ದಾರಿ ಯಾವುದಯ್ಯಾ?

ದಾರಿ ಯಾವುದಯ್ಯಾ?

ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್ ಬರೀ ಊಟದ ಬಿಲ್ ಕೊಡಲಾರದೇ ಓದುವುದು ಒಜ್ಜೆಯಾಗಿ ಮೃಣಾಲಿನಿ ತನ್ನ ಸ್ನಾತಕೊತ್ತರ ಪದವಿಯನ್ನು ಅರ್‍ಧಕ್ಕೆ ನಿಲ್ಲಿಸಿ ವಾಪಸ್ಸಾಗಿದ್ದಳು. ಮೊದಲ ವರ್‍ಷದ ಅವಧಿಯಲ್ಲಿ ಅಮಲ ಮತ್ತು ಇತರ ಗೆಳತಿಯರು ಇವಳ ಇತಿಹಾಸ ಪ್ರಸಿದ್ಧ ನಗರಕ್ಕೆ ಭೇಟಿಯಾಗುವುದು ತುಂಬ ಅಪರೂಪ. ಅವಳು ಅಮಲಳು ಹೇಗಿರಬಹುದು ಅಂತ ಕಲ್ಪನೆ ಮಾಡಿಕೊಳ್ಳಹತ್ತಿದಳು.

ಹೊರಗೆಲ್ಲಾ ಬನದ ಹುಣ್ಣಿಮೆಯ ಬೆಳದಿಂಗಳು ಮೃಣಾಲಿನಿಗೆ ಅ ಬೆಳದಿಂಗಳಲ್ಲಿ ತಾನು ಅಮಲ ಮತ್ತು ಇತರ ಗೆಳತಿಯರ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಹಾಸ್ಟೆಲ್ ಟೇರಕೇಸ ಮೇಲೆ ಇಂತಹ ಬೆಳದಿಂಗಳ ರಾತ್ರಿ ಕುಳಿತು ಹರಟೆ ಹೊಡೆಯುತ್ತಿದ್ದುದು ಕಣ್ಣಮುಂದೆ ಬಂತು. ಅವಳ ಹೊರತಾಗಿ ಎಲ್ಲರೂ ಕಾನ್ವೆಂಟ್‌ನಲ್ಲಿ ಕಲಿತು ಬಂದವರು. ಅವಳು ಇಂಗ್ಲೀಷ್ ಡಿಪಾರ್‍ಟಮೆಂಟಿನಲ್ಲಿ ಓದುತ್ತಿದ್ದರೂ ಅವರು ಮಾತನಾಡುವ ಇಂಗ್ಲೀಷ ಅವಳಿಗೆ ಪೂರ್‍ತಿಯಾಗಿ ಅರ್‍ಥ ಆಗುತ್ತಿರಲಿಲ್ಲ. ಇವಳೊಬ್ಬಳೇ ಲಂಗದಾವಣಿ ಹುಡುಗಿ. ಅವರೆಲ್ಲಾ ಗಂಡು ಹುಡುಗರಂತೆ ಪ್ಯಾಂಟ್ ಶರ್‍ಟ್ ಹಾಕಿಕೊಳ್ಳುತ್ತಿದ್ದರು. ಅವರ ಇಂಗ್ಲೀಷ್ ಭಾಷೆ ವಿದೇಶಿಯರ ತರಹ ಇರುತ್ತಿತ್ತು. ಅವರ ಮಾತುಗಳು ಬರೀ ಇಂಗ್ಲೀಷ್ ಡಿಪಾರ್‍ಟಮೆಂಟಿನ ಲೆಕ್ಚೆರ್‍ಅಸ್ಸ್ ಮತ್ತು ಗಂಡು ಹುಡುಗರ ಬಗ್ಗೆ ಇರುತ್ತಿತತು. ಅವರುಗಳ ಮಧ್ಯೆ ಅವಳು ಹಳ್ಳಿಯಿಂದ ಬಂದ ಪೆದ್ದಿ ತರಹ ಮುದುಡಿ ಕುಳಿತುಕೊಳ್ಳುತ್ತಿದ್ದಳು.

ಮೃಣಾಲಿನ ಕನಸುಗಳ ಮೂಟೆ ಹೊತ್ತು ಯಾವ ಆರ್‍ಥಿಕ ಸಹಾಯ ಇಲ್ಲದೇ ವಿಶ್ವವಿದ್ಯಾಲಯದ ಪದವಿಗೆ ಸೇರಿದ್ದಳು. ಅವಳ ಆರ್‍ಥಿಕ ಪರಿಸ್ಥಿತಿ ಅವಳಲ್ಲಿ ತುಂಬ ಕೀಳರಿಮೆಯನ್ನು ಹುಟ್ಟು ಹಾಕಿತ್ತು. ಪುಟ್ಟ ಊರಿನ ಸಂಪ್ರದಾಯಗಳ ಮಧ್ಯೆ ಓದಿದ ಅವಳಿಗೆ ವಿಶ್ವವಿದ್ಯಾಲಯದಲ್ಲಿ ಗಂಡು ಹೆಣ್ಣು ಒಟ್ಟಾಗಿ ಓಡಾಡುವದು ಬಹಳ ಮುಜುಗಳ ವಿಸ್ಮಯಗಳನ್ನು ಹುಟ್ಟಿ ಹಾಕಿತ್ತು. ತಿಂಗಳ ಊಟದ ಬಿಲ್ ಅವಳಿಗೆ ತುಂಬಲು ಆಗುತ್ತಿರಲಿಲ್ಲ. ಶೆಲ್ಲಿ ಕೀಟ್ಸ್, ಶೇಕ್ಸಪೀಯರ್‌, ಡಾಂಟೆ, ಕಾಮೂ, ಕಾವ್ಯಾ ಸಾರ್‍ತೆ ಅವಳಲ್ಲಿ ವಿಚಿತ್ರ ದಂದ್ವಗಳನ್ನು ಹುಟ್ಟು ಹಾಕಿದ್ದರು. ಅವಳು ವಿಪರೀತ ಸೂಕ್ಷಳಾಗಿದ್ದಳು. ಬೆಳದಿಂಗಳ ರಾತ್ರಿಗಳಲ್ಲಿ ಅವಳ ಡಿಪಾರ್‍ಟಮೆಂಟಿನ ಗೆಳತಿಯರು ಟೇರಕೇಸ್ ಮೇಲೆ ಬಾಟಲಿಗಳನ್ನು ಕದ್ದುಮುಚ್ಚಿ ಕುಡಿಯುತ್ತಿದ್ದರೂ ಅದೂ ಮೂವತ್ತೈದು ವರ್‍ಷಗಳ ಹಿಂದೆ ಅವಳು ಆಕಾರ ಕೊಡದ ಆ ಕ್ರಿಯೆಯ ಬಗ್ಗೆ ಎದೆಯ ಬಡಿತವನ್ನು ಹೆಚ್ಚಿಸಿಕೊಳ್ಳುತ್ತಿದ್ದಳು. ಕೆಲವರಿಗೆ ಇಂತಹ ಕ್ರಿಯೆಗಳು ಸರ್‍ವೆ ಸಾಮಾನ್ಯ ಅವಳದಲ್ಲದೆ ದಾರಿ ಅವಳು ಅದನ್ನು ಹೇಗೆ ಸರಿಸಬೇಕೆಂಬುದು ತಿಳಿಯದೇ ಒದ್ದಾಡಿದಳು.

ಗೆಳತಿಯರೆಲ್ಲಾ ಒಂದಲ್ಲ ಕಾರಣದಿಂದ ಅವಳಿಗೆ ಅಂಟಿಕೊಂಡಿದ್ದರು. ಬಹಳ ಬಾರಿ ಅವಳ ಕಷ್ಟಕ್ಕೆ ಒದಗಿದರು. ಅವಳು ಅವರುಗಳನ್ನು ಹಿಡಿಯಲಾರದೇ ಬಿಡಲಾರದೇ ಒದ್ದಾಡಿದಳು. ಮೃಣಾಲಿನಿ ತುಂಬ ಸುಂದರವಾಗಿ ಹಾಡುತ್ತಿದ್ದಳು. ಬೆಳದಿಂಗಳ ರಾತ್ರಿ ಹಾಸ್ಟೆಲಿನ ಟೇರಕೇಸ್ ಮೇಲೆ ಆ ಡಿಪಾರ್ಟಮೆಂಟಿನ ಹುಡುಗಿಯರು ಗುಂಪು ಒಂದೊಂದಾಗಿ, ಮೃಣಾಲಿನಿಯನ್ನು ಅವಳ ರೂಮಿನಿಂದ ಎಳೆದುಕೊಂಡು ಬಂದು ಕೂಡಿಸಿಕೊಳ್ಳುತ್ತಿದ್ದರು. ರಾತ್ರಿ ಅವರ ಬಾಯಲ್ಲಿ ಎದ್ದು ಬಿದ್ದ ನೂರಾರು ಕಥೆಗಳು ಚರ್‍ವಿತಚವರ್‍ಣ, ಅವಳ ಮಂಡೇ ತುಂಬಾ ಬಿಸಿಯಾಗಿರುತ್ತಿತ್ತು. ಆದರೂ ಅವಳು ಏಸುವಿನ ಮಾತಿನಂತೆ ಅವರೆಲ್ಲರನ್ನೂ ಪ್ರೀತಿಸುತ್ತಿದ್ದಳು, ಒಮ್ಮೊಮ್ಮೆ ಅವರುಗಳು ತಮ್ಮ ಖರ್‍ಚಿನಲ್ಲಿ ಅವಳಿಗೆ ಹೊಟೇಲು ತಿಂಡಿ ತಿನಿಸುತ್ತಿದ್ದರು. ರಾತ್ರಿ ಝಿನ್‌ನ ತಿಳಿ ಕಂಪಿನಲ್ಲಿ ಮತ್ತೇರುತ್ತಿತ್ತು. ಅವಳು ಮೌನವಾಗಿ ಒಂದು ಮೂಲೆಯಲ್ಲಿ ಕುಳಿತಿರುತ್ತಿದ್ದಳು.

