ಉಂಡು ಆಡುತ್ತಿದ್ದ ಮಗ, ಗೌರಮ್ಮನ ಮುದ್ದು ಮಗ, ಶಾಂತಪ್ಪನ ಕಿರೇಮಗ ಏಕಾಏಕಿ ಪರಾರಿ, ಎಲ್ಲಿ ಹೋದನ್ರೀ ನಮ್ಮ ಹುಡುಗ? ಎಲ್ಲಿ ಹೋದನ್ರೀ ನಮ್ಮ ಹುಡುಗ? ಇದೇ ಪ್ರಶ್ನೆ; ಇದೇ ಸಂಕಟ; ಇದೇ ಗೋಳು.
ಶಾಂತವೀರಪ್ಪನಿಗೆ ಗಂಟಿತ್ತು. ಎತ್ತಿಕೊಂಡು ಹೋಗುವ ವಯಸ್ಸೆ? ಅದಲ್ಲ ಮಗನದು. ಹರೆಯ ತುಳಕಿ ಬಂದಿತ್ತು….ಹೆಣ್ಣಿನ ಜಾಡು ಹಿಡಿದ ಹೋದನೆ! ಛೇ! ಅರಿಯದ ಕಂದಮ್ಮ! ಗೌರಮ್ಮನ ಮಗ!
ಹುಡುಗನ ಗತಿ ಏನಾಯಿತ್ರಿ! ಈ ದಂಪತಿಗಳ ಸಂಕಟ ನೋಡಲಿಕ್ಕಾಗದು. ಹುಡುಗ ಚಿಕ್ಕ ಕೂಸಿನಲ್ಲೆ ಚೆಲುವನಿದ್ದ. ಆದರೆ ಆ ಚೆಲುವು ವಯಸ್ಸಿಗೆ ಬರುವ ತನಕ ನಷ್ಟವಾಗದಿತ್ತು, ಎಂದು ಭಾವಿಸಿರಿ. ನಾಜೋಕಿನಲ್ಲಿ ಬೆಳೆಯದ ಹುಡುಗರು ಹೇಗೋ ಇರುತ್ತಾರೆ ಆದರೂ ಪರವಾಯಿಲ್ಲ. ಸ್ವಲ್ಪ ಸದೃಢನಾಗಿದ್ದ. ಈಜು ಬಲ್ಲ. ಗಾಡಿ ಹೊಡೆಯಲು ಬಲ್ಲ. ಬೀಡಿ ಸೇದುವುದು ಕಲಿತಿದ್ದನೋ ಇಲ್ಲವೋ ಅವನನ್ನೆ ಕೇಳಬೇಕು. ಆದರೆ ಅವನಿದ್ದರಲ್ಲವೆ ಕೇಳುವುದು. ಲೋಯರ್ ಸೆಕೆಂಡರಿಗೆ ಎರಡುಬಾರಿ ಕೂತ. ಅಪ್ಪ, ವಿದ್ಯೆ ಬೇಡ ಎಂದು ಗಾಡಿ ಹೊಡೆಯಲಿಕ್ಕೆ ನೇಮಿಸಿದ್ದ. ಆಗಾಗ್ಗೆ ಕಿರಾಣಿ (ದಿನಸಿ) ಅಂಗಡಿಯಲ್ಲಿ ಕೂತು ತನಗೆ ಬುದ್ದಿ ತೋರಿದಂತೆ ವ್ಯಾಪಾರ ಮಾಡುತ್ತಿದ್ದ.
ಹುಡುಗ ಜಾಣನೆ?-ಅಲ್ಲ. ತಿಳುವಳಿಕೆಯುಳ್ಳವನೆ? ನೀವು ಹಾಗೆಂದು ಹೇಳಲಾರಿರಿ. ಅಮ್ಮ ಹೊಡೆದರೆ ಹೊಡೆಸಿಕೊಳ್ಳುತಿದ್ದ, ಅಪ್ಪನಿಗೆ ಹೆದರಿ ದೂರವಿರುತ್ತಿದ್ದ. ಇಂಥ ಸಾಧು, ಸಭ್ಯ ಸುಪುತ್ರ ಒಂದೇಬಾರಿ ತಟಕ್ಕನೆ ಕಣ್ಣು ಮರೆಯಾದರೆ ಪ್ರೇಮದ ತಂದೆತಾಯಿಗಳ ಎದೆ ಏನಾಗಬೇಕು?
