ನನಗೆ ಆಗ ವಯಸ್ಸು ಇಪ್ಪತ್ತೆರಡು, ಹೆಣ್ಣು ಮಕ್ಕಳ ಕಾಲೇಜದಲ್ಲಿ ಬಿ.ಎ. ಕ್ಲಾಸದಲ್ಲಿದ್ದೆ. ಕಾಲೇಜಕ್ಕೆ ಒಂದು ವಸತಿಗ್ರಹವಿತ್ತು. ಅಲ್ಲಿ ನಾನಿದ್ದೆನು. ನನ್ನ ಸ್ವಭಾವ “ವಿಲಕ್ಷಣ” ಎನ್ನುವರು. ಅದಕ್ಕಂತಲೇ ಏನೋ ವಸತಿಗ್ರಹದಲ್ಲಿದ್ದರೂ ನನಗೆ ಸ್ನೇಹಿತರಾರೂ ಇರಲಿಲ್ಲ. ಸರೋಜಳು ಮಾತ್ರ, ಏಕೋ ತಿಳಿಯದು, ನನ್ನ ಪ್ರಾಣದ ಗೆಳತಿಯಾಗಿದ್ದಳು.
ನಮ್ಮ ಕಾಲೇಜದ ಅಟ್ಟದ ಮೇಲೆಯೇ ನಮ್ಮ ವಸತಿಗ್ರಹದ ಕೋಣೆ ಗಳಿರುವವು. ಕೆಳಗೆ ಕ್ಲಾಸು ಮುಗಿದೊಡನೆ ಮೇಲೆ ಬಂದು ಬಿಡುತ್ತಿದ್ದೆ, ನನ್ನ ವರ್‍ಗದ ಹುಡಿಗೆಯರು ಕ್ಲಾಸಿನಲ್ಲಿ ನಡೆದ ವಿಷಯವಾಗಿ ಏನಾದರೂ ಕೇಳಿದರೆ ನಾನು ತಿಳಿದುಕೊಂಡಷ್ಟು ಹೇಳಿ ಮೇಲೆ ಓಡಿಯೇ ಬಿಡುವೆನು. ಫಲಹಾರ ಮುಗಿಸುವೆನು. ಹಾಗೆಯೇ ತೋಟದಲ್ಲಾಗಲೀ, ಆಟದ ಬೈಲಿ ನಲ್ಲಾಗಲೀ, ಅಲೆದಾಡಲು ಸಾಗುತ್ತಿದ್ದೆ. ಒಮ್ಮೊಮ್ಮೆ ಎಲ್ಲಿ ಹೋಗಲೂ ಮನಸ್ಸಾಗದು, ಆಗ ಕೋಣೆಯ ಮುಂದಿನ ಪಟಾಂಗಣದಲ್ಲಿ ಹೆಜ್ಜೆಯಲ್ಲಿ ಹೆಜ್ಜೆ ಇಕ್ಕೆ ತಿರುಗುವೆ. ಆಟವೆಂದರೆ ಎಲ್ಲರಿಗೂ ಬೇಕಾದದ್ದು. ನನಗೆ ಅದರಲ್ಲಿ ಆಸ್ಥೆ ಏನ ಇಲ್ಲ, ಆದರೂ ನನ್ನ ಗಳತಿಯ ಜುಲುಮೆಗಾಗಿ ಆಟದಲ್ಲಿ ಸೇರಿದರೆ ನನ್ನ ಪಾಲಿಗೆ ಸೋಲು ಕಟ್ಟಿಟ್ಟದ್ದು. ಆಟ ಆಡುವದರಲ್ಲಿ ಜನರೇಕೆ ವೇಳೆ ಹಾಳು ಮಾಡುವರು ಎಂದು ನನಗೆ ಅನಿಸುವದು. ಇದೊಂದು ವಿಷಯದಲ್ಲಿ ಸರೋಜ ನನ್ನ ಪ್ರತಿ ಕಕ್ಷಿ. ಅವಳು ಯಾವಾಗಲೂ ಆಟದ ವಿಷಯವಾಗಿಯೇ ಮಾತಾಡುವಳು. ಮಾತಿಗೊಮ್ಮೆ ನಗುವಳು, ಎಲ್ಲಿಯಾದರೂ ಗದ್ದಲ ನಗು ಕೇಳ ಬಂದರೆ ಅಲ್ಲಿ ಸರೋಳಿದ್ದೇ ಇರುವಳು.
ಸರೋಜಳು ಎಲ್ಲ ಆಟದಲ್ಲಿಯೂ ಮುಂದೆ, ಚದುರಂಗ, ಕೇರಂ, ಬಾಡ್ಮಿಂಟನ ಮೊದಲಾದ ಆಟಗಳ ಪಂದ್ಯಾಟದಲ್ಲಿ ಬೆಳ್ಳಿ ಬಟ್ಟಲಗಳನ್ನು ಸಂಪಾದಿಸಿದ್ದಾಳೆ. ಅವಳ ಮೇಜಿನ ಮೇಲೆ ಪುಸ್ತಕಗಳಿಗಿಂತ ಅವೇ ಎದ್ದು ಕಾಣುವವು.
ಆದಿನ ರಾತ್ರಿ ಬೆಳ್ಳಿ ಬೆಳದಿಂಗಳು. ಆ ಬೆಳದಿಂಗಳಲ್ಲಿ ಪ್ರಪಂಚವೇ ಶೂನ್ಯವಾಗಿರುವಂತೆ ಕಂಡಿತು. ಸಮುದ್ರದ ಅಲೆಗಳು ಬಾ” ಎಂದು ಕೂಗುವಂತೆ ಭೋರ್ಗರೆಯುತ್ತಿದ್ದನು. ಪಾಠಗಳನ್ನು ಮುಗಿಸಿ ಮಲಗುವ ಹೊತ್ತಾಗಿದ್ದರೂ ಪಟಾಂಗಣದಲ್ಲಿ ನಾವಿಬ್ಬರೂ ನಿಂತು ಆ ಸೌಂದರ್ಯವನ್ನು ನೋಡುತ್ತಿದ್ದೆವು.
“ಈದಿನ ಇಡೀ ಊರು ಇಷ್ಟು ಬೇಗ ನಿದ್ರಾವಶವಾದ ಕಾರಣವಾದರೂ ಏನು!” ಸರೋಜ ನಕ್ಕಳು.
“ಕಾರಣವಿಲ್ಲದೇ ಪ್ರಪಂಚದಲ್ಲಿ ಯಾವ ಕೆಲಸವೂ ಆಗದೆಂಬ ವೇದಾಂತವನ್ನು ನೀನೇ ನನಗೊಂದು ದಿನ ಹೇಳಲಿಲ್ಲವೇ?
ನಾನು ಮುಗುಳು ನಗೆ ನಕ್ಕು ಸಮ್ಮನಾದೆನು.
“ಬೆಳದಿಂಗಳು ಎಷ್ಟು ರಮ್ಯವಾಗಿದೆ. ಹಾಗೆ ಅಲೆದಾಡಿ ಬರೋಣವೇ? ಸರೋಜಳೇ ಮಾತು ಮುಂದರಿಸಿದಳು.
“ಅದಕ್ಕೆಲ್ಲಿ ತಾನೇ ನಮಗೆ ಸ್ವಾತಂತ್ರ್ಯ? ಸುಪರಿಂಟೆಂಡಳ ಸರ್‍ಪ ಕಾವಲಿದೆ ಮರೆತೆಯಾ” ಎಂದಳು.
ಹೂಂ….ಸರಿ. ಇಲ್ಲಿಯೇ ಕುಳಿತು ಬೆಳದಿಂಗಳ ಶೋಭೆಯನ್ನು ನೋಡ ಬಹುದು, ಸಮುದ್ರನಾಥನ ಅರ್‍ಭಟೆಯ ನೃತ್ಯ ಕಾಣಬಹುದು.” ಎಂದವಳೇ ಎರಡು ಖುರ್‍ಚಿಗಳನ್ನು ಕೋಣೆಯೊಳಗಿಂದ ತೆಗೆದುಕೊಂಡು ಬಂದು ಇಟ್ಟಳು.
“ಸಮುದ್ರ ನಾಥ… ನಾಥ- ಅಹಽ- ಎಂಥ ಸೊಗಸಾದ-” ಈರ್‍ವರೂ ಖುರ್‍ಚಿಯ ಮೇಲೆ ಕುಳಿತೆವು.