ರವಿ ಹೆಗಡೆ ಎಂಬ ಶಿರಸಿ ಕಡೆಯ ಹುಡುಗ ನೋಡಲು ತುಂಬ ಸುಂದರವಾಗಿದ್ದ. ಅಷ್ಟೇ ಜಾಣನಾಗಿದ್ದ ಕೂಡಾ. ಬೆಳದಿಂಗಳ ರಾತ್ರಿ ಜಿನ್‌ನ್ ಆಮಲಿನಲ್ಲಿ ಹುಡುಗಿಯರೆಲ್ಲಾ ಅವನಿಂದ ಫ್ಲರ್‍ಟ್ ಮಾಡಿಸಿಕೊಂಡ ಬಗ್ಗೆ ಮಾತನಾಡುತ್ತಿದ್ದರು. ಅವನ ಮಾತಿನ ಮೋಡಿಗೆ ಇಂಗ್ಲೀಷ್ ಡಿಪಾರ್‍ಟಮೆಂಟಿನ ಹುಡುಗಿಯರು ಮೋಹಿತಗೊಂಡಿದ್ದರು. ಸಾಧನಾ ಮಾತ್ರ ಅವನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಳು. ಮೃಣಾಲಿನಿ ಮಾತ್ರ ಅವನನ್ನು ಮಾತನಾಡಿಸಲು ಹೆದರುತ್ತಿದ್ದ. ಮೂವತ್ತೈದು ವರ್‍ಷಗಳ ಹಿಂದೆಯೂ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಇಂತಹ ಹಲ್ಲಾಗುಲ್ಲಾಗಳಿದ್ದವು, ಅಮಲ ಆದಷ್ಟು ರವಿಯ ಸ್ನೇಹ ಸಂಪಾದಿಸಲು ಹೋರಾಟ ಮಾಡುತ್ತಿದ್ದಳು. ಚಂಚಲ ಚಿತ್ತದ ರವಿ ಎಲ್ಲರ ಪ್ರೀತಿಗೆ ಸ್ಪಂದಿಸಿ, ಎಲ್ಲರೊಂದಿಗೂ ಆಟವಾಡುತ್ತಿದ್ದ ಮೃಣಾಲಿನಿಗೆ ಅವನ ಸ್ವಭಾವ ತಿಳಿದಿತ್ತು. ಅಮ್ಮ ತನ್ನ ಮತ್ತು ರವಿಯ ಪ್ರೇಮದ ಬಗ್ಗೆ ಕೊರೆದಾಗ ಅವಳು ಸುಮ್ಮನೆ ಹೂಂಗುಡುತ್ತಿದ್ದಳು. ಅವರೆಲ್ಲರೂ ತಪ್ಪದೇ ವಾರಕ್ಕೊಂದು ಸರ್‍ತಿ ಇಂಗ್ಲೀಷ್ ಪಿಕ್ಚರಿಗೆ ಹೋಗುತ್ತಿದ್ದರು. ಥೇಟರಿನಿಂದ ಹೊರ ಬರುವಾಗ ಮತ್ತದೇ ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ತಿಳಿಯದ ಉಚ್ಚಾರದಲ್ಲಿ ಜೋರಾಗಿ ಹರಟುತ್ತಿದ್ದರು. ಮೆಲ್ಲಗೆ ತಮ್ಮ ಪ್ಯಾಂಟುಗಳನ್ನು ಏರಿಸಿ ಟೀ ಶರ್‍ಟಗಳ ಬುಜ ಸಡಿಲಿಸಿ ಬುಜ ಹಾರಿಸಿ ಇಂಗ್ಲೆಂಡ್ ಇಂಗ್ಲೀಷ್ ಮಾತನಾಡುವಾಗ ಮೃಣಾಲಿನ ಬೆಪು ತಕ್ಕಡಿಯಂತೆ ಅವರ ಮಾತುಗಳನ್ನು ಕೇಳುತ್ತ ಅವರುಗಳ ಹಾವಭಾವ ನೋಡುತ್ತ ನಿಂತು ಬಿಡುತ್ತಿದ್ದಳು.

ಅದೆಕೋ ಅಮಲ ಮೂವತ್ತೈದು ವರ್ಷಗಳ ನಂತರ ಫೋನ ಮಾಡಿದಾಗ ಅಮಲಳ ಧ್ವನಿಯಿಂದ ಮೃಣಾಲಿನಿ ತನ್ನ ಕ್ಯಾಂಪಸ್ಸ ದಿವಸಗಳಿಗೆ ಜಾರಿದ್ದಳು ಮತ್ತೆ ಎಲ್ಲವೂ ಒಮ್ಮೆಲೇ ನುಗ್ಗಿ ಬಂದವು. ಅಮಲಳಿಗೆ ನನ್ನ ಫೋನ ನಂಬರ ಕೊಟ್ಟವರು ಯಾರು, ಅವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಭೇಟಿ ಮಾಡಬೇಕೆಂಬುದುಯಾಕೆ, ಅಮಲ ಮೊದಲಿನ ಹಾಗೆಯೇ ಸುಂದರಿಯಾಗಿದ್ದಾಳೆ. ಮದುವೆ ಮಾಡಿಕೊಂಡಳಾ, ಅವಳ ಎಡಕೆನ್ನಯ ಮಜ್ಜೆ ಹಾಗೆಯೇ ಇದೆಯಾ, ಅವಳು ಕಾಲೇಜು ಒಂದರಲ್ಲಿ ಇಂಗ್ಲೀಷ್ ಲೆಕ್ಚರರ್ ಆಗಿದ್ದಳು ಎಂಬುದು ಮೃಣಾಲಿನಿಗೆ ಯಾರಿಂದಲೋ ತಿಳಿದಿತ್ತು. ಅವಳು ಫೋನಿನಲ್ಲಿ ಯಾವ ವಿವರವನ್ನೂ ಹೇಳಲಿಲ್ಲ. ನಿನ್ನಲ್ಲಿಗೆ ಬರುತ್ತೇನಲ್ಲ ಆವಾಗ ಎಲ್ಲಾ ಮಾತನಾಡೋಣ ಎಂದಿದ್ದಳು. ಮೃಣಾಲಿನಿಗೆ ನೋಡಲು ಒರಟಾದ ಅಮಲ ಒಳಗೊಳಗೆ ಈಗ ಐವತ್ತೈದು. ಮದುವೆ ಆಗದೇ ಹಾಗೆ ಉಳಿದಿದ್ದಾಳೆ. ತನಗಿಂತ ನಾಲ್ಕೈದು ವರ್‍ಷದೊಡ್ಡವಳಾದ ಅಮಲ ಈಗ ಅರವತ್ತರ ಗಡಿ ದಾಟಿರಬಹುದು. ಇದೇನು ಇದ್ದಕ್ಕಿದ್ದ ಹಾಗೆ ಮಾಡಲು ತನ್ನಷ್ಟಕ್ಕೆ ತಾನೇ ವಿಚಾರ ಮಾಡಿ ಸುಸ್ತಾದಳು. ಅಮಲಳು ಬಂದಾಗ ಅವಳನ್ನು ಕಂಡು ಮೃಣಾಲಿನಿಗೆ ತನ್ನಷ್ಟಕ್ಕೇ ತಾನೇ ವಿಚಾರ ಮಾಡಿ ಸುಸ್ತಾದಳು. ಅಮಲಳು ಬಂದಾಗ ಅವಳನ್ನು ಕಂಡು

