
ಹೋಳಿಗತ್ತು:-ಪಾರೋತಿ ಮಾದೇವ, ಏರಿಸಬದಾಗಿರಲು
ಪಾರೋತಿ ಹೇಳ ಚೆಲುವ್ಯಾರ | ಕೇಳುದಕ
ತೀರ ಚೆಲುವಾನ ಕಾಮಣ್ಣ ೧
ಸಿಟ್ಟಿಗೇಳುತ ಶಿವನು, ಬಿಟ್ಟಾನೊ ಉರಿಗಣ
ಸುಟ್ಟು ಬೂದ್ಯಾದೊ ಕಾಮಣ್ಣ | ರತಿದೇವಿ
ಹೊಟ್ಟಿ ಬಡಕೊಂಡು ಅಳತಾಳೊ ೨
ಹೋಳಿ ಏರಿಕೆ:- ಅಳುವ ಬಾಲಿಯ ಕಂಡ, ಕಳವಳವೊ ಸಬದಾಗ
ಅಳಬ್ಯಾಡ ರತಿಯೆ ಮನೆ ಸೊಸಿಯೆ | ಕಾಮಣ್ಣ
ಮನದಾಗ ಮೂಡಿ ಬರತಾನ ೩
ಹೊರಳಾಡಿ ಅಳಬ್ಯಾಡ, ಎರವಾದ ಕಿಚ್ಚೀಗೆ
ಕರೆದಾಗ ಬರುವ ರತಿದೇವಿ | ಮನದಾಗ
ಚಿರವಂತ ಕಾಮ ನೆನದಾಗ ೪
ಹೋಳಿಗತ್ತು:- ಮಳಲ ಬಿಂದಗಿ ಮಾಡಿ, ಜುಳುಕ ಹಾವಿನ ಸಿಂಬಿ
ಹೊಳೆಯ ತೆರ ಹೊಡೆದು ತುಂಬ್ಯಾರೊ | ಎಳದೇರು
ತುಳಿ ತುಳಿದು ಹಾದಿ ಬರುವಾಗ ೫
ಮಳಲ ಬಿಂದಗಿ ಕರಗಿ ಸುಳಿದು ಸಿಂಬಿಯ ಹಾವು
ಜಳತಾಕಿ ಕಾಮ ನಸುಡುತಿರಲು | ಎಳದೇರು
ಅಳು ಅಳು ಕಳಚಿ ಕೈಬಿಟ್ಟು ೬
ಹೋಳಿ ಏರಿಕೆ:- ಆನಿಗಂಬಾರಿ ಚಂದ | ಕುದುರೀಗೆ ತಡಿ ಚೆಂದ
ಸದರಿಽಗೆ ಚೆಂದ ಕಾಮಣ್ಣ | ಬಗಲಾಗ
ರೂಪಕ ಚೆಂದ ರತಿದೇವಿ ೭
ಕಾಮಣ್ಣ ಕಟ್ಟುತಲಿ, ಗೊನೆಮುಳ್ಳ ಸುರಿಯುತಲಿ
ಸೀತಾಳ ಬಾಂವಿ ತಗೆಸುತಲಿ | ನಮ ಕಾಮ
ಜೀತ ಹೋಗ್ಯಾನ ಶಿವನಲ್ಲಿ ೮
ಹೋ. ದುಂಡಮಲ್ಲಿಗೆ:- ಮಲ್ಲೀಗೆ ದುಂಡ ಮಲ್ಲಿಗೆ ||ಪ||
ಮಜಲೀಗೆ ಬಂದೀವಿ, ಮಾರಿಮಾರಿ ನೋಡಬ್ಯಾಡ್ರೆ
ತೋಡೀಗೆ ತೋಡಿ ಹಾಡಬೇಕ್ರೆ ಮ
ತೋಡಿಗೆ ತೋಡಿ ಹಾಡಬೇಕ್ರೆ ಹುಡಗೇರ
ಓಡೋಡಿ ಮುಂದ ಹೋಗಬ್ರಾಡ್ರೆ ಮ ೯
ಹೋಳಿಯ ಹಬ್ಬಕ, ಮೇಳಾಗಿ ಹಾಡೂನ
