ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’

ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’

ಪ್ರತಿಭಾ ನಂದಕುಮಾರ್ ಮತ್ತೊಮ್ಮೆ ಬಂದಿದ್ದಾರೆ. ‘ನಾವು ಹುಡುಗಿಯರೇ ಹೀಗೆ’ ಎಂದು ದಶಕಗಳ ಹಿಂದೆ ಹೇಳಿದ ಅವರೀಗ ‘ಮುದುಕಿಯರಿಗಿದು ಕಾಲವಲ್ಲ’ ಎನ್ನುತ್ತಿದ್ದಾರೆ. ಇದು ಕವಯತ್ರಿಯೊಬ್ಬರ ಬದುಕಿನ ಪಯಣದಂತೆಯೂ ಅವರ ಕಾವ್ಯದ ಪಯಣದಂತೆಯೂ ಕಾಣುತ್ತಿದೆ. ಸ್ತ್ರೀವಾದ ಹೊಸ್ತಿಲಲ್ಲಿ ಅಂಬೆಗಾಲಿಡುತ್ತಾ ಇರುವಾಗ ಪ್ರತಿಭಾ ತಮ್ಮ ಗದ್ಯದಂತಹಾ ಪದ್ಯಗಳಲ್ಲಿ ಬೆಚ್ಚಿಬೀಳಿಸುವಂತಾ ಪದ್ಯ ಬರೆದವರು. ಇದರರ್‍ಥ ಪದ್ಯ ಎಂದರೆ ಸ್ತ್ರೀವಾದದ ಪ್ರತಿಪಾದನೆ ಎಂದು ಮಾತ್ರವಲ್ಲ. ಪ್ರತಿಭಾ ಎಂಬ ಕವಯಿತ್ರಿಗೆ ಬದುಕಿನ ಪ್ರತಿ ವಿವರವೂ ಕಾವ್ಯಕ್ಕೆ ಆಕರವೇ; ಅದು ಕಾವ್ಯವೇ. ಅವರದೇ ಪದ ಉಪಯೋಗಿಸಿ ಹೇಳುವುದಾದರೆ, ಕಾವ್ಯ ಎನ್ನುವುದು ‘ಅನುದಿನದ ಅಂತರಗಂಗೆ’ಯಲ್ಲಿ ಮೀಯುವ ಸುಖದಂತೆ, ಕವಿತೆ ಬರೆಯುವುದರಲ್ಲಿ ಎತ್ತಿದ ಕೈಯಾದ ಈಕೆ ಮಾತಾಡುವಂತೆ ಪದ್ಯ ಬರೆದುಬಿಡಬಲ್ಲರು. ಈ ಬಗೆಯ ಲೀಲಾಜಾಲ ಕವಿತ್ವವು ಇತರರಲ್ಲಿ ಕವಿತೆ ಹುಟ್ಟಿಸುವ ಪಲಕವನ್ನೇ ಕಳೆದು ಬಿಡುತ್ತದೆ. ಬಳಸಿದ್ದನ್ನೇ ಬಳಸಿ ಹಳತಾದ ದಾರಿಯಲ್ಲಿ ಸಾಗದ ಪ್ರತಿಭಾ ಅವರದು ಯಾವಾಗಲೂ ‘ದಿ ರೋಡ್ ನಾಟ್ ಟೇಕನ್’.

