ಕತೆಗಾರ್ತಿ ಶ್ಯಾಮಲಾ

ಕತೆಗಾರ್ತಿ ಶ್ಯಾಮಲಾ

೧೯೪೧ನೆಯ ಜುಲೈ ಸಂಚಿಕೆಯಲ್ಲಿ (ಸಂಪುಟ೧೯) ಜಯಕರ್ನಾಟಕ ಗ್ರಂಥಮಾಲೆಯ ಪ್ರಕಟಣೆಗಳು ಎಂಬ ಜಾಹೀರಾತಿನಲ್ಲಿ ಶ್ಯಾಮಲಾ ಅವರ ಕತೆಗಳ ಕುರಿತ ಪ್ರಕಟಣೆಯೊಂದು ಹೀಗಿದೆ: “ಜಯಕರ್ನಾಟಕ ಸಂಪಾದಿಕೆಯರಾದ ಶ್ರೀ.ಸೌ ಶ್ಯಾಮಲಾದೇವಿಯವರ ಕತೆಗಳ ಸಂಗ್ರಹ. ಕೆಲವು ತಿಳಿಹಾಸ್ಯದಿಂದ ಹಗುರಾಗಿವೆ; ಕೆಲವು ತಳಮಳದಿಂದ ಮನಸ್ಸನ್ನು ಕೊರಗಿಸುವಂತಹವಾಗಿವೆ. ಇವುಗಳೆಲ್ಲ ಸರಸವಾದ ಬಳಕೆಯ ಮಾತಲ್ಲಿ, ಉಚಿತವಾದ ಸಂಭಾಷಣೆಗಳಲ್ಲಿ ಚಿತ್ರಿತವಾದ ಸಾಮಾಜಿಕ ಜೀವನದ ಸಹಜ ಚಿತ್ರಗಳಾಗಿವೆ. ‘ಇಲ್ಲಿಯ ಎಲ್ಲ ವ್ಯಕ್ತಿಗಳು ಸಜೀವ ವ್ಯಕ್ತಿಗಳು. ಈ ಸಂಗ್ರಹ ಹೆಣ್ಣಿನ ಬಾಳಿನ ಬೆಳಕಿನಂತಿದೆ’ ಎಂದು ಕನ್ನಡ ಸಾಹಿತ್ಯಪರಿಷತ್ಪತ್ರಿಕೆ ಎನ್ನುತ್ತಿದೆ. ಬೆಲೆ.10 ಆಣೆ.” ಇದೇ ಶ್ಯಾಮಲೆಯವರ ಕಥೆಗಳಿಗೆ ಪುಟ್ಟ ಪ್ರಶಂಸೆಯಂತಿದೆ.

ಹೀಗೆ ಕನ್ನಡ ಕತೆಗಾರ್ತಿಯರ ಸಾಲಿನಲ್ಲಿ ಹೆಸರು ನಿಲ್ಲಿಸಿದ ಶ್ಯಾಮಲಾದೇವಿ ಬರೆದಿದ್ದು ಪ್ರಧಾನವಾಗಿ ಕತೆಗಳನ್ನು, ಸುಮಾರು ಮೂವತ್ತರ ದಶಕದಲ್ಲಿ ಬರೆಯಲಾರಂಭಿಸಿದ ಶ್ಯಾಮಲಾ ಕೇವಲ ಒಂದು ದಶಕದ ಅವಧಿಯಲ್ಲಿ ಎರಡು ಕಥಾ ಸಂಕಲನ ತಂದರು. ಇದರಾಚೆಗೂ ಅವರ ಕತೆಗಳು ಜಯಕರ್ನಾಟಕದಲ್ಲಿ ಪ್ರಕಟವಾದವು. ಶ್ಯಾಮಲಾ ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು ಇಪ್ಪತ್ತೆರಡು ಕತೆಗಳನ್ನು ಬರೆದರು. ಎರಡು ಕಥಾಸಂಕಲನಗಳನ್ನು ಹೊರತಂದರು. ಅವೇ ‘ಹೂಬಿಸಿಲು'(೧೯೩೬) ಮತ್ತು ‘ಹೊಂಬಿಸಿಲು'(೧೯೪೩). ‘ಹೂಬಿಸಿಲು’ ಅವರ ಮೊದಲ ಕಥಾಸಂಕಲನ. ಮೊದಲನೆಯ ಸಂಕಲನವು ಶ್ಯಾಮಲಾ ಕುಟುಂಬಕ್ಕೆ ಆಪ್ತರಾಗಿದ್ದ ಶ್ರೀ ಹ.ಪೀ.ಜೋಶಿಯವರ ಒತ್ತಾಸೆಯೊಂದಿಗೆ ಬಂದಿತು. ಮರಣೋತ್ತರವಾಗಿಯೂ ಶ್ಯಾಮಲಾ ಅವರ ಕಥೆಗಳು ಚರ್ಚೆಯಲ್ಲಿದ್ದವು. ಬೇಂದ್ರೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಬರವಣಿಗೆಗಳನ್ನು ಪ್ರಸ್ತಾಪಿಸಿದಾಗ ಶ್ಯಾಮಲಾ ಅವರ ಹೆಸರನ್ನು ಉಲ್ಲೇಖಿಸುತ್ತಾರೆ.

ಕನ್ನಡದ ಬರಹಗಾರ್ತಿಯರನ್ನು ಕುರಿತು ಗಂಭೀರವಾದ ಓದು ಅಧ್ಯಯನಗಳು ಆರಂಭವಾಗಿದ್ದೇ ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗು ಬರೆದ ಬರಹಗಾರ್ತಿಯರು ಮುಖ್ಯಪ್ರವಾಹದಲ್ಲಿ ಕಂಡೂ ಕಾಣದಂತಿದ್ದರು. ಕೆಲವರು ಮಹಾ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು. ಈವರೆಗಿನ ಅಧ್ಯಯನಗಳು ದಾಖಲಿಸುವಂತೆ ಸ್ವಾತಂತ್ರ್ಯಪೂರ್ವ ಬರಹಗಾರ್ತಿಯರು ಪತ್ರಿಕಾ ಬರವಣಿಗೆ, ಪ್ರಕಾಶನ, ಕತೆ, ಕಾವ್ಯ, ನಾಟಕ, ಮಕ್ಕಳ ಸಾಹಿತ್ಯಗಳ ರಚನೆಯಲ್ಲಿ ತಮ್ಮ ಸೃಜನಶೀಲತೆಯನ್ನು ತೋರುತ್ತಾ ಬಂದಿದ್ದರೂ ಅವರ ಕಾರ್ಯವನ್ನು ಮುನ್ನೆಲೆಗೆ ತಂದು ನೋಡುವ ದೃಷ್ಟಿಕೋನವು ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಗೈರುಹಾಜರಾಗಿದೆ. ಹೀಗಿರುವಾಗ ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಶ್ಯಾಮಲಾ ಅವರ ಕತೆಗಳು ವಿಮರ್ಶೆಯ ಎಟುಕಿಗೆ ಸಿಗದ ಕಾರಣವನ್ನು ಊಹಿಸಲು ಸಾಧ್ಯವಿದೆ. ಜಯಕರ್ನಾಟಕದಂತಹ ಪತ್ರಿಕೆಯ ಸಹ – ಸಂಪಾದಕಿಯ ಸ್ಥಾನದಲ್ಲಿದ್ದುದರಿಂದ ಸ್ವಲ್ಪ ಮಟ್ಟಿಗಾದರೂ ಶ್ಯಾಮಲಾ ಅವರ ಕತೆಗಳು ಪ್ರಕಟಣೆಯ ಭಾಗ್ಯವನ್ನು ಪಡೆದುಕೊಂಡವು. ಇಲ್ಲದಿದ್ದರೆ ಶ್ಯಾಮಲಾ ಕೂಡ ಅಜ್ಞಾತ ಲೇಖಕಿಯಾಗಿ ಉಳಿದೇ ಹೋಗುತ್ತಿದ್ದರೇನೊ?

ಶ್ಯಾಮಲಾ ಧಾರವಾಡ ಸೀಮೆಯ ಕತೆಗಾರ್ತಿಯರಲ್ಲಿ ಮೊದಲಿಗರು. ಶಾಂತಾದೇವಿ ಮಾಳವಾಡ ಅವರು ಶ್ಯಾಮಲಾ ಅವರನ್ನು ‘ಉತ್ತರ ಕರ್ನಾಟಕದ ಮೊದಲ ಕತೆಗಾರ್ತಿ’ ಎಂದು ಕರೆದಿದ್ದಾರೆ. ಅಲ್ಲದೆ, ‘ಆ ಕಾಲದಲ್ಲಿ ಧಾರವಾಡದ ಸಾಹಿತ್ಯ ವಲಯದಲ್ಲಿ ಶ್ಯಾಮಲಾದೇವಿ ಒಬ್ಬರೇ ಲೇಖಕಿಯಾಗಿ ಕಂಡು ಬರುತ್ತಿದ್ದರು’ ಎಂಬ ಮಾತನ್ನೂ ಬರೆದಿದ್ದಾರೆ. ಶ್ಯಾಮಲಾ ಸಂಚಯ, ಪು.೨೯೩), ಶ್ಯಾಮಲಾ ಅವರ ಮೊದಲ ಕಥಾಸಂಕಲನಕ್ಕೆ ಮುನ್ನುಡಿ ಬರೆದ ಬೆಟಗೇರಿ ಕೃಷ್ಣಶರ್ಮ ಅವರು ಸಹ ಈ ಅಂಶವನ್ನು ಹೀಗೆ ಪ್ರಸ್ತಾಪಿಸಿದ್ದಾರೆ- “‘ಹೂ ಬಿಸಿಲು’ ಇದು ಉತ್ತರ ಕರ್ನಾಟಕದ ಸ್ತ್ರೀ ಸಾಹಿತಿಯೊಬ್ಬರ ಮೊದಲ ಗ್ರಂಥ, ಸ್ತ್ರೀ ನಿರ್ಮಿತ ಸಾಹಿತ್ಯ ಕ್ಷೇತ್ರದಲ್ಲಿಯೂ ಮೊದಲನೆಯ ಗ್ರಂಥ. ಉತ್ತರ ಕರ್ನಾಟಕದ ಇಂದಿನ ಸಾಹಿತ್ಯ ಚರಿತ್ರೆಯನ್ನು ಬರೆಯ ತೊಡಗಿದಾಗ ಸ್ತ್ರೀ ವಿಭಾಗದಲ್ಲಿ ಮೊದಲು ಹೆಸರುಗೊಳ್ಳಬೇಕಾದ ಗ್ರಂಥ ಇದು” (ಶ್ಯಾಮಲಾ ಸಂಚಯ, ಪು ೨೯೪).

ಕನ್ನಡದ ಆರಂಭದ ಕತೆಗಾರರಲ್ಲಿ ಶ್ಯಾಮಲಾ ಅವರ ಹೆಸರು ದಾಖಲಾಗಿದೆ. ಧಾರವಾಡದಿಂದ ಆಗ ಬರುತ್ತಿದ್ದ ಪ್ರತಿಷ್ಟಿತ ಜಯಕರ್ನಾಟಕ ಪತ್ರಿಕೆಯಲ್ಲಿ ಶ್ಯಾಮಲಾ ಅವರ ಕತೆಗಳು ಪ್ರಕಟಗೊಂಡಿವೆ. ಆ ಕಾಲದ ಪ್ರಮುಖ ಬರಹಗಾರರಾದ ಬೆಟಗೇರಿ ಕೃಷ್ಣಶರ್ಮ, ದ.ಬಾ.ಕುಲಕರ್ಣಿ, ಸ.ಸ.ಮಾಳವಾಡ, ಶಿ.ಶಿ.ಬಸವನಾಳ ಮುಂತಾದವರೆಲ್ಲ ಶ್ಯಾಮಲಾ ಕತೆಗಳ ಮೇಲೆ ಬರೆದಿದ್ದಾರೆ. ಶ್ಯಾಮಲಾ ಅವರ ಮೊದಲ ಸಂಕಲನ ‘ಹೂಬಿಸಿಲು’ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮರು ಮುನ್ನುಡಿ ಬರೆದರೆ, ಅವರ ಎರಡನೆಯ ಸಂಕಲನ ‘ಹೊಂಬಿಸಿಲು’ಗೆ ಶಿ.ಶಿ.ಬಸವನಾಳ ಅವರು ಮುನ್ನುಡಿ ಬರೆದಿದ್ದರೆ ಸ.ಸ.ಮಾಳವಾಡ ಅವರು ಹಿನ್ನುಡಿ ಬರೆದಿದ್ದಾರೆ. ಶ್ಯಾಮಲಾ ಅವರು ಅತ್ಯಂತ ಕಿರು ಅವಧಿಯಲ್ಲಿ ಕತೆಗಾರ್ತಿಯಾಗಿ ದಾಖಲಾಗಿ ಬೇಗನೆ ಮರೆಯಾದರು. ಈ ಅಲ್ಪಾವಧಿಯಲ್ಲಿ ಅವರ ಕತೆಗಳು ಇಷ್ಟರ ಮಟ್ಟಿಗಿನ ಪ್ರಶಂಸೆ ಕೀರ್ತಿಗಳನ್ನು ಪಡೆದಿದ್ದು ಸುಕೃತ. ಸಾಹಿತ್ಯ ಭಾರತಿಯ ಸಮೀಕ್ಷೆಯಲ್ಲಿ ಶ್ಯಾಮಲಾ ಸೇರಿದಂತೆ ಅನೇಕ ಲೇಖಕಿಯರನ್ನು ಹೆಸರಿಸಿ ಕಥಾಕ್ಷೇತ್ರದಲ್ಲಿ ಮಹಿಳೆಯರಿಂದ ವಿಶೇಷ ಸೇವೆ ಸಂದಿದೆ ಎಂದು ಗುರುತಿಸಲಾಗಿದೆ. ಶ್ಯಾಮಲಾ ಅವರ ‘ಹೂಬಿಸಿಲು’ ಕೃತಿಯು ಮಹಿಳಾ ಸಂಗ್ರಹಗಳಲ್ಲಿ ಆಕರ್ಷಕವಾಗಿದೆ ಎಂದಿದ್ದಾರೆ(ಸಾಹಿತ್ಯ ಭಾರತೀ, ಪು.೪೨೨-೩).
* * *

