ದಿನಚರಿಯ ಪುಟದಿಂದ

ದಿನಚರಿಯ ಪುಟದಿಂದ

ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು ಇಲ್ಲಿ ನಿಲ್ಲುವುದಿಲ್ಲವಾದರೂ, ೫ ನಿಮಿಷಕ್ಕೊಮ್ಮೆಯಂತೆ ಸರ್ವೀಸ್ ಲೋಕಲ್ ಬಸ್ಸುಗಳು ಓಡಾಡುತ್ತಿರುತ್ತವೆ. ಈ ಸಣ್ಣ ಪೇಟೆ ದಾಟಿಯೇ ಕಾರ್ಕಳ, ಬಜ್ಪೆ, ಬೆಳ್ತಂಗಡಿ, ವೇಣೂರುಗಳಿಗೆ ಬಸ್ಸು, ವಾಹನಗಳು ಹೋಗಬೇಕಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಇದು ಹೆಸರು ಗಳಿಸಿದೆ. ಸ್ವಾತಂತ್ರ್ಯ ಸಿಕ್ಕಿ ಇಂದಿನವರೆಗೆ ಯಾವುದೇ ಪ್ರಗತಿಯನ್ನು ಈ ಚಿತ್ರಾಪುರ ಕಂಡಿಲ್ಲಾದರೂ, ವರ್ಷಕ್ಕೆರಡು ಹೆಣ ಉರುಳುವುದರಲ್ಲಿ ಸಂಶಯವಿಲ್ಲ. ದೊಡ್ಡ ಮಟ್ಟದ ಅಂದರೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಮಾಡುವಷ್ಟು ಈ ಪೇಟೆ ಬೆಳೆದಿಲ್ಲವಾದರೂ ಜಿಲ್ಲಾ ಮಟ್ಟದಲ್ಲಿ ಈ ಪೇಟೆಗೆ ಒಂದು ಹೆಸರು ಇದ್ದೇ ಇದೆ. ಅದೇ ರೀತಿ ಪೊಲೀಸ್ ಠಾಣೆಯ ನಕಾಶೆಯಲ್ಲಿ ಕೆಂಪು ಗುರುತು ಮಾಡಿಕೊಂಡ ಪೇಟೆ ಚಿತ್ರಾಪುರ.

ಚಿತ್ರಾಪುರ ಹೆಸರು ಈ ಪೇಟೆಗೆ ಹೇಗೆ ಬಂತು ಎಂದು ಸರಿಯಾಗಿ ಯಾರಿಗೂ ತಿಳಿಯದು. ಆದರೆ ಸುಮಾರು ನೂರು ವರ್ಷಗಳ ಹಿಂದೆ, ಹಲವಾರು ಮಂದಿ ಜಂಗಮರು ಇಲ್ಲಿ ನೆಲೆಯೂರಿದ್ದರು ಎಂದು ಕೆಲವು ಹಿರಿಯರು ಹೇಳುತ್ತಿದ್ದರು. ಇದಕ್ಕೆ ಅಧಾರವೆಂಬಂತೆ ಈಗಲೂ ಇಲ್ಲೊಂದು ಜೀರ್ಣೊದ್ಧಾರ ಕಾಣದ ಭಗ್ನಾವಶೇಷದಿಂದ ಕೂಡಿದ ಜಂಗಮಮಠದ ಅವಶೇಷ ಒಂದಿದೆ. ಜಂಗಮರು ಇಲ್ಲಿ ಹಲವಾರು ವರ್ಷ ನೆಲೆಯೂರಿದುದರಿಂದ ‘ಚಿತ್ರಾಪುರ ಮಠ’ ಎಂಬ ಹೆಸರಿನಿಂದಲೂ ಊರನ್ನು ಕರೆಯುತ್ತಾರೆ ಎಂದು ಕೆಲವು ಹಿರಿಯರ ವಾದ. ಏನೇ ಆದರೂ ಈ ಪೇಟೆಯಲ್ಲಿ ಹೇಳಿಕೊಳ್ಳುವಂತಹುದು ಏನೂ ಇಲ್ಲ. ಪೇಟೆಯಲ್ಲಿ ಒಂದು ಹಳೆಯ ಸರಕಾರಿ ಪ್ರೈಮರಿ ಶಾಲೆ ಬಿಟ್ಟರೆ, ಮುಖ್ಯರಸ್ತೆಯ ಬಲ ಹಾಗೂ ಎಡಬದಿಗಳಲ್ಲಿ ಒಂದು ದೇವಸ್ಥಾನ ಹಾಗೂ ಮಸೀದಿ ಇದೆ. ಎದುರು ಬದುರಾಗಿ ನಿಂತಿರುವ ಈ ಎರಡು ಮಂದಿರಗಳು ಯಾವಾಗಲೂ ಕೆಲವೊಂದು ಸಮಸ್ಯೆಗಳನ್ನು ಹುಟ್ಟಹಾಕುತ್ತಾ ಇದೆ. ಇದು ಬಿಟ್ಟರೆ ಈ ಪೇಟೆಯಲ್ಲಿ ಎದ್ದು ಕಾಣುವುದು ಒಂದು ರಾಮ ನಾಯ್ಕರ ದಿನಸಿ ಅಂಗಡಿ ಹಾಗೆ ಗುಲಾಂ ಹಾಜಿಯವರ ಮಕ್ಕಳ ಬೀಡಿ ಬ್ರಾಂಚ್. ಇಷ್ಟೊಂದು ವಿಷಯವನ್ನು ಇಲ್ಲಿ ಹೇಳದಿದ್ದರೆ ಈ ‘ಚಿತ್ರಾಪುರ’ ಪೇಟೆಯ ಕತೆ ಪೂರ್ತಿಯಾಗುವುದಿಲ್ಲ. ಲೋಕಲ್ ಬಸ್ ನಿಲ್ಲುವ ಸ್ಥಳಕ್ಕೆ ತಾಗಿಕೊಂಡು ಒಂದು ಗೂಡಂಗಡಿ ಇದೆ. ಈ ಗೂಡಂಗಡಿಗೆ ‘ಕಾಕನ ಗೂಡಂಗಡಿ’ ಎಂದು ಹೆಸರು. ಎಷ್ಟೋ ಗೂಡಂಗಡಿಗಳು ಬಂದಿವೆ, ಹೋಗಿವೆ. ಆದರೆ ಕಾಕನ ಗೂಡಂಗಡಿ ಮಾತ್ರ ಸುಮಾರು ೪೦ ವರ್ಷದಿಂದ, ಎಲ್ಲಾ ಕೋಮಿನವರ ಪ್ರೀತಿಯನ್ನು ಗಳಿಸಿಕೊಂಡು ಉಳಿದು ಬಂದಿದೆ ಎಂದಾದರೆ ಅದಕ್ಕೆ ಮೂಲ ಕಾರಣ ಗೂಡಂಗಡಿಯ ಕಾಕ ಮಾತ್ರ.