ಮೃಣಾಲಿನಿಗೆ ಆಶ್ಚರ್‍ಯವಾಯ್ತು. ಅದೇ ಮಾದಕ ಸೌಂದರ್‍ಯ, ಅರವತ್ತರ ಗಡಿಯಲ್ಲಿದ್ದರೂ ಎಲ್ಲೂ ಮುದುಡದ ಮೈಮಾಟ ಅದೇ ಕೆನ್ನೆ ಮೇಲಿನ ಮಚ್ಚೆ ಕೂದಲು ಹಣ್ಣಾದ್ದು ಎಲ್ಲೂಕಂಡು ಬರಲಿಲ್ಲ. ಬಹುಷಃ ಡೈ ಮಾಡಿರಬಹುದು. ಮೃಣಾಲಿನಿ ತನ್ನ ಆರೋಗ್ಯ ದೇಹಸ್ಥಿತಿಯ ಬಗ್ಗೆ ತಾನೇ ಕಂಪಿಸಿದಳು. ಅಮಲಳನ್ನು ನೋಡಿ ಅವಳಿಗೆ ಚೇತೋಹಾರಿ ಅನಿಸಿತು. ದೇವರು ಇವಳನ್ನು ಎಷ್ಟು ಚೆನ್ನಾಗಿ ಇಟ್ಟಿದ್ದಾನೆ ಅಂತ ಅಂದುಕೊಂಡಳು. ಸಲ್ವರ ಕಮೀಜ ಹಾಕಿಕೊಂಡು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಅವಳು ಇವಳ ಮನೆಯೊಳಗೆ ನೇರವಾಗಿ ಬ್ಯಾಗುಗಳೊಂದಿಗೆ ನಡೆದು ಬಂದಾಗ, ಸೋತ ಕಾಲುಗಳಿಂದ ಮೃಣಾಲಿನಿ ಅವಳನ್ನು ಹಿಂಬಾಲಿಸಿದಳು.

ತುಂಬ ಹೊತ್ತು ಮೃಣಾಲಿನಿಗೆ ಏನನ್ನೂ ಹೇಳಲಾಗಲಿಲ್ಲ. ಇಬ್ಬರೂ ಕೂಡಿಕೊಂಡು ಊಟ ಮಾಡಿದರು. ಸ್ವಲ್ಪ ಹೊತ್ತು ಅಡ್ಡಾಗು ಆಮೇಲೆ ಹೇಳಿದಳು. ಅಮಲ ಒಂದು ಸಣ್ಣ ನಿದ್ದೆ ತೆಗೆದಳು. ಸಂಜೆಯ ಚಹ ಕುಡಿಯುತ್ತ ಅವರಿಬ್ಬರೂ ಮಾತಿಗೆ ಶುರುವಿಟ್ಟುಕೊಂಡರು. ಅಮಲ ಕೇಲಿದಳು “ನೀನು ಎಂ.ಎ.ಕಡೆಯ ವರ್‍ಷ ಪರೀಕ್ಷೆಯ ಸಮಯದಲ್ಲಿ ಬಿಟ್ಟು ಬಂದೆಯಲ್ಲಾ ಡಿಗ್ರಿ ಮುಗಿಸಿಕೊಂಡೆಯೋ ಹೇಗೆ? ಎಲ್ಲಿ ಸರ್ವಿಸ್ ಮಾಡಿದೆ ಮದುವೆ ಮಾಡಿಕೊಂಡೆಯಾ? ಹಿಂಗ್ಯಾಕ ಒಮ್ಮೆಲೇ ಮುದುಕಿ ತರಹ ಆಗೀದಿ? ಏನ ಕಥೆ ಹೇಳಲ್ಲ?” ಒಂದೇ ಎರಡೇ ಸಾಲು ಸಾಲು ಪ್ರಶ್ನೆಗಳು. ಮೃಣಾಲಿನಿಗೆ ಬಹಳ ಮುಜುಗರ ಹಾಗೂ ವೇದನೆ ಬೆಳಕು ಅಸ್ಪಷ್ಟ ಎಲ್ಲವೂ ಮುಸುಕು, ಬದುಕಿನ ಪ್ರತಿಬಿಂಬ ಎಲ್ಲವೂ ಅಸ್ಪಷ್ಟ ಸೊಟ್ಟ. ಅವಳು ತನ್ನ ಬದುಕಿನ ಮೂಲ ಸ್ವರೂಪ ಹೋರಾಟ ಒದ್ದಾಟವನ್ನು ಹೇಳಲಾಗದೇ ಹೋದಳು. ಅವಳ ಬದುಕು ಎಡ ಬಲವಾಗಿಯೂ, ಬಲ ಎಡವಾಗಿಯೂ ದಿಕ್ಕೆಟ್ಟು ಹೋಗಿತ್ತು. ಮನಸ್ಸಿನಲ್ಲಿ ಆತಂಕಗಳ ಕಾವು ಮಡುಗಟ್ಟಿತ್ತು. ಅವಳು ಮೌನದಲ್ಲಿ ಎಲ್ಲವನ್ನೂ ನಿವೇದಿಸಿಕೊಂಡಳು.

ಅಮಲಳದು ಹಾಗಲ್ಲ. ಅವಳು ಮಾತಿನ ಆಣಿ. ಬಾಯಿಯನ್ನು ತೆರೆದು ಬಿಟ್ಟಳು. ಇತಿಹಾಸ ಓದಿದಂತೆ ತನ್ನೆಲ್ಲಾ ಬದುಕಿನ ಪುಟಗಳನ್ನು ಓದಿದಳು. ತನ್ನ ನಡುಗೆ ಎಷ್ಟೊಂದು ಉಲ್ಲಾಸ ಹಾಗೂ ಉಮೇದುಗಳಿಂದ ಕೂಡಿತ್ತು. ತನ್ನ ಕನಸುಗಳನ್ನೆಲ್ಲಾ ಹೇಗೆ ಚೆನ್ನಟ್ಟಿಕೊಂಡು ಹೋಗಿ ತನ್ನದಾಗಿರಸಿಕೊಂಡೆ, ಹಾಗೂ ತಾನು ಜೀವನದಲ್ಲಿ ಹೀಗೆ ದುಡ್ಡು ಮಾಡಿದೆ. ಹೇಗೆ ಮೋಜು ಮಜಾ ಮಾಡಿದೆ ಹೇಳಿಯೇ ಹೇಳಿಯೇ ಹೇಳಿದಳು. ಅಮಲ ಹೇಳಿದಳು. “ನೋಡು ಮೃಣಾ, ರವಿ ಇದ್ದನಲ್ಲ ಅಂವ ಪಿ.ಜಿ ಮುಗಿಯೋತನಕ ಒಳ್ಳೆಯ ಕಂಪನಿ ಕೊಟ್ಟ ನಾನು ಅವನೊಂದಿಗೆ ಮಸ್ತ ಮಜ ಮಾಡಿದೆ. ಎಷ್ಟೆಲ್ಲಾ ಅಡ್ಡಾಡಿದರೂ ಅವನು ಮದುವೆಯ ಮಾತೇ ತೇಗಿಲಿಲ್ಲ. ಸ್ವಲ್ಪ ದಿವಸ ಬೇಸರವಾಯ್ತು. ಆಮೇಲೆ ಎಂ. ಎಸ್ಸಿ ಓದುವ ಬಸವರಾಜ ಭಟ್ಟಿಯಾದರು ನಾವಿಬ್ಬರೂ ಪ್ರೀತಿಸಿ ಮದ್ದೆ ಅದ್ವಿ. ಒಂದೇ ಕಡೆ ಲೆಕ್ಚರರ್ ಆಗಿ ಕೆಲಸ ಮಾಡಿದ್ವಿ ಮತ್ತೆ ಮನಿ ಕಟ್ಟಿದ್ವಿ, ಹೋದ ವರ್ಷ ಬಸವರಾಜ ಹಾರ್ಟ ಅಟ್ಯಾಕ್ ಆಗಿ ತೀರಿಕೊಂಡರು. ಮಕ್ಕಳಾಗಲಿಲ್ಲ. ಸಾಕಷ್ಟು ದುಡ್ಡ ಮಾಡ್ತೀವಿ ಈಗ ಆರ್‍ಧಕೋಟಿ ರೊಕ್ಕ ಮತ್ತು ನಾನು ಬಹಳ ಅರಾಮ ಅದೀವಿ”.