ವಾಳ್ಯಾಗಬ್ಯಾಡ ನನ ಗೆಣತಿ ಮ
ವಾಳ್ಯಾಗಬ್ಯಾಡ ನನ ಗೆಣತಿ ಬಂದಾರ
ಕೇಳಾಕ ಮಂದಿ ನಮ್ಹಾಡ ಮ ೧೦
ಹೋಳಿಗತ್ತು:- ಗಣಪತಿ ನಾನಿನ್ನ, ಚಣಚಣಕ ನೆನದೇನೊ
ಅಣ ಅಣಕ ಆಡು ಜನಕೆಲ್ಲ | ಬಾಯಾಗ
ತುಣತುಣಕ ಬೆಲ್ಲ ಒಗೆದ್ಹಾಂಗೊ ೧೧
ಬುದ್ಧಿ ಗಣಪತಿ ಮುಂದ, ಭೂಮೀಗೆ ಫಲ ಮುಂದ
ಗುಡ್ಡಽಕ ಮುಂದ ಹುಲಿಯಪ್ಪ್ನ | ಮುಂದಿರುವ
ಗುದ್ದಿಽಗೆ ಮುಂದ ನರಿಯಪ್ಪ ೧೨
ಹೋಳಿ ಏರು:- ಅಕ್ಕ ಪಾರ್ವತಿ ಮಗನು, ಚಿಕ್ಕವನು ಗಣಪತಿಯೊ
ನೆಪ್ಪ ಮಾಡಿ ನಿನ್ನ ನೆನೆದೇನೊ | ಗಣನಾಥ
ತಪ್ಪಿದಲ್ಲೆನಗ ಬೆಸನಾಗೊ ೧೩
ಬೆನಕ ನಾಲಿಗಿ ಮ್ಯಾಲೆ, ನೆನಿಬಾರೊ ಹಾಡುದಕ
ಕಣಕಟ್ಟಿ ಮಂದಿ ಕೂಡೈತೊ | ಕೇಳುದಕ
ಮನಕ ಬೆಸನಾಗೊ ನುಡಿನುಡಿಗೊ ೧೪
ಹೋಲಿ ಮಲ್ಲಿಗೆ:- ಮಲ್ಲಿಗೆ ದುಂಡ ಮಲ್ಲಿಗೆ ||ಪ||
ಕೂತಿರು ಸಬದವರ, ನಿಂತಿರು ಸಬದವರ
ಚಿತ್ತಿಟ್ಟು ಕೇಳ್ರಿ ನಮ್ಹಾಡ ಮ
ಚಿತ್ತಿಟ್ಟು ಕೇಳ್ರಿ ನಮ್ಹಾಡ ಸಬದವರ
ಕೈಮುಗಿದು ನಾವು ಬೇಡ್ತೀವಿ ಮ ೧೫
ಹೋಳಿಗತ್ತು:- ನಿಂಬೀಯ ಹಣ್ಣ್ಹಂಗ, ತುಂಬಿತ್ತ ಮೈಬಣ್ಣ
ಹಂಬಾಲ ಬಿತ್ತ ನಿನಮ್ಯಾಲೆ | ಎಲೆ ಹೆಣ್ಣ
ನಂಬಿ ಬಂದೇನ ಮನಿತನಕ ೧೬
ಕಾಡೀಗಿಗಣ್ಣೀನ, ಕೂಡಿದ್ಹುಬ್ಬೀನ್ಹೆಣ್ಣ
ಬೇಡ್ಯಾವ ನಿನ್ನ ನನ ಜೀವ | ನಿನ್ನೋಡಿ
ಓಡಿ ಬಂದೀನೆ ಕೂಡುದಕ ೧೭
ಹೋಳಿ ಏರಿಕೆ:-.ಹೇಣ್ಣೀನ ಈ ಹರೆಯು, ಹಣ್ಣೀನ ಗೊಂಚಲು
ಕಣ್ಣೀಲಿ ನೋಡಿ ಮನಬಾರ | ಬಡುವಂತ
ಕನ್ನೆರಿಲ್ಲೇನೊ ಮನಿಯಾಗೊ ೧೮
