ಇರ್‍ವರಿದ್ದೆವು ಗೆಳೆಯರೊಮ್ಮೆ ಕದನವ ಮಾಡಿ
ನೊಂದಿರಲು ನಾನತ್ತೆ; ಗೆಳೆಯ ನಕ್ಕನು. ನನ್ನ
ಮೊಗವು ಕೆಂಪೇರುತಿರೆ ಬೈಗಂತ, ಬಾವನ್ನ-
ದುಸಿರನನುಭವಿಸಿದೊಲು ತಣ್ಣಗಿದ್ದನು ನೋಡಿ.
ಕಂಪಿಸಿತು ನನ್ನ ಮೈ, ಗೆಳೆಯ ಗಹಗಹಿಸಿದನು
ಬಿಸುಸುಯ್ದೆ; ಉಕ್ಕಿ ಬರುತಿರುವ ಕಂಬನಿ ಮಿಡಿದೆ.
ಆಗ ಬಡವನ ಹಳಿವ ಧನಿಕನಂದದಿ ಬರಿದೆ
ಅಣಕುವಾಡಿದ ಗೆಳೆಯ. ಅದನೆಲ್ಲ ಸಹಿಸಿದೆನು.
ಮುಂದೊಮ್ಮೆ ದೇಶಾಂತರಕೆ ಪಯಣ ಬೆಳಸಿರಲು
ನಾನು, ಗೆಳೆಯನು ಬಂದ; ಮೌನವ್ರತವನು ಮುರಿದು,
ಅಗಲುತಿಹ ನನ್ನ ನಾಲಿಂಗಿಸಿದ, ಕಣ್ಣೀರು
ಕೋಡಿವರಿಯಲು ತೋಳಲೆನ್ನ ತಕ್ಕೈಸಿರಲು,-
ಎದೆಯಾಳದಿಂದುಕ್ಕಿ ಬಂತೊಲುಮೆ ಮೇಲ್ವರಿದು
ಅದರಾಳವನು ಹೋಲಬಹುದಾದ ಮುನ್ನೀರು?
*****