ಮುತ್ತಲದ ನೆತ್ತರವ ಚಿಮ್ಮಿ ಚಿತ್ರಿಸುವ ಹೂ
ಸುಗ್ಗಿಯೊಲುಮೆಯ ತಂದೆ ಅಂಚೆಗಾರ.
ಅರಿತೊಂದು ಕುಡಿನೋಟ, ತಿಳಿದೊಂದು ಮುಗುಳುನಗೆ,
ಬರುವ ಬೆಳಕಿನ ಬನದ ಸಂಚಕಾರ.
ತನ್ನ ಸನ್ನಿಧಿಯಲ್ಲಿ ಜೀವಕೋಟಿಯಲೊಂದು
ಜೀವ ಹೂ ಬಿಡಲು ಈ ಜನ್ಮ ಧನ್ಯ.
ಒಂದರೆಕ್ಷಣದಲ್ಲಿ ಅವರ ಯೋಗವು ಉಂಟು
ಅವರ ಜೀವನವಿದಕು ಏನು ಅನ್ಯ?
‘ಇದು ನಿರಂತರವಾಗಿ ನಿಲ್ಲಬೇಕು;
ನಿಲ್ಲದಲೆ ಹಿಗ್ಗಲಿದು; ಇದುವೆ ಸಾಕು.
ಇದು ಬದುಕು, ಇದು ಬಾಳು, ಹಿಗ್ಗಿನಾಟ
ಉಳಿದುದದು ಹುಸಿಯುಸಿರ ಕಳೆವ ಕಾಟ.
*****