ಸಣ್ಣಿಗೆ ಅಪ್ಪ ಹೆಣ್ಣು ನೋಡಿದ್ದ; ತಮ್ಮ ತಾಯಿ ಕಡೆಯಲ್ಲಿ. ಒಂದೆರಡು ಸಾರಿ ಬೀಗರು ಬರುವುದು, ಹೋಗುವುದು ಆಗಿತ್ತು. ಇನ್ನೇನು ದಿನ ಒದಗಲಿ ನಿಶ್ಚಯಕ್ಕೆ ಅನ್ನೊ ಹೊತ್ತಿಗೆ ಈ ಮುರಾರಿ-ಪರಾರಿ.
ಶಾಂತಪ್ಪ ಜೋಯಿಸ ನೋಡಿಸಿದ-ಮಗನೆಲ್ಲಿ? ಯಾವಾಗ ಬರುತ್ತಾನೆ? ಅದೇನಾದ್ರೂ ಆಗಲಿ, ಜೀವದಿಂದಿದ್ದಾನೊ? ಇತ್ಯಾದಿ ಪ್ರಶ್ನೆಗಳ ಬಗ್ಗೆ.
ಪ್ರಶ್ನೆಯಲ್ಲಿ ಹೊರಟಿತು, ಉತ್ತರದಲ್ಲಿದ್ದಾನೆ; ಜೀವನಕ್ಕೆ ಕಷ್ಟ; ಶ್ರಮಮಾಡಿ ಊಟಮಾಡಬೇಕು. ಪ್ರಾಣಕ್ಕೆ ನಷ್ಟವಿಲ್ಲವೊ? ಇರಲಾರದು! ಯಾವಾಗ ಬರುತ್ತಾನೆ-ಎಂಬುದಕ್ಕೆ ಜೋಯಿಸನಿಂದ ಉತ್ತರ ಬರಲಿಲ್ಲ. ಆದರೆ ಪ್ರಯತ್ನ ಮಾಡಿ, ಎಂದ ಮಾತ್ರ.
ಬಲು ದುಗುಡ ಹತ್ತಿಕೊಂಡಿತು. ಊರವರೆಲ್ಲ ಸಹಾನುಭೂತಿ ತೋರಿದರು. ಶಿವಮುಖ, ಬೆನ್ನೂರು, ದೇವನೂರು, ಸಮುದ್ರದೂರು, ಏರಿ ಕೆಳಗೆ, ಕೆರೆ ಮೇಲೆ, ಹಳ್ಳದ ತಡಿಯಲ್ಲಿ ಎಲ್ಲಾ ಕಡೆ ಹುಡುಕಿದರು, ಹುಡುಕಿಸಿದರು. ಎಲ್ಲಿ ಸಿಕ್ಕ ಬೇಕು? ಕೆಲವು ವಯಸ್ಸಿನವರು, ಎಲ್ಲಿ ಹೋದನಲೆ ಈ ಮಂಗ್ಯ!? ಎಂದರು. ಗೌರಮ್ಮ ಈ ಮಾತು ತಿಳಿದು ಜಗಳಕ್ಕೆ ಹೋದಳು-ತನ್ನ ಮಗನಿಗೆ ಮಂಗನೆಂದಿದ್ದಕ್ಕಾಗಿ.
