Home / ಕಥೆ / ಸಣ್ಣ ಕಥೆ / ಚಾ ದುಕಾನ್

ಚಾ ದುಕಾನ್

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ.

ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್ತಿಳಿದರೆ ನನ್ನ ತಂಗಿಯನ್ನು ಕೊಟ್ಟ ಊರು ಬರುತ್ತದೆ. ಗುಡ್ಡೆಯ ಓರೆಗುಂಟ ‘ರಸ್ತೆ’ಯಲ್ಲಿ- ಒಕ್ಕಲು ಮಕ್ಕಳ ಕೇರಿಯನ್ನು ಹಾಯ್ದು ಹೋಗಲಿಕ್ಕೂ ಬರುತ್ತದೆ. ಸ್ವಲ್ಪ ಸುತ್ತು ಅಷ್ಟೆ.

ಕಳೆದ ಸಲ ಹೋದಾಗ ರಸ್ತೆಯನ್ನೇ ಹಿಡಿದು ಹೊರಟೆ, ಟೆನನ್ಸಿ ಕಾಯಿದೆ, ರೈತಸಂಘ ಸ್ಥಾಪನೆ, ಮುಂತಾದ ಸುಧಾರಣೆಗಳಿಂದ ಭೆಟ್ಟಿಯಾದ ಒಕ್ಕಲು ಮಕ್ಕಳಿಗೆ ನನ್ನ ಗುರುತು ಸರಿಯಾಗಿ ಹತ್ತಲಿಲ್ಲವೆಂದು ತೋರುತ್ತದೆ. ಒಬ್ಬಿಬ್ಬರು ಮಾತ್ರ “ಯಾವಾಗ್ಬಂದ್ರೋ ಒಡ್ಯ?” ಎಂದು ದೂರಿಂದಲೇ ಕೇಳಿ ಸತ್ಕರಿಸಿದರು. ಒಡೆಯ ಒಕ್ಕಲುಗಳ ತಿಕ್ಕಾಟದ ವಿಷಯವನ್ನು ಮೊದಲೇ ಕೇಳಿದ್ದೆನಾದ್ದರಿಂದ ನನಗೆ ಈ ಬಗೆಯ ವರ್ತನೆಯಿಂದ ಖೇದವಾದರೂ ಆಶ್ಚರ್ಯವಾಗಲಿಲ್ಲ.

ಒಕ್ಕಲ ಕೇರಿಯನ್ನು ದಾಟಿ ಎರಡು ಹೆಜ್ಜೆಯನ್ನೂ ಹಾಕಿಲ್ಲ, ರಸ್ತೆಯ ಬಲಗಡೆಗೆ “ಚಾ ದುಕಾನ್” ಎಂಬ ಬೋರ್ಡು! ಒಂದು ತಟ್ಟಿಯ ‘ಗುಬ್ಬೆ’ ಯಿಂದ ಹೊಗೆ ಬರುತ್ತಿದೆ! ಅದರ ಬಾಗಿಲು ಮಾತ್ರ ಕಾಣಿಸುತ್ತದೆ; ಒಳಗಿನದೇನೂ ಗೋಚರಿಸುವಂತಿಲ್ಲ. ಅಬ್ಬ, ನಮ್ಮೂರಿಗೂ ಚಾ ದುಕಾನ್ ಬಂತೇ! ಎಂದು ಉದ್ಗರಿಸಿ ಮುಂದೆ ಕಾಲು ಹಾಕುವದರೊಳಗೇ, “ಓಹೋ……
ಯಾವಾಗ ಬಂದ್ಯೋ?” ಎಂದು ನನ್ನ ಹೆಸರು ಹೇಳಿ ಕರೆದದ್ದು ಕೇಳಿಬಂತು! ನೋಡುತ್ತೇನೆ. ನಮ್ಮ ಕೇರಿಯ, ಪ್ರಾಥಮಿಕ ಶಾಲೆಯಲ್ಲಿ ನನ್ನ ಸಹ ಪಾಠಿಯಾಗಿದ್ದ, ಜೋಯ್ಸ ನನ್ನನ್ನು ಕರೆಯುತ್ತಿದ್ದಾನೆ. ಅವನ ಉಡುಪು, ಸ್ವಚ್ಛತೆಗಳ ಮೇಲಿಂದ ಸದರಿ ಚಾ ದುಕಾನಿನ ಯಜಮಾನ+ಸೇವಕ=ಈ ಜೋಯ್ಸ ನೆಂದು ತಿಳಿಯಲು ನನಗೆ ಹೊತ್ತು ಹಿಡಿಯಲಿಲ್ಲ.