ತುಂಬು ಬಿಚ್ಚಿದ ಹಣ್ಣು, ತುಂಬ ಹರೆಯದ ಹೆಣ್ಣು
ತುಂಬಿ ಮನದಾಗ ರಸವೊಡೆಯೊ | ಉಣಿಸುವ
ರಂಬಿ ಇಲ್ಲೇನೊ ಮನಿಯಾಗೊ ೧೯
ಹೋಳಿಗತ್ತು:- ಮಾರೀಯ ನೋಡಿದರ ಮಾವುರದ ಬಂಗಾರ
ಸೀರಿ ನೋಡಿದರ ಜರತಾರ | ಎಲೆ ಹೆಣ್ಣ
ಯಾರ ಮನವನ್ನ ಸೆಳಿಯಾವ ೨೦
ಆಡ್ಡ ಗುಡ್ಡವು ಚೆಂದ, ದೊಡ್ಡರಳಿ ಮರ ಚೆಂದ
ಗಿಡ್ಡ ನಿನ ಕೈಗೆ ಬಳಿ ಚೆಂದ | ನನ ಗೆಣತಿ
ವಡ್ಡ್ಯಾ ಣ ಚೆಂದ ನಡದಾಗ ೨೧
ಹೋಳಿ ಏರಿಕೆ:- ಜ್ಯಾತ ಮಲ್ಲೀಗಿ ಹೂವ, ಜಗ್ಗಿ ಕೋಯ್ಯೂವರೇನ
ಜಗ್ಗಿದರ ಮೊಗಿ ಉದರ್ಯಾವ | ಪರ ಹೆಣ್ಣ
ದಿಟ್ಟಿಽಸಿ ನೋಡಿ ಫಲವೇನ ೨೨
ಹೆರವರ್ಹೆಣ್ಣಿಗಾಗಿ, ಹೊರಗ ಮಲಗುವ ಜಾಣ |
ಗಿಡದ ಮ್ಯಾಲೆರಡು ಗಿಣಿ ಕೂತು | ನುಡಿದಾವ
ಎರವನ್ನೊ ರಾಯ ನಿನ್ನಜೀವ ೨೩
ಹೋಳಿಗತ್ತು:- ಹೊಳಿಯ ದಂಡಿಯಮ್ಯಾಲೆ, ಎಳಿಯ ಸವತಿಯ ಕಾಯಿ
ಹರಿಯಂದರ್ಲ್ಯಾಂಗ ಹರಿಯಽಲೆ | ಎಲೆ ಹುಡಗಿ
ಮರೆಯಂದರ್ಲ್ಯಾಂಗ ಮರೆಯಽಲೆ ೨೪
ಮೆಂಚಿಽಗಿ ಮ್ಯಾಲ್ಹತ್ತಿ, ಕೆಂಚ ಮೀಸಿಯ ತಿದ್ದಿ
ಹೊಂಚ್ಹಾಕಿ ಹೊಡೆದ ಕವಣಿಽಯ | ನೆರೆ ಹೊಲದ
ಕೆಂಚಿ ಗುರಿ ಕಂಡು ಬೆರತಾಳೊ ೨೫
ಹೋಳಿ ಏರಿಕೆ:- ಕಾಕು ಹಾಕಿದ ಕಂಡು, ಬೇಕಾಗಿ ನಾ ಬಂದೆ
ಬಾರೊ ನನ ಗೆಣೆಯ ಬೈಲೀಗೆ | ನಾನೆಂದು
ಬಾಸೆ ತಪ್ಪೊಂತ ಮಗಳಲ್ಲ ೨೬
ಚಳಿ ಜ್ವರ ಬಿಟ್ಟಾವು, ಒಳ ಜ್ವರ ಬಿಡಲಿಲ್ಲ
ಮಂಟಪದ ಜಾಜಿ ಮನೆಯವನೆ | ಸರದಾರ
ಮಂತ್ರೀಸಿ ಹೋಗೊ ತಲೆ ನೋವ ೨೭
ಹೋಳಿಗತ್ತು:-. ಹೆಬ್ಬೊಬ್ಬಿ ಮರೆಯಾಗ, ಬಗ್ಗಿ ನೋಡುವಳ್ಯಾರ
ಕಬ್ಬಕ್ಕಿಯಂತ ಮಲೆಯವಳ | ನಾ ಕಂಡು
