ಯಾಕೆ ದೂಷಿಸಬೇಕು ನಾನು ಅವಳನ್ನು
ನನ್ನ ಬಾಳನ್ನು ವ್ಯಥೆಯಿಂದ ತುಂಬಿದಳೆಂದು?
ಅರಿಯದವರಿಗೆ ಬೋಧಿಸಿದಳೆಂದು ಇತ್ತೀಚೆ
ಸಲ್ಲದ ಅತ್ಯುಗ್ರ ಮಾರ್‍ಗಗಳನ್ನು, ಇಲ್ಲವೇ
ಹಿರಿಜೀವಗಳಿಗೆ ಕಿರುದಾರಿ ಒಡ್ಡಿದಳೆಂದು?
ಕಾಮನೆಗೆ ತಕ್ಕಂಥ ಕೆಚ್ಚು ಅವರಲ್ಲಿತ್ತೆ?
ಘನತೆ ಕಡೆದಿಟ್ಟ ಉರಿಯಂಥ ಸರಳ ಚಿತ್ತದ,
ಬಿಗಿದ ಹೆದೆಯತ ಹುರಿಗೊಂಡ ಲಾವಣ್ಯದ,
ಉನ್ನತ ಸ್ವತಂತ್ರ ನಿಷ್ಠುರ ನಿಲುವುಗಳ-ಇಂಥ
ನಮ್ಮ ಕಾಲಕ್ಕೇ ಸಹಜವಲ್ಲದ ಒಂದು ಬಗೆಯನ್ನ
ಏನು ತಾನೇ ತಣಿಸಬಹುದಿತ್ತು ? ಇತ್ತೆಲ್ಲಿ
ಮತ್ತೊಂದು ಟ್ರಾಯ್ ನಗರ ಉರಿಯಲು ಅವಳಿಗಾಗಿ ?
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಟ್ರಾಯ್ ಟ್ರೋಜನ್ನರ ನಗರ. ಟ್ರಾಯ್‌ನ ರಾಜಕುಮಾರ ಪ್ಯಾರಿಸ್ ಗ್ರೀಕ್ ವೀರ ಮೆನೆಲಾಸನ ಪತ್ನಿ ಹೆಲೆನ್ನಳನ್ನು ಒಲಿಸಿಕೊಂಡು ಅವಳೊಡನೆ ಪಲಾಯನ ಮಾಡಿದ. ಗ್ರೀಕ್ ದೊರೆಗಳೆಲ್ಲ ಒಟ್ಟಾಗಿ ಟ್ರೋಜನ್ನರ ಮೇಲೆ ಯುದ್ಧಕ್ಕೆ ಬಂದರು. ಘೋರಯುದ್ಧದ ಕೊನೆಯಲ್ಲಿ ಟ್ರೋಜನ್ನರನ್ನು ಗೆದ್ದು ಟ್ರಾಯ್‌ನಗರವನ್ನು ಸುಟ್ಟರು.
ಚೆಲುವೆ ಮಾಡ್‌ಗಾನಳನ್ನು ಕವಿ ಪುರಾಣದ ಹೆಲೆನ್ನಳಂತೆ ಭಾವಿಸಿ ಮಾತನಾಡುತ್ತಾನೆ.