ಮುಕ್ಕಾಲು ಭಾಗ ಭರ್ತಿಯಾಗಿರುವ ಗುಜರಿ ಗೋಣಿಯನ್ನು ಎಡಭುಜದ ಹಿಂಭಾಗಕ್ಕೆ ನೇತು ಹಾಕಿ, ತಲೆ ತಗ್ಗಿಸಿ ಕಣ್ಣುಗಳನ್ನು ಒಮ್ಮೆ ಎಡಕ್ಕೆ, ಇನ್ನೊಮ್ಮೆ ಬಲಕ್ಕೆ ಹೊರಳಿಸಿ, ಬಿಯರು ಬಾಟಲಿಯೋ, ಕಬ್ಬಿಣದ ಸರಳೋ, ಪ್ಲಾಸ್ಟಿಕ್ ಚೀಲವೋ, ಚಪ್ಪಲಿಯೋ, ಇನ್ನೇನೋ ಸಿಕ್ಕೀತೇ ಎಂದು ಒಮ್ಮೊಮ್ಮೆ ಗೋಣುದ್ದ ಮಾಡಿಕೊಂಡು, ಆಯಾಸವಾದಾಗ ಗೋಣಿಯನ್ನು ಕೆಳಗಿಳಿಸಿ ‘ಯಾ ಅಲ್ಲಾ’ ಎಂದೋ, ‘ಎಂಡೆ ರಬ್ಬೇ’ ಎಂದೋ ಉದ್ಗರಿಸಿ, ತಲೆಗೆ ಸುತ್ತಿದ ಬಿಳಿಯ ತೋರ್ತು ಬಿಚ್ಚಿ ಹಣೆಯ ಬೆವರನ್ನು ಒರಸಿ, ಒಂದಷ್ಟು ಹೊತ್ತು ಅದರಿಂದಲೇ ಗಾಳಿ ಹಾಕಿಕೊಂಡು ವಿಶ್ರಮಿಸಿ, ಗುಜರಿ ಅದ್ದಿಲಿಚ್ಚ ಮುಂದುವರಿಯುವಾಗ ಮನೆಯಲ್ಲಿ ಇವನ ದಾರಿ
ಕಾಯುತ್ತಿರುವ ಬೀಬಿ ಬೀಪಾತುಮ್ಮಳ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳಿಂದ ಇವನೊಡನೆ ಏಗಿ ಹದಿಮೂರು ಹೆತ್ತು ನಲುವತ್ತಕ್ಕೇ ಎಪ್ಪತ್ತರ ಮುದುಕಿಯಂತಾಗಿ ಹೋಗಿರುವ ಬೀಬಿ ಬೀಪಾತುಮ್ಮಳನ್ನು ನೋಡಿ ಯಾರೂ ಮೆಚ್ಚಲಾರರು ಎನ್ನುವುದು ನೂರಕ್ಕೆ ನೂರರಷ್ಟು ಖಚಿತವಿದ್ದರೂ, ಅವಳ ತಿಂಗಳ ಕಿಬ್ಬೊಟ್ಟೆ ನೋವಿಗೆ ಗವರ್ಮೆಂಟು ದೊಡ್ಡ ಡಾಕ್ಟರತ್ರ ಕರಕೊಂಡು ಹೋದಾಗ ಅವರು ಕೈ ಹಿಡಿದು ನೋಡಿ, ಕಣ್ಣು ಅಗಲಿಸಿ ಬೆಳಕು ಬಿಟ್ಟು, ನಾಲಿಗೆ ಹೊರಕ್ಕೆ ಚಾಚಿಸಿ ಪರೀಕಿಸಿ, ಎದೆ ಮೇಲೆ ಟೆತೊಸ್ಕೋಪು ಇಟ್ಟು ಹೃದಯ ಬಡಿಯುತ್ತಿರುವುದನ್ನು ಖಚಿತಪಡಿಸಿದ ಮೇಲೆ ಮೂರು ಮದ್ದು, ನಾಲ್ಕು ಟಾನಿಕ್ಕು ಬರೆದು ಕೊಟ್ಟು “ಇವಳನ್ನು ಉಳಿಸಬೇಕೆಂದಿದ್ದರೆ ದಿನಕ್ಕೊಂದು ಮೊಟ್ಟೆ, ಒಂದು ಲೋಟಾ ಹಾಲು ಕೊಡು. ಹೆತ್ತೂ ಹೆತ್ತೂ ಇವಳ ದೇಹದಲ್ಲಿ ಹನಿ ರಕ್ತ ಉಳಿದಿಲ್ಲ. ಇನ್ನೊಂದು ಸಲ ಗರ್ಭಿಣಿಯಾದರೆ ಇವಳೇ ಉಳಿಯುವುದಿಲ್ಲ” ಎಂದಿದ್ದರು.