ಸುಮಾರು ೬೦ ಪ್ರಾಯದ ಈ ಕಾಕನ ನಿಜ ನಾಮಧೇಯ ಯಾರಿಗೂ ತಿಳಿದಿಲ್ಲ. ಎಲ್ಲರೂ ಅವರನ್ನು ‘ಗೂಡಂಗಡಿ ಕಾಕ’ ಎಂದೇ ಕರೆಯುತ್ತಿದ್ದರು. ಆದರೆ ಅವರ ನಿಜವಾದ ಹೆಸರು ಮೈದು ತೋ. ಕೇರಳದ ತ್ರಿಚೂರಿನಿಂದ ರೈಲಿನಲ್ಲಿ ಬಂದು ಮಂಗಳೂರು ತಲುಪಿದಾಗ ಮೈದು ಕುಟ್ಟಿಯಲ್ಲಿದ್ದದ್ದು ಹಿಂದಿನ ದಿನದ ಮಲೆಯಾಳಿ ನ್ಯೂಸ್ ಪೇಪರ್ ಮಾತ್ರ. ಬಂದರಿನಲ್ಲಿ ತಲೆತಗ್ಗಿಸಿ, ಗಾಣದೆತ್ತಿನಂತೆ ಕೂಲಿ ಕೆಲಸ ಮಾಡಿ, ಬಾಂಗ್ ಶಬ್ಧ ಕೇಳಿದೊಡನೆ, ತನ್ನೆಲ್ಲಾ ಕೆಲಸ ಬಿಟ್ಟು ಮಸೀದಿಗೆ ಓಡುತ್ತಿದ್ದ ಮೈದು ಕುಟ್ಟಿಯನ್ನು ಚಿತ್ರಾಪುರದ ಬೀಡಿ ಬ್ರಾಂಚ್ ಮಾಲಕರಾದ ಗುಲಾಂ ಹಾಜಿ ನೋಡಿ ಸಂತೋಷ ಪಟ್ಟಿದ್ದರು. ಬಿಟ್ಟರೆ ಆ ಹುಡುಗನಿಗೆ ಯಾರಾದರೂ ಗಾಳ ಹಾಕಬಹುದೆಂದು ಎಣಿಸಿ, ಮೈದು ಕುಟ್ಟಿಯನ್ನು ಚಿತ್ರಾಪುರಕ್ಕೆ ಕರಕೊಂಡು ಹೋಗಿ, ಒಂದು ಗೂಡಂಗಡಿ ತೆಗೆಸಿಕೊಟ್ಟು ಅಲ್ಲಿ ಕುಳ್ಳಿರಿಸಿದ್ದರು. ಇದರ ಹಿಂದೆ ಒಂದು ಸದುದ್ದೇಶ ಇತ್ತು. ಗುಲಾಂ ಹಾಜಿ ತಡ ಮಾಡಲಿಲ್ಲ. ತನ್ನ ಮನೆಯ ಕೆಲಸಕ್ಕೆ ಬರುವ ಖೈಜಾದಳ ಅನಾಥ ತಂದೆಯಿಲ್ಲದ ಮಗಳನ್ನು ಮೈದು ಕುಟ್ಟಿಗೆ ಗಂಟು ಹಾಕಿದರು. ಮೈದು ಕುಟ್ಟಿ ಮದುವೆಯಾದ ಮೇಲೆ ಚಿತ್ರಾಪುರದಲ್ಲೇ ಠಿಕಾಣಿ ಹೂಡಿದರೆ ಗುಲಾಂ ಹಾಜಿಯವರು ಕೆಲವು ತಿಂಗಳಲ್ಲೇ ಇಹಲೋಕ ತ್ಯಜಿಸಿದರು. ಮತ್ತೆ ಮೃದು ಕುಟ್ಟಿಗೆ ಉಪದೇಶ ನೀಡಲು ಉಳಿದವರು ದಿನಸಿ ಅಂಗಡಿಯ ರಾಮನಾಯ್ಕರು. ತುಂಬಾ ಹಿರಿಯರಾದ ರಾಮನಾಯ್ಕರ ಮೇಲೆ ಮೈದು ಕುಟ್ಟಿಗೆ ತುಂಬಾ ಗೌರವ. ‘ರಾಮನಾಯ್ಕರ ಗರಡಿಯಲ್ಲಿ ಪಳಗಿದ ಮೈದು ಕುಟ್ಟಿ, ದಿನ ಕಳೆದಂತೆ ಬಿತ್ರಾಪುರದಲ್ಲಿ ಒಬ್ಬ ‘ಮಾನವ’ನಾಗಿ ಬೆಳೆದು ನಿಂತನು. ರಾಮನಾಯ್ಕರು ತೀರಿ ಹೋದಾಗ ಅವರ ಹೆಣಕ್ಕೆ ಭುಜ ಕೊಟ್ಟದ್ದು ಮೈದು ಕುಟ್ಟಿ. ಚಿತ್ರಾಪುರದ ಹೆಚ್ಚಿನ ಹಿರಿಯರು ಒಬ್ಬೊಬ್ಬರಾಗಿ ತೀರಿಹೋದ ಮೇಲೆ, ಮತ್ತೆ ಹಿರಿಯರ ಸ್ಥಾನವನ್ನು ಅಲಂಕರಿಸಿದ್ದು ಮೈದು ಕುಟ್ಟಿ. ಕಿರಿಯರಿಗೆ ಮೈದು ಕುಟ್ಟಿ ನೆಚ್ಚಿನ ‘ಕಾಕ’ ಆದರು.

ಕಾಕನಿಗೆ ಒಟ್ಟು, ಎಂಟು ಮಕ್ಕಳು. ಅದರಲ್ಲಿ ೨ ಹುಟ್ಟಿದ ಕೂಡಲೇ ತೀರಿ ಹೋಗಿದ್ದವು. ಉಳಿದ ೬ ಮಕ್ಕಳಲ್ಲಿ ೫ ಹೆಣ್ಮಕ್ಕಳ ನಂತರ ಹುಟ್ಟಿದ್ದು ಕೀರ್ತಿಗೊಬ್ಬ ಮಗ. ರಾಮನಾಯ್ಕರು ೨ ಮಕ್ಕಳಾದ ಕೂಡಲೇ ಅಗಾಗ್ಗೆ ಮೈದು ಕುಟ್ಟಿಗೆ ಎಚ್ಚರಿಸಿ ಪ್ರೈಮರಿ ಹೆಲ್ತ್ ಸೆಂಟರಿಗೆ ಹೋಗಲು ಹೇಳುತ್ತಿದ್ದರು. ಆದರೆ ಮೈದು ಕುಟ್ಟಿ ನಯವಾಗಿ ರಾಮನಾಯ್ಕರ ಮಾತನ್ನು ತಿರಸ್ಕರಿಸುತ್ತಿದ್ದು, ‘ಏನಣ್ಣಾ ನೀನು ಹೇಳುವುದು, ಮಕ್ಕಳು ಬೇಕು ಅಂತ ಹೇಳಿದರೆ ಮಕ್ಕಳಾಗುತ್ತದಾ? ಇರಲಿ ಬಿಡಿ. ಹುಟ್ಟಿಸಿದ ದೇವರು ಹುಲ್ಲು ಕೊಡುವುದಿಲ್ಲವೇ?’ ಎಂದು ಬಾಯಿ ಮುಚ್ಬಿಸುತ್ತಿದ್ದ. ಕೊನೆಗೆ ದೇವರ ದಯೆ ತಪ್ಪಿಹೋಯಿತು. ಮೈದು ಕುಟ್ಟಿಯ ಹೆಂಡತಿ ಹೆತ್ತೂ ಹೆತ್ತೂ ಗರ್ಭಕೋಶ ಹೊರಗೆ ಬಿದ್ದು ಕೊನೆಗೆ ತೆಗೆಯಿಸಿದ ಮೇಲೆ ಸಂತಾನ ಪ್ರಾಪ್ತಿಯಾಗುವುದು ನಿಂತು ಹೋಯಿತು. ಬೆಳೆದು ನಿಂತ ೫ ಹೆಣ್ಮಕ್ಕಳಲ್ಲಿ ೩ ಹೆಣ್ಮಕ್ಕಳು ಮದುವೆಯಾಗಿ ಹೋಗಿದ್ದರು. ಮೊದ ಮೊದಲು ಆ ಊರಲ್ಲಿ ಒಂದೇ ಗೂಡಂಗಡಿ ಇದ್ದು, ಕಾಕನ ವ್ಯಾಪಾರ ಭರ್ಜರಿಯಾಗೇ ನಡೆಯುತ್ತಿದ್ದು, ಇದರಿಂದಾಗಿಯೇ ೩ ಹೆಣ್ಮಕ್ಕಳ ಮದುವೆಯನ್ನು ಸುಲಭವಾಗಿ ಮಾಡಿ ಮುಗಿಸಿದ್ದರು. ಈಗ ಫರ್ಲಾಂಗಿಗೆ ಒಂದರಂತೆ ಗೂಡಂಗಡಿ ಇದ್ದು ವ್ಯಾಪಾರವೂ ಮೊದಲಿನಂತಯೇ ಇಲ್ಲದೆ ಕ್ಷೀಣವಾಗಿರುವುದರಿಂದ, ಉಳಿದ ೨ ಹೆಣ್ಮಕ್ಶಳ ಮದುವೆ ಈಗ ಕಾಕನಿಗೆ ಸಮಸ್ಯೆಯಾಗಿ ಬಂತು. ಬೆಳೆದು ನಿಂತ ೨ ಹೆಣ್ಮಕ್ಕಳನ್ನು ನೋಡುವಾಗ ಕಾಕನಿಗೆ ಒಮ್ಮೆ ದಿಗಿಲಾಗುತ್ತಿದ್ದರೂ, ದೇವರ ಮೇಲಿನ ಭರವಸೆಯಿಂದ ಧೈರ್ಯ ತೆಗೆದುಕೊಳ್ಳುತ್ತಿದ್ದರು.

