ಈಕೆ ನನ್ನ ಯಶೋದೆ, ಇವಳೆನ್ನ ಸಲಹುವಳೊ
ನಾನಿವಳ ಸಲಹುವೆನೋ ನನಗರಿದು. ಕೈಯೆತ್ತಿ
ರೆಕ್ಕೆಯೊಲು ಬಡಿವಾಗ, ಕಣ್ಣನರಳಿಸಹತ್ತಿ
ಕುಲುಕುಲನೆ ನಗುವಾಗ,- ಇವಳೆ ಅನುಭವಿಸುವಳೊ
ಹಿರಿದಾದ ಸಂತಸವ, ನಾನೊ? ಇದು ನನಗರಿದು.
ಕೇಕಿಯನು ಹಾಕಿವಳು ಕುಣಿದು ಕಳೆಯೇರುತಿರೆ,-
ಅವಳ ಸುಖ ಮಿಕ್ಕಿ ನನ್ನೆದೆಯು ಉಕ್ಕೇರುತಿರೆ,-
ಉಭಯತರು ನಲಿಯುವೆವು ಬಾಳ ಭಯವನು ಮರೆದು.
ಇಂತು ನಲಿವ ಯಶೋದೆ ಬೆಳೆದು ದೊಡ್ಡವಳಿರಲು
ಯಾರ ಮನೆದೀವಿಗೆಯ ಹಚ್ಚಿ ಸಂತಸದಿಂದ
ಒಲಿಯುವಳೊ ನಾ ಕಾಣೆ! ತುಸುವೆ ಕೊಂಕಿರ ಕುರುಳು
ಮೆಲುಗಾಳಿ ಸೋಂಕಿಂದ, ನಲುಮೆಯುತ್ಸವದಿಂದ
ಬುದ್ಧಿ ತುಸು ಮಂಕಾಗೆ, ಮನವಿತ್ತು ಮುತ್ತೈದೆ-
ಯಾಗಿ ನಿಂತಿರಲಿವಳು;- ಯಾರ ಮನೆಯ ಯಶೋದೆ?
*****