ಪ್ರತಿಭಾ ಅವರ ಕಾವ್ಯ ಪಂಚೇಂದ್ರಿಯಗಳದು. ಈ ಬಗ್ಗೆ ತಕರಾರಿಲ್ಲ. ಆಕೆಗೂ ಈ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ತನ್ನ ಮೈಯೊಡಲನ್ನು ವೀಕ್ಷಿಸಿಕೊಳ್ಳುವ, ಶೋಧಿಸಿಕೊಳ್ಳುವ ಮೂಲಕ ಸ್ತ್ರೀವಾದಿ ಎಂಬ ಅರಿವನ್ನು ಹೇಗೆ ಪಡೆಯಬಹುದೊ ಆ ತಿಳಿವಳಿಕೆ ಹೆಣ್ಣು ದೇಹದ ಮೂಲಕ ಪ್ರತಿಭಾ ಪಡೆದಿದ್ದಾರೆ. ಅದರಾಚೆ, ಹೆಣ್ಣು ದೇಹ ಎನ್ನುವುದು ಲಿಂಗೀಯವಾಗಿ ವೈಯಕ್ತಿಕ ಹಾಗು ಸಾಮಾಜಿಕ ಎಲ್ಲದರಲ್ಲಿ ವಿಶಿಷ್ಟ ಅರ್‍ಥಗಳನ್ನು ಪಡೆದುಕೊಳ್ಳುವಂತೆ ಕಾಣುವಾಗ ಅದನ್ನೇ ಪ್ರಮಾಣವಾಗಿಟ್ಟುಕೊಂಡು ಕಾವ್ಯದಲ್ಲಿ ಶೋಧಿಸಿಕೊಳ್ಳುವುದರಲ್ಲಿ ಅವರು ತೊಡಗುತ್ತಾರೆ. ಈ ಪ್ರಮಾಣವನ್ನು ಗಂಡಸಿನ ಅಧಿಕಾರ ಕೇಂದ್ರವನ್ನು ಎದುರಿಸಲೂ ಬಳಸುತ್ತಾರೆ. ‘ಆಹಾ ಪುರುಷಾಕಾರಂ’ ಕವಿತೆ ಬರೆದಾಗ ಅದರ ಹಿಂದೆ ಇರುವ ವ್ಯಂಗ್ಯವನ್ನು ಗಮನಿಸಬಹುದು. ಗಂಡಿನ ಗಂಡಸುತನವನ್ನು ಕೆಳಗಿಳಿಸಿ, ನಿರಚನೆ ಮಾಡಬಲ್ಲ ಮಾರ್‍ಗವನ್ನು ಅವರು ಅನುಸರಿಸುತ್ತಾರೆ. ಆದರೆ ಅವು ನೆನಪಿರಲಿ, ಶುದ್ಧ ಸ್ತ್ರೀವಾದಿ ಪದ್ಯಗಳಾಗಿ ಖಡ್ಗ ಝಳಪಿಸುವಂತವಲ್ಲ. ಬಜಾರಿತನದ ಧಾಟಿಯೂ ಅವುಗಳಿಗಿಲ್ಲ. ಎಲ್ಲೋ ಒಂದೆಡೆ ಇರುವ ನೋವನ್ನು ಮೀಟುವಾಗ ಅದಕ್ಕೆ ಬೇಕಾದ ಅನುಭವದ ತಳವನ್ನು ಶೋಧಿಸಲು ನಿಲ್ಲುವ ಪರಿ ಅದು ಎನ್ನಬಹುದೇನೊ.

