೆ ಶಿವಾಪುರದಲ್ಲೇನು ಕೆಲಸ? ಅಷ್ಟಕ್ಕೂ ಶಿವಾಪುರದಲ್ಲಿ ಏನಿದೆ? ಒಂದು ಸಿನಿಮಾನೆ? ಜಾತ್ರೆಯೇ? ಅಥವಾ ಖುಷಿ ನೀಡುವ ಮಬ್ಬು ಮಬ್ಬು ಪಬ್ಬುಗಳೆ? ಶಿವಾಪುರಕ್ಕೆ ಹೋಗುವುದಾದರು ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಸಿಟಿಯ ಜಂಜಾಟ ಸಾಕಾಗಿ ಈಗೀಗ ಹಿಮಾಲಯ, ಚಾರಣ ಅಂತೆಲ್ಲಾ ಹೊರಡುವ ಮತ್ತೊಂದು ಆಧುನಿಕ ಮನೋರಂಜನಾ ವಿಸ್ತರಣೆಯಂತಲ್ಲ ತಾನೆ? ಎಂದು ನಾನೇ ಪ್ರಶ್ನಿಸಿಕೊಂಡೆ. ಇದ್ದೀತು. ಈ ತರ ರಮ್ಯ ಯಾನ ಹೊರಟು ಮತ್ತೆ ತಿರುಗಿ ಅಲ್ಲಿ ಕಂಡದ್ದನ್ನೆ ಆಧುನಿಕ ಜಗತ್ತಿಗೆ ಅಪ್ ಲೋಡ್ ಮಾಡಿಕೊಂಡು ತಂದುಕೊಳ್ಳುವ ಕೃತಕ ಸಂತೋಷವೇ ಇದ್ದೀತು. ಪರಮ ಆಧುನಿಕರಿಗೆ ಹಳ್ಳಿಯನ್ನು ಹೊಗುವ ತುಡಿತ ಸಹಜವೊ ಅಸಹಜವೊ, ಆದರೆ, ಅದನ್ನು ಕಸಿ ಮಾಡಿಕೊಳ್ಳುವ ತವಕ ಮಾತ್ರ ಅವರಿಗೆ ಇದ್ದೇ ಇದೆ. ಶಿವಾಪುರದಲ್ಲಿ ಮಿದುಳಿನಿಂದ ಜಗತ್ತನ್ನು ಅಳೆಯುವ ಕೆಲಸಕ್ಕೆ ಅಷ್ಟಾಗಿ ಬೆಲೆಯಿಲ್ಲವಂತೆ. ಅಲ್ಲಿ ಸಂಬಂಧಗಳೇ ಎಲ್ಲ ಅಂತೆ. ಆದುದರಿಂದ ಯೋಚಿಸುವ ಮಿದುಳಿನಿಂದ ಶಿವಾಪುರವನ್ನು ಅರಿಯವುದೆಂದರೆ ಅರ್ಧ ಮಾತ್ರ ತಿಳಿದಂತೆ.
ಶಿವಾಪುರಕ್ಕೆ ಹೊರಡುವವರಲ್ಲಿ ಬಿಳಿಯ ಮಾರ್ಲೊನಂತೆ ಸಾಮಾನ್ಯವಾಗಿ ಒಂದು ಪರಕೀಯ ಸ್ವಪ್ರಜ್ಞೆ ಇರುತ್ತದೆ. ಅದು ಇತರ ಸಂಸ್ಕೃತಿಗಳನ್ನು ತನ್ನ ಕಾಲಮಾಪನದಿಂದ ಅಳೆಯುತ್ತಾ ತನ್ನ ಮೂಗಿನ ನೇರಕ್ಕೆ ತಿದ್ದಿಕೊಳ್ಳುವ ಯತ್ನ ಮಾಡುತ್ತದೆ. ಅಲ್ಲಿ ತನ್ನ ವಿಶ್ವಾಸಿಕ ಪುಸ್ತಕದ ಅರಿವು ಮುಕ್ತವಾಗಿ ಏನನ್ನೂ ನಂಬಲಾರದು. ನೀವು ಉಸಿರಾಡಲು ಬೇಕಾಗುವ ಆಮ್ಲಜನಕ, ಕುಡಿಯುವ ನೀರು, ಉಣ್ಣುವ ಊಟ ಎಲ್ಲವನ್ನೂ ಕೊಂಡೊಯ್ಯುವುದಾದರೆ ನೀವು ಯಾಕೆ ಬೇರೆಡೆಗೆ ಹೋಗಬೇಕು? ಇದ್ದಲ್ಲೇ ಇರಬಹುದಲ್ಲವೆ? ಮಾರ್ಲೊನಂತೆ ಶಿವಾಪುರಕ್ಕೆ ಹೋಗುವುದಾದರೆ ಇನ್ನೊಬ್ಬ ಶಿಖರಸೂರ್ಯನಂತಾಗಬಹುದು. ಬರಿಯ ಶಿವಾಪುರದ ಪ್ರಯೋಜನಗಳಷ್ಟೆ ಕಣ್ಣ ಸೆಳೆದು ಅಲ್ಲಿನ ಪ್ರಶಾಂತತೆ ನಿಮ್ಮನ್ನು ರೇಜಿಗೆ ಹುಟ್ಟಿಸಬಹುದು. ಆದುದರಿಂದ ಸೀಮಿತ ಉದ್ದೇಶಗಳಿಂದ ಕೂಡಿದ ಯಾತ್ರೆ ಯಾವತ್ತೂ ಸಫಲವಾಗಲಾರದು ಎನ್ನುವುದು ಯಾತ್ರಿಕರಿಗೆ ನೆನಪಿನಲ್ಲಿರಲಿ.
ಶಿವಾಪುರವನ್ನು ಬಲ್ಲವರು ಕನ್ನಡ ದೇಶದಲ್ಲಿ ಹಲವಾರು ಜನ ಇದ್ದರು ಎಂದೆನಲ್ಲ ಅವರು ಅದರ ಬಗೆಗೆ ಕೆಲವು ವಿವರಗಳನ್ನು ನೀಡಿದರು. ಶಿವಾಪುರವೆಂದರೆ ಕನ್ನಡದ ಕನಸು ಎಂದರು ಒಬ್ಬರು. ಕವಿ ಶಿವಪ್ರಕಾಶರು ಚಂದ್ರಶೇಖರ ಕಂಬಾರರ ಒಡನಾಟದವರು. ಅವರು ಹೇಳಿದ್ದು ‘ನೋಡಮ್ಮ, ಶಿವಾಪುರವೆಂದರೆ ಒಂದು ಧ್ಯಾನ’ ಇಲ್ಲಿಲ್ಲ ನೆಲದ ವಾಸ್ತವ, ಪ್ಯೂರ್ ಉಟೊಪಿಯಾ ಎಂದು ಮತ್ತೊಬ್ಬರು. ಶಿವಾಪುರಕ್ಕೆ, ಚಿದಂಬರಂನಲ್ಲಿ ಆಕಾಶದ ಝಲಕ್ ತೋರಿಸಿ ಅದೊ ಕಾಣಿಸಿತೆ ಎಂದಂತೆ, ಕಾಣಿಸುವುದೇನೊ ಆ ದೇವರೇ ಬಲ್ಲ! ಅದನ್ನು ಕಂಡವರಂತೆ ಎಲ್ಲರೂ ಕಾಣಿಸಿತು ಹೌದು ಎನ್ನುತ್ತಾರಂತೆ. ಹಾಗೆ ಶಿವಾಪುರವೂ ಕಂಡೀತು. ನೋಡೋಣ.
ಇಂಥ ಶಿವಾಪುರಕ್ಕೆ ಹೋಗುವುದೆಂದರೆ ಅದೊಂದು ಆದಿಮ ಜಗತ್ತಿನಿಂದ ಹೊರಡುವ ಪಯಣ, ಶಿವಾಪುರವೇ ಅಸಲಿಗೆ ಒಂದು ಪಯಣ, ನಾಗರಿಕತೆಗಳು ತಮ್ಮ ಉತ್ತುಂಗವನ್ನು ಸಾರಿ ನಿಂತು ಹಾಗೆಯೇ ಇಲ್ಲವಾಗುವ ವೃತ್ತಗಳನ್ನು ಅರಿತವರಿಗೆ ಶಿವಾಪುರ ಎನ್ನುವುದು ನಾಗರಿಕತೆಗಳು ಸೇರಿಕೊಳ್ಳಬೇಕಾದ ಒಂದು ಮೂಲ ಬಿಂದು ಎಂಬ ತಿಳಿವಳಿಕೆಯುಂಟಾಗುತ್ತದೆ. ಕಂಬಾರರ ಶಿವಾಪುರದ ಪಯಣ ಹೊರಟಿರುವುದು ದೇಸಿಮೂಲದೆಡೆಗೆ, ಈ ಹಿಮ್ಮುಖ ಚಲನೆಯ ಹಿಂದೆ ಅಖಂಡವಾದ ಜೀವಸೃಷ್ಟಿಯ ನೆನಪುಗಳಿವೆ. ಅವು ಖಂಡಾಂತರಗಳನ್ನು ಬೆಸೆದುಕೊಳ್ಳುವ ಯುಗಾಂತರಗಳನ್ನು ಎಣಿಕೆಗೆ ತೆಗೆದುಕೊಳ್ಳುವ ಅನೂನವಾದ ಜಾಲ, ಈ ಪಯಣ ಹೀಗಿರುವುದರಿಂದಲೇ ಶಿವಾಪುರದ ಪಯಣ ಮಹಾಕಾವ್ಯಗಳ ಅಭಿಜಾತ ಭಿತ್ತಿಯದು, ರಾಮಾಯಣ, ಒಡಿಸ್ಸಿಗಳ ನಿರಂತರ ಪಯಣವು ಸಂಸ್ಕೃತಿಗಳ ಮುಖಾಮುಖಿಗಳನ್ನು ದಾಖಲಿಸುತ್ತಾ ಸಾಗುವಂತೆ ಶಿವಾಪುರದಲ್ಲಿಯೂ ಅನೇಕ ಸಂಸ್ಕೃತಿಗಳ ಮುಖಾಮುಖಿ ಇದೆ. ಈ ಪಯಣದಲ್ಲಿ ಅನೇಕ ದೇಶಗಳು ಮೈದಳೆಯುತ್ತವೆ. ಚಿತ್ರ ವಿಚಿತ್ರವಾದ ಚರ್ಚೆ, ಚಹರೆಗಳನ್ನೂ ಕಾಣಿಸುತ್ತವೆ. ಆದರೆ ಈ ಗಮ್ಯವು ತನ್ನ ಮೂಲದ ಕಡೆಗೆ ಹೋಗುವ ತುಡಿತ ಹೊಂದಿರುತ್ತದೆ. ಇದೊಂದು ವೃತ್ತದಂತೆ, ಪುನರಪಿ ತನ್ನ ಮೂಲ ಬಿಂದುಗಳನ್ನು ಕೂಡಿಕೊಳ್ಳಲು ತವಕಿಸುವ, ತುದಿಗಳನ್ನು ಕಟ್ಟಿಕೊಂಡು ಒಂದಾಗುವ ತುಡಿತ ಎನ್ನಬಹುದು. ಇಲ್ಲಿ ನೇರ ಹಾದಿಗುಂಟ ಸಾಗುವ ಕಾಲ ಕೆಲಸ ಮಾಡಲಾರದು. ಅಲ್ಲಿ ಆದಿ ಮಧ್ಯ ಅಂತ್ಯ ಎನ್ನುವ ಗೆರೆಕೊರೆತಗಳಿಲ್ಲವೆಂಬಂತೆ ಭಾಸವಾಗುವ ವಿಚಿತ್ರ ಅನುಭವ ಪ್ರದೇಶ ಆ ಶಿವಾಪುರ. ಶಿವಾಪುರಕ್ಕೆ ಒಯ್ಯುವ ಲಿಟರೇಚರ್ ಇಷ್ಟನ್ನು ಹೇಳಿತು.
