ಕಣ್ಣುಮಸುಕು ಇರುವಾಗಲೇ ಅವಳು ಊರ ಹೊರಗಿನ ಬಾವಿಗೆ ನೀರಿಗೆ ಹೋದಳು. ಹಾದಿಯಲ್ಲಿ ಒಂದು ಮನೆಯ ಕಟ್ಟೆಯ ಮೇಲೆ ಒಬ್ಬ ಸಣ್ಣ ಹುಡುಗಿಯು ತನ್ನ ಚಿಕ್ಕ ತಮ್ಮನನ್ನು ಚಂದಪ್ಪನ ಕಡೆಗೆ ಬೊಟ್ಟು ಮಾಡಿ ತೋರಿಸಿ ರಮಿಸುತ್ತಿದ್ದಳು. ಸಂಜೆಯಾದರೂ ತನ್ನ ಹುಡುಗ ಮನೆಗೆ ಬರಲಿಲ್ಲವಲ್ಲ ಎಂದು ಒಬ್ಬ ತಾಯಿ ಓಣಿಯಲ್ಲಿ ಹೋಗಿ, ಹುಡುಕಿ ತನ್ನ ಮಗನನ್ನು ಮನೆಗೆ ಕರೆತರುತ್ತಿದ್ದಳು. ಒಂದು ಮನೆಯ ಮುಂದೆ ಎರಡು ಅಗ್ಗಿಷ್ಟಿಕೆಗಳು ಹೊತ್ತುತ್ತಿದ್ದವು. ಗುಡಿಯ ನೆರೆಮನೆಯಲ್ಲಿ ಅಳುವ ಕಂದನ ಕಿರಿ ಕಿರಿ ಧನಿಯೂ ಅದನ್ನು ಸಂತೈಸಿ ಹಾಡುವ ತಾಯಿಯ ಧನಿಯೂ ಒಂದಕ್ಕೊಂದು ಮೇಲಾಗಿ ಕೇಳಿಬರುತ್ತಿದ್ದವು. ಹುಡುಗರು ಕೆಲವರು ಹಕ್ಕಿ ಗಳಂತೆ ತಮ್ಮ ಗೂಡಿನ ಕಡೆಗೆ ಹೊರಟಿದ್ದರು. ಎಲ್ಲರಿಗೂ ಜೀವನದಲ್ಲಿ ಒಂದು ಎಳೆತ, ಸಳೆತ ಇತ್ತು. ಇದನ್ನೆಲ್ಲ ನೋಡುವ ಅವಳಿಗೆ ಯಾವ ಎಳೆತವಿತ್ತೋ? ಅವಳ ಜೊತೆಗೂ ಯಾರೂ ಇರಲಿಲ್ಲ. ಬಾವಿಗೆ ಹೋದರೆ ನೀರಿನ ಎಳೆತ, ಮನೆಗೆ ತಡಮಾಡಿ ಹೋದರೆ ಬೆನ್ನ ಮೇಲೆ ಸೆಳೆತ, ಇದರ ಪರಿಚಯ ಏಕಾಕಿನಿಗೆ ಇತ್ತು.
ಅವಳ ಕೂದಲದಲ್ಲಿ ಓರಣವಿರಲಿಲ್ಲ. ಕಣ್ಣಿನಲ್ಲಿ ನಿರುದ್ದಿಷ್ಟ ಚಾಂಚಲ್ಯವೂ, ಭಯಾನಕ ಭಣಭಣವೂ ಒಟ್ಟುಗೂಡಿದ್ದವು. ನಡಿಗೆಗೆ ತಾಳ ವಿರಲಿಲ್ಲ. ನೆಲ ನೋಡಿ ಬೇಸತ್ತು, ಮುಗಿಲ ಕಡೆಗೆ ಮುಖ ಮೇಲಕ್ಕೆತ್ತಿದಾಗ, ಅದರ ಮೇಲೆ ಚಂದ್ರನ ಕಿರಣ ಬಿದ್ದರೂ, ಅವಳ ಕಣ್ಣಲ್ಲಾಗಲಿ, ತುಟಿ ಯಲ್ಲಾಗಲಿ, ಮುಖದಲ್ಲಾಗಲಿ ಪ್ರತಿಕಿರಣವಾವುದೂ ಸೂಸುತ್ತಿರಲಿಲ್ಲ. ಹಳ್ಳದಲ್ಲಿ ಎಲ್ಲಿಂದಲೂ ಉದುರಿ ಬಿದ್ದ ಒಂದು ಹಳೆಯ ಎಲೆಯಂತೆ ಅವಳ ಬಾಳು ಸಾಗಿತ್ತು. ಕಾಲ ಚಕ್ರದಿಂದ ಸರಿದಷ್ಟೆ ಅವಳ ದಿನ ಚಕ್ರ ತಿರುಗುತ್ತಿತ್ತು. ಗೊತ್ತಾದ ಹತ್ತು, ಹನ್ನೆರಡು ವಾಡಿಕೆಯ ಕೆಲಸಗಳಲ್ಲಿ ಮುಗಿಯುತ್ತಿತ್ತು. ಇಷ್ಟೆ, ಅವಳ ಗಡಿಯಾಳಕ್ಕೆ ಕೊಟ್ಟ ಕೀಲಿ ತೀರಿದ್ದಿಲ್ಲ.
