ಲೇಖಕ ಸತ್ತ?

ಲೇಖಕ ಸತ್ತ?

‘ಕತೆಯನ್ನು ನಂಬು, ಕತೆಗಾರನನ್ನಲ್ಲ’ ಎನ್ನುವುದು ಡಿ. ಎಚ್. ಲಾರೆನ್ಸ್‌ನ ಸುಪ್ರಸಿದ್ದ ಮಾತು. ಏನಿದರ ಅರ್ಥ? ಕತೆಗಾರನಿಗೆ ಕತೆಯ ಕುರಿತು ಗೊತ್ತಿಲ್ಲವೆಂದೇ? ಕತೆಯ ಕುರಿತು ಕತೆಗಾರನು ಅದರಲ್ಲಿಲ್ಲದ ಗುಣಗಳನ್ನು ಹೇಳಬಹುದೆಂದೇ? ಕತೆ ಬರೆದಮೇಲೆ ಕತೆಗಾರನೂ ಎಲ್ಲ ಓದುಗರಂತೆ ಒಬ್ಬಾನೊಬ್ಬ ಓದುಗನೆಂದೇ? ಕತೆಯನ್ನು ಬರೆದವನಿಗೆ ಅದನ್ನು ಇತರ ಓದುಗರಂತೆ ಓದಲು ತಕ್ಕುದಾದ ಸುದೂರ ಇರುವುದಿಲ್ಲವೆಂದೇ? ಲಾರೆನ್ಸ್‌ನ ಮಾತಿಗೆ ಇದೆಲ್ಲ ಅರ್ಥಗಳೂ ಇರಬಹುದು. ಹಾಗೂ ಆತ ಕತೆ ಎಂದು ಹೇಳಿರುವುದು ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಒಂದೇ ರೀತಿ ಅನ್ವಯವಾಗುತ್ತದೆ ಎನ್ನುವುದೂ ನಿಜ. ಸಾಹಿತ್ಯ ಕೃತಿಯೆಂದರೆ ಅದೊಂದು ಗಣಿತ ಸಿದ್ಧಾಂತದ ಹಾಗಲ್ಲ. ಗಣಿತ ಸಿದ್ಧಾಂತ ಅಥವಾ ತರ್ಕಸೂತ್ರಗಳಿಗಾದರೆ ನಿಖರವಾದ ಅರ್ಥವಿರುತ್ತದೆ. ನಾವು ಸಾಧಾರಣವಾಗಿ ಆಡುವ ಮಾತಿಗೂ ಏಕದೇಶ ನಿಖರವೆಂದೇ ಹೇಳಬಹುದಾದ ಅರ್ಥವಿರುತ್ತದೆ; ಆದರೆ ಇಲ್ಲಿ ನಾವು ನಿಗೂಢವಾಗಿಯೂ ಮಾತನ್ನು ಬಳಸುವುದು ಸಾಧ್ಯ. ಅದೇ ರೀತಿ ನಾವು ಸಾಧಾರಣವಾಗಿ ಬರೆಯುವ ಲೇಖನಗಳಿಗೂ ಎಲ್ಲರೂ ಒಪ್ಪುವಂಥ ಒಂದು ಅರ್ಥವಿರುತ್ತದೆ; ಹಾಗಲ್ಲದಿದ್ದರೆ ಅಂಥ ಭಾಷೋಪಯೋಗ ಸೋತಿತು ಎಂದೇ ಆಗುತ್ತದೆ. ಆದರೆ ಸೃಜನಶೀಲ ರಚನೆಗಳು ಈ ತರ ಇರುವುದಿಲ್ಲ. ಅಲ್ಲಿ ಉಪಯೋಗವಾಗುವ ಭಾಷೆ ನಾವು ಸಾಧಾರಣವಾಗಿ ಆಡುವ ಭಾಷೆಯೇ ಆಗಿದ್ದರೂ, ಅದು ಬಳಕೆಯಾದ ರೀತಿ ಬೇರೇ ಇರಬಹುದು. ಮಾತ್ರವಲ್ಲ, ನಾವು ಕೃತಿಯೊಂದರ ಅರ್ಥ ಹುಡುಕುವಾಗ ಕೇವಲ ಕಾವ್ಯಪದೀಯ ಅರ್ಥ ಮಾತ್ರವನ್ನೇ ಅವಲಂಬಿಸಿರುವುದಿಲ್ಲ. ಸಾಹಿತ್ಯ ಕೃತಿಯ ಅರ್ಥವೆಂದರೆ ಅದರ ಪಠ್ಯಾರ್ಥ, ಉದ್ಧೇಶ, ಪ್ರಾಮುಖ್ಯತೆ, ಅರ್ಥವಂತಿಕೆ, ಹೊಸತನ ಎಲ್ಲವೂ ಆಗಿರುತ್ತದೆ. ಹೀಗೆ ಇದೊಂದು ಸಂಕೀರ್ಣವಾದ ಸಂಗತಿಯಾದ ಕಾರಣ ಇದನ್ನು ನಿಖರವಾಗಿ ಹೀಗೇ ಎಂದು ಹೇಳುವುದು ಕಷ್ಟವಾಗುತ್ತದೆ. ಉದಾಹರಣೆಗೆ, ಗೋಪಾಲಕೃಷ್ಣ ಅಡಿಗರ ಸುದೀರ್ಘ ಕವನ ‘ಗೊಂದಲಪುರ’ದ ಅರ್ಥ ಇಂಥದೇ ಎಂದು ನಿಖರಗೊಳಿಸುವುದು ಸಾಧ್ಯವಾಗದು. ಸ್ವತಃ ಅಡಿಗರಿಂದಲೂ ಇದು ಆಗದ ಕೆಲಸ. ಅಥವಾ ಒಂದು ವೇಳೆ ಅಡಿಗರೇ ಮುಂದೆ ಬಂದು ಇದಕ್ಕೆ ಅರ್ಥ ಹೇಳಿದರೂ, ನಾವದನ್ನು ನಂಬಬೇಕಾಗಿಲ್ಲ, ಕವನ ಓದಿ ನಾವೇ ಅರ್ಥಮಾಡಿಕೊಳ್ಳಬೇಕಾಗಿದೆ ಎನ್ನುವುದು ಲಾರೆನ್ಸ್‌ನ ಮಾತಿನ ತಾತ್ಪರ್ಯ.