ಶ್ಯಾಮಲಾ ಜೀವಿತಾವಧಿ ೧೯೧೦ ರಿಂದ ೧೯೪೩ರ ನಡುವಿನದು. ಈ ಕಾಲವು ಇಪ್ಪತ್ತನೆಯ ಶತಮಾನದ ಆದಿಕಾಲ. ಆಗ ತಾನೇ ಆಧುನಿಕ ಪ್ರಕಾರಗಳು ಕನ್ನಡದಲ್ಲಿ ವಿಕಸಿತವಾಗುತ್ತಿದ್ದ ಕಾಲ. ಕನ್ನಡದ ಸಣ್ಣಕತೆಗಳು ಈ ಶತಮಾನದ ಆರಂಭದಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ರೂಪತಳೆಯುತ್ತಿತ್ತು. ಕನ್ನಡದ ಸಣ್ಣಕತೆಗಳಿಗೆ ಒಂದು ಶತಮಾನದ ಇತಿಹಾಸವಿದೆ ಎಂದು ದಾಖಲೆಗಳು ಹೇಳುತ್ತವೆ. ೧೯೦೦ರಲ್ಲಿ ಪ್ರಕಟಗೊಂಡ ಪಂಜೆ ಮಂಗೇಶರಾಯರ ಕತೆಗಳೇ ಮೊದಲ ಕನ್ನಡದ ಕತೆಗಳು. ಇಲ್ಲಿಂದ ಅಧಿಕೃತವಾಗಿ ಕನ್ನಡ ಕಥಾ ಸಾಹಿತ್ಯ ಆರಂಭವಾಯಿತೆಂದು ಹೇಳಲಾಗುತ್ತದೆ. ಈ ಕಾಲಘಟ್ಟದ ಆಚೀಚೆ ಬರೆಯ ತೊಡಗಿದ ಶ್ಯಾಮಲಾ ಅವರನ್ನು ಕನ್ನಡದ ಕಥಾ ಪರಂಪರೆಯಲ್ಲಿಟ್ಟು ನೋಡುವುದಾದರೆ ಅವರು ಕನ್ನಡ ಕತೆಯ ಆರಂಭದ ಕಾಲಘಟ್ಟಕ್ಕೆ ಸೇರಿದವರು ಎನ್ನಬಹುದು. ಈ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಯ ಬಿಸಿ, ಸುಧಾರಣೆಯ ತಂಪು ಎರಡೂ ಒಟ್ಟೊಟ್ಟಿಗೆ ಘಟಿಸುತ್ತಿದ್ದವು. ವಸಾಹತುಶಾಹಿಯಿಂದ ಆಧುನಿಕ ಶಿಕ್ಷಣ ಮತ್ತು ಮನೋಭಾವ ಎರಡೂ ದಕ್ಕಿದ್ದವು. ಮಿಶನರಿಯಿಂದ ಶಿಕ್ಷಣಕ್ಕೆ ಪ್ರಾಮುಖ್ಯತೆ ಇದ್ದ ಧಾರವಾಡದಲ್ಲಿ ಹುಟ್ಟಿದ ಶ್ಯಾಮಲಾ ಸ್ವಲ್ಪ ಮಟ್ಟಿಗೆ ಶಿಕ್ಷಿತರಾಗಿದ್ದವರು. ಜಯಕರ್ನಾಟಕ ಪತ್ರಿಕೆ ನಡೆಸಿದ ಅನುಭವದಿಂದ ಹಾಗು ಅವರ ಪತಿ ಸಕ್ರಿಯವಾಗಿ ಪತ್ರಿಕೆಯ ಬಳಗದ ಗೆಳೆಯರ ಗುಂಪಿನ ಸಾಹಿತಿಗಳ ಜೊತೆ ಇದ್ದುದರಿಂದ ಶ್ಯಾಮಲಾ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಪರಿಚಯವಾಗಿ ತಮ್ಮ ಕಥನ ಪ್ರತಿಭೆಗೆ ಸೂಕ್ತ ಚಾಲನೆ ಸಿಕ್ಕಿರಲಿಕ್ಕೂ ಸಾಕು.

ಇಪ್ಪತ್ತನೆಯ ಶತಮಾನದ ಮೊದಲ ಘಟ್ಟದಲ್ಲಿ ಕನ್ನಡದ ಕತೆಗಳು ಹೇಗಿದ್ದವು? ಕನ್ನಡದ ಸಂವೇದನೆಯ ಸ್ವರೂಪ ಏನಾಗಿದ್ದಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತಿಕೊಂಡರೆ ಸುದೀರ್ಘ ಚರಿತ್ರೆಯೇ ತೆರೆದುಕೊಳ್ಳುತ್ತದೆ. ಇಪ್ಪತ್ತನೆಯ ಶತಮಾನದ ಗದ್ಯ ಸಾಹಿತ್ಯದಲ್ಲಿ ಕತೆಗಳಿಗೆ ತಮ್ಮದೇ ಆದ ಮಹತ್ವ ಇದೆ. ವಸಾಹತುಶಾಹಿ ಕಾಲಘಟ್ಟದ ಸಂವೇದನೆಯನ್ನು ಈ ಪ್ರಕಾರಗಳು ಮೈಗೂಡಿಸಿಕೊಂಡು ಎಚ್ಚೆತ್ತ ರಾಜಕೀಯ ಪ್ರಜ್ಞೆಯನ್ನು ಸಮುದಾಯಗಳಲ್ಲಿ ಉಂಟು ಮಾಡತೊಡಗಿದ್ದವು. ವಸಾಹತುಶಾಹಿ ಸಂಬಂಧದಿಂದ ಆದ ಮೌಲ್ಯ ಪಲ್ಲಟ ಹಾಗು ಬದಲಾದ ಬದುಕಿನ ಕ್ರಮಗಳನ್ನು ಅನುಸಂಧಾನ ಮಾಡುತ್ತ ಹೊರಟ ಕಾದಂಬರಿ ಪ್ರಕಾರದಂತೆ ಅದರ ಮಿನಿಯೇಚರ್‌ನಂತಿರುವ ಸಣ್ಣ ಕತೆಯು ಕೂಡ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಯಿತು. ಕನ್ನಡದ ಕತೆಗಳ ಸಂವೇದನೆಯು ವಸಾಹತುಶಾಹಿ ಅನುಭವಗಳನ್ನು ಕಂಡರಿಸಿದ ರೀತಿ ಅನನ್ಯವಾಗಿದೆ. ಇಂಗ್ಲಿಷ್ ಶಿಕ್ಷಣ ಪಡೆದು ಉನ್ನತ ವರ್ಗ ಹಾಗು ಬದಲಾವಣೆಯ ಸ್ಥಿತ್ಯಂತರಗಳನ್ನು ಎದುರಿಸುತ್ತಿದ್ದ ಮಧ್ಯಮವರ್ಗಗಳು ಈ ನಿಟ್ಟಿನಲ್ಲಿ ಕನ್ನಡದ ಕಥಾ ವಸ್ತುಗಳಾಗಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಆಧುನಿಕತೆಯ ಪ್ರಶ್ನೆಯನ್ನು ಕನ್ನಡ ಕಥನವು ಮುಖಾಮುಖಿಯಾಗಿಸಿ ಕೊಂಡಿತು. ರಾಷ್ಟ್ರೀಯತೆ ಮತ್ತು ಆಧುನಿಕತೆಗಳ ಸಮಸ್ವೀಕರಣಗಳನ್ನು ಕನ್ನಡದ ಮೊದಲ ಕಥನಗಳು ಚಿತ್ರಿಸಿದ ಬಗೆ ಹಾಗು ಆನಂತರ ಆ ಸಂಕಥನವು ಬೆಳೆಯುತ್ತಾ ಬಂದಂತೆ ಸಂಕೀರ್ಣವಾದ ವಸ್ತುಗಳ ನಿರ್ವಹಣೆಯನ್ನು ಚಾರಿತ್ರಿಕವಾಗಿ ಗುರುತಿಸಬಹುದಾಗಿದೆ.

ಕನ್ನಡದ ಈ ಶ್ರೀಮಂತ ಕಥನದ ಪರಂಪರೆಯಲ್ಲಿ ಪುರುಷ ಲೇಖಕರ ಹೆಸರುಗಳು ದಂಡಿಯಾಗಿ ಕೇಳಿಬರುತ್ತವೆ. ಸಣ್ಣಕತೆಗಳಲ್ಲಿ ಪರಿಣತಿಯನ್ನು ಸಾಧಿಸಿದ ಲೇಖಕರ ಹೆಸರನ್ನು ಹೆಮ್ಮೆಯಿಂದ ಸ್ಮರಿಸುವ ಸಂದರ್ಭದಲ್ಲಿ ಬಹಳ ಸಾರಿ ಕನ್ನಡದ ಕಥನದಲ್ಲಿ ಲೇಖಕಿಯರ ಹೆಸರುಗಳನ್ನು ಪ್ರಸ್ತಾಪಿಸುವುದಿಲ್ಲ. ಸಣ್ಣಕತೆಯನ್ನು ಸಾಮಾಜಿಕಗೊಳಿಸಿ ಅದನ್ನು ಸಾಮಾಜಿಕ ಕಥನವನ್ನಾಗಿ ರೂಪಿಸಿಕೊಂಡ ಲೇಖಕರ ಯಾದಿಯಲ್ಲಿ ಲೇಖಕಿಯರ ಸಾಧನೆಯನ್ನು ಗಮನಿಸದೇ ಇರುವುದಕ್ಕೆ ಕಾರಣವೇನಿರಬಹುದು? ಲೇಖಕಿಯರ ಕಥೆಗಳು ಸಾಧಾರಣ ಎನ್ನಿಸಿದ್ದು ಏಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಂತೆ ಹೆಣ್ಣಿನ ಬರೆವಣಿಗೆಯ ರೀತಿಗಳ ಬಗ್ಗೆಯೇ ಒಂದು ವಿಶೇಷ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಎಂಬ ಸ್ತ್ರೀವಾದೀ ಧೋರಣೆಯನ್ನು ಒಪ್ಪಬೇಕಾಗುತ್ತದೆ. ಸಾಮಾನ್ಯವಾಗಿ ಲೇಖಕಿಯರು ಎತ್ತಿಕೊಳ್ಳುವ ವಸ್ತುಗಳು ಮನೆ, ಸಂಸಾರಕ್ಕೆ ಸಂಬಂಧಪಟ್ಟವು ಮತ್ತು ಬಹುತೇಕ ಸೆಂಟಿಮೆಂಟಲ್ ಬರವಣಿಗೆಗೆ ಮಾರು ಹೋಗಿರುವಂತವು. ಗಂಡಸರ ಬರೆವಣಿಗೆ ಇದಕ್ಕೆ ವಿರುದ್ಧವಾಗಿ ತರ್ಕಬದ್ಧವಾಗಿದ್ದು, ಮಾಹಿತಿಪೂರ್ಣವಾಗಿರುತ್ತವೆ. ಸೃಜನಾತ್ಮಕತೆಯ ವ್ಯತ್ಯಾಸ ಗಂಡು ಹೆಣ್ಣಿನ ಈ ಆದ್ಯತೆಗಳ ಮೇಲೆ ಅವಲಂಬಿತವಾಗಿರುವುದರಿಂದ ಅವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಕನ್ನಡದ ಲೇಖಕಿಯರ ಸಂದರ್ಭದಲ್ಲಿ ಸಹ ಈ ವ್ಯತ್ಯಾಸ ಅನ್ವಯವಾಗುತ್ತದೆ. ಗೀತಾ ಪ್ರಸಾದ್ ಅವರು ತಮ್ಮ ಅಧ್ಯಯನದಲ್ಲಿ ಗುರುತಿಸಿರುವ ಹಾಗೆ, “ಮಹಿಳಾ ಬರೆಹವು ಒಂದು ಕಡೆ ಉಪೇಕ್ಷೆ, ಇಲ್ಲವೆ ಉತ್ಪ್ರೇಕ್ಷೆ, ಇನ್ನೊಂದು ಕಡೆ ಸಾಧಾರಣೀಕರಣ ನೆಲೆಯ ಓದುಗಳಿಗೀಡಾಗಿದೆ. ಅದು ಈ ಮೂರೂ ನೆಲೆಯ ಅಭಿಪ್ರಾಯಗಳಿಂದ ಪಾರಾಗಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಬರಹ ಮರು ಓದಿಗೆ ಒಳಪಡುವ ಅಗತ್ಯ ಅತ್ಯಂತ ಅಪೇಕ್ಷಣೀಯ”. ಕನ್ನಡ ರಾಷ್ಟ್ರೀಯತೆಯ ಸಂವೇದನೆಯು ಕನ್ನಡದ ಲೇಖಕಿಯರಲ್ಲಿ ಹದಗೊಂಡ ಬಗೆ ವಿಶಿಷ್ಟವಾಗಿದೆ. ಸಾಮಾಜಿಕ ಸುಧಾರಣೆಯ ವಸ್ತುಗಳನ್ನು ಹೆಂಗಸಿನ ದೃಷ್ಟಿಯಿಂದ ನೋಡಿ ಬರೆಯಬಹುದಾದ ಅವಕಾಶಗಳನ್ನು ಲೇಖಕಿಯರು ಪಡೆದುಕೊಂಡಿದ್ದರು. ಲೇಖಕಿಯರ ಕಥನಗಳಲ್ಲಿ ಸಾಮಾಜಿಕ ಸ್ಪಂದನವು ಲೇಖಕರ ಕಥೆಗಳಂತೆ ಮಾಹಿತಿ, ವಿಸ್ತಾರಗಳತ್ತ ಗಮನ ಹರಿಸದೆ, ತಮಗೆ ಅನುಭವಕ್ಕೆ ಬಂದ ಮಾನವೀಯ ಕಂಪನಗಳು ಮೇಲುಗೈಯಾದವು. ಸಾಧಾರಣವಾಗಿ ಸುಧಾರಣಾ ಮನೋಭಾವವುಳ್ಳ ಪ್ರಗತಿಶೀಲ ಮಾರ್ಗವು ಕನ್ನಡದ ಲೇಖಕಿಯರಿಗೆ ಪ್ರಿಯವಾದುದು ಎಂದು ಹೇಳಲಾಗುತ್ತದೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು, ನವೋದಯ ಮತ್ತು ಪ್ರಗತಿಶೀಲತೆಗಳನ್ನು ಮಿಶ್ರಣಗೊಳಿಸಿದ ಒಂದು ಸಂವೇದನೆಯು ಲೇಖಕಿಯರಲ್ಲಿ ಕೆಲಸ ಮಾಡಿರುವುದು ಕಾಣುತ್ತದೆ. ನವೋದಯ ಕಾಲದಲ್ಲಿ ನಿಂತು ಪ್ರಗತಿಶೀಲ ಮನೋಭಾವದಲ್ಲಿ ಕಥನವನ್ನು ಕಟ್ಟುವುದು ಕನ್ನಡದ ಕತೆಗಾರ್ತಿಯರಲ್ಲಿ ಸಾಮಾನ್ಯವಾದ ಅಂಶವಾಗಿದೆ. ಶ್ಯಾಮಲಾದೇವಿ ಸೇರಿದಂತೆ ಗೌರಮ್ಮ, ಗಿರಿಬಾಲೆ ಮುಂತಾದವರ ಮನೋಭಾವ ಪ್ರಗತಿಶೀಲತೆಯಂತೆಯೇ ತೋರುತ್ತದೆ. ಉಳ್ಳವರು-ಇಲ್ಲದವರು, ಹೆಣ್ಣು-ಗಂಡು ಎಂಬ ಭೇದಗಳನ್ನು ಎತ್ತಿ ಎಣಿಸುವುದಕ್ಕಿಂತಲೂ ಕಥನವನ್ನು ಬಂಡಾಯದ ಇನ್ನೊಂದು ಮಜಲಿಗೆ ಒಯ್ಯುವುದು ಪ್ರಾಯಶಃ ಲೇಖಕಿಯರ ಆದ್ಯತೆಯಾಗಿರುವಂತೆ ತೋರುತ್ತದೆ. ಹೆಂಗಸರ ಒಳಬಾಳುಗಳನ್ನು ಸಣ್ಣದನಿಯಲ್ಲಿ ಕೇಳಿಸುವುದು ಈ ಬರಹಗಳ ಸೂಚಿಯೂ ಆಗಿರುವಂತಿದೆ.

