ತಂದೆ

ತಂದೆ

ರಮೇಶ ಕುಮಾರನ ಬೆನ್ನ ಮೇಲೆ ಒಂದು ದೊಡ್ಡ ಆಧುನಿಕ ಚೀಲ. ಅದು ಬೆನ್ನ ಮೇಲಿಂದ ಅತ್ತಿತ್ತ ಸರಿದಾಡದಂತೆ ಅದರ ಹಿಡಿಕೆಗಳು ಅವನ ಎರಡೂ ತೋಳುಗಳಿಗೇರಿದ್ದವು. ಏರ್ಪೋಟ್‌ನಿಂದ ಹೊರಬಂದ ಅವನು ಟ್ಯಾಕ್ಸಿ ಒಂದರಲ್ಲಿ ನೇರವಾಗಿ ಆಸ್ಪತ್ರೆಯ ಕಡೆ ಸಾಗಿದ. ಗೊಂದಲಭರಿತ ಅವನ ಮನ ತನ್ನ ತಂದೆಯ ಆರೋಗ್ಯದ ಬಗ್ಗೆಯ ಮೆಲುಕು ಹಾಕುವದರಲ್ಲಿ ತೊಡಗಿತು. ಅದರೊಡನೆಯೆ ಹಣ ಏನೇನು ಸಾಧಿಸಬಹುದೆಂಬ ಯೋಚನೆ.

ಗೋಪಾಲ ಗೋವಿಂದ ಶೆಟ್ಟಿಯರ ಕೊನೆಯ ಮಗ ರಮೇಶಕುಮಾರ, ಅವನು ತನ್ನ ಹೆಸರಿನ ಮುಂದೆ ಮಗ ಪಾರಂಪರ್ಯವಾಗಿ ಅಂಟಿಕೊಂಡು ಬರುತ್ತಿದ್ದ ಶೆಟ್ಟಿ ಎಂಬ ಬಿರುದನ್ನು ಕಿತ್ತಿ ಹಾಕಿದ್ದ. ಇಪ್ಪತ್ತೆರಡರ ವಯಸ್ಸಿನಲ್ಲಿ ಹೆಚ್ಚು ಕಡಿಮೆ ಲೋಕವನ್ನೆಲ್ಲ ಸಂಚರಿಸಿದ್ದ ಅವನನ್ನು ಹಲವರು ಹಲವು ರೀತಿಯಲ್ಲಿ ಸಂಬೋಧಿಸುತ್ತಿದ್ದರು. ಕುಮಾರ, ರಮೇಶ, ರಮ್ಮಿ ಅವುಗಳಲ್ಲಿ ಕೆಲವು. ಅರ್ಥವಿಲ್ಲದ ಬದುಕಿಗೆ ಅರ್ಥ ಹುಡುಕಲು ಅವನು ಲೋಕವೆಲ್ಲ ಸಂಚರಿಸಲಾರಂಭಿಸಿದ್ದ. ಅದಕ್ಕೆ ಪೂರಕವಾಗಿ ತಂದ ಹೇರಳ ಆಸ್ತಿಯನ್ನು ಸಂಪಾದಿಸಿದ್ದರು, ಇನ್ನೂ ಸಂಪಾದಿಸುತ್ತಲೆ ಇದ್ದರೆಂದು ಹೇಳಬಹುದು. ಅವನ ಹುಚ್ಚಾಪಟ್ಟೆ ಅಲೆಮಾರಿ. ತಿರುಗಾಟ ಒಳ್ಳೆಯದಲ್ಲವೆಂದು, ತಂದೆಯ ವ್ಯವಹಾರದಲ್ಲಿ ಕೈಚಾಚಬೇಕೆಂದು ಅವನಿಗೆ ಹಲವಾರು ರೀತಿಯಲ್ಲಿ ಹೇಳಿ ಸೋತಿದ್ದರವನ ತಾಯಿ. ಆ ಬಗ್ಗೆ ಒಂದೆರಡು ಮಾತು ಮಾತ್ರ ಆಡಿದ್ದ ಗೋಪಾಲಗೋವಿಂದ ಶೆಟ್ಟಿಯವರು ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ರಮೇಶ ಲೋಕದ ಯಾವ ಮೂಲೆಗಿದ್ದರೂ ಆಗಾಗ ತಾಯಿಗೆ ನಾಲ್ಕು ಸಾಲು ಬರೆಯುತ್ತಿದ್ದ, ಅವನು ಪ್ಯಾರಿಸಿನಲ್ಲಿದ್ದಾಗ ತಂದೆಯ ಅನಾರೋಗ್ಯದ ವಿಷಯ ಅವನಿಗೆ ತಿಳಿದಿತ್ತು. ನಿಖರ ವಿಳಾಸವಿಲ್ಲದ ಅವನನ್ನು ಅಲ್ಲಿಯ ಪೊಲೀಸಿನವರು ಹುಡುಕಿಕೊಂಡು ಬಂದು ಪತ್ರ ಕೊಟ್ಟಿದ್ದರು. ಇದಕ್ಕೆ ಕಾರಣ ತಂದೆಯ ವರ್ಚಸ್ಸು ಮತ್ತು ಹಣದ ಪ್ರಾಮುಖ್ಯವೆಂಬುದವನಿಗೆ ಚೆನ್ನಾಗಿ ಗೊತ್ತಿತ್ತು. ಹಣದ ಮಹತ್ವದ ಬಗ್ಗೆ ಇಷ್ಟು ಗೊತ್ತಿದ್ದರೂ ರಮೇಶನಿಗೆ ಅದರ ಬಗ್ಗೆ ಒಂದು ಬಗೆಯ ಉದಾಸೀನತೆ, ಎಲ್ಲಂದರಲ್ಲಿ ತಿಂದು, ಜಾಗ ಸಿಕ್ಕಡೆ ಮಲಗುವ ಅಭ್ಯಾಸ ಬೆಳೆಸಿಕೊಂಡ ಅವನಿಗೆ ಎಂದೂ ಅದರ ಹೆಚ್ಚಿನ ಅವಶ್ಯಕತೆ ಕಂಡುಬಂದಿರಲಿಲ್ಲ. ಟ್ಯಾಕ್ಸಿ ಆಸ್ಪತ್ರೆಯ ಕಡೆ ಓಡುತ್ತಿತ್ತು. ಯಾಕೊ ಅವನ ಮನ ಅಸ್ವಸ್ಥ ಚಟವಟಿಕೆಯನ್ನು ಅನುಭವಿಸಲಾರಂಭಿಸಿತು. ಮತ್ತೆ ಅರ್ಥವಿಲ್ಲದ ಬದುಕಿನ ಅರ್ಥ ಹುಡುಕಲಾರಂಭಿಸಿದ.