ಗೊಬ್ಬರ್ಹಾಕುದಕ ಮನಸಿಲ್ಲ ೨೮
ಅಡ್ಡ ಗುಡ್ಡವ ದಾಟಿ, ಕದ್ದು ಕಣವಿಯ ದಾಟಿ
ಬಿದ್ಹೋಡಿ ಬಂದೆ ನಿನಗಾಗಿ | ಎಲೆ ಹುಡಗಿ
ಎದ್ದು ದನಿದೋರ ನನಗಾಗಿ ೨೯
ಹೋಳಿ ದುಂದುಮೆ:- ದುಂದುಮೆ ಹೇಳ್ರಿ ದುಂದುಮೆ ||ಪ||
ಕಬ್ಬು ಕಾರುಳ್ಳವನ, ಹುಬ್ಬು ನೇರುಳ್ಳವನ
ಗೊಬ್ಬರದ ಗಾಡಿ ಹೊಡೆಯೂವ ದುಂ
ಗೊಬ್ಬರದ ಗಾಡಿ ಹೊಡೆಯೂವ ಗೆಣಿಯಾನ
ಹುಬ್ಬಿಗಿನ್ನೊಂದು ಸರಿವುಂಟೆ ದುಂ ೩೦
ಕ್ವಾರಿ ಮೀತೆಯ ತಿದ್ದಿ, ನೀರಿಗೋಗ್ಹುವಾಗ
ದಾರ್ಯಾಗ ಕಂಡೆ ಚೆಲುವನ್ನ ದುಂ
ದಾರ್ಯಾಗ ಕಂಡೆ ಚೆಲುವನ್ನ ಮನಸಾಗಿ
ವಾರ್ಯಾಗ ತರುಬಿ ಕೇಳೇನ ದುಂ ೩೧
ಹೋಳಿ ಮಲ್ಲಿಗೆ:- ಮಲ್ಲೀಗೆ ದುಂಡ ಮಲ್ಲಿಗೆ ||ಪ||
ಮಾವನ ಎಲೆ ಮಗಳೆ ಕೋಗಿಽಲ ದನಿಯವಳೆ
ತಾವಽರೆ ಮೊಗ್ಗಿ ಮೊಲೆಯವಳೆ ಮ
ತಾವರೆ ಮೊಗ್ಗಿ ಮೊಲೆಯವಳೆ ಅರಗಿಳಿಯೆ
ಬಾಯಾರಿ ಬಂದೆ ನೀರ್ಕೋಡ ಮ ೩೨
ನೀರಿಗ್ಹೋಗುವ ಹೆಣ್ಣು, ನಿಲ್ಲ ನಾ ಬರತೀನ
ನಿನ್ನಾಣೆ ನಿನ್ನ ಕೊಡದಾಣೆ ಮ
ನಿನ್ನಾಣೆ ನಿನ್ನ ಕೊಡದಾಣೆ ಕೊರಳನ್ನ
ಸರದಾಣೆ ನೀರ ಹೊಳೆಯಾಣೆ ಮ ೩೩
ಹೋಳಿ ಏರಿಕೆ:- ಕುಂತಲ್ಲೆ ಹೋದಲ್ಲೆ, ನಿಂತಲ್ಲೆ ಬಂದಲ್ಲೆ
ಹಂತ್ಯಾಕ ಬ್ಯಾಡೊ ನನಗೆಣೆಯ | ಜನ ಹರಲಿ
ಚಿಂತಿ ನಿನಗೇಟು ಇಲ್ಲೇನೊ ೩೪
ಕರಿಯ ಕಂಬಳಿ ಬ್ಯಾಡೊ, ಬಿಳಿಯ ಹಚ್ಚಡ ಬ್ಯಾಡೊ
ಬೆಳದಿಂಗಳಕ ಬರಬ್ಯಾಡೊ | ನನ ಗೆಣೆಯ
ಸಿಕ್ಕರ ಚೆರಗ ಸಿಡದೀತೊ ೩೫
ಹೋಳಿ ಗತ್ತು:- ಹರಲಿ ಬಂದರು ಬರಲಿ, ಹರಿದಿರಲಿ ಗೆಣೆತಾನ