ಒಬ್ಬಳೇ ನೀರಿಗೆ ಹೋದಳು. ಒಬ್ಬಳೇ ಸೇದಿದಳು; ಒಬ್ಬಳೇ ತಿರುಗಿ ಮನೆಗೆ ಹೊರಟಳು. ಅವಳ ಹಿಂದಿನಿಂದ ಬಂದವರೂ, ಅವಳ ಸರಿಗೆ ಬಂದವರೂ, ಕೆಲವರು ಅತ್ತೆಮನೆ ಸೊಸೆಯರು ಮತ್ತು ತವರುಮನೆ ಮಕ್ಕಳು ಅವಳ ಮುಂದೆ ಹೋದರು. ‘ಅವರಿಗೆ ಸಂಧ್ಯಾವಂದನೆಗೆ ನೀರಿಡಬೇಕು’ ಎಂದು ಕೆಲವರು; ‘ನಮ್ಮವನು ಎದ್ದಿದ್ದಾನು, ಇಂದು ಅಡ್ಡಹೊತ್ತಿಗೆ ಮಲಗಿದ್ದ ಎಂದು ಒಬ್ಬರು; ‘ಮುಂಜಾನೆಯೇ ನೀರು ತರಬೇಕಾಗಿತ್ತು, ಸುಳ್ಳೆ ಸಂಜೆಗೆ ಬಂದೆ’ ಎಂದು ಮತ್ತೊಬ್ಬರು. ಪ್ರತಿಯೊಬ್ಬರಿಗೂ ಮನೆಗೆ ಆತುರಿಸಿ ಹೋಗಲು ಕಾರಣಗಳಿದ್ದವು. ಅವಳಿಗೆ ಏನು ಕಾರಣವಿತ್ತು? ಮದುವೆಯಾದ ಗಂಡನು ಅದಾದ ಮೇಲೆ ಒಂದೆರಡು ವರ್‍ಷಗಳಲ್ಲಿಯೇ ಎಲ್ಲಿಯೋ ಯಾತ್ರೆಗೆ ಹೋಗಿದ್ದನು. ಸತ್ತನು ಎಂದು ಕೆಲವರಾಡುತ್ತಿದ್ದರು. ಹುಚ್ಚನಾಗಿದ್ದಾನೆ ಎಂದು ಬಲ್ಲವರಂತೆ ಮತ್ತೆ ಬೇರೆ ಜನರು ಹೇಳುತ್ತಿದ್ದರು. ಅವಳ ಪಾಲಿಗೆ ಎಲ್ಲವೂ ಸರಿಯಾಗಿತ್ತು. ಅವಳಿಗೆ ಮಕ್ಕಳಿರಲಿಲ್ಲ. ಅವಳಿಗೆ ತವರವರೆಂಬ ಮಮತೆಯವರಾರೂ ಇರಲಿಲ್ಲ. ಇಂಥ ಹತಭಾಗಿನಿಯು ಯಾರಿಗೆ ಬೇಕಾಗಿರ ಬೇಕು?
ಅವಳು ಇಂದು ಮನಮನೆಯ ಮುಂದೆ ನೋಡಿದ ನೋಟವು ಅಷ್ಟೇನೂ ಅಸಾಮಾನ್ಯವಲ್ಲ. ಆದರೂ, ಎಲ್ಲಿಂದಲೋ ಸುಳಿಗಾಳಿ ತಾಕಿ, ಬರಡು ಮರದ ಒಂದೆರಡು ಎಲೆಗಳೂ ಉಲಿಯುವಂತೆ, ಅವಳ ತಲೆಯಲ್ಲಿ ಒಂದೆರಡು ವಿಚಾರಗಳು ಗುಜುಗುಜು ಮಾತನಾಡಹತ್ತಿದವು. ಮಲೆತು ನಿಂತ ನೀರಿನಲ್ಲಿ, ಅದರ ಮೇಲಿಂದ, ಆಕಾಶದಲ್ಲಿ ಹಾರಿ ಹೋಗುವ ಹಕ್ಕಿಯ ಬಾಯೊಳಗಿಂದ ಬಿದ್ದ ಕಟ್ಟಿಗೆಯ ತುಂಡೊಂದರಿಂದ ತರಂಗಗಳೇಳುವಂತೆ ಅವಳ ಮೈ ಏಕೋ ಜುಮ್ ಎಂದಿತು. ಬಾವಿಯಿಂದ ಮನೆಗೆ ಬರುವ ಹಾದಿಯಲ್ಲಿ ಬಲಭೀಮನ ಗುಡಿಯಿತ್ತು. ಅಲ್ಲಿ ಒಬ್ಬ ಬೈರಾಗಿಯು ಬಂದಿರುವನೆಂದೂ, ಅವನು ಸಾಮುದ್ರಿಕ ಹೇಳುವನೆಂದೂ, ಅವಳು ಅಂದೇ ಕೇಳಿದ್ದಳು. ಅಂತೆಯೇ ಅವಳ ಅಲಸ ಗತಿಗೆ ಮತ್ತೊಂದಿಷ್ಟು ಮಂದತೆ ಬಂದಿತ್ತು. ಸ್ವಲ್ಪ ಕತ್ತಲಾದೊಡನೆ ದೇವರಿಗೆ ಹೋದಂತೆ ಮಾಡಿ ಆ ಬೈರಾಗಿಗೆ ತನ್ನ ಕೈ ತೋರಿಸಿದರೆ ಹೇಗೆ? ಎಂಬ ವಿಚಾರವು ಅವಳಿಗೆ ಕಾಲೊಡಕಾಗಿತ್ತು. ಮಕ್ಕಳಾಗುವವೇ ಎಂದು ಕೇಳಬೇಕೇ? ಅಥವಾ ಹಾಗೇ ತನಗೆ ಸುಖ-ಸೌಭಾಗ್ಯಗಳಿವೆಯೇ ಎಂದು ಕೇಳಬೇಕೇ? ಕೇಳಬೇಕಾದರೂ ಏನು? ಕೇಳಬೇಕೋ ಕೇಳಬಾರದೋ? ಕೇಳದಿದ್ದರೆ ತನ್ನ ಈ ಪ್ರಶ್ನೆಗಳಿಗೆ ಯಾರು, ಎಂದು, ಉತ್ತರ ಕೊಡತಕ್ಕವರು?
ಅವಳು ಗುಡಿಗೆ ಬರುವ ಹೊತ್ತಿಗೆ ಮಬ್ಬುಗತ್ತಲಾಗಿತ್ತು. ಆ ಹಾಳುಗುಡಿಗೆ ಬಹಳ ಜನರು ಬರುತ್ತಿರಲಿಲ್ಲ. ಬರುವ ಭಕ್ತರು ತೀರ ಸಂಜೆಗೆ ಬಂದು ಹೋಗಿದ್ದರು. ಪೂಜಾರಿಯೂ ಸಂಜೆಯ ದೀಪ ಎಣ್ಣೆ ಮಾಡಿ ಹೋಗಿದ್ದನು. ಅವಳು ಗುಡಿ ಹೊಕ್ಕಾಗ ಬೈರಾಗಿಯು ಅವರ ಪದ್ಧತಿಯಂತೆ ಬೆಂಕಿ ಹೊತ್ತಿಸಿ ಕುಳಿತಿದ್ದನು. ಕೊಡವನ್ನು ಕೆಳಗಿರಿಸಿ ಅವಳು ದೇವರಿಗೆ ನಮಸ್ಕಾರ ಮಾಡುವಾಗ ಅವನು ಧ್ಯಾನಸ್ಥನಂತೆ ಕಾಣುತ್ತಿದ್ದನು. ಅವಳು ಅವನಿಗೂ ನಮಸ್ಕಾರ ಮಾಡಿದಾಗ ಅವನು ಏನು ಆಶೀರ್ವಾದವನ್ನೂ ಕೊಡಲಿಲ್ಲ. ಅವರು ಏನೆಂದು ಮಾತು ಪ್ರಾರಂಭಿಸಬೇಕು? ಮಕ್ಕಳ ಕೂಗು ಅವಳ ಎದೆದುಂಬಿತ್ತು. ಅವಳು ಅವನೆದುರು ಕುಳಿತುಬಿಟ್ಟಳು. ಬೈರಾಗಿಯು ಕಣ್ತೆರೆದು ‘ಇದೇನಿದು? ಯಾರು ತಾವು?’ ಎಂದನು.
