– ಪಲ್ಲವಿ –
ಬಾ, ತರಣಿಯ ತುಂಬಿದ ಹೊಂಬೆಳಕೇ,
ಈ ತಮವನು ತೊಳೆಯಲು ನೆಲಕೆ!
೧
‘ಕಾರಿರುಳನು ಬಿಡಿ, ಬೆಳಕಿಗೆ ಕಾಲಿಡಿ!
ಸಾರುತಿದೆಯಿಂತು ದೈವದ ತಿಳಿನುಡಿ;
ಆರಯ್ಯುವುದಿಳೆ ನಿನ್ನ ಬರವಿನಡಿ,
ತೂರುತ ಕಿರಣವ ಕೆಲಕೆಲಕೆ….
ಬಾ, ತರಣಿಯ ತುಂಬಿದ ಹೊಂಬೆಳಕೆ !
೨
ಹೊರಗೊಳಗು ಕಳ್ತಲೆಯೆ ತುಂಬಿಹುದೋ!
ಕಿರುಸೊಡರ ಮಿಣುಕುಮನೆಯೆಂತಹದೋ !
ಉರಿ-ಪಂಜುಗಳನೆಂತು ನಂಬುವುದೋ!
ನೀ ಬೇಕೆಂಬುದ ಎಲ್ಲರ ಬಯಕೆ….
ಬಾ, ತರಣಿಯ ತುಂಬಿದ ಹೊಂಬೆಳಕೇ !
೩
ಹೊರಟಿಡೆ ಎಲ್ಲುಳಿಯಿತೊ, ಕಾಣದಿದೆ !
ತೆರಳ್ವೆಡೆಯೆಲ್ಲಿದೆಯೋ ಮರೆಯಲಿದೆ !
ನೆರೆ-ಹೊರೆಗಳ ನೆಲೆಯೂ ತಿಳಿಯದಿದೆ !
ತಿರುಗುತಲಿಹೆ ಏನನೊ ಹುಡುಕಲಿಕೆ….
ಬಾ, ತರಣಿಯ ತುಂಬಿದ ಹೊಂಬೆಳಕೇ!
*****