ರಮೇಶ ಮಧ್ಯ ವಯಸ್ಕರನಾಗಿದ್ದರೂ ಸುಂದರವಾಗಿದ್ದ. ತಾನೇ ನೋಡಿ ಮೆಚ್ಚಿ ಸುಮತಿಯನ್ನು ಮದುವೆಯಾಗಿದ್ದ. ಆತನು ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ.
ತಿಂಗಳುಗಳು ಉರುಳಿದಂತೆ ರಮೇಶನ ಮುಖ ಬಿದಗೆಯ ಚಂದ್ರನಂತೆ ಕಳೆಗುಂದುತ್ತಾ ಬಂದಿತು. ಮುಖದಲ್ಲಿ ನಗುವಿರಲಿಲ್ಲ. ಸದಾ ಯೋಚನೆಯಲ್ಲಿ ಮುಳುಗಿರುತ್ತಿದ್ದ. ಅವನ ಮನದಲ್ಲಿ ಏನೋ ಕಾಡುತ್ತಿತ್ತು. ಅವನಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಹೆಂಡತಿಯನ್ನು ತವರಿಗೆ ಕಳಿಸಿ ಬಿಡಲೇ ಎಂದು.
ಒಂದು ದಿನ ರಮೇಶ ಹೆಂಡತಿಯನ್ನು ಕರೆದು ನೀನು ನಿನ್ನ ತವರು ಮನೆಗೆ ಹೋಗು ಎಂದ. ಅದಕ್ಕೆ ಅವಳು ತಲೆ ಕೆಡಿಸಿಕೊಳ್ಳಲಿಲ್ಲ. ಇವರು ಇಷ್ಟೇ ಎಂದು ಭಾವಿಸಿದಳು.
ಆಕೆ ತನ್ನ ಗಂಡನ ಜೊತೆ ಮಲಗದೇ ಎಷ್ಟೋ ತಿಂಗಳುಗಳಾಗಿದ್ದವು. ಇದರಿಂದ ಬಹಳ ಬೇಸತ್ತಿದ್ದ. ಮದುವೆಯಾದರೂ ಒಂಟಿತನ ಅವನನ್ನು ಬಾಧಿಸುತ್ತಿತ್ತು. ತನ್ನ ಜೊತೆಗೆ ಮಲಗೆಂದು ಧೈನ್ಯತೆಯಿಂದ ಸದಾ ಹೇಳುತ್ತಿದ್ದ. ಆದರೂ ಸುಮತಿಯು ತನ್ನ ನಾದಿನಿಯೊಂದಿಗೆ ಅಥವಾ ತನ್ನ ಅತ್ತೆಯ ಜೊತೆಯಲ್ಲೇ ಮಲಗುತ್ತಿದ್ದಳು. ಆಕೆಗೆ ತನ್ನ ಗಂಡನಿಗಿಂತಲೂ ಅವರೇ ಹೆಚ್ಚಾಗಿದ್ದರು.
ಎಷ್ಟಾದರೂ ಉಪ್ಪು, ಕಾರ, ಹುಳಿ ತಿಂದ ದೇಹ. ಹೆಣ್ಣಿನ ಸುಖಕ್ಕಾಗಿ ಹಾತೊರೆಯುತ್ತಿತ್ತು. ಹೇಗಾದರೂ ಮಾಡಿ ಹೆಂಡತಿಯ ದೈಹಿಕ ಸುಖ ಪಡೆಯಲು ಪ್ರತಿದಿನವೂ ರಮೇಶ ತನ್ನ ಹೆಂಡತಿಯನ್ನು ಪೀಡಿಸತೊಡಗಿದ. ಅದು ಫಲಕಾರಿಯಾಗಲಿಲ್ಲ. ಅವನಲ್ಲಿ ಮಂಕು ಕವಿಯಿತು. ಪ್ರೀತಿ ಹಳಸಿತು. ಅವರ ನಡುವೆ ಬಿರುಕು ಮೂಡಿತು. ಆತ ತಾಳ್ಮೆ ಮೀರಿದ.
ಮದುವೆಯಾದ ಗಂಡು ದೈಹಿಕ ಸುಖಕ್ಕಾಗಿ ಹಂಬಲಿಸುತ್ತಿರುವುದು ಸಹಜ. ಹೆಂಡತಿ ಇನ್ನೂ ಎಷ್ಟು ದಿನ ಅಂತ ಒಂಟಿಯಾಗಿ ಕಳೆಯುತ್ತಾನೆ. ಅವನ ದೃಷ್ಟಿ ಬೇರೆ ಕಡೆ ತಿರುಗಿತು.