ತುಸು ಹೊತ್ತು ಇಬ್ಬರೂ ಮಾತಾಡಲಿಲ್ಲ. ಮೆಲ್ಲಗೆ ಗಾಳಿ ಬೀಸುತಿತ್ತು. ಸಮುದ್ರದ ತೆರೆಗಳು ಕಾಣುತ್ತಿದ್ದವು. ಅದರ ಅರ್‍ಭಟವು ಕೇಳುತಿತ್ತು. ಸರೋಜಳು ಏಕೋ ತುಸು ಯೋಚನೆಯಲ್ಲಿದ್ದಂತೆ ಕಂಡಿತು ಒಂದು ಯಾರದೋ ಮೋಟಾರು ಹಾಯ್ದು ಹೋದಂತೆ ಶಬ್ದವಾಯಿತು. ಗಾಳಿಯ ಜೊತೆಗೆ ಶಬ್ದವೂ ಹವೆಯಲ್ಲುರುಳಿಹೋಯಿತು, ಕೊಳಲಿನ ನಾದ ಕೇಳಬರತೊಡಗಿತು. ಬಹು ಮಧುರವಾದ ಗಾನವು ಕೊಳಲಿನಿಂದ ಜಾರಿ ನಮ್ಮ ಕಿಏಗೆ ತಾಗಿತು. ಸರೋಜಳ ಮುಖವರಳಿತು. ಅವಳ ಚಂಚಲ ಕಣ್ಗಳು ವಿಕಸಿತವಾದವು. ನನ್ನನ್ನು ನೋಡಿದವು, “ಎಲ್ಲಿಯೋ ಕೊಳ ಊದುತ್ತಿರುವಂತಿದೆ ….” ಎಂದೆನು. ‘ನಡುವೆ ಮಾತಾಡಬೇಡ’ ಎಂದು ಸೂಚಿಸುವಂತೆ ಸರೋಜಳು ಸನ್ನೆ ಮಾಡಿದಳು. ಗಾನದಲ್ಲಿ ಇಬ್ಬರೂ ಲೀನರಾದೆವು.
“ನಿಜವಾಗಿಯೂ ಕೊಳಲುಗಾನ ಜಗತ್ತನ್ನು ಲೀನ ಮಾಡಿಬಿಡುವದು. ಈಗಿನ ನಮ್ಮ ಈ ಅನುಭವವನ್ನು ವಿವರಿಸಲು ಶಬ್ದಗಳೇ ಸಿಗಲೊಲ್ಲವು. ಅಲ್ಲವೆ ಲಿಲ್ಲಿ?” ಎಂದಳು ಸರೋಜ.
ಸರೋಜಳು ಬಹಳ ಉತ್ಸಾಹದಲ್ಲಿದ್ದಾಗ ಸುಖಿಯಾಗಿದ್ದಾಗ ಸಂತೋಷದಲ್ಲಿದ್ದಾಗ ನನ್ನನು “ಲಿಲ್ಲಿ” ಎಂದು ಸಂಬೋಧಿಸುವಳು.
“ನಿಜ ಈ ಕೊಳಲುಗಾನ ನನಗೆ ಕೊಟ್ಟ ಸಂತೋಷವನ್ನು ನಾನಂತೂ ಬಣ್ಣಿಸಲಾರೆ – ಆದರೆ, ಇದು ಎಲ್ಲಿಂದ ಬಂತು? ಯಾವ ಪುಣ್ಯಾತ್ಮನು ಊದುವನು?” ಸರೋಜ ಕೈಸನ್ನೆಯಿಂದ ಎದುರಿಗೆ ತೋರಿಸಿದಳು.
ಕಂದೀ ಬಣ್ಣದ ಕುತನೀ ಹಾಸಿಗೆಯಂತೆ ಮರಳು ಭೂಮಿ ಉದ್ದಕ್ಕೂ ಹಾಸಿದೆ. ಅದರ ಮೇಲೆ ಈರ್‍ವರು ತರುಣರು ಕುಳಿತಿರುವರು, ಒಬ್ಬನು ಕೊಳಲು ಬಾರಿಸುತ್ತಿದ್ದನು. ಆ ಗಾನದಲ್ಲಿ ಸರೋಜಳು ಪೂರ್‍ಣ ಲೀನಳಾಗಿ ಮುಳುಗಿಹೋಗಿದ್ದಳು. ಗಾನಮುಗಿಯಿತು. ಅವರು ಎದ್ದು ಹೊರಟರು. ನಾವು ಚೇತರಿಸಿಕೊಂಡೆವು. ಈ ಲೋಕಕ್ಕಿಳಿದಂತಾಗಿ ಒಬ್ಬರನ್ನೊಬ್ಬರು ನೋಡಿದೆವು. ಸರೋಜಳ ಮುಖವು ಒಂದು ವಿಧವಾಗಿತ್ತು.
“ಲಿಲ್ಲಿ ಡಾ||ಮುಕುಂದರಾಯರನ್ನು ಬಲ್ಲಿಯಾ?”
“ಈಗೇಕೆ ಒಮ್ಮೆಲೇ ಈ ಪ್ರಶ್ನೆ?”
* * *
ಸಾಯಂಕಾಲ ಐದು ಗಂಟೆಯ ಸಮಯ, ಕ್ಲಾಸು ಮುಗಿಮುಗಿಯುವಾಗಲೇ ಸರೋಜ ಎದ್ದು ಹೋಗಿಬಿಟ್ಟಳು. ನಾನೂ ಹೊರಡುವದರಲ್ಲಿದ್ದೆ. “ಏನು ಲಿಲ್ಲಿ ಸರೋಜಳಿಗೇನು? ಮೈಯಲ್ಲಿ ಚನ್ನಾಗಿಲ್ಲವೇ? ಬೆಳಿಗಿನಿಂದ ಏನೋ ಒಂದು ತರಹ ಆಗಿಬಿಟ್ಟಿದ್ದಾಳೆ. ಎಷ್ಟೋ ಮಾತಾಡಿಸಿದೆ. ಉತ್ತರವೇ ಇಲ್ಲ. ಅವಳ ತುಟಿಗಳಲ್ಲಿ ಯಾವಾಗಲೂ ನಲಿಯುವ ನಗೆಯು ಪೂರ್‍ಣ ಮಾಯವಾಗಿಬಿಟ್ಟಿದೆ?” ಎಂದಳು ಲೀಲು.
“ನಾನು ಗಮನಿಸಲೇ ಇಲ್ಲವಲ್ಲ!” ಎಂದು ಹೇಳಿ ಸರೋಜಳಲ್ಲಿ ಧಾವಿಸಲು ಹವಣಿಸಿದೆ. ಮನಸ್ಸು ಏಕೋ ಚಂಚಲವಾಯಿತು. ಡಾ|| ಮುಕುಂದರಾಯನ ವಿಷಯವಾಗಿ ನಿನ್ನೆ ಅವಳು ಕೇಳಿದ್ದು ನನಗೆ ಏನೋ ಒಂದು ವಿಪರೀತ ಯೋಚನೆಗೆ ಇಟ್ಟುಕೊಂಡಿತು. ನನ್ನ ಈ ಮನೋಭಾವವನ್ನರಿತೋ ಏನೋ ಲೀಲು ಏನು ಅಲ್ಲಿ ಏನು ಯೋಜಿಸುರುವಿ?” ಎಂದಳು.
“ಏನಿಲ್ಲ. ನಿನ್ನೆ ರಾತ್ರಿ ಬಹಳ ಹೊತ್ತಿನವರೆಗೆ ಆ. ಈ. ವಿಷಯ ಮಾತನಾಡಿದೆವು. ಭೂತಗಳ ವಿಷಯವೂ ಬಂದಿತ್ತು. ಅವುಗಳ ವಿಷಯದಲ್ಲಿ ನನ್ನ ಅಭಿಪ್ರಾಯ ಕೇಳಿದಳು. ಏಕೇ ಕೇಳಿದಳೋ?” ಎಂದೆನು.