ಪ್ರತಿಭಾ ಅವರ ಹೊಸ ಸಂಕಲನ ‘ಮುದುಕಿಯರಿಗಿದು ಕಾಲವಲ್ಲ’ ಅವರ ಈ ಹಿಂದಿನ ಪದ್ಯಗಳ ಧಾಟಿಯನ್ನು ಕೊಂಚ ಬದಲಾಯಿಸಿಕೊಂಡಿದೆ. ಯಾವೊಂದು ಹೆಣ್ಣು ದೇಹವು ಪುರುಷಾಕಾರವನ್ನು ಎದುರಿಸುವಾಗ ಆಕ್ರಮಣಶೀಲತೆ, ಸಂಘರ್‍ಷ, ತಲ್ಲಣಗಳನ್ನು ಅನುಭವಿಸುತ್ತಿತ್ತೋ ಇದೀಗ ಅದು ತನ್ನ ಯೌವನವನ್ನು ಕಳೆದುಕೊಂಡು ದೇಹಾಕರ್‍ಷಣೆಯಿಲ್ಲದೆ ಗಂಡನ್ನು ಎದುರಿಸಬೇಕಾದ ಸಂಕಟವನ್ನು ಅನುಭವಿಸುತ್ತಿದೆ. ಯೌವನವು ಗಂಡಸಿಗೆ ಯಾವಾಗಲೂ ಗ್ರೇಸ್ ಪಿರಿಯಡ್ ನೀಡುತ್ತದೆಯಾದರೆ ಹೆಣ್ಣಿಗೆ ಅದು ಅವಧಿಗಿಂತಲೂ ಮುಂಚೆ ಮುಗಿದು ಹೋಗುತ್ತದೆ. ಆದುದರಿಂದ ಮುದುಕಿಯರಿಗಿದು ಕಾಲವಲ್ಲ ಪದ್ಯವು ಹೇಳುತ್ತದೆ;

ಪ್ರೀತಿಸಿದ ಪುರುಷನಿಗಿನ್ನೂ ಹರೆಯದ ಹೆಣ್ಣುಗಳ
ಬೇಟ ಕಳ್ಳಪ್ರಣಯದ ಕದನ ಕುತೂಹಲಗಳ ಮುಂದೆ
ಸೋತ ಮುಖದ ಜೋತ ಮೊಲೆಯ ಸುಕ್ಕು ಕೈಗಳ ಅಸಹ್ಯ

ಹಾಗೆಯೇ ‘ತೀರಾ ತಡವಾಯಿತು ನೀನು ಬಂದಿದ್ದು’ ಪದ್ಯದಲ್ಲಿ ಬರುವ ಸಾಲು:

ಬಲಿತ ಕದಳಿ
ನೀನು ಕಲಿವ ಕನ್ಯೆಯಲ್ಲ

ಬಿರುಕುಗಳನ್ನು ಹೊಂದಿದ ಗಂಡು ಹೆಣ್ಣುಗಳ ಸಂಬಂಧವನ್ನು ಮಿಥೀಕರಿಸಿ ಸಂಹಿತೆಗಳನ್ನು ಬರೆದ, ಅರ್‍ಥಕೋಶಗಳನ್ನು ರಚಿಸಿದ ಪರಂಪರೆಯನ್ನು ಛೇದಿಸುವ ಕೆಲಸವನ್ನು ಇನ್ನೂ ಹೊಸತೆಂಬಂತೆ ಇಲ್ಲಿನ ಪದ್ಯದಲ್ಲಿ ಬಿಚ್ಚಿಡುತ್ತಾರೆ ಕವಯಿತ್ರಿ. ಸ್ತ್ರೀಗೆ ಒಬ್ಬನೇ ಗಂಡನಿದ್ದರೆ ಪತಿವ್ರತೆ, ಇಬ್ಬರಿದ್ದರೆ ಕುಲಟೆ, ಮೂವರಿದ್ದರೆ ಧೃಷ್ಟೆ, ನಾಲ್ವರಿದ್ದರೆ ಪುಂಶ್ಚಲೀ.. ..ಅಂತ ಎಂದು ಶುರುವಾಗುವ ಪದ್ಯವು ಕೊನೆಗೆ ಸತಿಯ ಗಂಡ ಎಷ್ಟು ಭಾಗ್ಯಶಾಲಿ ಎನ್ನುವುದನ್ನು ವ್ಯಂಗ್ಯವಾಗಿ ನಿರೂಪಿಸುತ್ತಾ, ‘ಸತಿ ಪತಿವ್ರತೆಯ ಆ ಒಬ್ಬನೇ ಗಂಡನೇ ಮತ್ತೆ ಕುಲಟೆ, ದೃಷ್ಟೆ.. ..ಸಂಗ ಮಾಡುವವನು. ಅವನು ಮುಂದಿನ ಜನ್ಮದಲ್ಲಿ ಮಂತ್ರಿಯಾಗಿ ಹುಟ್ಟುವನು’ ಎಂದು ಕೊನೆಯಾಗುತ್ತದೆ. ಈ ಸಾಲಿನಲ್ಲಿ ವ್ಯಂಗ್ಯವು ರಾಚುವಂತಿದೆ.