ಅಷ್ಟೊಂದು ಸುಂದರಿಯಲ್ಲದಿದ್ದರೂ ತನ್ನ ಅಂಗಾಂಗಗಳಿಂದ ಯಾರನ್ನಾದರೂ ಆಕರ್‍ಷಿಸುತ್ತಿದ್ದ ಪಕ್ಕದ ರಸ್ತೆಯಲ್ಲಿದ್ದ ಶೀಲಳೊಂದಿಗೆ ಸಂಪರ್‍ಕ ಬೆಳೆಸಿದ, ಆಕೆಯನ್ನು ಇವನು ಒಮ್ಮೆ ನೋಡಿದಾಗ ಅವಳು ಮುಗುಳು ನಕ್ಕಿದ್ದಳು. ಆಗಾಗ್ಗೆ ಇಬ್ಬರೂ ಭೇಟಿಯಾಗತೊಡಗಿದರು. ಇದರಿಂದ ಅವನಿಗೆ ಮರುಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಯಿತು. ಆಕೆಯ ಪ್ರೀತಿ ಮಾತಿಗೆ ಸೋತ ಮರುಳಾದ, ಮನೆಯಲ್ಲಿ ಸಿಗದ ಪ್ರೀತಿ, ಇವಳಿಂದ ಸಿಗತೊಡಗಿತು. ಆಕೆಯ ತೋಳೆಕ್ಕೆಯಲ್ಲಿ ಬಂಧಿತನಾದ. ಅವನಿಗೆ ಎಲ್ಲಿಲ್ಲದ ಆನಂದದ ಸುಖ ದೊರೆಯತೊಡಗಿತು. ಅವರ ಪ್ರಣಯ ಬೆಳೆದು ಹೆಮ್ಮರವಾಯಿತು. ಅವನು ರಾತ್ರಿಯೆಲ್ಲಾ ಶೀಲಳ ಮನೆಯಲ್ಲೇ ಇರತೊಡಗಿದ.
ಹಬ್ಬಕ್ಕೆ ತನ್ನ ಮಗಳನ್ನು ಕರೆಯಲು ಶಂಕರಪ್ಪ ಬಂದಿದ್ದ. ತನ್ನ ಅಳಿಯ ಮನೆಯಲ್ಲಿಲ್ಲದ್ದನ್ನು, ರಾತ್ರಿಯಲ್ಲಾ ಬಾರದಿದ್ದನ್ನು ಕಂಡು ಮೌನನಾದ. ಮಗಳಿಂದ ವಿಷಯ ತಿಳಿದು ಶೀಲಳ ಮನೆಗೆ ಹೋಗಿ ನೋಡಿದಾಗ ಅವರಿಬ್ಬರೂ ಆಲಿಂಗಿಸಿಕೊಂಡು ಅರೆಬೆತ್ತಲೆಯಾಗಿರುವುದನ್ನು ಕಂಡು ಮಾವ ವಾಪಾಸ್ಸು ಮನೆಗೆ ಮರಳಿದ. ಬೇರೆ ಹೆಣ್ಣನ್ನು ತಲೆ ಎತ್ತಿಯೂ ನೋಡದಂತಹ ತನ್ನ ಅಳಿಯ ಬೇರೆ ಹೆಣ್ಣಿನೊಂದಿಗೆ ಸಂಬಂಧವಿರಿಸಿಕೊಂಡಿದ್ದಾನೆಂದರೆ ಇದಕ್ಕೆಲ್ಲಾ ನನ್ನ ಮಗಳೇ ಕಾರಣ. ನನ್ನ ಮಗಳಿಂದ ಇವನಿಗೆ ಸುಖ ಸಿಗುತ್ತಿಲ್ಲ ಎಂದು ಊಹಿಸಿದ.