“ಅವಳಿಗೆ ದೆವ್ವ, ಭೂತ, ಪಿಶಾಚಿ ಇವುಗಳಲ್ಲಿ ವಿಶ್ವಾಸವೇ ಇಲ್ಲ. ಅದರ ಸಂಬಂಧವಾಗಿ ನಿನ್ನನ್ನು ಕೆಣಕಿ, ನೀನು ಹೇಳಿದ್ದನ್ನು ಆಧಾರವಾಗಿಟ್ಟುಕೊಂಡು ನಾಳಿನ ಡಿಬೇಟದಲ್ಲಿ ನಿನ್ನ ಮಾತುಗಳನ್ನ ನಿನ್ನ ಕೊರಳಿಗೆ ಕಟ್ಟುವ ಯುಕ್ತಿ ಮಾಡಿರಬೇಕು” ಎಂದು ಲೀಲು ನಕ್ಕಳು. ಅಷ್ಟರಲ್ಲಿ ಅವಳ ಗೆಳತಿಯೋರ್‍ವಳು ಅವಳನ್ನು ಕೂಗಿದ್ದರಿಂದ ಲೀಲ ಹೋಗಿ ಬಿಟ್ಟಳು. ನಾನು ಕೊಠಡಿಗೆ ಬಂದೆ.
ಸರೋಜ ಕುರ್‍ಚಿಯಲ್ಲಿ ಕುಸಿದಿದ್ದು ಮೇಜಿನ ಮೇಲೆ ಒರಗಿದ್ದಳು. ಅವಳ ಉದ್ದವಾದ ಜಡೆಯ, ನೀಳವಾದ ಎಡತೋಳ ಮೇಲೆ ಹಾಯ್ದು ಇಳಿಬಿದ್ದಿತ್ತು. “ಸರೋಜ, ಸರೋಜ” ಎಂದು ನಾನು ಮೆಲ್ಲನೆ ಅವಳ ಬೆನ್ನನ್ನು ತಟ್ಟಿದೆ. ಸರೋಜ ಎದ್ದಳು, ಕಾಂತಿಹೀನವಾದ ಅವಳ ಕಣ್ಣಳು ನನ್ನನ್ನು ನೋಡಿದವು. ದೀನಳಾಗಿ ಅವಳು ನನ್ನನ್ನು ಏನೋ ಬೇಡುವಂತೆ ಕಂಡಿತು. “ಅಸಾಧ್ಯ ತಲೆಶೂಲಿ, ಕಾಫಿ ಬೇಕು” ಎಂದಳು.
ಏನೂ ಮಾತಾಡದೇ ನಮ್ಮ ವಸತಿ ಗ್ರಹದ ಅಡಿಗೆಯ ಮನೆಗೆ ಹೋಗಿ ಅಡಿಗೆಯವಳಿಂದ ಕಾಫಿ ಮಾಡಿಸಿ ತಂದುಕೊಟ್ಟೆನು. ಸರೋಜಳು ಕುಡಿದಳು ಎದ್ದು ಕುಳಿತಳು. “ಕೊಂಚು ಹೊತ್ತು ಮಲಗು” ಎಂದು ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ನಾನು ಪಟಾಂಗಣಕ್ಕೆ ಬಂದೆನು, ಅತ್ತಿಂದಿತ್ತ ಇತ್ತಿಂದತ್ತ ಓಡಾಡತೊಡಗಿದೆ. ತುಸು ಹೊತ್ತಿಗೆ ಸರೋಜಳೂ ಹೊರಗೆ ಬಂದಳು. ಏನೂ ಮಾತಾಡಲಿಲ್ಲ. ಗೋಡೆಗೆ ಇರಿಸಿದ ಕುರ್‍ಚಿಗಳಲ್ಲಿ ಇಬ್ಬರೂ ಕುಳಿತೆವು. ಬಹುಹೊತ್ತು ಇಬ್ಬರೂ ಮೌನವಾಗಿದ್ದೆವು. ಕಡೆಗೆ ಸರೋಜಳು,
“ಲಿಲ್ಲೀ! ನಿನ್ನೆ ರಾತ್ರಿ ಕೊಳಲೂದಿದರಲ್ಲಾ ಅವರು ಅವರ ಸಂಗಡಿಗರು ಯಾರಿರಬಹುದು?”
ನಾನು ಇದೇ ಪ್ರಶ್ನೆಯನ್ನು ಸರೋಜಳಿಗೆ ಕೇಳಬೇಕೆಂದಿದ್ದೆ. ಅವರಾರೆಂದು ತಿಳಿಯುವ ಲವಲವಿಕೆ ನನಗೆ ಬಹಳವಾಗಿದ್ದಿತು. “ನಾನೂ ಇದನ್ನೇ ಕೇಳುವವಳಿದ್ದೆ”
“ನಾನು ಒಂದು ಸಣ್ಣ ಉಪಾಯವನ್ನು ಹೇಳುತ್ತೇನೆ ನಿನಗೆ ಸಮ್ಮತವೆ?”
“ಸಮ್ಮತವೇನು? ನಿನಗೆ ಬೇಕಾದದ್ದು ನನಗೂ ಬೇಕು?”
ಸರೋಜಳು ನಕ್ಕಳು ನಿರಾಶೆಯ ನಗುನಕ್ಕಳು, “ಇವತ್ತು ರಾತ್ರಿ ಅವರು ಬಂದರೆ… ಒಂದು ವೇಳೆ ಬರದಿದ್ದರೆ? ಬಂದೇ ಬರುವರು. ಗಾನದ ಚಟವು ಎಲ್ಲ ಚಟಕ್ಕಿಂತಲೂ ಬಲವಾದದ್ದೆಂದು ನಾನು ಕೇಳಿದ್ದೇನೆ- ಅಥವಾ ಬರಲಿಕ್ಕೂ ಇಲ್ಲ. ಬಂದಾದರೂ ಬರಲಿ ಆ ಮೇಲೆ ಹೇಳುವೆನು” ಅಸ್ಥಿರ ಚಿತ್ತಳಾಗಿ ಸರೋಜ ಎದ್ದು ಒಳಗೆ ಹೋಗಿಬಿಟ್ಟಳು.
* * *
ರಾತ್ರಿ ಚಂದ್ರನ ಪ್ರತಿಬಿಂಬವು ಸಮುದ್ರದಲ್ಲಿ ಹೊಯ್ದಾಡುವ ಬೆಳ್ಳಿಯ ಚಂಡಿನಂತೆ ಕಾಣುತ್ತಿತ್ತು. ನಾನು ಸೃಷ್ಟಿ ಸೌಂದರ್‍ಯದ ಅವಲೋಕನೆಗಾಗಿ ಲಕ್ಷಿಸುತ್ತಿಲ್ಲ, ಗಾನವ ಲವಲವಿಕೆಯಿದ್ದಿತು. ಮೊದಲು ಕೇಳಿದ ಅದೇ ದೇವಗಾನ ಗಾಳಿಯಲ್ಲಿ ತೇಲಿಬಂದು ನಮ್ಮ ಕಿವಿಯನ್ನು ಸೋಂಕಿತು. ಮನದ ತಂತಿಯನ್ನು ಮಿಡಿದಿತ್ತು. ಇಬ್ಬರ ಮುಖಗಳು ಕಮಲದಂತೆ ಅರಳಿದವು. “ಲಿಲ್ಲೀ” ಎಂದು ನನ್ನ ಭುಜದಮೇಲೆ ಕೈಯ ಇಟ್ಟು “ಬಾಯನಾ ಕ್ಯುಲರ್‌ದಲ್ಲಿ ನೋಡೋಣವೇ” ಎಂದಳು ಸರೋಜ.
“ಬೆಳದಿಂಗಳಲ್ಲಿ ಏನುಕಾಣುತ್ತಿದೆ!” ನೋಡ ಬೇಕೆಂಬ ಲವಲವಿಕೆಯಿಂದ ಕೋಠಡಿಯೊಳಗೆ ಓಡಿದವಳ ಬಾಯನೊಕ್ಯುಲರ ತಂದು ನೋಡಿದೆ ಸರೋಜಳು ಕಸಿದುಕೊಂಡು ತಾನೂ ನೋಡಿದಳು. ಏನೋ ಇಬ್ಬರು ವ್ಯಕ್ತಿಗಳು ಕಂಡರೇ ಹೊರ್‍ತು, ಅವರ ಗುರ್‍ತು ಸಿಗಲಿಲ್ಲ. ಸಂಗೀತ ಕೆಲ ವೇಳೆ ನಡೆದು ನಿಂತು ಹೋಯಿತು. ಇಬ್ಬರೂ ಬಂದು ರಸ್ತೆಯ ಬಳಿ ನಿಂತ ಕಾರು ಹತ್ತಿ ನಡೆದರು. ಅಗ ಒಂದು ಯೋಚನೆ ಮಿಂಚಿನಂತೆ ಹೊಳೆಯಿತು. ಕಾರ ನಂಬರು ತೆಗೆದುಕೊಳ್ಳಬೇಕೆಂದು, ತೆಗೆದುಕೊಂಡದ್ದೂ ಆಯಿತು. ಬಾಯನಾಕ್ಯುಲರನ್ನು ಸರೋಜಳ ಉಡಿಯಲ್ಲಿ ಎಸೆದನು, ಅವಳ ಮುಖವು ಏನೋ ಒಂದು ವಿಧವಾಗಿತ್ತು. ಅಷ್ಟರಲ್ಲಿ ಸುಪರಿಂಟೆಂಡಳು ಅಲ್ಲಿಗೆ ಬಂದರು. ಅವಳನ್ನು ನೋಡಿ ನನ್ನ ಉತ್ಸಾಹ ತಗ್ಗಿತು. ಮುಖವು ಬಾಡಿತು.