ಡಾಕ್ಟರರ ಮಾತನ್ನು ಪಳ್ಳಿಯ ಮುಲ್ಲಾನೊಡನೆ ಗುಜರಿ ಅದ್ದಿಲಿಚ್ಚನು ಹೇಳಿದಾಗ ಬಿಳಿ ಗಡ್ಡದ, ಬಿಳಿ ಲುಂಗಿಯ, ಬಿಳಿ ಬಿಳೀ ಅಂಗಿಯ, ತಲೆಗೆ ಬಿಳಿ ಮುಂಡಾಸು ಕಟ್ಟುವ ಮಾತು ಮಾತಿಗೆ ‘ಯಾ ಅಲ್ಲಾ’ ಎನ್ನುವ ಪರಮ ಧಾರ್ಮಿಕ, ಎಪ್ಪತ್ತೈದರ ಮುಲ್ಲಾನು ‘ಎಂಡೆ ಅಲ್ಲಾ, ದೇವರು ಕೊಡುವಾಗ ನಿಲ್ಲಿಸಬಾರದು. ನಿನ್ನ ಬೀಬಿ ಸತ್ತರೂ ಪಾಪ; ಹುಟ್ಟದಂತೆ ತಡೆದರೂ ಪಾಪವಾಗುತ್ತದೆ. ನಿನಗೆ ಇಷ್ಟೊಂದು ಎಕ್ಸುಪೀರಿಯನ್ಸು ಉಂಟಲ್ಲಾ? ಡೇಂಜರು ದಿನಗಳಲ್ಲಿ ಅವಳಿಂದ ದೂರ ಮಲಗಿ ಬಿಡು’ ಎಂದು ಶಾಸ್ತ್ರ ಸಮ್ಮತವಾಗಿ ಧಾರ್ಮಿಕ ಬೋಧನೆ ಮಾಡಿದ್ದನು. ಗುಜರಿ ಅದ್ದಿಲಿಚ್ಚನಿಗೆ ಅದೊಂದೂ ಅರ್ಥವಾಗದೆ ಡಾಕ್ಟರರ ಮಾತು ಕಿವಿಯಲ್ಲಿ ಅನುರಣಿಸಿ, ಬೀಬಿ ಬೀಪಾತುಮ್ಮಳ ಜೀವಕ್ಕೆ ಅಪಾಯವಾದರೆ ಅದಕ್ಕೆ ತಾನೇ ಕಾರಣನಾಗುತ್ತೇನೆನ್ನುವ ಜ್ಞಾನೋದಯವಾಗಿ, ಭೀತಿಯಿಂದ ಗಡಗಡ ನಡುಗಿ ಪಕ್ಕದ ಮನೆಯ ಹಸಿ ಮೀನು ಸಾವುಕಾರ ಮೂಸಬ್ಬನ ಸಮಯೋಚಿತ ಸಲಹೆಯನ್ನು ಕೇಳಿದ್ದನು.