ಇವನ್ನೆಲ್ಲ ಹೊತ್ತುಕೊಂಡು ಹೊರಟೆ ಶಿವಾಪುರಕ್ಕೆ. ಅಗೋ ಅಲ್ಲಿರಬೇಕು ಶಿವಾಪುರ, ಅದರ ಕೈಮರ ಇಲ್ಲೇ ಆಚೆಗೆ ಇದ್ದಂತಿದೆ. ಇಲ್ಲೇ ಧರಣಿ ಮಂಡಲ ಮಧ್ಯದಲ್ಲಿ ಇರುವ ಮೂವತ್ತೆಂಟು ಹಟ್ಟಿಯ ಶಿವಾಪುರ, ಅಮ್ಮನ ಹಟ್ಟಿಯೆಂದು ಹೆಸರಾದ ಶಿವಾಪುರ ಕಾಣುತ್ತಿದೆ. ಅಲ್ಲಿ ಆವು ಮೇಯುತ್ತಾ ಆನಂದದಿಂದ ಇರುವುದು ಕಾಣುತ್ತಿದೆ. ಹಸಿರು ಹುಲ್ಲುಗಾವಲು ಹರಡಿ ಹಬ್ಬಿದ್ದು ಸೂರ್ಯನಿಗೆ ಇಣುಕಲು ತಾವಿಲ್ಲದಂತೆ ಕರಿಮಲೆಯ ತಾವೇ ಅದು ಎಂಬ ವಿವರಣೆ ಕೇಳಿ ದಟ್ಟಡವಿಯ ನಡುವಿನ ಪ್ರದೇಶವನ್ನೂ ಅದರಲ್ಲಿ ಋತು ಸಮೃದ್ಧಿಯನ್ನು ಹೊಂದಿದ ಉಟೊಪಿಯಾ ನಿಂತಿತ್ತು. ನಾನಲ್ಲ, ಶಿವಾಪುರ ಸೀಮೆಯನ್ನು ಕಟ್ಟಿದ ಕನಸುಗಾರ ಶಿಲ್ಪಿ ಕಂಬಾರ ಬಣ್ಣಿಸುವುದೇ ಹಾಗೆ:
ಊರಾಗೂರ ಅದರಾಗ ಇನ್ಯಾವೂರ ಚಂದ
ಶಿವಾಪೂರ ರಾಜೇಕ ಮಳೆಯಾದ ಎರಿಯೊಳಗೆ
ಬೆಳೆದ ಕರಕಿ ಹಾಂಗೆ
ಜಯಾ ಜಯಾ ಶಿವಪೂರಿಗೆ
ಹಸಿರಿನ ತವರೂರಿಗೆ
ಹಾಡು ಬೆಳವ ಕಾಡಿಗೆ
ಋತುಮಾನದ ಪೈರು ಬೆಳೆವ
ದಂಟಿಗೆಂಟು ತೆನೆಗಳಿರುವ
ತೆನೆಗೆ ಒಂದು ಹಾಡುವಂಥ
ಹಕ್ಕಿಯಿರುವ ಊರಿಗೆ
ಆ ಹೆಮ್ಮೆ ಶಿವಾಪುರದ ವಾರಸುದಾರಿಕೆಯದು. ಕಂಬಾರರ ಶಿವಾಪುರ ಕಲ್ಲು ಇಟ್ಟಿಗೆ ಜಲ್ಲಿಕಲ್ಲುಗಳಲ್ಲಿ ಕಟ್ಟಿದ ಊರಲ್ಲ. ಆಧುನಿಕ ವಾಸ್ತುಶಿಲ್ಪದ ನಿರಾಕರಣೆಯಲ್ಲೇ ಅದು ಹುಟ್ಟುವುದು.
ಇಂತಹ ಶಿವಾಪುರವನ್ನು ತೋರಿಸಲೆಂದು ಕೆಲವರು ಸೂತ್ರಧಾರರು, ಭಾಗವತರು ಬಂದರು. ನಾನೂ ಒಲ್ಲೆ ಎನಲಿಲ್ಲ. ಚರಿತ್ರೆಯನ್ನು ಬಾಯಿಪಾಠ ಮಾಡಿ ಬಣ್ಣಿಸುವ ಗೈಡುಗಳಿಗಿಂತ ಹಾಡಿನಲ್ಲೇ ಶಿವಾಪುರವನ್ನು ಕಾಣಿಸುತ್ತೇವೆ ಎನ್ನುವವರೇ ಕುತೂಹಲಕಾರಿ ಎನ್ನಿಸಿತು. ಇತಿಹಾಸ ಇಲ್ಲಿ ಕತೆಯಾಗಿ ಹಾಡಾಗಿ ನೆನಪಾಗಿ ಉಳಿಯುವ ಕಾರಣ ನಾವು ಆಧುನಿಕ ಪದ್ಧತಿಯ ಇತಿಹಾಸವನ್ನು ಹೇಳುವವರಲ್ಲ. ನಾವೇನಿದ್ದರೂ ಆ ತಾಯಿಯ ಕೃಪೆಯಲ್ಲಿರುವ ಶಿವಾಪುರವನ್ನು ಅದರ ಸೃಷ್ಟಿಯಿಂದಲೇ ವರ್ಣಿಸುವವರು ಎಂದರು. ದೇವರ ಜೊತೆಗಿನ ಪುರಾಣಕಾಲವೂ ಈ ಆಧುನಿಕ ಕಾಲಕ್ಕೂ ನಿಸ್ಸಂಶಯವೆಂಬಂತೆ ಕೂಡಿಕೊಂಡಿತ್ತು. ಅದನ್ನು ನಾನೂ ಪ್ರಶ್ನಿಸಲು ಹೋಗಲಿಲ್ಲ.
“ಆದಿಗೆ ಮೊದಲು ಅನಾದಿಯಿತ್ತು. ಅನಾದಿಯಲ್ಲಿ ಭೂಮಿಯ ಮ್ಯಾಲೆ ತರುಮರಗಳಿದ್ದವು. ತರುಮರಾದಿಗಳಲ್ಲಿ ನೂರೊಂದು ಜಾತಿಯ ಸಾವಿರದೆಂಟು ಪಕ್ಷಿಗಳಿದ್ದವು. ಆ ಪಕ್ಷಿಗಳು ಸಾವಿರದೆಂಟು ದನಿ ಮಾಡಿ ಹಾಡುತ್ತಿದ್ದವು. ಇಂಥ ತರುಮರಾದಿಗಳ ಕೆಳಗೆ ತಂಪು ನೆರಳಿತ್ತು. ತಂಪು ನೆರಳಲ್ಲಿ ಹಸಿರು ಹುಲ್ಲಿತ್ತು. ಹಸಿರು ಹುಲ್ಲಿನ ಮ್ಯಾಲೆ ಶಿವಾಪುರವಿತ್ತು”
“ಇದಕ್ಕೂ ಮೊದಲು ಶಿವದೇವರು ಶಿವಲೋಕದಲ್ಲಿ ಸೃಷ್ಟಿಸಿದ ಆದಿಮಾಯಿಯು ಅಂಧಕಾರದಲ್ಲಿ ಸಿಲುಕಿ ಸೃಷ್ಟಿಯನ್ನು ಮಾಡಿ ಸಾಕಾಗಿ ಜಲಸಮಾಧಿಯಾದ ಮೇಲೆ, ಶಿವನ ಬೆವರ ಹನಿಯಿಂದ ಹುಟ್ಟಿದ ಅಣ್ಣ ತಮ್ಮ ಮಾಯಾಕಾರ್ತಿಯೊಡನೆ ಬಂದು ಗಾಳಗುದ್ಲಿ ತೆಗೆದುಕೊಂಡು ದುಡಿಯುವಷ್ಟು ಕೆಲಸ ಉಣ್ಣುವಷ್ಟು ಅನ್ನವಿರುವ ಶಿವಾಪುರವೆಂಬ ಘನವಾದ ಹಟ್ಟಿಯ ಕಟ್ಟಿ, ಪುಣ್ಯಕೋಟಿಯ ಹೆಸರಿನಲ್ಲಿ ಕೊಟ್ಟಿಗೆಯಲ್ಲಿ ದನಕುರಿಗಳ ಸಾಕಿ ಹಾಲು ಹಿಂಡಿ ಹೈನು ಬೆಣ್ಣೆ ಮಾಡುವ ಗೊಲ್ಲ ಕುಲವ ಮೊದಲು ಮಾಡಿದರು.. ..”