ಸರೋಜ ಅವರಿಗೆ ಮರ್‍ಯಾದೆ ಮಾಡಿ “ಅಮ್ಮಾ ಜ್ಯೋತಿಷ್ಯ ಶಾಸ್ತ್ರ ಕಲಿತು ಕೊಳ್ಳುವ ವಿಚಾರವಾಗಿ ನಿಮ್ಮನ್ನು ಕೇಳಬೇಕೆಂದಿದ್ದೆ……….” ಅವಳು ನಿಜವೆಂದೆಣಿಸಿ ‘ಜೋತಿರ್‍ಮಂಡಲ’ ಎಂಬ ಪುಸ್ತಕವನ್ನು ನೀನು ಅಭ್ಯಸಿಸಬಹುದು. ವಿದ್ಯಾರ್‍ಥಿಗಳಿಗಾಗಿಯೇ ನಾನು ಅದನ್ನು ಬರೆದಿದ್ದೇನೆ. ಇರಲಿ, ಇದರಲ್ಲಿ ನಿನಗೆ ಗತಿ ಇದೆಯೆಂದು ನನಗೆ ಇಂದಿಗೂ ತಿಳಿದಿರಲಿಲ್ಲವಲ್ಲ?” ಸರೋಜಳು ತೃಪ್ತಿಯ ನಗೆ ನಕ್ಕಳು. “ಇದೆಲ್ಲಿಯ ಹುಚ್ಚು ಬಡೆಯಿತು ಇವಳಿಗೆ” ಎಂದು ನೆನೆಯುತ್ತ ಕೊಠಡಿಯಲ್ಲಿ ಹೋಗಿ ಹಾಸಿಗೆಯಲ್ಲಿ ಉರಳಿದೆ.
* * *
ಬೆಳದಿಂಗಳ ರಾತ್ರಿ ನಾನೂ ಸರೋಜಳೂ ಸಮುದ್ರತೀರಕ್ಕೆ ಗಾಳಿ ಸೇವನೆಗಾಗಿ ಕದ್ದು ಹೊರಟೆವು. ಅಕಸ್ಮಾತ್ತಾಗಿ ನಾನು ತೆಗೆದುಕೊಂಡಿದ್ದ ನಂಬರಿನ ಕಾರು ಅಲ್ಲಿ ನಿಂತಿತ್ತು. ನಂಬರನ್ನು ಮತ್ತೊಮ್ಮೆ ನೋಡಿದೆ. ಸರೋಜಳ ಮುಖವನ್ನೂ ನೋಡಿದೆ, ಆವಳೂ ನನ್ನ ಮುಖ ನೋಡಿದಳು. ಇಬ್ಬರ ಹೃದಯಗಳು ಒಂದೇ ವಿಷಯಕ್ಕೆ ಮಾತಾಡಿದವು. ತುಸು ದೂರು ಹೋಗಿ ಮರೆಯಲ್ಲಿ ಕುಳಿತೆವು.
ಇಂಟರ ಮಿಜಿಯೇಟವರ್‍ಗದಲ್ಲಿ ಓದುತ್ತಿದ್ದ ರಾಧಾಬಾಯಿಯಂಬವಳು ಭುಜದ ಮೇಲೆ ತನ್ನ ಮಗುವನ್ನು ಮಲಗಿಸಿಕೊಂಡು ಸಾಗುತ್ತಿದವಳು ಅಕಸ್ಮಾತ್ತಾಗಿ ನಮ್ಮನ್ನು ಕಂಡು “ಯಾರು ಲಲಿತಾ, ತಾನೆ!” ಎಂದವಳೇ ನಮ್ಮ ಹತ್ತಿರವೇ ಬಂದು ಕುಳಿತು ಬಿಟ್ಟಳು. ಅವಳ ಸಂಗಡ ಬಂದಿದ್ದ ಅವಳ ತಮ್ಮ ಅಕ್ಕಾ ಮುಕುಂದರಾಯರು ಬಂದಂತಿದೆ. ಅದೇ ಕಾರು?” ಎಂದು ತೋರಿದನು.
“ಮುಕುಂದರಾಯರೆಂದರೆ ಯಾರು?” ಎಂದು ನಮ್ಮ ಮನದ ಲವ ಲವಿಕೆಯನ್ನು ಎಷ್ಟೂ ಹೊರತೊರದೆ ನಾನು ರಾಧಾಬಾಯಿಯನ್ನು ಕೇಳಿದೆ.
“ಓ……..ಅವರು, ನಮಗೆ ದೂರದ ಸಂಬಂಧ ಭಾರೀ ಹಣವಂತರು”
“ಏನು ಕೆಲಸವೋ?”
“ಶಿರಿವಂತರೂ ಹೊಟ್ಟೆಗಾಗಿ ದುಡಿಯಬೇಕೇನು?” ಎಂದು ರಾಧಾ ಬಾಯಿಯು ನಕ್ಕಳು. ಇದಕ್ಕೆ ಒಪ್ಪಿಗೆಯೆಂದು ಸರೋಜಳೂ ನಕ್ಕಳು.
ನಾನು ಮಾತು ನಿಲ್ಲಿಸಿದೆನು, ಸರೋಜಳು ಮಾತಾಡಲೇ ಇಲ್ಲ ಪರಪುರುಷರ ವಿಷಯವಾಗಿ ಹೆಚ್ಚು ಮಾತಾಡಿದರೆ ಮತ್ತೇನಾದರೂ ಅರ್ಥವಾದೀತಲ್ಲ, ಎಂಬ ಭೀತಿಯು ಮನದಲ್ಲಿತ್ತು. ರಾಧಾಬಾಯಿಗಿಂತ ಮುಂಚಿತವಾಗಿಯೇ ನಾವು ಹೊರಡಲನುವಾದೆವು. ಅವಳನ್ನು ಅವಳ ತಮ್ಮನ ಹತ್ತಿರ ಬಿಟ್ಟು ಹೋಗುವ ಸೋಗನ್ನು ತೆಗೆದೆನು ಅಂದರೆ ಮುಕುಂದರಾಯರನ್ನು ಮತ್ತು ಅವರ ಇನ್ನೊಬ್ಬ ಗೆಳೆಯರನ್ನು ತೀರ ಸನಿಯದಲ್ಲಿ ನೋಡುವ ಭಾಗ್ಯವಾದರೂ ಲಭಿಸೀತೆಂದು ಆಶಿಸಿದನು. ಆ ರೀತಿ ಅವಳನ್ನು ಅಲ್ಲಿ ಬಿಡುವಾಗಲೇ ರಾಧಾಬಾಯಿಯು ಅವರಿಗೆ ನಮ್ಮ ಪರಿಚಯ ಹೇಳಿಬಿಟ್ಟಳು. ಅವರು ಎದ್ದರು. ನಮಗೆ ನಮಸ್ಕರಿಸಿದರು. ಪ್ರತಿಯಾಗಿ ನಾವು ಅವರಿಗೆ ನಮಸ್ಕಾರ ಮಾಡಿದೆವು. ಕೊಳಲೂದುವವರು ತಂಪು ಕನ್ನಡಕವನ್ನು ಧರಿಸಿದ್ದರು. ಬಂಗಾಲಿಗಳು ಉಟ್ಟು ಕೊಳ್ಳುವಂತೆ ಖಾಧೀ ದೋತರ ಉಟ್ಟಿದ್ದರು, ಮೊಳಕಾಲವರೆಗೆ ಬರುವ ಅಂಗಿ ತೊಟ್ಟಿದ್ದರು. ಹೆಗಲ ಮೇಲೊಂದು ಖಾದೀ ಶಾಲು ಇತ್ತು ಅವರು ಮುಂದೆ ನಡೆದರು, ನಾವು ಹಿಂಬಾಲಿಸಿದೆವು.