ಮರಿಬ್ಯಾಡ ನನ್ನ ಏಲೆ ಗೆಣತಿ | ನಿನಗಾಗಿ
ಎರಗಿ ಬಂದೇನ ಮನಿತನಕ ೩೬
ಕುಂದೀಽಸಿ ನುಡಿದಽರೆ, ನಿನಗೇನ ಎಲೆ ಹೆಣ್ಣ
ನಾನಿದ್ದಮ್ಯಾಲೆ ಭಯವೇನ | ನನ ಗೆಣತಿ
ನೂರು ಬಿದ್ದಾರು ಗೆಲುವೇನ ೩೭
ಹೋಳಿ ಏರಿಕೆ:- ಹಾಡು ಹಾಡಂದಽರೆ, ನಾನೇನು ಹಾಡಽಲೆ
ಹಾಡೊ ನನ ಗೆಣೆಯ ನನಮ್ಯಾಲೆ | ಮೂಡಣ
ಜಾಣ ಕೂರಿಽಗೆ ಹೊಡೆದ್ಹಾಂಗ ೩೮
ನೀರಾಗ ನಿಂತಿರುವ, ನೀಲಿ ಪಾವುಡದಣ್ಣ
ನೀರ ಕೆಟ್ಟಾವೊ ಬದಿಗಾಗೊ | ಗಂಡುಳ್ಳ
ಬಾಲಿ ಕೆಟ್ಟಾಳೊ ನಿನಗಾಗಿ ೩೯
ಹೋಲಿ ಗತ್ತು:- ಗೆಣತಿ ಗೆಣೆಯನ ಜಾತ್ರಿ, ಕೆಲವಽಡಿ ರಂಗನದ
ಎಲ್ಲವ್ನ ಜಾತ್ರಿ ಜೋಗ್ತೇರ್ದ | ಕೂಡಲ
ಸಂಗಯ್ನ ಜಾತ್ರಿ ಶರಣರದ ೪೦
ಜಾತ್ರಿಽಗೆ ಹೋಗ್ತೀನಿ, ಜವನಾವ ತರ್ತೀನಿ
ಹೂವ ತರ್ತೀನಿ ತುರುಬಿಽಗೆ | ಎಲೆ ಹುಡುಗಿ
ಬಂದಿ ತರ್ತೀನಿ ಬಲಗೈಗೆ ೪೧
ಹೋಳಿ ಏರಿಕೆ:- ಜಾತ್ರಿಗ್ಹೋಗ್ತಿನಂತ, ರಾತ್ರ್ಯಾಗ ಎದ್ದಾಳ
ಗೋತ್ರದ ತುಂಬ ಕರಿಗಡಿಬ | ಕಟಿಗೊಂಡು
ಜಾತ್ರ್ಯಾಗ್ಹುಡಿಕ್ಯಾಳ ಗೆಣಿಯನ್ನ ೪೨
ಹುಡಗೀಯ ಕರಕೊಂಡು, ಹುಡುಗ ಜಾತ್ರಿಗ್ಹೋದ
ಹುರುಗಡಲಿ ಬೆಲ್ಲ ಉಡಿಯಾಗ | ಕಟಿಗೂಂಡು
ಹುಡಗಿಽಯ ಕೈಗೆ ಬಳೆಯಿಟ್ಟ ೪೩
ಹೋಳಿಗತ್ತು:- ಈಟೀಟ ಮೊಲೆಯವಳ, ಚೀಟ ಕುಪ್ಪಸದವಳ
ಬ್ಯಾಟಿ ಹೋಗತೀನಿ ಕೈಬಿಡ | ಮಲ್ಲಾಡ
ಜೇನ ತರತಿಽನಿ ಸವಿನೋಡ ೪೪
ಗುತ್ತಿಗೆ ಮಲನಾಡ, ಎತ್ತು ಮಾರಲು ಹೋದೆ
ಒತ್ತಿಽಯ ಬಿದ್ದೆ ತಡವಾಯ್ತ | ನನ ಗೆಣತಿ
ಚಿತ್ತ ನಿನಮ್ಯಾಲೆ ಸೆಡುಬ್ಯಾಡ ೪೫