ತನ್ನ ಎಡಗೈಯನ್ನು ಒದ್ದೆ ಮಾಡಿ ತೊಡೆಗೆ ಒರೆಸಿಕೊಂಡು ಭೈರಾಗಿಯ ಎದುರು ಹಿಡಿದು ‘ನನಗೆ ಮಕ್ಕಳಾಗುವವೇ?’ ಎಂದು ಕೇಳಿದಳು. ಬೈರಾಗಿಯು ಕೈ ಹಿಡಿದ. ಅವಳ ಮೈ ಜುಮ್ಮೆಂದಿತು. ತಾನು ಕೈ ತೋರಿಸಿ ಅವಲಕ್ಷಣ ಮಾಡಿಕೊಂಡೆನೆಂದು ಅವಳಿಗೆ ತೋರಿತು. ಕೇಳಿದ ಪ್ರಶ್ನೆಯೇ ತಪ್ಪಾಯಿತೇನೋ ಎನಿಸಿತು. ಅವಳಿಗೆ ಬೈರಾಗಿಯ ಕಡೆಗೆ ನೋಡುವ ಧೈರ್‍ಯವಾಗಲಿಲ್ಲ. ಕಾಲವು ಸ್ಪ್ರಿಂಗು ಹರಿದ ಗಡಿಯಾರದಂತೆ ಸರನೆ ತಿರುಗಿದಂತಾಯಿತು. ಕೈ ಕೊಸರಿಕೊಳ್ಳಬೇಕೆಂದರೆ ಅದರಲ್ಲಿ ಜೀವವಿರಲಿಲ್ಲ. ಮೈಗೆ ಜಡತೆ ಬಂದಿತ್ತು. ಕಣ್ಣಿಗೆ ನಿದ್ದಿ ಕವಿದಂತಾಗಿತ್ತು. ದುಃಸ್ವಪ್ನದೊಳಗಿಂದ ದಡ ಪಡಿಸಿ ಎದ್ದಂತೆ ಅವಳು ಎದ್ದುಬಿಟ್ಟಳು; ಕೊಡವನ್ನೆತ್ತಿ ಹೊರಬಿದ್ದಳು. ಬೈರಾಗಿ ಬೆರಗಾಗಿ, ಬಾಯ್ಬಿಟ್ಟು, ಬಾಗಿಲ ಕಡೆಗೆ ನೋಡುತ್ತ ಹಾಗೆ ಕುಳಿತ.
ಅವಳು ಮನೆಗೆ ಬಂದ ಮೇಲೆ ದಿನಂ ಪ್ರತಿಯ ಪುಷ್ಪಾಂಜಲಿಗಳಾದವು. ಎಣ್ಣೆ ಕಾಣದ ತನ್ನ ಮುಡಿಯಲ್ಲಿ ಅವುಗಳನ್ನು ಹೂವಿನಂತೆಯೇ ಅವಳು ಧರಿಸಿದಳು. ಊಟ, ಉಡಸಾರಣೆ, ಉಪಕರಣಿಗಳು, ಉದ್ದಕ್ಕೆ ಸಾಗಿದವು, ಯಥಾ ಪ್ರಕಾರ ನಿದ್ರೆಯ ಹೊತ್ತು ಬಂತು. ಬಡವರಿಗೂ ಕೂಡ ಎರವಾಗದಿದ್ದ ನಿದ್ದೆ ಇವಳಿಗೂ ಬಂತು. ಬೆಳಗುಜಾವ ಎದ್ದಾಗ, ಬಿಸಿಲಿನಲ್ಲಿ ಬೆವರಿಟ್ಟವನು, ಹೊಳೆ ನೀರಲ್ಲಿ ಮಿಂದೆದ್ದಂತೆ. ಮೈ ಗೊಂದು ಲಘುತ್ವ, ಮನಕ್ಕೊಂದು ಪ್ರಸನ್ನತೆ ಬಂದಿತ್ತು ಅವಳಿಗೆ. ಯಾವುದೋ ಸುಖಸ್ವಪ್ನದ ರಾಜ್ಯದೊಳಗಿಂದ ಅವಳು ಹಾಯ್ದು ಬಂದಿದ್ದಳು. ಅರೆಮಸಕಾಗಿ ಅದರ ನೆನಪಾದಂತೆ ಅವಳಿಗೆ ಅದೆಲ್ಲ ಹಳವಂಡ ಗನಸಿನಂತೆ ನೆನಪಾಗಹತ್ತಿತು. ಗನಸಿನಂತೆ ತೋರಿತು. ಮತ್ತೆ ಅವಳ ಮುಖ ಮುದ್ರೆ ಖಿನ್ನವಾಯಿತು. ದಿನದ ರಥವು ಮತ್ತೆ ತನ್ನ ಚಕ್ರಗಳನ್ನು ತಿರುಗಿಸಹತ್ತಿತು. ಅವಳು ಪರಸಿಗಲ್ಲಾಗಿ ತನ್ನ ಮೈಯನ್ನು ಎಂದಿನಂತೆ ಅದಕ್ಕೆ ಮತ್ತೆ ಒಡ್ಡಿದಳು. ಗಾಣದ ಎತ್ತು ಕಣ್ಣು ಕಟ್ಟಿ ಕೊಂಡು ತಿರುಗುವಂತೆ ಅವಳು ದಿನಕ್ರಮದಲ್ಲಿ ಕಾಲಿಟ್ಟಳು.
ಅವಳು ಮೈ ತೊಳೆದುಕೊಂಡು ದೇವರ ಪೂಜೆ ಸಾಹಿತ್ಯವನ್ನು ಸರಿಪಡಿಸುವಾಗ ‘ರಾಮ ಭಟ್ಟರೆ ಬರ್ರಿ, ಹೊರಗೆ ಬನ್ನಿ, ನಿಮ್ಮ ಮಗ ಬಂದಿದ್ದಾನೆ’ ಎಂದು ಯಾರೋ ಕೂಗಿದರು. ಮನೆಯ ಯಜಮಾನತಿ ಅಡ್ಡರಸಿ ಓಡಿ ಬಂದು ‘ಅವರು ಮನೆಯಲ್ಲಿಲ್ಲ. ಯಾಕೆ? ಬೇಕಾಗಿತ್ತು?’ ಎಂದು ಕೇಳಿದಳು. ‘ಅಯ್ಯೋ ತಾಯಿ, ನೀವು ಪುಣ್ಯವಂತರು, ನಿಮ್ಮ ಮಗ ಬಂದಿದ್ದಾನೆ. ನಮ್ಮ ಮನೆಯಲ್ಲಿಯೇ ಕುಳಿತಿದ್ದಾನೆ, ಎಲ್ಲಿದ್ದಾರೆ ಭಟ್ಟರು?’ ಅವರು ಹೋಗಿದ್ದಾರೆ; ನಾಳೆ ಬರತಾರೆ, ಹೌದು, ಹಳ್ಳಿಗೆ, ಲಕ್ಷ್ಮಣ ಗೌಡರನ್ನು ಕಂಡುಬರಲಿಕ್ಕೆ.. ಹೊಟ್ಟೆ ಇದೆಯಲ್ಲ’ ಮುದಿಕೆ ಮುತ್ತೈದೆ ಕಣ್ಣೀರು ತೆಗೆದಳು; ಬಂದವರು ಅಂದರು ‘ಇನ್ನೇನು ಮಗ ಬಂದ. ಹಡೆದ ಹೊಟ್ಟೆ ತಣ್ಣಗಿರಲಿ. ಬರ್ರಿ, ನಮ್ಮ ಮನೆಗೆ, ಸುಬ್ಬಾಜೋಯಿಸರನ್ನು ಕರೆಕಳಿಸಿದ್ದೇನೆ. ರಾಮದೇವರ ಗುಡಿಯಲ್ಲಿ ಮಗನನ್ನು ಕಂಡು, ಮನೆಗೆ ಮರಳಿ ಬನ್ನಿ, ಹನ್ನೆರಡು ವರ್‍ಷ ಆದವಲ್ಲವೇ, ಮಗ ದೇಶಾಂತರಕ್ಕೆ ಹೋಗಿ?’ ತನ್ನ ತಲೆತುಂಬಾದ ನರೆಗೂದಲು ಸವರುತ್ತ ‘ನೂರು ವರ್‍ಷ’ ಎಂದಳು ಮುದುಕಿ. ಬಂದವರು ನಕ್ಕು ‘ದುಃಖಕ್ಕೆ ಎಷ್ಟೆಂದರೂ ವರ್‍ಷ ಕಡಿಮೆ. ಮಗನನ್ನು ಮತ್ತೆ ನೋಡಿದಿರಲ್ಲ? ನೀವು ಹೇಳಿ, ಪುಣ್ಯವಂತರು!’ ಬೇಗ ಬರಲು ಹೇಳಿ. ಬಂದವರು ಮುಂದೆ ಹೋದರು. ಮುದುಕಿ ಕೈಕಾಲು ಮುಖ ಮತ್ತೆ ತೊಳೆದುಕೊಂಡು ದೇವರಿಗೆ ಹೋಗಿ ನಮಸ್ಕಾರ ಮಾಡಿದಳು. ಹಣೆತುಂಬ ಕುಂಕುಮ ನೀಡಿದಳು. ‘ಯಾರೋ ಬಂದಿದ್ದಾರಂತೆ, ಏನೋ ನಿನ್ನ ಭಾಗ್ಯ. ನೀರು ಕಾಯಿಸಿ ಇಡು, ಹಣಮಂತರಾಯರ ಮನೆಯ ಹಾಲು ಬಂದಿದೆ. ಅದು ಕಾದಿರಲಿ. ಒಳಗೆ ಒಂದು ಮಣೆ ಹಾಕಿರು. ಅಲ್ಲಿ ಹೊರಗೆ ಒಳಗಿನ ಜಮಖಾನೆ ಹಾಸಿರು. ನಿನ್ನ ಭಾಗ್ಯ’ ಇದೇ ಈಗ ಬರುತ್ತೇನೆ ಎಂದಳು ಅತ್ತೆ. ಸೊಸೆಗೆ ಪೂರ್‍ಣ ಅರ್‍ಥವಾಗಲಿಲ್ಲ. ಕೆಲಸ ತಿಳಿಯಿತು. ಯಾರೋ ಮನೆಗೆ ಬರುತ್ತಾರೆ ಎಂದು ತೋರಿತು. ಮುದುಕಿ ಹಿತ್ತಲಲ್ಲಿ ಎರಡು ಹೂಗಳನ್ನೂ, ಹತ್ತು ತುಳಸಿಗಳನ್ನೂ ಕೊಯ್ದಳು. ಉಡಿಯಲ್ಲಿ ಅಕ್ಕಿಯನ್ನು ಬೊಗಸೆ ಬೊಗಸೆ ತುಂಬಿದಳು. ಎರಡು ನೀಲಾಂಜನಕ್ಕೆ ನಾಲ್ಕು ಹೂಬತ್ತಿಗಳನ್ನು ಹಾಕಿ, ತುಂಬ ತುಪ್ಪ ಇಟ್ಟಳು. ಹಳೆಯ ಡಬ್ಬಿಯೊಳಗಿಂದ ನಾಲ್ಕು ದುಡ್ಡು ತೆಗೆದು ಟೊಂಕಕ್ಕೆ ಹಚ್ಚಿದಳು. ಮತ್ತೆ ಸೊಸೆಗೆ ಹೇಳಿದಳು: ‘ನೀನೂ ಮೈ ತೊಳೆದುಕೊಂಡು, ನನ್ನ ಸೀರೆ ಉಟ್ಟುಕೊಂಡು ಬಿಡು ಈ ಹೊತ್ತು. ಏನಂದೆ? ಹೊರಗೆ ಜಮಖಾನ ಹಾಸಿರು. ದೇವರಿಗೆ ಹೋಗಿಬರುತ್ತೇನೆ. ಎಷ್ಟು ಸುಳ್ಳೋ, ಎಷ್ಟು ಖರೇನೋ, ನಿನ್ನ ಭಾಗ್ಯ’ ಎಂದು ಮುದುಕಿ ಮನೆಬಿಟ್ಟು ಹೊರ ಬಿದ್ದಳು. ಹೊರಡುವಾಗ ಮನೆಯ ಹೊಸ್ತಿಲಕ್ಕೆ ತೆಳಗೆ, ಮೇಲೆ ಮತ್ತೊಮ್ಮೆ ಅರಿಶಿನ-ಕುಂಕುಮ ಒತ್ತಿದಳು. ತನಗೂ ಇಟ್ಟುಕೊಂಡಳು.
ಭಟ್ಟರ ಮಗ ಬಂದನೆಂದು ಓಣಿಯಲ್ಲಿ ಸುದ್ದಿ ಹರಡಿತ್ತು. ಆ ಮುದುಕಿಯನ್ನು ಕಂಡವರೊಬ್ಬೊಬ್ಬರು ‘ಒಳ್ಳೆಯದಾಯ್ತರವ್ವಾ’ ಸುಖ ಬರೋದಿತ್ತಂದರ ಹೀಂಗ ಬರ್‍ತಽದ’ ‘ಯಾಕೆ ಭಟ್ಟರು ಎಲ್ಲಿ ಹೋಗ್ಯಾರ? ಅವರಿಗೆ ಹೇಳಿಕಳಿಸಿದರೇನು?’ ಹೀಗೆ ಒಂದೊಂದು ಮಾತು ಹೇಳಿದರು. ಮುದುಕಿ ಎಲ್ಲರಿಗೂ ನೀರ್‍ತುಂಬಿದ ಕಣ್ಣುಗಳಿಂದ ಹೂಂಗುಡುತ್ತ ಮುಂದೆ ಸಾಗಿದಳು.
ಸೊಸೆಯು ಭಾಗ್ಯ ಎಂಬ ಶಬ್ದ ಕೇಳಿ ಬಹಳ ವರ್‍ಷಗಳಾಗಿದ್ದವು. ಅತ್ತೆಯವರು ಯಾರ ಭಾಗ್ಯ ಅಂದರು? ಆಕೆಗೆ ಏನೂ ತಿಳಿಯಲಿಲ್ಲ. ಆಕೆ ಬೇಗ ಬೇಗ ಮೈ ತೊಳೆದುಕೊಂಡಳು. ತನ್ನ ಹರಕು ಸೀರೆಯನ್ನೇ ಉಟ್ಟಳು; ಅತ್ತೆಯ ಸೀರೆ ಉಡಲು ಧೈರ್‍ಯವಾಗಲಿಲ್ಲ. ಹಾಲು ಕಾಯುತ್ತಿರುವಾಗ, ನೆರೆಮನೆಯವಳೊಬ್ಬಳು ಅಡಿಗೆ-ಮನೆಯಲ್ಲಿ ಹಣಿಕಿ ಹಾಕಿ ‘ಇದ್ದೀರೇನು?’ ಎಂದು ಕೇಳಿದಳು. ’ಸಾಯಲಿಕ್ಕೆ ನನಗೇನಾಗ್ಯಽದ’ ಎಂದು ಭಟ್ಟರ ಮನೆಯ ಸೊಸೆ ವಟಗುಟ್ಟಿದಳು. ‘ಅಯ್ಯಽ ಇದೇನರ್ರೀ ಮಾತು’ ಎಂದವಳೆ ಬಂದವಳು ಬಂದ ಕಾಲಿನಿಂದ ಹಿಂದೆ ಹೊರಟಳು. ‘ಕುಂಕುಮ ಹಚ್ಚಿಕೊಂಡು ಹೋಗರಿ’ ಎಂದು ಸೊಸೆ ಕೂಗಿದಳು. ವಾಗತ್ಯಕ್ಕಾಗಿ ಆಕೆ ತಿರುಗಿ ಬಂದು ‘ಗಂಡ ಬಂದ ದಿನಾನಾರ ಛಂದ ಮಾತಾಡ್ರಿ’ ಎಂದು ಉಪದೇಶ ಮಾಡಿ ಹೊರಟುಹೋದಳು. ‘ಏನು ಮಾತು? ಯಾರ ಗಂಡ?’ ಏಕಾಕಿನಿಯ ತಲೆಯಲ್ಲಿ ಊಹೆ ನಡೆಯಿತು. ಬಯ್ದಂತೆ ತೋರುವ ಆ ಮಾತು ಅವಳಿಗೆ ಹಿತ ಎನಿಸಿದವು. ‘ತನ್ನ ಗಂಡ ಬರುವನೇ? ತಾನು ಇಂದು ಎದ್ದೊಡನೆ ಯಾರ ಮುಖ ನೋಡಿದೆ? ಇಂದು ಯಾವ ವಾರ? ಅತ್ತೆ ಒಳ್ಳೆ ಮಾತನ್ನಾಡಿದರಲ್ಲಾ?’ ಬೆಳಗು ಬಿದ್ದ ಸ್ವಪ್ನದ ಮಧುರಸ್ಮೃತಿಯಂತೆ ಎಲ್ಲವೂ ಸವಿಯಾಗಿ ತೋರಿತು. ಅರುಚಿಯೆ ಅಭ್ಯಾಸವಾದ ಬಾಯಿಗೆ ಬೇವೂ ಬೆಲ್ಲಬೆಲ್ಲಸಾಗಿ ಹತ್ತುವಂತೆ ಆಕೆಗೆ ಹೊಳೆಯಿತು. ನಂಬಿಗೆಯಾಗಲೊಲ್ಲದು. ಮೇಲೆ ತನಗೇನೋ ಭಾಗ್ಯ ಬರುವುದಿದೆ ಎಂದಷ್ಟೇ ನೋಡಿದಳು, ಹಂಚಿನ ಚಪ್ಪರದ ತೂತುಗಳೊಳಗಿಂದೆಲ್ಲ ಸೂರ್‍ಯನ ಬೆಳಕು ನೇರವಾಗಿ ಸುರಿಯುತ್ತಿತ್ತು. ಮನೆಯ ಹೊರಬಾಗಿಲಿಗೆ ಬಂದು ನೋಡಿದಳು. ಓಣಿ ತುಂಬಿ ಬಿಸಿಲು ಹರಿಯುತ್ತಿತ್ತು. ಇದು ಯಾವ ಮಾಸ? ಇದು ಯಾವ ದಿವಸ? ಈಗ ಎಷ್ಟೊತ್ತಾಗಿರಬೇಕು? ಮಧ್ಯಾಹ್ನದ ನಿದ್ದೆಯಿಂದೆದ್ದವರು ದಿಗಿಲು ಗೊಂಡಂತೆ ಅವಳಿಗೆ ಕಾಲಭ್ರಮೆಯಾಯಿತು. ಜಮಖಾನೆ ಹಾಸುವುದು ನೆನಪಾಗಿ ಅವಳು ಪೆಟ್ಟಿಗೆಯಿಂದ ತೆಗೆದು ಅದನ್ನು ಹಾಸಿದಳು. ಎಸರು ಬಂದ ನೀರಿನ ಉರಿ ಕಡಿಮೆ ಮಾಡಿದಳು. ಉಕ್ಕಿಹೋದ ಹಾಲನ್ನು ಒಲೆಯಿಂದ ಕೆಳಕ್ಕಿಳಿಸಿ ಒಳಗಿರಿಸಿದಳು. ತನ್ನ ಹರಕು ಸೀರೆ ಬಿಟ್ಟು ಅತ್ತೆಯ ಸೀರೆಯನ್ನುಟ್ಟಳು. ಹಿತ್ತಲ ಎರಡು ಹೂವನ್ನು ತಂದು ದೇವರಿಗೆ ಏರಿಸಿ ತುರುಬಿಗಿಟ್ಟು ಕೊಂಡಳು. ಕನ್ನಡಿ ನೋಡಿ ಹೆರಳು ಸರಿಮಾಡಿ ಕೊಂಡಳು. ಬೈತಲೆ ಸವರಿದಳು. ಮಂಗಲ ಸೂತ್ರಕ್ಕೆ ಕೈ ಹಚ್ಚಿ ಸರಿಮಾಡಿದಳು; ನಕ್ಕಳು; ಅತ್ತಳು; ಬೆವತಳು. ತನ್ನನ್ನು ಯಾರೂ ನೋಡುತ್ತಿಲ್ಲವಲ್ಲಾ ಎಂದು ಸುತ್ತೂ ನೋಡಿದಳು.