ಸೃಷ್ಟಿ ಪುರಾಣ ಏನೇ ಇರಲಿ, ಶಿವಾಪುರವನ್ನು ಕಾಯುವವಳು ಅಮ್ಮ. ತಮ್ಮೆಲ್ಲ ಮೂಲವನ್ನೂ ಶಿವಾಪುರಿಯವರು ಅಮ್ಮನಿಂದಲೇ ಆರಂಭಿಸುತ್ತಾರೆ. ಆಕೆಯ ಲೀಲೆಯನ್ನು ಅಲ್ಲಿನ ಶಿವಪಾದ(ದೇವರ ಗುಡ್ಡ) ಆಗಾಗ ಹೇಳುತ್ತಿದ್ದನಂತೆ, “ಮಗನೇ ಶಿವಾಪುರವ ನಾವ್ಯಾಕೆ ಕಟ್ಟಿದಿವಿ? ಅದು ಶಾಶ್ವತವಾಗಿ ಇರಲಿ ಅಂತಲಾ? ಆಕಾರಗೊಂಡುದಕ್ಕೆಲ್ಲಾ ಅಳಿವಿರುವಾಗ ಶಿವಾಪುರವೆಷ್ಟು ಶಾಶ್ವತವಾಗಿ ಹೆಂಗುಳದೀತು? ನಾವೆಲ್ಲ ಶಿವಾಪುರ ಅಂತ ಬಡಕೊಂಡದ್ದು ಒಂದು ದಿನ ಅದೂ ಮಣ್ಣಾಗೋದೆ ಸ್ವತಃ ಅಮ್ಮನೇ ತನ್ನ ಹೆಸರು ತಾನೇ ಬದಲಿಸಿಕೊಂಡು ಇನ್ನೊಂದಾಗ್ತಾಳಂತೆ! ಇನ್ನು ಶಿವಾಪುರವ ಬಿಟ್ಟಾಳೆಯೆ?
.. ..ಆದರೂ ಶಿವಾಪುರ ಕಟ್ಟತಿವಿ ಯಾಕ್ಹೇಳು? ಯಾಕೆಂದರೆ ಅವ್ವ ಹೇಳತಾಳ: “ಮಕ್ಕಳಾ ಶಿವಾಪುರ ಕಟ್ಟಿರಿ” ಅಂತ. ಆಕಿನ, ಹೇಳಿದ ಮ್ಯಾಲ ನಮ್ಮದೇನು? ನಾವೆಷ್ಟೇ ದೊಡ್ಡವರಾದರೂ ತಾಯಿಗೆ ಮಕ್ಕಳೇ! ಮಕ್ಕಳಿಗೆ ಆಟ ಮಾತ್ರ ಗೊತ್ತು.. .. ಮಕ್ಕಳಾಟ ಎಷ್ಟು ನೋಡಿದರೂ ಅವ್ವ ದಣಿವಿಲ್ಲ.” ಇಲ್ಲಿಗೆ ಅಮ್ಮನ ಲೀಲೆಯ ಬಿಟ್ಟು ಮಾತನಾಡುವಂತೆಯೇ ಇಲ್ಲ.
ಶಿವಾಪುರವೆಂಬುದು ಅಮ್ಮನ ತಾಣ. ಆಕೆಯೇ ಸಕಲವೂ ಎಂದು ಮಾರ್ಗದರ್ಶಕರು ದಾರಿಯಲ್ಲಿ ಕೆಲವು ಗುಹೆಗಳನ್ನು ತೋರಿದರು. ಇಲ್ಲಿನ ಒಂದು ಗುಹೆಯಲ್ಲಿ ಅಮ್ಮ ಮೊಣಕಾಲು ಬಗ್ಗಿಸಿ ಕೂಸಿಗೆ ಜನ್ಮವೀಯುವ ದೃಶ್ಯವಿದೆಯಂತೆ. ಅಲ್ಲಿಯೇ ಗುಹೆಯೊಳಗೆ ಹೋಗೋಣ ಎಂದು ಮೊಣಕಾಲು ಬಗ್ಗಿಸಿ ಮೈಕೈ ತರಚಿಸಿಕೊಂಡು ಗುಹೆಯಲ್ಲಿ ಬಹಳ ದೂರ ಹೋದರೆ ಅಲ್ಲಿ ಒಳಗೆ ಉಬ್ಬು ಕಣ್ಣುಗಳ ಹೆಂಗಸಿನ ಮೂರ್ತಿ ಕಾಣುತ್ತದೆ ಎಂದು ನಾವೇ ಭ್ರಮಿಸಿಕೊಳ್ಳುವಂತಿತ್ತು. ಏನೂ ಕಾಣದು. ಸೂತ್ರಧಾರರು ಹೇಳುವ ಪ್ರಕಾರ ಈಯುವ ಅಮ್ಮ ಕಾಣಬೇಕು. ಅರಿಶಿನ ಕುಂಕುಮ ಮೆತ್ತಿದ ಕಲ್ಲಿನಲ್ಲಿ ಏನು ಕಾಣುವುದೂ ಕಷ್ಟವಿತ್ತು. ಆದರೆ ಅಲ್ಲಿ ಬೀಳುತ್ತಿದ್ದ ಕೋಲು ಬಿಸಿಲು ಕೆತ್ತನೆಯನ್ನು ಸ್ವಲ್ಪವಾದರೂ ಪ್ರಕಾಶಗೊಳಿಸಿತ್ತು. ಕತ್ತಲಿಗೆ ಅಭ್ಯಾಸವಾಗುತ್ತಿದ್ದಂತೆ ಕಣ್ಣು ಸರಸರನೆ ಅಮ್ಮನ ಮೂರ್ತಿ ಮೇಲೆ ಹರಿದಾಡಿದವು. ಅಮ್ಮನ ಈ ಗವಿ ಸಿದ್ಧಿ ಸಾಧಕರಿಗೆ, ತಾಂತ್ರಿಕರಿಗೆ ತಕ್ಕ ಜಾಗದಂತೆ ಕಾಣುತ್ತಿತ್ತು. ಶಿವಪಾದನೆಂಬ ಗುಡ್ಡರೂ ಸಸ್ಯಹೃದಯದ ಅಭ್ಯಾಸಿಗಳೂ ಇಲ್ಲಿ ವಾಸವಾಗಿದ್ದರಂತೆ. ಹಿಂದೆ ಬೌದ್ಧರು ಧ್ಯಾನಕ್ಕೆ ಹೋಗುತ್ತಿದ್ದ ಶಾಂಗ್ರಿಲಾ ಗವಿಯಂತೆ ಇದೂ ಒಂದಾಗಿರಬೇಕು ಎಂದುಕೊಂಡೆವು. ಇಲ್ಲಿನ ತಂಪು ವಾತಾವರಣವು ಧ್ಯಾನಕ್ಕೆ ಸ್ಫೂರ್ತಿ ನೀಡುವಂತೆಯೇ ಇತ್ತು. ಅಲ್ಲಿ ಮೌನವನ್ನು ಕಲಕುವುದಾದರೆ ಅಲ್ಲಿನ ಹಕ್ಕಿ ಪಕ್ಷಿಗಳ, ಪ್ರಾಣಿಗಳ ಸದ್ದು ಮಾತ್.ರ
ಸೂತ್ರಧಾರರು ಹೇಳುವ ಪ್ರಕಾರ ಇನ್ನೊಂದು ಮಾಯಿ ಗವಿಯೂ ಇದೆಯಂತೆ. ಆದರೆ ಅಲ್ಲಿ ಮನುಷ್ಯ ಮಾತ್ರದವರು ಹೋಗಲು ಬಾರದಂತೆ, ಏಕೆಂದರೆ ಅದು ಶಟವಿ ತಾಯಿ ಅಂದರೆ ವಿಧಿಯ ಗವಿ. ಆ ಮಾಯಿ ಗವಿ ಒಂದು ಭಯಾನಕ ಗವಿ. ಅಲ್ಲಿ ಯಾರಿಗೂ ಎನಿದೆಯೆಂದು ತಿಳಿಯದಂತಹ ಭಯಾನಕ ಕಪ್ಪುಕುಳಿ. ಅದರಲ್ಲಿ ಹೊಕ್ಕವರಿಲ್ಲ, ಹೊಕ್ಕವರು ಹೊರಗೆ ಬಂದಿದ್ದಿಲ್ಲ. ಅದರೊಳಗೆ ಹೊಕ್ಕ ಬೆಳಕೂ, ದನಿಗಳೂ ಹೊರಕ್ಕೆ ಬರುವುದಿಲ್ಲ. ಅಮಾವಾಸ್ಯೆಯ ದಿನ ಅದರ ಆರ್ಭಟ ಹೇಳತೀರದು ಎಂಬುದಾಗಿ ಊರವರು ಹೇಳುತ್ತಾರೆ. ಹೀಗಿರುವ ಗವಿಯನ್ನು ಅಲ್ಲಿನ ಸ್ಮಶಾನದಲ್ಲಿ ಗುಣಿ ತೋಡುವ ಮಾರ ಒಮ್ಮೆ ನೋಡಿ ಮೂರ್ಛೆ ಬಿದ್ದು ಬಿಟ್ಟಿದ್ದನಂತೆ. ಆಮೇಲೆ ಮಾಯಿ ಕಾಣಿಸಿಕೊಂಡು ಅವನಿಗೆ ದರ್ಶನ ಕೊಟ್ಟಳಂತೆ. ಹೀಗೆಂದು ಅವನ ಮಾತನ್ನ ನೀವು ನಂಬಬೇಕು ಅಂತೇನೂ ಇಲ್ಲ. ಹೇಳಿಕೇಳಿ ಅವನು ಕುಡುಕ. ಅವನ ಮಾತಿಗೆ ತೂಕವಿದೆಯೇ? ಒಟ್ಟಿನಲ್ಲಿ ಅಲ್ಲಿ ಯಾರೂ ಹೋಗಲು ಬಯಸುವುದಿಲ್ಲ ಎಂದು ಸೂತ್ರಧಾರರು ಅಲ್ಲಿಗೆ ಹೋಗಬೇಕೆನ್ನುವ ನಮ್ಮ ಉತ್ಸಾಹವನ್ನು ಮೊಟಕುಗೊಳಿಸಿದರು.