ಲೇಖಕಿಯರ ಕಥನಗಳಲ್ಲಿ ರಾಷ್ಟ್ರೀಯತೆಯು ಅನೇಕ ಒಳತಿರುವುಗಳನ್ನು ಪಡೆದುಕೊಂಡಿದೆ. ರಾಷ್ಟ್ರೀಯತೆಯು ಕಟ್ಟಲು ಬಯಸಿದ ಸಾಮರಸ್ಯದ ಏಕರೂಪದ ಅಸ್ಮಿತೆಯ ಅರಿವನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಂಡ ಹೊಸ ತಲೆಮಾರಿನ ನಿಲುವುಗಳನ್ನು ಲೇಖಕಿಯರು ಒಂದು ಹಂತದಲ್ಲಿ ಒಪ್ಪಿಕೊಂಡಂತೆ ಕಂಡರೂ ಅವರೊಳಗೆ ಅನೇಕ ಉಪರಾಷ್ಟ್ರೀಯತೆಯ ಅಂಶಗಳು ತುಡಿಯುವುದನ್ನು ಗಮನಿಸಬಹುದು. ಅಂದರೆ ಹೆಣ್ಣು ಎನ್ನುವ ಅಸ್ಮಿತೆಯೇ ಒಂದು ಬೃಹತ್ತಾದ ರಾಷ್ಟ್ರೀಯತೆಯ ಸಂಕಥನವನ್ನು ಒಡೆದುಕೊಳ್ಳುವಂತದ್ದು. ಅಧಿಕಾರ ಎನ್ನುವುದು ಲೇಖಕಿಯರಿಗೆ ಸಾರ್ವತ್ರಿಕವಾಗಿ ಸೂಚ್ಯವಾಗುವ ಸಾಂಸ್ಥಿಕ ಸ್ವರೂಪ ಮಾತ್ರವಲ್ಲದೆ ಅದು ಸೂಕ್ಷ್ಮವಾದ ನೆಲೆಯಲ್ಲಿಯೂ ವಿಸ್ತರಿಸಿಕೊಳ್ಳುವಂತದ್ದು. ಪಿತೃಪ್ರಧಾನತೆ ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಅಧಿಕಾರವು ಹೆಣ್ಣನ್ನು ಅನೇಕ ಸೂಕ್ಷ್ಮ ಮತ್ತು ಸ್ಥೂಲ ರೂಪಗಳಲ್ಲಿ ನಿಯಂತ್ರಣ ಮಾಡುತ್ತಿರುತ್ತದೆ. ಈ ಅಧಿಕಾರವನ್ನು ನಿಜಜೀವನದಲ್ಲಿ ಹೇಗೋ ಹಾಗೆಯೇ ತಮ್ಮ ಕಥನದಲ್ಲಿಯೂ ಎದುರಿಸಬೇಕಾದ ಅಗತ್ಯವು ಲೇಖಕಿಯರಿಗಿತ್ತು. ಈ ಹಿನ್ನೆಲೆಯಲ್ಲಿ ಕಥನಕಾರಿಯರು ಹಿರಿದಾದ ಪಿತೃಪ್ರಾಧಾನ್ಯತೆಯನ್ನು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ನೋಡಬೇಕು. ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಎಂಬವನ್ನು ಎರಡು ಬೇರೆ ಬೇರೆ ಸ್ತರಗಳೆಂದೇ ಅಥವಾ ಅಭಿನ್ನವಾದ ಆದರೆ ದೇಶಗಳ ಭಿನ್ನ ಪಾತಳಿಯಲ್ಲಿ ತಳೆದ ಅಸ್ಮಿತೆಯ ರೂಪಗಳೆಂದೇ? ಯಜಮಾನ ಸಂಸ್ಕೃತಿಯ ಕುರುಹುಗಳನ್ನು ಬೆನ್ನಟ್ಟಿ ಹೋಗುವ ಆವೇಶ ಪೂರ್ಣ ಬರವಣಿಗೆ ಒಂದು ಮಾದರಿಯಾದರೆ, ಕೆಳದನಿಯಲ್ಲಿ, ಒಳದನಿಯಲ್ಲಿ ಬಂಡಾಯವನ್ನು ಹೊರಗೆಡಹಿ, ಒಳಬಾಳಿನ ಕಾಳಜಿಗಳನ್ನು ಮುನ್ನೆಲೆಗೆ ತಂದುಕೊಳ್ಳುವ ಬರವಣಿಗೆ ಇನ್ನೊಂದು ತೆರನಾದುದು. ಬಹುಪಾಲು ಬರಹಗಾರ್ತಿಯರ ಬರವಣಿಗೆ ಜನಪ್ರಿಯ ಎನ್ನಿಸಿಕೊಳ್ಳುವ ಕಥನದಾಟಿಯನ್ನೇ ರೂಢಿಸಿಕೊಳ್ಳುತ್ತಲೇ ಸಣ್ಣದಾಗಿ ಹೊರಳಿಕೊಳ್ಳುವ ರೀತಿಯದಾಗಿರುತ್ತದೆ. ಅಂದರೆ ಸಬ್‌ವರ್ಸಿವ್ ಎನ್ನಿಸಿಕೊಳ್ಳಬಹುದಾದ ಗುಣ. ವ್ಯವಸ್ಥೆಯೊಳಗಣ ಅಂತರ್ ವೈರುಧ್ಯಗಳನ್ನು ಹೊರಗಿಡುವ ಅಭಿವ್ಯಕ್ತಿಗಳು ಸಂಕೀರ್ಣವಾಗಿರುತ್ತವೆ, ಪರಸ್ಪರ ಭಿನ್ನವೆನಿಸುವ ತುಡಿತಗಳಿಂದ ಕೂಡಿರುತ್ತವೆ. ಕತೆ ನೇರವಾಗಿ ಅಥವಾ ಪರೋಕ್ಷವಾಗಿ ವಿರೋಧಿಸುತ್ತಿರುವ ಸಂಗತಿ ಜೀವಕಾರುಣ್ಯವನ್ನು ಉಳಿಸಿಕೊಳ್ಳಲೆಂದೇ ಇರುವಂತದ್ದು. ಇದನ್ನು ಪಿತೃಪ್ರಧಾನತೆಯ ಮುಖ್ಯ ಲಕ್ಷಣವಾಗಿ ಕಂಡುಕೊಂಡು ಅನುಸಂಧಾನ ಮಾಡುವ ಬಗೆಯನ್ನು ಕತೆಗಾರ್ತಿಯರಲ್ಲಿ ಕಾಣಬಹುದು.

ಬರಹಗಾರ್ತಿಯರಲ್ಲಿ ಅನಿರ್ವಚನೀಯವಾದ ಒಂದು ಪ್ರತಿಭಟನಾತ್ಮಕ ನೆಲೆಯೂ ಕಲಾಪ್ರಜ್ಞೆಯೂ ಸೇರಿ ಹದಗೊಳ್ಳುವ ಪ್ರಕ್ರಿಯೆಯಲ್ಲಿಯೇ ಪ್ರತಿರೋಧದ ಅಂಶವಿದೆ. ಕನ್ನಡದ ನವೋದಯ, ಪ್ರಗತಿಶೀಲ, ನವ್ಯ ಎಂಬಿತ್ಯಾದಿ ಕಾಲಘಟ್ಟಗಳೊಳಗೆ ಕನ್ನಡದ ಲೇಖಕಿಯರನ್ನು ಇಡುವುದರಿಂದ ಅವರ ಕಾಲಘಟ್ಟವನ್ನು ಮುಖ್ಯಪ್ರವಾಹ ಎನ್ನಿಸಿಕೊಳ್ಳುವ ಕಾಲಮಾನದೊಂದಿಗೆ ಸಮೀಕರಿಸುವ ಪ್ರಯತ್ನವಿದೆ. ವಾಸ್ತವವಾಗಿ ಕಾಲವು ಲೇಖಕಿಯರ ವಿಷಯದಲ್ಲಿ ನಿರ್ಣಾಯಕವಲ್ಲ. ಜೊತೆಗೆ ಮುಖ್ಯವಾಹಿನಿ ಎನ್ನಿಸಿಕೊಳ್ಳುವ ಸಾಹಿತ್ಯಾಂದೋಲನಗಳು ಹುಟ್ಟುಹಾಕಿದ ಸಂವೇದನೆಗಳ ಸಾಮಾನ್ಯ ಹೊಂದಾಣಿಕೆ ಕೂಡ ಇಲ್ಲಿ ಕಾಣುವುದಿಲ್ಲ. ಯಾವುದನ್ನು ಯುಗಧರ್ಮದ ಸಂವೇದನೆ ಅಥವಾ ಸ್ಪಂದನ ಎಂದು ಗುರುತಿಸಿಕೊಳ್ಳಲಾಗುವುದೊ ಅದರ ಮುಖ್ಯ ನೆಲೆಯನ್ನೇ ಸ್ತ್ರೀಪಠ್ಯಗಳು ಆಂತರಿಕವಾಗಿ ಮುಖಾಮುಖಿಯಾಗುತ್ತಿರುವುದು. ನವೋದಯ ಕಾಲದಲ್ಲಿ ಉದಾಹರಣೆಗೆ ಪ್ರಕೃತಿ ಮತ್ತು ಸ್ವಾತಂತ್ರ್ಯಪ್ರೇಮಗಳನ್ನು ಒಳಗೊಂಡ ಸಂರಚನೆಯು ಕಾಲಧರ್ಮವಾಗಿ ಮೈದಾಳುತ್ತಿದ್ದರೆ, ಸ್ವಾತಂತ್ರ್ಯ ಎನ್ನುವುದನ್ನು ಜೆಂಡರ್ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡುವ ಕ್ರಮವನ್ನು ಸ್ತ್ರೀಪಠ್ಯಗಳು ರೂಢಿಸಿಕೊಳ್ಳುತ್ತವೆ. ಎಲ್ಲಿ ಸಾಂಕೇತಿಕತೆಯು ಮೆರೆಯುತ್ತದೆಯೋ ಅಲ್ಲಿ ಸ್ತ್ರೀಪಠ್ಯಗಳಲ್ಲಿ ಸಾಮಾನ್ಯವಾಗಿ ವಾಚ್ಯತೆ ಕಾಣುತ್ತದೆ. ತಾಯಿ ಭಾರತಿಯ ಉನ್ಮೇಷಶಾಲಿಯಾದ ಮೂರ್ತಿಯು ಸಾಧಾರಣೀಕರಣಗೊಂಡು ಸ್ತ್ರೀಯಾಗಿ, ನಿತ್ಯದ ಗೃಹಿಣಿಯಾಗಿ, ಶೋಷಿತಳಾಗಿ ಬಿಂಬಿತಳಾಗುತ್ತಾಳೆ.

ಈ ಹಿನ್ನೆಲೆಯಲ್ಲಿ ಕನ್ನಡದ ಕತೆಗಾರ್ತಿ ಶ್ಯಾಮಲಾ ಅವರ ಕತೆಗಳನ್ನು ಗಮನಿಸಬೇಕಿದೆ. ಶ್ಯಾಮಲಾ ಅವರ ಕತೆಗಳು ರಾಷ್ಟ್ರೀಯತೆ ಹಾಗು ಉಪರಾಷ್ಟ್ರೀಯತೆಗಳ ಹುಡುಕಾಟವನ್ನು ನಡೆಸಿದವು. ಸುಧಾರಣೆ, ಶಿಕ್ಷಣಗಳ ಕಾಳಜಿಗಳುಳ್ಳ ಕಥಾವಸ್ತುಗಳು ಇರುವಂತೆಯೇ ಸಮಾಜದ ಕೆಲವು ಕತ್ತಲ ಜಗತ್ತಿನ ಕಥನಗಳನ್ನು ಸಹ ತಮ್ಮ ಕಥೆಗಳ ಮೂಲಕ ಅವರು ಪ್ರಸ್ತುತ ಪಡಿಸಿದ್ದರು. ಶ್ಯಾಮಲಾ ಅವರು ತಮ್ಮ ಸಮಕಾಲೀನ ಕತೆಗಾರರಿಗಿಂತ ವಿಭಿನ್ನವಾಗಿ ಬರೆಯುತ್ತಿದ್ದರು ಎಂದರೆ ಅದು ಅವರ ಕಥಾವಸ್ತುಗಳ ಕಾರಣದಿಂದ ಎನ್ನಬಹುದು. ಶ್ಯಾಮಲಾ ಅವರ ಸಮಕಾಲೀನರಾದ ತಿರುಮಲಾಂಬಾ, ಕೊಡಗಿನ ಗೌರಮ್ಮ, ಸರಸ್ವತಿಬಾಯಿ ರಾಜವಾಡೆ ಮುಂತಾದವರೆಲ್ಲಾ ಒಂದು ಸಮಾಜದ ಸಮಸ್ಯೆಗಳನ್ನು ಪ್ರಯತ್ನಿಸಿದ್ದರೆ ಶ್ಯಾಮಲಾ ಅವರ ಕಥಾವಸ್ತುಗಳು ಈ ಸೀಮಿತತೆಯನ್ನು ಮೀರಿದ್ದವು. ವಿಜಯಾ ದಬ್ಬೆಯವರು ‘ಶ್ಯಾಮಲಾ ಸಂಚಯ’ದ ಪ್ರಸ್ತಾವನೆಯಲ್ಲಿ ಬರೆಯುವಂತೆ, “ಸಾಮಾನ್ಯವಾಗಿ ಅಂದು ಅನಂತರ ಲೇಖಕಿಯರು ಆರಿಸಿಕೊಂಡ ವಸ್ತುಗಳಿಗಿಂತ ಭಿನ್ನವಾದ ವಸ್ತುಗಳನ್ನು ಶ್ಯಾಮಲಾ ಆರಿಸಿಕೊಂಡಿದ್ದಾರೆ. ಆ ಕಾಲದ ಲೇಖಕಿಯರು ವಿಧವೆಯರನ್ನು ಕುರಿತು ಒಂದಾದರೂ ಕತೆಯನ್ನು ಬರೆದಿರುವಾಗ ಶ್ಯಾಮಲೆ ಆ ವಸ್ತುವನ್ನು ಆರಿಸಿಕೊಂಡೇ ಇಲ್ಲ, ಇನ್ನು ಕೇಶಮುಂಡನದಂಥ ಸಮಸ್ಯೆಗಂತೂ ಅವರು ಕೈ ಹಾಕಲೇ ಇಲ್ಲ” (ಶ್ಯಾಮಲಾ ಸಂಚಯ) ಶ್ಯಾಮಲಾ ಕತೆಗಳು ಅವರ ಕಾಲದ ಸಂವೇದನೆಗಿಂತ ಭಿನ್ನವಾದ ಕಥಾವಸ್ತುಗಳನ್ನು ಎತ್ತಿಕೊಂಡ ಕಾರಣಕ್ಕಾಗಿ ಅನನ್ಯವಾಗುತ್ತವೆ. ಗೌರಮ್ಮ, ಕಲ್ಯಾಣಮ್ಮ, ತಿರುಮಲಾಂಬಾ, ಸರಸ್ವತಿಬಾಯಿ ರಾಜವಾಡೆ ಮುಂತಾದ ಲೇಖಕಿಯರು ಸಾಮಾನ್ಯವಾಗಿ ಬ್ರಾಹ್ಮಣವರ್ಗಕ್ಕೆ ಸೇರಿದ್ದರಿಂದ ಅವರು ಆಯ್ದುಕೊಳ್ಳುವ ಕಥಾವಸ್ತುಗಳು ಬ್ರಾಹ್ಮಣ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆಯವೇ ಆಗಿದ್ದವು. ಈ ಪರಿಸ್ಥಿತಿಗೆ ಭಿನ್ನವಾಗಿ ಶ್ಯಾಮಲಾ ಅವರ ಬದುಕು ಇತ್ತು. ಹಾಗೆಂದೇ ಅವರ ಕಥಾ ವಸ್ತುಗಳು ವಿಭಿನ್ನ ಸಾಮಾಜಿಕ ಸಮಸ್ಯೆಗಳಾಗಿವೆ. ಶ್ಯಾಮಲಾ ಅವರ ಕಥಾವಸ್ತುಗಳು ಶಿಷ್ಟ ಪ್ರಪಂಚ ಕಾಣದ ದೀಪದ ಕೆಳಗಿನ ಕತ್ತಲಲ್ಲಿ ಬದುಕಿದ ಹೆಂಗಸರ ಬದುಕುಗಳನ್ನು ಕೇಂದ್ರೀಕರಿಸಿದ್ದವು. ಶ್ಯಾಮಲಾದೇವಿಯರವರ ಕತೆಗಳು ಹೆಂಗಸರ ಬದುಕುಗಳನ್ನು ಚಿತ್ರಿಸಿದವು ಎಂದಷ್ಟೆ ಹೇಳಿದರೆ ಅವರ ಕತೆಗಳನ್ನು ಸರಳಗೊಳಿಸಿದಂತಾಯ್ತು. ಶ್ಯಾಮಲಾ ಅವರ ಕತೆಗಳು ವಿಭಿನ್ನ ಕಥಾವಸ್ತುಗಳನ್ನು ಹೊಂದಿದ್ದು ಅವುಗಳಲ್ಲಿ ಬಲವಂತವಾಗಿ ಮಾರಲ್ಪಡುವ, ಮದುವೆಯೆಂಬ ಸಂಸ್ಥೆಯಿಂದ ದೂರವಿಡುವ ಹೆಣ್ಣುಗಳ ಕಥನಗಳು ಹೆಚ್ಚು ಗಾಢವಾಗಿವೆ. ಶ್ಯಾಮಲಾ ಒಬ್ಬ ಲೇಖಕಿಯಾಗಿ ಎಂದಿಗೂ ಒಂದೇ ಮಾದರಿಯ ಹೆಣ್ಣುಗಳನ್ನು ಚಿತ್ರಿಸಲಿಲ್ಲ. ಹೆಂಗಸರ ಗುಂಪು ಯಾವಾಗಲೂ ಬಹುತ್ವದಿಂದ ಕೂಡಿದ್ದು ಪ್ರತಿಯೊಂದು ಗುಂಪಿನ ಬದುಕು ಸಹ ವಿಭಿನ್ನ ನೆಲೆಗಳಿಂದ ಬಂದಿರುತ್ತದೆ ಎನ್ನುವುದನ್ನು ಶ್ಯಾಮಲಾ ಅವರ ಕತೆಗಳು ಗಮನಿಸಿದವು ಎನ್ನುವುದು ಮುಖ್ಯ.