ಇಬ್ಬರು ಹೆಂಡಿರ ಮುದ್ದಿನ ಗಂಡ ಹಸಿ ಮೀನು ಸಾವುಕಾರ ಮೂಸಬ್ಬನು ಗುಜರಿ ಅದ್ದಿಲಿಚ್ಚನ ಮಾತಿಗೆ ಗಹಗಹಿಸಿ ನಕ್ಕು “ನಿನಗೆ ಪಿರಾಂದಲ್ಲವೋ ಅದ್ದಿಲಿಚ್ಚ? ಆ ಮುದುಕಿ ಬೀಪಾತುಮ್ಮ ಸತ್ತರೆ ಸಾಯಲಿ. ಹೆಣ್ಣುಗಳಿಗೇನು ಬರವಾ? ಸಮುದ್ರದಲ್ಲಿ ಬಲೆ ಬೀಸಿದಾಗ ಬೀಳುವ ಮೀನುಗಳ ಹಾಗೆ. ನನ್ನ ಹಾಗಿರಬೇಕು ಜಮ್ಮಂತ. ನೀನು ಹ್ಞುಂ ಎಂದರೆ ಸಾಕು. ಚಿಟಿಕೆ, ಚಿಟಿಕೆ ಹೊಡಿಯುವಷ್ಟರಲ್ಲಿ ಬೆಣ್ಣೆಯಂತಾ ಹುಡುಗಿಯನ್ನು ತಂದು ನಿನಗೆ ಶಾಸ್ತ್ರ ಪ್ರಕಾರವಾಗಿ ನಿಕಾ ಮಾಡಿಸಿ ಬಿಡುತ್ತೇನೆ” ಎಂದು ಗುಜರಿ ಅದ್ದಿಲಿಚ್ಚನ ಮೈಮನಗಳನ್ನು ಪುಳಕಗೊಳಿಸಿ ಅನೂಹ್ಯ ಲೋಕಕ್ಕೆ ಒಯ್ದಿದ್ದನು. ಗುಜರಿ ಅದ್ದಿಲಿಚ್ಚನು ಯೋಚಿಸಿ, ಯೋಚಿಸಿ, ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ, ಈಗಿರುವ ಹದಿಮೂರು ಮಕ್ಕಳಿಗೆ ಬದುಕಲೊಂದು ದಾರಿ ತೋರಿಸಲಿಕ್ಕೆ, ಅಕಾಲ ವೃದ್ಧಾಪ್ಯ ಅಡರಿರುವ ಬೀಬಿ ಬೀಪಾತುಮ್ಮಳ ಶರೀರ ವಿಡೀ ಮನೆ ಮಾಡಿಕೊಂಡಿರುವ ಅಸಂಖ್ಯಾತ ಕಾಯಿಲೆ ಕಸಾಲೆಗಳಿಗೆ ಮದ್ದು ಮಾಡಿಸಲಿಕ್ಕೆ, ಹೊಟ್ಟೆ ತುಂಬಿಸಲಿಕ್ಕೆ ತಾನು ಕಷ್ಟಪಡುತ್ತಿರುವಾಗ ಅರಗಿಣಿಯಂತಹ ಹೆಣ್ಣನ್ನು ತಂದರೆ ಅವಳಿಗೂ ತೊಂದರೆ, ಹಾಗೆ ತಂದವಳು ಬೇರೊಬ್ಬನನ್ನು ನೋಡಿಕೊಂಡರೆ ತನಗೂ ತೊಂದರೆಯೆಂದು ಗುಜರಿ ಅದ್ದಿಲಿಚ್ಚನು ಹಸಿ ಮೀನು ಸಾವುಕಾರ ಇಬ್ಬರು ಹೆಂಡಿರ ಮುದ್ದಿನ ಗಂಡ ಮೂಸಬ್ಬನ ಸೂಪರು, ಸುಪ್ರೀಮು ಐಡಿಯಾವನ್ನು ಸಾರಾ ಸಗಟಾಗಿ ತಳ್ಳಿ ಹಾಕಿದ್ದನು.
ಬಿಳಿ ಮುಂಡಾಸು ಮುಲ್ಲಾನ ಇನ್‌ಫ್ಲುಯೆನ್ಸಿನ ಕಾರಣದಿಂದ ಗುಜರಿ ಅದ್ದಿಲಿಚ್ಚನು ತಾನು ನರ ಕೊಯ್ಸಯಿಕೊಳ್ಳುವುದಿಲ್ಲವೆಂದು ಖಚಿತವಾದ ಏಕಪಕ್ಷೀಯ ನಿರ್ಧಾರ ಕೈಗೊಂಡರೂ ಬೀಬಿ ಬೀಪಾತುಮ್ಮಳು ಇನ್ನೊಮ್ಮೆ ಗರ್ಭಿಣಿಯಾದರೆ ಏನಪ್ಪಾ ಗತಿಯೆಂದು ಹಗಲಿರುಳು ಕೊರಗಿ ಸೊರಗಿ ಆದಷ್ಟು ತನ್ನನ್ನು ರಾತ್ರಿ ಸುಖದಿಂದ ಕಂಟ್ರೋಲು ಮಾಡಿಕೊಳ್ಳುತ್ತಿದ್ದನು. ಆದರೆ ತಿಂಗಳಿಗೊಮ್ಮೆ ಮನೆಗೆ ಬರುವ ಗವರ್ಮೆಂಟು ಆಸ್ಪತ್ರೆಯ ಮಿಡ್ಡುವಯಿಪು ಬಿಳಿ ಸೀರೆ ನರ್ಸಮ್ಮಳ ಅವ್ಯಾಹತ ಪುರಾಣ ಶ್ರವಣ ಪುಣ್ಯ ವಿಶೇಷದ ಫಲಸ್ವರೂಪವಾಗಿ ಬೀಬಿ ಬೀಪಾತುಮ್ಮಳು ಒಂದು ದಿನ ಸಾಕ್ಷಾತ್ ಗುಜರಿ ಅದ್ದಿಲಿಚ್ಚನಿಗೂ ಗೊತ್ತಾಗದಂತೆ ಗವರ್ಮೆಂಟು ಆಸ್ಪತ್ರೆಗೆ ಗುಟ್ಟಾಗಿ ಹೋಗಿ ಅದೆಂತದ್ದೋ ಆಪ್ರೇಸನ್ನು ಮಾಡಿಸಿಕೊಂಡು ಇನ್ನು ಮುಂದೆ ಮಕ್ಕಳಾಗುವುದಿಲ್ಲವೆನ್ನುವುದನ್ನು ಖಚಿತಪಡಿಸಿಕೊಂಡು ಬಂದ ಮೇಲೆ ವಿಷಯ ತಿಳಿದ ಗುಜರಿ ಅದ್ದಿಲಿಚ್ಚನು “ಯಾ ಅಲ್ಲಾ, ಪಳ್ಳಿಯ ಬಿಳಿ ಮುಂಡಾಸು ಮುಲ್ಲಾನಿಗೆ ಗೊತ್ತಾದರೆ ಗತಿಯೇನು?” ಎಂದು ಉದ್ಗರಿಸಿ ಯಾರಿಗೂ ಇದು ತಿಳಿದು ತನ್ನ ಮರ್ಯಾದಿ
ಹೋಗಬಾರದೆಂದು ವಿಷಯವನ್ನು ಯಾರಿಗೂ ತಿಳಿಸದೆ ಗುಪ್ತವಾಗಿ ಮುಚ್ಚಿಟ್ಟರೂ, ಇನ್ನು ಬೀಬಿ ಬೀಪಾತುಮ್ಮ ಸಾಯಲಾರಳು ಎಂದುಕೊಂಡು ಖುಷಿ ಪಟ್ಟುಕೊಂಡಿದ್ದನು. ತನಗೆ ತಿಳಿಯದಂತೆ ಗವರ್ನಮೆಂಟು ಮಿಡ್ಡುವೈಫು ನರ್ಸಮ್ಮಳ ಜೊತೆ ಹೋಗಿ ಆಪ್ರೇಸನ್ನು ಮಾಡಿಸಿಕೊಂಡು ಬರುವಾಗ ಬೀಬಿ ಬೀಪಾತುಮ್ಮಳು ಒಂದು ದೊಡ್ಡ ಸ್ಟೀಲು ಬಟ್ಟಲು, ನೂರರ ಮೂರು ನೋಟು, ಎರಡು ಗವರ್ಮೆಂಟು ಲಾಟರಿ ಟಿಕೆಟು ಆಸ್ಪತ್ರೆಯಿಂದ ಮುಫತ್ತಾಗಿ ಕೊಟ್ಟದ್ದನ್ನು ತಂದು ತೋರಿಸಿದಾಗ ಗುಜರಿ ಅದಿಲಿಚ್ಚನು ಅನಂದ ತುಂದಿಲನಾದರೂ, ಮೂರು ನೋಟುಗಳಲ್ಲಿ ಒಂದನ್ನು ಜುಮ್ಮಾ ಮಸಿದಿಯ ಕಾಣಿಕೆ ಡಬ್ಬಕ್ಕೆ ಹಾಕಿ, ‘ಯಾ ಅಲ್ಲಾ’ ಎಂದು ಉದ್ಗರಿಸಿ, ನಿಟ್ಟುಸಿರು ಬಿಟ್ಟು, ಆಪರೇಸನ್ನು ಮಾಡಿಸಿಕೊಂಡದ್ದನ್ನು ಎಲ್ಲೂ ಬಾಯಿ ಬಿಡಬಾರಾದೆಂದು ಆಣೆ ಪ್ರಮಾಣ ಮಾಡಿಸಿಕೊಂಡಿದ್ದನು.