ತನ್ನ ಮಗಳನ್ನು ಕರೆದು “ನೋಡಮ್ಮಾ ಎಂತಹ ಕಷ್ಟ ಬಂದರೂ ರಾತ್ರಿ ಮಾತ್ರ ಗಂಡನ ಹಾಸಿಗೆಯಿಂದ ಬೇರೆ ಆಗಬೇಡ. ಒಂದು ವೇಳೆ ಆತನೇ ಒದ್ದು ಬೇರೆ ಮಲಗೆಂದರೂ ನೀನು ಆತನಿಗೆ ಪ್ರೀತಿ ಸಿಂಚನ ನೀಡಿ ಆತನ ಪಕ್ಕದಲ್ಲಿಯೇ ಮಲಗಬೇಕಮ್ಮಾ, ಆ ಹಾಸಿಗೆಯಲ್ಲಿ ನಿನ್ನ ಹೊರತು ಬೇರೆಯವರು ಮಲಗಕೂಡದು, ಗಂಡನ ಹಾಸಿಗೆಯನ್ನು ಬೇರೆಯವರು ಹಂಚಿಕೊಳ್ಳುವುದಕ್ಕಿಂತ ಮುಂಚೆಯೇ ನೀನು ಎಚ್ಚೆತ್ತುಕೊಳ್ಳಬೇಕು. ದಿನವೆಲ್ಲಾ ಮನೆಗೆಲಸ ಮಾಡು. ಅತ್ತೆ ಜೊತೆಯಲ್ಲಿಯೇ ಇರು. ಆದರೆ ರಾತ್ರಿ ಮಾತ್ರ ಗಂಡನ ಪಕ್ಕದಲ್ಲಿಯೇ ಮಲಗುವುದನ್ನು ಮಾತ್ರ ಎಂದೂ ಮರೆಯದಿರು. ನಿನ್ನ ಗಂಡನ ಸುಖವೇ ನಿನಗೆ ಮುಖ್ಯ ಕಣಮ್ಮಾ ಇದರಲ್ಲಿ ನಿನ್ನ ಶ್ರೇಯಸ್ಸಿದೆ. ನಿನ್ನ ಗಂಡನ ಶ್ರೇಯಸ್ಸು ಅಡಗಿದೆ. ಮನೆತನದ ಗೌರವವೂ ಇದೆ, ಹೆಂಡತಿಗೆ ಗಂಡನ ಆಶ್ರಯವೇ ಮುಖ್ಯ. ಗಂಡ ಹಗಲೆಲ್ಲ ಹೊರಗಡೆ ಕೆಲಸ ಮಾಡಿ ಮನೆಗೆ ಬಂದಾಗ ಹೆಂಡತಿಯ ಮುಖ ನೋಡಿ ಪ್ರಸನ್ನನಾಗುತ್ತಾನೆ. ಮನೆಯಲ್ಲಿ ದಿನವೆಲ್ಲಾ ದುಡಿದ ಹೆಂಡತಿಗೆ ಗಂಡನ ಆಶ್ರಯ, ಪಿಸುಮಾತು, ನಾಲ್ಕು ಮೆಚ್ಚಿಗೆ ಮಾತು ಸಿಗುವುದು ರಾತ್ರಿಯೇ ಹೊರತು ಬೇರೆ ಹೊತ್ತಿನಲ್ಲಿ ಅಲ್ಲ. ರಾತ್ರಿಗಾಗಿ ಗಂಡ ಹೆಂಡತಿಯರು ಹಾತೊರೆಯುತ್ತಾರೆ, ಹಂಬಲಿಸುತ್ತಾರೆ. ಅಂತಾದ್ದರಲ್ಲಿ ಇಂತಹ ದೇವರಂತಹ ಗಂಡನ ಜೊತೆ ಹಾಸಿಗೆ ಹಂಚಿಕೊಳ್ಳುವುದನ್ನು ಬಿಟ್ಟು ಅತ್ತೆಯ ಜೊತೆಗೋ ಇಲ್ಲಾ ನಾದಿನಿ ಜೊತೆಗೋ ಮಲಗಿರುವಂತಹ ನಿನ್ನನ್ನು ಕಂಡು ನನಗೆ ಬೇಸರವಾಗಿದೆ” ಎಂದು ಮಗಳಿಗೆ ಧಿಕ್ಕಾರ ಹೇಳಿದ.