(ಅ)

ಶ್ಯಾಮಲಾ ಅವರ ಕತೆಗಳು ವೈವಿಧ್ಯಮಯವಾದ ವಸ್ತುವನ್ನು ಹೊಂದಿದ್ದವು. ವಸ್ತುವಿನ ದೃಷ್ಟಿಯಿಂದ ಅವುಗಳನ್ನು ವೇಶ್ಯಾ ಸಮಸ್ಯೆಯನ್ನು ನಿರ್ವಹಿಸಿದ ಕತೆಗಳು, ಆಧುನಿಕತೆ, ಶಿಕ್ಷಣ ಮುಂತಾದ ಕಾಲ ಸ್ಪಂದನದ ಕತೆಗಳು ಎಂದು ಸ್ಥೂಲವಾಗಿ ವಿಭಾಗ ಮಾಡಬಹುದು.

ಶ್ಯಾಮಲಾ ಅವರು ಎತ್ತಿಕೊಂಡ ವೇಶ್ಯಾ ಸಮಸ್ಯೆಯ ಚಿತ್ರಣಗಳು ಅತ್ಯಂತ ನೈಜವಾಗಿವೆ. ಎಂ.ಕೆ. ಇಂದಿರಾ ಅವರು ಬರೆದ ‘ಗೆಜ್ಜೆ ಪೂಜೆ’ ಕಾದಂಬರಿಯು ನಿರ್ವಹಿಸಿದ ವಸ್ತುವು ಶ್ಯಾಮಲಾ ಅವರಲ್ಲಿ ಪುನಾರಾವರ್ತಿತವಾಗಿ ಬರುತ್ತದೆ. ಆಗಿನ ಕಾಲದ ವೇಶ್ಯಾಕುಲದ ಸಂಪ್ರದಾಯವನ್ನು ಅನುಸರಿಸುತ್ತಿದ್ದ ಕುಟುಂಬಗಳು ನಿಧಾನವಾಗಿ ಸಾಮಾಜಿಕ ಬದಲಾವಣೆಗೆ ತೆರೆದುಕೊಳ್ಳುತ್ತಾ ಇರುವ ಸಂದಿಗ್ಧದ ಕಾಲಘಟ್ಟವನ್ನು ಶ್ಯಾಮಲಾ ಅವರ ಕತೆಗಳು ಹಿಡಿದಿಡುತ್ತವೆ. ವೇಶ್ಯಾಕುಲದಲ್ಲಿ ಹುಟ್ಟುವ ಹೆಣ್ಣು ಮಗುವಿಗೆ ಮದುವೆ ಎನ್ನುವ ಸಾಮಾಜಿಕ ಸಂಸ್ಥೆಯ ಅವಕಾಶವನ್ನು ಸಮಾಜ ನಿರಾಕರಿಸುತ್ತದೆ. ಜನದೃಷ್ಟಿಯಿಂದ ಭಿನ್ನವಾಗಿ ಬದುಕಬೇಕೆನ್ನುವ ಚಲವುಳ್ಳ ಹೆಣ್ಣುಗಳ ಆಸೆಗೆ ಅಲ್ಲಿ ಜಾಗವೇ ಇಲ್ಲ. ರಾಷ್ಟ್ರೀಯತೆಯ ಕಾಲದಲ್ಲಿ ಸುಧಾರಣೆಯ ಗಾಳಿ ಬೀಸುತ್ತಿದ್ದು ಪರಿತ್ಯಕ್ತರು, ವಿಧವೆಯರು, ಬಹಿಷ್ಕೃತರ ಬದುಕುಗಳು ಶಿಕ್ಷಣ ಮತ್ತು ಸಾಮಾಜಿಕ ಅರಿವಿನಿಂದ ಸುಧಾರಿಸುತ್ತದೆ ಎಂಬ ಹೊಸ ಆಶಯ ಜನ ಮಾನಸದಲ್ಲಿ ಮೊಳೆಯುತ್ತಿದ್ದ ಸಮಯ ಅದಾಗಿದ್ದರಿಂದ ಈ ಕುಲದ ಹೊಸ ತಲೆಮಾರಿನ ಹೆಣ್ಣು ಮಕ್ಕಳು ಸುಶಿಕ್ಷಿತರಾಗಿ ತಾವೂ ಕುಟುಂಬವಂತರಾಗುವ ಕನಸನ್ನು ಕಾಣುತ್ತಿದ್ದುದು ಸಹಜವೇ ಆಗಿತ್ತು. ಅಂತಹ ಹೆಣ್ಣುಮಕ್ಕಳನ್ನು ಮದುವೆಯಾಗಿ ಕುಟುಂಬಿಕರಾಗುವ ಗಂಡಸರ ಸಂಖ್ಯೆ ಕಡಿಮೆಯಿದ್ದರೂ ಸುಧಾರಣೆಯ ಆಶಯವು ಹೊಸ ಸಮಾಜದ ಕನಸುಗಳನ್ನು ತುಂಬುತ್ತಿತ್ತು. ಈ ಅಂಶಗಳನ್ನು ಶ್ಯಾಮಲಾ ಅವರ ಕತೆಗಳು ಧಾರಾಳವಾಗಿ ಹೊಂದಿದ್ದು ವೇಶ್ಯಾಕುಲದ ಅಜ್ಞಾನ ಪರಂಪರೆಗಳನ್ನು ಅವು ತೆರೆದಿಡುತ್ತವೆ. ಶ್ಯಾಮಲಾ ವೇಶ್ಯಾ ಸಮಸ್ಯೆಯನ್ನು ರಾಷ್ಟ್ರೀಯತೆಯ ಭಾಗವಾಗಿ ನೋಡುವುದಲ್ಲದೆ ಅದನ್ನು ಪಿತೃಪ್ರಧಾನ ಸಮಾಜದ ನೀತಿ ನಡೆವಳಿಕೆಯಾಗಿ ನೋಡುವುದರಿಂದ ಅವರ ಕತೆಗಳು ಹೆಚ್ಚು ಸ್ತ್ರೀಪರ ಎನ್ನುವ ಭಾವ ಮೂಡಿಸುತ್ತವೆ.

ಶ್ಯಾಮಲಾ ಅವರ ಮೊದಲ ಸಂಕಲನ- ‘ಹೂಂಬಿಸಿಲು’ ಸಂಕಲನದಲ್ಲಿ ಈ ತೆರನಾದ ಕತೆಗಳು ಇದೆ. ಈ ಸಂಕಲನದಲ್ಲಿ ನಿರ್ಭಿಡೆಯಿಂದ ಕೆಲವು ವಿಷಯಗಳನ್ನು ಶ್ಯಾಮಲ ಅವರು ತಮ್ಮ ಕಥಾ ಸಂಕಲನದಲ್ಲಿ ನಿರ್ವಹಿಸಿದ್ದಾರೆ ಎನ್ನಬಹುದು.

ಶ್ಯಾಮಲಾ ಅವರ ‘ಹೂಂಬಿಸಿಲು’ ಸಂಕಲನದಲ್ಲಿ ಬರುವ ‘ಕರುಳ ಕತ್ತರಿ’, ‘ತಾಯಿ ಮಾತಾಯಿ’ ಹಾಗು ‘ದೊಡ್ಡಮ್ಮ ನೋಡಿದ ವರ’ ಈ ಕತೆಗಳಲ್ಲಿ ಲೇಖಕಿ ನೈಜವಾಗಿ ಹೆಣ್ಣನ್ನು ಸರಕಿನಂತೆ ಭಾವಿಸಿ ತಂದೆ ತಾಯಿಗಳೇ ತಮ್ಮ ಹೆಣ್ಣುಮಕ್ಕಳನ್ನು ಮಾರಿಕೊಳ್ಳುವ ವಸ್ತುವಿದೆ. ‘ತಾಯಿ ಮಾತಾಯಿ’, ‘ದೊಡ್ಡಮ್ಮ ನೋಡಿದ ವರ’ ಈ ಕತೆಗಳಲ್ಲಿ ತಾಯಿಯೇ ಹೆಣ್ಣುಮಗುವನ್ನು ಮಾರಿಕೊಳ್ಳುವ ದುಷ್ಟ ಕೃತ್ಯದ ಚಿತ್ರಣವಿದೆ. ‘ಕರುಳ ಕತ್ತರಿ’ ಕತೆಯಲ್ಲಿ ಸ್ವತಃ ತಾಯಿಯೇ ಬದುಕುವ ಸಲುವಾಗಿ ತನ್ನ ಮೂವರು ಹೆಣ್ಣುಮಕ್ಕಳಿಗೆ ತುಂಗಾಸಾನಿ ಎನ್ನುವಾಕೆಯಿಂದ ವೇಶ್ಯಾಧರ್ಮದ ದೀಕ್ಷೆಯನ್ನು ಕೊಡಿಸುತ್ತಾಳೆ. ಮುಂದೆ ಮಗಳಾದ ಚಂದ್ರಾ ಉನ್ನತಿಗೆ ಬಂದಾಗ ಅವಳಿಗೆ ದತ್ತೂರಿ ಬೀಜ ಹಾಕಿ ಅವಳನ್ನು ಹುಚ್ಚಿ ಮಾಡಿ ಅವಳ ಆಸ್ತಿಯನ್ನು ಹೊಡೆದುಕೊಳ್ಳುವ ತಂದೆ ತಾಯಿಯರ ಸ್ವಾರ್ಥವನ್ನು ಕತೆ ಬಣ್ಣಿಸುತ್ತದೆ. ಹಾಗೆಯೇ ಚಂದ್ರಿಯಂತಹ ಹೆಣ್ಣುಗಳನ್ನು ಸಮಾಜ ನೋಡುತ್ತಿದ್ದ ದೃಷ್ಟಿಕೋನವನ್ನು ಕತೆ ತೋರಿಸುತ್ತದೆ. ಕುಟುಂಬ ಸಂಪ್ರದಾಯದಲ್ಲಿ ಬೆಳೆಯದ ಹೆಣ್ಣುಮಕ್ಕಳನ್ನು ಸಮಾಜ ಹೇಗೆ ಪೀಡಿಸುತ್ತಿತ್ತು ಎನ್ನುವುದನ್ನು ಶ್ಯಾಮಲಾ ತಮ್ಮ ಈ ಕತೆಯಲ್ಲಿ ದಾಖಲಿಸಿದ್ದಾರೆ:

ಅಲ್ಲೆ ನಿನ್ನೂರೊಳಗೆ ಎಲ್ಲಾರೂ ಹುಂಬ ಜನರು, ನಮ್ಮನೀ ಬಾಗಿಲಿಗೆ ಕಲ್ಲು ಹೊಡೆಯೋದು, ಗದ್ದಲಾ ಮಾಡೋದು ಮಾಡತಿದ್ರು, ಅಲ್ಲಿರಲಿಕ್ಕೆ ಬ್ಯಾಸತ್ತು ಶಹರೂದರಿಗೆ ಬಂದ್ರ ಅಲ್ಲೀಕಿಂತಾನೂ ಇಲ್ಲಿ ಶಾಣೇ ಜನರ ಕಾಟ ಭಾಳ ಆಗೇದ, ಸಂಜೀ ಆಗೋಣಾ, ಬಾಗಿಲಿಗೆ ರಾಡಿ ಒಗಿಯೋದು, ಕಲ್ಲು ಹೊಡಿಯೋದು, ಸಿಳ್ಳು ಹಾಕಿ ಹಾಕಿ ಚೀರೋದು ಮಾಡ್ತಾರ..’ – (ಶ್ಯಾಮಲಾ ಸಂಚಯ, ಪು.೪೬).

