ಆನಂದ ಋಗ್ವೇದಿ ಹೊಸ ತಲೆಮಾರಿನ ತೀವ್ರ ತುಡಿತದ ಕವಿ ಸಂವೇದನೆಯ ಕಥೆಗಾರ. ಅವರ ಮಗದೊಮ್ಮೆ ಬುದ್ಧ ನಕ್ಕ ಕಥಾಸಂಕಲನದ ಒಂದು ಕಥೆ ಎದೆಯ ಬಾವ್ಯಾಗೀನ ಬೊಗಸೆ ನೀರು ಜಾತಿಯತೆಯ ಕರಾಳ ಸಿಕ್ಕುಗಳಿಗೆ ಕುಮಾರಿಯೊಬ್ಬಳ ಕನ್ಯತ್ವ ಹರಣ, ಅತ್ಯಾಚಾರಕ್ಕೆ ಬಲಿಯಾಗಿಯೂ ಮಾನಸಿಕ ಸ್ಥೈರ್‍ಯ ಕಳೆದುಕೊಳ್ಳದ ಆಕೆ ಮುಂದೆ ಅದೇ ಹಳ್ಳಿಯ ಶಾಲಾ ಶಿಕ್ಷಕಿಯಾಗಿ ಊರಿನ ನೈತಿಕಬಿಂಬವಾಗಿ ಕಂಗೊಳಿಸುವುದು ಕಥೆಯ ಮೂಲಕಟ್ಟು. ಇಂದಿನ ಕಾಲಕ್ಕೆ ಇಂತಹ ಸಕಾರಾತ್ಮಕ ಆಶಾವಾದವನ್ನು ವ್ಯಕ್ತಗೊಳಿಸಬಲ್ಲ ಗಟ್ಟಿ ಸಾಹಿತ್ಯದ ಜರೂರತ್ತಿದೆ.
ಇಲ್ಲಿ ಬರುವ ಅಂಬಕ್ಕ ಎಂಬ ಹುಡುಗಿಯ ಬಾಳು ತನ್ನ ಸಮಾಜಮುಖಿ ವ್ಯಕ್ತಿತ್ವದಿಂದ ದೂಷಣೆಗೆ ಒಳಗಾಗುತ್ತದೆ. ಬೇಸಿಗೆಯ ಝಳಕ್ಕೆ ಕೆಳಗೇರಿಯ ಬಾವಿಯ ನೀರು ಬತ್ತಿಹೋದದ್ದು, ಬೇರೆ ಉಪಾಯಗಾಣದ ಕೆಳವರ್‍ಗದ ಜನ ಮೇಲ್ಜಾತಿಯ ಅರಳಿಕಟ್ಟೆಯ ಬಾವಿಯ ನೀರನ್ನು ರಾತ್ರೋರಾತ್ರಿ ಸೇದುಕೊಂಡಿದ್ದು, ಅವರ ಮುಟ್ಟುವಿಕೆಯಿಂದ ಮೈಲಿಗೆಯಾಯಿತೆಂಬ ಸನಾತನಿಗಳ ಪುಕಾರು. ಮೈಲಿಗೆ ಕಳೆಯಲು ಪಂಚಗವ್ಯ ಸಿಂಪಡಿಸುವುದು, ಜೀವಜಲಕ್ಕಿಂತ ಪಂಚಗವ್ಯ ಶ್ರೇಷ್ಟವಾದೀತೇ? ಎಂಬ ಪ್ರಶ್ನೆ ಮೂಡಿಸುತ್ತದೆ. ಅಲ್ಲದೇ ಮನುಷ್ಯತ್ವಕ್ಕಿಂತ ಮಡಿ ಮೈಲಿಗೆಯ ಭೂತ ಮೆಟ್ಟಿಕೊಂಡ ಧರ್‍ಮ ದಂಡನಾಯಕರ ಅನಾಚರಣೆಗೆ ಕನ್ನಡಿ ಹಿಡಿಯುತ್ತದೆ ಕಥೆ.