ಸುಮಾರು ೩೫ ವರ್ಷದ ಹಿಂದೆ, ಚಿತ್ರಾಪುರದಲ್ಲಿ ಕಾಕನದೊಂದೇ ಗೂಡಂಗಡಿ. ಬಸ್ಸಿಗೆ ಕಾಯುವವರು ಬಸ್‌ಸ್ಟ್ಯಾಂಡಿನ ಒಳಗೆ ನಿಲ್ಲದೆ, ಕಾಕನ ಗೂಡಂಗಡಿ ಎದುರೇ ನಿಲ್ಲುತ್ತಿದ್ದರು. ಗೂಡಂಗಡಿಯ ಎದುರಿಗೆ ತಗಡಿನ ಶೀಟು ಹಾಕಿ ಬಲ-ಎಡಬದಿಯಲ್ಲಿ ಎರಡು ಮರದ ಬೆಂಚು ಇಟ್ಟಿದ್ದು, ಬಸ್ಸಿಗೆ ಕಾಯುವವರು ಇಲ್ಲಿ ಕುಳಿತು ಪಟ್ಟಾಂಗ ಹೊಡೆಯುವುದು ಮಾಮೂಲು. ಇಲ್ಲಿ ಜಾತಿ ಮತ ಬೇಧವಿಲ್ಲ. ‘ಸರ್ವಧರ್ಮ ಸಮ್ಮೇಳನ’ ದಿನಾಲೂ ರಾತ್ರಿ ನಡೆಯುತ್ತಿದ್ದು, ಅಂಗಡಿ ಮುಚ್ಚುವವರೆಗೆ ಎಲ್ಲಾ ವಿಷಯಗಳೂ ಚರ್ಚೆಯಾಗುತ್ತಿದ್ದವು. ರಾಜಕೀಯ ಮುಖಂಡರ ವಿಷಯ, ಸಿನಿಮಾ ನಟ-ನಟಿಯರ ಮದುವೆ ವಿಷಯ, ಯಾವ ಟಾಕೀಸಿನಲ್ಲಿ ಏನು ಸಿನಿಮಾ ನಡೆಯುತ್ತದೆ. ಊರಲ್ಲಿ ನಡೆಯುವ ಬಯಲಾಟ, ಆತ್ಮಹತ್ಯೆ, ಮದುವೆ. ಮುಂಜಿಯ ವಿಷಯಗಳ ಕುರಿತು ಚರ್ಚೆ ನಡೆಯುತ್ತಿತ್ತು. ಈ ಚರ್ಚೆಗೆ ಕಾಕ ಮೂಕಪ್ರೇಕ್ಪಕನಾಗಿ ಕಿವಿಗೊಡುತ್ತಿದ್ದರೇ ಹೊರತು ಚಕಾರವೆತ್ತುತ್ತಿರಲಿಲ್ಲ. ಈ ಮಾತುಕತೆಗೆ ಕಳೆಯೇರ ಬೇಕಾದರೆ ಮೇಸ್ತ್ರಿ ಗುರುವ, ಪೇದ್ರು ಲೋಬೋ ಹಾಗೂ ಮುಕ್ರಿ ಇಸ್ಮಾಲಿ ಇರಲೇಬೇಕು. ಈ ಸಮಯದಲ್ಲೇ ವ್ಯಾಪಾರವೂ ಭರ್ಜರಿಯಾಗಿಯೇ ನಡೆಯುತ್ತಿತ್ತು. ಬೆಲ್ಲ, ನೀರುಳ್ಳಿ, ಬಾಳೆಹಣ್ಣು, ನೆಲೆಕಡಲೆ, ಬೀಡ, ಸಿಗರೇಟು ರಭಸವಾಗಿ ಖರ್ಚಾಗುತ್ತಿದ್ದವು. ಬಸ್ಸು ಬಂದ ಕೂಡಲೇ ಒಂದು ಬ್ಯಾಚು ಖಾಲಿಯಾದರೆ, ಮುಂದಿನ ಬಸ್ಸು ಬರುವವರೆಗೆ, ಇನ್ನೊಂದು ಬ್ಯಾಚು ಬಂದು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದವು.

ಕಾಕನಿಗೆ ಒಂದು ವಿಷಯವಂತೂ ಕರತಲಾಮಲಕವಾಗಿತ್ತು. ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೯ ಗಂಟೆವರೆಗೆ ಯಾವುದೇ ರೂಟಿನ ಬಸ್ಸುಗಳ ವೇಳಾಪಟ್ಟಿ ಕಂಠಪಾಠವಾಗಿತ್ತು. ಅದಕ್ಕಾಗಿಯೇ ಜನ ಅಲ್ಲಿ ಮುಗಿ ಬೀಳುತ್ತಿದ್ದರು. ‘ಕಾಕ, ವೇಣೂರು ಬಸ್ಸು ಎಷ್ಟು ಗಂಟೆಗೆ ಬರುತ್ತದೆ? ಬೆಳ್ತಂಗಡಿ ಬಸ್ ಇನ್ನು ಎಷ್ಟು, ಗಂಟೆಗೆ? ಬಿಜೈ ಬಸ್ಸು ಹೋಯಿತಾ? ೫ ನಿಮಿಷಕ್ಕೊಮ್ಮೆ ಜನರು ಕೇಳುವ ಪ್ರಶ್ನೆಗಳಿಗೆ, ತಾಳ್ಮೆ ಕಳಕೊಳ್ಳದೆ, ಸರಿಯಾಗಿ ಸಮಯವನ್ನು ಹೇಳುತ್ತಿದ್ದರು. ಬಸ್ಸುಗಳು ಇನ್ನು ೮ ನಿಮಿಷದೊಳಗೆ ಬರುತ್ತದೆ ಎಂದರೆ ಅದು ಬರಲೇಬೇಕು. ಅಷ್ಟು ನಿಖರವಾಗಿ, ಎಲ್ಲಾ ಬಸ್ಸುಗಳ ವೇಳಾಪಟ್ಟಿ ಬಾಯಿಪಾಠವಾಗಿತ್ತು. ಇದು ೩೫ ವರ್ಷದ ಗೂಡಂಗಡಿಯ ಅನುಭವ. ಕಾಕನ ಸೇವೆ ಇಲ್ಲಿಗೆ ಮುಗಿಯುವುದಿಲ್ಲ. ಬೆಳಿಗ್ಗೆ ೨-೩ ಪೇಪರಿನವರು ನ್ಯೂಸ್ ಪೇಪರನ್ನು ಇವರ ಅಂಗಡಿ ಎದುರೇ ಬಿಸಾಡುತ್ತಿದ್ದರು. ಎಷ್ಟೇ ಕೆಲಸವಿದ್ದರೂ ಪೇಪರ್ ಕಟ್ಟನ್ನು ಹೆಕ್ಕಿ ಒಳಗಿಟ್ಟು, ಪೇಪರ್ ಏಜೆಂಟ್ ರಮಾನಂದ ಪೈ ಬಂದಾಗ ಕೊಡುತ್ತಿದ್ದರು. ಬೆಳಿಗ್ಗೆ ಸಂತೆಗೆ ಬಂದ ಹಳ್ಳಿಯವರು ತಮ್ಮ ಗೋಣಿ ಕಟ್ಟು, ಒಣಮೀನಿನ ಚೀಲ, ರಿಪೇರಿ ಮಾಡಿಸಿದ ಚಪ್ಪಲಿಗಳನ್ನು ಈ ಗೂಡಂಗಡಿಯಲ್ಲಿ ಇಟ್ಟು ಸಂಜೆ ಊರಿಗೆ ಹೊಗುವಾಗ ತೆಗೆದುಕೊಂಡು ಹೋಗುತ್ತಿದ್ದರು. ಒಂದು ವೇಳೆ ಮರೆತು ಹೋದರೂ ಅದನ್ನು ಜೋಪಾನವಾಗಿ ಕಾಕ ತೆಗೆದಿಡುತ್ತಿದ್ದರು. ಬಸ್ಸಿನ ಡ್ರೈವರ್‌ಗಳೂ ಕೂಡಾ ಕಾಕನ ವಿಳಾಸವಿದ್ದ ಕೆಲವೊಂದು ಕಟ್ಟುಗಳನ್ನು ಇವರಲ್ಲಿ ಕೊಟ್ಟು ಹೋಗುತ್ತಿದ್ದರು. ಸಂಜೆ ಅದರ ವಾರಿಸುದಾರರು ಕಾಕನಿಗೆ ಧನ್ಯವಾದ ಹೇಳಿ ತಮ್ಮ ಸರಕುಗಳನ್ನು ಕೊಂಡು ಹೋಗುತ್ತಿದ್ದರು. ಇಂತಹ ಕಾಕ ಚಿತ್ರಾಪುರಕ್ಕೆ ಒಬ್ಬ ಆದರ್ಶ ಮುದುಕನಾಗಿದ್ದ.