ಗೋಪಾಲ ಗೋವಿಂದ ಶೆಟ್ಟಿಯವರಿಗೆ ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು. ಅವರ ದಿನಗಳಲ್ಲಿ ಸಂತಾನ ನಿಯಂತ್ರಣದ ಅಬ್ಬರಿಕೆಯನ್ನು ಸರಕಾರ ಇನ್ನೂ ಆರಂಭಿಸಿರಲಿಲ್ಲ. ಹಾಗೇನಾದರೂ ಆಗಿದ್ದರೆ ಅವರ ಸಂತಾನ ಖಂಡಿತ ಬಹು ಸೀಮಿತವಾಗಿರುತ್ತಿತ್ತು. ಮದುವೆಯ ಮುನ್ನ ಅವರು ಆರಂಭಿಸಿದ ಬೃಹದಾಕಾರದಲ್ಲಿ ಬೆಳೆದು ಹಲವು ದಿಶೆಗಳಲ್ಲಿ ಕವಲು ಬಿಟ್ಟಿತ್ತು. ಅದರ ಪಾಲುದಾರರಂತೆ ವ್ಯಾಪಾರ ಇಬ್ಬರು ಗಂಡುಮಕ್ಕಳು ಮತ್ತು ಅಳಿಯಂದಿರು ಅದರ ಮೇಲ್ವಿಚಾರಣೆ ನೋಡಿ ಕೊಳ್ಳುತ್ತಿದ್ದರು. ಮೇಲ್ವಿಚಾರಣೆ ನೋಡಿಕೊಳ್ಳುತ್ತ ಅವರುಗಳು ತಮ್ಮ ತಮ್ಮ ಸುಖಸಂಸಾರಗಳಿಗೆ ಬೇಕಾಗುವುದಕ್ಕಿಂತ ಹೆಚ್ಚಿನ ಹಣವನ್ನು ಪಡೆಯುತ್ತಿದ್ದರೂ ಎಲ್ಲ ಮುಖ್ಯ ಸ್ಥಿರ, ಚರ ಆಸ್ತಿಗಳನ್ನು ಗೋಪಾಲಗೋವಿಂದ ಶೆಟ್ಟರ ಹೆಸರಿನಲ್ಲೇ ಇದ್ದವು, ಅದೂ ಅಲ್ಲದೆ ಅವರು ತಮ್ಮ ಕುಟುಂಬದವರಿಗೂ ಗೊತ್ತಾಗದ ಹಾಗೆ ಹೇರಳ ಕಪ್ಪುಹಣ ಮತ್ತು ಬಂಗಾರ ವಡವೆ ವಸ್ತ್ರಗಳನ್ನು ಶೇಖರಿಸಿಟ್ಟಿದ್ದಾರೆಂಬ ವದಂತಿಗಳು ಮಕ್ಕಳ, ಅಳಿಯಂದಿರ ವಲಯದಲ್ಲಿ ಹರಡಿದ್ದವು. ಒಮ್ಮೆ ಹಿರಿಯ ಮಗ, ಸೊಸೆ ಕುಟುಂಬದ ಇನ್ನಿತರ ಮುಖ್ಯ ಸದಸ್ಯರೆದುರು ಆ ಮಾತು ತೆಗೆದಾಗ ವೇದಾಂತಿಯ ಮುಗುಳ್ನಗೆ ನಕ್ಕುಬಿಟ್ಟಿದ್ದರು ಶೆಟ್ಟರು. ಆ ನಗೆ ಎಲ್ಲರ ಅನುಮಾನಗಳನ್ನು ಇನ್ನೂ ದೃಢಪಡಿಸಿದ್ದವು. ಯಾವ ವ್ಯಾಪಾರದಲ್ಲೂ, ಹಣದ ಎಂತಹ ವ್ಯವಹಾರದಲ್ಲೂ ತಲೆ ಹಾಕುತ್ತಿರಲಿಲ್ಲ ರಮೇಶ. ಅವನು ಎಲ್ಲಿದ್ದರಲ್ಲಿ ಎಷ್ಟು ಹಣ ಕೇಳಿದರಷ್ಟು ಕಳಿಸಿಕೊಡುವ ವ್ಯವಸ್ಥೆ ಮಾಡಿದ್ದರವನ ತಂದೆ, ಆದರವನು ಹಣ ಕೇಳುತ್ತಿದ್ದದ್ದು ತೀರಾ ಅಪರೂಪ.

ಬೆನ್ನಿನಿಂದ ಚೀಲ ಬೇರ್ಪಡಿಸುತ್ತಲೆ ಪಂಚತಾರಾ ಆಸ್ಪತ್ರೆಯ ರಿಸೆಪ್ಯನ್‌ನ ಬಳಿ ರಮೇಶ ಬಂದಾಗ ಅಲ್ಲಿ ಅವನ ಇಬ್ಬರು ಅಣ್ಣಂದಿರು ಕಾಣಿಸಿದರು. ಅವರ ಮುಖಗಳು ಅಂತಹ ದಿಗಿಲನ್ನೆನೂ ಹೊರಗೆಡಹುತ್ತಿರಲಿಲ್ಲ. ತಮ್ಮನನ್ನು ಕಂಡ ಕೂಡಲೆ ಅವರಿಬ್ಬರ ಮುಖಗಳಲ್ಲಿ ಅಸಹ್ಯದಭಾವ ಹಾದು ಹೋಯಿತು. ರಮೇಶ ಮಾತಾಡುವ ಮುನ್ನವೆ ತಂದೆಯವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ ಒಬ್ಬ ಅಣ್ಣ. ಅದಕ್ಕವನು ಆಶ್ಚರ್ಯದಿಂದ ಬಾಯಿಬಿಡುವ ಮೊದಲೆ ವಿವರಣೆ ನೀಡಿದ ಮತ್ತೊಬ್ಬ ಅಣ್ಣ, ತಂದೆಯ ಸ್ಥಿತಿ ತೀರಾ ಹದಗೆಟ್ಟಿದೆ. ಅವರು ಉಳಿಯುವುದಿಲ್ಲವೆಂದು ಹೇಳಿದ್ದಾರೆ ವೈದ್ಯರು. ಕೊನೆಯ ಗಳಿಗೆಗಳನ್ನು ತಮ್ಮ ಮನೆಯಲ್ಲಿ ಕಳೆಯಬೇಕೆಂಬುವುದು ತಂದೆಯವರ ಆಸೆ. ಅದಕ್ಕೆ ಅವರನ್ನು ಮನೆಗೆ ಸಾಗಿಸುವ ಏರ್ಪಾಟು ಆರಂಭವಾಗಿದೆ.

ಅದನ್ನು ಕೇಳಿದ ರಮೇಶನಲ್ಲಿ ಹೇಳಲಾಗದಂತಹ ನೋವು ತುಂಬಿ ಬಂತು. ಅವನು ಅಣ್ಣಂದಿರ ವರ್ತನೆಯ ಅರ್ಥವನ್ನು ಹುಡುಕುವ ಗೋಜಿಗೆ ಹೋಗಿರಲಿಲ್ಲ. ತಂದೆ ಎಲ್ಲಿರುವರೆಂದು ತಿಳಿದು ಅತ್ತ ನಡೆಯತೊಡಗಿದ. ಗಾಬರಿಯ ಭಾವ ವ್ಯಕ್ತಪಡಿಸುತ್ತಿದ್ದ ಅವನ ಮುಖವನ್ನು ಕಂಡು ಅಣ್ಣಂದಿರಿಬ್ಬರು ಅವನನ್ನು ಹಿಂಬಾಲಿಸಿದರು.

ಒಂದು ಕೋಣೆಯ ಬಾಗಿಲೆದುರು ನಿಂತಿದ್ದಳು ರಮೇಶನ ತಂಗಿ, ಅವಳು ಎಲ್ಲರಿಗಿಂತ ಕಿರಿಯಳು. ಅವಳ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯುತ್ತಿತ್ತು. ರಮೇಶನನ್ನು ಕಂಡ ಕೂಡಲೆ ಅದು ಶಬ್ದದ ರೂಪ ತಾಳಿತು. ಅವನನ್ನಪ್ಪಿ ಅಳತೊಡಗಿದ ಅವಳ ಬೆನ್ನ ಮೇಲೆ ತಟ್ಟುತ್ತ ಹೆಗಲಿಗಿದ್ದ ಬ್ಯಾಗನ್ನು ತೆಗೆದು ಕೇಳಿದ.

“ಅಮ್ಮ ಎಲ್ಲಿ?”

ಬಹು ಕಷ್ಟ ಪಟ್ಟು ತನ್ನ ಅಳುವಿನ ನಡುವೆ ಮಾತಾಡಿದಳವಳು

ಒಳಗಿದ್ದಾಳೆ. ನನ್ನಿಂದ ಅಲ್ಲಿ ನಿಲ್ಲಲಾಗಲಿಲ್ಲ… ನೀನು ಯಾವಾಗ ಎಲ್ಲಿಂದ ಬರುತ್ತಿ ಎಂಬುವುದು ಗೊತ್ತಿದ್ದರೆ ಏರ್ಪೋಟಿಗೆ ಕಾರು ಕಳುಹಿಸುತ್ತಿದ್ದ. ಅಪ್ಪ ಎರಡು ಸಲ ನಿನ್ನ ಕೇಳಿದರು… ಅಮ್ಮನಿಗೆ, ಅಪ್ಪನಿಗೆ ನಿನ್ನದೇ ಯೋಚನೆ”

ಅವರಿಬ್ಬರು ಮಾತಾಡುತ್ತಿರುವಾಗಲೆ ಅದನ್ನು ಗಮನಿಸದವರಂತ ಕೋಣೆಯೋಳ ಹೋದರು ಅವರ ಅಣ್ಣಂದಿರಿಬ್ಬರು. ಚೀಲವನ್ನು ಅವಳ ಬಳಿಗೆ ಬಿಟ್ಟು ತಾನು ಕೋಣೆಯೊಳ ಹೋದ ರಮೇಶ.

ಅದು ದೊಡ್ಡ ಕೋಣೆ, ಒಬ್ಬ ವ್ಯಕ್ತಿ ಮಲಗಲು ಅಷ್ಟು ದೊಡ್ಡಕೋಣೆ ಯಾಕೆಂಬ ಆಶ್ಚರ್ಯ ಹುಟ್ಟಿಸುವಂತಿತ್ತು. ಮಂಚದ ಬದಿಯಲ್ಲಿ ಇಬ್ಬರು ನಡುವಯಸ್ಕ ಡಾಕ್ಟರ್‌ರು ಬಹು ಕಾಳಜಿಯಿಂದ ರೋಗಿಯನ್ನು ಪರೀಕ್ಷಿಸುವಲ್ಲಿ ಮಗ್ನರಾಗಿದ್ದರು. ಆ ಕೋಣೆಯ ಒಂದು ಭಾಗ ಆಧುನಿಕ ವೈದ್ಯಕೀಯ ಉಪಕರಣಗಳಿಂದ ತುಂಬಿರುವಂತೆ ಕಂಡುಬರುತ್ತಿತ್ತು. ಮಂಚದ ಸುತ್ತೂ ನಿಕಟ ಸಂಬಂಧಿಗಳೆಲ್ಲ ಗುಮ್ಮಿಗೂಡಿದ್ದರು. ಅವರ ನಡುವೆ ದಪ್ಪನೆಯ ಫೈಲೊಂದನ್ನು ಹಿಡಿದ ಒಬ್ಬ ಹೊಸಬ ನಿಂತಿದ್ದನ್ನು ಗಮನಿಸಿದ ರಮೇಶನ ನೋಟ ಮಂಚದಲ್ಲಿ ಮಲಗಿದ್ದ ತಂದೆಯ ಕಡೆ ಹಾಯಿತು. ದೇಹಕೃಶಗೊಂಡಿತ್ತು. ಯಾವಾಗಲೂ ಲವಲವಿಕೆಯಿಂದ ತುಂಬಿರುತ್ತಿದ್ದ ಮುಖದಲ್ಲಿ ನಿಸ್ತೇಜ ಕಳೆ, ಅವರಿಬ್ಬರ ನೋಟ ಕಲೆತಾಗ ತಮಗೇನೂ ಆಗಿಲ್ಲವೇನೋ ಎಂಬಂತಹ ಮುಗುಳ್ನಗೆ ನಕ್ಕು ಮಗನನ್ನು ಹತ್ತಿರ ಬರುವಂತೆ ಕೈಮಾಡಿ ಕರೆದರು. ರಮೇಶನಲ್ಲಿನ ಸಂಕಟ ಇನ್ನೂ ಹೆಚ್ಚಾಯಿತು. ಗಂಟಲ ನರಗಳು ಉಬ್ಬಿಬಂದವು. ನಿಧಾನವಾಗಿ ತನ್ನ ತಂದೆಯ ತಲೆಯಬಳಿ ಬಂದ.

“ಈ ಬುದುಕು ಸಾವಿನ ಬಗ್ಗೆ ಏನಾದರೂ ತಿಳಿದುಕೊಂಡೆಯಾ?” ಬಹು ಮೆಲ್ಲನ ಬಂತವರ ಪ್ರಶ್ನೆ, ಅದರಲ್ಲಿ ಯಾವ ತರಹದ ಭಯವೂ ಇರಲಿಲ್ಲ. ಇಂತಹ ಸಮಯದಲ್ಲಿ ತನ್ನ ತಂದೆಯಿಂದ ಇಂತಹ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ ರಮೇಶ. ಇಂತಹ ಪರಿಸ್ಥಿತಿಯನ್ನು ಅವನು ಎದುರಿಸುತ್ತಿದ್ದದ್ದು ಇದು ಮೊದಲ ಸಲ, ಅವನ ಕಣ್ಣಲ್ಲಿ ತುಂಬಿದ ನೀರು ಕೆಳಗಿಳಿಯ ತೊಡಗಿತು. ಕೈಯನ್ನು ಮುಂದೆ ಮಾಡಿದ. ಅದನ್ನು ಹಿಡಿದು ತಮ್ಮೆಲ್ಲ ಪ್ರೇಮಾನುರಾಗವನ್ನು ಅವನಲ್ಲಿ ಹರಿಸುವಂತೆ ಅದನ್ನು ಅದುಮಿ ಹೇಳಿದರವನ ತಂದೆ.

“ಇದೆ ಬದುಕಿನ ಅರ್ಥ, ಬದುಕಿರುವವರೆಗೂ ನಿನ್ನಮ್ಮನನ್ನು ಚೆನ್ನಾಗಿ ನೋಡಿಕೊ ನಿನ್ನಲ್ಲಿ ತುಂಬಿರುವ ಪ್ರೇಮವನ್ನೆಲ್ಲ ಅವಳಿಗೆ ಕೊಡು” ಎಂದ ಅವರು ಇನ್ನೊಮ್ಮೆ ಅವರ ಕೈಯನ್ನು ಗಟ್ಟಿಯಾಗಿ ಅದುಮಿಬಿಟ್ಟರು, ಅವರಾಡಿದ ಮಾತು ಬೇರಾರಿಗೂ ಕೇಳಿಸುವ ಹಾಗಿರಲಿಲ್ಲ. ಆಸ್ಪತ್ರೆಯವರು, ಮನೆಯವರು ಕಲೆತು ಅವರನ್ನು ಅಲ್ಲಿಂದ ಸಾಗಿಸುವ ಏರ್ಪಾಟು ಆರಂಭಿಸಿದರು. ದಪ್ಪನೆಯ ಫೈಲು ಹಿಡಿದ ವ್ಯಕ್ತಿ ಗೋಪಾಲಗೋವಿಂದ ಶೆಟ್ಟರ ಹತ್ತಿರವೆ ಇದ್ದ.
* * *

ರಮೇಶ ಅಲ್ಲಿಗೆ ಬರುವ ಬಹುದಿನಗಳ ಮೊದಲೆ ಗೋಪಾಲಗೋವಿಂದ ಶೆಟ್ಟರು ಬಹು ಕಾಲ ಬದುಕುವುದಿಲ್ಲವೆಂಬುವುದು ಮನೆಮಂದಿಗೆಲ್ಲ ಗೊತ್ತಾಗಿ ಹೋಗಿತ್ತು. ಅವರ ಮಡದಿ ಕಡೆಯ ಮಗಳನ್ನು ಬಿಟ್ಟು ಮಿಕ್ಕವರೆಲ್ಲ ಅವರಾಗಲೆ ತೀರಿಹೋದಂತೆ ವರ್ತಿಸುತ್ತಿದ್ದರು. ಗೋಪಾಲಗೋವಿಂದ ಶೆಟ್ಟರಿಗೂ ಸಾವು ಯಾವ ಸಮಯದಲ್ಲಾದರೂ ತಮ್ಮನ್ನು ಸೆಳೆದುಕೊಳ್ಳಬಹುದೆಂಬುವುದು ಗೊತ್ತಾಗಿ ಹೋಗಿತ್ತು. ಅದನ್ನು ಇನ್ನೂ ಖಚಿತಪಡಿಸುವಂತೆ ಅವರೊಡನೆ ವರ್ತಿಸುತ್ತಿದ್ದರು ಅವರ ಮಕ್ಕಳು, ಸೊಸೆಯಂದಿರು ಮತ್ತು ಅಳಿಯಂದಿರು. ಅನುಭವಿಯಾದ ಶೆಟ್ಟರಿಗೆ ಇದರ ಕಾರಣ ಬಿಡಿಸಿ ಹೇಳಬೇಕಾಗಿರಲಿಲ್ಲ. ತಮ್ಮ ರಕ್ತ ಹಂಚಿಕೊಂಡು ಹುಟ್ಟಿದ ಎಲ್ಲ ಮಕ್ಕಳ ಗುಣಗಳು ಅವರಿಗೆ ಚೆನ್ನಾಗಿ ಗೊತ್ತಿತ್ತು. ಸಾಂಗತ್ಯದಿಂದ ‘ಅಳಿಯಂದಿರ ಮನೋಭಾವವನ್ನು ಗುರ್ತಿಸಿದ್ದರವರು. ಕೋಟ್ಯಾಂತರದ ಆಸ್ತಿಯಲ್ಲಿ ಯಾರಿಗೆ ಎಲ್ಲಿ ಮೋಸವಾಗುತ್ತದೋ, ಏನೂ ದಕ್ಕದೆ ಹೋಗುತ್ತದೆ ಎಂಬ ಭಯ, ತನ್ನಲ್ಲಿಲ್ಲದ ಕೆಲ ಅವಗುಣಗಳು, ಬಹುಶಃ ಸಮಾಜ ತನ್ನ ಮಕ್ಕಳಿಗೆ ಧಾರೆ ಎರೆದುಕೊಟ್ಟಿದೆ, ಚಿಕ್ಕಿಂದಿನಿಂದ ಕಷ್ಟಪಟ್ಟು ಅವರನ್ನು ಸಾಕಿ ಸಲುಹಿದ ತಮ್ಮ ತಾಯಿಯ ಬಗ್ಗೆಯ ಅವರಿಗೆ ನಿರ್ಲಕ್ಷ್ಯ, ಅನಾದರ, ಬಹುಶಃ ಇದಕ್ಕೆ ಕಾರಣ ಒಂದೆ ಅವಳು ಹಳೆಯ ಕಾಲದವಳು. ಆಸ್ತಿ ಎಲ್ಲ ಇನ್ನೂ ತನ್ನ ಹೆಸರಿನಲ್ಲಿ ಇಲ್ಲದಿದ್ದರೆ ತನ್ನನ್ನೂ ಅವರುಗಳು ಕಸದಂತೆಯೇ ಕಾಣುತ್ತಿದ್ದರೇನೋ. ಈ ಅದ್ಧೂರಿಯ ಚಿಕಿತ್ಸೆ, ಆದರ ದೊರೆಯುತ್ತಿರಲಿಲ್ಲವೇನೋ. ಎಲ್ಲ ತನ್ನ ಕಷ್ಟಾರ್ಜಿತ ಆಸ್ತಿ ತಾನದನ್ನು ಏನು ಬೇಕಾದರೂ ಮಾಡಬಹುದು. ಯಾವ ಅನಾಥಾಶ್ರಮಕ್ಕಾದರೂ ದಾನ ಮಾಡಬಹುದು. ಈ ಹಣದ ಅತಿಯಾಸೆ ಮಾನವನನ್ನು ಪಶುವನ್ನಾಗಿ ಮಾಡುತ್ತಿದೆ. ಸಂಬಂಧಗಳ ಅರ್ಥ ಹಣದಿಂದ ಅಳೆಯಲಾಗುತ್ತಿದೆ. ಇಂತಹದರಲ್ಲಿ ಈ ರಮೇಶನೆ ಬಹು ವಿಚಿತ್ರಮಗ. ಅವನೆಂದೆ ಆಗಲಿ ಹಣಕ್ಕಾಗಿ ಆಸೆ ಪಟ್ಟವನಲ್ಲ. ಇನ್ನೂ ಇನ್ನೂ ಹಣ ಸಂಪಾದಿಸಬೇಕೆಂಬ ಹುಚ್ಚು ಅವನಲ್ಲಿಲ್ಲ. ಆದರೊಂದು ವಿಚಿತ್ರ ಹುಚ್ಚು, ಬದುಕಿನ ಅರ್ಥ ತಿಳಿಯುವ ಹುಚ್ಚು. ಅದು ಯಾರಿಗೂ ಗೊತ್ತಾಗಿಲ್ಲ, ಗೊತ್ತಾಗಲಿಕ್ಕಿಲ್ಲ.

ಹತ್ತಿರದಲ್ಲೆ ನಿಂತಿದ್ದ ತಮ್ಮ ಲಾಯರನ್ನು ಕೂಡಿಸಿ ವಿಲುನಾಮೆ ಬರೆಸತೊಡಗಿದರು ಗೋಪಾಲಗೋವಿಂದ ಶೆಟ್ಟರು.
* * *

ರಮೇಶ ತನ್ನ ತಾಯಿ ತಂಗಿಯರ ನಡುವೆ ಸೋಫಾದಲ್ಲಿ ಕುಳಿತಿದ್ದ, ಅಣ್ಣಂದಿರು ಅವರ ಮಡದಿಯರು, ಅಕ್ಕಂದಿರು ಅವರ ಗಂಡಂದಿರು ಬೇರೆ ಬೇರೆಯಾಗಿ ನಿಂತು ತಮ್ಮಲ್ಲೆ ಪಿಸುದನಿಯ ಮಾತುಗಳಲ್ಲಿ ತೊಡಗಿದ್ದರು. ಅವರೆಲ್ಲರ ಮುಖದಲ್ಲೂ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾದು ನಿಂತವರಂತಹ ಭಾವ ವ್ಯಕ್ತವಾಗುತ್ತಿತ್ತು. ಕೊನೆಗೂ ಲಾಯರ್ ತಂದೆಯ ಕೋಣೆಯಿಂದ ಬಂದು ಎಲ್ಲರನ್ನೂ ಒಳಬರುವಂತೆ ಆಹ್ವಾನಿಸಿದ. ಅದಕ್ಕಾಗೆ ಕಾದಂತೆ ಅತ್ತ ನಡೆದರವರು. ಎಲ್ಲರಿಗಿಂತ ಕೊನೆಗಿದ್ದವರು ರಮೇಶ ಅವನ ತಂಗಿ ಮತ್ತು ತಾಯಿ.