ಲಾರೆನ್ಸ್‌ನ ಮಾತು ನಮ್ಮೀ ರಚನೋತ್ತರ ಸಂದರ್ಭದಲ್ಲಿ ‘ಲೇಖಕ ಸತ್ತ’ ಎಂಬುದಾಗಿ ತುಸು ಕಠೋರವಾಗಿಯೆ ಮರುಕಳಿಸಿದೆ. ರಚನೋತ್ತರವಾದಿ ಫ್ರೆಂಚ್ ತತ್ವಜ್ಞಾನಿ ರೊಲಾನ್ ಬಾರ್ತ್‌ನ ‘ಲೇಖಕನ ಮರಣ’ ಎಂಬ ಲೇಖನ ಇದರ ಮೂಲ. ಲೇಖಕ ಸತ್ತ ಎಂದರೇನು? ಮೊತ್ತದಲ್ಲಿ ಇದು ಲಾರೆನ್ಸ್ ಹೇಳಿದಂತೆಯೇ; ಆದರೆ ಲಾರೆನ್ಸ್‌ನ ಮಾತಿಗಿಂತಲೂ ಒಂದು ಹೆಜ್ಜೆ ಮುಂದೆ: ಕೃತಿ ಬರೆದ ಮೇಲೆ ಲೇಖಕನೇ ಇಲ್ಲ ಎಂಬ ರೀತಿ. ಅಥವಾ ಇನ್ನೊಂದು ತರದಲ್ಲಿ ಹೇಳುವುದಾದರೆ, ಬರೆಯುವ ಲೇಖಕನೂ ಬರೆದ ಲೇಖಕನೂ ಒಬ್ಬನೇ ಅಲ್ಲ ಎಂಬ ಅರ್ಥ. ಎಂದರೆ ಬರೆಯುವ ಕ್ರಿಯೆಯಲ್ಲಿ ಲೇಖಕ ಬೇರೆಯೇ ಒಬ್ಬ ವ್ಯಕ್ತಿಯಾಗಿರುತ್ತಾನೆ, ಹಾಗೂ ಬರೆದ ಮೇಲೆ ಆತನಿಗೆ ಅದನ್ನು ತಾನು ಬರೆದುದೇ ಅಲ್ಲ ಎಂಬ ಭಾವ ಬರುತ್ತದೆ. ಆದ್ದರಿಂಬ ಪ್ರತಿ ವಾಕ್ಯ ಬರೆಯುತ್ತಲೇ ಆ ವಾಕ್ಯದ ಕರ್ತೃ ಸತ್ತುಹೋಗಿರುತ್ತಾನೆ. ವಾಸ್ತವದಲ್ಲಿ ಇಲ್ಲ. ಇರುವುದು ಭಾಷೆ ಮಾತ್ರ! ನಿಜ, ಇಂಥ ಮಾತುಗಳೆಲ್ಲ ತೀರಾ ತಾತ್ವಿಕ ಎಂದು ತೋರಬಹುದು. ಯಾಕೆಂದರೆ ನಮ್ಮ ವಾಸ್ತವ ಜಗತ್ತಿನಲ್ಲಿ ಪ್ರತಿಯೊಂದು ಕೃತಿಗೂ ಓಬ್ಬ ಕರ್ತ ಇದ್ದೇ ಇರುತ್ತಾನೆ ಅಥವಾ ಇರುತ್ತಾಳೆ. ಆದರೆ ನಾವಿಲ್ಲಿ ಕೃತಿಸ್ವಾಮ್ಯದ ಕುರಿತಾಗಲಿ ಸಂಭಾವನೆಯ ಕುರಿತಾಗಲಿ ಮಾತಾಡುತ್ತಿಲ್ಲ. ಅವಕ್ಕಿಂತಲೂ ಸೂಕ್ಷ್ಮವಾದ ಓದಿನ ಬಗ್ಗೆ ಮಾತಾಡುತ್ತಿದ್ದೇವೆ.