ಮೃಣಾಲಿನಿ ಮೌನವಾಗಿ ಅವಳ ಮಾತನ್ನು ಕೇಳಿಸಿಕೊಳ್ಳುತ್ತಿದ್ದಳು. ಆಮಲ ಮತ್ತೆ ಮುಂದುವರಿಸಿದಳು ಮೃಣಾ ಎಷ್ಟೊಂದು ಕನಸುಗಳನ್ನು ಆಸೆಗಳನ್ನು ಇಟ್ಟುಕೊಂಡು ಪಿ.ಜಿ. ಮಾಡಿದೆ ಆದರೆ ಪ್ರೋಪೆಸನ್ ಒಳಗೆ ನನಗೆ ಮನಸ್ಸಿಗೆ ತೃಪ್ತಿ ಸಿಗಲೇ ಇಲ್ಲ. ಮೊದಲೇ ನಿಂತಲೇ ನಿಲ್ಲುವುದು ನನಗೆ ಆಗದ ಕೆಲಸ ಆ ಜ್ಯೂನಿಯರ್ ಕಾಲೇಜಿನ ಒಂಥರಾ ಲಿಮಿಟೆಡ್ ವಾತಾವರಣ, ಬಸವರಾಜು, ಅಲ್ಲಿ ಬಿಟ್ಟು ಬರಾಕ ತಯಾರಿಲ್ಲ. ನನಗೋ ಅತ್ತ ಹಳ್ಳಿ ಅಲ್ಲದ ಇತ್ತ ಪ್ಯಾಟಿ ಅಲ್ಲದ ಊರಾಗ ನೌಕರಿ ಮಾಡೋದಂದ ಬಹಳ ಬೋರು, ದಿನಾ ಅವನ ಜೋಡಿ ಗುದ್ದಾಡತ್ತಿದ್ವಿ, ದೊಡ್ಡ ಶಹರದಾಗ ನೌಕರಿ ಹುಡುಕೋಣ ಅಂತ ಗಂಡ ನನ್ನ ಮಾತೇ ಕೇಳಲೇ ಇಲ್ಲ ಬಿಡ, ನನಗೆ ಸ್ವಾತಂತ್ರ್ಯ ಸ್ವಚ್ಛಂದ ಬಹಳ ಬೇಕಾಗಿತ್ತು. ಆದ್ರೆ ಅಂವ ನನಗೆ ಯಾವ ಸ್ವಾತಂತ್ರ್ಯ ಕೊಡಲೇ ಇಲ್ಲ.

ಮೃಣಾಲಿನಿ ಕೆಲಕಾಲ ತನ್ನ ಆಲೋಚನೆಯಲ್ಲಿ ಮುಳುಗಿದಳು. ತಾನು ಪಿ.ಜಿ. ಮುಗಿಸಿದಿದ್ದರೆ ಎಲ್ಲಾದರೂ ನೌಕರಿ ಸಿಗುತ್ತಿತ್ತು. ತನ್ನ ಹಳಿ ತಪ್ಪಿದ ಬದುಕು ಹಳಿಗುಂಟ ಸಾಗುತ್ತಿತ್ತು. ಬದುಕಿನ ಗತಿಯೋ ಬದಲಾಗುತ್ತಿತ್ತು, ಯಾವ ತಪ್ಪುಗಳನ್ನು ಮಾಡದ ನನ್ನಂತಹವರ ಬದುಕು ಇಷ್ಟೊಂದು ದಯನೀಯ ನಿಸ್ಸಾಯಕ ಸ್ಥಿತಿಗೆ ಬಂದು ನಿಂತಿತು. ವಾರ್‍ಡನ್ ಊಟದ ಬಿಲ್ಲು ಕಟ್ಟದ್ದಕ್ಕೆ ಹೊರಹಾಕಿದರೆ ಏನಾಯ್ತು, ತಾನೇಕೆ ಗಟ್ಟಿಯಾಗಿ ನಿಂತು ಪಿ.ಜಿ ಕೊನೆಯ ವರ್‍ಷ ಮಗಿಸಲಿಲ್ಲ. ಬಡತನದ ಭೂತ ತನ್ನನ್ನು ಇಷ್ಟು ಹಿಂಡಿ ಹಿಪ್ಪಿ ಮಾಡಿತೇ. ಅಮಲ ಎಷ್ಟೊಂದು ಖುಷಿಯಿಂದ ಇದ್ದಾಳೆ ಎಲ್ಲಾ ಸುಖವನ್ನು ಪಡೆದುಕೊಂಡೆ ಅಂತ ಹೇಳಿದಳು. ನನಗೇಕೆ ಆ ಸುಖದ ಮಜಲುಗಳು ಕಾಣಿಸಲಿಲ್ಲ. ಕಾಲ ಬದಲಾದಂತೆ ನಮ್ಮ ಬದುಕಿನ ಸಾಮಾಜಿಕ ನೈತಿಕ ಮೌಲ್ಯಗಳು ಹೊಸ ಹೊಸ ಅರ್‍ಥ ಪಡೆಯುತ್ತದೆ. ನಾನೇಕೆ ಹರಿಯುವ ನೀರಿನ ಗುಂಟ ಹರಿಯಲಿಲ್ಲ?

ಎಂಬತ್ತರ ದಶಕದಲ್ಲಿ ಇನ್ನೂ ದೂರದರ್‍ಶನ ಬಂದಿರಲಿಲ್ಲಾ. ಇಂಗ್ಲೀಷ್ ವಿಭಾಗದ ಹುಡುಗಿಯರು ತಮ್ಮ ತಮ್ಮ ಬಾಯ್ ಫ್ರೆಂಡ್ಸ್ ಜೊತೆ ಪಿಕ್ಚರಿಗೆ ಹೋಗುತ್ತಿದ್ದರು. ಮೃಣಾಲಿನಿ ಹತ್ತಿರ ಹಣವಿರುತ್ತಿರಲಲ್ಲಿ. ಅವಳಿಗೆ ಆಗಾಗ ಸಿನೇಮಾ ನೋಡಬೇಕೆಂಬ ಆಶೆ ಆಗುತ್ತಿತ್ತು. ಗೆಳತಿಯರೆಲ್ಲಾ ಥೇಟರಿಗೆ ಹೋದರೆ ಅವಳು ಹಾಸ್ಟೆಲ್ ಟೇರೆಸ್ ಮೇಲೆ ಕುಳಿತು ಮಿನುಗುವ ನಕ್ಷತ್ರಗಳನ್ನು ನೋಡುತ್ತಿದ್ದಳು. ಅಡಿಗೆ ಕೋಣೆಯಿಂದ ಮಲ್ಲೇಶಪ್ಪನ ರೇಡಿಯೋದಿಂದ ಚಿತ್ರಹಾರ, ಚಿತ್ರಗೀತೆಗಳು ನೋಡುತ್ತಿದ್ದಳು. ಚಿತ್ರಗೀತೆಗಳು ಆ ಏಕಾಂತದಲ್ಲಿ ಅವಳಿಗೆ ಕೇಳಿಸುತ್ತಿದ್ದವು. ಅವಳು ಅಂತಹ ಪರಿಸ್ಥಿತಿಯಲ್ಲೂ ಕನಸುಗಳನ್ನು ಕಾಣುತ್ತಿದ್ದಳು. ಒಮ್ಮೆ ಅಮಲ ಅವಳಿಗೆ ಹೋಟೆಲಿನಿಂದ ಸಮೋಸ ಪ್ಯಾಕ್ ಮಾಡಿಸಿಕೊಂಡು ತಿನ್ನಿಸಿದ್ದಳು. ಮೃಣಾಲಿನ ತನ್ನ ಯೋಚನೆಗಳಿಂದ ಹೊರಬಂದು ಕಮಲಳಿಗೆ ಹೇಳಿದಳು “ನೀನು ಆ ದಿನ ತಿನ್ನಿಸಿದ ಸಮೋಸದ ರುಚಿ ಇನ್ನೂ ನನ್ನ ನಾಲಿಗೆ ಮೇಲಿದೆ” ಹೌದ ಅದು ಧಾರವಾಡ ಹೋಟೆಲಿನಿಂದ ತಂದದ್ದು. ಇನ್ನೂ ನೆನಪಿಟ್ಟಿರುವಿಯಲ್ಲಾ. “ಹೌದು ಹಸಿವಿನ ತುಡಿತಗಳೇ ಅಂತಹದ್ದು” ಮೃಣಾಲಿನಿ ಅಂದಾಗ ಅಮಲ ಅವಲತ್ತುಕೊಂಡಳು, “ನೀನು ಒಮ್ಮೆಯೆ ಅಷ್ಟ ತ್ರಾಸ್ ಐತಿ ಅಂತ ಹೇಳಿಕೊಂಡಿದ್ದರೆ, ನಾವೆಲ್ಲ ಕೂಡಿ ಸಹಾಯ ಮಾಡುತ್ತಿದ್ವಿ ನೀನೊಬ್ಬಾಕಿ ಸುಮ್ಮನೆ ಜೀವನ ಬರಬಾದ ಮಾಡಿಕೊಂಡಿ ಈಗ insecurity feeling ನಾಗ ನರಳೋದು ಹೇಳು” ಮೃಣಾಲಿನಿ ಮಾತು ಮುಂದುವರಿಸಲಿಲ್ಲ.