ಶ್ಯಾಮಲಾ ಅವರ ‘ಹೊಂಬಿಸಿಲು’ ಸಂಕಲನದಲ್ಲಿನ ‘ಸ್ನೇಹ ದರ್ಶನ’ ಕತೆಯು ವೇಶ್ಯಾಕುಲದಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಅಸಹಾಯಕ ಸ್ಥಿತಿಯನ್ನು ಇನ್ನಷ್ಟು ವಿವರವಾಗಿ ತೆರೆದು ತೋರುತ್ತದೆ. ಈ ಕತೆಯಲ್ಲಿನ ನಾಯಕಿ ಪ್ರೇಮಾ ವಿದ್ಯಾವಂತೆ. ಅವಳಿಗೆ ತನ್ನ ತಾಯಿ ಬಾಳಿದ ರೀತಿ ಮುಜುಗರವುಂಟು ಮಾಡಿರುತ್ತದೆ. ಆ ವಿಷವೃತ್ತದಿಂದ ಹೇಗಾದರೂ ತಪ್ಪಿಸಿಕೊಂಡು ಹೋಗ ಬಯಸುವ ಅವಳ ಬಾಳಿನಲ್ಲಿ ಶಶಿಧರನೆಂಬ ಯುವಕನ ಪ್ರವೇಶದಿಂದ ಒಂದು ಹೊಸ ಬಾಳು ಸಿಗುತ್ತದೆ. ದಿನವೂ ಮನೆ ಬಾಗಿಲನ್ನು ತಟ್ಟುವ ಗಂಡಸರು, ಅವರ ಕಾಮುಕ ದೃಷ್ಟಿಗಳನ್ನು ಅನುಭವಿಸುವ ವಾತಾವರಣವುಳ್ಳ ಮನೆಯನ್ನು ದ್ವೇಷಿಸಿ ಪ್ರೇಮಾ ತನ್ನ ಶಿಕ್ಷಣದ ಬಲದಿಂದ ಈ ಅನಿಷ್ಟ ಶೋಷಕ ಪದ್ಧತಿಯನ್ನು ತೊಡೆದು ಹಾಕಬೇಕೆಂದು ಯೋಚಿಸುತ್ತಾಳೆ.

“ನನ್ನ ಕಾಲ ಮೇಲೆ ನಾನು ನಿಂತು, ನನ್ನ ಹಾಂಗ ಹಿಂದಕ ಬಿದ್ದ ನನ್ನ ಅಕ್ಕತಂಗಿಯರ್ನ ಅಡ್ಡ ಮಾರ್ಗ ಬಿಡಿಸಿ, ಸರಳ ಮಾರ್ಗಕ್ಕೆ ಹಚ್ಚಲಿಕ್ಕೆ ಪ್ರಯತ್ನಿಸೋದು. ಇದರೊಳಗ ನನಗೆ ಖರೇ ಸುಖಾ, ಖರೇ ಆನಂದ ಅದ. ಇದ ನನ್ನ ಕಡೀ ನಿರ್ಧಾರ, ಖಂಡಿತ”(ಶ್ಯಾ.ಸಂ.ಪು ೧೦೯)

ಹೀಗೆ ಚಲದ ನಿರ್ಧಾರವನ್ನು ಪ್ರೇಮ ತೆಗೆದುಕೊಳ್ಳುತ್ತಾಳೆ. ಇದು ಕತೆಗಾರ್ತಿ ಶ್ಯಾಮಲಾ ಯೋಚಿಸಿದ ಸುಧಾರಣೆಯ ಪರಿಹಾರ. ಇಲ್ಲಿ ಸರಳೀಕೃತ ಉಪಾಯಗಳನ್ನೇ ಕತೆಗಾರ್ತಿ ಬಳಸಿದ್ದಾರಾದರೂ ಅದೊಂದು ದಿಟ್ಟ ಹೊರಳು.

‘ದೊಡ್ಡಮ್ಮ ನೋಡಿದ ವರ’ ಕತೆಯಲ್ಲಿಯೂ ಇದೇ ರೀತಿಯ ಕಪಟತನಕ್ಕೆ ಹೆಣ್ಣು ಬಲಿಯಾಗುತ್ತಾಳೆ. ಯಾರದೋ ಫೋಟೊ ತೋರಿಸಿ ಇನ್ಯಾರಿಂದಲೋ ದುಡ್ಡು ತಿಂದು ಮಗಳನ್ನು ಮಾರಿಕೊಳ್ಳುವ ದೊಡ್ಡಮ್ಮ ಸ್ವಾರ್ಥಸಾಧಕತನವನ್ನು ತೋರುತ್ತಾಳೆ. ‘ತಾಯಿ ಮಾತಾಯಿ’ ಕತೆಯಲ್ಲಿನ ಲೀಲಾ ಸ್ವಾರ್ಥಿ ತಾಯಿಯ ಮಗಳಾಗಿ ಬಲಿಪಶುವಾಗುತ್ತಾಳೆ. ಪುಂಡರಿಂದ ಗರ್ಭಿಣಿಯಾಗಿ ಆ ಬೇಡದ ಪಿಂಡವನ್ನು ತೆಗೆಯಿಸುವ ಸಲುವಾಗಿ ಚೌಧರಿ ಎಂಬ ಡಾಕ್ಟರ್‌ರನ್ನು ಹುಡುಕಿಕೊಂಡು ಬರುತ್ತಾಳೆ. ತಾಯಿಯೇ ಶೋಷಕಿಯಾಗಿ ಮಾರ್ಪಡುವ ಈ ಕತೆಯು ಸಾಧಾರಣ ವಸ್ತುವಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಶ್ಯಾಮಲಾ ಈ ಸಮಸ್ಯೆಯ ರಂಜನೆಯನ್ನು ಮಾಡದೆ ಅದನ್ನು ಸುಧಾರಣೆಯ ವಲಯಕ್ಕೆ ತರುತ್ತಾರೆ. ಇದು ಶ್ಯಾಮಲಾ ಅವರ ಆಶಾದಾಯಕ ಮನೋಭಾವವನ್ನು ತೋರುತ್ತವೆ’ ಎನ್ನಬಹುದು. ಈ ಕತೆಯ ಕೊನೆಗೆ ಡಾಕ್ಟರರ ಹೆಂಡತಿಯ ತಮ್ಮ ಶ್ರೀಧರರಾಯನು ದುಷ್ಟರಿಂದ ಮೋಸ ಹೋದ ಹೆಣ್ಣನ್ನು ಮದುವೆಯಾಗಿ ಬದುಕುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ವಿಷಚಕ್ರದಿಂದ ಪಾರಾದ ಹೆಣ್ಣಿಗೆ ಭವಿಷ್ಯವೇ ಇಲ್ಲ. ಎನ್ನುವಂತಿಲ್ಲ; ಅಂತವರಿಗೂ ಒಳ್ಳೆಯ ಭವಿಷ್ಯವಿದೆ. ಆದರೆ ಅದಕ್ಕೆ ಸಮಾಜದ ನೋಟ ಬದಲಾಗಬೇಕಿದೆ ಎಂಬ ಸಂದೇಶವನ್ನು ಅವು ಸೂಚಿಸುತ್ತವೆ. ಮೇಲಾಗಿ ಶ್ಯಾಮಲಾ ಕತೆಗಳ ತಾಯಂದಿರು ಸ್ವಾರ್ಥಿಗಳು. ಅವರು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ಮಾರಿಕೊಳ್ಳಲೂ ಹೇಸುವುದಿಲ್ಲ. ತಾಯ್ತನವನ್ನು ವೈಭವೀಕರಿಸಿ ಬರೆಯುತ್ತಿದ್ದ ಲೇಖಕರ ಬರೆವಣಿಗೆಗಳಲ್ಲಿರುವ ಏಕತಾನತೆ ಇಲ್ಲಿ ಒಡೆದು ತಾಯಿ ಎನ್ನುವವಳು ದೇವತೆ ಮಾತ್ರವಲ್ಲ ಎನ್ನುವ ಹೊಸ ಆಯಾಮವನ್ನು ಬಿಚ್ಚಿಡುತ್ತಿದೆ.

ಶ್ಯಾಮಲಾ ಅವರು ಪ್ರಗತಿಶೀಲ ಪಂಥವನ್ನು ಮುನ್ನವೇ ನಿರೀಕ್ಷಿಸುತ್ತಿದ್ದರೆಂಬಂತೆ ಅವರ ಕತೆಗಳ ಪ್ರಧಾನ ವಸ್ತು ವೇಶ್ಯಾ ಸಮಸ್ಯೆಯಾಗಿರವುದು ಗಮನಾರ್ಹವಾಗಿದೆ. ಮುಂದೆ ಬಂದ ಪ್ರಗತಿಶೀಲ ಪಂಥದಲ್ಲಿ ಅನಕೃ, ತರಾಸು ಅವರು ಪ್ರಜ್ಞಾಪೂರ್ವಕವಾಗಿ ವೇಶ್ಯಾ ಸಮಸ್ಯೆಯನ್ನು ಎತ್ತಿಕೊಂಡು ಬರೆಯಲಾರಂಭಿಸಿದರು. ಆದರೆ ವಿಮರ್ಶಕರು ಗುರುತಿಸುವಂತೆ ವೇಶ್ಯಾ ಸಮಸ್ಯೆಯು ಅಲ್ಲಿ ವೈಭವೀಕರಣಕ್ಕೆ ಒಳಗಾಯಿತು. ಜೊತೆಗೆ ಅಲ್ಲಿಗೆ ಹೋಗಬೇಕೆನ್ನುವ ಪ್ರಚೋದನೆಯನ್ನು ಪ್ರಗತಿಶೀಲ ಕೃತಿಗಳು ಕೊಟ್ಟವು. ಇದರಿಂದ ಲಂಪಟತನವೇ ಪ್ರಧಾನವಾಗಿ ಸುಧಾರಣೆಯ ಆಶಯಗಳು ಹಿನ್ನೆಲೆಗೆ ಸರಿದವು. ಆದರೆ ಶ್ಯಾಮಲಾ ಅವರ ಕತೆಗಳಲ್ಲಿ ಧೋರಣೆಯು ನೈಜವಾದ ಕಾಳಜಿಯಿದೆ. ಆದುದರಿಂದಲೇ ಅವರ ಕತೆಗಳಲ್ಲಿ ನೋವಿನ ಮಿಡಿತವು ಕೇಳಿಸುತ್ತದೆ. ಒಬ್ಬ ಗಂಡಸಿನ ನಿರೂಪಣೆಗಿಂತ ಹೆಂಗಸಿನ ಜೀವನ ಪ್ರೇಮದ ದೃಷ್ಟಿಯು ಅವರ ಕತೆಗಳಲ್ಲಿ ವ್ಯಕ್ತವಾಗುತ್ತದೆ.

ಹೆಣ್ಣು ಹೆಣ್ಣನ್ನೆ ಶೋಷಿಸುವ ವ್ಯವಸ್ಥೆಯು ಪಿತೃಪ್ರಧಾನ ವ್ಯವಸ್ಥೆಯನ್ನು ಪರೋಕ್ಷವಾಗಿ ಟೀಕಿಸಿದಂತೆ. ಏಕೆಂದರೆ ಪುರುಷ ಸಮಾಜದ ಮೌಲ್ಯಗಳನ್ನು ಅನುಸರಿಸುವ ಸ್ತ್ರೀ ಆ ವ್ಯವಸ್ಥೆಯನ್ನು ಇನ್ನಷ್ಟು ಚೆನ್ನಾಗಿ ಬಲಪಡಿಸುತ್ತಿರುತ್ತಾಳೆ. ಶ್ಯಾಮಲಾ ಅವರ ಕತೆಗಳಲ್ಲಿ ಇದೇ ಅಂಶವು ಎದ್ದು ಕಾಣುತ್ತದೆ.

ವೇಶ್ಯಾ ಸಮಸ್ಯೆಯನ್ನು ಮಾನವೀಯತೆಯಿಂದ ನೋಡಬೇಕೆನ್ನುವ ದೃಷ್ಟಿ ಸರಿಯೆ. ಆದರೆ ಅದನ್ನು ಆಳ್ಳಕಗೊಳಿಸದಂತೆ, ಉದಾರವಾದಿ ಧೋರಣೆಯಲ್ಲಿ ನಿರೂಪಿಸದಂತೆ ಎಚ್ಚರ ವಹಿಸಬೇಕಾಗುತ್ತದೆ. ಶ್ಯಾಮಲಾ ಅವರ ಸಮಕಾಲೀನ ಲೇಖಕಿಯರು ಎತ್ತಿಕೊಳ್ಳುವ ಸಮಸ್ಯೆಗಳಲ್ಲಿ ಹೆಣ್ಣುಗಳ ಮೇಲಿನ ಶೋಷಣೆ, ಅವರ ಮೇಲೆ ನಡೆಯುವ ಅತ್ಯಾಚಾರ ಇವುಗಳನ್ನು ಶ್ಯಾಮಲಾ ಸಹ ನಿರ್ವಹಿಸಿದ್ದಾರೆ. ಆದರೆ ಬರೀ ಸಮಸ್ಯೆಗಳನ್ನು ಮಾತ್ರ ಎತ್ತಿ ಹಿಡಿಯುವುದಕ್ಕಿಂತಲೂ ಅವರಿಗೆ ಆ ಸಮಸ್ಯೆಗಳು ಪೂರೈಸಿ ಉತ್ತರ ಪಡೆದುಕೊಳ್ಳಬೇಕೆನ್ನುವ ಆಶಯವನ್ನು ಹೊಂದಿದ್ದಾವೆ. ಈ ದಿಸೆಯಲ್ಲಿ ಶ್ಯಾಮಲಾ ಅವರು ವೇಶ್ಯಾವಾಟಿಕೆಯಲ್ಲಿ ಹೆಣ್ಣು ಸಿಗಬಹುದಾದ ಸಂದರ್ಭಗಳನ್ನು ವರ್ಣಿಸುತ್ತಾರಾದರೂ ಅದಕ್ಕೆ ದುರಂತ ಅಂತ್ಯವನ್ನು ನೀಡದೆ ಆ ಮಹಿಳೆಯರಿಗೆ ಮನೆಯ ಜೀವನ ಸಿಗುವಂತೆ ಮಾಡುತ್ತಾರೆ ಎನ್ನುವುದು ಮುಖ್ಯವಾಗಿ ಗಮನಿಸಬೇಕು. ಗೌರಮ್ಮ, ಕಲ್ಯಾಣಮ್ಮ ಇವರು ಈ ವಸ್ತುವನ್ನು ನಿರ್ವಹಿಸುವುದಕ್ಕಿಂತ ಭಿನ್ನವಾಗಿ ಶ್ಯಾಮಲಾ ನಿರ್ವಹಿಸಿದರೆಂದು ಹೇಳಬಹುದು. ಇದರಿಂದ ಶ್ಯಾಮಲಾ ಸುಧಾರಣಾ ಮನೋಭಾವದವರಾಗಿದ್ದರು ಎಂದು ಹೇಳಬಹುದು.