ಕುಡಿಯಲು ನೀರಿಲ್ಲದೇ ಒದ್ದಾಡುತ್ತಿದ್ದ ಕೆಳಜಾತಿಯ ಜನರಿಗೆ ಅಂಬಕ್ಕ ತನ್ನಜ್ಜ ಕಟ್ಟಿಸಿದ ಬಾವಿಯಿಂದ ನೀರು ಸೇದಿಕೊಡುತ್ತಾಳೆ. ಇದನ್ನು ಸಹಿಸದೇ ಮೇಲ್ಜಾತಿಯ ಜನ ಕರೆದ ಕೇರಿಯ ಪಂಚಾಯತಿ ಕಟ್ಟೆಯಲ್ಲಿ ಅಂಬಕ್ಕ ತನ್ನ ವಾದವನ್ನು ಸಮರ್‍ಥಿಸಿಕೊಳ್ಳುತ್ತಾಳೆ. ಆಗಲೇ ಮೇಲಿನ ಕೇರಿಯ ಬ್ರಾಹ್ಮಣ ಹುಡುಗರ ಧೂರ್‍ತರೂಪ ಪ್ರಕಟಗೊಳ್ಳುತ್ತದೆ. ಹೌದೌದು.. ಆಕಿಗೆ ಮಠದ ಮಾತು, ಗುಡೀ ಪಂಚಾಯ್ತಿ ಅಪ್ಪಣೆ ಅಂದ್ರೇ ಉದಾಸೀನ ಏನು ಧಿಮಾಕದಾ ನೋಡು ಆಕಿಗೆ, ಏನು ಮಾನವೀಯತೆ, ಅಂತಃಕರಣ, ಎಲ್ಲಾ ಈಕೀನ ಗುತ್ತಿಗೆ ತಗೊಂಡಾಳೇನು? ಹೂನಪ್ಪ.. ಆ ಪೋರಿಗೆ ನೀರು ಅಂದ್ರ ನನ್ನದಾ ಅಂತ ಗರ್‍ವ ಬಂದದ. ಏನು ಆಕಿ ಹತ್ರ ಮಾತ್ರ ನೀರು ತುಂಬ್ಯದೇನು? ನಮ್ಮ ತುಂಬಿದ ನೀರು ಆಕೀಗಿಷ್ಟು ಕೊಟ್ಟರ ಪೊಗರು ಇಳಿತದ.. ಏನಂತೀ? ಎನ್ನುವ ಈ ಪಡ್ಡೆ ಹುಡುಗರು ದೇವರು, ಧರ್‍ಮ, ಪುರಾಣ ಶ್ರವಣ, ಸಂಧ್ಯಾವಂದನೆ ಶಾಸ್ತ್ರ ಸಂಗತರಾದವರು ಹತ್ತು ಹಲವು ನೀತಿ ಮಾರ್‍ಗಗಳ ಕಲಿತರೂ ತಮ್ಮ ದುರಾಚಾರಗಳಿಂದ ಕೆಳಜಾತಿಗಿಂತ ಅಸಹ್ಯವಾಗುತ್ತಾರೆ. ಹುಟ್ಟಿನಿಂದ ಜಾತಿಯಲ್ಲ. ಆಚಾರದಿಂದ ಜಾತಿ ಎಂಬುದನ್ನು ಋಗ್ವೇದಿ ಬಯಲು ಮಾಡುತ್ತಾರೆ. ಅಸಹಾಯಕರಿಗೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಅಂಬಕ್ಕ ತನ್ನದೇ ಮೇಲ್ಜಾತಿಯ ಆದರೆ ಹೊಲೆಯ ಮನಸ್ಥಿತಿಯ ಸನಾತನಿಗಳಿಂದ ಅತ್ಯಾಚಾರಕ್ಕೆ ಬಲಿಯಾಗುತ್ತಾಳೆ. ಆದರೆ ಅತ್ಯಾಚಾರಕ್ಕೆ ಇಡಾದರೂ ಬದುಕಿಗೆ ವಿಮುಖಳಾಗುವುದಿಲ್ಲ. ಕಥೆಗಾರ ಒಂದೇ ಕಥಾ ಹಂದರದಲ್ಲಿ ಸತ್ವಯುತವಾಗಿ ಎರಡು ಸಾಮಾಜಿಕ ಸಮಸ್ಯೆಗಳನ್ನು ಸಮರ್‍ಥವಾಗಿ ಕಟ್ಟಿಕೊಟ್ಟಿದ್ದಾರೆ. ಸ್ತ್ರಿ ಬದುಕಿಗೆ ಸಾರ್‍ವತ್ರಿಕವಾಗಬೇಕಾದ ಮೌಲ್ಯಗಳನ್ನು ಪ್ರಜ್ಞೆಯನ್ನು ಪ್ರಕಟಪಡಿಸುತ್ತಾರೆ.