ಆಗ ಕಾಲ ಬಲು ತೀವ್ರವಾಗಿತ್ತು. ಮಹಾತ್ಮರು ಉಪ್ಪಿನ ಸತ್ಯಾಗ್ರಹ ಹೂಡಿ, “ಪ್ರಾಣಹೋದರೂ ಸರಿ!” ಎಂದು ಸ್ವಾತಂತ್ರ ತರಲು ಆಶ್ರಮ ಬಿಟ್ಟು ಚಳುವಳಿಗಾಗಿ ಹೊರಟಿದ್ದರು. ದಂಡಿ! ದಾರಸಾನ! ವಡಾಲ! ಈ ಹೆಸರುಗಳು ಮೈ ರೋಮಗಳನ್ನು ನಿಮಿರಿ ನಿಲ್ಲುವಂತೆ ಮಾಡುತ್ತಿದ್ದವು. ಸತ್ತವರು! ಜೈಲು ತುಂಬಿದವರು! ಅಂಗಾಂಗಗಳನ್ನು ಕಳೆದುಕೊಂಡವರು! ಹೆತ್ತವರು, ಹೊತ್ತವರು, ಅಣ್ಣತಮ್ಮಂದಿರು ……… ಎಂಥ ಉದ್ವೇಗ ಪರಿಸ್ಥಿತಿ! ದೇಶ ಪ್ರೇಮಿಗಳು ಕಠೋರ ಧ್ವನಿಯಿಂದ ಕೂಗಿದರು, ‘ನಮಗೆ ಸ್ವಾತಂತ್ರ್ಯ ಬಂದೇ ಬರುವುದು!’ ಎಂದು. ಎಲ್ಲರೂ ಹಾಗೇ ತಿಳಿದಿದ್ದರು. ದೇಶದಾದ್ಯಂತ ಎಲ್ಲೂ ಇಲ್ಲದ ನಿರ್ಧಾರ, ಆತ್ಮಗೌರವ, ಭರವಸೆ ತುಂಬಿದವು; ತುಳುಕಿದವು ಆಹ! ಸ್ವಾತಂತ್ರದ ಕಲ್ಪನೆಯೇ ಇಂಥ ಉತ್ಸಾಹವನ್ನು ತರುವುದಾದರೆ, ಸ್ವಾತಂತ್ರ ಲಭ್ಯವಾದಾಗ ಇವರೆಷ್ಟು ಸುಖಿಗಳಾದಾರು!
ಸಾಯುವ ವೃದ್ದ, “ನನ್ನ ಪ್ರಾಣ ಇನ್ನು ಕೊಂಚ ದಿನ ಎಳೆಯಲಿ; ನನ್ನ ದೇಶದ ಸ್ವಾತಂತ್ರ ನೋಡಿ ಸಾಯುತ್ತೇನೆ” ಎಂದನು. ಈ ಊರಿನ ತಿಳಿಯದ ಮುದುಕಿ, ‘ಗಾಂಧಿ ಕಚೇರಿ ಕೆಡಿಸಿದನಂತೆ; ನಮ್ಮ ಜನ ದೌಲತ್ತು, ಮಾಡುತ್ತಾರಂತೆ,” ಎನ್ನುವಳು. ‘ನಹಿರಕನ, ನಹಿರಕನ’ ….ಎಂಬ ಹಾಡು ನಿಷೇಧವಾಗಿದ್ದರೂ, ಎಲ್ಲೆಲ್ಲೂ ಕೇಳಿಸುವುದು. ಹೊಟ್ಟೆಯುರಿಯಿಂದ ಜನ, ಹೆಣ್ಣು, ಗಂಡು ಎಲ್ಲರೂ ಇದನ್ನೇ ಹಾಡುವರು.
ಸತ್ಯಾಗ್ರಹಿಯಿಂದ, ಕಾನೂನು ಭಂಗಮಾಡಿ ತಂದ ಉಪ್ಪಿನ ಹರಳೊಂದನ್ನು ಒಬ್ಬ ವರ್ತಕ ೪ಂ ರೂಪಾಯಿಗೆ ಕೊಂಡು ಊರವರಿಗೆ ತೋರಿಸಿದ. ಈ ಊರಿನವರು ಒಂದೇ ಬಾರಿಗೆ ಖಾದೀ ಪ್ರೇಮಿಗಳಾದರು ತರುಣರ ತಲೆ ಕೆಟ್ಟು ಹೋಯಿತು. ಒಂದು ಪತ್ರಿಕೆ ಒಬ್ಬರ ಮನೆಗೆ ಬಂದರೆ ಮೂವತ್ತು ಜನ ಕೂತು ಓದಿಸಿ ಕೇಳುವರು; ಕೇಳಿ ಉಸುರು ಕರೆವರು. ತ್ಯಾಗಿಗಳ ಕಥೆ ಕೇಳಿ-ಪುಣ್ಯಾತ್ಮರೆನ್ನುವರು.