ಮುಂದೆ ಹೋಗುತ್ತಾ ಅಲ್ಲೇ ಒಂದು ಪಾರಂಬಿ ಮರ. ಅಲ್ಲಿ ದಣಿವಾರಿಸಲು ಸ್ವಲ್ಪ ಹೊತ್ತು ಕುಳಿತಿದ್ದಾಗ ಅಲ್ಲೇ ಹಸಿರು ಎಲೆಗಳ ನಡುವೆ ಬಿಟ್ಟ ಹೂಗಳು ಕಣ್ಣ ಸೆಳೆದವು. ಅವನ್ನು ಕಿತ್ತುಕೊಳ್ಳುವ ಅಂತ ಬಾಗಿದರೆ, ‘ಸ್ವಲ್ಪ ನಿಧಾನಿಸಿ, ಅಲ್ಲಿ ಬಾವಿಯಿದೆ’ ಎಂದು ಎಚ್ಚರಿಸಿದರು ಸೂತ್ರಧಾರರು. ಬಗ್ಗಿ ನೋಡಿದಾಗ ಪಾಚಿ ತುಂಬಿದ ಬಾವಿಯ ಕಲ್ಲುಗಳು ಒಂದೆಡೆ ಮಾತ್ರ ಕೆಂಪಾದ ಕಲ್ಲು ಕಂಡಿತು. ಆಗ ಬಂದಿದ್ದೇ ರಾಮಗೊಂಡನ ಸ್ಟೋರಿ. ‘ಹೇಳತೇನ ಕೇಳ’ ಅಂದರು ಸೂತ್ರಧಾರರು. ನಾವು ಕಿವಿಯಾದೆವು. ರಾಮಗೊಂಡನ ತಂದೆ ಗೌಡ ಹುಲಿ ಬೇಟೆಗೆ ಹೋದ. ಹೋದವನು ಹುಲಿ ವೇಷದಲ್ಲಿದ್ದ ರಾಕ್ಷಸನ ಕೈಯಲ್ಲಿ ಸಿಕ್ಕಿಬಿದ್ದ. ಮಾಯಾವಿ ರಾಕ್ಷಸ ಮನೆಯೊಳಗೇ ಬಂದ, ರಾಮಗೊಂಡ ಗೌಡ್ತಿ ಬಯಕೆ ತೀರಿಸಲೆಂದು ಹುಲಿಯ ಹಾಲನ್ನು ಹಿಂಡಿಕೊಂಡು ಬರುವ ಸಾಹಸ ಮಾಡಿದ. ರಾಮಗೊಂಡನ ಜೊತೆಗೆ ಪಟ್ಟೆ ಮನಸ್ಸಿನಲ್ಲಿ ಹುಲಿಯ ಚಿತ್ರ ಬೆಳೆಯ ತೊಡಗಿತು. ದಟ್ಟಡವಿಯಲ್ಲಿ ಮನಸ್ಸಿನಂತೆ ನಿಗೂಢವಾಗಿದ್ದ ಹುಲಿ! ರಾತ್ರಿಪೂರ ಅಲೆಯುತ್ತಾ ಕತ್ತಲಲ್ಲಿ ಕತ್ತಲಾಗಿ ಕಾಡುವ ಹುಲಿ! ಶಿವಾಪುರದಂತಹ ಸೀಮೆಗೂ ಕಾಲಿಡಬಹುದೇ ಹುಲಿ? ಇರಬಹುದು ಆಕ್ರಮಣಕಾರರಿಲ್ಲದ ನಾಡಿಗೆ ದೇವರ ಒಡೆತನ ತಿಳಿಯುವುದಾದರೂ ಹೇಗೆ? ಅದಕ್ಕೇ ಹುಲಿ ಬಂದಿರಬೇಕು. ಆದರೆ ಮುಂದೆ ಹುಲಿ ಅಡ್ಡಾಡತೊಡಗಿದ್ದು ಸುಮ್ಮನೇ ಅಲ್ಲ. ಅದು ಮುಂದಿನ ಕೇಡಿನ ಸೂಚಕ. ಯಾರೂ ಅಡ್ಡಾಡದ ಕಾಡಿನೊಳಗೆ ಅಮ್ಮನ ಗುಡ್ಡದೊಳಗೆ ದೂರದ ಪಶ್ಚಿಮದಿಂದ ಬಿಳಿಮನುಷ್ಯ ಬಂದ. ತನ್ನದೇ ಆದ ಗಡಿಯಾರ, ಗುಡಿ ಗಂಡಾಂತರಗಳನ್ನೆಲ್ಲಾ ತಂದ. ಹೀಗಾಗಿ ಅಮ್ಮನ ಸೀಮೆಯಲ್ಲಿ ಜನ ಗೊಂದಲಕ್ಕೀಡಾದರು. ಅಲ್ಲಿ ಕೆಲವರಾದರೂ ನಮ್ಮ ಅಮ್ಮ ದಿಟವೋ ಎಂದು ಪ್ರಶ್ನಿಸಲೂ ತಯಾರಾದರು. ಬಿಳಿ ಮನುಷ್ಯನ ಕಾಲಮಾಪಕ ಎಲ್ಲರನ್ನೂ `ಟಿಕ್ ಟಿಕ್’ ಎಂದು ಅಳೆಯುತ್ತಿತ್ತು. ಅವನ ವಿದ್ಯೆಯಿಂದ ಹತ್ತಿಯಿಂದ ಬಟ್ಟೆ ಮಾಡುವುದನ್ನೂ ಚಿನ್ನವನ್ನು ಕೂಡಿಡುವುದನ್ನೂ ಕಲಿಯುವ ದುರಾಸೆ ಉಂಟಾಯಿತು. ಶಿವಾಪುರದ ಸುತ್ತ ಮುತ್ತಲ ಪ್ರದೇಶವೆಲ್ಲಾ ನಾಡಾಗಿ ಪರಿವರ್ತನೆಯಾಗತೊಡಗಿತು. ನಾಡೆಂದರೆ ಮತ್ತೇನೂ ಅಲ್ಲ. ಸದಾ ಮಾನಸಿಕವಾಗಿ ಅಸ್ಥಿರಗೊಂಡು ಹಣ, ಚಿನ್ನಕ್ಕಾಗಿ ಹಪಹಪಿಸುತ್ತಿರುವುದು; ಸಣ್ಣದರಲ್ಲಿ ಸಮಾಧಾನಗೊಳ್ಳದಿರುವುದು ಇಷ್ಟೇ.
ಮಿಲ್ಲಿನ ಹೊಗೆ ದಟ್ಟೈಸಿದೆ ಬಾನ್ನೀಲಿಯ ತುಂಬ
ತಂಬೆಲರಿನ ತುಂಬಾ ಇದೆ ಪೆಟ್ರೋಲಿನ ನಾತ
ಕಪ್ಪಾಗಿವೆ ಕುಂಡದ ಗಿಡಬಳ್ಳಿಯ ಎಲೆ ಹೂವು
ಎಂಬ ಹಾಡನ್ನು ಆಗಾಗ ಸೈನಿಕರು ಹೇಳಿ ಕವಾಯತು ಮಾಡುತ್ತಾರಂತೆ. ಇಷ್ಟಾದರೂ ಶಿವಾಪುರದಲ್ಲಿ ಕನಸು ಉಳಿದಿತ್ತು ಅದಕ್ಕೆ ಸಂಬಂಧಗಳ ಪ್ರಾಮುಖ್ಯತೆ ತಿಳಿದಿತ್ತು. ಆದುದರಿಂದಲೇ ಅದು ಹಳ್ಳಿಯಾಗಿಯೇ ಉಳಿಯಲು ಇಷ್ಟಪಟ್ಟಿತು. ಇಲ್ಲಿ ಸ್ವಾರ್ಥವಿಲ್ಲ, ಸಣ್ಣತನವಿಲ್ಲ. ಒಂದು ಚಿಕ್ಕ ತಿಳಿವಳಿಕೆ; ‘ತಿನ್ನುವ ಅನ್ನವನ್ನ ಚಿನ್ನ ಮಾಡಿ ಸಂಗ್ರಹಿಸಿ ಇಡಬಾರದು’ ಎನ್ನುವುದು. ಶಿವಾಪುರದ ಬೆಪ್ಪುತಕ್ಕಡಿ ಬೋಳೇಶಂಕರ ಹೇಳುವುದು ಅದನ್ನೇ. ‘ಸಂಶಯ ಯಾಕೆ? ನೀವು ಓದೋದು ಎಣಿಸೋದು ಯಾವುದಕ್ಕಾಗಿ? ಸಮಾಜದಲ್ಲಿ ಚೆನ್ನಾಗಿ ಬದುಕಬೇಕು ಅಂತ ತಾನೆ? ಚೆನ್ನಾಗಿ ಬದುಕಿದರಾಯ್ತು. ಸಂಶಯ ಯಾಕೆ ಬರುತ್ತದೆ ಹೇಳಿ?’ ಎಂದು.