ಓಣಿಯ ಒಬ್ಬ ಹುಡುಗ ಬಂದು ‘ಕೇಶವ ಭಟ್ಟರು ಬಂದರೇ?’ ಎಂದು ಕೇಳಿದ. ಏಕಾಕಿನಿಗೆ ಹಿಡಿಸಲಾಗದ ಹಿಗ್ಗು: ಊರಿಗೇ ತನ್ನ ಭ್ರಮೆ ಹಿಡಿಯಿತೇ ಎಂದು ಆಕೆ ಬರಿ ಮುಗುಳುನಗೆ ನಕ್ಕಳು. ತನ್ನ ನಗೆಯೇ ತನಗೆ ಆಭಾಸವೆನಿಸಿತು. ಎಷ್ಟು ದಿವಸದಿಂದ ತಾನು ಹೀಗೆ ನಕ್ಕಿದ್ದು ಎಂದು ನೆನಿಸಹೋದರೆ ಅವಳ ಚಿತ್ರದಲ್ಲಿ ಕತ್ತಲು ಮುಸುಕಿತು, ಬಂದ ಹುಡುಗ ‘ಎಲ್ಲಿದ್ದಾರೆ?’ ಎಂದು ಕೇಳಿದ. ಅವನು ಚಿಕ್ಕವನಿದ್ದಾಗ ಅವನನ್ನು ಭಟ್ಟರು ಎತ್ತಿ ಆಡಿಸಿದ್ದರೆಂದು ಮನೆಯಲ್ಲಿ ಮಾತ ನಾಡಿದ್ದನ್ನು ಕೇಳಿ ಸಂಭ್ರಮದಲ್ಲಿ ಆ ಹುಡುಗ ಓಡಿಬಂದಿದ್ದ. ಏಕಾಕಿನಿಯು ಒಳಗಿಂದ ದೇವರ ನೈವೇದ್ಯವನ್ನು ತಂದು ಆ ಹುಡುಗನಿಗೆ ಕೊಟ್ಟಳು. ‘ಎಲ್ಲಿದ್ದಾರೆ?’ ಎಂದು ಅವನು ಮತ್ತೆ ಕೇಳಿದ. ‘ಗೊತ್ತಿಲ್ಲ’ ಎಂದಳು ಏಕಾಕಿನಿ. ಹುಡುಗ ಹೊರಡುವುದರಲ್ಲಿದ್ದ. ಅಷ್ಟರಲ್ಲಿ ಹತ್ತೆಂಟು ಜನ ಮನೆಗೆ ಬಂದರು. ಅವರಲ್ಲಿ ಹೊಸಬರೇ ಕೇಶವಭಟ್ಟರು ಎಂದು ಊಹಿಸಿ ತನ್ನ ಮನೆಗೆ ಸುದ್ದಿ ಮುಟ್ಟಿಸಲು ಓಡಿಹೋದ.
ರಾಮಭಟ್ಟರ ಹೆಂಡತಿಗೆ ಸಂಭ್ರಮವೋ ಸಂಭ್ರಮ. ಭಟ್ಟರಿಗೆ ಕರೆಯಲೆಂದು ಒಬ್ಬರು ಹಳ್ಳಿಗೆ ಹೋಗುತ್ತೇವೆಂದರು. ರಾಮದೇವರಿಗೆ ಅಭಿಷೇಕ ಮಾಡಲು ಹೊರಟರು. ನೆರಮನೆಯವರು ಒಬ್ಬರು ಕಾಯಿಪಲ್ಯ ತಂದು ಇಟ್ಟರು. ಯಾರೋ ಹಾಲು, ಯಾರೋ ಮಜ್ಜಿಗೆ, ಯಾರೋ ಹಣ್ಣು ತಂದುಕೊಟ್ಟರು. ಭಟ್ಟರ ಭಾಗ್ಯ ಊರಿನವರದಾಗಿತ್ತು. ಈ ಸಂಭ್ರಮ ಹೊರಗೆ ನಡೆದಾಗ ಸೊಸೆ ಅಡಿಗೆಮನೆಯಲ್ಲಿ ದೇವರಿದಿರು ಕೈ ಮುಗಿದು ಕುಳಿತಿದ್ದಳು.
ಆ ದಿನ ಹಗಲು ಏಕಾಕಿನಿಗೆ ವಿಚಿತ್ರವಾಗಿ ಕಳೆದಿತು. ಹುಲಿಯ ಗವಿಯನ್ನು ಹೊಕ್ಕ ಪಾಪಿಯೊಬ್ಬನು, ಕ್ಷಣಕ್ಷಣಕ್ಕೂ ಹುಲಿಯ ಬರವಿಗಾಗಿ ಬೆದರಿ, ಅದರ ಹೆಜ್ಜೆಹೆಜ್ಜೆಗೂ ನಡುನಡುಗಿ, ಕೊನೆಗೆ ನಡುಗಲೂ ಬಲಗುಂದಿ ಸ್ತಂಭಿತನಾಗಿ, ಕಾಣುವುದೂ ಕಾಣದ್ದೂ ಒಂದೇ ಆಗಿ, ಮೂರ್ಛೆ ಹೋಗಲೂ ಬಲ ಸಾಲದೆ, ಹೌಹಾರಿ, ಆದದ್ದಾಗಲಿ ಎಂದು ಬರುವುದರ ಆಗಮನವನ್ನೇ ಎದುರುನೋಡುವಂತೆ ಆಕೆ ವಿಚಾರಮೂಢಳಾದಳು. ತನ್ನ ಯಜಮಾನರ ಸಮಾಗಮವನ್ನು ಚಿತ್ರಿಸಲೂ ಅವಳಿಗೆ ಬುದ್ದಿ ಸಾಲಲಿಲ್ಲ. ಆಕೆ ಏನೇನೋ ಕೆಲಸದಲ್ಲಿ ತೊಡಗಿ ಕೊಂಡಳು. ಆಕೆಯನ್ನು ಯಾರೂ ಮಾತನಾಡಿಸಲಿಲ್ಲ. ಆಕೆ ಯಾರೊಡನೆಯೂ ಮಾತನಾಡಲಿಲ್ಲ. ನಿಮಿಷ ನಿಮಿಷಕ್ಕೂ ಉರುಳುವ ಭೂಮಿ ಇತ್ತಿಂದತ್ತ ಹೊರಳಿತು. ನಿರಂತರ ಗತಿಯ ಕಾಲವು ಸೂರ್‍ಯನನ್ನು ಅಸ್ತಕ್ಕೆ ಎಳೆಯಿತು.