ಶಾಂತವೀರಪ್ಪನಿಗೆ ಮನಸ್ಸಿಗೆ ಆಗಾಗ ಬಾಧಿಸುವುದು ತನ್ನ ಮಗನೂ ಚಳುವಳಿಗೆ ಸೇರಿದನೋ? “ಆದರೆ ಈ ಬೆಪ್ಪು, ಚಳುವಳಿ ಏನು ಮಾಡುತ್ತಾನೆ?” ಜೋಯಿಸ ಹೇಳಿದ್ದ ಉತ್ತರ ದೇಶದಲ್ಲಿ; ಅನ್ನಕ್ಕೆ ಕಷ್ಟ……..” ಇರಬಹುದು! ಜೈಲಿನಲ್ಲೊ, ಎಲ್ಲೊ. ಕೈ ಕಾಲು ಮುರಿದು ಕೊಂಡಿದ್ದರೆ ಏನುಗತಿ? ಗೌರಮ್ಮ-ಕಿರಿಯಮಗ-ತಲೆಯಲ್ಲಿ ಬಿಳಿ ಕೂದಲು ಕಾಣಿಸುವಾಗ ಹೆತ್ತಳು-ಈಗ ಮುದುಕಿ; ಅಳುತ್ತಾಳೆ. ಉಳಿದ ಮಕ್ಕಳು ಇವಳನ್ನು ಗದರಿಸಿಕೊಳ್ಳುವರು. ಕೇಳಿದ ಹೆಂಗಸು ಹೊಟ್ಟೆಯ ಅಳಲಿನಿಂದ “ಪಾಲಿಗೊಬ್ಬ ಕಡಿಮೆಯಾದನೆಂದು ನಿಮಗೆ ಸಮಾಧಾನ ಏನೊ?” ಎಂದು ಕೆಟ್ಟ ಮಾತಾಡುವಳು.
ಇವರ ಊರು, ಗಡಿ; ಬ್ರಿಟಿಷ್ ಪ್ರಾಂತದಿಂದ ಜನ ಬಂದು ಹೋಗುವುದು. ಚಳುವಳಿಗಾರರು ತಲೆಮರೆಸಿಕೊಂಡು ಗಡ್ಡಮೀಸೆ ಬಿಟ್ಟು ಅಲ್ಲಲ್ಲಿ ಸಂಚರಿಸುವುದೂ ಉಂಟು. ಅವರೊಂದಿಗೆ, ಈತ, ತನ್ನ ಮಗನನ್ನು ನೋಡಿದ್ದರೆ ಕಳಿಸಿಕೊಡಿ ಎಂದು ಅಂಗಲಾಚುವನು. ತನಗೆ ತಿಳಿದವರಿಗೆಲ್ಲ ಪತ್ರ ಬರೆಯುವನು. ಊರಿನ ಜನಕ್ಕೆ ಇವರ ಚಪಲ ನೋಡಿದರೆ ಆಗದು. “ಏನು ಕೂಸೇ? ಹೋದವ ಬರ್‍ತಾನೆ!” ಎನ್ನುವರು.
ಆ ಕಾಲದ ಕಾವಿನುಬ್ಬರದಲ್ಲಿ ಎಲ್ಲರೂ ತ್ಯಾಗಿಗಳ ಬಗ್ಗೆ ಮಾತನಾಡುತ್ತಾ ಆದರ ತೋರುವಾಗ, ಅಂಥ ತ್ಯಾಗಿಗಳು ಬಂದರೆ ಗೌರವಿಸುವಾಗ, ಏಕಾಂಗಿಯಾಗಿ, ಈ ವಿಸ್ತಾರ ಸಾಗರಾವೃತವಾದ ಹಿಂದೂ ಭೂಖಂಡದಲ್ಲಿ ಏನೂ ಪ್ರಚಾರವಾಗದೆ, ಮೌನವಾಗಿ, ದೇಶಸೇವೆಗಾಗಿ ಅಡಗಿಹೋದ ಸಣ್ಣಿ-ಸಣ್ಣಪ್ಪ-ಸಣ್ಣತಮ್ಮಣ್ಣನ ಬಗ್ಗೆ ಜನತೆ ತತ್‌ಕ್ಷಣದಲ್ಲಿ ಅಪೂರ್ವ ಗೌರವವನ್ನು ತಾಳಿತು.