ಮಸೀದಿಯ ಬಿಳಿ ಮುಂಡಾಸಿನ ಮುಲ್ಲಾನಿಗೆ ಹೆದರಿ ಬೀಬಿ ಬೀಪಾತುಮ್ಮಳು ತಾನು ಆಪ್ರೇಸನ್ನು ಮಾಡಿಸಿಕೊಂಡ ವಿಷಯವನ್ನು ಗುಟ್ಟಾಗಿಟ್ಟಿದ್ದರೂ ಅವಳನ್ನು ಓಲೈಸಿ ಆಸ್ರತ್ರೆಗೆ ಕರೆದೊಯ್ದು ಆಪ್ರೇಸನ್ನು ಮಾಡಿಸಿದ್ದ ಬಿಳಿಸೀರೆಯ ಮಿಡ್ಡು ವಯಿಪು ನರ್ಸಮ್ಮ ತನ್ನ ವಾರ್ಷಿಕ ಟಾರ್ಗೆಟ್ಟು ಭರ್ತಿ ಮಾಡಲು ಜನ ಸಿಗದೆ ಒದ್ದಾಡಿ. ಕೊನೆಗೆ ಹಸಿ ಮೀನು ಸಾವುಕಾರ ಮೂಸಬ್ಬನ ಇಬ್ಬರು ಮುದ್ದಿನ ಮಡದಿಯರೆದುರು ಈ ಗುಟ್ಟನ್ನು ರಹಸ್ಯವಾಗಿ ಸ್ಫೋಟಿಸಿ ಅವರಲ್ಲೂ ಸ್ಟೀಲು ಬಟ್ಟಲು, ನೂರರ ಮೂರು ನೋಟು ಮತ್ತು ಎರಡು ಗವರ್ಮೆಂಟು ಲಾಟರಿ ಟಿಕೇಟುಗಳ ಆಸೆ ಮೂಡಿಸಿದ್ದಳು. ಹಸಿ ಮೀನು ಸಾವುಕಾರ ಮೂಸಬ್ಬನ ಇಬ್ಬರು ಮುದ್ದಿನ ಮಡದಿಯರು, ಪದೇ ಪದೇ ಹೊರುವ, ಹೆರುವ ಸಂಕಷ್ಟದಿಂದ ಪಾರಾಗಲು ಆಪ್ರೇಸನ್ನು ಸರಿಯಾದ ಹಾದಿಯೆಂದು ಅವಿರೋಧವಾಗಿ ತೀರ್ಮಾನಿಸಿ, ಪತಿದೇವರ ಮನವೊಲಿಸಲು ಪಲ್ಲಂಗದ ಅತಿ ಮಧುರ ಕ್ಷಣಗಳನ್ನು ಆಯ್ದುಕೊಂಡರೂ, ಆಪ್ರೇಸನಿನ್ನ ಮಾತು ಕೇಳಿದ ಕೂಡಲೇ ಹೆಡೆ ತುಳಿದ ಕಾಳಿಂಗ ನಂತಾಗಿ ಬುಸುಗುಟ್ಟಿದ ಹಸಿ ಮೀನು ಸಾವುಕಾರ ಮೂಸಬ್ಬನು ಎಲ್ಲಿಯಾದರೂ ಗವರ್ಮೆಂಟು ಆಸ್ಪತ್ರೆಗೆ ಹೋಗಿ ಆಪ್ರೇಸನ್ನು ಮಾಡಿಸಿಕೊಂಡರೆ ಹೆತ್ತೂ ಹೆತ್ತೂ ಜಬ್ಬು ಗಟ್ಟಿ ಹೋಗಿರುವ ಇಬ್ಬರಿಗೂ ಏಕಕಾಲದಲ್ಲಿ ತಲ್ಲಾಕು ನೀಡಿ ಎಳೆ ಸೌತೆಕಾಯಿಯಂತಿರುವ ಇಬ್ಬರು ಸುರಸುಂದರಾಂಗಿನಿಯರನ್ನು ನಿಕಾ ಮಾಡಿಕೊಳ್ಳುವುದಾಗಿ ಭಯಂಕರ ಭಯೋತ್ಪಾದನೆಯುಂಟು ಮಾಡಿ ತನ್ನ ಇಬ್ಬರು ಮುದ್ದಿನ ಮಡದಿಯರನ್ನು ಮುಚ್ಚಿಕೊಂಡು ಕೂರುವಂತೆ ಮಾಡುವುದರಲ್ಲಿ ಸಂಪೂರ್ಣವಾಗಿ ಸಫಲನಾಗಿದ್ದನು.