ಸರೋಜಳ ಆನಂದವನ್ನು ವರ್‍ಣಿಸಲು ನನಗೆ ಶಬ್ದಗಳು ಬಾರವು. ಅದಕೇ ನನಗಾದ ಆನಂದವನ್ನು ಹೇಳಲೇ, ಛೇ, ಬಾಯಿ ಬರಲೊಲ್ಲದು. ಸರೋಜಳು ನನ್ನ ವಿಕಸಿತ ಮೋಗವನ್ನು ನೋಡಿದಳು. ಸುಖದ ಕಣ್ಣಲ್ಲಿ ತನ್ನ ದೃಷ್ಟಿ ಇಟ್ಟಳು. ಚೇಷ್ಟೆಗೆ ಪ್ರಾರಂಭಿಸಿದಳು. ನನ್ನ ಕೈಯನ್ನು ಚಿವುಟಿದಳು ಕಾಲುಬೆರಳನ್ನು ತುಳಿದಳು, ನನ್ನ ಮನದ ಬಯಿಕೆ ನನ್ನ ಗೆಳತಿಗೆ ತಿಳಿಯಿತಲ್ಲ! ಎಂದು ನಾಚಿದೆ. ಏಕೋ ತುಸು ಭಯವೂ ಆಯಿತು.
* * *
ರಾತ್ರಿ, ಮಲಗುವ ಹೊತ್ತಾಯಿತೆಂದು ಸೂಚಿಸುವ ವಸತಿ ಗ್ರಹದ ಒಂಬತ್ತರ ಗಂಟೆ ಬಾರಿಸಿತು, ಮಾಸಪತ್ರಿಕೆಯ ಪಾನುಗಳನ್ನು ತಿರುವುತ್ತ ನಾನು ಕುರ್ಚಿಯಲ್ಲಿ ಹಾಗೆಯೇ ಕುಳಿತಿದ್ದೆ. ಸರೋಜಳು ನನ್ನ ಹಿಂದೆ ನಿಂತಿದ್ದಳು. ನನ್ನ ಆಗಿನ ಮನದ ಅಸ್ಥಿರತೆಯನ್ನು ಕಂಡೋ ಏನೋ ನಕ್ಕುಬಿಟ್ಟಳು. “ಲಿಲ್ಲೀ, ನಿನ್ನ ಮನದಲ್ಲಿ ಏನು ನಡೆದಿದೆ? ಗೀತಾ ಮೃತ ಉಂಟೋ ಇಲ್ಲವೋ?”
“ನನಗೇನು ಗೊತ್ತು ಉಂಟಾದರೆ ಉಂಟು, ಇಲ್ಲದಿದ್ದರೆ ಇಲ್ಲ”
“ಆಹಾ, ಏನು ಜ್ಯೋತಿಷ್ಯ, ಏನು ಭವಿಷ್ಯದ ಜ್ಞಾನ”
“ನಿಜ. ನಿನಗೆ ತಿಳಿದಷ್ಟು ಜ್ಯೋತಿಷ್ಯ ನನಗೆ ಹೇಗೆ ತಿಳಿಯಬೇಕು”
ಸರೋಜಳು ನನ್ನ ಕಿವಿಯ ಹತ್ತರ ಬಗ್ಗಿ ನುಡಿದಳು “ಮೊಗದಲ್ಲಿಯ ನಗೆ ಏನು! ನಡತೆಯಲ್ಲಿಯ ನಯವೇನು! ಅವರನ್ನು ಗಮನಿಸಿದೆಯಾ?”
ನನಗೆ ಆಶ್ಚರ್‍ಯ! ಪರಮಾಶ್ಚರ್‍ಯ ನನ್ನ ಮನವು ಈಗ ಏನು ಎಣಿಕೆ ಹಾಕುತ್ತಿತ್ತೋ, ಅದನ್ನೆ ಇವಳು ನುಡಿದುಬಿಟ್ಟಳಲ್ಲಾ. ನಿಜವಾಗಿಯೂ ಇವಳು ಜ್ಯೋತಿಷ್ಯ ಶಾಸ್ತ್ರ ಓದಿಕೊಂಡಿರುವಳೇ?
“ಹೌದು – ಆದರೆ-ಅಲ್ಲಾ- ತಂಪು ಕನ್ನಡಕವನ್ನು ಏಕೆ ಧರಿಸಿರುವರು?” ಎಂದೆನು.
“ಅವರ ಕಣ್ಣುಗಳನ್ನು ನಾವು ನೋಡಬಾರದೆಂದು”
ಇದ್ದರೂ ಇದ್ದಿತು. ಅವರ ಕಣ್ಗಳಿಂದ ಹೊರಟ ತೇಜಃಪುಂಜವಾದ ನೋಟವನ್ನು ನಮ್ಮಿಂದೆದುರಿಸುವಾಗದೆಂಬ ಉದ್ದೇಶದಿಂದಲೇ ತಂಪು ಕಣ್ಣಡಕ ಧರಿಸಿರಬಹುದು. ಎಂಥ ದೊಡ್ಡ ಮನಸ್ಸಿದು! ಮಹಾ ಪೂಜ್ಯವ್ಯಕ್ತಿ ಎಂದೆಂದುಕೊಂಡಳು. ಅವಳ ಮನದ ಭಾವವನ್ನು ಸರೋಜಳು ಅರಿತಳೋ ಏನೋ.
“ಲಿಲ್ಲೀ, ನೀನು ಇದುವರೆಗೂ ನನ್ನಿಂದ ಒಂದು ಮಾತನ್ನು ಮುಚ್ಚಿಟ್ಟು ಕೊಂಡವಳಲ್ಲ. ಈಗ ಹೀಗೇಕೆ? ನಿನ್ನ ಕೂಡ ನಾನು ಜಗಳಾಡುವೆನೆಂದು ಅಂಜುವಿಯಾ?” ಎಂದಂದು ನನ್ನನ್ನು ಒಂದು ಮಗುವೆಂದು ತಿಳಿದು ಅಪ್ಪಿದಳು.
ತನ್ನ ಮನಸ್ಸು ಅವರನ್ನು ಹಿಂಬಾಲಿಸಿತೆಂದೂ, ಅವರು ತನ್ನ ಹೃದಯದಲ್ಲಿ ದೇವರಾಗಿ ಇದ್ದು ಬಿಟ್ಟರೆಂದೂ ಸರೋಜಳಿಗೆ ಸ್ಪಷ್ಟವಾಗಿ ತಿಳಿದುಬಿಟ್ಟಿತೆಂದು ಲಲಿತೆಗೆ ಆನಂದವಾಯಿತು. ಮರು ಕ್ಷಣದಲ್ಲಿ ಹಾಗೆ ಸರೋಜಳಿಗೆ ತಿಳಿದದ್ದು ಪ್ರಮಾದವಾಯಿತೆಂದು ಅಂಜಿಯೂ ಬಿಟ್ಟಳು. ಸರೋಜಳ ಮಾತಿಗೆ ಪ್ರತಿಯಾಗಿ ಏನು ಅನ್ನ ಬೇಕೆನ್ನುವದು ತಿಳಿಯದೇ ಪೇಚಾಡತೊಡಗಿದಳು, ಮೆಲ್ಲಗೆ ಗಾಳಿ ಬೀಸಿತು. ಮನಕ್ಕೆ ಸುಖ ಕೊಟ್ಟಿತು.
“ಅಗೋ ಕೊಳಗಿನ ಗಾನ ಕೇಳುವದು-”
“ಲಿಲ್ಲಿ-ಲಲಿತೆಯ ಮಾತಿಗೆ ಉತ್ತರವೆಂಬಂತೆ ಲಿಲ್ಲೀ–” ಮುಂದೆ ಸರೋಜಳ ಮನಸ್ಸು ಗಾನದಲ್ಲಿ ಲೀನವಾಯಿತೋ, ಅಥವಾ ಕೊಳಲೂದುವವರ ಸನ್ನಿಧಾನಕ್ಕೆ ಓಡಿ ಹೋಯಿತೋ, ಮಾತು ಅಲ್ಲಿಗೆ ನಿಂತಿತು.