ವರ್ಷಗಳು ಉರುಳಿದವು. ೩೫ ವರ್ಷದ ಗೂಡಂಗಡಿಯ ಅನುಭವ ಮುಪ್ಪು ಕಾಕನನ್ನು ಹೈರಾಣ ಮಾಡಿದ್ದವು. ಕಾಲ ಬದಲಾಗುದಿಲ್ಲ. ಅದೇ ಸೂರ್ಯ, ಅದೇ ಚಂದ್ರ, ಅದೇ ಆಕಾಶ, ಅದೇ ಭೂಮಿ, ಅದೇ ಚಿತ್ರಾಪುರ. ಬದಲಾದದ್ದು ಜನರ ಆಚಾರ- ವಿಚಾರ, ನಡೆ ನುಡಿ. ೪೦ ವರ್ಷದ ಹಿಂದಿನ ಚಿತ್ರಾಪುರ ಈಗಿಲ್ಲ. ಹಿಂದೆ ಕೃಷ್ಣಾಷ್ಟಮಿ, ಚೌತಿ ಬಂದಾಗ ಕಾಕನಿಗೆ ಆಗುವಷ್ಟು, ಖುಷಿ ಯಾರಿಗೂ ಆಗುತ್ತಿರಲಿಲ್ಲ. ಮಧ್ಯಾಹ್ನ ಊಟಕ್ಕೆ ರಾಮನಾಯ್ಕರ ಮನೆಯಲ್ಲಿ ಹಾಜರ್. ಇದಕ್ಕೆ ಬುಲಾವ್ ಬೇಕಿಲ್ಲ, ಫೋನು ಬೇಕಿಲ್ಲ. ಮನೆ ಹೊಕ್ಕು ಬಾಳೆ ಎಲೆ ಹುಡುಕಿ, ತೊಳೆದು ವರಾಂಡದಲ್ಲಿ ಎಲೆ ಹಾಕಿ ಕುಳಿತ ಕೂಡಲೇ ರಾಮನಾಯ್ಕರ ಪತ್ನಿ ತಟ್ಟೆಯೊಂದಿಗೆ ಹಾಜರ್. ಅದೇ ರೀತಿ ಬಕ್ರೀದ್ ಹಬ್ಬದ ದಿವಸ ಕಾಕನ ಬಿರಿಯಾನಿ ತಟ್ಟೆ ರಾಮನಾಯ್ಕರ ಮನೆ ಸೇರುತ್ತಿತ್ತು. ಹಲವು ವರ್ಷದಿಂದ ನಡೆದು ಬಂದ ಸಂಪ್ರದಾಯವಿದು. ರಾಮನಾಯ್ಕರ ನಿಧನದೊಂದಿಗೆ ಈ ಸಂಪ್ರದಾಯಕ್ಕೆ ಅಂತ್ಯ ಬಿತ್ತು. ರಾಮ ನಾಯ್ಕರ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರು ಸೇರಿದರು. ದಿನಸಿನ ಅಂಗಡಿಯನ್ನು ಯಾರಿಗೋ ಲೀಸಿಗೆ ಕೊಟ್ಟು ಬಿಟ್ಟರು. ಇಲ್ಲಿ ಅನಾಥರಾದದ್ದು ಕಾಕ ಮಾತ್ರ. ಈಗ ಅದೇ ಚತ್ರಾಪುರ ಯಾವ ರೀತಿ ಬಂದು ಮುಟ್ಟಿದೆ? ಹಬ್ಬ ಹರಿದಿನಗಳಲ್ಲಿ ಊಟಕ್ಕೆ ಕರೆಯುವುದು ಬಿಡಿ! ಏನು ಕಾಕ ಹೇಗಿದ್ದೀರಿ? ಎಂದು ಮನಬಿಚ್ಚಿ ಮಾತನಾಡುವವರಿದ್ದಾರೆಯೇ? ಒಬ್ಬರನ್ನೊಬ್ಬರು ನೋಡುವುದೇ ಸಂಶಯದ ದೃಷ್ಟಿಯಿಂದ. ಒಂದೇ ಊರಲ್ಲಿ ಹಾವು- ಮುಂಗುಸಿ ತರಹ ಬದುಕುವಂತಹ ವಾತಾವರಣ. ರಾತ್ರಿ ಭಯದಿಂದ ನಿದ್ರಿಸಬೇಕಾದ ಪರಿಸ್ಥಿತಿ! ಯಾಕೆ ಹೀಗಾಯಿತು? ಕಾಕನಲ್ಲಿ ಇದಕ್ಕೆ ಉತ್ತರವಿರಲಿಲ್ಲ.

ನಾಯಿ ಕೊಡೆಯಂತೆ ಅಲ್ಲಲ್ಲಿ ತಲೆ ಎತ್ತಿ ನಿಂತ ಗೂಡಂಗಡಿಗಳು. ನಿಯತ್ತಿನ ವ್ಯಾಪಾರ ಇಲ್ಲಿ ನಡೆಯುವುದಿಲ್ಲ ಎಂದು ಕಾಕನಿಗೆ ಗೊತ್ತಿತ್ತು. ಹೆಸರಿಗೆ ಮಾತ್ರ ಗೂಡಂಗಡಿಗಳು. ಒಳಗೆ ಗಾಂಜಾ, ಅಫೀಮು ಮಾರಾಟ, ಡುಪ್ಲಿಕೇಟು ಬೀಡಿಗಳ ಮಾರಾಟ, ಕಳ್ಳಭಟ್ಟಿ ಸಾರಾಯಿ ಪ್ಯಾಕೆಟ್‌ಗಳು, ಬ್ಲೂಫಿಲಂ ಕ್ಯಾಸೆಟ್ಗಳು. ಸಹಜವಾಗಿಯೇ ಜನರ ಆಕರ್ಷಣೆ ಅತ್ತ ಜಾರಿತು. ಸಂಜೆಯಾದೊಡನೆ ಜನ ಅಲ್ಲಿ ಮುಗಿ ಬೀಳುತ್ತಿದ್ದರು. ಪೊಲೀಸರಿಗೂ ಮಾಮೂಲಿ ದೊರೆಯುತ್ತಿದ್ದುದರಿಂದ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿತ್ತು. ಕಾಕನ ಗೂಡಂಗಡಿಗೆ ಜನ ಬರದೆ ದಿವಸಕ್ಕೆ ನೂರು ರೂಪಾಯಿ ವ್ಯಾಪಾರ ಇಲ್ಲದೆ ಹೋಯಿತು. ಮರದ ಬೆಂಚುಗಳು ಖಾಲಿಯಾಗಿಯೇ ಉಳಿದವು. ಕಾಕನಿಗೆ ಗತಕಾಲದ ಮೇಸ್ತ್ರಿ ಗುರುವ, ಪೇದ್ರು ಲೋಬೋ ಹಾಗೂ ಮುಕ್ರಿ ಇಸ್ಮಾಲಿ ನೆನಪಾದರು. ಅವರೆಲ್ಲಾ ತೀರಿ ಹೋಗಿ ಎಷ್ಟು ವರ್ಷಗಳು ಸಂದವು! ಅಂತಹ ಕಾಲ ಇನ್ನು ಬಾರದು ಎಂದು ಕಾಕನಿಗೂ ಗೊತ್ತಿತ್ತು. ಮನೆ ಖರ್ಚು ಹೆಚ್ಚಾಗಿ, ಆದಾಯ ಕಡಿಮೆಯಾದಂತೆ ಕಾಕನ ಗೂಡಂಗಡಿ ಬರಿದಾಗುತ್ತಾ ಬಂತು. ಈಗ ಉಳಿದಿರುವುದು, ನಾಲ್ಕೈದು ಬಾಳೆ ಗೊನೆಗಳು, ಹತ್ತಿಪ್ಪತ್ತು ಎಳನೀರು, ಮನೆಯಲ್ಲಿ ತಯಾರಿಸಿದ ಪುನರ್ಪುಳಿ ಶರಬತ್ತಿನ ಬಾಟಲಿಗಳು ಹಾಗೂ ಇಷ್ಪವಿಲ್ಲದಿದ್ದರೂ ಗಿರಾಕಿಗಳಿಗೆ ಆಕರ್ಷಿಸಲು ಕೆಲವು ಜರ್ದಾ ಪ್ಯಾಕೆಟ್‌ಗಳು. ಇದಕ್ಕಿಂತಲೂ ಕಾಕನಿಗೆ ಆಗುವ ಮಾನಸಿಕ ತೊಂದರೆಯೆಂದರೆ ಆಗಾಗ್ಗೆ ಬಂದ್‌ಗಳು. ಸಣ್ಣಪುಟ್ಟ ಗಲಭೆ ಆದೊಡನೆ ಬಂದ್, ಬಸ್ ದರ ಏರಿಕೆಯಾದೊಡನೆ, ಇಳಿಸಲು ಬಂದ್, ಬಸ್ ನೌಕರರ ಬಂದ್, ಬಸ್ ಮಾಲಕರ ಬಂದ್, ರಾಜಕಾರಣಿಗಳ ಬಂದ್, ತಿಂಗಳಿಗೆ ೨-೩ ಬಂದ್ ಆದರೆ ವ್ಯಾಪಾರ ಮಾಡುದೇನು ‘ಬಂದ್’ ಎಂದು ಯಾರೋ ಹೇಳಿದರೆ ಸಾಕು ಅದೇನೆಂದು ವಿಚಾರಿಸದೆ ಕಾಕ ಗೂಡಂಗಡಿ ಮುಚ್ಚಿ ತೆಪ್ಪಗೆ ಮನೆಗೆ ಹೋಗುತ್ತಿದ್ದರು. ಯಾವ ವಿವಾದಕ್ಕೂ ಸಿಕ್ಕಿಕೊಳ್ಳುವ ಜಾಯಮಾನ ಅವರದಲ್ಲ. ವ್ಯಾಪಾರದ ಇಳಿಮುಖ, ಪ್ರಾಯಕ್ಕೆ ಬಂದು ನಿಂತ ಇಬ್ಬರು ಹೆಣ್ಮಕ್ಕಳು, ಮಗನ ವಿದ್ಯಾಭ್ಯಾಸ ಈ ಎಲ್ಲಾ ಒತ್ತಡದಿಂದ ಕಾಕನ ಆರೋಗ್ಯ ಕೆಡತೊಡಗಿತು. ಮಗ ಈ ವರ್ಷ ಎಸ್.ಎಸ್.ಎಲ್‌.ಸಿ.ಯನ್ನು ಖಂಡಿತವಾಗಿಯೂ ಉತ್ತಮ ದರ್ಜೆಯಲ್ಲಿ ಪಾಸು ಮಾಡುತ್ತಾನೆ ಎಂಬ ಭರವಸೆ ಕಾಕನಿಗೆ ಇತ್ತು. ಈ ಬಗ್ಗೆ ಮಗನ ಅಧ್ಯಾಪಕರು ಕಾಕನಿಗೆ ಆಗಾಗ್ಗೆ ಹೇಳುತ್ತಿದ್ದರು. ಇಂತಹ ಒಳ್ಳೆಯ ನಡತೆಯ ಹಾಗೂ ಪ್ರತಿಭಾವಂತ ಹುಡುಗ ಇಡೀ ಚಿತ್ರಾಪುರದಲ್ಲಿಯೇ ಇಲ್ಲ. ಅವನ ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ ಎಂದಿದ್ದರು. ಅವನ ಶಾಲೆ ನಿಲ್ಲಿಸಿ, ಬಂದರಿನಲ್ಲಿ ಏನಾದರೂ ಕೆಲಸಕ್ಕೆ ಸೇರಿಸಿದರೆ, ಮನೆಯ ಖರ್ಚು ಹೋಗಬಹುದಲ್ಲಾ ಎಂದು ಕಾಕನ ಆಲೋಚನೆ. ತಂದೆಯ ಅನಾರೋಗ್ಯ, ಮಾನಸಿಕ ತುಮುಲ, ಅಸಹಾಯಕತೆಯನ್ನು ನೋಡಿ ಮಗ ಜಮಾಲ್ ಕೂಡಾ ತಾನು ಕೆಲಸಕ್ಕೆ ಹೋಗುತ್ತೇನೆ ಎಂದು ತಂದೆಯೊಡನೆ ಆಗಾಗ್ಗೆ ಹೇಳುತ್ತಿದ್ದ. ಆದರೆ ತಾಯಿಯ ಒಂದೇ ಆಶೆ. ತನ್ನ ಮಗ ಓದಿ ದೊಡ್ಡ ಇಂಜಿನಿಯರೋ, ಡಾಕ್ಟರರೋ ಆಗಬೇಕು. ನಮ್ಮ ಕುಟುಂಬಕ್ಕೆ ಊರಿಗೆ ಹೆಸರು ತರಬೇಕು ಎಂಬ ಕನಸು. ಆದರೆ ಜಮಾಲ್‌ಗೆ ತಂದೆಯ ಅವಸ್ಥೆ ನೋಡಲಿಕ್ಕಾಗದೆ ಅಸಹಾಯನಾಗಿ ಮನದಲ್ಲೇ ಕೊರಗುತ್ತಿದ್ದ . ಏನು ಮಾಡುವುದು? ತಂದೆಗೆ ಯಾವ ರೀತಿ ಸಹಾಯ ಮಾಡುವುದು ಎಂದು ಕೈಕೈ ಹೊಸಕಿಕೊಳ್ಳುತ್ತಿದ್ದ.