ಹಸಿ ಮೀನು ಸಾವುಕಾರ ಮೂಸಬ್ಬನ ಇಬ್ಬರು ಮುದ್ದಿನ ಮಡದಿಯರು ಗಂಡನು ತಲ್ಲಾಕ್ ಎಂಬ ಪ್ರಳಯಾಂತಕ ಅಸ್ತ್ರದ ಮೂಲಕ ಭಯಂಕರ ಭಯೋತ್ಪಾದನೆ ಉಂಟು ಮಾಡಿ ತಮ್ಮನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಕೂರುವಂತೆ ಮಾಡುವುದರಲ್ಲಿ ಸಫಲನಾಗಿರುವುದನ್ನು ಗುಜರಿ ಅದ್ದಿಲಿಚ್ಚನ ಬೀಬಿ ಬೀಪಾತುಮ್ಮಳಲ್ಲಿ ಹೇಳಿಕೊಂಡು, ಮಂದ್ರಸ್ಥಾಯಿಯಲ್ಲಿ ರಾಗ ಹೊರಡಿಸಿ, ತಮ್ಮಗಿಲ್ಲದ ಭಾಗ್ಯ ನಿನ್ನದೆಂದು ಬೀಬಿ ಬೀಪಾತುಮ್ಮಳನ್ನು ಹಾಡಿ ಹೊಗಳಿ ಮೆಚ್ಚಿಸಿ, ಬಲ್ಯಾರು ಗಸಿಯಲ್ಲಿ ಎರಡು ತುಂಡು ಕಲ್ತಪ್ಪ ಅದ್ದಿ ತಿಂದು, ಹಾಲು ಕಾಣದ ಕಟ್ಟಂಚಾಯ ಕುಡಿದು, ಬಣ್ಣ ಮಾಸಿದ ಕಪ್ಪು ಬುರುಕಾದಲ್ಲಿ ಮೂತಿ ಉಜ್ಜಿಕೊಂಡು ಅಂಡೆತ್ತಿ ಜಾಗ ಖಾಲಿ ಮಾಡಿದ್ದರು.
ಗುಜರಿ ಅದ್ದಿಲಿಚ್ಚನ ಹದಿಮೂರು ಮಕ್ಕಳಲ್ಲಿ ಎರಡು ಹಸಿ ಮೀನು ಮಾರಲು, ಎರಡು ಕಾಮತರ ಹೋಟೇಲಿನ ಐಸುಕ್ಯಾಂಡಿ ಮಾರಲು, ಎರಡು ಮನೆ ಮನೆಗೆ ನಂದಿನಿ ಹಾಲು ಡೋರು ಡೆಲಿವರಿ ಮಾಡಲು, ಎರಡು ಹಿಂದೆ ಮಸ್ಕತ್ತಿನಿಂದ ಬಿಸ್ಕತ್ತು ತರುತ್ತಿದ್ದ ಇಬ್ರಾಯಿಮ್ಮನ ಸ್ಟಾರು ಹೋಟೆಲಲ್ಲಿ ಗ್ಲಾಸು ಪ್ಲೇಟು ತೊಳೆಯಲು, ಎರಡು ಮನೆಯಲ್ಲೇ ಬೀಡಿ ಕಟ್ಟಲು, ಮೂರು ಮನೆಯ ಪಕ್ಕದಲ್ಲೇ ಇರುವ ಗವರ್ಮಂಟು ಶಾಲೆಗೆ ಬಿಸಿಯೂಟ ಮಾಡಲು – ಹೀಗೆ ನಾನಾ ಕೇತ್ರಗಳಲ್ಲಿ ವ್ಯಾಪಿಸಿಕೊಂಡು ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದರೂ ಮನೆಯ ನೆಲಕ್ಕೆ ಸಿಮೆಂಟು ಕಾಣಿಸಲು, ಗೆದ್ದಲು ತಿಂದ ಬಾಗಿಲಿನ ದಾರಂದ ಬದಲಾಯಿಸಲು, ದೇಶಕ್ಕೆ ಹದಿಮೂರು ಮಕ್ಕಳನ್ನು ಕಾಣಿಕೆ ನೀಡಿದ ಬೀಬಿ ಬೀಪಾತುಮ್ಮಳಿಗೊಂದು