ಶ್ಯಾಮಲಾ ಕತೆಗಳು ಸಮಸ್ಯೆಗಳನ್ನು ಎತ್ತಿಕೊಳ್ಳುವುದರಲ್ಲಿ ಬಿಗಿಯನ್ನು ಕಾಯ್ದುಕೊಂಡಂತೆ ಅವುಗಳ ಮುಗಿತಾಯದಲ್ಲಿ ಉಳಿಸಿಕೊಳ್ಳುವುದಿಲ್ಲ. ಇದಕ್ಕೆ ಶ್ಯಾಮಲಾ ಅವರ ಬರಹಗಾರ್ತಿಯ ಮನಸ್ಸು ಸಾಮಾಜಿಕ ಎಚ್ಚರವನ್ನು ಜಾಗೃತಗೊಳಿಸುವ ಉದ್ದೇಶವನ್ನೇ ಹೆಚ್ಚು ಮಹತ್ವವೆಂದು ಭಾವಿಸಿರುವುದೇ ಕಾರಣ ಎನ್ನಿಸುತ್ತದೆ. ಕತೆಗಾರ್ತಿಯಾಗಿ ಸೋಲುವ ಕಡೆ ಶ್ಯಾಮಲಾ ಅನೇಕ ಬಾರಿ ಸಮಾಜಮುಖಿ ಚಿಂತನೆಗಳಿಂದ ಗೆಲ್ಲುತ್ತಾರೆ. ಕಲೆಯನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಿದಾಗ ಈ ಕೊರತೆಗಳು ಸಾಮಾನ್ಯವಾಗಿ ಕಾಣುವಂತವೇ ಆಗಿವೆ.

ಶ್ಯಾಮಲಾ ಅವರ ಕತೆಗಳು ರಾಷ್ಟ್ರೀಯತೆಯನ್ನು ವಿವರಿಸಿಕೊಳ್ಳುತ್ತವೆ ಎಂದು ಈಗಾಗಲೇ ವಿವರಿಸಿದೆ. ಅದರಂತೆ ಸ್ತ್ರೀ ಶಿಕ್ಷಣ ಹಾಗು ವಿಮೋಚನೆಗಳನ್ನು ಅವರ ಕತೆಗಳು ಆಂತರ್ಯದಲ್ಲಿ ಹೊಂದಿವೆ. ಹೆಣ್ಣಿನ ವಿಮೋಚನೆಯನ್ನು ಶ್ಯಾಮಲಾ ತಮ್ಮ ಕತೆಗಳಲ್ಲಿ ವಸ್ತುವಾಗಿ ತರುವುದಲ್ಲದೆ ಅಲ್ಲಲ್ಲಿ ಆ ಆಶಯವನ್ನು ವಾಚ್ಯವಾಗಿ ಅಥವಾ ಸೂಚ್ಯವಾಗಿ ತೋರ್ಪಡಿಸುತ್ತಾರೆ. ಹೆಣ್ಣು ಆಧುನಿಕಗೊಳ್ಳದಿದ್ದರೆ, ಶಿಕ್ಷಣ ಪಡೆಯದಿದ್ದರೆ ಸಾಮಾಜಿಕವಾಗಿ ಅವಳ ಸ್ಥಾನ ಮೇಲೇರುವುದಿಲ್ಲ ಎಂಬ ನಂಬುಗೆ ಶ್ಯಾಮಲಾ ಅವರಿಗೆ ಬಲವಾಗಿದೆ. ಆದ ಕಾರಣ ಅವರು ತಮ್ಮ ಕತೆಗಳನ್ನು ಮಾಧ್ಯಮವನ್ನಾಗಿಸಿಕೊಂಡು ಈ ಆಶಯಗಳನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತಾರೆ.

ಶ್ಯಾಮಲಾ ಅವರ ‘ಮೂವರು ನಾಗರಿಕರು’ ಕತೆಯು ವಿನೋದದಿಂದ ಕೂಡಿದ ಸರಳ ಸುಂದರ ಕಥೆ. ಇಲ್ಲಿ ಮೂವರು ಮಧುಮತಿ, ಕೃಷ್ಟಿ, ಶಾಂತೆಯರೆಂಬ ಸ್ಕೂಲು ಹುಡುಗಿಯರು ಆಪ್ತ ಗೆಳತಿಯರಾಗಿದ್ದು ಮುನಿಸಿಪಾಲಿಟ ಮೆಂಬರೊಬ್ಬನ ಸಾವಿನಿಂದ ಸಿಕ್ಕಿದ ಶಾಲಾ ರಜೆಯನ್ನು ಅನುಭವಿಸಲೆಂದು ನಗರ ಪ್ರದಕ್ಷಿಣೆ ಹೊರಡುತ್ತಾರೆ! ಅವರ ನಗರ ಸಂಚಾರದಲ್ಲಿ ಕಾಣುವ ಸಂಗತಿಗಳು, ವಿನೋದದ ಸಂಗತಿಗಳು ಕತೆಯ ಹೂರಣ. ಆದರೆ ಲಲಿತವಾಗಿ ಸಾಗುವ ಈ ಕತೆಯಲ್ಲಿ ಕತೆಗಾರ್ತಿ ಪ್ರಸ್ತಾಪ ಮಾಡುವ ಕೆಲವು ಮುಖ್ಯ ಸಂಗತಿಗಳಿವೆ. ದಿನವೂ ಒಬ್ಬೊಬ್ಬ ಮೆಂಬರು ಸತ್ತರೆ ನಮಗೆ ದಿನವೂ ರಜವೇ ಸಿಗುತ್ತದಲ್ಲ ಎಂದು ಒಬ್ಬ ಹುಡುಗಿ ಹೇಳಿದರೆ ಅದಕ್ಕೆ ಪ್ರತಿಯಾಗಿ ಇನ್ನೊಬ್ಬಳು, “ಅಲ್ಲಾ ಎಲ್ಲಾರು ಸತ್ರ ಮತ್ತ ನಮ್ಮ ಸಾಲೀನೂ ಮುಳಿಗೀತಲ್ಲ? ಆ ಮ್ಯಾಲೆ ನಾವೇನು ಮನೀವಳಗ ಬರೇ ತಮ್ಮಂದ್ರನ್ನಾಡಿಸಿಗೋತನ ಕೂಡಬೇಕೆಂತೀಯೇನು?”(ಶ್ಯಾಮಲಾ ಸಂಚಯ, ಪು.೧) ಎನ್ನುತ್ತಾಳೆ. ‘ಸ್ನೇಹ ದರ್ಶನ’ದ ಪ್ರೇಮ ಸಹ ವಿದ್ಯಾಭ್ಯಾಸದಿಂದ ತನ್ನ ಕಾಲ ಮೇಲೆ ತಾನು ನಿಂತು ತನ್ನಂತಹ ಅಕ್ಕ ತಂಗಿಯರನ್ನು ಉದ್ಧಾರ ಮಾಡಬೇಕೆನ್ನುತ್ತಾಳೆ. ಶಿಕ್ಷಣದ ಮೂಲಕ ಅರಿವು ಸಾಧಿಸಿದರೆ ವಿಮೋಚನೆಯು ಸಾಧ್ಯವಾದೀತೆನ್ನುವ ಕಲ್ಪನೆಯು ಶ್ಯಾಮಲಾ ಅವರಿಗಿತ್ತು ಎನ್ನುವುದಕ್ಕೆ ಈ ಕತೆಗಳೇ ಆಧಾರವಾಗುತ್ತವೆ.

ಶ್ಯಾಮಲಾ ಅವರ ಮೇಲೆ ರಾಷ್ಟ್ರೀಯ ಚಳವಳಿಯ ಪ್ರಭಾವ ಆಗಿದೆ. ಅವರ ಇತರೆ ಗದ್ಯ ಲೇಖನಗಳಲ್ಲಿ ಖಾದಿ, ರಾಷ್ಟ್ರಕ್ಕೆ ಹೆಂಗಸರು ಸಲ್ಲಿಸಬೇಕಾದ ಸೇವೆ ಇತ್ಯಾದಿ ವಿಷಯಗಳ ಪ್ರಸ್ತಾಪ ಇದೆ. ಇದಕ್ಕೆ ಹೊರತಾಗಿ ನಿಲ್ಲುವ ಗೌಡಿಕೆ, ಜಮೀನ್ದಾರಿಕೆಗಳ ಅಧಿಕಾರ ಕೇಂದ್ರಗಳನ್ನು ಅವರು ತಮ್ಮ ಕತೆಗಳಲ್ಲಿ ಲೇಖನಗಳಲ್ಲಿ ಎದುರಿಸುತ್ತಲೇ ಬಂದಿದ್ದಾರೆ. ಆಗಾಗ್ಗೆ ಪ್ರಾಸಂಗಿಕವಾಗಿ ಅವರು ಈ ಸಂಗತಿಗಳನ್ನು ತಮ್ಮ ಕತೆಗಳಲ್ಲಿ ತರುತ್ತಾರೆ. `ನೀಲೆಯ ಸಂಸಾರ’ ಕತೆಯಲ್ಲಿ ಓದಿದ ನೀಲೆಗೆ ತಂದೆ ಗೌಡರು ಹಂಗಿಸುವುದು ಹೀಗೆ:

“ಪತ್ಲಾ ಏನ ಉಡೋದು-ಅವು ಸಂಕಾ ಕಾದೀವ ಪತ್ಲಾ? ನೀ ಕಾದೀ ಉಟಗೊಂಡಕ್ಯಾರಾ ನಮ್ಮನೀ ಗೌಡಕೀ ಕಳೀಬೇಕೆಂತ ಮಾಡೀದ್ಯಾ? ಸರಕಾರ ಮುಂದ ಸಂಕಾ ಬೆದರದ ದರಪಾ ಕಾಯ್ಕೊಂಡಹ್ವಾದ ನಮ್ಮೆಲ್ಲಾರ್ನ ಅವರ ದರಬಾರದಾಗ ಕಾಲಿಡದ್ಹಾಂಗ ಮಾಡಬೇಕಂತಿಯಾ ಮೂಳಿ? .. ..ಸಾಕ, ಸಾಕ-ನಿನ್ನ ಸಾಲೀ ಪಾಲೀ ಸಾಕಿನ್ನ, ತಣ್ಣಾಗ ಮೂಲ್ಯಾಗ ಕುಂಡ್ರು.”

ಹೀಗೆಂದು ಶ್ಯಾಮಲಾ ರಾಷ್ಟ್ರೀಯ ಚಳವಳಿಯ ಆದರ್ಶಗಳನ್ನೇ ಎತ್ತಿ ಹಿಡಿದಿದ್ದಾರೆಂದು ಭಾವಿಸಬಾರದು. ರಾಷ್ಟ್ರೀಯತೆಯ ಕಾಲದಲ್ಲಿ ಆಧುನಿಕಗೊಳ್ಳುತ್ತಿದ್ದ ಸಮಾಜದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದಿತೆಂದು ಹೇಳಲಾಗದು. ಅದರೊಳಗಿನ ಹುಳುಕುಗಳನ್ನು ಸಹ ಶ್ಯಾಮಲಾ ಎತ್ತಿ ತೋರುವ ಪ್ರಯತ್ನ ಮಾಡಿದ್ದಾರೆ. ಆಧುನಿಕ ಶಿಕ್ಷಣ ಪಡೆದವರೆಲ್ಲಾ ಉದ್ಧಾರದ ಹಾದಿಯಲ್ಲಿ ನಡೆಯುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ವಸಂತರಾಯ ಇದ್ದಾನೆ. ‘ವಸಂತರಾಯನ ಮದುವೆ’ ಎನ್ನುವ ಕತೆಯು ವಸಂತರಾಯನೆಂಬ ಆಧುನಿಕ ತರುಣನ ನಿರೂಪಣೆಯಲ್ಲಿ ಸಾಗುತ್ತದೆ. ‘ನಾನು’ ಎಂಬ ಉತ್ತಮಪುರುಷ ನಿರೂಪಣೆಯಲ್ಲಿ ಸಾಗುವ ಕತೆಯು ವ್ಯಂಗ್ಯವನ್ನು ಚೆನ್ನಾಗಿ ದುಡಿಸಿಕೊಳ್ಳುತ್ತದೆ. ವಸಂತರಾಯ ಆಧುನಿಕ ತರುಣರಿಗೆ ಬೇಕಾದ ಓದು, ಬರಹ ಹಾಗು ಭಾಷಣ ಮಾಡುವ ಹವ್ಯಾಸಗಳನ್ನು ಹೊಂದಿದವನು. ಪತಿತೋದ್ಧಾರವೇ ಸೇರಿದಂತೆ ಹರಿಜನ ಕೇರಿಯ ಕೂಟಗಳಲ್ಲಿ ಭಾಗವಹಿಸುವಿಕೆ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆನೆನ್ನುವ ಈ ಆಧುನಿಕ ತರುಣನು ಒಬ್ಬ ಕನ್ಯಗೆ ಮೋಸ ಮಾಡಿ ಬಂದಿರುತ್ತಾನೆ. ನಾಟಕೀಯವಾಗಿ ತಾನು ಮೋಸ ಮಾಡಿದ ಕನ್ಯೆಯನ್ನೆ ಮದುವೆಯಾಗುವ ಸಂದರ್ಭ ಅವನಿಗೆ ಒದಗಿ ಬರುತ್ತದೆ. ಇಂತಹ ಅನೇಕ ಪ್ರಸಂಗಗಳು ಶ್ಯಾಮಲಾ ಅವರ ಕತೆಗಳಲ್ಲಿ ಇಣುಕುತ್ತವೆ.