ನಮ್ಮ ಸುತ್ತಮುತ್ತಲೂ ಇಂತಹುದೇ ಸಂಪ್ರದಾಯಸ್ಥ, ಮೂಲಭೂತವಾದಿ ಸಾಮಾಜಿಕ ವಿಕ್ಷಿಪ್ತ ಮನಸ್ಸುಗಳ ಕಾರುಬಾರು ಇಂದಿಗೂ ನಿಂತಿಲ್ಲ. ಜಾತಿನೀತಿ ಧರ್‍ಮಕರ್‍ಮಗಳ ದೊಂಬರಾಟಗಳು ಸಮಕಾಲೀನ ಸಮಸ್ಯೆಗಳು ಹೌದು. ಶೀಲ, ಸಂಸ್ಕಾರಗಳು ಹೆಣ್ಣಿಗೆ ಮಾತ್ರ ಅನ್ವಯವಾಗುವ ಕ್ರಮವೂ ಹಿಂದಿಗಿಂತಲೂ ಚೂರು ಹೆಚ್ಚೆ ಎನ್ನಬಹುದು. ಅತ್ಯಾಚಾರವೆಂಬ ಘೋರ ದೌರ್‍ಜನ್ಯಕ್ಕೆ ಶಿಕ್ಷೆ ನೀಡುವ ಕಾನೂನು ಕಸರತ್ತುಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಸಮಾಜ ನೋಡುವ ಪರಿಯಲ್ಲಿ ಇಂದಿಗೂ ಒಂದಿಷ್ಟು ಬದಲಾವಣೆ ಆಗದೇ ಇರುವುದನ್ನು ನೋಡಿದರೆ ಆಧುನಿಕ ಜಗತ್ತೂ ಕೂಡಾ ಹೆಣ್ಣನ್ನು ಪರಿಭಾವಿಸುವ ಅದೇ ಮೂಢ ಕಲ್ಪನೆಗಳಿಂದ ಒಂದು ಚೂರು ಹೊರತಾಗಿಲ್ಲ ಎಂದೆನ್ನಿಸುತ್ತದೆ. ಪುರುಷ ತಾನೇ ಧರ್‍ಮದ ದಂಡನಾಯಕನಂತೆ ಎಲ್ಲ ಸಾಮಾಜಿಕ ರಿವಾಜುಗಳನ್ನು ತನ್ನ ಲಾಭಕ್ಕೆ ಬಳಸಿಕೊಂಡಿದ್ದಾನೆ. ಈ ರೀತಿ ನೀತಿಗಳು ಕಟ್ಟುಪಾಡುಗಳು ಸ್ತ್ರೀಯನ್ನು ಅಸಹಾಯಕಳನ್ನಾಗಿ ಮಾಡಿವೆ. ಗೊಡ್ಡು ಸಮಾಜದ ಆದರ್‍ಶ ಕಲ್ಪನೆಗಳ ಹೊರೆ ಹೊತ್ತ ಸ್ತ್ರೀಪಾತ್ರಗಳು ಬೆನ್ನು ಮುರಿದುಕೊಂಡಿವೆ.