ಸೂರ್ಯೋದಯವಾದ ಕೂಡಲೇ ಚಿತ್ರಾಪುರ ಪೇಟೆ ಜನಸಾಮಾನ್ಯರ ಆಹ್ವಾನಕ್ಕೆ ತಯಾರಾಗಿ ನಿಲ್ಲುತ್ತಿತ್ತು . ಬೆಳಿಗ್ಗೆ ೯:೩೦ ರ ಹೊತ್ತಿಗೆ ಇಡೀ ಪೇಟೆ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಶಾಲಾ ಕಾಲೇಜಿಗೆ ಹೋಗುವ ಹುಡುಗ ಹುಡುಗಿಯರು, ಕೆಲಸಕ್ಕೆ ಹೋಗುವ ಕಾರ್ಮಿಕರು, ಕೂಲಿಯಾಳುಗಳು, ಸರಕಾರಿ ನೌಕರರು, ಅಧ್ಯಾಪಕರು, ಇದಲ್ಲದೆ ಬಂದರಿಗೆ ಖರೀದಿಗೆ ಹೋಗಲು ಬರುವ ವ್ಯಾಪಾರಸ್ಥರು, ಲೈನ್ ಸೇಲ್‌ಗೆ ಹೊರಟು ನಿಂತ ತರುಣರು ಹಾಗೂ ಅವರ ವಾಹನಗಳು, ಬಾಡಿಗೆ ಕಾರುಗಳು, ರಿಕ್ಷಾಗಳು, ಜೀಪುಗಳು, ಮಂದಿರ, ಮಸೀದಿಗಳ ಸಂದರ್ಶನಕ್ಕೆ ಬರುವ ಯಾತ್ರಾರ್ಥಿಗಳು. ಇಷ್ಟೆಲ್ಲಾ ಸಂಭ್ರಮದಿಂದ ಚಿತ್ರಾಪುರ ಬೆಳಗುತ್ತಿದ್ದರೂ, ಕಾಕನ ಗೂಡಂಗಡಿ ಮಾತ್ರ ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ಇದಾವುದರ ಪರಿವೆಯಿಲ್ಲದೆ ಕಾಕ ಮಾತ್ರ ಇವತ್ತು ಸಂಜೆ ನಡೆಯುವ ಮೆರವಣಿಗೆ ಬಗ್ಗೆಯೇ ತಲೆಕೆಡಿಸಿಕೊಂಡಿದ್ದರು. ಪ್ರತೀ ಮೆರವಣಿಗೆಯ ಸಮಯ ಏನಾದರೂ ಬಂದು ಗಲಾಟೆ ನಡೆದೇ ನಡೆಯುತ್ತದೆ ಎಂಬ ಖಾತ್ರಿ ಕಾಕನಿಗಿತ್ತು. ಅದಕ್ಕಾಗಿ ಮಧ್ಯಾಹ್ನದ ಮೇಲೆ ಗೂಡಂಗಡಿ ಮುಚ್ಚಿ ಮನೆಗೆ ಹೋಗುವ ಆಲೋಚನೆ ಅವರ ತಲೆಯಲ್ಲಿ ಸುತ್ತುತ್ತಿತ್ತು. ಆಗ ಪ್ರತ್ಯಕ್ಷರಾದ ಎರಡು ಕಾನ್‌ಸ್ಟೇಬಲ್ ಕಾಕನ ನೆಮ್ಮದಿಯನ್ನು ಕೆಡಿಸಿದರು.

“ಏನು ಕಾಕ! ಇವತ್ತು ಸಂಜೆ ಬೃಹತ್ ಮೆರವಣಿಗೆ ಹೋಗುತ್ತಾ ಇದೆ. ನೀನು ಮಾತ್ರ ನೆಮ್ಮದಿಯಿಂದ ಬೆಳಿಗ್ಗೇನೇ ತೂಕಡಿಸುತ್ತಿದ್ದೀಯಾ? ನಾವು ನೋಡು, ಮಂಗಳೂರಿನಿಂದ ಡ್ಯೂಟಿ ಮೇಲೆ ಬಂದಿದ್ದೇವೆ. ಏನಾದರೂ ಗಲಾಟೆ ದೊಂಬಿ ನಡೆಯಬಹುದಾ?”

ಇಂತಹ ವಿಷಯದಲ್ಲಿ ಕಾಕ ಬಹಳ ಜಾಣ. ಬಾಯಿ ತಪ್ಪಿಯೂ ಅಚಾತುರ್ಯದ ಮಾತು ಅವನಿಂದ ಹೊರಬೀಳುತ್ತಿರಲಿಲ್ಲ. ಹಳೇ ಕಾಲದ ಮುದುಕ. ಜೀವನಚಕ್ರದಲ್ಲಿ ತಿರುಗಿ-ತಿರುಗಿ ಹಣ್ಣಾಗಿ, ಪಕ್ವವಾದ ವ್ಯಕ್ತಿತ್ವ. ಕಾಕ ಉತ್ತರಿಸಲಿಲ್ಲ. ಬರೇ ನಗು, ಬೊಚ್ಚು ಬಾಯಿ ಬಿಟ್ಟುಕೊಂಡು ಒಂದು ದೇಶಾವರಿ ನಗು ಬೀರಿದ ಮುದುಕ ಕಾಕ. ಬಾಳೆಗೊನೆಯಿಂದ ಎರಡೆರಡು ಬಾಳೆಹಣ್ಣನ್ನು ಅತಿಥಿಗಳಿಗೆ ನೀಡಿದ. ಹಾಗೆಯೇ ಎರಡು ಎಳೆನೀರಿನ ಅಭಿಷೇಕವಾಯಿತು ಪುಕ್ಕಟೆಯಾಗಿ.