(ಆ)

ಶ್ಯಾಮಲಾ ಅವರ ಕತೆಗಳು ಸ್ತ್ರೀದೃಷ್ಟಿಕೋನದ ಕತೆಗಳು, ಪ್ರಜ್ಞಾಪೂರ್ವಕವಾಗಿ ಶ್ಯಾಮಲಾ ಇದನ್ನು ರೂಢಿಸಿಕೊಂಡಂತೆ ಕಂಡರೂ ಅವರ ಕತೆಗಳು ಆ ಕಾಲದಲ್ಲಿಯೇ ಸ್ತ್ರೀವಾದೀ ಕತೆಗಳಾಗಿವೆ. ಸ್ತ್ರೀ ಪರ ಚಿಂತನೆಗಳು ಅವರ ಕತೆಗಳಲ್ಲಿ ಹಾಸು ಹೊಕ್ಕಾಗಿವೆ. ಶ್ಯಾಮಲಾ ಚಿತ್ರಿಸುವ ಮಹಿಳೆಯರ ಪಾತ್ರಗಳು ಅನೇಕ ವರ್ಗಗಳಿಗೆ ಸೇರಿದಂತವು. ದಲಿತ ವರ್ಗ, ವೇಶ್ಯಾಕುಲ, ಉಚ್ಚಕುಲಗಳ ಹೆಣ್ಣು ಮಕ್ಕಳು ಶ್ಯಾಮಲಾ ಅವರ ಕತೆಗಳಲ್ಲಿ ಬರುತ್ತಾರೆ. “ಮೇಲ್ಜಾತಿ ಬರಹಗಾರ್ತಿಯರಲ್ಲಿ ತೀವ್ರ ಮುಜುಗರ ಹಾಗು ಅವಮಾನಕರ ಎನ್ನಿಸಬಹುದಾದ ಸಂಗತಿಗಳು ಶ್ಯಾಮಲಾ ಅವರ ಕತೆಗಳ ಸ್ತ್ರೀ ಪುರುಷ ಬದುಕಿನ ಅತ್ಯಂತ ಸಹಜ ಭಾಗವೆಂಬಂತೆ ಸಂಭವಿಸಿ, ‘ಹೊಸನೆಲೆ’ಯನ್ನು ಕಲ್ಪಿಸಿಕೊಳ್ಳಲು ನೆರವಾಗಿಬಿಡುತ್ತವೆ”(ಆಧುನಿಕ ಮಹಿಳಾ ಅಭಿವ್ಯಕ್ತಿ, ಪು.೨೭೦). ದಲಿತವರ್ಗ, ವೇಶ್ಯಾಕುಲ, ಕೂಲಿಕಾರ ವರ್ಗಗಳಿಗೆ ಸೇರಿದ ಹೆಣ್ಣುಮಕ್ಕಳ ಸಮಸ್ಯೆಗಳು, ಬದುಕುಗಳು ಒಂದೇ ತೆರನಾದವಲ್ಲ. ಅವು ಅವರ ಸಾಮಾಜಿಕ ಪರಿಸರಕ್ಕೆ ಅನುಗುಣವಾಗಿ ಪರಿಹಾರವೂ ಬದಲಾಗುವಂತದ್ದು. ಶ್ಯಾಮಲಾ ಅವರ ನಿರ್ವಹಣೆಯಾದರೂ ಹಾಗೆಯೇ ಇದೆ. ಸ್ತ್ರೀವಾದವೆನ್ನುವುದು ಒಂದು ವರ್ಗದ ಸ್ತ್ರೀಯರ ಸ್ವತ್ತಲ್ಲ. ಅಲ್ಲಿ ಅನೇಕ ಅಸ್ತಿತ್ವಗಳಿರಲು ಸಾಧ್ಯ ಎನ್ನುವುದನ್ನು ಈ ಕತೆಗಾರ್ತಿ ಆ ಕಾಲದಲ್ಲಿಯೇ ಮನಗಂಡಿದ್ದಾರೆ. ಆದರೆ ಹೆಣ್ಣು ಎಂಬ ಸೋದರಿತ್ವದ ಕಲ್ಪನೆ ಈ ಭಿನ್ನತೆಗಳಾಚೆಯೂ ಕೆಲಸ ಮಾಡಿದೆ. ಶ್ಯಾಮಲಾ ಅದನ್ನು ಉನ್ನತವಾದ ಹಂತಕ್ಕೆ ಕೊಂಡೊಯ್ಯುತ್ತಾರೆ.

ಸ್ವತಃ ಜೀವನದಲ್ಲಿ ನೊಂದು ಬೆಂದು ಮಾಗುವ ಹೆಣ್ಣುಗಳು ಶ್ಯಾಮಲಾ ಅವರ ಕತೆಗಳಲ್ಲಿ ಬರುತ್ತಾರೆ ನಿಜ, ಆದರೆ ಈ ಲೇಖಕಿ ಅವರನ್ನು ಆಶಾವಾದಿಗಳನ್ನಾಗಿ ಚಿತ್ರಿಸುತ್ತಾರೆ. ಎಂತಹ ದಾರುಣ ಸನ್ನಿವೇಶದಲ್ಲಿಯೂ ಅವರು ಧೃತಿಗೆಡದೆ ಬದುಕನ್ನು ನಿಭಾಯಿಸುವ ಚಾತಿಯನ್ನು ಉಳ್ಳವರು. ಹೀಗೆಂದು ತೋರಿಸುವುದರಲ್ಲಿ ಶ್ಯಾಮಲಾ ಅವರಿಗೆ ಅತೀವವಾದ ಸಂತೋಷವಿದೆ. ಅವರ ‘ಹೂ ಬಿಸಿಲು’ ಹಾಗೂ ‘ಹೊಂಬಿಸಿಲು’ ಸಂಕಲನದ ಕೆಲವು ಪ್ರಾತಿನಿಧಿಕ ಕತೆಗಳನ್ನು ಇಲ್ಲಿ ಉಲ್ಲೇಖಿಸಬಹುದು. ‘ಕಂತಿಯ ದೇಶಾಂತರ’ ಕತೆಯು ಕಂತಿಯ ಪರಿತ್ಯಕ್ತ ಜೀವನವನ್ನು ಹೇಳುತ್ತಲೇ ಅವಳು ಬದುಕಿನ ಗತಿಗೆ ವಿಮುಖಳಾಗದೆ ಆಶಾವಾದಿಯಾಗಿರುವುದನ್ನು ಚಿತ್ರಿಸುತ್ತದೆ. `ನಡೆದು ಬಂದ ಲಕ್ಷ್ಮಿ’ ಕತೆಯು ಗಂಡನ್ನು ಬಿಟ್ಟು ಬದುಕುವ ಛಾತಿಯುಳ್ಳ ದ್ಯಾಂವಕ್ಕನ ಜೀವನಗಾಥೆಯನ್ನು ಹೇಳುತ್ತದೆ. `ನೀಲೆಯ ಸಂಸಾರ’ದಂತಹ ಕತೆಯಲ್ಲಿ ಓದಿ ವಿದ್ಯೆಯನ್ನು ಕಲಿತ ಹೆಣ್ಣು ತನ್ನ ಜೀವನದ ನಿರ್ಧಾರಗಳನ್ನು ತಾನೆ ತೆಗೆದುಕೊಳ್ಳಲು ಅಂಜುವವಳಾದರೆ, ಅನಕ್ಷರಸ್ಥರಾದ ಕಂತಿ, ದ್ಯಾಂವಕ್ಕನಂತವರು ತಮ್ಮ ಬದುಕುಗಳಿಗೆ ಬಾಧ್ಯಸ್ಥರಾಗುತ್ತ ಹೆಣ್ಣಿನ ಬದುಕುವ ಕೆಚ್ಚನ್ನು ತೋರಿಸುವಂತವರು. ಈ ತೆರನಾದ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ಶ್ಯಾಮಲಾ ಅವರಿಗೆ ಹೆಚ್ಚಿನ ಖುಷಿಯಿದೆ. ಒಂದೆಡೆ ಹೆತ್ತ ಮಕ್ಕಳನ್ನ ವೇಶ್ಯಯರನ್ನಾಗಿಸುವ ತಾಯಂದಿರು ಇನ್ನೊಂದೆಡೆ ಕಷ್ಟವನ್ನೇ ನುಂಗಿ ಬದುಕಬಲ್ಲೆವೆಂಬ ಚಲ ಕಾಯ್ದ ಹೆಣ್ಣುಗಳು ಶ್ಯಾಮಲಾ ಕತೆಯಲ್ಲಿ ಬರುತ್ತಾರೆ.

ಶ್ಯಾಮಲಾ ಅವರ ಕತೆಗಳಲ್ಲಿ ಸ್ತ್ರೀ ಸೋದರಿತ್ವದ ಭಾವನೆ ಅವರ ಕತೆಗಳಿಗೆ ಮಾನವೀಯವಾದ ಚೌಕಟ್ಟನ್ನು ತಂದುಕೊಡುತ್ತವೆ. ‘ಮೂರು ನೂರಾ ಅರುವತ್ತೈದು’ ಕತೆಯ ತಂಗಿ ತನ್ನಣ್ಣ ಮದುವೆಯಾಗುವಾಗ ಹೆಣ್ಣುಗಳನ್ನು ವ್ಯಾವಹಾರಿಕವಾಗಿ ಅಳೆಯುವ ದೃಷ್ಟಿಕೋನವನ್ನು ಖಂಡಿಸುವವಳು. ತನ್ನ ಅಣ್ಣ ವರದಕ್ಷಿಣೆಗಾಗಿ ಆಸೆ ಪಡುವಾಗ ಅವನ ಪರ ವಹಿಸದೆ ತನ್ನ ಗೆಳತಿಯ ಪರವಾಗಿ ನಿಲ್ಲುವ ಆ ತಂಗಿ ಸ್ತ್ರೀ ಸೋದರಿತ್ವದ ಭಾವವನ್ನು ಬಲವಾಗಿಸುತ್ತಾಳೆ. ‘ಸವತಿಯರು’ ಕತೆಯ ಕಾವೇರಿ ತನ್ನ ಸವತಿ ರುಕ್ಮಿಣಿಬಾಯಿಯನ್ನು ಮಾನವೀಯವಾಗಿ ನೋಡುವುದಲ್ಲದೆ ತನ್ನ ಅತ್ತೆ ಮನೆಯವರ ಭಾವನೆಗಳನ್ನು ತಿದ್ದಿ ಮೊದಲ ಪತ್ನಿಗೆ ಗೌರವವನ್ನು ದೊರಕಿಸಿಕೊಡುತ್ತಾಳೆ. ಒಂದು ಹೆಣ್ಣು ಬವಣೆ ಪಡುವುದನ್ನು ತನ್ನದೇ ಎಂದು ಭಾವಿಸುವ ಈ ಗುಣವು ಸೋದರಿತ್ವದ ಲಕ್ಷಣವೇ. ‘ಎರಡನೆಯವರ ಹೆಣ್ಣು ಮಕ್ಕಳೂ ನಮ್ಮ ಮಕ್ಕಳೇ ಅಲ್ಲವೆ?'(ಶ್ಯಾ.ಸಂ.,ಪು.೮೧) ಎಂದು ಕೇಳುವ ಗುಣವನ್ನು ಸ್ತ್ರೀಭಾವವನ್ನಾಗಿಸಿದ ಶ್ಯಾಮಲಾ ತಮ್ಮ ಕತೆಗಳನ್ನು ಇಂತಹ ಗುಣಗಳಿಂದಲೇ ಮಾನವೀಯಗೊಳಿಸುತ್ತಾರೆ.

‘ಕುಲಪುತ್ರ ಅಥವಾ ಗುಪ್ತದಾನ’ ಕತೆಯು ವಿಭಿನ್ನವಾದುದು. ಲೇಖಕಿಯೊಬ್ಬಳು ಈ ರೀತಿಯ ಕಥಾವಸ್ತುವನ್ನು ನಿರ್ವಹಿಸಲು ಸಾಧ್ಯವೇ ಎನ್ನುವಂತಿರುವ ಕತೆಯಿದು. ಸೊಸೆಗೆ ಮಕ್ಕಳಾಗದಾಗ ಅತ್ತೆಯೇ ನಿಯೋಗಕ್ಕೆ ಒತ್ತಾಯ ಮಾಡುವ ವಿಭಿನ್ನ ಕಥಾವಸ್ತು ಇಲ್ಲಿದೆ. ಸೊಸೆಯ ತುಮುಲವನ್ನು ಹೇಳುತ್ತಲೇ ಅವಳು ಅತ್ತೆಯ ಶೋಷಣೆಗೆ ಬಲಿಯಾಗುವುದನ್ನು ಕಥೆ ಚಿತ್ರಿಸುತ್ತದೆ. ವಾಸ್ತವವಾಗಿ ಅತ್ತೆ ಇಲ್ಲಿ ಶೋಷಕಳಂತೆ ಕಂಡರೂ ಅವಳು ಮದುವೆಯೆಂಬ ವ್ಯವಸ್ಥೆ, ಸಂತಾನದ ನಿರೀಕ್ಷಣೆಯ ವ್ಯವಸ್ಥೆಯ ಒಂದು ನಿಮಿತ್ತ ಮಾತ್ರ. ಬಂಜೆತನವೆಂಬ ಮೌಲ್ಯ ನಿರ್ಣಯವು ಹೆಣ್ಣಿಗೆ ಮಾತ್ರವೇ ಅನ್ವಯವಾಗುವಂತದ್ದು. ಅದನ್ನು ಮೀರಿ ನಡೆದುಕೊಳ್ಳುವ ಮಾನವೀಯತೆ ಸಮಾಜಕ್ಕೆ ಯಾವತ್ತೂ ಲಭಿಸುವುದೇ ಇಲ್ಲವೇನೊ. ಈ ರೀತಿ ಹೆಣ್ಣನ್ನು ಶೋಷಕ ಸ್ಥಾನದಲ್ಲಿ ನಿಲ್ಲಿಸುವಾಗಲೂ ಶ್ಯಾಮಲಾ ಹೆಣ್ಣನ್ನೂ ತಪ್ಪಿತಸ್ಥೆ ಎನ್ನುವುದನ್ನು ತೋರಿಸುವುದನ್ನು ಮರೆಯುವುದಿಲ್ಲ. ಹೆಣ್ಣು ಎಲ್ಲರಂತೆ ಮಾನವೀಯ ಗುಣಗಳನ್ನು ಹೊಂದಿರುವವಳು. ಅವಳಿಗೆ ತ್ಯಾಗ, ಸೇವೆ ಇಂತಹ ಮನೋಭಾವಗಳೇ ಸ್ಥಿರವಲ್ಲ; ಬದಲಾಗಿ ಅವಳಲ್ಲಿಯೂ ಸಣ್ಣತನವಿರಬಹುದು, ಅಸೂಯೆ, ದುಷ್ಟತನಗಳು ಅಡಗಿರಬಹುದು. ಅವುಗಳನ್ನು ತಮ್ಮ ಕತೆಗಳಲ್ಲಿ ಲೇಖಕಿ ತೆರೆದು ತೋರಿದ್ದಾರೆ. ಇದರಿಂದ ಶ್ಯಾಮಲಾ ಮೇಲ್ಪದರದಲ್ಲಿ ಸ್ತ್ರೀವಾದವನ್ನು ಎತ್ತಿ ಹಿಡಿಯುವವರಲ್ಲ ಎನ್ನುವ ಅಂಶ ಗೋಚರಿಸುತ್ತದೆ.

