ಜಗದಗಲ ಧಗಧಗಿಸುವೀ ಸಮರದಲ್ಲಿ
ಲಕ್ಷಶಃ ಸಾಯೆ, ಲಕ್ಷಾಂತರಂ ಸೀಯೆ,
ಹಸಿವೆ ಬೇನೆಯಿನಿನ್ನೆನಿತೊ ಲಕ್ಷ ಬೀಯೆ,
ನಿಜವೀರರಾರಂತೆ ಈ ಅಮರರಲ್ಲಿ?
ಗೆಲವೆ ವೀರತೆಯಲ್ಲ. ಅನ್ಯರದನೆಲ್ಲಾ
ಕಸಿಯೆ ಕಾದಿಸುವ, ಕಾದುವ ವೀರರಲ್ಲ.
ಒತ್ತಿಬರೆ ತನ್ನಿಳೆಗೆ ಕಾದಲಾರೊಲ್ಲ?
ವರರ ಬಿಡುಗಡೆಗೆ ಮಡಿದಾ ವೀರರಿಲ್ಲಾ?
ತಮಗೆ ಬಿಡುಗಡೆ ಇಲ್ಲ, ವರರದಂ ಕಾಯೆ
ತಮ್ಮದಲ್ಲದ ರಣದೊಳೆಲ್ಲೆಲ್ಲಿ ಕಾದಿ
ಮಡಿದ, ಮೇಣಾನ್ಯರಿಗೆ ತಮ್ಮ ತುತ್ತೀಯೆ
ಹಸಿದಿಲ್ಲಿ ಕೆಡೆದ, ಹಿಂದೀಯರೋಪಾದಿ
ಯಾರಿಲ್ಲವಾ ಭಾರತರಗಣ್ಯ ಕೋಟಿ
ಈ ರಣದ ನಿಜವೀರತೆಯ ಪುಣ್ಯಕೋಟಿ!
*****