* * *
ಮರುದಿನ ರಾಧಾಬಾಯಿಯ ಪುಣ್ಯದಿಂದ, ಮುಕುಂದರಾಯರೂ ರಾಧಾಬಾಯಿಯೂ ನಮ್ಮ ಕೋಣೆಗೆ ಉಪಹಾರಕ್ಕೆಂದು ಬಂದರು. ರಾಯರು ಭಾರಿ ಆಳು, ಒಳ್ಳೆ ಜ್ಞಾನಿಗಳೆಂದು ಅವರ ಮುಖಲಕ್ಷಣವೇ ಹೇಳುತ್ತಿತ್ತು. ಅನೇಕ ಮಾತುಗಳನ್ನಾಡಿದೆವು. ರಾಯರು ಹೊರಡುವಾಗ ಸರೋಜಳು “ಆಗಾಗ ಬರುತ್ತಿರಬೇಕು” ಎಂದು ಬಿನ್ನವಿಸಿಕೊಂಡಳು. “ಆಗಲಿ” ಎಂದು ಅವರು ಹೊರಟು ಹೋದರು. ನಾವು ಪದ್ಧತಿಯಂತೆ ಓದಲು ಕುಳಿತೆವು. ಓದಿನಲ್ಲಿ ಮನಸ್ಸು ಇದ್ದರೆ ತಾನೆ, ಸುಮಾರು ಹದಿನೈದು ನಿಮಿಷಗಳವರೆಗೆ ಪಾನುಗಳನ್ನು ತಿರುವಿ ಹಾಕುತ್ತಿರಬಹುದು. ‘ಲಿಲ್ಲೀ’ ಎಂಬ ಶಬ್ದವನ್ನು ಕೇಳಿ ನಿದ್ರೆಯಿಂದ ಎಚ್ಚೆತ್ತವಳಂತೆ ಗಾಬರಿಯಾದೆ “ಏಕೆ ಕಳ್ಳಿಯಂತೆ ಹೀಗೆಕೆ ಗಾಬರಿಯಾಗುವಿ?” ಎಂದು ಸರೋಜಳು ಕೆಣಕುವ ನಗೆ ನಗುತ್ತ ನನ್ನ ಕುರ್‍ಚಿಯ ಕೈ ಮೇಲೆ ಕುಳಿತು ಕೊಂಡು, “ತಿಳಿಯಿತೇ?” ಎಂದಳು.
ತನ್ನ ಮನಸ್ಸಿನಲ್ಲಿದ್ದುದು ಸರೋಜಳಿಗೆ ತಿಳಿಯಿತೇನೋ ಎಂಬ ಗಾಬರಿಯಿಂದ ಲಲಿತಳ ಮುಖವು ಕೆಂಪಾಯಿತು. “ಆಂ ಉಂ” ಎನ್ನ ತೊಡಗಿದಳು,
“ಲಿಲ್ಲೀ, ಒಂದು ವಿಷಯವನ್ನು ನೀನು ಗಮನಿಸಲೇ ಇಲ್ಲವೆನ್ನುವಂತೆ ತೋರುವದು”
“ಯಾವುದು?”
“ಅವರು-ಮುಕುಂದರಾಯರು-ಕುರಡರು-”
“ಹಾಂ” ಲಲಿತೆಗೆ ಬಹಳ ಆಶ್ಚರ್‍ಯವಾಯಿತು. ಮದನಲ್ಲಿ ಏಕೋ ವೇದನೆಯೂ ಆಯಿತು. “ಹಾಂ- ಅದು ನಿಜವೇ?-ಆದರೆ…” ಲಲಿತೆಯು ಗಂಟಲವನ್ನು ಸರಿಮಾಡಿಕೊಂಡಳು ಬರುತ್ತಿರುವ ದುಃಖವನ್ನು ಪ್ರಯಾಸದಿಂದ ನುಂಗಿಕೊಂಡಳು. “ಆದರೆ ಚಹ ಕುಡಿಯುವಾಗ, ಒಬ್ಬೊಬ್ಬರು ಮಾತಾಡುವಾಗ ಅವರವರ ಕಡೆಗೆ ಹೊರಳಿ ನೋಡುವದೂ, ಅವರ ಮುಖದಲ್ಲಿಯ ತೇಜಸ್ಸೂ-” ಲಲಿತೆಯು ಮತ್ತೆ ಗಂಟಲನ್ನು ಸರಿಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದಳು.
“ಲಲ್ಲೀ, ದೇಹದ ಒಂದು ಅಂಗ ಊನವಾದರೆ ಅದರ ಶಕ್ತಿ ಉಳಿದವುಗಳಲ್ಲಿ ಬಂದು ಹೆಚ್ಚುತ್ತದೆ ಎಂಬುದನ್ನು ನೀನು ಕೇಳಿಲ್ಲವೇ-!”
ನಾನು ಏನೂ ಮಾತಾಡದೇ ಬೆಪ್ಪಳಂತೆ ಕುಳಿತುಬಿಟ್ಟೆ. ಎದೆ ಧಬ ಧಬ ಎಂದು ಹೊಡೆದುಕೊಳ್ಳಹತ್ತಿತು. ಒಮ್ಮೆ ಅವಳನ್ನು ನೋಡಿದೆ. ಒಮ್ಮ ನೆಲ ನೋಡಿದೆ. ಮತ್ತೊಮ್ಮೆ ಶೂನ್ಯ ಜಗತ್ತಿನಲ್ಲಿ ಏನೋ ಹುಡುಕುವವಳಂತೆ ನೋಡಿದೆ. ಸರೋಜಳು ಕುಳಿತಲ್ಲಿಯೇ ನನ್ನನ್ನು ಒಂದು ತೋಳಿನಿಂದ ತನ್ನ ಎದೆಗೆ ಎಳೆದುಕೊಂಡಳು. ಮತ್ತೊಂದು ಕೈಯಿಂದ ನನ್ನ ಗಲ್ಲಗಳನ್ನು ಹಿಡಿದು ತನ್ನೆಡೆಗೆ ಮೊಗ ತಿರುಗಿಸಿ, ಲಿಲ್ಲೀ, ಅವರು ನಿನ್ನನ್ನು ಪ್ರೀತಿಸುತ್ತಾರೆ ನನಗೆ ಗೊತ್ತಾಯಿತು.-”
ಎಂಥ ಶಿಡುಲಿನಂಥ ಹೊಡೆತವಿದು! ಲಲಿತೆಯ ಎದೆಯ ಹಾರುವಿಕೆಯು ನಿಂತೇ ಹೋಯಿತೇನೊ, ಇದು ಸರೋಜಳಿಗೆ ಹೇಗೆ ಗೊತ್ತಾಯಿತು! ಮನದ ಬಯಕೆಯ ಗುಟ್ಟು ರಟ್ಟಾಯಿತು. ಲಲಿತೆಯ ಕಣ್ಗಳಿಂದ ಪಳಪಳನೇ ನೀರುಗಳುದರಿದವು. ಮುಖ ಮುಚ್ಚಿಕೊಂಡು ಮೇಜಿನ ಮೇಲೆ ಬಿದ್ದು ಅಳತೊಡಗಿದಳು. ಸರೋಜಳ ಕಣ್ಗಳಲ್ಲಿಯೂ ನೀರು ಬಂದವು, ಅವಳ ಮನಸ್ಸು ನೊಂದಿತು. ಮೊಗವು ಕಪ್ಪಿಟ್ಟಿತು, ಸ್ವರವು ಕುಗ್ಗಿತು, ಲಲಿತೆಯ ಬೆನ್ನ ಮೇಲೆ ಕೈಯಾಡಿಸುತ್ತ “ಅವರು ಕುಳಿತಾಗ ನೀನು ಬರವ, ಆಡುವ ಶಬ್ದವನ್ನೂ ಅವರು ಆಲಿಸುತ್ತಿದ್ದರು. ನಿನ್ನ ಧ್ವನಿ ಕೇಳಿ ಅವರಿಗಾದ ಸಂತೋಷ ಅವರ ಮೊಗದಲ್ಲಿ ಒಡೆದು ಸ್ಪಷ್ಟವಾಗಿ ಕಾಣುತಿತ್ತು. ಅವರ ಗೀತವನ್ನು ನಾವು ದೇವಗಾನವೆಂದು ಹೇಳುತ್ತೇವೆ. ಆದರೆ ಅವರು ನಿನ್ನ ಧ್ವನಿಯು ಅದಕ್ಕಿಂತಲೂ ಮಧರವೆಂದು ಭಾವಿಸಿದ್ದಾರೆ”
“ನಿಜವೇ ಸರೋಜಾ?” ಲಲಿತೆಯು ಬಹಳ ಉತ್ಸಾಹದಿಂದ ಚಿಗರಿಯಂತೆ ಜಿಗಿದು ಖುರ್‍ಚಿಯಿಂದೆದ್ದು ನಿಂತು, ಸರೋಜಳ ಎರಡೂ ರಟ್ಟೆಗಳನ್ನು ಹಿಡಿದು, ಅವಳ ದೃಷ್ಟಿಯಲ್ಲಿ ತನ್ನ ದೃಷ್ಟಿಯನ್ನಿಟ್ಟು “ನನ್ನ ಸರೋಜಾ ಇದು ನಿಜವೇ – ನಿನಗೆ ಇದು ಹೇಗೆ ತಿಳಿಯಿತು? ಎಂದಳು. “ನನಗೆ ಹೇಗೋ ತಿಳಿಯಿತು!” ಸರೋಜಳ ಮೊಗವು ಇನ್ನೂ ಸಣ್ಣಾಯಿತು, ದೃಷ್ಟಿಯನ್ನು ಕೆಳಗೆ ಚಲ್ಲಿದಳು, “ಸರೋಜ, ನನ್ನಿಂದ ಒಂದೂ ಮುಚ್ಚಿಡದಿದ್ದವಳು ಇದನ್ನೇಕೆ ಮುಚ್ಚಿಡುವಿ? ಹೇಳು; ಬೇಗ ಹೇಳು.”