ಪ್ರತಿಭಾ ಅವರಲ್ಲಿ ಗಂಡು ಹೆಣ್ಣುಗಳ ಸಂಬಂಧವು ಸೃಷ್ಟಿಸುವ ನಾನು-ನೀನು ಎನ್ನುವ ಸಂಬಂಧವು ಅನೇಕ ಸಂಚಾರಿ ಭಾವಗಳನ್ನು ಹೊಂದಿರುವಂತದ್ದು. ಪ್ರೀತಿಗೆ ಇರುವ ವ್ಯಭಿಚಾರಿ ಭಾವಗಳಂತೆಯೇ ಅದು ಸಂಕೀರ್‍ಣ ಮತ್ತು ವೈರುಧ್ಯಗಳಿಂದ ಕೂಡಿರುವಂತದ್ದು. ದೇಹದಿಂದ ಶುರುವಾದ ಈ ಮುಖಾಮುಖಿಯು ‘ಪ್ರೀತಿ ದೇಹಕ್ಕೋ ಆತ್ಮಕ್ಕೋ?’ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುತ್ತದೆ.

ಈ ಸಂಕಲನದ ಬಹುಮುಖ್ಯ ಕವಿತೆಗಳೆಂದರೆ ಜ್ವಾಲಾಮುಖಿ ಅಮ್ಮನವರು ಎಂಬ ಹೆಸರಿನಡಿಯಲ್ಲಿ ಬರೆದಿರುವ ದೇವಿ ಪದ್ಯಗಳು. ಇವು ಪ್ರತಿಭಾ ಸ್ತ್ರೀ ಅಸ್ತಿತ್ವವನ್ನು ಇನ್ನೊಂದು ಮಜಲಿಗೆ ಒಯ್ದಿರುವುದನ್ನು ತೋರಿಸುತ್ತವೆ. ದೇವಿ ಪದ್ಯವು ಬಣ್ಣಿಸುವಂತೆ ದೇವಿಯು ಸ್ವತಂತ್ರಳು, ಸ್ವಾಯತ್ತ ಸೃಷ್ಟಿಯ ಶಕ್ತಿಯುಳ್ಳವಳು, ಅನೇಕ ವಸ್ತು, ರಸಗಳಿಗೆ ಅವಳು ಅಧಿದೇವತೆ. ಅವಳ ಸ್ವಾಯತ್ತತೆಯು ಹೆಣ್ಣಿನ ಅಸ್ಮಿತೆಯನ್ನು ಇನ್ನೊಂದು ಬಗೆಯಲ್ಲಿ ನಿರೂಪಿಸುತ್ತದೆ. ‘ಶಕ್ತಿದೇವಿಯ ಯೋಗವಿಲ್ಲದಿದ್ದರೆ /ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರು/ ಪ್ರೇತಗಳಂತೆ ನಿಶ್ಚಲರು’ ಎನ್ನುವ ಮೂಲಕ ಸ್ತ್ರೀಶಕ್ತಿಯ ಹಳೆಯ ವ್ಯಾಖ್ಯಾನವನ್ನು ಹೊಸದಾಗಿ ನಿರೂಪಿಸುತ್ತದೆ. ಈ ಹಿಂದೆ ಹೇಳಿದ ಸ್ತ್ರೀ ಅಸ್ತಿತ್ವದ ಅಸ್ಥಿರತೆ ಮತ್ತು ಗಂಡಸಿನ ಅಧಿಕಾರ ಕೇಂದ್ರದ ದುರುಪಯೋಗವು ‘ದೇವಿ’ ಪದ್ಯದಲ್ಲಿ ಮಾಯವಾಗಿದೆ.