ಹೋಳೀ ಏರಿಕೆ:- ಗೆಣಸಿನ್ಹೋಳಿಗಿ ಮಾಡಿ, ಎಣಿಸಿ ಗಂಗಳಕ್ಹಾಕಿ
ನೆನಸಿದ ಗೆಣೆಯ ಬರಲಿಲ್ಲ | ಆ ಹುಡಗಿ
ಮನಸಿನಾಗ ಮರಗಿ ಅಳತಾಳೊ ೪೬
ಮುಗಿಲಮ್ಯಾಗಿನ ಚಿಕ್ಕಿ, ಹಗಲಮೂಡಿದರೇನ
ಅಗಲಿ ಇರುವವನ ಗೊಡವೇನ | ಮಾಣಽಕ
ಹಾವಿನ ಬದಿಲಿದ್ದು ಫಲವೇನು ೪೭
ಹೋಳೀಗತ್ತು:- ಈ ವರುಷ ಬಂದೀನೆ, ಮೀಸಿಯ ತಿದ್ದಿಽನೆ
ವಸ್ಯಾಡಬ್ಯಾಡ ನನಗೂಡ | ಎಲೆ ಹುಡುಗಿ
ಬೇಸ್ಹ್ಯಾಂಗ ಬೆಳಗು ಕಳಿಯೋಣ ೪೮
ಅಟೀಟ್ಕ ಸೆಟಿಗೊಂಡು, ಮಾರಿಕಟಿಗೊಳ್ಳು ಹೆಣ್ಣ
ಸಿಟ್ಟು ಸೆಡುಬ್ಯಾಡ ನನಮ್ಯಾಲ | ನನ ಗೆಣತಿ
ನಕ್ಕಾಡಿ ಬೆಳಗುಗಳಿಯೋಣ ೪೯
ಹೋಳಿ ಮಲ್ಲಿಗೆ:- ಮಲ್ಲೀಗೆ ದುಂಡ ಮಲ್ಲಿಗೆ ||ಪ||
ಗೆಣೆಯನ್ನ ಕಳಕೊಂಡ, ಒಣಮಾರಿ ಮಾಡಿಕೊಂಡ
ಮಣಮಣಿಸಿ ಊರ ತಿರುಗ್ಯಾಳೊ ಮ
ಮಣಮಣಿಸಿ ಊರ ತಿರುಗ್ಯಾಳ ಅಗಸ್ಯಾಗ
ಹಣಿ ಹಣಿ ಬಹಕೊಂಡು ಅಳತಾಳ ಮ ೫೦
ಗೆಣೆಯ ಬಿಟ್ಟರು ಕೂಡ, ಗೆಣೆಯನಾಡೀದಾಟ
ಮನದಾಗ ಊರಿ ನಿಂತಾವೊ ಮ
ಮನದಾಗ ಊರಿ ನಿಂತಾವ ಆ ಹುಡಗಿ
ಚೆಣಚೆಣಕ ನೆನಸಿ ಅಳತಾಳ ಮ ೫೧
ಹೋಳಿಗತ್ತು:- ಕಟ್ಟಿರಿವಿ ಕಂದ್ಹಾಕಿ, ಎಂಟು ಮಗಿ ಹಾಲ್ಹಿಂಡಿ
ನೆಂಟರು ಉಂಡು ನೆಲವುಂಡೊ | ಈಗಿನ
ಕುಂಟ್ಲೇರು ಉಂಡು ಕುಡಿಕುಂಡೊ ೫೨
ಬೇಲಿ ಮ್ಯಾಗಿನ ಹೂವ, ಬೆಳ್ಳಗಿದ್ದಽರೇನ
ಮಲ್ಲಿಗಿಯಂತ ಗಂಡನ | ಬಿಟಕೊಟ್ಟು
ಹುಲ್ಲು ಕೊಯ್ಯವನ ಹುಡುಕ್ಯಾಳ ೫೩
ಹೋಳಿ ಏರಿಕೆ:- ಸೂಳೀಗೆ ಹೋದಾವ, ಏನಾದ ಎಂತಾದ
ಕಾಡನಾಯಾದ ಕಪಿಯಾದ | ಮರುದಿನ
ಸೂಳಿ ಕಾಲಿಽಗೆ ಕೆರುವಾದ ೫೪