ಲಂಗೋಟಿ ದೋಸ್ತನ ಸನ್ಮಾನಕ್ಕೆ ಬಾಗಲೇ ಬೇಕಾಯಿತು. ಚಾ ದುಕಾನ್ ಪ್ರವೇಶಿಸಿದೆ “ಕೊಟ್ಟಂ ಕೆಟ್ಟಂ” ಎಂಬ ಸಂಗೀತ ಕಚೇರಿ ನಡಿಸಿತ್ತು ಒಲೆ. ಮೂರು ನಾಲ್ಕು ಒಕ್ಕಲು ಮಕ್ಕಳು ತಂತಮ್ಮ ಕಂಬಳಿಯ ಮೇಲೆ ಕುಳಿತು ಗರಟೆಯಲ್ಲಿ ಚಾ ಕುಡಿಯುತ್ತಿದ್ದರು.

“ಹೀಂಗ್ ಛಾ ಮಾಡ್ಕೊಟ್ರೆ, ಕಪ್ಪಿಗೆ ಎರ್ಡಾಣೆ ಕೊಡ್ಬೌದು”

“ನೀ ಯೇನೇ ಹೇಳು, ಕಪ್ಪುಬಸಿ ಇಲ್ದಿದ್ರೆ ಚಾಕ್ಕೆ ರುಚ್ಯೇ ಇಲ್ಲ.” ಅವರು ತಮ್ಮೊಳಗೆ ಏನೋ ಸಂಭಾಷಣೆ ನಡೆಸಿದ್ದರು.

ನನಗಾಗಿ “ಇಸ್ಪೆಶಲ್” ಚಾ ತಯಾರಿಸಲು ಜೋಯ್ಸ ಸನ್ನದ್ಧನಾದ. ಒಕ್ಕಲು ಮಕ್ಕಳು ಗರಟೆ ತೊಳೆದು ಕಮುಚ್ಚಿಟ್ಟು, ರೊಕ್ಕ ಕೊಟ್ಟು ಹೊರಟರು. ಚಾ ದುಕಾನ್‌ದಲ್ಲಿ ನಾವಿಬ್ಬರೇ ಆದೆವು.

“ಏನಿದು ಮಾರಾಯಾ, ಜೋಯ್ಸ-ಗಿರಿ, ತೋಟ, ಎಲ್ಲ ಬಿಟ್ಟು ಈ ಅವತಾರ ಮಾಡಿದೆ?” ಎಂದು ಬಾಂಕಿನ ಮೇಲೆ ಮಂಡಿಸುತ್ತ ಕೇಳಿದೆ.

“ಉದರ ನಿಮಿತ್ತೇ.” ಜೋಯ್ಸ ಮಾಡಿನೊಳಗೆ ಸಿಕ್ಕಿಸಿಟ್ಟ ಸಣ್ಣ ಡಬ್ಬಿ ಯೊಳಗಿಂದ ಸಕ್ಕರೆ ತೆಗೆಯುತ್ತ ಹೇಳಿದ.

“ಈ ದಂಧೆಯೇ ಏಕೆ ಬೇಕಾಯಿತು ಅಂದೆ.”

“ಅದನ್ನೆಲ್ಲ ಹೇಳಿದರೆ ನಿನಗೆ ತಿಳಿಯಲಿಕ್ಕಿಲ್ಲ. ತಿಳಿದರೂ ಸರಿಯೆನಿಸಲಿಕ್ಕಿಲ್ಲ.”

ಇಬ್ಬರೂ ‘ಇಸ್ಪೆಶಲ್’ ಚಾ ಮೋರ ಹತ್ತಿದೆವು.

“ಎಲ್ಲಾ ಬಿಟ್ಟು ಬಂಗೀ ನೆಟ್ಟ ಅಂದ ಹಾಗೆ ಈ ದಂಧೆ….”

“ಜೋಯ್ಸ ಮನೆತನಕ್ಕೆ ಇದು ಒಪ್ಪುವದಿಲ್ಲವೆಂದು ನಿನ್ನ ಅಭಿಪ್ರಾಯವೋ?”

“ಉಹುಂ.” ನನ್ನ ದನಿಯಲ್ಲಿ ಸಂದೇಹ ಹುದುಗಿತ್ತು.

