ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ,
ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ
ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ
ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ
ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ.
ತನ್ನ ಕುರಿತು, ಪರರ ಕುರಿತು,
ಕ್ಷಣಕ್ಕೊಂದು ರೂಪತಾಳಿ ಜಾರಿ ಹೋಗುವ
ಬದುಕನ್ನು ಕುರಿತು ಚಿಂತೆಯನ್ನು ಹೊದ್ದುಕೊಂಡೆ.
ಬಡಿಯಲೋ ಕೊಲ್ಲಲೋ ಕೈಯೆತ್ತುವ ಮುನ್ನ
ತುಯ್ಯಲಾಡುವ ಮನದವನಾದೆ.
ಬೆಕ್ಕು ಸುಳಿದಂತೆ ಲೋಕದಲ್ಲಿ ಸುಳಿವ
ಕೆಡುಕನ್ನು ಕಣ್ಣಾರೆ ಕಾಣಲು ಬಯಸಿದೆ.
ಜಗದ ಯಂತ್ರದ ಚಲನೆ ತಟ್ಟನೆ
ನಿಲ್ಲಿಸುವ ಸನ್ನೆ ಗೋಲು ಎಲ್ಲೆಂದು ತಡುಕಿದೆ.
ಕ್ಷಣದರ್ಧದಲ್ಲಿ ಲೋಕದೆಲ್ಲ ಸಂಭವಗಳು ಛಿದ್ರವಾಗುವವು
ಎಂದರಿತು ನನ್ನದೇ ಹಾದಿ ಮಾಡಿಕೊಂಡು
ನಾನು ಸಾಗಿದ್ದೆ. ನನ್ನ ಮನಸ್ಸು
ತನ್ನ ಸೆಳೆವ ಮತ್ತೊಂದು ಹಾದಿಯಲ್ಲಿ ನಡೆದಿತ್ತು.
ನಿರ್ಧರಿಸುವ ಮನಸ್ಸು, ನಿರ್ವಚನಗೊಂಡ ಮನಸ್ಸು
ಎರಡನ್ನೂ ಕತ್ತರಿಸಿ ಬೇರೆ ಮಾಡುವ ಚೂರಿ
ಬೇಕಾಗಿತ್ತೋ ಏನೋ. ನಿನ್ನ ಸಿಡಿಲಕ್ಷರಗಳು
ಕಿಕ್ಕಿರಿದ ಗ್ರಂಥವಲ್ಲ, ಬೇರೆಯದೇ ಪುಸ್ತಕ
ಬೇಕಾಗಿತ್ತು ನನಗೆ. ಆದರೂ ಬೇಸರವಿಲ್ಲ.
ನಿನ್ನ ಹಾಡು ಅಂತರಾಳದ ಗಂಟುಗಳ ತೊಡಕು ಸಡಿಲಿಸುವುದು
ಈ ಕ್ಷಣದ ನಿನ್ನ ಆರ್‍ಭಟ ನಕ್ಷತ್ರಗಳ ಮುಟ್ಟುವುದು.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale