ಚುನಾವಣೆ, ಕೋಮು ಗಲಭೆ-ಇಂಥ ಕೆಲವು ಮುಖ್ಯ ಸಂದರ್ಭಗಳಲ್ಲಿ ನಮ್ಮ ಜನರ ಕಲ್ಪನಾಶಕ್ತಿಗೆ ಮೇರೆಯೇ ಇರುವುದಿಲ್ಲ. ಎಲ್ಲಾ ರೀತಿಯ ವದಂತಿಗಳನ್ನು ಹುಟ್ಟು ಹಾಕುತ್ತಾ, ಹಬ್ಬಿಸುತ್ತ, ವಾತಾವರಣವನ್ನೇ ತಬ್ಬಿಬ್ಬು ಮಾಡುತ್ತಾ ಕೆಲವರು ತಮ್ಮ ಪ್ರತಿಭಾ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ಗುಟ್ಟನ್ನು ಇಟ್ಟುಕೊಳ್ಳಲಾಗದ ಮನಸ್ಥಿತಿ ಒಂದು ಕಡೆ, ಪೂರ್ವಾಪರ ಯೋಚಿಸದೆ ಇಲ್ಲದ್ದನ್ನು ಹುಟ್ಟು ಹಾಕುವ ಹುನ್ನಾರ ಇನ್ನೊಂದು ಕಡೆ, ಸಿಕ್ಕಿದ ಸುದ್ದಿಯ ಎಳೆಯನ್ನು ಹಿಗ್ಗಾಮುಗ್ಗಾ ಹಿಗ್ಗಲಿಸಿ ಹರಡುವ ಹುಮ್ಮಸ್ಸು ಮತ್ತೊಂದು ಕಡೆ ಹೀಗೆ ಅನೇಕ ಆಯಾಮಗಳು ಸೇರಿ ವದಂತಿಯೊಂದು ವ್ಯಾಪಕವಾಗಿ ಹಬ್ಬಿ ಬಿಡುತ್ತದೆ. ಮೂಲತಃ ಮನಸ್ಸಿನಲ್ಲಿ ಹುದುಗಿಟ್ಟುಕೊಳ್ಳಲಾಗದ ತಹತಹವೇ ವದಂತಿ ಪ್ರಸಾರಕ್ಕೆ ಕಾರಣವಾಗುತ್ತದೆ.
ಗುಟ್ಟು, ವದಂತಿ-ಇತ್ಯಾದಿಗಳ ಬಗ್ಗೆ ಮಾತನಾಡುವಾಗ ನಾನು ಚಿಕ್ಕಂದಿನಲ್ಲಿ ನೋಡಿದ ಕನ್ನಡ ಚಲನಚಿತ್ರವೊಂದು ನೆನಪಿಗೆ ಬರುತ್ತದೆ. ಚಿತ್ರದ ಹೆಸರು ‘ರತ್ನಗಿರಿ ರಹಸ್ಯ’. ಇದು ಖ್ಯಾತ ನಿರ್ಮಾಪಕ-ನಿರ್ದೇಶಕ ಬಿ. ಆರ್. ಪಂತುಲು ಅವರ ಒಂದು ಪ್ರಸಿದ್ಧ ಜನಪ್ರಿಯ ಚಿತ್ರ. ದೂರದ ಊರಿನ ಟೂರಿಂಗ್ ಟಾಕೀಸ್ನಲ್ಲಿ ‘ರತ್ನಗಿರಿ ರಹಸ್ಯ’ ಚಿತ್ರ ಪ್ರದರ್ಶನವಾಗುತ್ತಿದೆಯೆಂಬ ಸುದ್ದಿಯ ಜೊತೆಗೆ ಅದು ಉತ್ತಮ ಕತೆಯನ್ನು ಹೊಂದಿದೆಯೆಂಬ ಪ್ರಚಾರ ನಡೆದಿದೆ. ಹಾಗೂ ಹೀಗೂ ತಾಯಿ ತಂದೆಯರನ್ನು ಒಪ್ಪಿಸಿ, ಸ್ನೇಹಿತರೊಂದಿಗೆ ನಡೆದುಕೊಂಡು ನಾಲ್ಕೈದು ಮೈಲಿ ದಾರಿ ಸವೆಸಿದ ಸಂಭ್ರಮದಿಂದ ರತ್ನಗಿರಿ ರಹಸ್ಯವನ್ನು ನೋಡಿದ್ದೆ. ಉದಯಕುಮಾರ್ ಮತ್ತು ಸಾಹುಕಾರ್ ಜಾನಕಿ ಅಭಿನಯಿಸಿದ್ದ ಈ ಚಿತ್ರದ ‘ಅನುರಾಗದ ಅಮರಾವತಿ’ ಎಂದು ಪ್ರಾರಂಭವಾಗುವ ಹಾಡು ಅತ್ಯಂತ ಪ್ರಸಿದ್ಧವಾಗಿತ್ತು; ಜನಪ್ರಿಯವಾಗಿತ್ತು. ಚಿತ್ರದ ಬೇರೆ ವಿವರಗಳಿಗಿಂತ ಒಂದು ಮುಖ್ಯ ಪ್ರಸಂಗವನ್ನು ಇಲ್ಲಿ ಪ್ರಸ್ತಾಪಿಸುವುದು ನನ್ನ ಉದ್ದೇಶ.
ರತ್ನಗಿರಿಯ ರಾಜನ ಕಿವಿಗಳು ಕತ್ತೆ ಕಿವಿ ರೂಪವನ್ನು ಪಡೆದಿರುತ್ತವೆ. ಅವರು ಯಾರಿಗೂ ಕಾಣಿಸದಂತೆ ಇರಲೆಂದು ಕಿವಿ ಮುಚ್ಚುವಂತೆ ಪೇಟ ಧರಿಸಿರುತ್ತಾನೆ. ರಾಜನಾದರೇನಂತೆ ಕ್ಷೌರ ಮಾಡಬೇಕಲ್ಲ! ತಲೆ ಕೂದಲು ತುಂಬಾ ಬೆಳೆದಾಗ ಕ್ಷೌರಿಕನನ್ನು ಕರೆಸುವುದು ಅನಿವಾರ್ಯವಾಗುತ್ತದೆ. ಕ್ಷೌರಿಕ ಬಂದ, ರಾಜ ಪೇಟ ತೆಗೆದ. ರಾಜನೆ ಕತ್ತೆ ಕಿವಿಗಳನ್ನು ನೋಡಿ ಕ್ಷೌರಿಕ ಹೌಹಾರಿದ; ದಿಗ್ಭ್ರಮೆಗೊಂಡ. ಈಗ ಆತನಿಗೆ ಕಟ್ಟಪ್ಪಣೆ ವಿಧಿಸಲಾಯಿತು: “ಯಾವುದೇ ಕಾರಣಕ್ಕೂ ರಾಜನ ಕಿವಿ ಕತ್ತೆ ಕಿವಿ ಎಂದು ಎಲ್ಲೂ ಯಾರಿಗೂ ಹೇಳಬಾರದು. ಹೇಳಿದರೆ ತಲೆದಂಡ ಕೊಡಬೇಕಾಗುತ್ತೆ.”
ಆ ಕ್ಷೌರಿಕ ವಿಧಿಯಿಲ್ಲದೆ ಹೂಂಗುಟ್ಟಿದ. ರಾಜನಿಗೆ ಕ್ಷೌರ ಮಾಡಿದ; ಮನೆಗೆ ಬಂದ. ಪ್ರತಿದಿನವೂ ಆತನಿಗೆ ರಾಜನ ಕತ್ತೆ ಕಿವಿಯ ನೆನಪು ಕಾಡಿತು. ಯಾರಿಗಾದರೂ ಹೇಳಿಕೊಳ್ಳದೆ ಸುಮ್ಮನೆ ಇರಲು ಅವನಿಗೆ ಸಾಧ್ಯವಾಗಲೇ ಇಲ್ಲ. ತನ್ನ ತಳಮಳವನ್ನು ತಮಣೆ ಮಾಡಿಕೊಳ್ಳುವ ಸಲುವಾಗಿ ಹೆಂಡತಿಗೆ ವಿಷಯವನ್ನು ಹೇಳಿದ. ಹೇಳುವಾಗ ಬರಿ ‘ಕತ್ತೆಕಿವಿ’ ಎಂದು ಬಿಟ್ಟರೆ ಸಾಕೇ? ಇಲ್ಲ. ಕತ್ತೆ ಕಿವಿಯನ್ನು ವಿವಿಧ ರೀತಿಯಲ್ಲಿ ವರ್ಣಿಸಿದ. ಜೊತೆಗೆ ಕಟ್ಟಪ್ಪಣೆಯನ್ನು ಮಾಡಿದ. ‘ಯಾರಿಗಾದರೂ ಹೇಳಿದರೆ ತಲೆದಂಡ ಹುಷಾರ್!’
ಕ್ಷೌರಿಕ, ತನ್ನೊಳಗಿದ್ದ ಗುಟ್ಟನ್ನು ಬಿಟ್ಟು ಕೊಟ್ಟು ಸಮಾಧಾನ ನಿಟ್ಟುಸಿರು ಬಿಟ್ಟ. ಆದರೆ ಆತನ ಹೆಂಡತಿ ಗತಿ! ಗುಟ್ಟನ್ನು ಬಿಟ್ಟು ಕೊಡುವ ತವಕ! ಆದರೆ ಗುಟ್ಟನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಕಾಪಾಡಬೇಕೆಂಬ ಗಂಡನ ಕಟ್ಟಪ್ಪಣೆ! ಆಕೆಗೆ ಎಲ್ಲಿಲ್ಲದ ತಳಮಳ! ಕಡೆಗೆ ಆದದ್ದೇನು ಗೊತ್ತೇ? ಆಕೆಗೆ ಹೊಟ್ಟೆಯುಬ್ಬರ ಬಂದಿತು; ಹೊಟ್ಟೆನೋವು ಕಾಡತೊಡಗಿತು. ಒಳಗಿನ ಗುಟ್ಟು ಹೊಟ್ಟೆಯಲ್ಲಿ ಬೆಳೆದು ಹೇಗೆಲ್ಲ ಆಯಿತು! ಕೂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ, ಹೊಟ್ಟೆನೋವು ತಾಳಲಾಗದೆ, ಗರ್ಭಿಣಿಯಾಗದೆ ಹೊಟ್ಟೆ ಮುಂದಕ್ಕೆ ಬಂದಿರುವುದನ್ನು ಹೇಳಿಕೊಳ್ಳಲಾಗದೆ ಒದ್ದಾಡಿದ ಹೆಂಡತಿಯನ್ನು ನೋಡಿ, ಗಂಡ, ಒಂದು ಉಪಾಯವನ್ನು ಹುಡುಕಿದ. ಯಾರಿಗೂ ಕಾಣದಂತೆ ಹೆಂಡತಿಯನ್ನು ಊರ ಹೊರಗೆ ಕರೆದುಕೊಂಡು ಹೋದ; ಒಂದು ಗುಂಡಿ ತೋಡಿದ; ಹೆಂಡತಿಗೆ ಹೇಳಿದ: ‘ನೋಡು, ರಾಜನ ಕಿವಿ ಕತ್ತೆ ಕಿವಿ ಅನ್ನೋ ಗುಟ್ಟು ಮಾತನ್ನು ಈ ಗುಂಡಿಯೊಳಗೆ ಹೇಳಿ ಹೊರಹಾಕು.’ ಹೆಂಡತಿ ಅದರಂತೆ ಗುಂಡಿಯೊಳಗೆ ಮುಖವಿಟ್ಟು ‘ರಾಜನ ಕಿವಿ ಕತ್ತೆ ಕಿವಿ’ ಅಂತ ಸಮಾಧಾನ ವಾಗುವವರೆಗೂ ಹೇಳಿದಳು. – ಅನಂತರ ಗಂಡ, ಗುಂಡಿಗೆ ಮಣ್ಣು ಹಾಕಿ ಮುಚ್ಚಿದ; ಅಂದರೆ ಗುಟ್ಟನ್ನು ಮಣ್ಣು ಮಾಡಿದ.
ಪ್ರಕರಣ ಇಷ್ಟಕ್ಕೆ ಮುಕ್ತಾಯವಾಗಲಿಲ್ಲ. ಗುಂಡಿ ತೋಡಿ ಗುಟ್ಟು ಹೇಳಿ ಮುಚ್ಚಿದ ಜಾಗದಲ್ಲಿ ಒಂದು ಸಮೃದ್ಧವಾದ ಮರ ಬೆಳಯಿತು, ಅದನ್ನು ನೋಡಿದ ಒಬ್ಬಾತ ಕಡಿದು ಮೃದಂಗ ವಾದನದ ತಯಾರಿಗೆ ಬಳಸಿದ. ಹೊಸ ಮೃದಂಗ ಹೊತ್ತುಕೊಂಡು ರಾಜನ ಆಸ್ಥಾನದಲ್ಲಿ ಬಾರಿಸಿ, ತನ್ನ ನೈಪುಣ್ಯವನ್ನು ಪ್ರದರ್ಶಿಸಲು ಆಸೆ ಪಟ್ಟ, ರಾಜನ ಒಪ್ಪಿಗೆ ಪಡೆದು ಆಸ್ಥಾನದಲ್ಲಿ ಮೃದಂಗ ಬಾರಿಸಲು ಪ್ರಾರಂಭಿಸಿದಾಗ ಆದದ್ದೇನು? ಒಂದು ಸಾರಿ ಬಡಿದ ಕೂಡಲೇ ಮೃದಂಗದಿಂದ ‘ರಾಜನ್’ ಎಂದು ದನಿ ಬಂತು. ಮತ್ತೆ ಬಡಿದಾಗ ‘ಕಿವಿ’ ಎಂದು ಕೇಳಿಸಿತು. ಹೀಗೆ ಮೃದಂಗ ಬಾರಿಸ ತೊಡಗಿದಾಗ ‘ರಾಜನ್ ಕಿವಿ ಕತ್ತೆ ಕಿವಿ’ ಎಂದು ಒಂದೇ ಸಮ ಕೇಳಿಸತೊಡಗಿತು. ಮೃದಂಗವನ್ನು ಬಾರಿ ಸುತ್ತಾ ಹೋದಂತೆ ‘ರಾಜನ ಕಿವಿ ಕತ್ತೆ ಕಿವಿ, ರಾಜನ ಕಿವಿ ಕತ್ತೆ ಕಿವಿ’ ಎಂದು ಮೃದಂಗದ ಮತ್ತೆ ಮತ್ತೆ ಮಾತಾಡಿತು. ಆಸ್ಥಾನದ ತುಂಬಾ ಇದೇ ಮಾತು ತುಂಬಿ ಪ್ರತಿಧ್ವನಿಸಿ ಎಲ್ಲರಿಗೂ ಆಶ್ಚರ್ಯವಾಯಿತು. ರಾಜನಂತೂ ರೊಚ್ಚಿಗೆದ್ದ. ಸಿಂಹಾಸನದಿಂದ ಇಳಿದು ಮೃದಂಗವನ್ನು ಕಸಿದುಕೊಂಡು ಮೇಲೆತ್ತಿ, ನೆಲಕ್ಕೆ ಅಪ್ಪಳಿಸಿದ, ಮೃದಂಗ ಪುಡಿಪುಡಿಯಾಯಿತು; ಆದರೆ ಮೃದಂಗದ ಚೂರುಗಳು ಕುಣಿಯುತ್ತ ‘ರಾಜನ ಕಿವಿ ಕತ್ತೆ ಕಿವಿ’ ಎಂದು ಸದ್ದು ಮಾಡ ತೊಡಗಿದವು. ಒಟ್ಟಿನಲ್ಲಿ ಕ್ಷೌರಿಕನ ಹೆಂಡತಿ ಗುಟ್ಟು ಬಿಟ್ಟು ಕೊಟ್ಟ ಜಾಗದಲ್ಲಿ ಹುಟ್ಟಿದ ಮರವು ಗುಟ್ಟನ್ನು ಬಚ್ಚಿಟ್ಟುಕೊಳ್ಳಲಾಗಲಿಲ್ಲ.
ಈ ಪ್ರಸಂಗವನ್ನು ಅಂದು ‘ರತ್ನಗಿರಿ ರಹಸ್ಯ’ ಸಿನಿಮಾದಲ್ಲಿ ನೋಡಿದ ನಾನೇ ಇಂದೂ ಅದನ್ನು ಮರೆತಿಲ್ಲ. ಕ್ಷೌರಿಕ ಮತ್ತು ಆತನ ಹೆಂಡತಿ ರಹಸ್ಯವನ್ನು ಕಾಪಾಡಿಕೊಳ್ಳಲಾಗದ ಮನುಷ್ಯ ಸಹಜ ಮನಸ್ಥಿತಿಯನ್ನು ಪ್ರತಿನಿಧಿಸಿದರೆ, ಗುಟ್ಟು ಬಿಟ್ಟುಕೊಟ್ಟ ಜಾಗದಲ್ಲಿ ಹುಟ್ಟಿದ ಮರವು ಮೃದಂಗದ ಮೂಲಕ ಮಾತನಾಡಿ ರಹಸ್ಯವನ್ನು ಹೊರ ಹಾಕಿದ ಘಟನೆ ಗುಟ್ಟನ್ನು ಬಿಟ್ಟು ಕೊಡುವ ನೈಸರ್ಗಿಕ ಒತ್ತಡವನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಅಂದರೆ ಯಾವುದೇ ಗುಟ್ಟನ್ನು ಬಚ್ಚಿಟ್ಟುಕೊಳ್ಳಲಾಗದ ಮನಸ್ಥಿತಿಯು ಒಂದು ನೈಸರ್ಗಿಕ ನೆಲೆಯಾಗಿದೆಯೆಂಬ ಅಂಶದ ಕಡೆಗೆ (ರತ್ನಗಿರಿ ರಹಸ್ಯ ದ ವಿಡಂಬನಾತ್ಮಕ ಸನ್ನಿವೇಶ ನಮ್ಮ ಗಮನವನ್ನು ಸೆಳೆಯುತ್ತದೆ, ಇದು ಇವತ್ತಿಗೂ ನಿಜವಾಗಿದೆ. ಯಾಕೆಂದರೆ ಗುಟ್ಟನ್ನು ಬಚ್ಚಿಟ್ಟುಕೊಳ್ಳುವ ಜನರಿಗಿಂತ ಉಪ್ಪು ಖಾರ ಬೆರೆಸಿ, ಒಗ್ಗರಣೆ ಹಾಕಿ ಹೊರ ಹಾಕುವವರೇ ಜಾಸ್ತಿ. ಹೀಗೆ ಹೊರ ಹಾಕುವಾಗ ಸುದ್ದಿಯೊಂದನ್ನು ಹೇಳುವ ಹುಮ್ಮಸ್ಸು ಇರಬಹುದು; ಸುದ್ದಿಗೆ ಸುಣ್ಣ ಬಣ್ಣ ಬಳಿದು ವದಂತಿಯನ್ನಾಗಿಸಿ ವಿಜೃಂಭಿಸುವ ವಿಕೃತ ಹುನ್ನಾರವೂ ಇರಬಹುದು. ಇರುವುದನ್ನು ಇದ್ದಂತೆ ಹೇಳಿ ಸುದ್ದಿ ಮೌಲ್ಯದ ಮಹತ್ವ ಪಡೆಯುವ ಮನಸ್ಥಿತಿ ಒಂದು ಕಡೆ; ಇರುವುದರ ಜೊತೆಗೆ ಇಲ್ಲದ್ದನ್ನು ಸೇರಿಸಿ ವಿಘ್ನ ಸಂತೋಷ ಪಡುವ ವಿಕೃತಿ ಇನ್ನೊಂದು ಕಡೆ. ಎರಡೂ ಕಡೆಯಿಂದ ಗುಟ್ಟಿನ ಸುದ್ದಿಯಂತೂ ಪ್ರಸಾರವಾಗುತ್ತದೆ. ಆದರೆ ಮೊದಲನೆಯದು ಸುದ್ದಿ ಸತ್ಯವನ್ನಷ್ಟೇ ಹೇಳಿ ಸಹ್ಯವೆನಿಸಿಕೊಳ್ಳುತ್ತದೆ; ಎರಡನೆಯದು ಸನ್ನಿವೇಶವೊಂದನ್ನು ಬಳಸಿಕೊಳ್ಳುವ ‘ವೇಷ’ವಾಗುತ್ತದೆ. ಆದರೆ ಎರಡೂ ಕಡೆಗಳಲ್ಲಿ ಕಡೇ ಪಕ್ಷ ಸುದ್ದಿ ಸತ್ಯದ ಮೂಲ ಎಳೆಯಂತೆ ಇರುತ್ತದೆ. ಒಂದು ಇರುವುದನ್ನು ಮಾತ್ರ ಹೇಳಿದರೆ, ಇನ್ನೊಂದು ಇರುವುದರ ಜೊತೆ ಮತ್ತಷ್ಟು ಸೇರಿಸುವ ‘ಪ್ರತಿಭಾ ಪ್ರದರ್ಶನ’ ತೋರಿಸುತ್ತದೆ. ‘ಬೆಂಕಿಯಿಲ್ಲದೆ ಹೊಗೆಯಿಲ್ಲ’ ಎಂಬ ಮಾತು ಎರಡೂ ಕಡೆ ಅನ್ವಯಿಸುತ್ತದೆ. ಆದರೆ ಬೆಂಕಿಯ ಪ್ರಮಾಣಕ್ಕನುಗುಣವಾಗಿ ಹೊಗೆಯ ಪ್ರಮಾಣ ಮಿತವಾಗಿರದೆ ಅತಿಯಾಗಿರಬಹುದೆಂಬ ಎಚ್ಚರ ನಮಗಿರಬೇಕು.
ಇನ್ನು ಕೆಲವರು ಇರುತ್ತಾರೆ. ಅವರು ಹಬ್ಬಿಸುವ ವದಂತಿಗಳಿಗೆ ಸತ್ಯದ ಎಳೆಯೊಂದರ ಅಗತ್ಯವೇ ಇರುವುದಿಲ್ಲ. ಉದ್ದೇಶಬದ್ಧ ಅನುಮಾನವೇ ಅವರಿಗೆ ಆಧಾರ. ತಮ್ಮ ಮನಸ್ಥಿತಿಗೆ ತೀರಾ ಸಹಜವೆನಿಸುವ ಅನುಮಾನವನ್ನೇ ಮಾನ, ಮರ್ಯಾದೆಯಾಗಿ ಸ್ವೀಕರಿಸಿದ ಇಂಥವರು ಆಗದವರ ಬಗ್ಗೆ ಬೇಕೆಂದೇ ಅನುಮಾನ ಪಡುತ್ತಾರೆ. ಸುಳ್ಳನ್ನೇ ಸತ್ಯವೆಂದು ಸಾಬೀತುಪಡಿಸುವ ಮಾದರಿಯಲ್ಲಿ ವದಂತಿಗಳನ್ನು ಹುಟ್ಟುಹಾಕುತ್ತಾರೆ. ಕಂಡಕಂಡವರ ಮುಂದೆ ವರ್ಣ ರಂಜಿತವಾಗಿ ನಿರೂಪಿಸುತ್ತ, ಖುಷಿ ಪಡುತ್ತ, ಖುಷಿ ಕೊಡುತ್ತ, ವದಂತಿ ವಿದೂಷಕರಾಗಿ ವಿಜೃಂಭಿಸುತ್ತಾರೆ. ವಿದೂಷಕತ್ವವನ್ನು ಮುಚ್ಚಿಡಲು ವೀರಾವೇಶದ ಮುಖವಾಡವನ್ನು ಹಾಕುತ್ತಾರೆ. ಇಂಥವರು ಒಬ್ಬರಲ್ಲ, ಇಬ್ಬರಲ್ಲ, ಅಸಂಖ್ಯಾತ ಜನರಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಹಬ್ಬಿದ್ದಾರೆ. ಇಂಥವರಿಗೆ ನಮ್ಮಿಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಅಪ್ರಾಮಾಣಿಕರು, ಪಕ್ಷಪಾತಿಗಳು; ತಾವು ಮಾತ್ರ ಸತ್ಯ ಹರಿಶ್ಚಂದ್ರನ ತುಂಡು. ಕೆಲವೊಮ್ಮೆ ನಮ್ಮ ಇತಿಮಿತಿಗಳು ಗೊತ್ತಿದ್ದೇ ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸುವುದು ಉಂಟು. ಆಗ ತಮ್ಮ ಪ್ರಾಮಾಣಿಕತೆಯನ್ನು, ಪಕ್ಷಪಾತ ಬುದ್ಧಿಯನ್ನು ನಿಷ್ಕ್ರಿಯತೆಯನ್ನು ಮುಚ್ಚಿಟ್ಟುಕೊಳ್ಳಲು ಅನ್ಯರ ವ್ಯಕ್ತಿತ್ವ ಭಂಜನೆ ಮಾಡುತ್ತಾ ವದಂತಿಗಳನ್ನು ಹರಡಲು ಹುನ್ನಾರ ಹೂಡುತ್ತಾರೆ. ಇದು ವ್ಯಕ್ತಿಗಳ ಉದ್ದೇಶ ಪೂರ್ವಕ ವದಂತಿ ವೀರತ್ವವಾಯಿತು. ಇದಲ್ಲದೆ ಹೀಗೆ ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸಿ ಬೇಳೆ ಬೇಯಿಸಿಕೊಳ್ಳುವ ಗುಂಪುಗಳು, ಪಕ್ಷಗಳೂ ಇರುತ್ತದೆ. ಇದು ಚುನಾವಣೆ ಕಾಲದಲ್ಲಿ ಜಾಗೃತವಾಗುತ್ತದೆ. ಕೋಮು ಘರ್ಷಣೆ ಕಾಲದಲ್ಲಿ ಜಾಗೃತಗೊಳ್ಳುವ ಇಂಥ ಗುಂಪುಗಳಿಂದ, ಪಕ್ಷಗಳಿಂದ ಆಗುವ ಅನಾಹುತ ಎಷ್ಟೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಯದೆಯೂ ಸತ್ತರೆಂದು ಹೇಳುವುದು, ಸತ್ತವರ ಸಂಖ್ಯೆಯನ್ನು ಸಮೃದ್ಧಗೊಳಿಸುವುದು, ನಡೆಯದ ಗಲಭೆಯನ್ನು ವದಂತಿಯಲ್ಲಿ ಹುಟ್ಟುಹಾಕುವುದು, ಪರಸ್ಪರ ಮತೀಯ ಬಣ್ಣ ಬಳಿಯುವುದು-ಹೀಗೆ ಅವ್ಯಾಹತವಾಗಿ ನಡೆಯುವ ವದಂತಿ ಪ್ರಚಾರಕ್ಕೆ ನಿರ್ದಿಷ್ಟ ಉದ್ದೇಶವಿರುತ್ತದೆ. ಚುನಾವಣೆಯ ಕಾಲದಲ್ಲಿ ಅಷ್ಟೇ, ಒಬ್ಬರ ಮೇಲೆ ಇನ್ನೊಬ್ಬರು, ಒಂದು ಗುಂಪಿನ ಮೇಲೆ ಇನ್ನೊಂದು ಗುಂಪು ವದಂತಿಗಳನ್ನು ಹುಟ್ಟು ಹಾಕುತ್ತಾ, ಬೇಳೆ ಬೇಯಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಉದ್ದೇಶಪೂರ್ವಕವಾಗಿ ವದಂತಿ ಹುಟ್ಟು ಹಾಕುವವರು-ಹೊಟ್ಟೆಕಿಚ್ಚಿನವರು, ಸ್ವಾರ್ಥ ಲೋಪರು, ಬೆಂದ ಮನೆಯಲ್ಲಿ ಗಳ ಹಿರಿಯುವ ಚಿಲ್ಲರೆ ರಾಜಕೀಯದವರು.
ಮೇಲೆ ಉಲ್ಲೇಖಿಸಿದ ಯಾವ ಉದ್ದೇಶವೂ ಇಲ್ಲದೆ ವದಂತಿ ಹುಟ್ಟು ಹಾಕುವವರು ಹಬ್ಬಿಸುವವರೂ ಇದ್ದಾರೆ. ಅವರು ಇರುವುದಕ್ಕೆ ಒಗ್ಗರಣೆ ಹಾಕಿ ಹೇಳಬಹುದು: ಊಹೆಯಲ್ಲೇ ವದಂತಿ ಹುಟ್ಟಿಸಬಹುದು. ಇಂಥವರಿಗೆ ಯಾವ ದುರುದ್ದೇಶವೂ ಇರುವುದಿಲ್ಲ. ಇಂಥವರು ‘ರತ್ನಗಿರಿ ರಹಸ್ಯ’ ಸಿನಿಮಾ ಕ್ಷೌರಿಕನ ಹೆಂಡತಿಯ ಆಂತರಿಕವಾದ, ಸ್ವಭಾವ ಜನ್ಯವಾದ ಒಂದು ಮನಸ್ಥಿತಿಯಲ್ಲಿ ವದಂತಿಗಳನ್ನು ಹರಡುವ ಒತ್ತಡಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಮನಸ್ಥಿತಿಯನ್ನು ಮೀರಿ ಅದು ಇದೂ ಮಾತನಾಡುತ್ತಾ, ತಮಗೆ ತಾವೇ ವಿಜೃಂಭಿಸುತ್ತ, ಯಾರಿಗೂ ಗೊತ್ತಿಲ್ಲದ ವಿಷಯ ನಮಗೆ ಮಾತ್ರ ಗೊತ್ತಿದೆಯೆಂದು ಬೀಗಿದ ಬೆಲೂನಾಗುತ್ಯ ಸಂಭ್ರಮಿಸುತ್ತಾರೆ. ಗುಂಪಿನ ನಡುವೆ ತಮಗೆ ತಾವೇ, ಸಂಭ್ರಮಿಸಿದ ಸನ್ನಿವೇಶವನ್ನು ಸೃಷ್ಟಿ ಮಾಡಿಕೊಳ್ಳುವ ಇವರಿಗೆ ‘ಐಡೆಂಟಿಟಿ ಕ್ರೈಸಿಸ್’ ಬರುವ ಸಂಭವವಿದೆ. ತಮ್ಮ ಐಡೆಂಟಿಟಿಗಾಗಿ ಹಾತೊರೆಯುವ ಒಳ ಒತ್ತಡದಲ್ಲಿ ಉದ್ದೇಶರಹಿತ ವದಂತಿ ಹಬ್ಬಿಸಿ ವಿಜೃಂಭಿಸುವ ಇಂಥವರ ಮನೋಧರ್ಮವು ಪರಿಣಾಮದಲ್ಲಿ ಕೆಟ್ಟದ್ದಕ್ಕೆ ಕಾರಣವಾಗಬಹುದು. ಆದರೆ ಅವರು ವದಂತಿಗಳನ್ನು ಹುನ್ನಾರದಿಂದ ಹುಟ್ಟು ಹಾಕುವುದಿಲ್ಲ. ಹುಮ್ಮಸ್ಸಿನಿಂದ ಹುಟ್ಟು ಹಾಕುತ್ತಾರೆ; ಹರಡುತ್ತ ಹೋಗುತ್ತಾರೆ.
ಉದ್ದೇಶಪೂರ್ವಕವೊ ಅಲ್ಲವೊ, ಒಟ್ಟಿನಲ್ಲಿ ವದಂತಿಗಳು ಅಪಾಯಕಾರಿ. ವದಂತಿ ಎನ್ನುವುದು ಸತ್ಯ ಶೋಧನೆಗೆ ವಿರುದ್ಧವಾದ ಪಿತೂರಿ. ಇದರಿಂದ ‘ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು’ ಎಂಬ ಮಾತು ಇಂದು ಕ್ಲೀಷೆಯಾಗಿ ಕಂಡರೂ ಪ್ರಸ್ತುತವಾದುದು; ವದಂತಿವೀರರಿಗೆ ಉತ್ತರವಾಗಬಲ್ಲದು.
*****
೯-೧೧-೧೯೯೪