ಆದರೂ ಮಗಳಿಗೆ ಬುದ್ದಿ ಬರಲಿಲ್ಲ. ತನ್ನ ಹಟವನ್ನು ಮುಂದುವರೆಸಿದಳು. ರಮೇಶ ಮನೆಗೆ ಬರುವುದು ಎಂದೋ ನಿಂತುಹೋಗಿತ್ತು. ತಾಯಿಗೂ, ನಾದಿನಿಗೂ ಇಷ್ಟೇ ಸಾಕಾಗಿತ್ತು. ಹೆಂಡತಿಗಂತೂ ಮೊದಲೇ ತಿಳುವಳಿಕೆ ಇರಲಿಲ್ಲ. ಈಗ ಬರಲೇ ಇಲ್ಲ. ಮಗ ಮನೆಗೆ ಬಾರದಿದ್ದನ್ನು ಕಂಡು ಅವರೂ ಕೂಡ ಹೋಗು ನಿನ್ನ ಗಂಡನ ಜೊತೆಯಲ್ಲಿಯೇ ಮಲಗು ಎಂದು ಒಮ್ಮೆಯೂ ಹೇಳಲಿಲ್ಲ.
ಇತ್ತ “ಎಷ್ಟು ಅಂತ ನೀವು ನನ್ನ ಮನೆಯಲ್ಲಿ ಇರುತ್ತೀರಿ. ನಾನು ನಿಮ್ಮ ಸ್ವತ್ತು. ನಿಮ್ಮ ಮನೆಯಲ್ಲೇ ಇರಬೇಕಾದವಳು. ನೀವು ನನ್ನನ್ನು ಮದುವೆಯಾಗಿ” ಎಂದು ರಮೇಶನನ್ನು ಪೀಡಿಸತೊಡಗಿದಳು. ಒಂದು ದಿನ ಯೋಚಿಸಿ “ಆಯ್ತು” ಎಂದು ಈ ವಿಚಾರದಲ್ಲಿ ತಡ ಮಾಡದೇ ಹೆಂಡತಿಗೆ, ತನ್ನ ತಾಯಿಗೆ ಯಾವ ವಿಷಯವನ್ನೂ ತಿಳಿಸದೇ ದೇವಸ್ಥಾನಕ್ಕೆ ಹೋಗಿ ಶೀಲಳ ಕೊರಳಿಗೆ ತಾಳಿ ಬಿಗಿದ. ಆಕೆಯನ್ನು ಅರ್‍ಧಾಂಗಿಯಾಗಿ ಸ್ವೀಕರಿಸಿದ. ರಮೇಶ ಆಕೆಯನ್ನು ನೇರವಾಗಿ ತನ್ನ ಮನೆಗೆ ಕರೆದುಕೊಂಡು ಬಂದ.
ಶೀಲಾ ಮೊದಲು ಬಲಗಾಲನ್ನು ಒಳಗಿಟ್ಟು ಬಂದಳು. ಅವಳ ಹಿಂದೆಯೇ ಬಂದ ರಮೇಶ ತನ್ನ ತಾಯಿಗೆ “ಅಮ್ಮಾ ಈಕೆ ಶೀಲ ಅಂತ. ಇವಳು ನಿನ್ನ ಸೊಸೆ” ಎಂದು ಪರಿಚಯಿಸಿದ.
ಕಾಲ ಮಿಂಚಿ ಹೋಗಿತ್ತು. ನನ್ನ ಗಂಡನಿಗೆ ಇಷ್ಟೊಂದು ಧೈರ್‍ಯ ಬಂದಿತ ಎಂದು ಯೋಚಿಸಿದಳೆ ವಿನಃ ತನ್ನ ತಪ್ಪಿನ ಅರಿವು ಸುಮತಿಗೆ ಆಗಲೇ ಇಲ್ಲ. ಪತಿಯೇ ದೈವ ಎಂಬುದನ್ನು ಮರೆತು ಸ್ವಾರ್‍ಥ ಅತ್ತೆಯೇ ಸರ್‍ವಸ್ವ ಎಂದು ಭಾವಿಸಿದ್ದಳು. ಆಗಲೇ ಅತ್ತೆ ಅವಳ ಮೇಲೆ ಮಾತಿನ ಪ್ರಹಾರ ಶುರು ಮಾಡಿದ್ದಳು.
“ನನ್ನ ಮಗ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾನೆ. ನಿನ್ನಿಂದ ಏನು ಪ್ರಯೋಜನ? ನೀನು ಈ ಮನೆ ಬಿಟ್ಟು ಹೋಗು. ನನ್ನ ಮಗನಿಗೆ ಸುಖ ನೀಡದಂತಹ ಹೆಣ್ಣು ಇದ್ದರೇನು? ಬಿಟ್ಟರೇನು? ನಡಿ, ನಡಿ, ನಿನ್ನ ತವರುಮನೆಗೆ” ಎಂದು ದಿನವೂ ಅತ್ತೆ ಸೊಸೆಯನ್ನು ಮಾತಿನಿಂದ ತಿವಿಯ ತೊಡಗಿದಳು. ಇತ್ತಿತ್ತ ನಾದಿನಿಯು ಚುಚ್ಚು ಮಾತನ್ನು ಆರಂಭಿಸಿದಳು.