ಸಾಹಿತ್ಯ ಕೃತಿಯೊಂದು ಭಾಷಾರಚನೆಯಾಗಿದ್ದು ಭಾಷೆಗೆ ಒಂದು ಅರ್ಥವಿದೆಯಾದ ಕಾರಣ ಪ್ರತಿಯೊಂದು ಸಾಹಿತ್ಯ ಕೃತಿಗೂ ನಿರ್ದಿಷ್ಟವಾದ ಹಾಗೂ ಎಂದಿಗೂ ಬದಲಾಗದ ಒಂದು ಅರ್ಥವಿದೆಯೆಂದು ಜನರು ತಿಳಿದುಕೊಂಡಿದ್ದಂಥ ಕಾಲವೊಂದಿತ್ತು. ಆದರೆ ಈಗಿನ ಯೋಚನೆ ಬೇರಾಗಿದೆ. ಕಾಲ ಬದಲಾಗುತ್ತಿರುವಂತೆ ಕೃತಿಯ ಕುರಿತಾದ ಪಠ್ಯಗಳೂ ಜಾಸ್ತಿಯಾಗುತ್ತ ಹೋಗುತ್ತವೆ; ಕಾಲವಶದಲ್ಲಿರುವ ಯಾವ ಕೃತಿಯೂ ಅದರ ಶುದ್ಧಾರ್ಥದಲ್ಲಿ ನಮಗೆ ದೊರಕುವುದಿಲ್ಲ; ಯಾಕೆಂದರೆ ಈಗಾಗಲೇ ಅದನ್ನು ಜನ ಓದಿರುತ್ತಾರೆ. ನಾವು ಓದುವುದು ಈ ಕೃತಿಯನ್ನು ಮಾತ್ರವಲ್ಲ, ಅದರ ಜತೆಗೆ ಇಂಥ ಓದನ್ನೂ ಕೂಡಾ. ಈಗಾಗಲೇ ಓದಿರುವ ಕೃತಿ ಇಂಥ ಓದಿನೊಂದಿಗೆ ನಮಗೆ ಅರಿವಿಲ್ಲದಂತೆ ಸೇರಿಕೊಂಡಿರುತ್ತದೆ. ಈ ಓದಿಗೆ ವಿರುದ್ದವಾಗಿ ನಾವು ಓದುವುದು ಸಾಧ್ಯವಿಲ್ಲವೇ ಎಂದು ಕೇಳಬಹುದು. ಹೆಚ್ಚಿನ ಪ್ರಸಂಗಗಳಲ್ಲೂ ಈ ಓದನ್ನು ಒಂದೋ ನಾವು ಹಾಗೇ ಸ್ವೀಕರಿಸುತ್ತೇವೆ, ಇಲ್ಲವೇ ಅದಕ್ಕೆ ನಮ್ಮ ನಿರೂಪಣೆಯನ್ನೂ ಒಂದಿಷ್ಟು ಸೇರಿಸಿಕೊಳ್ಳುತ್ತೇವೆ. ಆದರೆ ಅಪರೂಪಕ್ಕೆ. ಈ ಸ್ವೀಕೃತ ಓದಿಗೆ ವಿರುದ್ಧವಾದ ಓದನ್ನು ವಿಮರ್ಶಕನೊಬ್ಬ ನೀಡುವುದು ಸಾಧ್ಯವಿದೆ. ಇದು ಕೆಲವೊಮ್ಮೆ ಆ ಕೃತಿಯನ್ನು ಬೇರೆ ರೀತಿ ನೋಡುವುದಕ್ಕೆ ಸಹಾಯ ಮಾಡಬಹುದು. ಆದರೆ ಇದು ಸ್ವೀಕೃತವಾಗುತ್ತದೋ ಇಲ್ಲವೋ ಎಂದು ಹೇಳಲಾಗುವುದಿಲ್ಲ. ಇಂಥ ಅಸಾಮಾನ್ಯ ಓದು