ಕೇಶವಭಟ್ಟರು ರಾತ್ರಿ ತಡಮಾಡಿಯೇ ಬಂದರು. ಊಟ ಉಪಚಾರ ನೆಪಕ್ಕಾಯಿತು. ಆ ಹೊತ್ತಿಗೆ ರಾಮಭಟ್ಟರು ಬಂದರು. ತಂದೆ ಮಕ್ಕಳ ಭೆಟ್ಟಿಯಾಯಿತು. ಮಗ ನಮಸ್ಕಾರ ಮಾಡಿದಾಗ ಭಟ್ಟರು ‘ಶ್ರೀಹರೀ’ ಎಂದು ಕಣ್ಣೊರಸಿ ಕೊಂಡರು. ರಾತ್ರಿ ಬಹಳಾಗಿತ್ತು. ಕೇಶವಭಟ್ಟರು ಅತ್ತಿತ್ತ ನೋಡಿ, ತಮಗಾಗಿ ಹಾಸಿದ ಹಾಸಿಗೆಯನ್ನು ಗುರುತಿಸಿ, ಅತ್ತ ಸೇರಿದರು. ರಾಮಭಟ್ಟರ ಫಲಾಹಾರ ನಡೆದಾಗ ಯಜಮಾನಿತಿ ಹಗಲಿನ ಸುದ್ದಿಯನ್ನು ಏನೇನೋ ಹೇಳುತ್ತಿದ್ದಳು. ಸೊಸೆ ಅರೆಬೆದರಿಕೆಯ ಎಚ್ಚರದ ತೂಕಡಿಕೆಯಲ್ಲಿ ಅಡಕಲ ಕೋಣೆಯಲ್ಲಿದ್ದಳು. ಮನೆ ಕೆಲಸವಾಗಿ ಅತ್ತೆ ಫಲಹಾರ ಮಾಡುವಾಗ ಸೊಸೆಯೂ ದಿನದೂಟ ಉಂಡಳು. ಆಕೆ ಕೈತೊಳೆದು ಕೊಳ್ಳುತ್ತಿರುವಾಗ ‘ಕೇಶವನಿಗೆ ಕುಡಿಯುವ ನೀರಿನ ತಂಬಿಗೆ ಒಯ್ಯಿ, ತಿಳಿಯಿತೇ’ ಎಂದು ಹೇಳಿ ಅತ್ತೆ ಒಳಗೆ ಹೋದರು. ಸೊಸೆ ಎಲ್ಲ ಪದಾರ್ಥ ಸಾವರಿಸಿ, ಕಿಟಕಿ ಬಾಗಿಲಗಳನ್ನು ನೋಡಿ, ದೇವರ ದೀಪಕ್ಕೆ ಇನ್ನೆರಡು ಸವಟು ಎಣ್ಣೆ ಹಾಕಿ, ದೀಪ ಸಣ್ಣದು ಮಾಡಿ, ಕುಲದೇವರಿಗೆ ಕೈ ಮುಗಿದು ಕುಳಿತಳು. ಆಕೆ ಎಚ್ಚೆತ್ತಾಗ ಓಣಿಯ ನಾಯಿಯೊಂದು ಬೊಗಳುತ್ತಿತ್ತು. ಎದ್ದವಳೇ ಆಕೆ ಕುಡಿಯುವ ನೀರಿನ ತಂಬಿಗೆ ಥಾಲಿಯನ್ನು ತಕ್ಕೊಂಡು ದಡಪಡಿಸಿ ಹೊರಟಳು. ಗಂಡನ ಗೊರಕೆ ಅವಳನ್ನು ಸ್ವಾಗತಿಸುತ್ತಿತ್ತು. ತಂಬಿಗೆ ಇಟ್ಟು ದೀಪ ದೊಡ್ಡದು ಮಾಡಿ, ಆಕೆ ಮುಸುಕು ಬಿಗಿದು ಮಲಗಿದ ಯಜಮಾನರ ಕಾಲನೊತ್ತಲು ಕುಳಿತಳು.
ಆಕೆ ತೂಕಡಿಕೆಯಲ್ಲಿ ಎಷ್ಟು ಸಲ ಗಂಡನ ಕಾಲಿಗೆ ತಲೆಬಾಗಿಸಿದಳೋ, ಹೆದರಿ ತಲೆಯೆತ್ತಿ ಕಾಲನೊತ್ತಿದಳೊ, ಹಾಗೇ ಮರೆತು ಕಾಲಮೇಲೆ ತಲೆಯಿಟ್ಟು ಎಷ್ಟೊತ್ತು ನಿದ್ದೆಮಾಡಿದಳೊ. ಭಟ್ಟರು ಇನ್ನೊಂದು ಮಗ್ಗಲಿಗೆ ಹೊರಳಿದಾಗ ಸುಮಂಗಲಿಗೆ ಇನ್ನೊಂದು ಪಾದಸ್ಪರ್‍ಶವೂ ಆಯಿತು. ಆಕೆ ಅದನ್ನೂ ಒತ್ತಿದಳು. ಆಗೊಂದು ಕತ್ತೆ ನಿರರ್‍ಗಳವಾಗಿ ದಿಗಂತಗಳನ್ನು ಆಹ್ವಾನಿಸುವಂತೆ, ಹ್ಯಾಂಕರಿಸುತ್ತಲೆ ಇತ್ತು. ನಿದ್ದೆಯಲ್ಲೊ, ಎಚ್ಚರದಲ್ಲೂ, ಭಟ್ಟರು ‘ಮುಟ್ಟಬೇಡ ಸರಿ’ ಎಂದರು. ಆಕೆ ಬೆದರಿದಳು. ಮತ್ತೆ ಕಾಲೊತ್ತಲು ಕೈ ಚಾಚಿದಾಗ ಕಾಲು ಮಡಚಿಕೊಂಡವು. ಪಾದಗಳಿಗಾಗಿ ತಡವರಿಸಿದಾಗ, ಅವು ತಪ್ಪಿಸಿ ಆಡಿದವು. ಆಕೆಗೆ ಯಜಮಾನರು ಎದ್ದು ಕುಳಿತಂತೆ ಎನಿಸಿತು. ಬೆಳಕಿಂಡಿಯಿಂದ ಇಳಿದುಬೀಳುತಿದ್ದ ಬೆಳದಿಂಗಳ ಒಂದು ಬಿಂಬ ಪ್ರಕಾಶದಲ್ಲಿ ಆಕೆ ಕಣ್ಣರಳಿಸಿದಳು. ಕತ್ತಲೆಗೆ ಆಕಾರ ಬರಲಿಲ್ಲ. ಕೈಮುಗಿದು ಆಕೆ ನೆಲಕ್ಕೆ ತಲೆಯಿಟ್ಟಳು.
