ಎಳೆಯನಿರೆ ಕೇರಿಕೇರಿಗಳಲ್ಲಿ ತಿರುಗಾಟ-
ವಾಡುತ್ತ ಗುರಿಯಿಲ್ಲದಲೆಯುತಿರೆ ನಾ ಮೋಹಿ-
ಸಿದೆ ಮೇಲೆ ನೋಡುತ್ತ, ಓರ್‍ವನಶ್ವಾರೋಹಿ
ವವನಮಾರ್‍ಗದಿ ಚಲಿಸುತ್ತಿದ್ದ. ಇದು ಕಣ್ಮಾಟ-
ವಲ್ಲೆಂದು ನೂರು ಸಲ ಪರಿಕಿಸುವ ಹಿನ್ನೋಟ
ತಾನೆ ನಿರ್‍ಧರಿಸಿತ್ತು. ಗೆಳೆಯರೆಂದರು – ‘ಕಾಹಿ-
ಲೆಯ ಕುರುಹು, ಛೇ ! ಹೋಗು !’ ಎಂದು. ನಾನಿದನರುಹಿ
ನಿಲ್ಲುತಿರೆ. ಹಿರಿಯರೆಂದರು ‘ಬರಿಯ ಹುಡುಗಾಟ’.
‘ಹಗಲಿರುಳು ಕಣ್ಮನವ ಸೆಳೆವಂಥ ಪರಮ ಪಾ-
ವನ ದೃಶ್ಯ ಜೀವನಕೆ ಬಂದುದಾದರೆ ಕರುಣಿ-
ಸೆಮಗಾ ಪ್ರತೀತಿಯನು’ ಎಂದು ನೇಹಿಗರುಸಿರು-
ತಿರಲಿಂದು ಪಡಿನುಡಿವೆ ಕುಂದದಲೆ ದೇವಯಾ-
ನದಿ ನಡೆದ ರಾವುತನ ಠೀವಿ, ನಿಲುವಿಕೆ, ಸರಣಿ.
ಅಂತಿರಲು ಚಿನ್ನ ವಾಗುವುದು ಬಾಳ್ವೆಯ ಕಸಿರು !
*****