‘ಏನು ಕಾಕ! ಗೂಡಂಗಡಿ ಒಳಗೆ ಏನಿದೆ? ಬಾಂಬು-ಗೀಂಬು ಏನಾದರೂ ಇಲ್ಲವಲ್ಲಾ?’

ಇದಕ್ಕೂ ಕಾಕ ಉತ್ತರಿಸಲಿಲ್ಲ. ಪುನಃ ಒಂದು ದೊಡ್ಡ ನಗು! ಅಷ್ಟೇ. ಪೊಲೀಸಿನವರು ಬೇರೆ ಕಡೆ ಹೊರಟು ಹೋದರು. ಇದಲ್ಲದೆ ಸಂಜೆಯ ಮೆರವಣಿಗೆಯ ಭಯ. ತನಗೇನಾದರೂ ಆದರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಏನೇ ಆಗಲಿ ಬಂದ್ ಮಾಡಿಯೇ ಬಿಡುವ. ನಾಳೆ ತರೆದರಾಯಿತು ಎಂದು ಗಂಟೆ ನೋಡಿಕೊಂಡ ಕಾಕ. ಗಂಟೆ ೧೨:೦೦ ದಾಟಿತು. ಕಾಕ ಅಂಗಡಿ ಬಂದ್ ಮಾಡಿ, ಮನೆಗೆ ತೆರಳಿದ.

ಸಂಜೆಯಾದಂತೆ ಪೇಟೆಯ ಸುದ್ದಿ ಬರುತ್ತಿತ್ತು. ಮೆರವಣಿಗೆ ಸಾಗ್ತಾ ಇದೆ. ಬೇರೆ ಬೇರೆ ತಾಲ್ಲೂಕಿನಿಂದ ಜನ ಸಂದಣಿ. ವಾಹನಗಳು ಬರ್ತಾ ಇದೆ. ಪೊಲೀಸ್ ತುಕ್ಕಡಿ ೩-೪ ಇವೆ. ರಸ್ತೆ ಬ್ಲಾಕ್ ಆಗಿದೆ. ಲೋಕಲ್ ಹಾಗೂ ಎಕ್ಸ್‌ಪ್ರೆಸ್ ಬಸ್ಸುಗಳು ಮಂಗಳೂರಿನಿಂದ ಬರದೆ ಸ್ಥಗಿತವಾಗಿದೆ. ಬೇರೆ ಕಡೆಯ ಬಸ್ಸುಗಳೂ ಚಿತ್ರಾಪುರಕ್ಕೆ ಬರುತ್ತಾ ಇಲ್ಲ. ಸ್ಪಲ್ಪ ಹೊತ್ತು ತಡೆದು ಜಮಾಲ್ ಶಾಲೆಯಿಂದ ಸೈಕಲ್‌ನಲ್ಲಿ ಮನೆಗೆ ಬಂದ. ಅವನು ತುಂಬಾ ಉದ್ವೇಗಗೊಂಡವನಂತ ಇದ್ದ.

‘ಏನೋ? ಪೇಟೆಯಲ್ಲಿ ಗಲಾಟೆ ಇದೆಯೇನೋ?’ ಕಾಕ ಒಂದೇ ಉಸುರಿಗೆ ಮಗನನ್ನು ವಿಚಾರಿಸಿದ. ‘ಹೌದು ಅಪ್ಪಾ, ಯಾರೋ ಮೆರವಣಿಗೆ ಮೇಲೆ ಕಲ್ಲು ತೂರಿದರಂತೆ, ಗಲಾಟೆ ಶುರುವಾಗಿದೆ. ಎಲ್ಲರೂ ಅಂಗಡಿ ಮುಚ್ಚುತ್ತಿದ್ದಾರೆ. ಲಾಠಿ ಚಾರ್ಜು ಆಗುತ್ತಾ ಇದೆ. ನಾನು ಬಂದು ಬಿಟ್ಟೆ. ಮಗ ಮನೆಗೆ ಬಂದ ನೆಮ್ಮದಿ ಕಾಕನಿಗೆ ಇದ್ದರೂ, ಅವರಿಗೆ ಒಳಗಿಂದೊಳಗೇ ಮನಸ್ಸು ಬೇಸರಗೊಂಡಿತ್ತು. ನಾಳೆ ಯಾವ ಮುಖದಲ್ಲಿ ಅಂಗಡಿ ತೆರೆದು, ಪರಿಚಿತರ ಮುಖ ನೋಡಲಿ? ಯಾಕೆ ಹೀಗೆ ಆಗುತ್ತಿದೆ? ಜನ ಏಕೆ ಸೌಹಾರ್ದದಲ್ಲಿ ಬದುಕಲು ಇಪ್ಟಪಡುವುದಿಲ್ಲ? ಕಾಕನ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗಲಿಲ್ಲ. ಆದರೆ ಕಾಕನ ಅಲೋಚನೆ ಮಾತ್ರ ನಿಲ್ಲಲಿಲ್ಲ. ತನ್ನ ಮನೆಯ ಎದುರಿನ ಮೆಟ್ಟಲಲ್ಲಿ ಕಾಲೂರಿ ಕುಳಿತುಕೊಂಡರು. ಗತಕಾಲದ ನೆನಪುಗಳು ಒಂದೊಂದಾಗಿ ಮನಃ ಪಟದಲ್ಲಿ ಹಾದು ಹೋದವು. ದೂರದಲ್ಲಿ ಪಕ್ಕದ ಮನೆಯ ಗುರುವ ಜೋರಾಗಿ ಸೈಕಲ್ ತುಳಿದುಕೊಂಡು ಕಾಕನ ಕಡೆಗೆ ಬರುತ್ತಿದ್ದ. ಕಾಕನ ಹತ್ತಿರ ಸೈಕಲ್ ನಿಲ್ಲಿಸಿದವವೇ ಒಂದೇ ಉಸುರಿಗೆ ಬೊಬ್ಬಿಟ್ಟ.

‘ಕಾಕ ……….. ಕಾಕ………. ಚಿತ್ರಾಪುರ ಪೇಟೆ ಇಡೀ ಉರಿಯುತ್ತಿದೆ. ಎಲ್ಲಾ ಕಡೆಯಲ್ಲೂ ಬೆಂಕಿ. ನಿಮ್ಮ ಗೂಡಂಗಡಿಯನ್ನೂ ಅಡ್ಡ ಹಾಕಿ ಬೆಂಕಿ ಕೊಟ್ಟಿದ್ದಾರೆ. ನಾನು ಕಣ್ಣಾರೆ ಕಂಡೆ.’

ಕಾಕ ಒಮ್ಮೆ ಅಧೀರನಾಗಿಬಿಟ್ಟ. ೪೦ ವರ್ಷದ ಅವನ ಗೂಡಂಗಡಿ, ಇದುವರೆಗೆ ಯಾವುದೇ ದುಷ್ಕೃತ್ಯಕ್ಕೆ ಬಲಿಯಾಗಲಿಲ್ಲ. ತಾನು ಮಧ್ಯಾಹ್ನವೋ ಬಂದ್ ಮಾಡಿ ಬಂದಿದ್ದೆ. ಅದರೂ ನನ್ನ ಗೂಡಂಗಡಿ ಈ ಜನರಿಗೆ ಏನು ಮಾಡಿತು? ನನ್ನ ಹೊಟ್ಟೆಗೆ ಹೊಡೆದು ಬಿಟ್ಟರಲ್ಲಾ? ಜೀವನ ಹೇಗೆ ನಿರ್ವಹಿಸಲಿ? ಅಯ್ಯೋ! ಕಾಕನ ಕೂಗು ಕೇಳಿ ಜಮಾಲ್ ಓಡಿಬಂದ. ಹಿಂದಿನಿಂದ ಹೆಂಡತಿ ಹಾಗೂ ಹೆಣ್ಮಕ್ಕಳು. ಎಲ್ಲರೂ ಅಳುವವರೇ. ‘ನನ್ನ ಬೆನ್ನಿಗೆ ಹೊಡೆದರೆ ಸಹಿಸಿಕೊಳ್ಳುತ್ತಿದ್ದೆ. ಹೊಟ್ಟೆಗೆ ಹೊಡೆದರಲ್ಲಾ’ ಅವನ ಅಳು ಕೇಳಿ ಗುರುವ, ತುಕ್ರ, ಕಮಲಕ್ಕ, ಸೀದಿ ಬ್ಯಾರಿ ಓಡಿ ಬಂದು ಸಂತೈಸಿದರು. ಕಾಕ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಒಂದೇ ಸಮನೆ ಅಳುತ್ತಿದ್ದ. ಜಮಾಲ್ ಎದ್ದು ನಿಂತ. ‘ಈಗ ಬರುತ್ತೇನೆ ಅಪ್ಪಾ’ ಎಂದವನೇ ಸೈಕಲ್ ತುಳಿದುಕೊಂಡು ಚಿತ್ರಾಪುರ ಪೇಟೆಗೆ ಹೊರಟು ಹೋದ. ಅವನ ತಾಯಿ, ಅಕ್ಕಂದಿರು ಕರೆಯುತ್ತಿದ್ದಂತೆ ಜಮಾಲ್ ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ.

