ಇಮ್ಮಡಿ ತಿಮ್ಮರಾಜಒಡೆಯರು ದೊರೆತನಮಾಡುತ್ತಿದ್ದ ಕಾಲದಲ್ಲಿ ಸಿಂಧುವಳ್ಳಿ, ಹುಣಸನಾಳುಗಳ ಪಾಳಯಗಾರರು ಅವರ ಅಶ್ರಿತರಾಗಿದ್ದರು.

ಒಂದುಸಲ ನಂಜನಗೂಡಿನ ರಥೋತ್ಸವ ಕಾಲದಲ್ಲಿ ದೊರೆಗಳು ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಕೆಲವರು ಪಾಳಯಗಾರರು ದೇವರ ಸೇವೆಗೆಂದು ಬಂದಿದ್ದರು. ಪಾಳಯಗಾರರು ಬಹಳ ಅಟ್ಟಹಾಸದಿಂದ ಮೆರೆಯುತ್ತಲಿದ್ದು `ಬಿರುದೆಂತೆಂಬರಗಂಡ’ ನೆಂದು ಹೊಗಳಿಸಿ ಕೊಳ್ಳುತ್ತ ತಮ್ಮ ಸಮಾನರಿಲ್ಲವೆಂಬ ಜಂಭವನ್ನು ತೋರುತ್ತಿದ್ದರು.

ಇದನ್ನು ಕಂಡು ಮೈಸೂರಿನವರು ಸಹಿಸಲಿಲ್ಲ. ಅವರಲ್ಲಿ ಮುಖ್ಯನೂ ರಾಜಭಕ್ತನೂ ಆಗಿದ್ದ ಮೈಸೂರ ಸೆಟ್ಟಿಯು ಸಾಹಸದಿಂದ ಅವರೆದುರಿಗೆ ಹೋಗಿ “ಬಿರುದೆಂತೆಂಬರಗಂಡನೆಂಬ ಬಿರುದು ನಮ್ಮ ಮೈಸೂರಿನ ಒಡೆಯರಿಗೇ ಅಲ್ಲದೆ ನಿಮ್ಮಂತಹವರಿಗೆ ಸಲ್ಲುವುದಿಲ್ಲ; ನೀವು ಆ ಬಿರುದನ್ನು ಬಿಟ್ಟುಬಿಡಬೇಕು” ಎಂದು ಗಂಭೀರವಾಗಿ ಹೇಳಿದನು. ಪಾಳಯಗಾರರಿಗೆ ಕೋಪ ಬಂತು; ಈ ಅಧಿಕಪ್ರಸಂಗಿ ಸೆಟ್ಟಿಯನ್ನು ಶಿಕ್ಷಿಸಬೇಕೆಂದು ಅವನನ್ನು ಸೆರೆಹಿಡಿಸಿ ಒಯ್ದರು.

ಈ ಸಮಾಚಾರವು ಒಡೆಯರಿಗೆ ತಲಪಿತು; “ನಮ್ಮ ಧೀರ ಪ್ರಜೆಯಾದ ಸೆಟ್ಟಿಯನ್ನು ಹಿಡಿದುಕೊಂಡು ಹೋಗಲು ಆ ಪಾಳಯಗಾರರಿಗೆಷ್ಟು ಗರ್ವ! ನಮ್ಮ ಆಪ್ತನಾದ ಸೆಟ್ಟಿಯನ್ನು ಹಾಗೆ ಬಿಟ್ಟುಕೊಟ್ಟೇವೆಯೆ ನಾವು!” ಎಂದು ತಾವೇ ಸೈನ್ಯದೊಡನೆ ಹೊರಟು ಪಾಳಯಗಾರರ ಶಿಬಿರಕ್ಕೆ ಹೋಗಿ ಕೂಗಿಸಿ ಹೇಳಿಸಿದರು : “ಪಾಳಯಗಾರರಲ್ಲಿ ಯಾರಾದರೂ ಧೀರರೂ ಸಾಹಸಿಗಳೂ ಇದ್ದರೆ ಯುದ್ಧಕ್ಕೆ ಬರಬಹುದು; ಇಲ್ಲವಾದರೆ ಎಲ್ಲರೂ ಬಂದು ಸೆಟ್ಟಿಯನ್ನೊಪ್ಪಿಸಿ ತಪ್ಪಾಯಿತೆಂದು ದೊರೆಗಳ ಮನ್ನಣೆಯ ಬೇಡಬಹುದು” ಎಂದು. ಮದಿಸಿದ್ದ ಪಾಳಯಗಾರರು ಯುದ್ಧಕ್ಕೆ ಬಂದರು. ಒಡೆಯರು ಅವರೆಲ್ಲರನ್ನು ಸೋಲಿಸಿ ಸೆರೆಯಾದ ಸೆಟ್ಟಿಯನ್ನು ಕರೆತರಿಸಿ ಮರ್ಯಾದೆಯಿಂದ ಕಂಡು ಮೈಸೂರಿಗೆ ಜಯಶೀಲರಾಗಿ ಹಿಂತಿರುಗಿದರು. ಈ ಸಂಗತಿಯಿಂದ ರಾಜರಿಗೆ ‘ಮೊನೆಗಾರ’ ನೆಂಬ ಬಿರುದು ವಾಡಿಕೆಯಾಯ್ತು. ಅಂದಿನಿಂದ ಅರಮನೆಯಲ್ಲಿ ಸೆಟ್ಟಿಗೆ ಗೌರವವೂ ಹೆಚ್ಚಿತು.
*****
[ವಂಶರತ್ನಾಕರ ಪುಟ ೧೯; ವಂಶಾವಳಿ ಸಂಪುಟ ೧ ಪುಟ ೧೫- ೧೬]