– ಪಲ್ಲವಿ –
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ!
ಇಳೆಯೊಳಿಡಿದ ಕುಳಿರನಳಿದು
ಬಲಿಯಲು ಹೊಸಕಾಂತಿ!
ಮೂಡುಗಾಳಿ ಬೀಸಿ ಬೀಸಿ,
ನಾಡ ಬೆಳೆಯ ಕಸುಕ ಸೋಸಿ,
ಮಾಡಿ ವಿವಿಧಧಾನ್ಯರಾಶಿ,
ಹಸಿವೆಗೀಯೆ ಶಾಂತಿ…
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೧
ಕುಡಿಯೊಡೆದಿದೆ ಬರಲುಮಾವು
ಗಿಡಗಿಡ ಕಾಡೆಲ್ಲ ಹೂವು,
ಹುಡುಕುತಲಿದೆ ಜೇನ್ಗೆ ಠಾವು
ಜೇನ್ನೊಣಗಳ ಹಂತಿ !
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೨
ಬಿಸುಪ ಕಳೆದುಕೊಂಡ ರವಿ,
ಎಸೆವನಿದೋ ತೀವಿ ಛವಿ,
ಹೊಸಹಬ್ಬವಿದನಿತು ಸವಿ!
ಬುವಿಯು ಭಾಗ್ಯವಂತಿ…
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೩
ಒಲವಮ್ಮನ ಜಾತ್ರೆಗೆಂದು
ಚೆಲುವಿನ ಗುಡಿಯೆತ್ತಿ ನಿಂದು
ನಲಿಯುತಲಿದೆ ಹೆಣ್ಣು-ಗಂಡು,
ಇಲ್ಲದೆ ವಿಶ್ರಾಂತಿ….
ಕಳೆದು ಭ್ರಾಂತಿ, ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೪
ಎಳ್ಳು-ಬೆಲ್ಲ ಚಿಗುಳಿ ಹದ
ಒಲ್ದಾಯಿಗೆ ಶ್ರೀಪ್ರಸಾದ,
ಸಲ್ಲಿಸಿ ಸೆಳೆಯುವರು ಮುದ
ಏನಿದೇನು ಶಾಂತಿ….
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೫
ಎಳ್ಳ ನೇಹ ಎದೆಯೊಳಾಯ್ತು,
ಬೆಲ್ಲದ ಸಿಹಿ ಸೊಲ್ಲೊಳಾಯ್ತು,
ಎಲ್ಲಿಯ ಸಮರಸದ ಗುರುತು
ಶಾಂತಿ ಶಾಂತಿ ಶಾಂತಿ!
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ!
*****