ಜ್ವಾಲಾಮುಖಿ ಅಮ್ಮನವರನ್ನು ಕುರಿತ ಪದ್ಯಗಳಲ್ಲಿ ಮಹಾದೇವಿ ಮಹಾಕಾಳಿಯರ ಮಿಥಿಕಗಳನ್ನು ಗಂಡು ಹೆಣ್ಣಿನ ಸಂಬಂಧದ ಹೊಸ ಪಾತಳಿಯಲ್ಲಿರಿಸಲಾಗಿದೆ. ಮಹಾಕಾಳಿಯ ಕಾಮ ಸ್ವರೂಪವೂ ಕೂಡ ಗಂಡಿನ ಕೈಮೇಲಾದ ಕಾಮವಲ್ಲ. ‘ಸಾಕಿನ್ನು ಕದನ ನನಗೆ ಬೇಕು ಮೈಥುನ.. ಅನುರೂಪ ಗಂಡು ಯಾರಿದ್ದಾನೊ ನನ್ನ ತಣಿಸುವವನು’ ಎಂದು ಕೇಳುವ ಕಾಳಿ ತನ್ನ ಸತ್ವಕ್ಕೆ ತಕ್ಕ ಸಂಗಾತಿಯನ್ನು ಬಯಸುತ್ತಿದ್ದಾಳೆ. ಅತಿರತಿಯಲ್ಲಿ ಮುಳುಗಿಸಿಯೂ ಗಂಡಸು ಕಾಳಿಯನ್ನು ನಿರ್‍ದೇಶಿಸಬಲ್ಲ ಸತ್ಯವೂ ಕಾಳಿರೂಪದಲ್ಲಿ ಅಡಗಿದೆ. ಹೀಗೆ ಸ್ತ್ರೀ ಸ್ವರೂಪಗಳನ್ನು ಸಾಮಾಜಿಕ ನುಡಿಗಟ್ಟಿನಲ್ಲಿ ಮಾತ್ರ ಇಡದೇ ಮಿಥಿಕಗಳಲ್ಲಿ ವಿವರಿಸ ಹೊರಡುವುದು ಈ ಸಂಕಲನದ ವಿಶೇಷತೆಯಾಗಿದೆ. ಅಲ್ಲದೆ ಪ್ರತಿಭಾ ಸಾಧಿಸುವ ಪಲ್ಲಟವೂ ಆಗಿದೆ. ಹೀಗೆಂದ ಮಾತ್ರಕ್ಕೆ ಪ್ರತಿಭಾ ತಮ್ಮ ಜಾಡನ್ನೇ ಬದಲಿಸಿದ್ದಾರೆಂದು ಹೇಳಲಾಗದು. ಅವರಲ್ಲಿ ಆಧುನಿಕತೆಯೊಂದಿಗೆ ಮುಖಾಮುಖಿಯಾಗುವ ಕಾತುರ ಇದ್ದೇ ಇದೆ. ಅದನ್ನು ಅವರು ‘ದಿಕ್ಕು’ ವಿನಂತಹ ಕವಿತೆಗಳಲ್ಲಿ ತೋರಬಲ್ಲರು. ಇನ್ನೂ ಮೊಗೆಮೊಗೆದು ಕೊಡುವ ಹಳೆಯ ಕಾವ್ಯದ ಬನಿ ಹಿತವೆನಿಸುವುದಾದರೂ ಪ್ರತಿಭಾ ಇನ್ನೇನಾದರೂ ಹೊಸದನ್ನು ಬರೆದಾರೆಯೇ ಎಂದು ಹುಡುಕಾಡುವುದೇ ಆಸಕ್ತಿಯ ವಿಷಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಶ್ವಾರೋಹಿ
Next post ಆಪ್ತ ಜೀವಕ್ಕೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…