ಅಕೋಲಾ ಜೈಲಿನಲ್ಲಿದ್ದವನೊಬ್ಬ ಅಹಮದ್ ನಗರದಲ್ಲಿ ಸೇರ್ಪಡೆ ಯಾದಾಗ ಕರ್ಣಾಟಕದ ಸತ್ಯಾಗ್ರಹಿಯೊಬ್ಬನನ್ನು ಕಂಡ ಹಾಗೂ, ಅವನಂಥ ಸತ್ಯಾತ್ಮ, ಅಹಿಂಸಾವ್ರತಿ ವಿರಳ, ಅತೀವ ವಿರಳ ಎಂದು ಉದ್ಗಾರ ತೆಗೆದ ಹಾಗೂ, ಈ ಬಾಲಯೋಧನ-ಸತ್ಯಾಗ್ರಹಿಯ ಚಹರೆ ನಮ್ಮ ಸಣ್ಣಿಯನ್ನೆ ಕೇವಲ ಹೋಲುತ್ತಿದ್ದ ಹಾಗೂ, ಕರ್ಣಾಕರ್ಣಿಕೆಯಾಗಿ ಸುದ್ದಿ ಇವನ ತೌರೂರಿಗೆ ಬಂದು ಬಡಿಯಿತು.
ಜನ ಚಕಿತರಾದರು! ತಮ್ಮ ಊರಿನವನೊಬ್ಬ ಚರಿತ್ರೆಯಲ್ಲಿ ಹೆಸರನ್ನು ಸ್ಥಿರಪಡಿಸಿದವನಾದ; “ಸ್ವಾತಂತ್ರ್ಯ ಸಮರಕ್ಕೆ ಕರೆ ಬಂದಾಗ ಸಡ್ಡು ಹೊಡೆದು ಧುಮಿಕಿದ!” “ಯಾವ್ಯಾವ ವರ್ತಮಾನ ಪತ್ರದಲ್ಲಿ ಅವನ ಹೆಸರು ಬಂದಿತ್ತೊ! ಛೇ, ನಾವು ನೋಡಲೇ ಇಲ್ಲವಲ್ಲ!” ಎಂದು ಜನ ನೀಡಿದರು.
ಅಭಿಮಾನವೆಂಬುದು ಜೀವಮಾನದಲ್ಲಿ ಹತ್ತಿರ ಬಾರದಿದ್ದ ತಂದೆತಾಯಿಗಳು ಅಭಿಮಾನದಿಂದ ಮೈಯುಂಡರು-ತಮ್ಮ ಮಗ ತನಗೂ, ತಮಗೂ, ತಮ್ಮ ಊರಿಗೂ ಕೀರ್ತಿ ತಂದನೆಂದರು.
ಸ್ವಾತಂತ್ರ ಬರಲಿಲ್ಲ ಯುದ್ಧ ಮಾಡಿ ಬೇಸತ್ತಂತೆ ಜನಕ್ಕೆ ಆಗಿತ್ತು. ಗಾಂಧಿ-ಇರ್‍ವಿನ್ ಒಪ್ಪಂದ…. ಜನ ವಿರೋಧಿಸಲಿಲ್ಲ. ಅಂತೂ ಕೊನೆಯಾಯಿತಲ್ಲ! ಎಂದು ಜನ ಸಮಾಧಾನ ತಳೆದರು. ಒಪ್ಪಂದವಾಗಿಯೂ ಹೋಯಿತು. ಗಾಂಧಿಯವರು, “ಉಭಯಪಕ್ಷಕ್ಕೂ ಈ ಒಪ್ಪಂದ ಅಪಮಾನಕಾರಿಯಲ್ಲ,” ಎಂದರು ಜೈಲಿನಿಂದ ಜನ ಬಂದಿತು. ಅತ್ಯಂತ ಉತ್ಸಾಹದಿಂದ ಅವರಿಗೆ ಸ್ವಾಗತ ನಡೆಯಿತು. ಅವರವರ ಊರುಗಳಲ್ಲಿ ಈ ತ್ಯಾಗಿಗಳನ್ನು ಸ್ವಾಗತಿಸಿದರು; ಆರತಿ ಎತ್ತಿಸಿದರು ; ಆಲಿಂಗಿಸಿ, ಸಭೆ ಸೇರಿಸಿ ಗೌರವಿಸಿದರು.
ಈ ಊರಿಗೆ ಆ ಉತ್ಸನ ಲಭ್ಯವಾಗಲಿಲ್ಲ. ಸ್ವಾತಂತ್ರ ಸಾಧಿಸಲು ಇಲ್ಲಿಂದ ತೆರಳಿದ್ದ ವೀರಯೋಧ, ಕಾಂಗ್ರೆಸ್ ಶಿಪಾಯಿ ಬರಲಿಲ್ಲ. ತಂದೆ ತಾಯಿಗಳಿಗೆ ನಿರುತ್ಸಾಹವೆನಿಸಿತು.