ಸರೋಜ ಹೇಳಲು ಸಿದ್ಧಳಾದಳು. ಈಗ ಇವಳು ದುಃಖವನ್ನು ಹತ್ತಿಕ್ಕಿ ಗಂಟಲು ಸರಿಮಾಡಿಕೊಂಡಳು. “ನಾನು ನಿನಗಿಂತಲೂ ಎಷ್ಟೋ ಹೆಚ್ಚು, ಎಷ್ಟೋ ಪಟ್ಟು ಹೆಚ್ಚು, ಅವರನ್ನು-ಅವರನ್ನು ಪ್ರೀತಿಸುತ್ತೇನೆ.” ಸರೋಜಳು ಲಲಿತೆಯ ಹಿಡಿತವನ್ನು ಬಿಡಿಸಿಕೊಂಡು ಓಡಿ ಹೋಗಿ ಹಾಸಿಗೆಯಲ್ಲಿ ಬಿದ್ದು ಅಳತೊಡಗಿದಳು.
“ಸರೋಜಾ” ಲಲಿತೆ ಗಾಬರಿಯಾದಳು; ದಿಗ್ಮೂಢಳಾದಳು. ತಲೆ ಗಿಮಿಗಿಮಿ ತಿರುಗಿತು. ದೀಪಗಳು ಜೋಲಿ ಹೊಡೆದವು; ಆಕಾಶವು ಬುಡ ಮೇಲಾಯಿತು, ಬಿರುಗಾಳಿ ಬೀಸಿತು, ಗುಡುಗು, ಸಿಡ್ಲು, ಮಳೆ, ಭಯಂಕರ ಮಳೆ.
* * *
ಕಾಲವನ್ನು ನೂಕುತ್ತಿದ್ದೆವು ದಿನಗಳನ್ನು ದಬ್ಬುತ್ತಿದ್ದೆವು. ನಮ್ಮ ಕಠೋಡಿಯಲ್ಲಿ ಆಸಲ್ಯ, ನಿರುತ್ಸಾಹಗಳು ಮೂರ್‍ತಿಮಂತಾಗಿ ತಾಂಡವವಾಡತ್ತಿದ್ದವು. ಆದರೆ ಉಳಿದ ವಿದ್ಯಾರ್ಥಿನಿಯರಿಗೇನು ಇದರ ಅರಿವು? ಅವರು ಓಡುವರು, ಆಡುವರು, ಜಿಗದಾಡುವರು, ಹರಟೆಕೊಚ್ಚುವರು. ಈದಿನವಾದರೂ ಹೀಗೆಯೇ ಮಲಗಲು ಸೂಚಿಸಲು ಒಂಬತ್ತರ ಗಂಟೆಯಾಯಿತು. ದೀಪವನ್ನಾರಿಸಿ ಮಲಗಿದೆ. ಸರೋಜಳೂ ಮಲಗಿದಳು. ದೇಹ ಹಾಸಿಗೆಯ ಮೇಲಿತ್ತು. ಮನಸ್ಸು? …. ಮುಕುಂದರಾಯರಿಗೆ ಮದುವೆಯಾಗಿರಬಹುದು, ಆಗಿರಲಿಕ್ಕೂ ಇಲ್ಲ, ಹೆಂಡತಿ ಗುಣವಂತಿ, ರೂಪವಂತಿ ಇರುವಳು; ಅವರಿಗೊಂದು ಮಗು ಇರಬೇಕು. ಅವರು ಈಗ ಮಗುವನ್ನು ತೊಟ್ಟಿಲಲ್ಲಿಟ್ಟು ತೂಗುತ್ತಿರಬಹುದು…. ಎಂಥ ಕಲ್ಪನೆಯಿದು ಎಂದಂದುಕೊಂಡಳು ಲಲಿತಾ ನಕ್ಕುಬಿಟ್ಟಳು.
“ಏಕೆ ನಗುವಿ?” ಸರೋಜಳಿಗೆ ನಿದ್ರೆ ಹತ್ತಿರಲಿಲ್ಲ.
ಕಣ್ಣು ತೆರೆದು ನೋಡಿದೆ ಕತ್ತಲಲ್ಲಿ ಮೇಜಿನ ಬಳಿ ನಿಂತಂತೆ ಕರೆ ಮೂರ್‍ತಿಯನ್ನು ಕಂಡೆ. ಗುಂಡಿಯನ್ನು ಒತ್ತಿ ದೀಪಹಚ್ಚಿ ನೋಡುತ್ತೇನೆ, ಸರೋಜಾ ಚಿಕ್ಕ ಗ್ಲಾಸಿನಲ್ಲಿ ಏನನ್ನೋ ಕರಗಿಸುತ್ತಿದ್ದಳು. ನಾನು ಗಾಬರಿಯಾದೆ. ನನ್ನ ಜ್ಞಾಪಕಕ್ಕೆ ಏಕೆ ಬೇಗ ಹೊಳೆಯಿತೋ ಹೇಳಲಾರೆ, ಸಾಯಿನ್ಸ ಲೆಬೊರೇಟರಿಯಿಂದ ಪೊಟೆಸೆಯಂ ಸಾಯನೇಟನ್ನು ಸರೋಜಳು ಕದ್ದು ತಂದದ್ದು ನೆನಪಾಯಿತು. “ಅಯ್ಯೋ ಕಟ್ಟೆ, ಎಂದು ಅವಳ ಕೈಯಲ್ಲಿಯ ಗ್ಲಾಸನ್ನು ಕಸಿದುಕೊಳ್ಳುವದರಲ್ಲಿ ಅದನ್ನು ಕುಡಿದೇಬಿಟ್ಟಳು.
ಗಂಟೆಬಾರಿಸಿದೆ, ಪ್ರೊಫೆಸರರಿಗೂ ಡಾಕ್ಟರರಿಗೂ ಪೋನಮಾಡಿದೆ, ಏಕೋ ಏನೋ ರಾಧಾಬಾಯಿಯನ್ನೂ ಕರಿಸಿ ಮುಕುಂದರಾಯರನ್ನು ಕರಿಸುವ ವ್ಯವಸ್ಥೆ ಮಾಡಿದೆ, ಕ್ಷಣದಲ್ಲಿ ಎಲ್ಲರೂ ಕಲೆತರು.
ಜ್ಞಾನವಿಲ್ಲದೆ ಬಿದ್ದಿದ್ದಳು ಸರೋಜ. ಡಾಕ್ಟರರು ಹೇಳಿದರು. ಪ್ರಾಣದ ಭಯವಿಲ್ಲೆಂದು, ಅಂದೇ ಮಧ್ಯಾನ್ಹ ಸರೋಜಳ ತಂದೆ ತಾಯಿಗಳು ಬಂದರು ಅವಳ ತಲೆಗೆಂಬಿಗೆ ಕುಳಿತು ಶುಶ್ರೂಷೆಯಲ್ಲಿ ತತ್ಪರರಾದರು. ನರ್‍ಸಳೂ ಇದ್ದಳು. ನಾನು ಮೂಕಳಾದೆ, ಏನು ಮಾತಾಡುವದೆಂಬದ ತಿಳಿಯದೇ ಅತ್ತಿಂದಿತ್ತ ಇಂದು ಸುಮ್ಮನೆ ಅಲೆದಾಡುತ್ತಿದ್ದೆ.
