Home / ಕವನ / ಕವಿತೆ / ಕಪ್ತಾನ

ಕಪ್ತಾನ

ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು:
ದೂಷಿಸುವರು ನನ್ನನ್ನು ಮಹಾಪಾತಕಿಯೆಂದು.
ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ!
ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು.
ಆನೆಯ ತಲೆ-ಮುತ್ತನುದುರಿಸಲು ಕಾಲೆತ್ತಿದ ಸಿಂಹಕುಸಿರಿರಿ-ಸೊಕ್ಕದಿರೆಂದು.

ಹುಲ್ಲೆಯ ಹಿಡಿದ ಹುಲಿಯ ರಂದಬಿಸಿರಿ-ಬಿಟ್ಟುಬಿಡೆಂದು.
ಹುಚ್ಚುಮಾತಿದು! ಬಲವಿದ್ದರೆ ಗುದ್ದು,-ಇಲ್ಲದಿರೆ ಗುದ್ದಿದೆನಿದೊ!
ಜೀವವ ಹಿಂಡಿ ಬದುಕುವೆಸಕ ಸಹಜವೆಂಬುದ ತಿಳಿಯದಿಹರೆ?

ಪ್ರಭುತ್ವವನೆಂತು ಬಿಡಲಿ? ರಾಜ್ಯವನೆಂತು ಒಲ್ಲೆನ್ನಲಿ?
ಒಲ್ಲೆಂದರೆ ಬಂದು ಪಾದಕೆ ಬೀಳುವರು ರಾಜಾಧಿರಾಜರು,
ತೆರವಾದ ಕಿರೀಟಗಳು ಬಂದು ಮೆರೆಯುವವೆನ್ನ ತಲೆಯ ಮೇಲೆ,
ಗತಿಗೆಟ್ಟ ರಾಜ್ಯಗಳಾಮಂತ್ರಿಸುವವೆನ್ನನಾಳಲಿಕ್ಕೆ-
ಗೊಂಬೆಗಳಂತೆ ಜನರೊಪ್ಪಿಸುವರೆನಗೆ ರಾಜ್ಯಸೂತ್ರಗಳನ್ನು!

ನೀರು, ಮುಗಿಲು, ನೆಲ, ಗಾಳಿಯಾಕಾಶ-ಇವೆಲ್ಲ
ಬಲ್ಲವೆನ್ನ ಶಕ್ತಿಯನು! ಪ್ರಕೃತಿ ನನ್ನಯ ದಾಸಿ.
ನನ್ನ ಶೋಧವು ಪ್ರತಿಸೃಷ್ಟಿ,-ಅಮೃತವನೊಂದುಳಿದು ನನ್ನದೆಲ್ಲ!
ಇದನೆಲ್ಲ ಗುಬ್ಬಿಮಾನವರೊಡನೆ ಪುಕ್ಕಟೆಯಾಗಿ ಹಂಚಿಕೊಡುವದೆ?
ದುಡಿಯಲಿ ಆಳಾಗಿ,-ಪಡೆಯಲಿ ಸಾಮಗ್ರಿಗಳನ್ನು!
ಮಾನವನು ನಾನು; ಸೊಕ್ಕಿದೆ ನನಗೆ! ನಿರ್ಲಿಪ್ಮ ನಿರ್ಜರನಲ್ಲ!

ಕಪ್ಪುಬಣ್ಣದವನು ನನ್ನೆದುರು ಮೈಮುರಿದು ದುಡಿಯುವಾಗ-
ನಾಯಿಯು ಮೂಸದ ಹೇಸಿಗೆಯನ್ನು ಹೊತ್ತು ಹೊತ್ತು ತರುವಾಗ-
ನನಗೆ ಹೊಳೆಯುವದೊಮ್ಮೊಮ್ಮೆ,-ನಾನು ಮಾಡಿದುದು ತಪ್ಪೆಂದು.
ಹುಲುಸಾಗಿ ತಿಂದು ಮದಿರೆಯ ಕುಡಿದು ನಾನು ಮನಬಂದಂತೆ ಕುಣಿವಾಗ-
ಹಗಲೆಲ್ಲ ದುಡಿದು ಹಣ್ಣಾಗಿ ಮತ್ತೆ ಹಡಗವ ನಡೆಸಲವನು ನಿಂತಿರಲು-
ಕಣ್ಣು ಮುಚ್ಚಿ ಯಂತ್ರದ ಮೇಲೆ ಕೈಯಿಟ್ಟು ಮನೆಯ ಮಂತ್ರವ ಜಪಿಸುತಿರಲು,-
ನನಗೆನಿಸುವದು ಕ್ಷಣಕ್ಷಣಕೆ,-ನಾನು ಮಾಡುವದು ತಪ್ಪೆಂದು.
ಪ್ರೀತಿಯೆಲ್ಲ ಪ್ರೇತವಾಗಿ ಪ್ರೇಮವೆಲ್ಲ ಕಾಮವಾಗಿ, ಒಗೆತನವೆಲ್ಲ ಹಗೆತನವಾಗಿ
ಪರಿಣಮಿಸಿದಾಗ,-ತಲೆಯೆಲ್ಲ ಭ್ರಮಿಸಿದಾಗ-
ಅರೆನಿಮಿಷ ಕಂಪಿಸುವದೆದೆಯೆಲ್ಲ,-ನಾನು ಮಾಡಲಿಹುದು ತಪ್ಪೆಂದು.

ಮತ್ತೆ ಎಚ್ಚರಿದು ನೋಡುವೆನು ನನ್ನ ಹಡಗವನ್ನು.
ಮುನ್ನೀರನೆಂತು ಭೇದಿಸಿ ಪಯಣ ಬೆಳೆಸಿದೆ ನೋಡು!
ಈ ಮಹಾದ್ಭುತವ ಬಿಟ್ಟು ವಿನಯದಿಂದಿರಬೇಕೆ?
ಆಗದು! ಅದಾಗದು! ದೈವಪರೀಕ್ಷೆಯಾಗಿಬಿಡಲಿ!
ಹೊನ್ನಿನ ಗಟ್ಟಿಯಂತೆ ಗಟ್ಟಿಯಾಗಿದೆ ನನ್ನ ದೈವವಿಲ್ಲಿಯವರೆಗೆ!
ಅದು ಪೊಳ್ಳಿದ್ದರೆ,-ಹಾಗೊಮ್ಮೆ ಅನುಭವ ಬರಲಿ!
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...