ಈಗ ಸುಮತಿಗೆ ಅತ್ತೆಯೊಂದಿಗೆ ಸ್ಥಾನ ಇಲ್ಲದಂತಾಯಿತು. ಗಂಡನ ಜೊತೆಗಿನ ಸಂಬಂಧವನ್ನು ಮೊದಲೇ ಕಳೆದುಕೊಂಡಿದ್ದಳು. ಆಕೆಯ ಅಪ್ಪ ಬಂದಿದ್ದಾಗ “ನೋಡಮ್ಮ ಕಷ್ಟಾನೋ ಸುಖಾನೋ ನಿನ್ನ ಗಂಡನ ಆರೋಗ್ಯ ಮುಖ್ಯ ಆತನ ಸುಖ ಮುಖ್ಯ. ಇವರಾರಿಂದಲೂ ನಿನಗೆ ಮಾನ್ಯತೆಯಾಗಲೀ, ಸುಖವಾಗಲೀ ಸಿಗುವುದಿಲ್ಲ. ಎಷ್ಟೇ ಆದರೂ ನಿನಗೆ ನಿನ್ನ ಗಂಡನೇ ಮುಖ್ಯ ಆತನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಉಳಿದವರ ಬಗ್ಗೆಯೂ ಇರಬೇಕು. ಅದು ಹಗಲು ಮಾತ್ರ ರಾತ್ರಿಯಾದೊಡನೆ ಗಂಡನಿಗೆ ಸುಖ ನೀಡುವುದು ನಿನ್ನ ಕರ್‍ತವ್ಯ. ಆತ ನಿನ್ನೊಂದಿಗೆ ನಾಲ್ಕು ಮಾತನಾಡಿದರೆ ಅದೇ ನಿನ್ನ ಭಾಗ್ಯ ಅದೇ ಸ್ವರ್‍ಗ ಕಣಮ್ಮ, ಗಂಡನಿಲ್ಲದ ಹೆಣ್ಣಿಗೆ ಸಮಾಜದಲ್ಲಿ ಸ್ಥಾನವಿಲ್ಲಮ್ಮ. ಗಂಡನಿಲ್ಲದ ಹೆಣ್ಣಿನ ಬದುಕು ನಾಯಿ ಬದುಕು ಕಣಮ್ಮ, ಅಂತಹ ಹೆಣ್ಣಿಗೆ ತವರಿನಲ್ಲಿ ಸ್ಥಾನ ದಕ್ಕದು. ಸರಿಯಾಗಿ ಯೋಚಿಸು” ಎಂದು ತಂದೆ ಹೇಳಿದ್ದು ಆಕೆಯ ಮನದಲ್ಲಿ ಒಂದೊಂದಾಗಿ ಪ್ರತಿಧ್ವನಿಸತೊಡಗಿದವು.
ದಾಂಪತ್ಯ ಜೀವನದಲ್ಲಿ ದೈಹಿಕ ಸುಖವೂ ಒಂದು ಭಾಗ ಎಂದು ಆಕೆ ತಿಳಿಯಲಿಲ್ಲ. ಮದುವೆ ಅಂದರೆ ಆತ ಗಂಡ, ನಾನು ಹೆಂಡತಿ ಅಷ್ಟೆ ಎಂದು ಸುಮತಿ ಭಾವಿಸಿದ್ದಳು.
ಆದರೇನು ಮಾಡುವುದು, ಈಗ ಆಕೆ ಬಂದ ಮೇಲೆ ಸುಮತಿ ಅತಂತ್ರಳಾಗಿದ್ದಳು. ಶೀಲಳು ಆಕೆಯನ್ನು ಒದ್ದು ಹೊರ ಹಾಕಿದಳು. ಅತ್ತ ತವರೂ ಇಲ್ಲ, ಇತ್ತ ಗಂಡನ ಮನೆಯೂ ಇಲ್ಲ. ಮಕ್ಕಳಂತೂ ಮೊದಲೇ ಇಲ್ಲ.
*****