ಅಡಿಗಳಿಂದಳೆದಾಡೆ ದಾರಿಯುದ್ದೋ ಉದ್ದ,
ದಾರಿ ತೆರೆದವನಾರೊ ಬಲು ವಿಚಿತ್ರ!
ಹೆಜ್ಜೆಯಲಿ ಹಿಗ್ಗಿರಲು, ಹಾದಿಯುದ್ದಕು ಸೊಗಸು,
ಹೆಜ್ಜೆ ಬರೆದಿತು ಹಾದಿಯೆಂಬ ಚಿತ್ರ.
ನೆಲದಗಲದಲ್ಲಿ ಅಗಲಿಕೆಗೆ ಇಂಬಿರಲಾಗಿ,
ಅಗಲಿಕೆಯ ಕಳೆಯಲಿಹುದೊಂದೆ ಹಾದಿ;
ಪ್ರಿಯನ ಬಳಿಗೊಯ್ಯುತಿಹ ಪ್ರೀತಿ-ದೂತಿಯ ಹಾಗೆ
ಇದನದನು ಕೂಡಿಸುವ ಅರಸುಬೀದಿ.
ಹಾದಿಗಳು ಅಪ್ಪುಗೆಗೆ ತೆರೆದ ತೋಳು;
ಹಾದಿಯಿರದಿರೆ ಬಾಳು ಎರಡು ಹೋಳು.
ಇತ್ತಲಿದು ಆತ್ತಲಿದು, ಇಲ್ಲ ಯುಕ್ತಿ,
ಬಿರಿಗಣ್ಣು ಬಿಡುವದೇ ಪರಮ ಯುಕ್ತಿ!
*****