ಅಲೀಕತ್ತು, ಮಿಸಿರಿ ಮಾಲ, ಕೊಪ್ಪು ಸರಪ್ಪಳಿ ಮಾಡಿಸಿ ಹಾಕಿಸಲು ತನ್ನಿಂದ ಆಗದ್ದನ್ನು ನೆನಪಿಸಿಕೊಂಡು “ಎಂಡೆ ಅಲ್ಲಾ, ಎಂಥಾ ಜನ್ಮವಾಗಿ ಹೋಯಿತು ನನ್ನದು” ಎಂದು ವಿಷಾದಿಸುತ್ತಿದ್ದನು. ಅಲ್ಲಾ ಮುನಿದರೆ ಮುನಿಯಲಿ; ಮುಲ್ಲಾನಿಗೆ ಸಿಟ್ಟು ಬಂದರೆ ಬರಲಿ. ಬೀಬಿ ಬೀಪಾತುಮ್ಮ ಆಪ್ರೇಸನ್ನು ಮಾಡಿಸಿಕೊಳ್ಳದಿರುತ್ತಿದ್ದರೆ ಅವಳ ಸಾವಿಗೆ ತಾನೇ ಕಾರಣನಾಗುತ್ತಿದ್ದೆ ಎಂದು ಗುಜರಿ ಅದ್ದಿಲಿಚ್ಚನು ತನ್ನನ್ನು ತಾನೇ ಸಮಾಧಾನಿಸಿಕೊಂಡು ದಿನಕ್ಕೆ ಐದು ಸಲ ನಮಾಜು ಮಾಡಿ ಹಗುರಾಗುತ್ತಿದ್ದನು.
ಹಿಂದಿನ ದಿನ ಹಾಗೆ ಗುಜರಿ ಆಯುತ್ತಾ ಬರುತ್ತಿದ್ದವನಿಗೆ ಅಚಾನಕವಾಗಿ ಎದುರಾದ ಪೋಲೀಸು ರಫೀಕು ಇವನ ಜೇಬಿಗೇ ಕೈಹಾಕಿ ಬೀಡಿ ಕಟ್ಟಿನಿಂದ ಒಂದನ್ನು ತೆಗೆದು ಬಾಯಿಗಿಟ್ಟು ಮತ್ತೊಮ್ಮೆ ಇವನ ಜೇಬಿಗೆ ಕೈ ಹಾಕಿ ಬೆಂಕಿ ಪೊಟ್ಟಣ ತೆಗೆದು ಬೀಡಿಗೆ ಬೆಂಕಿ ಹಚ್ಚಿ ಪುಸ್ಸ ಪುಸ್ಸ ಹೊಗೆಯುಗುಳುತ್ತಾ “ಕಾಲ ಕೆಟ್ಟು ಹೋಯ್ತು ಅದ್ದಿಲಿಚ್ಚ. ಕೆಲವೇ ಕೆಲವು ಹರಾಮಿಗಳಿಂದಾಗಿ ನಮ್ಮ ಕುಲಕ್ಕೆ ಕುಲವನ್ನೇ ಎಲ್ಲರೂ ಡವುಟ್ಟಿನಿಂದ ನೋಡುವಂತಾಗಿದೆ. ನಾವು ಕೂತರೂ ತಪ್ಪು ನಿಂತರೂ ತಪ್ಪು ಎಂಬಂತಾಗಿದೆ ಪರಿಸ್ಥತಿ. ನೀನು ಏನೇ ಹೇಳು ಅದ್ದಿಲಿಚ್ಚ. ಹುಟ್ಟಿಸಿ ಹಾಕಿದರೆ ಸಾಲದು, ನ್ಯಾಯವಾಗಿ ಬದುಕುವ ದಾರಿಯನ್ನು ತೋರಿಸ ಬೇಕು. ನಿನಗೆ ಗೊತ್ತುಂಟಾ ಅದ್ದಿಲಿಚ್ಚಾ? ಆಚೆ ಪಾಕಿಸ್ತಾನ ಮತ್ತೂ ಆಚೆ ಅರಬುಸ್ತಾನಗಳುಂಟುಲ್ಲಾ? ಅಲ್ಲೆಲ್ಲಾ ಯಾರ್ಯಾರೋ ಜಿಹಾದಿ ಗುಂಪು ಮಾಡಿಕೊಂಡು ಯಾರ್ಯಾರನ್ನೋ ಕೊಂದು ಧರ್ಮ ಉಳಿಸಲು ಹೊರಟಿದ್ದಾರಂತೆ. ರಕ್ತ ಹರಿಸುವುದು ಅಲ್ಲಾ ಮೆಚ್ಚುವ ಕೆಲಸವಲ್ಲವೆಂದು