ಜನಗಳಿಗೆ ಸಮಾಚಾರ ಹೇಗೆ ಗೊತ್ತಾಗುವುದೂ ತಿಳಿಯದು! ಅರಮನೆಯಲ್ಲಿನ ಒಳಮನೆಯ ಸಮಾಚಾರವನ್ನಾದರೂ ಕೇಳಿ, ಸೆರೆಮನೆಯ ಕೆಳ ಅಂಗಳದ ಮಾತನ್ನಾದರೂ ಕೇಳಿ-ಕಂಡು ತಿಳಿದುದಕ್ಕಿಂತ ವಿವರವಾಗಿ ಹೇಳುವರು.
ಸಣ್ಣಪ್ಪನ ವಿಚಾರ ಇನ್ನೂ ವಿವರಗಳು ಬರತೊಡಗಿದವು. ವಾರ್ಧಾ ಗಂಜ್ ಹತ್ತಿರ ಗಾಂಧಿಯವರು ನೆಲೆಸಿ ತಮ್ಮ ಪರಿವಾರವನ್ನು ಹತ್ತಿರಿಟ್ಟು ಕೊಂಡರು. ಅವರು ಹಿಂದೆ ಮಾಡಿದ ಪ್ರತಿಜ್ಞೆಯ ಪ್ರಕಾರ ಸ್ವಾತಂತ್ರ್ಯಗಳಿಸದೆ ಸಬರಮತಿಗೆ ಹೋಗುವಂತಿರಲಿಲ್ಲ. ನಮ್ಮೂರ ಸಣ್ಣಿ-ಛೆ! ಈಗ ಹಾಗನ್ನಲಾದೀತೆ ?-ಸಣ್ಣ ತಮ್ಮಣ್ಣಪ್ಪನವರು-ಭಾಯೀ ಸಣ್ಣ ತಮ್ಮಣ್ಣಪ್ಪನವರು ಈಗ ಮಹಾತ್ಮರ ಹತ್ತಿರವೇ ಇರುತ್ತಾರೆಂದು ಜನ-ಅಲ್ಲಿ ನೋಡಿದ್ದವರಿರಬಹುದು!- ತಿಳಿಸತೊಡಗಿದರು. ಪ್ರಾರ್ಥನಾಕಾಲಕ್ಕೆ ಮಹಾತ್ಮರ ಪಕ್ಕದಲೆ ಈ ತರುಣ ಸತ್ಯಾಗ್ರಹಿ ಕೂತಿರುತ್ತಾರೆ. ಅದೆಂಥ ತೇಜಸ್ಸು ಅವರ ಮುಖದ ಮೇಲೆ! ಭಾರತಮಾತೆ ಅವರ ಮುಖದಮೇಲೆ ತನ್ನ ಕಳೆಯನ್ನೆಲ್ಲಾ ತುಂಬಿದ್ದಾಳೆ. ಶುಭ್ರವಾದ ಉಡುಪು, ಗಾಂಧೀಟೋಪಿ, ಸೌಮ್ಯಮುಖ ಛಾಯೆ, ಎಂತಹ ಕರ್ಮಯೋಗಿ ಈ ತರುಣ!
ಇನ್ನೊಂದು ಸುದ್ದಿ-ಮಹಾರಾಷ್ಟ್ರದ ಪ್ರಸಿದ್ದನಾಯಕ, ಕಾಕಾ ಕಾಮ್ಲೇಕರ್ ಅವರು ತಮ್ಮ ಏಕಮಾತ್ರ ಪುತ್ರಿಯನ್ನು ಇವರಿಗೆ ಕೊಡುತ್ತಾರೆ, ಎಂದು ಉತ್ಸಾಹದ ಸುದ್ದಿ. ಈ ಅಂತರ ಪ್ರಾಂತೀಯ ವಿವಾಹದಿಂದ ಕರ್ಣಾಟಕ ಮಹಾರಾಷ್ಟ್ರಗಳ ನಡುವೆ ಸೌಹಾರ್ದ ಹೆಚ್ಚುವುದು, ಎಂದೂ ವರ್ತಮಾನ.
