ಸ್ವರ್ಗವೆಂದರೆ ಇಲ್ಲೆ ಕನ್ನಡ ನಾಡಲ್ಲಿ
ನಲುಮೆ ಗೆಲುಮೆ ಒಲುಮೆ ಎಲ್ಲ ನಿತ್ಯ ನೋಡಿಲ್ಲಿ
ಚೆಲುವು ಬೆಡಗು ಹಸಿರ ಮೆರಗು ಎಂದೂ ಹಸಿರಾಗಿ
ತಣಿಸಿದೆ ಕಣ್ಮನ… ಉಣಿಸಿದೆ ಹೂರಣ… ಚೆಲುವಿನ ಸಲೆಯಾಗಿ
ಪಂಪ ನಾರಣಪ್ಪರ ರನ್ನ ರಾಘವಾಂಕರ
ಕಾವ್ಯ ಜ್ಯೋತಿ ಬೆಳಗಿದೆ; ಅಂಧಕಾರ ನೀಗಿದೆ
ಬಸವಣ್ಣ ಅಲ್ಲಮರ ಕನಕದಾಸ ಪುರಂದರ
ನೀತಿ ಮಾರ್ಗ ಕಂಡಿದೆ; ವಿಶ್ವಪಥಕೆ ಕೂಡಿದೆ
ಕನ್ನಡದಾ ಗಾಯನ… ಹೊಸತು ವಿನೂತನ…
ಸೃಷ್ಟಿಯಲ್ಲಿ ಸೊಬಗಲ್ಲಿ ಎಂದೂ ಚಿರಚೇನ || ೧ ||
ಬಾಹುಬಲಿ ನೃಪತುಂಗ ಮಹಾದೇವಿ ಉತ್ತುಂಗರ
ತ್ಯಾಗ ಭೂಮಿ ಸತ್ವವು; ಕನ್ನಡದೇ ನಿತ್ಯವು
ವೀರರಾಣಿ ಚೆನ್ನಮ್ಮ ಕಾವ್ಯರಾಣಿ ಹೊನ್ನಮ್ಮ
ಸಾಧನೆಗೆ ಸ್ಫೂರ್ತಿಯು; ಉತ್ಸಾಹಕೆ ಹಾದಿಯು
ಕನ್ನಡದಾ ಕಾಣಿಕೆ… ಜಗಮಾತೆಗೆ ಮಾಣಿಕೆ…
ನಿತ್ಯ ಕಂಗೊಳಿಸುವ ಮುತ್ತಿನ ಸರ ಮಾಲಿಕೆ || ೨ ||
ಬೇಲೂರ ಕಲೆ ಗುಡಿಯು ಬಾದಾಮಿ ಗವಿ ಶಿಲೆಯು
ಶಿಲ್ಪಿಗಳ ಕರ ಕುಶಲ; ನವರಸಗಳ ಹೂತಲ
ಕಾವೇರಿಯ ಕಲರವ; ಮಲೆನಾಡಿನ ಗಿಡಮರವ
ಕಾವೇರಿಯ ಕಂಠದಲೆ ಕವಿಗಳಿಗೆ ಸ್ಫೂರ್ತಿನೆಲೆ
ಕನ್ನಡವೇ ನಿತ್ಯವು… ಎಂದೂ ಅದು ಸತ್ಯವು
ನುಡಿಯಲು ರೋಮಾಂಚನ ಕೇಳಿ ಜನ್ಮ ಪಾವನ || ೩ ||
*****