ಮುಕುಂದರಾಯರೂ ಅವರ ಸ್ನೇಹಿತ ರಾಧಾಬಾಯಿಯವರೂ ಬಂದರು. ಅವರೆಲ್ಲರೂ ಬಹಳ ನೊಂದುಕೊಂಡಂತೆ ಕಂಡರು. ಮೆಲ್ಲಗೆ ಹೆಜ್ಜೆ ಮೇಲೆ ಹೆಜ್ಜೆಯನ್ನಿಟ್ಟು ಸರೋಜಳ ಹತ್ತರ ಧಾವಿಸಿದರು. ಯಾರೂ ಮಾತಾಡಲಿಲ್ಲ, ಎಲ್ಲಿಯೂ ನಿಶಬ್ಧ. ಸಮುದ್ರದ ತೆರೆಗಳ ಹೊಡೆತದ ಗಂಭೀರ ಗದ್ದಲವು ಈ ಶಾಂತತೆಗೆ ಹಿನ್ನಲೆಯಂತಿತ್ತು. ಸರೋಜಳ ತಂದೆಯು ಲಲಿತೆಗೆ ಕೇಳಿದರು, “ಮಗೂ ಇವರ ಪರಿಚಯ ….’ ಲಲಿತೆಯು ಪರಿಚಯಮಾಡಿಕೊಡುವ ಪೂರ್‍ವದಲ್ಲಿಯೇ ಅವರೇ ಮುಂದರಿಸಿದರು. “ಭವಾನಿ ಜ್ಞಾನ ಸಾಗರ ರಾಗಿನ ಕುಮಾರ ಮುಕುಂದ ನಾನು” ಎಂದರು.
“ಆಂ, ಮುಕುಂದನೇ ನನ್ನ ಅಳಿಯ ಮುಕುಂದನೇ, ಎಷ್ಟು ವರುಷಗಳಾಗಿ ಹೋದವು. ಹತ್ತು ವರುಷ ಮಾಯವಾಗಿ ಬಿಟ್ಟಿದ್ದೀರಲ್ಲಾ .. …” ಎನ್ನುವಾಗಲೇ ಮುಕುಂದರಾಯರು ಎದ್ದು ಮುದುಕನಿಗೆ ನಮಸ್ಕರಿಸಿದರು. ಮುದುಕನು ಅಳಿಯನನ್ನು ಅಪ್ಪಿಕೊಂಡನು. ಆಗ ಸರೋಜಳು ಮೆಲ್ಲನೆ ಕಣ್ಣು ತೆರೆದಳು, ನೋಡಿದಳು. ತನ್ನ ತಂದೆ ಮತ್ತು ತನ್ನ … ಇಬ್ಬರ ಮಿಲನ, ಸಂತೋಷವಾಯಿತು. ಬಹಳ ಸಂತೋಷವಾಯಿತು, ತುಟಿಯಲ್ಲಿ ನಗು, ಕಣ್ಣಲ್ಲಿ ನೀರು. ಎರಡೂ ಕೈಗಳನ್ನು ಮುಂದೆ ಮಾಡಿದಳು, ಲಲಿತಾ ಓಡಿಬಂದು ಸರೋಜಳನ್ನು ಅಪ್ಪಿದಳು, ದುಃಖವು ಒತ್ತರಿಸಿ ಬಂದಿತ್ತು, ಆತ್ತಳು. ಸರೋಜಳೂ ಅತ್ತಳು. “ಲಿಲ್ಲಿ….”
“ಸರೋಜ ಕ್ಷಮಿಸು… ನಾನು ಪಾಪಿ”
“ಅಲ್ಲ. ಅಲ್ಲ ನನ್ನ ಮನದಲ್ಲಿ ಯಾವುದನ್ನು ಮುಚ್ಚಿಡದೆ ಇದನ್ನೊಂದೇ ನಿನ್ನಿಂದ ಮುಚ್ಚಿಟ್ಟಿದ್ದೆನು ಆದುದರಿಂದ ನಾನು ಪಾಪಿ………..”
“ಆಲ್ಲ” ಮುಕುಂದರಾಯರು ಮುಂದೆ ಬಂದರು. ” ನನ್ನ ಮಡದಿಯನ್ನು ದೂರಸರಿಸಿ ಇಷ್ಟು ದಿನ ಅಜ್ಞಾತದಲ್ಲಿದ್ದವನು ನಾನು ಪಾಪಿ. ಅಕಸ್ಮಾತ್ತಾಗಿ ಅಂದು ಮಿಂಚಿನ ಹೊಡೆತಕ್ಕೆ ನನ್ನ ದೃಷ್ಟಿ ಸಿಕ್ಕು, ಹೋಗಿ ಬಿಟ್ಟಿದ್ದರಿಂದ “ಕುರುಡನನ್ನು ಕಟ್ಟಿಕೊಂಡು ನನ್ನ ಮಡದಿ ಸುಖಪಡುವಳೇ ನಾನು ದುಃಖಿ ನನ್ನ ಸಹವಾಸದಿಂದ ಅವಳೂ ದುಃಖ ಪಡುವಳು ಎಂದು ಓಡಿ ಹೋದೆ. ಆದರೆ ಈಗ ಕಂಡದ್ದೇನು. “ಇವಳು ನನ್ನ ಮಡದಿಯಲ್ಲ. ನನ್ನ ದೇವತೆ, ಗ್ರಹಲಕ್ಷ್ಮಿ, ಪ್ರೀತಿಯ ಆದರ್‍ಶ ಮೂರ್‍ತಿ, ಪತಿಯು ಯಾವ ಸ್ಥಿತಿಯಲ್ಲಿದ್ದರೂ ಅವನನ್ನು ಸ್ಥಿರವಾಗಿ ಹೃದಯದಲ್ಲಿಟ್ಟು ಕೊಂಡ ಮಹಾ ಪತಿವ್ರತೆ……… ಆದ್ದರಿಂದ ನೀವಿಬ್ಬರು ಯಾವಾಗಲೂ ಪವಿತ್ರರು ನಾನು ಪಾಪಿ.”
ಮುಕುಂದರಾಯರು ಸಾವರಿಸುತ್ತ ಮಂಚದ ಸನಿಯಕ್ಕೆ ಬಂದರು, ಸರೋಜಳ ಮೈ ಮೇಲೆ ಕೈಯಾಡಿಸಿದರು, ಅವಳ ಸಬುಳಾದ ಮನೋಹರ ವಾದ, ದುಂಡಗಿನ ತೋಳ ಮೇಲೆ ಮೆಲ್ಲಗೆ ಅವರ ಬೆರಳುಗಳು ಓಡಾಡಿದವು. ಮುಕುಂದರಾಯನ ಸ್ನೇಹಿತರು ಎದ್ದು ಹೊರಗೆ ಹೊರಟರು, ಲಲಿತಾ ಸಾಗಿದರು ಸರೋಜಳ ತಂದೆ ಹಿಂಬಾಲಿಸಿದರು. ಸರೋಜಳ ತಾಯಿ ಏನೊ ತರುವದಕ್ಕೆಂದು ಹೊರಗೆ ಬಂದರು, ನರ್‍ಸಿ ಓಡಿದಳು.
ಸರೋಜಳು ಇವರ ನಾಟಕ ನೋಡಿ ನಕ್ಕಳು. ಮುಕುಂದರಾಯನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ತಲೆಯಮೇಲಿಟ್ಟುಕೊಂಡಳು. ಮುಕುಂದರಾಯನ ಕೈ ಹಾಗೆ ಮುಖದ ಮೇಲೆಲ್ಲ ಓಡಾಡಿತು. ಅವಳ ಕಣ್ಣಿನಲ್ಲಿ ನೀರು, ಮುಕುಂದರಾಯನ ಕಣ್ಣಲ್ಲಿಯೂ ನೀರು ಬಂದವು. ಇಬ್ಬರ ಕಣ್ಗಳಲ್ಲಿಯ ನೀರು ಒಂದಾಗಿ ಕೋಡಿ ಹರಿದಂತೆ ಹರಿದು ಹೋದವು.
*****