ತಂದೆತಾಯಿಗಳಿಗೆ ದಿಗ್ಭ್ರಮೆ-ಯಾವುದೋ ಜಾತಿ, ಯಾವುದೋ ಮಾತನಾಡುವ ಸೊಸೆ ತನಗೆ ಪ್ರಾಪ್ತಳಾದಳಲ್ಲ! ಎಂದು. ಆದರೆ, ಶಿವಭಕ್ತರಲ್ಲಿ ಕುಲವನರಸಲಾಗದು ಎಂಬ ಬಸವಣ್ಣನವರ ಮಾತನ್ನು ಯಾರೋ ಇದಕ್ಕೂ ಅನ್ವಯಿಸಿ ದೇಶಭಕ್ತರಲ್ಲಿ ಕುಲವನರಸುವುದೇ? ಎಂದು ಹೇಳಿದರು. ಏನೋ ಇವರೆಲ್ಲ ಸುಧಾರಿಸಿದ ಕಾಂಗ್ರೆಸ್ ಜನ; ಏನಾದ್ರೂ ಆಗ್ಲಿ; ಸಣ್ಣಿ ಎಲ್ಲಾದ್ರೂ ತಣ್ಣಗೆ ಬದುಕಿದ್ದರೆ ಸಾಕು, ಎನ್ನುತ್ತ ಸುಮ್ಮನಿದ್ದರು. ಕಾಗದ ಬರೆಯಬಹುದಾಗಿತ್ತು. ಯಾರಿಗೆ? ಯಾರ ವಿಳಾಸಕ್ಕೆ ಬರೆಯುವುದು? ಇಲ್ಲಿಂದ ಒಂದುವೇಳೆ ಕನ್ನಡದಲ್ಲಿ ಬರೆದರೆ ಅಲ್ಲಿ ಟಪಾಲಿನವರಿಗೆ ಹೇಗೆ ಗೊತ್ತಾಗುವುದು? ಇಂಗ್ಲೀಷಿನಲ್ಲಿ ಬರೆದರೆ, ಆ ಭಾಷೆ ಅಲ್ಲಿ ಚಲಾವಣೆ ಯಲ್ಲಿ ಇಲ್ಲದೇಹೋದರೆ? ಹೀಗೂ ವಾದಿಸಿತು ಜನ.
ಅಂತೂ ಪತ್ರ ಹೋಗಲಿಲ್ಲ.
ನಮ್ಮೂರ ರಸಿಕ ಕೃಷ್ಣಯ್ಯ ಆಗಾಗ್ಗೆ ನೆರೆಯೂರು-ಆಚೆಗಡಿಯ-ಕೆಳಗಿನ ಕೆರೆಗೆ ಹೋಗಿಬರುವುದುಂಟು. ವಾಡಿಕೆಯಾಗಿ ಹೋಗಿ ಆದಿನ ಸಂತೆಯಲ್ಲಿ ಮಾವಿನಹಣ್ಣು ಕೊಳ್ಳುವಾಗ, ಮಾರುವವನ ಮುಖ ನೋಡಿ ಚಕಿತನಾದ; ಮುಖ ಸ್ಪಷ್ಟವಿದೆ. ಆದರೂ ಕಂಬಳಿಕೊಪ್ಪಿ, ಮಾವಿನ ಬುಟ್ಟಿ, ಮಾಸಿದ ಮೈ, ಮಾಸಿದ ಅಂಗಿ; “ಏನಲೇ ಸಣ್ಣಿ?” ಎಂದ ಕೃಷ್ಣಯ್ಯ; ಸಣ್ಣ ತಮ್ಮಣ್ಣಪ್ಪನವರು, ಭಾಯಿ ಸಣ್ಣತಮ್ಮಣಪ್ಪನವರು ಎನ್ನಲಿಲ್ಲ.
“ಏನು ಕೃಷ್ಣಯ್ಯ?”
“ಅಯ್ಯೋ ಹುಚ್ಚು ಮುಂಡೇದೆ! ನಿನಗೀಗತೀನೆ?”
ಇದು ಈ ಹು……..ದು ಅಳತೊಡಗಿತು.
“ವರ್‍ಸದ ಮ್ಯಾಲಾತೇಳ್ರಿ ಈ ಹುಡುಗ ನಮ್ಮ ಹಳ್ಳ್ಯಾಗೆ ನಮ್ಮನ್ಯಾಗೆ ಇರಾಕಹತ್ತಿ!” ಎಂದು ಜೊತೆಗಿದ್ದ ಮುದುಕ ಹೇಳಿದ.
ಸಣ್ಣ ಊರಿಗೆ ಬಂದಾಗ ಅದೊಂದು ಬಗೆಯ ಸ್ವಾಗತ ನಡೆಯಿತು!
*****