ಹುಡಗೀಯ ಕೂಡಾಡಿ, ಹುಡುಗ್ಯಾಕ ಬಡವಾದ
ಬಂಗಾರ ಒತ್ತಿ ಬಳಿ ಒತ್ತಿ | ಆದಾವ
ಸಣ್ಣ ಸೀರೊತ್ತಿ ಸವೆದ್ಹೋದ ೫೫
ಹೋಳಿ ಮಲ್ಲಿಗೆ:- ಮಲ್ಲೀಗೆ ದುಂಡ ಮಲಿಗೆ ||ಪ||
ಸಂಜಿ ಅಕ್ಕಿ ಕುಟ್ಟಿ, ಕೆರೆಯ ನೀರಿಗೆ ಹೋಗಿ
ವಜ್ಜರುಂಗರದ ಚೆಲುಽವನ ಮ
ವಜ್ಜರುಂಗರದ ಚೆಲುವನ ಕೂಡಾಡಿ
ಗುದ್ದಾಡಿ ಬಳಿಯ ಒಡಕೊಂಡೆ ಮ ೫೬
ಸೂಳಿಗೆ ಹೋಗವನೆ ಸುಲಿದು ಮಟ್ಟಿಽ ಕಟ್ಟಿ
ಊರ ಹೊರಗವನ ಹೆಡಮುರಗಿ ಮ
ಊರ ಹೊರಗವನ ಹೆಡಮುರಗಿ ಕಟ್ಟಿದರ
ಸೂಳೆಂಬು ಸಬುದ ಬಿಡಲಿಲ್ಲ ಮ ೫೭
ಹೋಳಿ ಗತ್ತು:- ಹಾರೂರ ಹುಡಗಿಽಗೆ, ಹಾರಾಟ ಬೇಕಾಗಿ
ಜೀರ ಹುಡುಗನಿಗೆ ಕೂಡ್ಯಾಳೊ | ಮಲ್ಲಿಽಗಿ
ಸೂರಿ ಮುತ್ತಿಟ್ಟ ಬೆಳತನಕೊ ೫೮
ಮಂಗ ಮುಸಲರ ಹುಡಗಿ, ಚೊಂಗೇವ ಮಾಡ್ಯಾಳ
ಜಂಗಮರ ಹುಡುಗ ತಿನವೊಲ್ಲ । ಆ ಹುಡುಗಿ
ಜಂಗ ಕಟಿಗೊಂಡು ಕುಣಿದಾಳೂ ೫೯
ಹೋಳಿ ಏರಿಕೆ:- ಹಾಡಿಗೆ ಹಾಡಿಲ್ಲ, ಏಡಿಗೆ ತಲೆಯಿಲ್ಲ
ಮೋಡ ಬಂದಲ್ಲಿ ಬಿಸಲಿಲ್ಲ | ಹೆಣ್ಣಿಗೆ
ಓಡಿ ಹೋದಲ್ಲಿ ಸುಖವಿಲ್ಲ ೬೦
ಗಂಡನ ಹಿತವೇನ, ಕೆಂಡದ ತಂಪೇನ
ಕೊಂಡ ಮಜ್ಜಿಗೆ ರುಚಿ ಏನ ಎಲೆ ಗೆಣೆಯ
ಭಂಡಾಗಿ ಬದುಕ ಫಲವೇನ ೬೧
ಹೋಳಿ ಗತ್ತು:- ಗಂಡು ಹೊಡಿಯಲಿ ಭೂಮಿ, ಹೆಣ್ಣು ಹೂಡಲಿ ಒಲಿಯ
ಬಣ್ಣ ತೊಟ್ಟಿಲ ತೂಗಽಲಿ | ಶಿವರಾಯ
ಗಿಣ್ಣ ನಿನಗೆಡೆಯೊ ಕೈಮುಗಿದು ೬೨
ಹೋಳಿಯಾಡದ ನಾಡು, ನಾಳೆನದೆ ಕಾಡಾತೊ
ಗೋಳಾತೊ ಜನಕ ಮೂಲಾತೊ | ಮಳೆಹೋಗಿ
ಹಾಳಾತೊ ಪಿಡಗೆದ್ದು ದಿನದಿನಕೊ ೬೩
*****
