ಆಯ್ತಪ್ಪ ಈ ಹಳ್ಳಿ ಶಿವಾಪುರದಲ್ಲಿ ಹಾಗಾದರೆ ಯಾವ ಊನವೂ ಇಲ್ಲವೆ? ಅದು ತನ್ನಷ್ಟಕ್ಕೆ ತಾನು ಸ್ವಯಂಪೂರ್ಣವೇ? ಶಿವಾಪುರಕ್ಕೆ ಬೆಸ್ಟ್ ಗೈಡ್‌ಗಳೆಂದು ಹೆಸರಾದ ಚೆನ್ನಿಯವರು ತಮ್ಮ ನೋಟ್‌ನಲ್ಲಿ ಹೀಗೆ ಬರೆದಿದ್ದಾರೆ; “ನನಗೆ ಏನನ್ನಿಸುತ್ತೆ ಅಂದರೆ ಒಟ್ಟಾರೆಯಾಗಿ ಸುಂದರವಾಗಿ ಸದೃಢವಾಗಿಯೂ ಕಾಣುವ ಶಿವಾಪುರವನ್ನು ಒಂದು ಪರಿಪೂರ್ಣಜಗತ್ತಿನ ಸಂಕೇತವಾಗಿ ಕಂಬಾರರು ಶಿವಾಪುರವನ್ನು ಕಟ್ಟಿ ನಿಲ್ಲಿಸಿದಂತಿದೆ. ಹಾಗಾಗಿ ಅದು ಉದ್ದೇಶಪೂರ್ವಕವಾಗಿ ಮಾಡಿ ನಿಲ್ಲಿಸಿದ ಯುಟೊಪಿಯಾವೇ ಹೊರತು ನಿಜ ಬದುಕಿನ ಸ್ಥಿತಿಯಾಗಿಲ್ಲ. ಆದ್ದರಿಂದ ಶಿವಾಪುರವು ಕಳೆದು ಹೋದ ಜಗತ್ತಿನ ಒಂದು ಆದರ್ಶಮಯವಾದ ಸ್ಥಿತಿಯಾಗಿದ್ದು ಅದು ನಾವೆಲ್ಲ ಏಗುತ್ತಿರುವ ಆಧುನಿಕ ಜಂಜಾಟಗಳನ್ನು ಎತ್ತಿ ಹೇಳಲು ಬಳಕೆಯಾಗಿರುವ ಸಾಂಕೇತಿಕ ಸಂದರ್ಭವಾಗಿದೆ”. ಶಿವಾಪುರದ ಸೀಮೆಯನ್ನು ಸುತ್ತಿ ಬರುವವರಿಗೆ ಮೊದಲು ಶಿವಾಪುರದ ಹಳ್ಳಿಯ ಸೊಗಡಿನ ಸೊಬಗು ಕಾಣಿಸವುದು ದಿಟವೇ. ಆದರೆ ಈ ಸೀಮೆಯ ಗೌಡರ ದೇಸಾಯರ ಕತೆಗಳನ್ನು ಕೇಳಿದವರಿಗೆ ಅದು ಯುಟೊಪಿಯಾ ಅಂತಷ್ಟೇ ಅನ್ನಿಸುವುದಿಲ್ಲ. ಶಿವಾಪರ ಕಾಣಿಸುತ್ತಿರುವ ಡಿಸ್ಟೋಪಿಯಾ ಕೂಡ ಮುಖ್ಯ ಎಂದು ಭಾವಿಸುವೆ. ಇಲ್ಲಿ ಬರಿಯ ಕೈಯಿಂದ ಮಾತ್ರ ಎಣಿಸ ಬರುವ ಬೆಪ್ತಕ್ಕಡಿ ಬೋಳೇಶಂಕರರು, ಅಮ್ಮನ ಹಟ್ಟಿಯ ಜನರು ಇಲ್ಲ. ಸಮೃದ್ಧಿಯ ನಾಡಾದ ಶಿವಾಪುರವನ್ನು ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಗೌಡರೂ ದೇಸಾಯರೂ ಇದ್ದರು. ಸುಂದರವಾದ ಹಳ್ಳಿಯ ಒಳಗೆ ಅನೇಕ ಹುಣ್ಣು ಹುಳುಕುಗಳಿದ್ದವು. ಎಲ್ಲರ ಮನೆಯ ಹೊಲ ಗದ್ದೆಗಳನ್ನು ಇಂತಿಷ್ಟೇ ಎಂದು ಪಟಪಟನೆ ಹೇಳುವ ಢಂ ಢಂ ಸ್ವಾಮಿಗಳೂ ಚೆನ್ನಾಗಿರುವ ಹೆಣ್ಣು ಹೊಲ ಎಲ್ಲ ನಮಗೇ ಸೇರಬೇಕೆನ್ನುವ ಗೌಡರೂ ಶಿವಾಪುರದಲ್ಲೇ ಮೆರೆದವರು. ಹೀಗೆ ಫಲವಂತಿಕೆಯ ಸುಖವನ್ನೆಲ್ಲ ತಮ್ಮ ಪಾಲಿಗೆ ಇಟ್ಟುಕೊಂಡ ಗೌಡ ದೇಸಾಯಿಗಳ ಸಂತಾನವನ್ನು ಎದುರಿಸಿದ್ದು ಶಿವಾಪುರದವರ ಒಳಗೆ ಕೆಲಸ ಮಾಡುತ್ತಿದ್ದ ಸಮಾಜವಾದಿ ತತ್ವ. ಇಂತಹ ಮಹಾನುಭಾವರ ಕೈಯಲ್ಲಿ ಭೂಮಿ ಹಂಚಿಸುವ ಮಾತಾಡಿದ್ದು ಸ್ವತಃ ಜೋಕುಮಾರನಾದ ಬಸಣ್ಣ, ಸಮಾನತೆಯ ಹಾಡನ್ನು ಮೇಳ ಹಾಡಿತ್ತು: ‘ಹೊಲ ಊಳೋ ರೈತ ಅವನೆ ಹೊಲದೊಡೆಯನಾಗಲಿ, ದೇಶ ತುಂಬಲಿ ಧನಧಾನ್ಯದಿಂದ, ನೆತ್ತರು ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ ಮಣ್ಣು ಮಣ್ಣೆಲ್ಲಾ ಹಸಿಹಸರ ತುಂಬಿ’ ಎಂದು. ಢಂ ಢಂ ದೇವರ ಪೊಳ್ಳುತನ ಕಳಚಲು ಇಂತಾ ಅನೇಕ ಬಸಣ್ಣಗಳು ಶಿವಾಪುರದಲ್ಲಿದ್ದರು ಎನ್ನುತಾರೆ ಇಲ್ಲಿಯವರು. ಹುಲುಮನುಷ್ಯನಾದ ಒಂಕಾರಿ ಕೂಡ ಈ ದೇಸಾಯರಿಗೆ ಪಾಠ ಹೇಳಬಲ್ಲ; “ಇರೋ ಐಸಿರಿ ಎಲ್ಲಾರು ಹಂಚಿಕೋಬೇಕು” ಅಂತ.
“ಇದರಾಗೆ ನೀವೇನು ಆಶ್ಚರ್ಯ ಪಡಬ್ಯಾಡ್ರಿ ಬಾಯಾರಾ… … ಆ ಸ್ವಾತಂತ್ರ್ಯ ಕಾಲದಲ್ಲಿ ಸಣ್ಣ ಹಳ್ಳಿ ಶಿವಪುರ ಅಂತಿತ್ತಲ, ಅದು ಬ್ರಿಟಿಷರಿಗೇ ಎದುರು ನಿಂತು ಧ್ವಜ ಸತ್ಯಾಗ್ರಹ ಮಾಡಿತ್ತು ನೋಡ್ರಿ ಹಂಗೇ ನಮ್ ಶಿವಾಪುರ. ಬಂಡಾಯ ಅನ್ನೋದು ನಮ್ ಮಂದೀ ಮನಸೊಳಗೆ ಗುಪ್ತಗಾಮಿನಿ ಹಂಗ ಝಳ ಝಳನೆ ಹರೀತಿರತದ. ಅದು ಯಾವಾಗ ಉಕ್ಕಿ ಹರಿತಾವೋ ಯಾವ ಬಲ್ಲ? ರಾಜಕೀಯ ವ್ಯವಸ್ಥೆ ಸರೀ ಹೋಗದಿದ್ದರೆ ಶಿವಾಪುರದ ಮಂದಿ ಸುಮ್ಮನೆ ಕೂಡುವವರಲ್ಲ ನೋಡ್ರಿ ಮತ್ತೆ… …” ಎಂದು ಸೂತ್ರಧಾರರು ನನಗೆ ಸಿದನಾಯ್ಕನ ಕತೆ ಹೇಳಿದರು.
“ನೀವು ಶಾಲೆ ಕಲಿತವರು. ನಿಮ್ಮಂತೆ ಶಿವಾಪುರದ ಯುವಕ ಸಿದನಾಯ್ಕ ಶಾಲೆ ಕಲಿತು ಊರಿಗೆ ಮರಳಿದ. ಅವನಿಗೆ ಈ ದೇಸಾಯರ ಅನ್ಯಾಯ ಎಲ್ಲಾ ಆಗತಿರಲಿಲ್ಲ. ಅವ ಮಂದಿ ಹಿಂದ ಬಿದ್ದು ಅವರಿಗೆ ತಿಳಿವಳಿಕೆ ಕೊಡೋ ಯತ್ನ ಮಾಡಿದ ನೋಡಿ ಜನಕ್ಕೆ ತಮ್ಮ ಬಲ ಏನು ಅನ್ನೋದು ತಿಳಿದೇ ಹೋದಂತೆ ಎದ್ದು ಬಿಟ್ರು, ಅದೇನೊ ಕ್ರಾಂತಿ ಅಂತೀರಲ್ಲ ಅದಂತೆ. ಜನವೆಲ್ಲಾ ದೇಸಾಯಿ ಮನೆಗೆ ನುಗ್ಗಿ, ಕೊಳ್ಳೆ ಹೊಡೆದು ಬಂಬಾಟ್ ಮಾಡಬಿಟ್ರು ನೋಡಿ, ಇದೂ ನಮ್ಮ ಸೀಮೆ ಇತಿಹಾಸದಾಗ ದಾಖಲಾದ ಕತೀನೆ”.
“ಅದು ಸರಿ, ಸೂತ್ರಧಾರರೇ ಜೈಸಿದನಾಯ್ಕ ತಾನೇ ದೇಸಾಯಿ ಆಗಿ ಕೂತನಂತಲ್ಲ. ಅದಕ್ಕೇನು ಹೇಳ್ತೀರಿ? ಈ ಸೀಮೆ ಹಣೆ ಬರಹ ಇಷ್ಟೇನೊ? ಒಬ್ಬ ದುಷ್ಟ ಇಳಿದರೆ ಇನ್ನೊಬ್ಬ ದುಷ್ಟನಾಗಿ ಅದೇ ಸಿಂಹಾಸನವನ್ನು ಏರಿ ಕುಳಿತುಕೊಳ್ಳುವುದು ಎಂದರ್ಥವೇ? ಇತಿಹಾಸದ ಹಣೆಯ ಬರಹವೇ ಇಷ್ಟು. ಅಧಿಕಾರ ಎನ್ನುವುದು ಎಲ್ಲರನ್ನು ಹಾಳು ಮಾಡುತ್ತೆ ಸೂತ್ರಧಾರರೆ” ಎಂದೆ.
