ಜಾತಿ ಜಂಗಮ ಸಾಕು ಜ್ಯೋತಿ ಜಂಗಮ ಬೇಕು
ಲಿಂಗ ತತ್ತ್ವದ ಬೆಳಕು ಕಾಣಬೇಕು
ಕೋತಿ ಭಾವನೆ ಸಾಕು ನೀತಿ ಜೀವನ ಬೇಕು
ವಿಶ್ವ ಜಂಗಮ ದೀಪ ಬೆಳಗಬೇಕು
ಶಬ್ದದಾಚೆಗೆ ಸಾಗು ಅರ್‍ಥದಾಚೆಗೆ ಹೋಗು
ಶಬ್ದಾರ್‍ಥ ಗಡಿಯಾಚೆ ಅರುಹು ಚಾಚು
ದೇಹ ಢಂಗುರ ದಾಟು ಆತ್ಮ ಡಿಂಢಿಮ ದಾಟು
ಶಿವನ ಡಮರುಗ ನಾದ ಕೇಳು ಕೇಳು
ಪಿಚ್ಚುಗಣ್ಣಿನ ಹುಚ್ಚು ಹುಳಿನುಚ್ಚು ಯಾಕಪ್ಪ
ಗಪ್ಪಂತ ಅಪ್ಪನ ಕಾಣೊ ಬೆಪ್ಪ
ಶಿಖರದಾಚೆಯ ಶಿಖರ ಶ್ರೀಶೈಲ ಗುರುಶೈಲ
ಗುರುಶಿಖರ ಗುರುತಂದಿ ಬಂದನಪ್ಪ
ಹುಟ್ಟು ದೇವರ ಗುಟ್ಟು ಸಾವು ಕಾಲನ ಕಟ್ಟು
ಮುಟ್ಟಾಟ ದಾಟುತ್ತ ಮ್ಯಾಲ ಹಾರು
ಬಿದ್ದೋರ ಹಿಡಿದೆತ್ತು ಆತ್ತೋರ ಮೇಲೆತ್ತು
ಜಗಕ ಜಂಗಮ ಜ್ಯೋತಿ ದೀಪತೋರು
*****