ಕ್ರಾಂತಿಕಾರಕವಾಗಿದ್ದಷ್ಟೂ ಇದು ಕಷ್ಟ. ಉದಾಹರಣೆಗೆ ವಾಲ್ಮೀಕಿ ರಾಮಾಯಣವನ್ನು ಬೇರೆ ಬೇರೆ ರೀತಿ ಓದಿದವರಿದ್ದಾರೆ. ಪೋಲಂಕಿ ರಾಮಮೂರ್ತಿಯವರು ಇಡೀ ರಾಮಾಯಣವನ್ನು ‘ಸೀತಾಯಣ’ ಮಾಡಿ ಓದುತ್ತಾರೆ. ಅವರ ಓದಿನ ಪ್ರಕಾರ ಲಕ್ಷ್ಮಣನು ಸೀತೆಯನ್ನು ಬಯಸಿದ್ದವನು, ಹಾಗೂ ರಾವಣ ಸೀತೆಯನ್ನು ಕದ್ದೊಯ್ದವನಲ್ಲ, ಸೀತೆ ತಾನಾಗಿಯೇ ರಾವಣನೊಂದಿಗೆ ಹೋದವಳು. ಇದಕ್ಕೆಲ್ಲ ರಾಮಮೂರ್ತಿಯವರು ರಾಮಾಯಣದಿಂದಲೇ ಉದಾಹರಣೆಗಳನ್ನು ಕೊಡುತ್ತಾರೆ. ಆದರೆ ಯಾವ ಉದಾಹರಣೆಯೂ ನಿರೂಪಣೆಯಿಲ್ಲದೆ ಉಪಯೋಗಕ್ಕೆ ಬರುವುದಿಲ್ಲವಾದ್ದರಿಂದ, ಇದು ಪೋಲಂಕಿಯವರ ಹೊಸ ಓದೆಂದು ತಿಳಿಯಬೇಕಾಗುತ್ತದೆ. ಹಾಗೂ ಇದು ಸ್ವೀಕೃತ ಓದಿಗೆ ವಿರುದ್ದವಾದ್ದರಿಂದ ಎಲ್ಲರಿಂದಲೂ ಒಪ್ಪಿಗೆ ಪಡೆಯುವುದಿಲ್ಲ. ಬಹುಶಃ ರಾಮಾಯಣದ ಮುಂದಿನ ಓದನ್ನೂ ಇದು ಅಷ್ಟು ಸುಲಭವಾಗಿ ನಿರ್ದೇಶಿಸಲಾರದೆಂದು ತೋರುತ್ತದೆ. ಇಂಥ ಸಂಗತಿಗಳಲ್ಲಿ ನಾವು ಮೂಲ ಲೇಖಕರು ಒಂದು ವೇಳೆ ನಮಗೆ ದಾರಿಯಲ್ಲಿ ಸಿಕ್ಕಿ ನಾವವರನ್ನು ಕೇಳಿದರೂ ಉಪಯೋಗವಿಲ್ಲ! ಯಾಕೆಂದರೆ ಅವರೂ ತಮ್ಮ ಶ್ಲೋಕಗಳನ್ನು ಮತ್ತೆ ನಿರೂಪಿಸಬೇಕಾಗುತ್ತದೆ! ಅರ್ಥಾತ್ ಅವರೂ ಕೂಡಾ ಓಬ್ಬಾನೊಬ್ಬ ಓದುಗರೇ ಆಗಿಬಿಟ್ಟಿರುತ್ತಾರೆ. ಬರೆಯುವಾಗ ತಾನು ಉದ್ದೇಶಿಸಿದ್ದು ಹೀಗೆ ಎಂದು ಲೇಖಕ ಹೇಳುವುದರಿಂದ ಯಾವ ಉಪಯೋಗವೂ ಇಲ್ಲ; ಕೃತಿಯ ಮೂಲಕ ಆ ಉದ್ದೇಶ ಹೊರಹೊಮ್ಮಿದೆಯೇ ಎನ್ನುವುದು ಮಾತ್ರ ಮುಖ್ಯ.