“ನೋಡು ವಿಜಯ, ಸಂಸ್ಕೃತ ಕಲಿತಿದ್ದಕ್ಕೆ ಮಂತ್ರ ಒದರಿ ಹೇಗಾದರೂ ಇರುವ ಅಂದರೆ ನಮ್ಮ ಜನರಲ್ಲಿ ಭಕ್ತಿ ಕಡಿಮೆಯಾಗುತ್ತಿದೆ. ಇದ್ದ ಒಂದು ತುಂಡು ಜಮೀನಿನ ಉತ್ಪನ್ನವೂ ಈ ಟೆನನ್ಸಿ ಕಾಯ್ದೆಯಿಂದ ಕೈ ತಪ್ಪಿದ ಹಾಗೇ, ಒಕ್ಕಲು ಮಕ್ಕಳ ಸೊಕ್ಕು ಹೇಳಿ ತೀರದು. ರೈತ ಸಂಘ ವೊಂದು ಬೇರೆ ಆಗಿದೆ. ನಮ್ಮಂಥವರು ಬದುಕುವದೇ ಅಸಾಧ್ಯ. ಕದ್ದು
ಕೊಂಡೋ, ಬೇಡಿಕೊಂಡೋ ತಿನ್ನಲು ಮನಸ್ಸಾಗುವದಿಲ್ಲ….”

ಇಸ್ಪೆಶಲ್ ಚಾ ಕುಡಿದ ಹುರುಪಿನಲ್ಲಿ ಜೋಯ್ಸ ಮುಂದುವರಿಸಿದ:

“ಈ ಒಕ್ಕಲು ಮಕ್ಕಳ ಕೈಲಿ ರೊಕ್ಕ ಆಡಹತ್ತಿ ಅವರ ಸೊಕ್ಕು ನೆತ್ತಿಗೇರಿದೆ. ಒಡೆಯ ಅಂದರೆ ಕಾಲ ಕಸ ಅವರಿಗೆ ನಿನಗೆ ಹೇಳದೆ ಏನು? ನಮ್ಮನ್ನು ಸೋಲಿಸುವ ಈ ಒಕ್ಕಲಿಗನಿಗೆ ಹದಹಾಕಲಿಕ್ಕೇ ನಾನು ಈ ದುಕಾನ್ ತೆರೆದದ್ದು. ನೀನೇ ನೋಡಿದೆಯೆಲ್ಲ, ಹೇಗೆ ಚಾ ಮೋರಿ, ರೊಕ್ಕ ಬಿಸಾಟಿ ಹೋಗುತ್ತಾರೆ. ಮನೆಗೆ ಕೆಲಸಕ್ಕೆ ಕರೆದರೆ ಬಾರದವರು, ಇಲ್ಲಿಗೆ
ಕುಂಯ್ ಅನ್ನುತ್ತ ಬರುತ್ತಾರೆ…..”

ಇಸ್ಪೆಶಲ್ ಚಾ ಕುಡಿದದ್ದರಿಂದ ನನ್ನ ತಲೆಯಲ್ಲಿ ಚಕ್ರಗಳು ತಿರುಗ ಹತ್ತಿದವು. ಬಹಳ ಹೊತ್ತು ಅಲ್ಲಿ ಕುಳಿತುಕೊಳ್ಳಲಾರದೆ ಜೋಯ್ಸನನ್ನು ಅಭಿನಂದಿಸಿ, ಅವನ ದಂಧೆಯಲ್ಲಿ ಯಶಸ್ಸು ಕೋರಿ, ಹೊರಟೆ.

ಜೋಯ್ಸನು ರೈತರನ್ನು ಸುಲಿಯಲು ಚಾದುಕಾನ್ ತೆರೆದದ್ದು ತಪ್ಪೇ?

ಸೊಕ್ಕಿದ ರೈತರಿಗೆ…….. ಯಾರದು ತಪ್ಪು?…….. ಪಾನ ಪ್ರತಿಬಂಧ… ಸರಕಾರ…….. ಕುರಿಹಿಂಡು…….. ರಶಿಯಾ…….. ? ……..?

ಸ್ಪೆಶಲ್ ಚಾ ಕುಡಿದ ನನಗೆ ಆ ರಾತ್ರಿ ನಿದ್ದೆಯೇ ಬೀಳಲಿಲ್ಲ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...