ಸ್ತ್ರೀ ಶೋಷಣೆಯ ಮುಖಗಳು ಹತ್ತು ಹಲವು. ಅಪರಾಧಗಳಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನ ದೋಷಿಗಳಾಗಿದ್ದರೂ ಲೋಕ ತೆಗಳುವುದು ಹೆಣ್ಣನ್ನು. ಅವನಾದರೂ ಗಂಡು.. ಇವಳಿಗೇನಾಗಿತ್ತು? ಹೆಂಗಸಿಗೆ ಬುದ್ಧಿ ಇರಲಿಲ್ಲವೇ? ಎಂಬ ಉದ್ಗಾರಗಳು, ತಪ್ಪೆಲ್ಲಾ ಆಕೆಯದೇ ಎಂಬ ವಿವೇಚನಾರಾಹಿತ್ಯದ ನಿರ್‍ಧಾರಗಳು ತೀರಾ ಸಹಜವೆಂಬಂತೆ ಬಳಕೆಯಾಗುತ್ತಲೇ ಇರುತ್ತವೆ. ಸ್ತ್ರೀಯರ ಸಣ್ಣ ತಪ್ಪು ಮಹಾಪರಾಧವಾಗುವಂತೆ ಚಿತ್ರಿತವಾಗುತ್ತದೆ. ಹೋರಾಟದ ಗುಣವುಳ್ಳ ಧೈರ್‍ಯವಂತೆಯಾದ ಗಂಡಿನ ಮಾತಿಗೆ ಸೊಪ್ಪು ಹಾಕದ ಹೆಣ್ಣುಮಕ್ಕಳನ್ನು ಗಂಡುಭೀರಿ ಎಂದೋ ಬಜಾರಿ ಎಂದೋ ಹೆಸರಿಟ್ಟು ವೈಂಗ್ಯವಾಡುವ ಅದೆಷ್ಟೋ ಮೂರ್‍ಖ ಗಂಡುಗಳೇ ನಮ್ಮ ಸುತ್ತಮುತ್ತಲೂ ಕಾಣುತ್ತಾರೆ. ಇಂತಹ ವ್ಯಂಗ್ಯಕ್ಕೆ ದನಿಕೂಡಿಸುವ ಅಷ್ಟೇ ಏಕೆ ತಮ್ಮತನದ ಅರಿವಿಲ್ಲದ ಅಜ್ಞಾನಿ ಸ್ತ್ರೀಯರ ಪಾಲು ಹೆಚ್ಚಿದೆ. ಹೆಣ್ಣನ್ನು ಆಕೆಯ ವ್ಯಕ್ತಿತ್ವವನ್ನು ಕುಗ್ಗಿಸುವ ದಮನಿಸುವ ಪ್ರಯತ್ನ ಎಲ್ಲ ಕಡೆಯಲ್ಲಿ ನಡೆದೇ ಇದೆ. ಪುರುಷ ಶ್ರೇಷ್ಟತೆ ಮತ್ತು ಮಹಿಳೆ ಆತನ ನಿಷ್ಟಳಾಗಿ, ಅದೀನಳಾಗಿ ಇರಬೇಕೆಂಬ ಸಾಂಪ್ರದಾಯಿಕ ಅಲಿಖಿತ ಕಾನೂನುಗಳೇ ಆಳುತ್ತಿವೆ. ಸ್ತ್ರೀ ಮೇಲಿನ ಲೈಂಗಿಕ ದೌರ್‍ಜನ್ಯಕ್ಕೆ ಅತ್ಯಾಚಾರಕ್ಕೆ ವೇಷಭೂಷಣಗಳು ಕಾರಣ ಎನ್ನುವ ಅದೆಷ್ಟೋ ಜನರಿದ್ದಾರೆ. ಹಾಗಾದರೆ ಪುರುಷ ಪ್ರಾಣಿ ಎಂದಾಯಿತು ಇಲ್ಲವೇ ಆತನಿಗೆ ಬುದ್ಧಿ ಭ್ರಮೆ ಇದೆ ಎಂದಾಯ್ತು. ಅಲ್ಲವೇ? ಆದರೆ ನಿಜಕ್ಕೂ ಅದಲ್ಲ. ಆತನಿಗೆ ತಾನು ಪುರುಷನೆಂಬ ಕೊಬ್ಬು, ಇಲ್ಲವೇ ಗರ್‍ವ. ಹೆಣ್ಣು ಭೋಗದ ವಸ್ತು ಎಂಬ ಕನಿಷ್ಟ ಭಾವ. ಮನುಷ್ಯತ್ವ ಮಾರಿಕೊಂಡ ಪುರುಷರೆಲ್ಲ ಹೀಗೆಯೇ ಇರುವರೇನೋ? ಎಂಬ ಜಿಜ್ಞಾಸೆ ಮೂಡುವುದು ಸಹಜ.