ಸೂತ್ರಧಾರರು ಯಾಕೊ ಮಾತಾಡದೆ ಉಳಿದರು. ಸುಮ್ಮನೇ ದಾರಿ ಸವೆಸುತ್ತಾ ಹೋಗುತ್ತಿದ್ದಾಗ ತಟಕ್ಕನೆ ತಿರುಗಿ,
“ಅಲ್ಲರೀ, ಎಲ್ಲಾ ಅಮ್ಮಾ ಮಾಡಿದ ಒಂದು ಲೀಲಾ ಅಂತ ನಂಬೊ ಜನ ನಾವು. ಇದೂ ಯಾಕೆ ಅಮ್ಮನ ಲೀಲಾ ಇರಬಾರದು? ಕಟ್ಟೋದು ಕೆಡವೋದು ಅಮ್ಮ ಹೇಳಿಕೊಟ್ಟ ಪಾಠ ಅಲ್ಲೇನ್ರಿ. ತೀರಾ ಸಂಕಟದ ಸಮಯದಲ್ಲಿ ಅಮ್ಮ ದಾರಿ ತೋರಿಸ್ತಾಳ. ಅಮ್ಮನ್ನ ನಂಬಿದವರಾರೂ ಕೆಟ್ಟಿಲ್ಲರೀ.” ಎಂದು ‘ಬನ್ನಿ ನಿಮಗೆ ಅಮ್ಮನ ಗುಡ್ಡಕ್ಕೆ ಹೊರಟ ಜೋಗತಿಯರನ್ನು ತೋರುಸ್ತೀನಿ. ಅವರು ಹೇಳೋ ಕತೆಯನ್ನು ಕೇಳಿ” ಅಂದು ಯಾತ್ರಿಕರ ಗುಂಪಿನ ಕಡೆಗೆ ಕರೆದೊಯ್ದರು.
ಆ ಜೋಗತಿಯರು ಅಮ್ಮನ ಮಹಿಮೆಯನ್ನು ಕತೆ ಮಾಡಿ ಹೇಳುತ್ತಾ ದಾರಿ ಸವೆಸುತ್ತಾ ಇದ್ದರು. ಅವರು ಕತೆಗಳು ಪರ್ಯಾಯದ ಬಗೆಗಿದ್ದ ಅನುಮಾನಗಳನ್ನು ತೊಡೆದು ಹಾಕುವಂತಿದ್ದವು. ಈ ಶಿವಾಪುರ ಅಂದರೆ ಹೀಗೆ ಇರಬೇಕು. ಇಲ್ಲಿ ಪರ್ಯಾಯಗಳ ಒಳದಾರಿಗಳೇ ತೆರೆದುಕೊಂಡಿವೆ. ಇದರ ದಾರಿಹೋಕರಾಗಿ ನಾವು ಎಲ್ಲೆಲ್ಲೋ ಸುತ್ತಾಡಿ ಈಗ ಬಂದಿದೀವಿ. ಆದುದರಿಂದ ನಮಗೆ ಇದು ಯಾರೊ ಇದನ್ನು ಬದುಕಿದ್ದರು ಅಂತ ಒಪ್ಪಲು ಆಗುತಿಲ್ಲ. ಹೊರ ಜಗತ್ತು ಆಧುನಿಕತೆ ಎಂದರೆ ಶಿವಾಪುರ ಅದನ್ನು ಅಲ್ಲ, ಅನಾಧುನಿಕವಾದರೆ ಬದುಕು ಉಳಿಯುತ್ತದೆ ಎನ್ನುತ್ತದೆ. ಹೊರ ಜಗತ್ತು ಚಿನ್ನ, ವೈಭವ ಎಂದು ಕಾತರಿಸಿದರೆ ಶಿವಾಪುರ ಮೊದಲು ಸಸ್ಯದ ಆಂತರ್ಯ ತಿಳಕೊ, ಮನುಷ್ಯರ ನಡುವಿನ ಸಂಬಂಧ ತಿಳಕೊ ಏಕೆಂದರೆ ಅದೇ ಪ್ರಪಂಚವನ್ನು ಉಳಿಸೋದು ಅನ್ನುತ್ತೆ. ಹೊರಜಗತ್ತು ಗಂಡು ಹೆಣ್ಣು ಎಂದು ಭೇದ ಭಾವಿಸಿ ಗಂಡನ್ನು ಶಕ್ತಿಶಾಲಿಯಾಗಿ ಭಾವಿಸಿದರೆ ಶಿವಾಪುರಕ್ಕೆ ಹೆಣ್ಣು ಸತ್ವ ಜಗತ್ತನ್ನು ಮೊರೆಯುವ ಸತ್ಯ ತಿಳಿದಿರುತ್ತೆ. ಆದು ಜೀವಕಾರುಣ್ಯವನ್ನು ಹೆಣ್ಣು ಅನ್ನುತ್ತೆ. ಹೊರಗಿನ ಲೋಕ ಶ್ರೀಮಂತರ ಬದುಕನ್ನ ಬೆರಗಿನಿಂದ ನೋಡುತ್ತಿದ್ದರೆ ಶಿವಾಪುರ ಶ್ರೀಮಂತಿಕೆ ಎನ್ನವುದು ಆಂತರಂಗಿಕ ಎನ್ನುತ್ತೆ. ಯಾಕೊ ಶಿವಾಪುರದ ಬಗೆಗೆ ಕೇಳುತ್ತಾ ನೋಡುತ್ತಾ ಇದು ಖಂಡಿತಾ ಪರ್ಯಾಯಗಳ ರಾಜಧಾನಿ ಎನ್ನಿಸಿತು. ಕೂಗುಮಾರಿಗೆ ಪ್ರತಿಯಾಗಿ ಕೂಗು ಹೊರಡಿಸಬಲ್ಲ ತಾಕತ್ತು ಇಲ್ಲಿದೆ ಎಂದು ಇನ್ನಾವುದೂ ದೇಶಗಳು ಹೀಗೆ ಸಾರಿ ಹೇಳಿರಲಿಲ್ಲ. ಅದರ ಆತ್ಮವಿಶ್ವಾಸಕ್ಕೆ ಹ್ಯಾಟ್ಸ್ ಆಫ್!
ಜೋಗತಿ ಹೇಳಿದ ಪುಣ್ಯಕೋಟಿ ಕತೆ ನಾನು ಕೇಳಿದ ಕತೆಗಿಂತ ವಿಭಿನ್ನವಾಗಿತ್ತು. ಹುಲಿ ತಿನ್ನಬಯಸುವ ಪುಣ್ಯಕೋಟಿ ಸತ್ಯವಂತೆಯಾಗಿ ತನ್ನ ಮಗುವನ್ನು ಬಿಟ್ಟು ಹುಲಿಯ ಬಾಯನ್ನು ಹೊಗಲು ಸಿದ್ಧವಾಗುತ್ತದೆ. ಆದರೆ ಜೋಗತಿ ಕತೆಯಲ್ಲಿ ಪುಣ್ಯಕೋಟಿ ಮೂಲೋಕಗಳನ್ನು ತಿರುಗಿ ತನ್ನ ಕಾಪಾಡುವವರಿಲ್ಲದೆ ಅಮ್ಮನ ಹತ್ತಿರ ಹೋಗುತ್ತದೆ. ಹಸುವನ್ನು ಹುಡುಕಿಕೊಂಡು ಬಂದ ಹುಲಿ ತಾಯಿಯನ್ನು ಹಸುವಿನ ಬಗ್ಗೆ ಕೇಳುತ್ತದೆ. ಆಗ ತಾಯಿ ಏನು ಹೇಳಬೇಕು? ‘ಅಪ್ಪಾ ಮಗನೆ, ಪುಣ್ಯಕೋಟಿ ಇಲ್ಲಿಗೆ ಬಂದಿಲ್ಲವಲ್ಲೊ’ ಎನ್ನುತ್ತಾಳೆ. ಯಾಕೆ ಈ ಸುಳ್ಳು ಎಂದರೆ ಹಸು ಒಂದು ಮಗುವಿನ ತಾಯಿ, ತಾಯಿ ಅಂದರೆ ಸಂಬಂಧಗಳು, ಅಂತಹ ತಾಯಿಯನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಆದುದರಿಂದ ಇಲ್ಲಿ ಸುಳ್ಳು ಹೇಳಿದರೂ ಬಾಧಕವಿಲ್ಲ. ಇಂತಹ ನ್ಯಾಯಗಳು ಬುಡಕಟ್ಟು ಜನಾಂಗಗಳಲ್ಲಿ ಹೇರಳವಾಗಿರುವುದನ್ನು ಕೇಳಿದ್ದೆ. ಶಿವಾಪುರದಲ್ಲಿ ಬೀಸುವ ಗಾಳಿ, ಹರಿಯುವ ನೀರಿಗೂ ಈ ಸತ್ಯ ಗೊತ್ತು ಎನ್ನುವಂತೆ ಅವು ಪ್ರಕೃತಿ ಸಹಜತೆಯನ್ನು ಮೈಗೂಡಿಸಿಕೊಂಡಿವೆ.
ಈ ಪರ್ಯಾಯಗಳನ್ನು ಪ್ರಶ್ನಿಸಿದರೆ ಏನಾದೀತು? ಉಂಟೆ? ಶಿವಾಪುರಕ್ಕೆ ಮೋಸ ಮಾಡಿ ವಿದ್ಯೆ ಕಲಿತು ಓಡಿಹೋದ ಶಿಖರಸೂರ್ಯ ಇಂದಿಗೂ ಶಾಪ ವಿಮೋಚನೆಯಾಗದೆ ಹದ್ದಾಗಿ ಹಾರಾಡುತ್ತಿದ್ದಾನಂತೆ. ಶಿವಾಪುರದವರು ಇಂದಿಗೂ ಕಲ್ಲು ಎತ್ತಿಕೊಂಡು ಹದ್ದನ್ನು ಓಡಿಸುವುದುಂಟು, ಋಜುಮಾರ್ಗದ ಸತ್ವಗಳನ್ನು ತಾವು ಉಳಿಸಿಕೊಂಡವರಾದ್ದರಿಂದ ಕೊಳಲ ದನಿ ಇನ್ನೂ ಕೇಳುತ್ತಿದೆ ಎಂದು ಇಲ್ಲಿನ ಹಿರಿತಲೆಗಳು ಹೇಳುತ್ತಾರೆ.