ಅಮಲ ಮತ್ತೆ ನೆನಪಿನ ಬುತ್ತಿ ಬಿಚ್ಚಿದಳು “ಅಲ್ಲಾ ಅಂವ ಬಾಬು ಇದ್ದನಲ್ಲ ಅಂವ ಚಂದ್ರಿಕಾನ ಲವ್ ಮಾಡ್ತಿದ್ದ ನೆನಪದೇನು. ಆಕಿ ಮಿನಿಸ್ಟರ್‌ನ ಮಗಳು ಅಂವ ಹಳ್ಳಿಯಿಂದ ಬಂದವ, ಮುಂದೆ ಏನಾತೋ ಏನೋ ಅವರ ಪ್ರೇಮ ಪ್ರಸಂಗ, ಒಮ್ಮೆ ಬಾಬು ನಮ್ಮ ಹತ್ತಿರ ಬಂದು ಅವಳನ್ನು ಕೇಳಿ ಅಂತ ಗೋಗರೆದ. ನಾವ್ಯಾರು ಅಷ್ಟು ಹಚ್ಚಗೊಳಲೆ ಇಲ್ಲ. ಹ್ಯಾಪಳಾ ಇದ್ದ ನಾವೇನು ಕಡಿಮಿ ಇದ್ವಿ ಏನು. ನಮ್ಮ ಕಣ್ಣಾಗ ಅಂತಹ ಹುಡುಗರು ಕಾಣಾಕೇ ಇಲ್ಲ. ರವಿಯಷ್ಟು ಮಜಾ ಕೊಡುವ ಹುಡುಗ “ಅಂವ ಅಲ್ಲ” ಆ ಮಧ್ಯಾನ್ಹ ಸ್ವಗತಗಳಿಂದ ತುಂಬಿದ ಒಂದು ದೀರ್‍ಘ ಕಾಲವಾಗಿತ್ತು. ಗೋಡೆಯ ಮೇಲಿನ ಗಡಿಯಾರ ಸುಮ್ಮನೆ ಚಲಿಸುತ್ತಿತ್ತು. ಕಾಲ ತನ್ನ ಅತೀತದ ನೆಪುಗಳೊಂದಿಗೆ ಚಲಿಸುತ್ತಿದ್ದ. ಹೊರಗಡೆ ಅಂಗಳದ ಗಿಡದಲ್ಲಿ ಕೆಂಪು ದಾಸವಾಳಗಳು ಗಾಳಿಗೆ ಅಲ್ಲಾಡುತ್ತಿದ್ದವು. ಗೆಳತಿಯರಿಬ್ಬರು ಒಮ್ಮೆ ಮಾತಿನಲ್ಲಿ ಮತ್ತೊಮ್ಮೆ ಮೌನದಲಿ ಬ್ರಹ್ಮಜ್ಞಾನಿಗಳಂತೆ ಚರ್‍ಚಿಸುತ್ತಿದ್ದರು. ಗುಲಾಬಿ ಬಣ್ಣ ಬಳಿದುಕೊಂಡ ಗೋಡೆಯ ಮೇಲಿನ ಪೋಟೋಗಳು ಇವರ ಮಾತುಗಳನ್ನು ಆಲಿಸುತ್ತ ತುಂಬ ಮಜವಾಗಿದೆಯಲ್ಲಾ ಈ ಅರವತ್ತರ ಗಡಿಯಲ್ಲಿ ತಮ್ಮ ಪ್ರೇಮಿಗಳ ಬಗ್ಗೆ ಮಾತನಾಡುತ್ತಾರಲ್ಲ ಯಾವ ಹಳವಂಡಗಳು ಇವರನ್ನ ಕಾಡಲಿಲ್ಲವೇ. ಬಣ್ಣ ಬಣ್ಣದ ಬಟ್ಟೆಗಳಿಂದ ಇವರು ಬದುಕಿನ ಕೌದಿ ಹೊಲೆಯುತ್ತಿದ್ದಾರೆಯೇ? ಫೋಟೋಗಳು ಮುಲುಕಿದವು, ಭಾವರಂಗಿನ ಪದಗಳಿಗೆ ಗಾಳಿ ಬೆಳಕು ಹರಿದು ಹಾಯ್ದ ಫಲುಕುಗಳು ಎದೆ ತೆರೆದು ಕಥೆ ಕಟ್ಟಿದವು. ಎದೆಯ ಗೂಡಿನೊಳಗೆ. ಇದ್ದ ಬದ್ದ ಎಲ್ಲಾ ವಿಸ್ಮಯಗಳು ಒಂದುಗೂಡಿ ಆ ಮಧ್ಯಾನ್ಹದಲಿ, ಸೂರ್‍ಯ ಸಾಕ್ಷಿಯಾಗಿದ್ದ.

ನೋಡು ಮೃಣಾಲಿನಿ, ರವಿ ಪಿ.ಜಿ ಮುಗಿದ ತಕ್ಷಣ ಮೈಸೂರಿಗೆ ಹೋಗಿ ಸೆಟಲ್ ಆದ ಅಲ್ಲೇ ಪಿ.ಎಚ್.ಡಿ ಮಾಡಿಕೊಂಡ ಆಮೇಲೆ ಯಾರೊ ಕೂರ್‍ಗಿ ಹುಡಿಗಿನ ನೋಡಿ ಮದುವೆ ಮಾಡಿಕೊಂಡ. ಸ್ವಲ್ಪ ದಿವಸ ಅಪ್‌ ಸೆಟ್ ಆಗಿದ್ದ ಮತ್ತೆ ಬಸವರಾಜು ನನ್ನ ಜೀವನದಾಗ ಬಂದ ಪ್ರೀತಿಸಿ ಮದ್ದೆ ಆದ್ವಿ, ಮತ್ತ ಅದೇ ಮಜಾ, ಮಕ್ಕಳಾಗಲಿಲ್ಲ. ಹೊಲಮನಿ ಖರೀದಿ ಮಾಡಿದ್ವಿ. ಇಬ್ಬರ ಪಗಾರ ರೊಕ್ಕ ಎಲ್ಲಿ ಖರ್‍ಚು ಮಾಡೋದು. ಸ್ವಲ್ಪ ದಿವಸ ಕಟ್ಟಿ ಹಾಕಿದಾಂಗ್ಹ ಆತು. ನನಗೆ ಒಳಗೊಳಗೆ ಅತೃಪ್ತಿ, ಒಂದೇ ಟ್ರಾಕ್ ಮೇಲೆ ಬದುಕೋದು ತುಂಬಾ ಬೋರ ಆಗಿತ್ತು, ಕಾಲೇಜಿಗೆ ಬರುವ ಮಕ್ಕಳು ಹಳ್ಳಿ ಹುಡುಗರು ಅವಕ್ಕೆಲ್ಲಿ ಕಾನ್ವೆಂಟ್ ಇಂಗ್ಲೀಷ್ ಬರಬೇಕು. ಒಂದ ನಮೂನಿ ಅರ್‍ಧಮರ್‍ಧ ಇಂಗ್ಲೀಷ ಪಾಠ ಹೇಳೋದು, ಪ್ರಶ್ನೆಗಳಿಗೆ ಉತ್ತರ ಬರಿಸೋದು, ಒಮ್ಮೊಮ್ಮೆ ಬಸವರಾಜು ಜೊತೆ ಬಾಳಾ ಜಗಳಾ ಮಾಡಿದ್ದೆ ಅಂವ ಸ್ಟಿಂಜಿ ಇದ್ದ. ಇಂತಹ ಊರಾಗ ಖರ್‍ಚು ಕಡಿಮೆ ಆಗ್ತದ, ರಿಟಾಯಿರ್‍ಡ್ ಆದಮೇಲೆ ಸಿಟಿಯಲ್ಲಿ ಹೋಗಿ ಇರೋಣ ಅಂತ ಸಾಧಸುತ್ತ ಇದ್ದ. ಇಷ್ಟರ ನಡುವೆ ಕಾಲೇಜಿಗೆ ಬರುವ ಹುಡಗಿಯೊಬ್ಬಳು ಅವನಿಗೆ ಹತ್ತಿರವಾದಳು. ನಾನು ಜಗಳ ಮಾಡಿ ರಾಜಸ್ಥಾನದಲ್ಲಿರುವ ತಮ್ಮನ ಮನಿಗೆ ಹೋಗಿಬಿಟ್ಟಿದ್ದೆ. ಕಾಲೇಜಿನ ಮ್ಯಾನೇಜಮೆಂಟ್ ಒತ್ತಾಯ ಮಾಡಿ ವಾಪಸ್ಸು ಕರೆಸಿಕೊಂಡರು. ಒಂದ ನಮೂನಿ ಜೀವಾನ ಏನೂ ಥ್ರಿಲ್ ಇಲ್ಲ. ನಾವು ಬೆಳದ ವಾತಾವರಣ ಹೈ ಹೈ. ಬಸವರಾಜು ತುಟಿಗೆ ಲಿಪ್ ಸ್ಟಿಕ್ ಹಚ್ಚುವುದನ್ನು ವಿರೋಧಿಸುತ್ತಿದ್ದ. ನಾನು ಕಾಲೇಜಿನ್ಯಾಗ ಸ್ಟಾಪ್ ಜೊತೆ ಮಾತನಾಡಿದರೆ ಸಿಟ್ಟಿಗೇಳುತ್ತಿದ್ದ, ಮೃಣಾ ಮದುವೆ ಆತ ಅಂದರೆ ಗಂಡಂದಿರು ಒಂದ ನಮೂನೆ ಪೊಸೆಸಿವ್ ಆಗ್ತಾರ, ಹೆಂಡತಿ ಯಾವಾಗ ಕೈಕೊಟ್ಟ ಹೋಗ್ತಾಳೋ ಎಂಬ ಗುಮಾನಿ. ನೀನ್ಯಾಕ ಒಂದು ಹುಡುಗನ್ನು ಹುಡುಕಿಕೊಳ್ಳಲಿಲ್ಲ?”