ವಿದ್ಯಾವಂತ ಜಗತ್ತು ಕಾಮುಕತೆ, ಕೌರ್‍ಯದಲ್ಲಿ ಹಿಂದಿನ ಅವಿದ್ಯಾವಂತ ಜಗತ್ತಿಗಿಂತ ಮುಂದಿದೆ. ಅಂಕಿ ಸಂಖ್ಯೆಗಳ ನೋಡಿದರೆ ಪ್ರತಿವರ್‍ಷ ಮಹಿಳೆಯರ ಮೇಲಿನ ದೌರ್‍ಜನ್ಯದ ಸಂಖ್ಯೆಗಳು ಹೆಚ್ಚುತ್ತಲೇ ಹೋಗುತ್ತಿವೆ. ೨೦೧೫ಕ್ಕೆ ಹೋಲಿಸಿದರೆ ೨೦೧೬ರಲ್ಲಿ ಈ ದೌರ್‍ಜನ್ಯದ ಪ್ರಮಾಣ ಶೇ. ೧೧ರಷ್ಟು ಏರಿಕೆಯಾಗಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಸರಿಯಾದ ಪರಿಹಾರ ಸಿಗುವಂತೆ ಮಾಡುವ ಸಾಮಾಜಿಕ ಭದ್ರತೆ ಕೊಡುವ ಸಮರ್‍ಪಕ ವ್ಯವಸ್ಥೆಗಳಿಲ್ಲ. ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳಲ್ಲಿ ದಾಳಿಯಿಂದ ಪ್ರಾಣ ಕಳೆದುಕೊಳ್ಳುವ, ಇಲ್ಲವೇ ಮಾನಸಿಕವಾಗಿ ಮುದುಡಿಹೋಗುವ ಮನಸ್ಸುಗಳು ಮತ್ತೆ ಚಿಗುರುವುದೇ ಇಲ್ಲ. ಅವರನ್ನು ಯಥಾಸ್ಥಿತಿಗೆ ತರುವುದಕ್ಕೆ ಪ್ರಯತ್ನಿಸಿದರೂ ಹೊರ ಜಗತ್ತಿನ ಟೀಕೆ ಟಿಪ್ಪಣಿಗಳು ಸರಿಯಿಲ್ಲ. ಬೇಕೆಂತಲೇ ಸೌದೆಅಟ್ಟಿ ಉರಿ ಹಚ್ಚುವ ಮನೋಧರ್‍ಮವೂ ಬದಲಾಗಿಲ್ಲ. ನ್ಯಾಯಾಲಯದಲ್ಲಿ ಅತ್ಯಾಚಾರದ ಪ್ರಕರಣಗಳ ಇತ್ಯರ್‍ಥದಲ್ಲಿ ವಕೀಲರ ಅಶ್ಲೀಲ ಪಾಟಿಸವಾಲಿಗೆ ಉತ್ತರಿಸಲಾಗದೇ ಸಂತ್ರಸ್ತೆಯರು ಅಂಜಿ ಹಿಂಜರಿದ ಪ್ರಕರಣಗಳೆಷ್ಟೋ!
ಇನ್ನು ಅತ್ಯಾಚಾರ ಸಂತ್ರಸ್ಥೆಯನ್ನು ಸಮಾಜ ನೋಡುವ ಬಗೆ ಕೂಡಾ ಬದಲಾಗಿಲ್ಲ. ಸ್ತ್ರೀ ಶೀಲದ ಕುರಿತ ಆದಿ ಪರಿಕಲ್ಪನೆಗಳು ಬದಲಾಗಬೇಕಾದ ಅನಿವಾರ್‍ಯತೆ ಇದೆ. ಹಾಗಾಗೇ ಕಥೆಯಲ್ಲಿಯ ಅಂಬುಜ ಇಂದು ಪ್ರಶ್ತುತ ಎನ್ನಿಸುತ್ತಾಳೆ. ಮನೋವ್ಯಾಕುಲ ನಿಗ್ರಹವನ್ನು ಹೊಂದಬೇಕಾದ ಅನಿವಾರ್‍ಯತೆ ಇಂದಿನ ಹೆಣ್ಣುಮಕ್ಕಳಿಗಿದೆ. ತನ್ನ ಮನೋಬಲದ ಅನನ್ಯತೆಯನ್ನು ಪ್ರದರ್‍ಶಿಸುವಲ್ಲಿ ಅಂಬಕ್ಕ ತೋರುವ ಅಸೀಮ ಧೈರ್‍ಯ ಮೆಚ್ಚುವಂತಹುದು. ಸಾಂಪ್ರದಾಯಿಕ ಮನಸ್ಥಿತಿಯ ಕಕೂನದಿಂದ ಬಿಡಿಸಿಕೊಂಡು ಸ್ವತಂತ್ರ ಸ್ಪಷ್ಟ ವ್ಯಕ್ತಿತ್ವ ಹೊಂದುವಲ್ಲಿ ಅಂಬುಜಾ ಪಾತ್ರ ದಿಟ್ಟ ಹೆಜ್ಜೆಯ ಗಟ್ಟಿದನಿಯಾಗಿ ಮೂಡಿಬಂದಿದೆ.
*****