ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ
ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ.
ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ-
ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ
ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ
ಅವನು ದೇವಪ್ರಾಯ, ಉಳಿದರಿಗೆ ಯತಿರಾಜ
ನನಗಿರಲಿ ಇವನಂಥ ಚಾರಿತ್ರ, ಗುಣ, ಓಜ-
ವೆಂದು ಹೊಳೆದಿತ್ತೆನ್ನ ಮನಕೊಂದು ಇನಿಗಳಿಗೆ.
ಅವಳಾ ಮಹಾವನಿತೆ ಅವಳ ಕೇಶಕಲಾಪ-
ದಿಂದೆಸೆದಿತೆಲ್ಲೆಡೆಗೆ ಪರಮಪಾವನ ಜ್ವಾಲೆ.
ಇದರಿಂದ ಕಳೆಯುವುದು ಹಿಂದುಮುಂದಿನ ಪಾಪ;
ಯೋಗಿನಿಯು ಸುಕುಮಾರಿಯಿವಳು ಕೋಮಲಬಾಲೆ-
ಯೆಂದಿತ್ತು ಜನ; ಮನವು ಕೇಳಿತ್ತು. ಇವಳಲ್ಲೆ
ಇನಿತು ದಿನ ನೀನರಸಿ ಕಾಣದಂತಹ ನಲ್ಲೆ ?
*****