ಮೃಣಾಲಿನಿ ಧಡಾಕ್ಕನೆ ಉತ್ತರ ಕೊಡಲಿಲ್ಲ. ತಾನು ಸವೆದ ಬದುಕಿನ ಯಾತ್ರೆಯ ಹಳವಂಡಳು ಗೆಳತಿಗೆ ಹೇಗೆ ಅರ್‍ಥವಾಗುತ್ತದೆ. ತನ್ನ ಒಂಟಿ ಪಯಣ ದಾರಿ, ಎರಡು ಹೊತ್ತು ಹೊಟ್ಟೆ ತುಂಬಿಕೊಳ್ಳುವ ಪರಿ, ಅರ್‍ಧಕ್ಕೆ ನಿಂತ ಓದು-ಕನಸು, ಹಸಿದ ಹೊಟ್ಟೆಗೆ ಬದುಕಿನ ಇತರ ಯಾವ ಮಜಲುಗಳನ್ನು ನಿರೀಕ್ಷಿಸುವ ಹಾಗಿರಲಿಲ್ಲ. ಆಹಾರದ ಕೊರೆತೆಯಿಂದ ಆದ ಆರೋಗ್ಯದ ಸಮಸ್ಯೆಗಳು, ಆಪರೇಶನ್, ಅಲೆದಾಟ ಯಾವುದು ಸತ್ಯ ಈ ಬದುಕಿನ ಕನ್ನಡಿಯ ಪ್ರತಿಬಿಂಬಕ್ಕೆ ನಾಗರಿಕತೆಯ ಕೃತಕ ನಾಜೂಕುಗಳೂ ಸುಖಗಳನ್ನು ಅವಳು ಅರಸಲೇ ಇಲ್ಲ. ವ್ಯವಹಾರಶೀಲಳಲ್ಲದ ಭಾವ ಜೀವಿಯಾಗಿದ್ದ ತನಗೆ ಮುಂದಿನ ಮೆಟ್ಟಿಲುಗಳನ್ನು ಏರುವ ಮಜಲುಗಳೇ ಗೋಚರಿಸಲಿಲ್ಲ. ಇವೆಲ್ಲಾ ಅನುಭವಗಳನ್ನು ತನ್ನನ್ನೂ ಅವ್ವ ಅಜ್ಜಿಯಾಗಿಸಿವೆ ಅಂತ ಗೆಳತಿಗೆ ಹೇಗೆ ಬಿಂಬಿಸಲಿ. ಅವಳೋ ಹೊಟ್ಟೆ ತುಂಬ ಉಂಡು ಮೋಜು ಮಜಾ ಅಂತ ಜೀವನ ಕಳೆದವಳು. ಆರ್‍ಥಿಕ ಸುಭದ್ರತೆ ಇದೆ ಮೃಣಾಲಿನಿಗೆ ಅನಿಸತೊಡಗಿತು. ತಾನು ಮೊದಲ ಬಾರಿಗೆ ತಪ್ಪಿತಸ್ಥಳೆಂದು! ಒಂದು ಖಾಯಂ ನೌಕರಿಯನ್ನು ಹುಡುಕಿಕೊಂಡು ಜೀವನ ಕಳೆಯಲಿಲ್ಲವಲ್ಲ! ಅವಳು ಸುಮ್ಮನೆ ಗೋಡೆಯ ಮೇಲಿನ ಗಡಿಯಾರವನ್ನು ನೋಡುತ್ತ ಕುಳಿತುಕೊಂಡು ಬಿಟ್ಟಳು. ಅಮಲ ಯಾವುದಕ್ಕೆ ಮಜಾ ಅನ್ನುತ್ತಿದ್ದಾಳೆ ಎಂಬುದೂ ಅವಳ ಮಂಡೆಗೆ ಹೊಳೆಯಲಿಲ್ಲ. “ನೋಡು ಮೃಣಾ ಬಸವರಾಜ ಧಿಡೀರಂತ ಹಾರ್‍ಟ್ ಅಟ್ಯಾಕ್ ಬಂದು ಹೋಗಿಬಿಟ್ಟ. ಅರ್‍ಧ ಕೋಟಿ ರೊಕ್ಕ ಗಳಿಸಿ ಇಟ್ಟಿದ್ದ ನನ್ನ ಪೆನ್‌ಶನ್ ರೊಕ್ಕ ಸುಮಾರು ಇಪ್ಪತ್ತು ಲಕ್ಷ ಬಂತು. ಸಿಟಿಯೊಳಗೆ ಒಂದು ಛಂದ ಮನಿ ತಕ್ಕೊಂಡೆ. ಹೋದ ತಿಂಗಳು ಝಮ್ ಅಂತ ಯುರೋಪ್ ಟೂರ ಹೋಗಿ ಬಂದೆ, ತಮ್ಮ ಅಲ್ಬಂ ತಂದೀನಿ ನೀನು ಸ್ವಲ್ಪ ನೋಡು. ಅಮಲಾ ಯುರೋಪ ಟೂರನ ಅಲ್ಬಂ ಅವಳ ಕೈಯಲ್ಲಿ ಇರಿಸಿದಾಗ ಮೃಣಾಲಿನಿ ಇನ್ನೂ ಮಂಕಾದಳು.

ಫ್ರಾನ್ಸ್, ಇಟಲಿ, ಪ್ಯಾರಿಸ್, ರೋಮ್, ವ್ಯಾಟಿಕನ ಸಿಟಿ, ಪೋಲೆಂಡ, ಸ್ಕಾಟಲೆಂಡ್ ದೇಶಗಳ ದೊಡ್ಡ ದೊಡ್ಡ ಪಾರ್‍ಕುಗಳು, ಬ್ರಿಜ್‌ಗಳು, ಟವರಗಳು ಚರ್‍ಚುಗಳ ಭಾವ ಚಿತ್ರಗಳನ್ನು ನೋಡುತ್ತ ಮೃಣಾಲಿನಿ ಮಂತ್ರ ಮುಗ್ಧಳಾದಳು. ಗೆಳತಿ ಪಬ್ಬು ಕಾಸಿನೋಗಳ ಮುಂದೆ ನಿಂತು ವಿಚಿತ್ರ ವೇಷಗಳಲ್ಲಿ ಭಾವ ಚಿತ್ರಗಳನ್ನು ತೆಗೆಯಿಸಿಕೊಂಡಿದ್ದಳು. ಆಕ್ಸಪರ್ಡ ಯೂನಿರ್ವಸಿಟಿಯ ಮುಂದೆ ನಿಂತ ಅವಳ ಭಾವಚಿತ್ರವು ಮೃಣಾಲಿನಿಗೆ ತುಂಬ ಹಿಡಿಸಿತು. ದೂರದ ದೇಶಗಳ ಸ್ಮಾರಕಗಳು ಚಿತ್ರಗಳಲ್ಲಿ ಮಾಯಾಲೋಕವನ್ನೇ ಬಿಂಬಿಸಿದ್ದವು. ಮೃಣಾ ಎರಡು ಬಾರಿ ಅಲ್ಬಂ ಅನ್ನೂ ತಿರುವಿ ಚಿತ್ರಗಳಲ್ಲಿ ಮಾಯಾಲೋಕವನ್ನೇ ಬಿಂಬಿಸಿದ್ದವು. ಹೆಚ್ಚಿನ ಫೋಟೋಗಳು ಚರ್‍ಚಿನ ಮೇಲಿನ ಗೋಡೆಗಳಲ್ಲಿ ಸ್ತೂಪಗಳು ಚೌಕಗಳಲ್ಲಿ ನಿಲ್ಲಿಸಿದ್ದ ವಿಂಜಿಯ ಗಂಡಸರ ಬೆತ್ತಲೆ ರೂಪಕಗಳು ಅವಳಿಗೆ ಕಂಡವು. ತಟ್ಟನೆ ಏನೊಂದೂ ಯೋಚಿಸದ ಅಮಲಳಿಗೆ ಕೇಳಿದಳು “ಯಾಕೆ ಇಷ್ಟೊಂದು ಬೆತ್ತಲೆ ಸ್ಟ್ಯಾಚುಗಳ ಫೋಟೋ ಹೊಡಿದಿರುವೆ.”