ಶ್ಯಾಮಲ ಬರೆದ ಕತೆಗಳಲ್ಲಿ ವೇಶ್ಯಾಕುಲದವರ ಕತೆಗಳಿವೆ. ಅಂತಹ ಕುಲದಲ್ಲಿ ಹೆಣ್ಣು ಶೋಷಕ-ಶೋಷಿತೆ ಎರಡೂ ಆಗಿರುತ್ತಾಳೆ. ತಾಯಿಯಾದವಳು ಇತರೆ ಸಾಮಾಜಿಕ ವರ್ಗಗಳಲ್ಲಿ ತನ್ನ ಮಗುವಿನ ಯೋಗಕ್ಷೇಮವನ್ನು ಅವಳ ಮದುವೆಯನ್ನೂ ಆಶಿಸಿದರೆ, ವೇಶ್ಯಾಕುಲದ ತಾಯಿ ತನ್ನ ಮಗಳನ್ನು ದುಡಿಮೆಗೆ ಹಚ್ಚಲು ತಯಾರಾಗಿರುತ್ತಾಳೆ. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಅವಳಿಗೆ ದುಡಿಮೆಯ ಮಾರ್ಗವಾಗಿ ಕಾಣುತ್ತಾಳೆ. ಇದರಿಂದ ಅವಳು ಸಮಾಜದ ತಾಳಕ್ಕೆ ಕುಣಿಯುತ್ತಾಳೆ. ತನ್ನ ಮಗಳನ್ನೇ ವೇಶ್ಯಾಕೆಲಸಕ್ಕೆ ತಳ್ಳಲು ತಯಾರಾಗುತ್ತಾಳೆ. ಇಲ್ಲಿ ಯಾರು ಶೋಷಕರು? ‘ಕರುಳ ಕತ್ತರಿ’ಯ ತಾಯಿ ಸಣ್ಣವ್ವ ತಾನೇ ತನ್ನ ಹೆಣ್ಣುಮಕ್ಕಳನ್ನು ವೇಶೈಯರನ್ನು ಮಾಡಲು ಓಡಾಡುತ್ತಾಳೆ. ‘ತಾಯಿ-ಮಾತಾಯಿ’ ಕತೆಯ ತಾಯಿಯೂ ತನ್ನ ಸ್ವಂತ ಮಗಳನ್ನೇ ವೇಶ್ಯೆಯಾಗಲು ಒತ್ತಾಯಿಸಿ, ಮೋಸದಿಂದ ಆ ಕೆಲಸವನ್ನು ಮಾಡಿಯೂ ಬಿಟ್ಟಿರುತ್ತಾಳೆ. ‘ಸ್ನೇಹದರ್ಶನ’ ಕತೆಯಲ್ಲಿನ ಶಾರದಾಬಾಯಿ ತನ್ನ ಸ್ವಾರ್ಥಕ್ಕಾಗಿ ಎರಡು ವರ್ಷದ ವತ್ಸಲೆಯನ್ನು ವೇಶ್ಯಗೆ ಮಾರಿ, ಮುಸಲ್ಮಾನರಾದ ಖಾನ್ ಹಿಂದೆ ಓಡಿಹೋಗುತ್ತಾಳೆ. ‘ದೊಡ್ಡಮ್ಮ ನೋಡಿದ ವರ’ದಲ್ಲಿ ಸ್ವಾರ್ಥಿ ದೊಡ್ಡಮ್ಮ ತನ್ನನ್ನು ನಂಬಿದ ಸರೋಜಳನ್ನು ಮೋಸದಿಂದ ಮದುವೆ ಎಂಬ ಹೆಸರಿನಲ್ಲಿ ಮುದುಕನಿಗೆ ಮಾರಿರುತ್ತಾಳೆ.

ಶ್ಯಾಮಲಾ ಅವರು ಸಿದ್ಧಸೂತ್ರಗಳನ್ನು ಮುರಿಯುತ್ತಾರೆ. ಸಮಾಜ ಹೆಣ್ಣಿನ ಸ್ವಭಾವಗಳನ್ನು ಸ್ಥಿರೀಕರಿಸಿ ಬಿಟ್ಟಿರುತ್ತದೆ. ಅಲ್ಲಿ ಹೆಣ್ಣು ಒಂದು ಅಚ್ಚು. ಅದನ್ನು ಮುರಿದು ಶ್ಯಾಮಲಾ ಅವರು ತಮ್ಮ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಅವರ ಹೆಣ್ಣುಗಳು ಈಗಾಗಲೇ ಹೇಳಿದಂತೆ ಮಾನವೀಯ ಗುಣಗಳನ್ನು ಹೊಂದಿದ ಮಾನುಷಿಯರು. ಅವರಿಗೆ ಅಸೂಯೆ ಹೇಗೋ ಹಾಗೆ ದೊಡ್ಡತನ ಕೂಡ ಒಂದು ಸಹಜ ಸ್ವಭಾವ ಆಗಿದೆ ಎನ್ನುವುದನ್ನು ಅವರು ತೋರುತ್ತಾರೆ. ‘ಸವತಿಯರು’ ಕತೆಯಲ್ಲಿನ ಇಬ್ಬರು ಹೆಂಗಸರು ಅಪೂರ್ವವಾದ ಮಾನವೀಯ ಸಂಬಂಧ ಸಾಧಿಸುತ್ತಾರೆ. ಲೋಕಾರೂಢಿಯಲ್ಲಿ ಸವತಿಯರು ಎಂದರೆ ಒಬ್ಬರ ತಲೆ ಕಂಡರೆ ಇನ್ನೊಬ್ಬರಿಗೆ ಆಗದಿರುವವರು. ಆದರೆ ಈ ಬಗೆಯ ಕ್ಲೀಷೆಗಳನ್ನು ಶ್ಯಾಮಲಾ ತಮ್ಮ ಕತೆಗಳಲ್ಲಿ ಮುರಿದುಕೊಳ್ಳುತ್ತಾರೆ.

ಶ್ಯಾಮಲಾ ಅವರ ಕತೆಗಳ ಹೆಣ್ಣುಗಳಲ್ಲಿ ನಾನಾವಿಧಗಳಿವೆ. ಅವರು ಬೇರೆ ಬೇರೆ ಜಾತಿಗಳಿಗೆ ಸೇರಿದವರು. ಅವರ ಭಾವನೆಗಳು, ಅವರ ಲೋಕದೃಷ್ಟಿಗಳೂ ಬೇರೆ ಬೇರೆ. ಅವರ ಸಾಮಾಜಿಕ ನಿಶ್ಚಿತತೆಗಳು ಅವರ ಸ್ವಭಾವವನ್ನು ತಿದ್ದಿರಲು ಸಾಕು ಎಂಬುದನ್ನು ಅವರ ಕತೆಗಳು ಸೂಚಿಸುತ್ತಿರುವಂತೆ ಕಾಣುತ್ತವೆ. ಕೆಳವರ್ಗದ ಹೆಣ್ಣುಮಕ್ಕಳನ್ನು ಶ್ಯಾಮಲಾ ಚಿತ್ರಿಸುವಾಗ ಅವರೊಳಗಿನ ಅಪರಿಮಿತ ಸಾಮರ್ಥ್ಯವನ್ನು ಗುರುತಿಸುತ್ತಾರೆ. ಅವರ ಕರ್ತೃತ್ವ ಶಕ್ತಿಯು ಹೆಣ್ಣುಕುಲದ ಶಕ್ತಿಯನ್ನು ಎತ್ತಿ ತೋರುವಂತಿದೆ. ಶ್ಯಾಮಲಾ ಅವರು ಬರೆದ ‘ನಡೆದು ಬಂದ ಲಕ್ಷ್ಮಿ’ ಕತೆಯ ದ್ಯಾಂವಕ ಒಬ್ಬ ಜೋಗತಿ. ಬೇಡ ಜಾತಿಯ ಹೆಣ್ಣುಮಗಳಾದ ಆಕೆಯ ಬದುಕಿನ ಚಲ ಮೆಚ್ಚುಗೆ ಹುಟ್ಟಿಸುತ್ತದೆ. ಎಷ್ಟೇ ಕಷ್ಟ ಬಂದರೂ ಕೊನೆಯವರೆಗು ಅವಳು ತನ್ನ ಜೀವನ ಪ್ರೀತಿಯನ್ನು ಬಿಟ್ಟುಕೊಡುವುದಿಲ್ಲ. ಇದರಂತೆಯೇ ‘ಕಂತಿಯ ದೇಶಾಂತರ’ ಎಂಬ ಕತೆಯೂ ಕಂತಿಯೆಂಬ ಹೆಣ್ಣಿನ ಜೀವನವನ್ನು ಬಿಚ್ಚಿಡುತ್ತದೆ. ಅವಳ ಕಷ್ಟಗಳು ಅವಳ ಜೀವನಪ್ರೀತಿಯನ್ನು ಕುಂದಿಸುವುದಿಲ್ಲ. ಹೀಗೆ ಅನೇಕ ಸ್ತ್ರೀಯರು ತಮ್ಮ ಜೀವನ ಪ್ರೀತಿ, ಸಾಮರ್ಥ್ಯಗಳನ್ನು ತೋರುವುದರೊಂದಿಗೆ ಮಾದರಿ ಹೆಣ್ಣುಗಳಾಗುತ್ತಾರೆ. ಆದರೆ ಇವೇ ಮಾದರಿಯನ್ನು ಶ್ಯಾಮಲಾ ಎಂದಿಗೂ ಸಾರ್ವತ್ರೀಕರಿಸುವುದಿಲ್ಲ ಎನ್ನುವುದು ಅವರ ವಿಶೇಷ.
* * *

(ಇ)

ಶ್ಯಾಮಲಾ ಅವರ ಭಾಷೆ ಬಗ್ಗೆ ಹೇಳುವುದಾದರೆ ಆಕೆ ಬಳಸಿದ್ದು ಅಪ್ಪಟ ಧಾರವಾಡ ಸೀಮೆಯ ಭಾಷೆಯನ್ನು; ಅದರಲ್ಲಿಯೂ ಕೆಳವರ್ಗದ ಜನರ ಭಾಷೆ ಅವರಲ್ಲಿ ಚೆನ್ನಾಗಿ ಅಭಿವ್ಯಕ್ತವಾಗುತ್ತದೆ. ಅವರ ಕತೆಗಳಲ್ಲಿ ಹಗುರವಾದ ಶೈಲಿಯು ವಿನೋದವನ್ನು ಉಂಟು ಮಾಡುವಂತೆಯೇ ಗಂಭೀರವಾದ ಕಥಾವಸ್ತುವನ್ನು ನಿರ್ವಹಿಸುವಾಗ ಅವರ ಶೈಲಿ ಅಷ್ಟೇ ಗಂಭೀರವಾಗುತ್ತದೆ. ತೀವ್ರವಾದ ವಿಷಾದವನ್ನು ಉಂಟು ಮಾಡುವಲ್ಲಿ ಯಶಸ್ವಿಯೂ ಆಗುತ್ತವೆ.

ಶ್ಯಾಮಲಾ ಸ್ವತಃ ಯಾವುದೇ ಕಥಾತಂತ್ರವನ್ನು ಹುಡುಕಿ ಹೊರಡಲಿಲ್ಲ. ತಮ್ಮ ಅನುಭವಕ್ಕೆ ಬಂದ ಕಥಾವಸ್ತುಗಳನ್ನು ಅವರು ಎತ್ತಿಕೊಂಡು ನಿರ್ವಹಿಸಿದರು. ಅವರು ತಮ್ಮ ಮೊದಲ ಪುಸ್ತಕದ ಅರಿಕೆಯಲ್ಲಿ ತಿಳಿಸಿದಂತೆ, ‘ಕಟ್ಟುಕತೆಗಳನ್ನು ಸುಂದರ ಶೈಲಿಯಲ್ಲಿ ಬರೆಯುವಷ್ಟು ಚತುರಳಂತೂ ನಾನಲ್ಲ. ನನ್ನ ಸುತ್ತಮುತ್ತಲೂ ನಡೆದ ಸಣ್ಣಪುಟ್ಟ ವರ್ತಮಾನಗಳನ್ನೇ ಏನೋ ಒಂದು ಬಗೆಯಲ್ಲಿ ಆಗಾಗ ನಾನು ಬರೆದಿಡುತ್ತಿದ್ದುದು.. ..ಎಲ್ಲ ಕತೆಗಳೂ ಸುತ್ತಮುತ್ತಲೂ ನಾನು ಕಂಡವುಗಳೇ. ಆದರೆ ‘ಮಹಾಶಿವರಾತ್ರಿ’ಯೊಳಗಿನ ಗೋವಿಂದನ ಕತೆ ಪ್ರತ್ಯಕ್ಷ ನನ್ನ ತಮ್ಮನದು..ನನ್ನ ದುಃಖಶಮನವನ್ನು ಕ್ಷಣಮಾತ್ರವಾಗಿ ಯಾರಾದರೂ ಮಾಡಿಕೊಳ್ಳಲೆಂದು ವಾಚಕರೆದರು ತೋಡಿಕೊಂಡ ಅಂತರಂಗದ ಅಲ್ಲೋಲಕಲ್ಲೋಲ!!’.

ಶ್ಯಾಮಲಾ ಅವರು ಯಾರನ್ನು ಮೆಚ್ಚಿಸಲೆಂದು ಕತೆಗಳನ್ನು ಬರೆಯಲಿಲ್ಲ. ಅವರು ಬರೆದ ಕಾಲಕ್ಕೆ ಅವರು ಎತ್ತಿಕೊಂಡ ಕಥಾವಸ್ತುಗಳು ವಿಭಿನ್ನವಾಗಿದ್ದವು. ಮಧ್ಯಮ ಅಥವಾ ಮೇಲ್ ಮಧ್ಯಮವರ್ಗಗಳ ಹಿನ್ನೆಲೆಯಿಂದ ಬಂದ ಕತೆಗಾರ್ತಿಯರು ಸೃಷ್ಟಿಸಲಾರದ ಜಗತ್ತನ್ನು ಅವರು ಸೃಷ್ಟಿಸಿದ್ದರು. ಅದು ಅವರ ಹೆಗ್ಗಳಿಕೆ. ಆದರೆ ದುರ್ದೈವವಶಾತ್ ಅವರ ಕತೆಗಳು ನಿರೀಕ್ಷಿತ ಮಟ್ಟಕ್ಕೆ ಎಲ್ಲರನ್ನೂ ಮುಟ್ಟಲಿಲ್ಲ. ಇದಕ್ಕೆ ಕಾರಣ ಅವರು ಉತ್ತರ ಕರ್ನಾಟಕದಿಂದ ಬರೆದ ಮೊದಲ ಕತೆಗಾರ್ತಿಯಾಗಿದ್ದರಿಂದ ಇರಬಹುದು. ಅಲ್ಲದೆ, ಸಣ್ಣಕತೆಗಳು ಧಾರವಾಡ ಸೀಮೆಯಲ್ಲಿ ಆಗಿನ್ನೂ ಕಣ್ಣುಬಿಡುತ್ತಿದ್ದ ಕಾಲ, ಕತೆಗಾರರ ಜೊತೆಗಿನ ಸಂಪರ್ಕ, ಒಡನಾಟಗಳಿದ್ದಿದ್ದಲ್ಲಿ ಆಕೆಯ ಅದೃಷ್ಟವೇ ಬದಲಾಯಿಸಿಬಿಡುತ್ತಿತ್ತೇನೊ ಎಂದು ಇಂದು ಯಾರಾದರೂ ಅಂದುಕೊಳ್ಳಬಹುದು. ಆದರೆ ಶ್ಯಾಮಲಾ ತಮಗೆ ಸಿಕ್ಕ ಅಲ್ಪ ಸಮಯದಲ್ಲಿ ತಮ್ಮ ಎಟುಕಿಗೆ ತಾಕಿದ ಜೀವನಾನುಭವಗಳನ್ನು ಕತೆಯಾಗಿಸಲು ಪ್ರಯತ್ನಿಸಿದರು. ಅವುಗಳಲ್ಲಿ ಅನೇಕವು ಕನ್ನಡದ ಒಳ್ಳೆಯ ಕತೆಗಳಾಗಲು ಅರ್ಹತೆಯನ್ನು ಪಡೆದಿವೆ. ಅದೇ ಈ ಲೇಖಕಿಯ ಕುರಿತು ಹೆಮ್ಮೆಯ ಸಂಗತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಡಿಕೇರೀಲಿ ರತ್ನ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…