ಚಿತ್ರಾಪುರದ ಪೇಟೆಗೂ, ಕಾಕನ ಮನೆಗೂ ಒಂದು ಕಿ.ಮೀ. ದೂರ ಇದೆ. ಮಣ್ಣಿನ ರಸ್ತೆ. ಮಳೆಗಾಲದಲ್ಲಿ ಬಿದ್ದ ಹೊಂಡೆಗಳು ಹಾಗೆಯೇ ದೊಡ್ದದಾಗಿಯೇ ಹೊರತು, ಮುಚ್ಚುವ ವ್ಯವಸ್ಥೆಯಿಲ್ಲ. ಕಾಕನ ಆತಂಕ ಜಾಸ್ತಿಯಾಯಿತು. ಜಮಾಲ್ ಯಾಕೆ ಪೇಟೆಗೆ ಹೋದ? ಅಲ್ಲಿಯ ಪರಿಸ್ಥಿತಿಯನ್ನು ಕಲ್ಪಿಸಿಕೊಂಡ ಕಾಕನ ಮೈಯಲ್ಲಿ ನಡುಕು ಉಂಟಾಯಿತು. ಕತ್ತಲೆಯಾಗುತ್ತಾ ಬಂತು. ಜಮಾಲ್ ಹಿಂದೆ ಬರಲಿಲ್ಲ. ಕಾಕಾ ಗುರುವ ಮತ್ತು ಸೀದಿ ಬ್ಯಾರಿಯನ್ನು ಕರೆದು ಸ್ವಲ್ಪ ಪೇಟೆಗೆ ಹೋಗಿ ಜಮಾಲ್‌ನನ್ನು ಕರೆದುಕೊಂಡು ಬರಲು ಹೇಳಿದ. ಗುರುವ ಹಾಗೂ ಸೀದಿ ಬ್ಯಾರಿ ಸೈಕಲ್ ತುಳಿದುಕೊಂಡು, ಅಂಜುತ್ತಲೇ ಪೇಟೆಗೆ ಹೋದರು. ಸ್ವಲ್ಪ ಗಂಟೆಯ ನಂತರ ಅವರು ತಂದ ಸುದ್ದಿ ಆಘಾತಕಾರಿಯಾಗಿತ್ತು. ಗೂಡಂಗಡಿಯ ಬಳಿಯಲ್ಲಿ ನಿಂತ ಜಮಾಲ್‌ನನ್ನು ಯಾರೋ ಚೂರಿಯಲ್ಲಿ ತಿವಿದರಂತೆ. ಸ್ಥಳದಲ್ಲೇ ಸಾವು. ಹೆಣವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಮಾಲ್‌ನ ತಾಯಿಗೆ ಸ್ಥಳದಲ್ಲೇ ಮೂರ್ಛೆ ತಪ್ಪಿತು. ಚಿತ್ರಾಪುರಕ್ಕೆ ೧೪೪ ಸೆಕ್ಷೆನ್, ಅಶ್ರುವಾಯು, ಕಂಡಲ್ಲಿ ಗುಂಡು. ಗಲಾಟೆ ಸಾವಿನಲ್ಲಿ ಅಂತ್ಯ. ಮರುದಿನ ಏನೂ ಆಗದ ರೀತಿಯಲ್ಲಿ ಚಿತ್ರಾಪುರ ತೆರೆದುಕೊಂಡಿತ್ತು.

ಮರುದಿನ ಬೆಳಿಗ್ಗೆ ಕಾಕನ ಮನೆ ಜನಜಂಗುಳಿಯಿಂದ ತುಂಬಿ ಹೋಗಿತ್ತು. ರಾಜಕಾರಣಿಗಳು, ಮಂತ್ರಿಗಳು, ಎಂಎಲ್‌ಎಗಳು, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಎಂಪಿಗಳು, ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳ ನಾಯಕರು, ಊರವರು, ಜಾತಿ ಮತ ಬೇಧವಿಲ್ಲದೆ ಕಾಕನ ಮನೆಗೆ ಭೇಟಿ ನೀಡಿದರು. ಕಾಕನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಷ್ಟವನ್ನು ತುಂಬಿ ಕೊಡುವ ಭರವಸೆ ನೀಡಿದರು. ಆದರೆ ಜಮಾಲ್‌ನನ್ನು ಬದುಕಿಸಿ ಕೊಡುವ ಭರವಸೆ ಯಾರೂ ನೀಡಲಿಲ್ಲ. ಸಂಜೆ ಜಮಾಲ್‌ನ ಕಳೇಬರವನ್ನು ದಫನ ಮಾಡಲಾಯಿತು. ರಾತ್ರಿ ಮನೆಯಲ್ಲಿ ಸ್ಮಶಾನ ಮೌನ.

ದಿನ ಕಳೆದಂತೆ ಕಾಕನ ಮಗನ ಕೊಲೆಯನ್ನು ರಾಜಕಾರಣಿಗಳು ಒಂದು ಟ್ರಂಪ್‌ಕಾರ್ಡ್ ಆಗಿ ಬಳಸಿಕೊಂಡರು. ಜಮಾಲ್‌ನ ಕೊಲೆಗೆ ಆಳುವ ಪಕ್ಷದ ಮುಖಂಡರು, ಪ್ರತಿಪಕ್ಷವನ್ನು ದೂರಿದರೆ, ಪ್ರತಿಪಕ್ಷದವರು ಆಡಳಿತ ಪಕ್ಷವನ್ನು ದೂರಿದರು. ಪತ್ರಿಕೆಗಳಲ್ಲಿ ಸುದ್ದಿಯೇ ಸುದ್ಧಿ. ದಿನಕ್ಕೊಂದು ರೀತಿಯ ಹೇಳಿಕೆ. ಪ್ರತಿ ಹೇಳಿಕೆ ಪರಿಹಾರ ನೀಡುವ ಪ್ರಕ್ರಿಯೆ ಭರದಿಂದ ನಡೆಯಿತು. ಪ್ರತಿಪಕ್ಷದ ನಾಯಕ, ನಾಯಕಯರಿಂದ ಪರಿಹಾರದ ಚೆಕ್ಕುಗಳು ಮನೆಗೆ ಬಂದವು. ಪತ್ರಿಕೆಗಳಲ್ಲಿ ಫೋಟೋಗಳು ರಾರಾಜಿಸಿದವು. ಆಳುವ ಪಕ್ಷವು ತಾನೇನೂ ಕಮ್ಮಿಯಿಲ್ಲವೆಂದು ತಂಡೋಪತಂಡವಾಗಿ ಕಾಕನ ಮನೆಗೆ ಭೇಟಿ ನೀಡಿ ಚೆಕ್‌ರೂಪದಲ್ಲಿ ಪರಿಹಾರ ನೀಡಿದರು. ಫೋಟೋ ತಗೆಸಿದರು.

ಕೆಲವು ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸನ್ನು ಮೆರೆಯಲು ನಗದಾಗಿ ಹಣ ಪರಿಹಾರ ನೀಡಿದರು. ಜಾತಿ, ಮತ ಭೇದವಿಲ್ಲದೆ ಹಲವಾರು ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ಕಾಕನಿಗೆ ನೀಡಿದವು. ಊರ ಮಹನೀಯರು ಹೊಸತಾದ ಗೂಡಂಗಡಿಯನ್ನು ಕಾಕನಿಗೆ ನಿರ್ಮಿಸಿಕೊಟ್ಟು, ಅದೇ ಸ್ಥಳದಲ್ಲಿ ಇಟ್ಟು ಈ ಕುರಿತು ಕಾರ್ಯಕ್ರಮ ಏರ್ಪಡಿಸಿ, ಮಾನವೀಯತೆಯನ್ನು ಮೆರೆದರು. ಆದರೆ ಕಾಕನಿಗೆ ಆದ ಪುತ್ರ ವಿಯೋಗವನ್ನು ತುಂಬಲು ಜನರಿಂದ ಬಿಡಿ, ದೇವರಿಂದಲೂ ಸಾಧ್ಯವಾಗಲಿಲ್ಲ.

ಕೆಲವೇ ತಿಂಗಳಲ್ಲಿ ಕಾಕನಿಗೆ ಲಕ್ಷ-ಲಕ್ಷ ಹಣ ಸಂಗ್ರಹವಾಯಿತು. ಊರವರು ‘ಚಿತ್ರಾಪುರ ಗೂಡಂಗಡಿ ಕಾಕನ ಸಹಾಯ ನಿಧಿ’ ಎಂದು ಕಾಕನ ಬ್ಯಾಂಕ್ ಅಕೌಂಟು ತೆರೆದು ಹಣ ಸಂಗ್ರಹಿಸಲಾಯಿತು. ಒಟ್ಟು ಕಾಕನಿಗೆ, ಸುಮಾರು ೧೫ ಲಕ್ಷ ಹಣ ಸಂಗ್ರಹವಾಯಿತು. ಕಾಕ ತಡಮಾಡಲಿಲ್ಲ. ಒಂದು ತಿಂಗಳೊಳಗಾಗಿ ತನ್ನ ಯೋಗ್ಯತೆಗೆ ಅನುಗುಣವಾದ ಎರಡು ಬಡ ಹುಡುಗರನ್ನು ಹುಡುಕಿ ತನ್ನ ಎರಡು ಹೆಣ್ಮಕ್ಕಳಿಗೆ ಮದುವೆ ಮಾಡಿಸಿಬಿಟ್ಟರು. ಈಗ ಮನೆಯಲ್ಲಿ ಕಾಕ ಮತ್ತು ಕಾಕನ ಹೆಂಡತಿ ಮಾತ್ರ. ಆಗಾಗ್ಗೆ ಹೆಣ್ಮಕ್ಕಳು ಬಂದು ತಂದೆ ತಾಯಿಯರನ್ನು ನೋಡಿಕೊಂಡು ಹೋಗುತ್ತಿದ್ದರು. ಗೂಡಂಗಡಿ ವ್ಯಾಪಾರವೂ ಸುಮಾರಾಗಿ ನಡೆಯುತ್ತಿತ್ತು. ಕಾಕನಿಗೆ ಮಾತ್ರ ಜಮಾಲನ ರೂಮು ಹೊಕ್ಕಾಗಲೆಲ್ಲಾ ಅಳು ಉಕ್ಕಿ ಬರುತ್ತಿತ್ತು. ಅವನ ಪುಸ್ತಕಗಳು, ಬಟ್ಟೆ, ಬರೆಗಳು, ಸೈಕಲು ಅವನ ನೆನಪನ್ನು ಕೆದಕುತ್ತಿದ್ದವು. ತನ್ನ ಅಕ್ಕಂದಿರ ಮದುವೆ ನೋಡಲು ಅವನಿಲ್ಲದೆ ಹೋದನಲ್ಲಾ ಎಂಬ ನೋವು ಅವರನ್ನು ಕಾಡುತ್ತಿತ್ತು.

ದಿನಗಳು ಸರಿದವು. ನಾಳೆ ಜಮಾಲ್‌ನ ವರ್ಷದ ತಿಥಿ. ಮನೆಯಲ್ಲಿ ಅವನ ಐದು ಅಕ್ಕಂದಿರು, ಭಾವಂದಿರು, ಅವರ ಮಕ್ಕಳು ಮುಂದಿನ ದಿನವೇ ಬಂದಿದ್ದರು. ಕಾಕ ಹಾಗೂ ಅವನ ಹೆಂಡತಿಗೆ ಮಕ್ಕಳೆಲ್ಲಾ ಒಂದೇ ಕಡೆ ಸೇರಿದ ಸಂತೋಷವಾದರೆ, ಜಮಾಲ್‌ನ ನೆನಪು ಮಾತ್ರ ಮಾಸಲಿಲ್ಲ. ಜಮಾಲ್‌ನ ಸಣ್ಣ ಆಕ್ಕನಿಗೆ ಜಮಾಲ್‌ನ ಮೇಲೆ ತುಂಬಾ ಪ್ರೀತಿ. ಇಬ್ಬರಿಗೆ ಬರೇ ೩ ವರ್ಷದ ಅಂತರ. ಶಾಲೆಗೆ ಜೊತೆಯಾಗಿ ಹೋಗುತ್ತಿದ್ದರು. ಜಮಾಲ್‌ನ ರೂಮು ಹೊಕ್ಕ ಅವನ ಸಣ್ಣ ಅಕ್ಕ ಜಮಾಲ್‌ನ ಪುಸ್ತಕಗಳನ್ನು ನೋಡಿ ಒಂದೇ ಸಮನೆ ಅಳತೊಡಗಿದಳು. ಅವನ ನೋಟ್ಸುಗಳನ್ನು, ಅಕ್ಷರಗಳನ್ನು ನೋಡಿ, ಅವಳ ದುಃಖದ ಕಟ್ಟೆ ಒಡೆಯಿತು. ಅವಳು ಜಮಾಲ್‌ನ ಪುಸ್ತಕಗಳನ್ನೆಲ್ಲಾ ತೆರೆದು ಓದುತ್ತಾ, ನೋಡುತ್ತಾ ಹೋದಂತೆ ಅವನ ದಿನಚರಿ ಪುಸ್ತಕ ಅವಳ ಕಣ್ಣಿಗೆ ಬಿತ್ತು. ಜಮಾಲ್ ದಿನಚರಿ ಬರೆಯವ ಹವ್ಯಾಸವನ್ನು ಬೆಳೆಸಿಕೊಂಡಿದ್ದು ಅವಳಿಗೆ ಮೊದಲಿನಿಂದಲೂ ಗೊತ್ತಿತ್ತು. ಅಂದಂದಿನ ದಿನಚರಿಯನ್ನು ಅವನು ರಾತ್ರಿ ಮಲಗುವ ಮುಂಚೆ ಬರೆದು ಮುಗಿಸುತ್ತಿದ್ದ. ಅವನ ಅಕ್ಕ ಜಮಾಲ್ ತೀರಿ ಹೋಗುವ ಮುಂದಿನ ದಿನದವರೆಗಿನ ದಿನಚರಿಯನ್ನು ಓದಿದಳು. ಅದರಲ್ಲಿ ಏನೂ ವಿಶೇಷವಿರಲಿಲ್ಲ. ಹೆಚ್ಚಿನ ಕಡೆಯಲ್ಲಿ ತಂದೆಯ ಕಷ್ಟವನ್ನು ತನ್ನಿಂದ ನೋಡಲಾಗುವುದಿಲ್ಲ ಎಂದು ಬರೆಯುತ್ತಿದ್ದ. ಕೊನೆಗೆ ಜಮಾಲ್ ತೀರಿಹೋದ ದಿನಾಂಕದಂದು ದಿನಚರಿ ಬರೆದುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ತುಂಬಾ ಆತಂಕದಿಂದ ಅವಳು ದಿನಚರಿಯನ್ನು ಓದತೊಡಗಿದಳು.

‘ಬಹುಶಃ ಈವತ್ತು ನನ್ನ ಕೊನೆಯ ದಿನ. ರಾತ್ರಿಯ ದಿನಚರಿಯನ್ನು ಬೆಳಿಗ್ಗೆ ಮುಂಗಡೆವಾಗಿ ಬರೆಯುತ್ತಿದ್ದೇನೆ. ಇವತ್ತು ಬೃಹತ್ ಮೆರವಣಿಗೆಯ ಕಾರ್ಯಕ್ರಮವಿದೆ. ಚಿತ್ರಾಪುರದಲ್ಲಿ ಕಲ್ಲುತೂರಾಟವಾಗಿ, ಗಲಭೆಯಾಗುವುದರಲ್ಲಿ ಸಂಶಯವಿಲ್ಲ. ಅಶ್ರುವಾಯು, ಸೆಕ್ಷೆನ್ ೧೪೪ ಖಂಡಿತ ಜಾರಿಯಾಗುತ್ತದೆ. ಇದು ಚಿತ್ರಾಪುರದ ನಡೆದು ಬಂದ ಇತಿಹಾಸ. ನಾನು ನನ್ನ ತಂದೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಜನೆ ಹಾಕಿದ್ದೇನೆ. ಗಲಾಟೆ, ಲಾಠಿ ಚಾರ್ಜು ಆಗುವ ಗೂಡಂಗಡಿ ಸ್ಥಳದಲ್ಲಿ ಮೆರವಣಿಗೆಯ ಮಧ್ಯಭಾಗದಲ್ಲಿ ಚೂರಿಯಲ್ಲಿ ನನಗೆ ನಾನೇ ಇರಿದು ಸಾಯಬೇಕೆಂದಿದ್ದೇನೆ. ಇದರಿಂದಾಗಿ ನನ್ನ ತಂದೆಗೆ ಸಹಾನುಭೂತಿಯ ಅಲೆ ಉಕ್ಕಿ, ಲಕ್ಷ ಲಕ್ಷ ಪರಿಹಾರ ಧನ ಸಿಗುತ್ತದೆ. ಮತ್ತು ನನ್ನ ಅಕ್ಕಂದಿರ ಮದುವೆ ಸರಾಗವಾಗಿ ನಡೆಯುತ್ತದೆ. ಅಪ್ಪನ ಹೊರೆಯೊಂದು ಜಾರುತ್ತದೆ. ದೇವರು ಮೆಚ್ಚಿದ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಅಪ್ಪಾ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಲುಮೆ
Next post ಕರುಣೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…