“ಅದೊಂದು ಥ್ರಿಲ್ ಫರಪೆಕ್ಟ್ ಗಂಡಸಿನ ಅಂಗಾಂಗಗಳು ಎಷ್ಟೊಂದು ಸುಂದರವಾಗಿ ಕೆತ್ತಿದ್ದಾರೆ ಅಲ್ಲಿ ಮುಕ್ತ ಸಕ್ಸ ಇದೆಯಲ್ಲ ನಮ್ಮ ದೇವಾಲಯಗಳು ಏನ ಕಮ್ಮಿ ಅದಾವೇನ ನನಗೆ ಯುರೋಪಿನ ತುಂಬೆಲ್ಲಾ ಇಂತಹ ಬೆತ್ತಲೆ ಗಂಡಸರ ಸ್ಟ್ಯಾಚುಗಳು ಬಹಳ ಆಕರ್‍ಷಕ ಅನಿಸ್ತು. ಅದಕ್ಕೆ ಅಷ್ಟೊಂದು ಫೋಟೋ ತೆಗೆದೆ. You know mruna I am too much passionated to man ಮೃಣ ಸಂಕೋಚದಿಂದ ಮುದುಡಿದಳು. ಅಮಲ ಯುರೋಪಿನ ಪ್ರವಾಸದ ಅನುಭವಗಳನ್ನು ಕೇಳುತ್ತ ಹೋದಳು. ಮೃಣಾಲಿನಿ ಸುಮ್ಮನೆ ಮೂಕಿಯಂತೆ ಅವಳ ಮಾತುಗಳನ್ನು ಕೇಳುತ್ತ ಹೋದಳು. ಅವಳ ಮಾತುಗಳು ಮೃಣಾಲಿನಿಯನ್ನು ದಾರಿ ತಪ್ಪಿಸಿ ಬಿಟ್ಟಹಾಗೆ ಆಯಿತು. ಜೀವನದ ಮೊದಲ ದಿನಗಳನ್ನು ಕೆಲವರು ಬೇಗ ಮರೆಯುತ್ತಾರೆ. ಮತ್ತೆ ಕೆಲವರು ಜೀವನ ಉದ್ದಕ್ಕೂ ಇಟ್ಟುಕೊಂಡು ಕೊರಗುತ್ತಾರೆ. ಅಂತರ್‍ಜಾಲದ ವ್ಯೂಹದಿಂದ ಮನುಷ್ಯ ಎಲ್ಲಿಂದಲೋ ಎಲ್ಲಿಗೋ ನುಸುಳಿ ಎನು ಆಗಬೇಕು ಪ್ರತಿದಿನ ಹೊಸತುಗಳ ಹುಡುಕಾಟ ಥ್ರಿಲ್ ಬೇಕೆನಿಸುವ ಮನಸ್ಸುಗಳು ತಮಗೆ ಸರಿ ಎನಿಸಿದ ದಾರಿಯಲ್ಲಿ ಮುನ್ನುಗ್ಗುತ್ತಾರೆ. ಅಮಲ ಅಂತಹ ಥ್ರಿಲ್‌ಗಳ ಬಗ್ಗೆ ಹೇಳುತ್ತಿದ್ದಳು.

ನೋಡು ಮೃಣಾ ಯುರೋಪಿನಲ್ಲಿಯ ಫ್ರೀಡಂ ನಮ್ಮ ಇಂಡಿಯಾದಾಗ ಇಲ್ಲ ನೋಡು. ತಮಗೆ ಸರಿ ಅನಿಸಿದವರ ಜೊತೆಗೆ ಡೇಟಿಂಗ ಸೆಕ್ಸ ಇರಿಸಿಕೊಳ್ತಾರ ಸರಿ ಹೊಂದಲಿಲ್ಲ ಅಂದ್ರೆ ಬೇರೆ ಆಗ್ತಾರ. ನನಗಂತೂ ಅಂತಹ ಫ್ರೀಡಂ ಇರಬೇಕು ಅನ್ಸ್‌ತದ. ನಾವು ಕ್ಲಬ್, ಬಾರ್, ಕ್ಯಾಸಿನೋಕ್ಕೆ ಹೋಗಿದ್ವಿ ಮಸ್ತ ಮಜಾ ಮಾಡಿದ್ವಿ, ಹೊಟ್ಟೆತುಂಬ ಶ್ಯಾಂಪೇನ ಕುಡದ್ವಿ, ಕ್ಯಾಬರೇ ಡ್ಯಾನ್ಸಗೆ, ಬೆಲ್ಲಿ ಡ್ಯಾನ್ಸಗೆ ಹೋಗಿದ್ವಿ, ಎಂತಹ ಫಿಗರ ಹೆಣ್ಣು ಮಕ್ಕಳದ್ದು ನೋಡಿದರೆ ಹೆಣ್ಣು ಮಕ್ಕಳಾದ ನಮಗೆ ಮೈಯಲ್ಲಾ ರೋಮಾಂಚನವಾಯ್ತು. ಇನ್ನು ಗಂಡುಸರ ಗತಿ ಏನು. ನಾನಂತೂ ಪೂರ್‍ತಿ ಸುಸ್ತು. ಮೃಣಾಲಿನಿಗೆ ಅಮಲಳ ಅರವತ್ತು ವಯಸ್ಸು ಮತ್ತು ಅವಳ ಕಾಮದ ವಾಸನೆ ಮೂಗಿಗೆ ಬಡಿಯಿತು. ಇಂತಹ ವಿಷಯಗಳು ತನ್ನ ಒಗ್ಗುವದಿಲ್ಲ. ನೀನು ಹೇಳಬೇಡ ಅಂತ ಹೇಳಲೂ ಅವಳಿಗೆ ಸಂಕೋಚ ಎನಿಸಿತು.

ನೀನು ಯಾರ ಜೊತೆಗೆ ಕ್ಯಾಬರೇಗೆ ಹೋಗಿದ್ದಿ ಅಂತ ಮಾತು ಮರೆಸಲು ಮೃಣಾಲಿನಿ ಕೇಳಿದಳು. “ಮತ್ಯಾರ ಜೊತೆ? ತಮ್ಮನ ಜೊತೆಗೆ ನಾವು ಯುರೋಪ ಟೂರ ಹೋಗೋಕೆ ಮುಂಚೆ ಮಾತನಾಡಿಕೊಂಡಿದ್ವಿ, ಬಾರ್, ಕ್ಯಾಬರೇ, ಡಿಲಕ್ಸ ಎಲ್ಲವೂ ಮುಕ್ತವಾಗಿ ಎಂಜಾಯ್ ಮಾಡಬೇಕು. ಒಟ್ಟಾರೆ ಎಲ್ಲ ಅತೃಪ್ತಿಗಳೂ ತೃಪ್ತಿ ಆಗಬೇಕು.” ಮೃಣಾಲಿನಿಗೆ ನಾಲಿಗೆ ತುದಿಯವರಿಗೆ ಬಂತು ತಮ್ಮನೊಂದಿಗೆ ಇಂತಹದೆಲ್ಲ ನೋಡಲು ಸಂಕೋಚ ಎನಿಸಲಿಲ್ಲವೇ ಆದರೆ ಅವಳು ಕೇಳಲಿಲ್ಲ ಸುಮ್ಮನಾದಳು. ಅಮಲ ವ್ಯಾಟಿಕನ್ ಸಿಟಿಯ ಬಗ್ಗೆ ಹೇಳತೊಡಗಿದಳು. ಅಲ್ಲಿಯ ಪೋಪ್ ಆಡಳಿತ, ತನ್ನೊಪ್ಪಿಗೆ, ಅಲ್ಲಿನ ಚರ್‍ಚಿನ ಮೇಲ್ಗಡೆ ಹೊರಗಡೆ ಇರುವ ಬೆತ್ತಲಾದ ದೇವ ಮೂರ್‍ತಿಗಳು ರೆಕ್ಕೆ ಹಚ್ಚಿಕೊಂಡು ಹಾರುವ ರೀತಿ ಜನರ ಮೂಡನಂಬಿಕೆಗಳು, ಮುರಿದ ದಾಂಪತ್ಯ, ಹೆದರಿಕೆ ಇದ್ದ ತಪ್ಪುಗಳು, ಅಲ್ಲಿಯ ಆರೋಗ್ಯವಂತ ಯುವಕರು, ಮುಕ್ತ ಪ್ರೇಮ, ಸಾಮಾನ್ಯವಾಗಿ ನಮ್ಮಲ್ಲಿ ಹಾಗಾಗುವದಿಲ್ಲದರೆ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹೇಳಿದಳು. ಮೃಣಾಲಿನಿ ಒಂದು ದೀರ್‍ಘ ನಿಟ್ಟುಸಿರು ಬಿಟ್ಟು ಅರ್‍ಧ ಕಪ್ ಚಹಾ ಕುಡಿಯೋಣವೆಂದು ಎದ್ದು ಅಡುಗೆ ಮನೆಯೊಳಗೆ ಹೋದಳು. ಅಮಲ ಮಾತನಾಡುತ್ತ ಅವಳನ್ನು ಹಿಂಬಾಲಿಸಿದಳು. ಮಾತಿನ ಧಾಟಿ ಚಹಾಕ್ಕೆ ಸಕ್ಕರೆ ಹಾಕಲೇನು ಅಂತ ಕೇಳಿದಳು. ಅಮಲ ಬೇಡವೆಂದಳು, ನಾನು ಡಯಾಬೇಟಿಕ್ ಅಂದಳು.