‘ನೀನು ಶುದ್ಧಳೇ?’ ಎಂದು ಪಿಸುಮಾತನ್ನ ಒತ್ತಿ ನುಡಿಸಿದಂತೆ ಒಂದು ದನಿ ಬಂದಿತು. ಆಕೆ ‘ಇಲ್ಲ, ನಾನು ಶುದ್ಧಳು’ ಎಂದಾಗ ಗೋಡೆ ನಡುಗಿದವು. ‘ನೀನು ಯಾರನ್ನೂ ಮುಟ್ಟಿಲ್ಲವೇ?’ ದನಿ ಸಿಡಿದು ಮಿಂಚಿತು. ‘ದೇವರಾಣೆ’ ಎಂದು ಆಕೆ ನಿಟ್ಟುಸಿರುಬಿಟ್ಟಳು. ‘ಒಬ್ಬ ತಿರುಕನಿಗೆ’ ಎಂದು ಆ ದನಿಯೆಂದಾಗ ‘ಅಯ್ಯೋ, ಏನು ಮಾತಿದು’ ಎಂದಿತು ಈ ಸ್ವರ. ‘ನಿನ್ನೆ ಹಾಳು ಗುಡಿಯ ಬೈರಾಗಿಗೆ ನೀನು ಕೈಕೊಟ್ಟಿದ್ದು ನಾನು ನೋಡಿದ್ದೇನೆ’ ಎಂದದು ಧೀಕರಿಸಿದಾಗ ಕತ್ತಲಲ್ಲಿ ಕರಗಿದಂತೆ ಈ ಸ್ವರ ‘ಹಾಂ’ ಎಂದಳಿದಿತು. ಆಕೆ ಸಾಷ್ಟಾಂಗ ಬಿದ್ದು ಗಂಡನ ಕಾಲಿಗೆ ಮೈಚಾಚಿದಳು. ಈ ಸವಾರಿ ಎದ್ದಿತು. ಬೈರಾಗಿತನಕ್ಕೆ ಮರುಳಾದವರಿಗೆ ಮನೆಯ ಹೆಂಗಸಿನ ಹಂಗೇ? ‘ನಾನು ತಂದೆ ತಾಯಿಯನ್ನು ಕಾಣಲು ಬಂದಿದ್ದೆ. ಈ ಹಾಳು ಮಾರಿಯನ್ನಲ್ಲ’ ಎಂದವನನ್ನಲು ಆಕೆ ಗಲ್ಲಗಲ್ಲ ಬಡೆದುಕೊಂಡಳು. ವೇತಾಳ ತನ್ನ ಮಸಣಬಟ್ಟೆಗೆ ಹೊರಟಂತೆ, ಕೇಶವಭಟ್ಟರು ಕಾಲಪ್ಪಳಿಸುತ್ತ ಕೋಣೆಬಿಟ್ಟು, ಮನೆಯ ಬಾಗಿಲ ಹೊರಗೆ ಹೊರಟುಹೋದರು.
ಈಕೆ ಹಾದಿ ನೋಡಿದಳು. ಬುದಿಂಗನದ್ದು ಬಾಗಿಲಿಗೆ ಬಂದಳು. ಓಣಿಯನ್ನು ಈ ತುದಿಯಿಂದ ಆ ತುದಿಗೆ ನಿಟ್ಟಿಸಿದಳು. ಎರಡು ಬೀಡಾಡಿ ನಾಯಿಗಳು ಇದಿರು ಬದಿರು ಕುಳಿತು ಚಂದ್ರನನ್ನು ನೋಡಿ ಅವನ ಬೆಳದಿಂಗಳಿನ ವ್ಯರ್‍ಥ ದುಂದುಗಾರಿಕೆಗಾಗಿಯೋ ಏನೋ ಭೋ ಎಂದು ಗೋಳಿಡುತ್ತಿದ್ದವು. ಈಕೆ ಹೆದರಿ ಕದ ಇಕ್ಕಿಕೊಂಡಳು. ತನ್ನ ಕೋಣೆ ಹೊಕ್ಕಳು. ಬರಿದಾದ ಹಾಸಿಗೆಯನ್ನು ಬೆಳಗಾಗುವವರೆಗೂ ತೊಯ್ಸಿ ತಪ್ಪಡಿ ಮಾಡಿದಳು.
ಮರುದಿನ ಊರೆಲ್ಲವೂ ಏಕಾಕಿನಿಯ ದುರ್‍ಭಾಗ್ಯಕ್ಕೆ ಹೆಸರಿಟ್ಟಿತು. ಅತ್ತೆ ಸೊಸೆಯನ್ನು ಶಪಿಸಿದಳು. ಮಾವ ಸೊಸೆಯ ನೀರು ಮುಟ್ಟಲಿಲ್ಲ. ತನ್ನ ಹಣೆಬರಹವನ್ನು ತೊಡೆದುಕೊಳ್ಳಲು ಅದನ್ನು ನೂರು ಸಲ ಅಪ್ಪಳಿಸಿಯೋ, ಸಾವಿರ ದೇವರಿಗೆ ನಮಿನಮಿಸಿಯೋ ಅಂದು ಸಂಜೆಗೆ ಏಕಾಕಿನಿಯ ಹಣೆ ಬುಗುಟೆ ಬುಗುಟೆಯಾಗಿ ಗಂಟುಕಟ್ಟಿತ್ತು. ಅವಳ ಸೌಭಾಗ್ಯದ ಕುರುಹಾಗಿ, ಅದಷ್ಟು ಅವಳ ಜೀವಮಾನದುದ್ದಕ್ಕುಳಿಯಿತು.
*****
ಭಾವನಾ ಏಪ್ರಿಲ್ ೨೦೦೦
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.