ಕೆಲವೊಂದು ಕೃತಿಗಳು ಹಲವಾರು ಅರ್ಥಗಳಿಗೆ ಎಡೆಮಾಡಿಕೊಡುವುದೂ ಸಾಧ್ಯ. ಯಾಕೆಂದರೆ ಇಲ್ಲಿ ಭಾಷೆ ಅಸಾಮಾನ್ಯ ರೀತಿಯಲ್ಲಿ ಉಪಯೋಗವಾಗಿರುತ್ತದೆ. ಉದಾಹರಣೆಗೆ, ಬೇಂದ್ರೆಯವರ ಹಲವು ಕವಿತೆಗಳು ಸೂತ್ರರೂಪದಲ್ಲಿದ್ದು ಅವುಗಳಿಗೆ ನಿಖರವಾಗಿ ಯಾವ ಅರ್ಥ, ಅಥವಾ ಅಷ್ಟೊಂದು ನಿಖರವಾದ ಅರ್ಥವಾದರೂ ಅವಕ್ಕೆ ಇವೆಯೇ ಎನ್ನುವುದು ಸ್ಪಷ್ಟವಾಗುವುದಿಲ್ಲ. ೧೯೮೩ರಲ್ಲಿ ಪ್ಕಟವಾದ ಅವರ ‘ಬಾಲ ಬೋಧೆ’ ಎಂಬ ‘ಧ್ಯಾನಾತ್ಮಕ ಕವನ’ ಇಲ್ಲವೇ (೭೦ ಕವನಗಳ) ಕವನ ಗುಚ್ಛ ಈ ರೀತಿಯದು. ಇವಕ್ಕೆ ಕೀರ್ತಿನಾಥ ಕುರ್ತಕೋಟಿ ಮತ್ತು ವಾಮನ ಬೇಂದ್ರೆಯವರ ಟಿಪ್ಪಣಿಗಳೂ ಸ್ವತಃ ಕವಿಯ ಪ್ರಸ್ತಾವನೆ, ಕುರ್ತಕೋಟಿಯವರ ವಿವರಣಾತ್ಮಕ ಮುನ್ನುಡಿ ಎಲ್ಲವೂ ಇದ್ದರೂ, ಈ ಕವಿತೆಗಳ ಅರ್ಥವೇನೂ ನಿಖರವಾಗಿ ಓದುಗರಿಗೆ ದೊರಕುವುದಿಲ್ಲ. ಕೆಲವೊಮ್ಮೆ ಈ ವಿವರಣೆಗಳೇ ನಮ್ಮ ಓದಿಗೆ ತಡೆಯೂ ಆಗಿಬಿಡುವ ಸಾಧ್ಯತೆಯೂ ಇದೆ. ಒಂದು ಯಃಕಶ್ಚಿತ್ ಉದಾಹರಣೆಯನ್ನು ಕೊಡುವುದಾದರೆ, ೮ನೇ ಪದ್ಯವನ್ನು ತೆಗೆದುಕೊಳ್ಳಬಹುದು:

ತೆಗವೋ ಈ ಭೌತಿಕಾ
ಊರಾಗ ಕಾಡುಮಿಕಾ
ಹೊತ್ತಿಗೀ ಒಳಗ.

ಪಂಚಾಂಗದ ಮಳೀ
ನಕಾಶದ ಹೊಳಿ
ಚಿತ್ರಪಟದ ಗುಡ್ಡ
ದಾಟಿದರೇನು?

ತಕ್ಕಡೀನೂ ಸುಳ್ಳು
ತೂಕಾ-ತರಗಾಬರಗಾ
ಬೆಲಿಪಟ್ಟಿ ಕೋಷ್ಟಕಾ
ಕರಕಪ್ಪಾ ಅಂದಾ.

ಇಂಥ ನಿಗೂಢಾತ್ಮಕ ಸಾಹಿತ್ಯವನ್ನು ನಾವು ಹಿಂದಣ ವಚನಕಾರರಲ್ಲೂ ತತ್ವಪದಕಾರರಲ್ಲೂ ಕೀರ್ತನಕಾರರಲ್ಲೂ ಹಲವು ಜನಪದ ಹಾಡುಗಳಲ್ಲೂ ಕೂಡಾ ಕಾಣುತ್ತೇವೆ. ಈ ಸಾಲುಗಳನ್ನು ಬರೆಯುತ್ತಿರುವಂತೆ, ನಾನು ಶಿಶುನಾಳ ಷರೀಫ ಸಾಹೇಬರ ‘ಕೋಡಗನ ಕೋಳಿನುಂಗಿತ್ತ’ ಎಂಬ ಹಾಡನ್ನು ಕೇಳುತ್ತ ಇದ್ದೇನೆ. ಏನು ಈ ಸಾಲಿನ ಅರ್ಥ? ಇಲ್ಲಿ ಎಲ್ಲವೂ ವಿಚಿತ್ರವಾಗಿ ಬರುತ್ತವೆ. ನೇಯುವ ಅಣ್ಣನನ್ನು ಮಗ್ಗವೇ ನುಂಗಿಹಾಕಿಬಿಡುತ್ತದೆ! ಇಂಥ ವೈಪರೀತ್ಯವೇ ಇದರ ‘ಅರ್ಥ’ವಿರಬಹುದೇ?

ಪ್ರತಿಯೊಬ್ಬನ ಓದೂ ಪ್ರತ್ಯೇಕವೂ ವ್ಯಕ್ತಿವಿಶಿಷ್ಟವೂ ಆಗುವ ಇನ್ನೊಂದು ನೆಲೆಯೂ ಇದೆ. ಅದೆಂದರೆ ವ್ಯಕ್ತಿ ವ್ಯಕ್ತಿಗಳ ವಿಭಿನ್ನ ಅನುಭವಗಳ ಹಿನ್ನೆಲೆ. ನಮ್ಮೆಲ್ಲರ ಹಸ್ತಗಳೂ ಒಂದೇ ರೀತಿ ಇದ್ದೂ, ಹಸ್ತರೇಖೆಗಳು ಮಾತ್ರ ವಿಭಿನ್ನವಾಗಿರುವಂತೆ, ನಾವೆಲ್ಲರೂ ಒಂದೇ ಕಾಲಘಟ್ಟದಲ್ಲಿದ್ದರೂ ನಮ್ಮ ನಮ್ಮ ವೈಯಕ್ತಿಕ ಅನುಭವಗಳು ಪತ್ಯೇಕವಾಗಿರುತ್ತವೆ. ಲೋಕದ ಯಾವುದೇ ವಿಷಯವನ್ನು ಗ್ರಹಿಸುವಾಗಲೂ ನಾವು ನಮ್ಮ ಅನುಭವ, ಆಸೆ ಆಕಾಂಕ್ಷೆ, ನಿರೀಕ್ಷೆ, ಆತಂಕಗಳ ಹಿನ್ನೆಲೆಯಲ್ಲೇ ಗ್ರಹಿಸುತ್ತೇವೆ. ಇದು ಸಾಹಿತ್ಯಕೃತಿಗಳ ಕುರಿತಾಗಿಯೂ ಅನ್ವಯವಾಗುವ ಮಾತು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಪಠ್ಯವೊಂದನ್ನು ಅರ್ಥಮಾಡಿಕೊಳ್ಳುವ ಬಗೆ ಇತರ ಎಲ್ಲರಿಗಿ೦ತಲೂ ಭಿನ್ನವಾಗಿರುತ್ತದೆ; ಮಾತ್ರವಲ್ಲ, ಕಾಲಾಂತರದಲ್ಲಿ ಎರಡನೆಯ ಮೂರನೆಯ ಸಲ ಓದುವಾಗ ಕೂಡಾ ಅದು ಬೇರೆಯೇ ಆಗಿರುವುದು ಸಾಧ್ಯ. ಯಾಕೆಂದರೆ, ಕಾಲ ಸರಿದಂತೆ ವ್ಯಕ್ತಿಯ ಅನುಭವಗಳು ಸಹಾ ಹೆಚ್ಚುತ್ತ ಹೋಗುತ್ತವೆ. ಇದರ ತಾತ್ಪರ್ಯ ಕೃತಿಯೊಂದರ ಅರ್ಥದ ಕುರಿತು ತೋರಮಟ್ಟಿನ ಒಮ್ಮತ ಸಾಧ್ಯವಿಲ್ಲವೆಂದೇನೂ ಅಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಗೆ ಆಗಬಹುದಿತ್ತು ಸಮುದ್ರವೇ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೪

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…