ನಾನ್ ಸಂಪಾದ್ಸಿದ್ ಬಿಡಕಾಸೆಲ್ಲ
ಬೆಳ್ಳಿ ರೂಪಾಯಾದ್ರೆ-
ಕೊಂಡ್ಕೊಳ್ಳೋದ್ ಒಂದ್ ಯೆಂಡದ್ಬುಂಡೆ
ನೂರಾರ್ ಬುಂಡೆ ಆದ್ರೆ- ೧
ಬಾಯಿ ವೊಟ್ಟೆ ಎಲ್ಲ ನಂಗೆ
ಎಚ್ಚ್ಕೊಂಡ್ ಐನೂರಾದ್ರೆ-
ನನ್ ಜರ್‍ಬೇನು! ನನ್ ಸೋಕೇನು!
ಆಗ್ ನನ್ ನೋಡಬೇಕಾದ್ರೆ! ೨
ಆಗೋಕಿಲ್ಲ ವೋಗೋಕಿಲ್ಲ
‘ರೆ’ ಪರ್‍ಪಂಚದ್ ಬಾಬ್ತು;
ಆದ್ರೂನೂನೆ ‘ರೆ’ ಅಂತಂದ್ರೆ
ಬಾಳ ಸುಕದ್ ಬಾಬ್ತು! ೩
ರೇನ್ನೊ ಕನಸಿನ್ ಪರ್‍ಪಂಚ್ದಲ್ಲಿ
ಬಾಳ್ ಸಂತೋಸಾಗ್ತೈತೆ!
ವುಲ್ಲಿನ್ ಕಂತೆ ವೊತ್ಕೊಂಡಂಗೆ
ಬದಕೋದ್ ಅಗರಾಗ್ತೈತೆ! ೪
ಮುಳುಗೋ ಮನಸಂಗ್ ಒಳೆಯಾಗ್ ಒಂದು
ದೋಣಿ ಸಿಕ್ಕಿದ್ ರೀತಿ
ಸಂಕ್ಟ ಪಟ್ಕೊಂಡ್ ಸಾಯೋವನ್ಗೆ
ರೇಂದ್ರೆ ಬಲೆ ಪ್ರೀತಿ! ೫
ರೇಂತ ರಾಗ ಎಳೆಯೋದೆಲ್ಲ
ನಡದ್ಬುಡೋವಂಗಿದ್ರೆ-
ಬೆಟ್ಟ ಕುಟ್ಕೊಂಡ್ ಓಡೋಗ್ತೈತೆ
ಎಡದಾ ಕಾಲಿಂದ್ ಒದ್ರೆ! ೬
ರೇನ್ನೋದಾಗ್ಲಿ ಆಗ್ದೆ ವೋಗ್ಲಿ
ಅದರಿಂದ ಏನಾಗ್ಬೇಕು?
‘ರೆ’ ಅಂತನ್ಕೊಂಡ್ ಕಸ್ಟಾನೆಲ್ಲ
ಮರೆಯೋದಷ್ಟೆ ಸಾಕು! ೭
‘ಆದ್ರೆ ಗೀದ್ರೆ’ ಅನ್ಕೊಂಡಿದ್ರೆ
ಸುಕವಾಗಿರಬೌದಂದ್ರೆ-
ರೇನ್ನೊ ಅಕ್ಸ್ರಾ ಎಂತಾದ್ದಣ್ಣ!
ಅರೆ ರೇ ರೇ ರೇ ರೇ! ೮
*****