ಶಿವಾಪುರದ ಕಾಡಿನ ಒಂದೊಂದು ಮರ ಗಿಡಗಳನ್ನು ನೋಡುತ್ತಾ ಪ್ರತಿ ಗಿಡಗಳಿಗೆ ಪೇಟೆಂಟ್ ಮಾಡಿಸಲು ಹೊಯ್ದಾಡುವ ಆಧುನಿಕ ಸಮಾಜದ ನೆನಪಾಯಿತು. ಶಿವಾಪುರದ ಸಂಪನ್ಮೂಲಗಳನ್ನು ಕನಕಪುರಿಯಂತಹ ನಗರಗಳು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳುವ ವಣಿಕ ಸಮಾಜಗಳಾಗಿ ಬೆಳವಣಿಗೆಯಾಗಿದ್ದು ಅಷ್ಟೇನು ಒಳ್ಳೆಯ ಬೆಳವಣಿಗೆಯಾಗಿ ಕಾಣುತ್ತಿಲ್ಲ. ಕನಕಪುರಿಯು ಯುದ್ಧ ಸಂಸ್ಕೃತಿಯ ಪಟ್ಟಣ. ಅದರ ಮೇಲೆ ಹಿಡಿತ ಸಾಧಿಸಿದ್ದು ವರ್ತಕರು. ಅವರ ಮಹತ್ವಾಕಾಂಕ್ಷೆಗೆ ತಕ್ಕಂತೆ ಸಾಮ್ರಾಜ್ಯಗಳಿರಬೇಕೆಂದು ಅವರು ಬಯಸುತ್ತಾರೆ ಮತ್ತು ಅದಕ್ಕೆ ತಕ್ಕನಾಗಿ ಯೋಜನೆ ಹಾಕುತ್ತಾರೆ. ಅವರಿಗೆ ಹೊರಗಿನ ಥಳಕು ಬೇಕು. ಅದಕ್ಕೆ ಸಂಪನ್ಮೂಲವಾಗಿ ಚಿನ್ನ ಬೇಕು. ಆ ಚಿನ್ನವು ಎಲ್ಲಿಂದ ಹೊಂಚಿದರೂ ಸರಿ, ಅದು ಸಂಗ್ರಹದಲ್ಲಿರಬೇಕು ಎನ್ನುವ ಬುದ್ಧಿಯವರದು. ಇಂತಹ ಸಂಸ್ಕೃತಿಗೆ ವಿರೋಧಿಯಾಗಿ ಶಿವಾಪುರವಿದೆ. ಚಿನ್ನ, ಮಾರುಕಟ್ಟೆಗಳಿಂದ ದೂರ ಉಳಿದ ನಾಡು ಎಂದು ಈಗಾಗಲೇ ಹೇಳಿದೆ. ಅದರಂತೆ ಶಿವಾಪುರ ದೇಸಿತನಕ್ಕೆ ಸಂಕೇತವಾಗಿ ಬೆಳೆಯ ತೊಡಗಿದ್ದು ಜಾಗತೀಕರಣ ಬೆಳೆಯುತ್ತಿರುವ ಈ ಸಮಯದಲ್ಲೇ. ಈ ಪರ್ಯಾಯ ರಾಜಕಾರಣ ರಮ್ಯವಲ್ಲ ಎಂದು ಖಚಿತ ಪಡಿಸಿಕೊಳ್ಳಬೇಕಿದೆ. ಇಲ್ಲವಾದರೆ ದ್ವಿತ್ವದಲ್ಲಿ ಸತ್ಯವನ್ನು ಅರಸುವವರಿಗೆ ಕತ್ತಿಯ ಅಲುಗಿನ ಪಯಣವೇ ಆಗಿಬಿಟ್ಟಾತು ಎಂದು ಆಲೋಚಿಸುತ್ತಾ ಮಾತೃ ಪಿತೃ ಸಂಸ್ಕೃತಿಗಳ ಅವಲೋಕನಕ್ಕೆ ಎಡೆ ಮಾಡಿಕೊಟ್ಟ ಶಿವಾಪುರದ ಕಾಡು, ಹಟ್ಟಿಗಳನ್ನು ನೋಡುತ್ತಾ ಮುಂದೆ ಸಾಗಿದೆ.
ಅರೆ, ಸುತ್ತಾಡಿ ಸುತ್ತಾಡಿ ನಾನು ಎಲ್ಲಿಗೆ ಬಂದೆ? ಶಿವಾಪುರದ ಮೂಲೆ ಮೂಲೆಗು ಒಂದೊಂದು ಕತೆಯಿದೆ; ಒಂದೊಂದು ತತ್ವವಿದೆ. ಅದನ್ನೆಲ್ಲಾ ನೋಡಲು, ಕೇಳಲು ಜೀವಮಾನವೇ ಬೇಕೇನೊ. ಶಿವಾಪುರದ ಹಚ್ಚ ಹಸಿರು, ತುಂಬಿದ ಹೊಲ, ಪೈರು, ಸಸ್ಯಹೃದಯ ಬಲ್ಲ ಜಾಣರು ಇವರೆಲ್ಲಾ ತೇಲುವ ಈ ಶಿವಾಪುರದಲ್ಲಿದ್ದಾರೆ. ಈ ನಡುವೆ ಒಂದು ಸಣ್ಣ ಅನುಮಾನ. ಶಿವಾಪುರ ಎಂದರೆ ನಾಡಲ್ಲ ಅದು ಮನಸು ಎಂದು ಕೆಲವು ಓಜರು ಹೇಳುತ್ತಿದ್ದರು. ಶಿವಾಪರ ಮನುಷ್ಯನ ಮನಸ್ಸಿನ ಪ್ರತಿಬಿಂಬವಂತೆ. ಅಲ್ಲಿನ ನಿಗೂಢ, ಕ್ರೌರ್ಯ, ಸಂದೇಹಗಳೆಲ್ಲಾ ಮನಸಿನ ಯಾವುದೋ ಮೂಲೆ ಮುಡುಕುಗಳಲ್ಲಿ ಅಡಗಿ ಕುಳಿತಿರುವಂತೆ ಯಾವಾಗ ಬೇಕೆಂದಲ್ಲಿ ಸರ್ರನೆ ಸರಿದು ಮುನ್ನೆಲೆಗೆ ಬಂದುಬಿಡುವಂತೆ ಇವೆಯಂತೆ. ನಿಜವೇ ಇರಬೇಕು. ಆ ನಾರ್ಸಿಸಿಸ್ ಆ ಶಿವಾಪುರದ ರಾಜಕುಮಾರ ತನ್ನೊಳಗಿನ ಇನ್ನೊಂದನ್ನು ಅರಸಿ ಒಳಗೆ ಒಳಗೆ ಹೋಗಿ ಗೊಂದಲಕ್ಕೆ ಬಿದ್ದರಲ್ಲವೆ? ಆ ಹುಡುಗ ಶಿವಾಪುರದ ರಾಜಕುಮಾರನ ಒಳಗಿಂದ ಬಂದ ಸರ್ಪ ಫ್ರಾಯ್ಡ್ ಹೇಳುವ ಕಾಮ ಸಂಕೇತವಾದ ಹಾವು ಎಂದು ಸರಳವಾಗಿ ಹೇಳಿಬಿಡಬಹುದು. ಆದರೆ ಒಳಗನ್ನು ಅರಿಯವುದು ಅಷ್ಟು ಸುಲಭವೇ? ಕಾರ್ಯಕಾರಣದ ಹಂಗುಗಳು ಎಲ್ಲೊಲ್ಲೊ ಸೇರಿಕೊಂಡಿರುತ್ತವೆ. ಯಾವ ಪಾಪ ಯಾವಾಗ ಬಾಯ್ದೆರೆಯುವುದೊ ಯಾರು ಬಲ್ಲರು? ಮಾದೇವಿಯನ್ನು ಮರುಳು ಮಾಡಿ ಫಲವಂತಿಕೆಯನ್ನು ತಂದ ನವಿಲು ಶಿವಪೂರಕ್ಕೊಡೆಯರಾದ ಶಿವದೇವನಾಯ್ಕರ ಕೋಪಕ್ಕೆ ಈಡಾಗಿ ಪ್ರಾಣ ಕಳೆದುಕೊಂಡಿದ್ದು ಒಂದು ಮಾತಾದರೆ, ಶಿವದೇವರು ನವಿಲನ್ನೇ ಸಾಯಿಸಿ ಅದರ ರೆಕ್ಕೆಯ ಸಿಕ್ಕಿಸಿ, ನವಿಲಿನ ಕಣ್ಣುಗಳ ಕೀಲಿಸಿ ಬರೆದಂಥ ಬಣ್ಣದ ಬಾರ್ಡರಿನ ಸೀರೆಯನ್ನು ತಮ್ಮ ಮಡದಿಗೆ ನೇಯಿಸಿಕೊಡುವ ಪರಿಯಿದೆಯಲ್ಲಾ ಅದು ಕೌರ್ಯದ ಪರಮಾವಧಿ. ಗಂಡ ಹೆಂಡಿರ ನಡುವೆ ನಮ್ಮದೇ ದೇಹಗಳ ಒಳಗೆ ಎಷ್ಟೊಂದು ತಕರಾರುಗಳಿವೆಯಲ್ಲ? ಶಿವಾಪುರದ ನಿಗೂಢತೆ ಮನಸ್ಸಿನಷ್ಟೇ ಸಂಕೀರ್ಣ. ‘ಕತ್ತಲೆಯ ಗವಿಯೊಳಗೆ ಕೇಂದ್ರ ತಪ್ಪಿದ ಭ್ರಾಂತಿ, ಉರುಳ್ಯಾವ ಇಳಕಲಕಡ್ಡಬಿದ್ದಾ’ ಎಂದು ರಾಮಗೊಂಡನ ಮೇಲೆ ಹಾಡಿದ್ದು ಸುಳ್ಳಲ್ಲ. ಮೇಲು ನೋಟಕ್ಕೆ ಸರ್ವಾಂಗ ಸುಂದರವಾಗಿ ಕಾಣುವ ಶಿವಾಪುರದೊಳಗೆ ಎಷ್ಟೆಲ್ಲಾ ಹಲ್‌ಚಲ್! ಮೇಲೆ ಶಾಂತಸಾಗರ ಒಳಗೆ ಹಾಲಾಹಲದ ಕರ್ಷಣ! ಯಾಕೆ ಈ ತಳಮಳ? ಯಾವ ಕೇಡು ಶಿವಾಪುರದ ಮನಸ್ಸಿನಾಳದೊಳಗೆ ಸಂಚರಿಸುತ್ತಿತ್ತೋ? ಮಾನವ ಜನ್ಮದ ಆದಿಮವಾದ ಪಾಪದ ಭೀತಿಯೊ? ಪಟ್ಟೆ ಹುಲಿಯಾಗಿ ಕಾಡುವ ಕೇಡಾಗಿ ಸಂಕೇತ ರೂಪದಲ್ಲಿ ಕೇಡು ಶಿವಾಪುರವನ್ನು ಮೆಟ್ಟುವ ಭಯ ಅನಾದಿಯಾಗಿಯೇ ಉಳಕೊಂಡಿದೆ.
ಶಿವಾಪುರ ಕಾಣಿಸಿದ ಎರಡು ಜಗತ್ತುಗಳು ಕಂದಕಗಳನ್ನೇ ಸೃಷ್ಟಿಸಿಬಿಟ್ಟವಲ್ಲ! ಶಿವಾಪುರದವರ ಜ್ಞಾನ, ಸಂಪನ್ಮೂಲಗಳಿಲ್ಲದೆ ಕನಕಪುರಿಯವರು ಬದುಕಬಲ್ಲರೆ? ಕನಕಪುರಿಯವರು ಮಂಡಿಸುವ ಪ್ರಗತಿಯ ತತ್ವವು ಕಾಲವನ್ನು ಉದ್ದಕ್ಕೆ ಎಳಕೊಂಡು ಮುಂದೆ ಮುಂದೊಕ್ಕೊಯ್ಯುವಂತದ್ದು. ಈ ಕಾಲದಲ್ಲಿ ಬದುಕಲೊಲ್ಲೆನೆನ್ನುವ ಶಿವಾಪುರ ತನ್ನದೇ ಆದ ಕಾಲದಲ್ಲಿ ಬದುಕು ಕಟ್ಟಿಕೊಂಡು ಇರುತ್ತೇನೆ ಎಂಬ ಚಲವಂತ ಸೀಮೆ. ಇವುಗಳಲ್ಲಿ ಯಾವುದು ಬಿಂಬ ಯಾವುದು ಪ್ರತಿಬಿಂಬ? ‘ಆ ಮರ ಈ ಮರ’ ದಲ್ಲಿ ಕವಿ ಕಂಬಾರರು ಹೇಳಿದಂತೆ ಇದು ತಿರುಗಾ ಮುರುಗಿ ಮೂಡುವ ಬಿಂಬ. ಒಂದು ಕಡೆಯಿಂದ ಹತ್ತುತ್ತಾ ಇದ್ದರೆ ಇನ್ನೊಂದು ಕಡೆಯಿಂದ ಇಳಿಯುತ್ತಾ ಇದ್ದಾರೆ. ಯಾವುದು ಸತ್ಯ? ಯಾವುದು ಮಿಥ್ಯ?
ಅಂತೂ ಸೂತ್ರಧಾರರು ಕತೆ ಹೇಳುತ್ತಾ ಶಿವಾಪುರವನ್ನು ತೋರಿಸಿದರು. ರಾಮಗೊಂಡ, ಮಾದೇವಿ, ಸಿದನಾಯ್ಕ, ಬಸಣ್ಣ, ಸಿಂಗಾರೆವ್ವ, ಗೌರಿ, ನಿರ್ವೀಯ್ರರಾದ ಗೌಡರು, ದೇಸಾಯರು, ಎದೆಗಾತಿಯರಾದ ಶಾರಿ, ನಿಂಗಿ ಇವರೆಲ್ಲಾ ನನ್ನ ಕಣ್ಣ ಮುಂದೆ ನಟಿಸಿ, ನರ್ತಿಸಿ ಶಿವಾಪುರ ಸೀಮೆಯ ಹಬ್ಬದುಣಿಸನ್ನು ನೀಡಿದರು. ಇವರೆಲ್ಲ ನಿಜಕ್ಕೂ ಶಿವಾಪುರದ ಅನೇಕ ಮಗ್ಗುಲುಗಳನ್ನು ತೋರಿದರು. ಶಿವಾಪುರದ ಯಾತ್ರೆ ಮುಗಿಯುತ್ತ ಬಂದಂತೆ ಇಂತಹ ಊರನ್ನು ಬಿಟ್ಟು ಹೋಗಬೇಕಲ್ಲ ಅಂತ ಬೇಸರವೆನಿಸತೊಡಗಿತು. ನಾನ್ಯಾಕೆ ಶಿವಪುರವನ್ನು ಇಷ್ಟಪಡತೊಡಗಿದೆ ಎಂದು ನನ್ನನ್ನೆ ನಾನು ಕೇಳಿಕೊಂಡೆ. ಹೌದು, ಶಿವಾಪುರದಲ್ಲಿ ಕಾಮದ ದುರಾಸೆಯ ಗೌಡರಿದ್ದರೂ ಅಲ್ಲಿ ಗೆದ್ದವರು ಹೆಣ್ಣುಗಳೇ. ತಮ್ಮ ಫಲವಂತಿಕೆಯ ಸಾಫಲ್ಯವನ್ನು ಅವರೇ ಕಂಡುಕೊಂಡರು. ಜೀವಮುಖಿಯಾಗಿ ಜೀವಿಸಿದರು. ಅಮ್ಮನ ಗುಡ್ಡದ ಸ್ತ್ರೀಮುಖತೆಯಂತೂ ನಾನು ಓದಿಕೊಂಡ ಸ್ತ್ರೀವಾದಕ್ಕೊಂದು ಖಚಿತ ತಾತ್ವಿಕ ಸ್ವರೂಪವನ್ನೇ ನೀಡುವಂತಿತ್ತು. ಇಲ್ಲಿಂದ ಹೋಗುವಾಗ ಹೆಣ್ಣು ಹೆಣ್ತನದ ಬಗೆಗೆ ನನಗರಿವಿಲ್ಲದಂತೆ ಘನತೆಯ ಅಂಶ ನನ್ನೊಳಗೆ ಪ್ರತಿಫಲಿಸತೊಡಗಿತು. ಇಲ್ಲಿಂದ ಒಯ್ಯುವುದಾದರೆ ಈ ಜೀವಕಾರುಣ್ಯದ ಸುಖದ ಸೂತ್ರವನ್ನೆ ಎಂದು ನನಗೆ ನಾನೇ ಹೇಳಿಕೊಂಡೆ.
ಶಿವಾಪುರ ಮಾಯಿಪುರವಾಗಿ ಸ್ತ್ರೀ ಅಭಿಮುಖವಾಗಿ ಚಲಿಸಬೇಕಾದ ಯಾತ್ರೆಯನ್ನು ನೆನಪಿಸಿಕೊಡುವಂತೆ ಪರ್ಯಾಯಗಳ ತವರೂರಂತೆ ಕಾಣಿಸತೊಡಗಿತು. ಶಾಪಗ್ರಸ್ತ ಶಿಖರಸೂರ್ಯ ಹದ್ದಾಗಿ ಮಿಡುಕಾಡುತ್ತಲೇ ಆಕಾಶದಲ್ಲಿ ಹಾರುತ್ತಿದ್ದ. ಬೆಟ್ಟ ಇಳಿಯುತ್ತಾ ಕೆಳಗೆ ಕನಕಪುರಿಯ ದೀಪಗಳು ಜ್ವಾಜಲ್ಯಮಾನವಾಗಿ ಉರಿಯುತ್ತಿದ್ದುದು ಕಂಡವು. ಅಲ್ಲಿಗೆ ಧಾವಿಸಲೋ ಎಂಬಂತೆ ನಮ್ಮ ಕಾಲುಗಳು ವೇಗವಾಗಿ ಚಲಿಸತೊಡಗಿದವು.
ರಾತ್ರಿ ಬರೆಯಬಹುದಾದ ಡೈರಿಯ ಸಾಲುಗಳೊಂದಿಗೆ ಈ ಯಾತ್ರೆಯ ಸುಖವನ್ನು ಮುಗಿಸುತ್ತೇನೆ:
ಕಂಬಾರರು ತಮ್ಮೂರು ಘೋಡಗೇರಿಯ ನೆನಪಿನಿಂದ ನೂಲ ತೆಗೆದು ಶಿವಾಪುರವನ್ನು ನೇಯ್ದರು. ನೂಲಿನ ಹಿಂದೆ ಬಣ್ಣಗಳ ಕನಸಿತ್ತು. ಅನುಪಮವಾದ ಕಲಾಕೃತಿಯ ಪ್ರತಿಮೆಯಿತ್ತು. ನೂಲಿಗೆ ಮುನ್ನ ಓಂಪ್ರಥಮ ಎಂದು ಹತ್ತಿಯಿತ್ತಲ್ಲ, ಅದೇ ಅಲ್ಲಿನ ಆದರ್ಶದ ಅಮೂರ್ತವಾಗಿತ್ತು. ನೂಲುವ ಮುನ್ನ ಬಟ್ಟೆ ಅಮೂರ್ತವಾದರೆ ಬಟ್ಟೆಗಿಂತ ಮೊದಲು ಹತ್ತಿಯಿತ್ತು. ಹತ್ತಿಗೂ ಮುನ್ನ ಗಿಡಮರದ ಒತ್ತಾಸೆಯಿತ್ತು. ನಾಳೆ ಅದನ್ನು ತೊಡುವವರ ಕನಸು ಭವ್ಯ ಭವಿಷ್ಯದ ಮೇಲಿರಬಹುದು. ಯಾರೆಲ್ಲಾ ಚೆಲುವೆಯರು ಚೆನ್ನಿಗರು ಶಿವಾಪುರದ ಕನಸ ತೊಡುವರೊ ಅವರಿಗೆ ಬದುಕಿನ ಭವಿತವ್ಯ ಕಾಯುತ್ತದಂತೆ. ಕನಸನ್ನೆ ಕಳೆದುಕೊಂಡವರಿಗೆ ಮುಂದಿನ ಬದುಕಾದರೂ ಎಲ್ಲಿ? ಅಂತಹ ಕನಸುಣಿಗಳ ನಾಡು ಶಿವಾಪುರ ಎನ್ನುವುದಂತೂ ಅಲ್ಲಿ ಹೊಕ್ಕು ಬಂದ ಮೇಲೆ ಖಚಿತವಾಯ್ತು.
*****