ಈಗ ಹೊರಬಂತೆಲ್ಲ ಸತ್ಯ,
ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ;
ಯಾರೇನೆ ಆಡಲಿ ಅಪಥ್ಯ
ಭಂಡನುಡಿಗಳ ಕೊಂಚ ಸಹಿಸಿಕೊ
ಸುಳ್ಳನೆಂಬುದು ಸಿದ್ಧವಾದರೂ,
ತನ್ನೊಳಗೆ ಅಥವ ನೆರೆಹೊರೆಗೆ
ನಾಚದಂಥವರ ಜೊತೆ ಸ್ಪರ್‍ಧೆ
ಹಿರಿಜೀವ ನಡೆಸೀತು ಹೇಗೆ?
ಹುಚ್ಚು ಬೆರಳಾಡಿದರು ಮೇಲೆ,
ಬರಿ ಬಂಡೆಗಲ್ಲುಗಳ ನಡುವೆ,
ನಾದ ಚೆಲ್ಲುವ ವೀಣೆ ಹಾಗೆ
ನಕ್ಕು ಮುಖ ತಿರುಗಿಸಾ ಕಡೆಗೆ.
ಹಿರಿದಾದದ್ದಿದೆ ಗೆಲುವಿಗಿಂತ,
ತಾಳಿಕೋ ತಲೆಯೆತ್ತಿ ನಿಂತುಕೋ;
ಗೊತ್ತಿರುವ ಎಲ್ಲದಕ್ಕಿಂತ
ಅದೆ ಕಠಿಣ ಅಲ್ಲವೆ, ಕೇಳಿಕೋ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಏಟ್ಸನಿಗೆ ಆಸರೆ ನೀಡಿದ್ದಲ್ಲದೆ ಐರಿಷ್ ರಂಗಭೂಮಿಯ ಪುನರುಜ್ಜೀವನಕ್ಕೆ ಅವನನ್ನು ಹುರಿದುಂಬಿಸಿದ ಲೇಡಿ ಗ್ರೆಗರಿಯನ್ನು ಕುರಿತ ಕವನ. ಐರ್‍ಲೆಂಡಿನ ಭೂಮಿ ಚಳುವಳಿಯ ಸಂಬಂಧದಲ್ಲಿ ಅವಳ ‘ಕೂಲೆ’ ಬಂಗಲೆಯ ಸುತ್ತಲ ಜಮೀನು ವಿವಾದಕ್ಕೊಳಗಾಯಿತು. ಖಿನ್ನಳಾದ ಲೇಡಿ ಗ್ರೆಗರಿಯನ್ನು ಸಂತೈಸುವ ಧಾಟಿಯಲ್ಲಿ ಬರೆದ ಪದ್ಯ ಇದು.