ಅಮಲ ಮತ್ತೆ ಮುಂದುವರಿದಳು. “ನೋಡು ಮೃಣಾ ಮೆಚ್ಚಿಸುವ ಹುಚ್ಚು ನಮಗಿರಬಾರದು. ವರ್‍ತಮಾನದಲ್ಲಿ ನಮಗೆ ಸರಿಕಂಡದ್ದನ್ನು ನಾವು ಮಾಡಬೇಕು ಕರ್‍ತವ್ಯದ ಜೊತೆಗೆ ನಮ್ಮ ವೈಯಕ್ತಿಕ ಖುಷಿಗಳ ಬಗ್ಗೆ ನಾವು ಆಲೋಚಿಸಬೇಕು. ಕೆಲವರು ಸ್ವಲ್ಪ ಹಿಂದೆ, ಕೆಲವರು ಸ್ವಲ್ಪ ಮುಂದೆ. ನಿನ್ಯಾಕೆ ಪಿ.ಜಿ. ಮುಗಿಸಲಿಲ್ಲ. ಇಷ್ಟೊತ್ತಿಗೆ ನಿನ್ನ ಜೀವನದ ಖದಿರೇ ಬೇರೆ ಆಗಿರುತ್ತಿತ್ತು. ನೀನು ಅಂತರಂಗದ ಸೆಳವಿಗೆ ಯಾಕೆ ಸ್ಪಂದಿಸಲಿಲ್ಲ. ಬದುಕಬೇಕು ನಾಶವಾಗಬಾರದು. ತಿಳಿದುಕೊಳ್ಳಬೇಕು, ಅಜ್ಞಾನಿಯಾಗಿರಬಾರದು. ಈ ಪ್ರಾಕ್ಟಿಕಲ್ ಪ್ರಪಂಚದ ಯಾವ ಜ್ಞಾನವನ್ನು ಹೊಂದದೇ ಬರೀ ಭಾವನಾತ್ಮಕವಾಗಿ ಜೀವಿಸಿದೆಯಲ್ಲಿ ಏನು ಉಪಯೋಗ ಬಂತು, ಬಹಳ ಹುಚ್ಚ ಅದೀ ನೀ. ನಾವು ಸದಾ ಸಂತುಷ್ಟರಾಗಿಲು ಹಂಬಲಿಸಬೇಕು ಸಂತೋಷವನ್ನು ನೀಡಬಹುದಾದ ವಸ್ತುಗಳು ದೃಶ್ಯಗಳು ಯೋಚನೆಗಳು ಭೋಗ ವಸ್ತುಗಳು ಆನಂದ ಹೊಂದುವ ಸಾಧನಗಳು ಎಲ್ಲವನ್ನೂ ನಮ್ಮದಾಗಿರಿಸಿಕೊಳ್ಳಬೇಕು. ಹಾಂಗ ಹೇಳತೀನಿ ಅಂತ ಬೇಸರ ಮಾಡಿಕೊಳ್ಳಬೇಡ, You wasted your valuable life. ನಿನಗೆ ಒಮ್ಮೆಯೂ ಖಚಿತ ಬೇಕೆನಿಸಲಿಲ್ಲವೇ? ಮೃಣಾಲಿನಿ ಸುಮ್ಮನೆ ಚಹಾದ ಕಪ್ಪನ್ನು ಅವಳ ಮುಂದೆ ಹಿಡಿದಳು. ತನ್ನನ್ನು ತಿರಸ್ಕರಿಸಿದವರ ಬಗ್ಗೆ ಒಂದು ತೆರನಾದ ಅಸಮಾಧಾನ ಹಾಗೂ ದ್ವೇಷ ಒಳಗೊಳಗೇ ಕುದಿಯುತ್ತಿರುತ್ತದೆ. ವ್ಯಕ್ತಿ ಅಸಂತುಷ್ಟವಾಗಿ ಒಳಗೊಳಗೆ ಗೊಣಗುಟ್ಟುತ್ತಿರುತ್ತಾನೆ. ತನಗೆ ದಕ್ಕದ ಸುಖದ ಬಂದುಗಳಲಿ ಪರಿತಪಿಸುತ್ತಿರುತ್ತಾನೆ, ನೋವು ಒತ್ತಡಗಳನ್ನು ಬದುಕಿರುವ ಎಲ್ಲರೂ ಅನುಭವಿಸುತ್ತಲೇ ಇರುತ್ತಾರೆ. ಯಾವ ಚಡಪಡಿಕೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆಯೋ ಅದೇ ನಮ್ಮನ್ನು ಹತಾಶೆಗೂ ಕರೆದೊಯ್ಯುತ್ತದೆ, ಆ ಸಂಜೆ ಗೆಳತಿಯರಿಬ್ಬರೂ ವಿಮುಖರಾಗಿ ನಡೆದ ತಮ್ಮ ಬದುಕಿನ ದಾರಿಗಳ ಬಗ್ಗೆ ಅರ್‍ಥೈಸುತ್ತಿದ್ದರು. ಒಂಟಿ ಪಯಣ, ಜೋಡಿ ಪಯಣ, ಬಡತನ ಸಿರಿತನದ ಬಂಧನ ಮುಕ್ತತೆ ಎಲ್ಲವೂ ಅವರ ಮಾತಿನಲ್ಲಿ ಬಂದು ಹೋದವು.

ಮೃಣಾಲಿನಿ ಹೇಳಿದಳು “ನಾನು ಬದುಕನ್ನು ಅವಜ್ಞೆಯಿಂದ ಕಳೆಯಲಿಲ್ಲ. ಬಡತನದಲ್ಲೂ ಒಂದು ರಾಗ ಇತ್ತು. ಒಂಟಿತನದಲ್ಲೂ ಒಂದು ಹೋರಾಟ ಇತ್ತು. ಮತ್ತೆ ಪಾರಂಪರಿಕೆಯ ಗಟ್ಟಿತನದಲ್ಲಿ ಒಂದು ದೃಢವಾಗಿ ನಂಬುಗೆ ಇತ್ತು. ನದಿ, ಸಾಗರ, ಮಳೆ ಮೋಡ, ಬಿಸಿಲು ಬೆಂಕಿ, ಹೂ-ಚಿಟ್ಟೆ, ಗಾಳಿ ಗಂಧ ಎಲ್ಲವೂ ನನ್ನೊಳಗೆ ಇಳಿದಿವೆ. ನಾನು ತುಂಬ ಬಯಲಾಗಿದ್ದೇನೆ. ಎಲ್ಲ ಜಂಜಡಗಳ ದಾಟಿ ಮುಕ್ತವಾಗಿ ನಡೆಯುತ್ತಿದ್ದೇನೆ. ಈ ಬದುಕಿನ ಅನಂತತೆಯ ಹಾದಿಯಲ್ಲಿ ಎಲ್ಲವೂ ಮನಸ್ಸಿಗೆ ಮುದ ಹದ ನೀಡಿದೆ. ನನಗೆ ಈ ಬದುಕಿನ ದಿವ್ಯತೆ ಖುಷಿ ಅನಂದ ಎಲ್ಲವನ್ನೂ ಕೊಟ್ಟಿದೆ. ನಾನು ಮಾಡುವ ಪುಟ್ಟ ಕೆಲಸವೂ ನನಗೆ ತೃಪ್ತಿ ಕೊಟ್ಟಿದೆ. ನನಗೆ ಈ ಬದುಕು ಸಮನ್ವಯ ದೃಷ್ಟಿ ಕೊಟ್ಟಿದೆ. ಎಲ್ಲಾ ಚೇತನಗಳು ಜಾಗರೂಕತೆಗಳೂ ಪ್ರಜ್ಞೆಗಳು ನನ್ನದಾಗಿವೆ. ಇದ್ದುದರಲ್ಲಿಯೇ ನಾನು ಸಮರ್‍ಥಳಾಗಿ ಖುಷಿಯಿಂದ ಈ ದಾರಿಯಲಿ ನಡೆಯುತ್ತಿದ್ದೇನೆ ಅಮಲಾ ನನ್ನ ಬದುಕಿನ ಮೌಲ್ಯಗಳು ಅತ್ಯಂತ ಮಾನವೀಯ ಕಳಕಳಿ ಉಳ್ಳದ್ದಾಗಿವೆ. ನನಗೆ ನನ್ನ ನೈತಿಕತೆಯಲ್ಲಿ ತುಂಬ ಗರ್‍ವ, ಬದುಕಿನಲ್ಲಿ ಎದುರಿಸಬೇಕಾದ ದುಃಖ ದುಮ್ಮಾನಗಳು ತಾಮಸಿಕ ಶಕ್ತಿಗಳನ್ನು ಮನುಷ್ಯ ಏಕಾಕಿಯಾಗಿ ಎದುರಿಸಲು ಸಾಧ್ಯ. ನನ್ನೊಡಲಿನ ಭಾವಿಯ ಜಲದಲಿ ಶಾಂತಿ ಇದೆ”

ಅಮಲ ಊರಿಗೆ ಹೋಗುವವರೆಗೆ ಯೂರೋಪಿನ ಸುದ್ದಿ Sex ನ ಸುದ್ದಿಗಳನ್ನು ಮಾತನಾಡಲೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೧
Next post ಹರಿದಿದೆ ನೋಡಿ ಕನ್ನಡ ರಥವು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…