ತಮ್ಮೆದುರು ನಿಂತ ಎಲ್ಲರ ಮುಖವನ್ನು ಒಮ್ಮೆ ಬಹು ಪ್ರೇಮಾಭಿಮಾನಗಳಿಂದ ನೋಡಿದ ಶೆಟ್ಟರು ತಾವು ಬಹು ಕಾಲಕಳೆದ ಕೋಣೆಯ ಸುತ್ತು ಕಣ್ಣಾಡಿಸುತ್ತಿರುವಾಗಲೆ ಅವರು ಕೊನೆಯುಸಿರೆಳೆದರು. ಏನೂ ಇಲ್ಲದ ಏನನ್ನೂ ನೋಡುತ್ತಿರುವಂತೆ ಸ್ತಬ್ಧವಾಗಿ ಹೋಯಿತವರ ನೋಟ. ಕೋಣೆಯಲ್ಲಿ ಒಮ್ಮೆಲೆ ಆರಂಭವಾದ ರೋಧನ ಎಂತಹವನ ಕರುಳನ್ನು ಕರಗಿಸುವಂತಿತ್ತು. ದೂರದಲ್ಲಿ ನಿಂತಿದ್ದ ರಮೇಶನ ಕಣ್ಣಲ್ಲಿ ಒಂದು ಹನಿ ನೀರು ಬರಲಿಲ್ಲ. ಅವನು ಕಾಣದ ಏನನ್ನೂ ನೋಡುತ್ತಿರುವಂತೆ ನಿಂತುಬಿಟ್ಟಿದ್ದ.
* * *

ಶವಯಾತ್ರೆ ಆರಂಭವಾಗುವ ಮೊದಲೆ ಎಲ್ಲರಿಗೂ ವಿಲುನಾಮೆಯಲ್ಲೆನಿದೆ ಎಂಬುವುದು ತಿಳಿಯುವ ಕಾತುರ. ಅದನ್ನು ಅರ್ಥ ಮಾಡಿಕೊಂಡ ಲಾಯರ್ ಎಲ್ಲರನ್ನೂ ಒಂದು ಕಡೆ ಕೂಡಿಸಿ ವೀಲುನಾಮೆಗಿದ್ದ ಇಬ್ಬರು ಸಾಕ್ಷಿಗಳನ್ನು ಕರೆಸಿ ಅದನ್ನವರಿಗೆ ಓದಿ ಹೇಳಿದರು.

ಆಶ್ಚರ್ಯವೆಂದರೆ ಎಲ್ಲರಿಗೂ ಆಸ್ತಿಯಲ್ಲಿ ಸಮಪಾಲಿತ್ತು. ಗಂಡು ಹೆಣ್ಣು ಮಕ್ಕಳೆಂಬ ಭೇದಭಾವವಿರಲಿಲ್ಲ. ತಮ್ಮ ಮಡದಿಗೂ ಮಕ್ಕಳಷ್ಟೆ, ಪಾಲನ್ನು ಬಿಟ್ಟು, ಹೋಗಿದ್ದರವರು. ದಿಗ್‌ಭ್ರಾಂತಿ ಹುಟ್ಟಿಸುವ ಸಂಗತಿ ಎಂದರೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ರಮೇಶನ ಮೇಲೆ ಬಿಟ್ಟಿದ್ದರು. ತಾವಿರುವ ಮನೆಯೂ ಅವನ ಹೆಸರಿನಲ್ಲೆ ವೀಲುನಾಮೆಯಲ್ಲಿ ಒಂದು ತಾಕಿತಿನಿಂತಹ ವಾಕ್ಯವನ್ನು ಸೇರಿಸಿದ್ದರು. ಅದೇನೆಂದರೆ ರಮೇಶ ತಾಯಿಯನ್ನು ಬಿಟ್ಟು ಊರು ಊರು ಅಲೆಯಬಾರದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಲಿವಾಗಿರಲಿ ಸದಾ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…