ನಿನಗೊಂದು ಗುಟ್ಟನ್ನು ಹೇಳುತ್ತಿದ್ದೇನೆ. ಸರಿಯಾಗಿ ನೆನಪಿಟ್ಟುಕೋ. ಯಾರಾದರೂ ಹೊಸಬರು ಸಿಕ್ಕರೆ ನೀನಾಗಿ ಮಾತಾಡಿಸಬೇಡ. ಅವರು ಏನು ಕೇಳಿದರೂ ಗೊತ್ತಿಲ್ಲವೆಂದು ಹೇಳಿಬಿಡು. ಏನನ್ನಾದರೂ ಕೊಟ್ಟರೆ ತೆಗೆದುಕೊಳ್ಳಬೇಡ. ಗುಜರಿ ಆಯುವಾಗ ಚೀಲ, ಪೊಟ್ಟಣ, ಟ್ರಾನ್ಸಿಸ್ಟರು, ಮೊಬೈಲು ಕಂಡು ಬಂದರೆ ಮುಟ್ಟಬೇಡ. ಏನೇ ಡವುಟ್ಟು ಬಂದರೂ ಕಾಯಿನ್ನು ಬೂತಿನಿಂದ ನನ್ನ ಮೊಬೈಲಿಗೆ ಒಂದು ಕಾಲು ಮಾಡು. ಇಕ್ಕೋ, ಇದು ನನ್ನ ನಂಬರು. ನಿನ್ನ ಜೇಬಿನಲ್ಲಿರಲಿ. ಊರಿಗೆ ಏನೇ ಆದರೂ ಜನರು ಮೊದಲು ನಮ್ಮ ಮೇಲೆ ಡವುಟ್ಟು ಪಡುತ್ತಾರೆ. ನಸೀಬು ಕೆಟ್ಟರೆ ಅಲ್ಲಾ ಪರವರ್ದಿಗಾರನಿಂದಲೂ ಏನನ್ನೂ ಮಾಡಲಾಗುವುದಿಲ್ಲ” ಎಂದು ಹೇಳಿದ್ದ.
ಪೋಲೀಸು ರಫೀಕು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದ ಗುಜರಿ ಅದ್ದಿಲಿಚ್ಚನಿಗೆ ಎಲ್ಲವೂ ಅರ್ಥವಾದರೂ ಜಿಹಾದಿ ಗುಂಪು ಎಂದರೇನೆಂದು ಗೊತ್ತಾಗದೆ, ತನಗದು ಗೊತ್ತಾಗಲಿಲ್ಲವೆಂದು ಪೋಲೀಸು ರಫೀಕುನಲ್ಲಿ ಹೇಳಲಿಕ್ಕೂ ಆಗದೆ ಸಂಜೆಯ ನಮಾಜು ಕಾಲದಲ್ಲಿ ಪಳ್ಳಿಯಲ್ಲಿ ಸಿಕ್ಕ ಬಿಳಿ ಮುಂಡಾಸಿನ ಮುಲ್ಲಾನಲ್ಲಿ ಕೇಳಿದಾಗ ಅವನು ಗಾಬರಿ ಬಿದ್ದು, ಮುಖ ಕೆಂಪು ಕೆಂಪು ಮಾಡಿಕೊಂಡು “ಎಂಡೆ ಅಲ್ಲಾ ಪೆಡಚ್ಚೋನೇ, ನಿನಗೆ ಇದನ್ನು ಹೇಳಿಕೊಟ್ಟವರು ಯಾರು” ಎಂದು ಪೂರ್ವಾಪರ ವಿಚಾರಿಸಿ, ಅದು ಪೋಲೀಸು ರಫೀಕುವಿನ ಕೆಲಸವೆಂದು ಗೊತ್ತಾದ ಮೇಲೆ ಸಮಾಧಾನದ ಉಸಿರೆಳೆದು, ಒಂದು ಮೂಲೆಗೆ ಕರೆದೊಯ್ದು ಪಿಸು ಗುಟ್ಟಿದ್ದ “ಜಿಹಾದಿ ಎಂದರೆ ಧರ್ಮ ಯುದ್ಧ ಅದ್ದಿಲ್ಲಾ. ಬಹಳ ಹಿಂದೆ ಇಸ್ಲಾಮು ಮತ್ತು ಕಿರಿಸ್ತಾನಿ ಜನರ ನಡುವೆ ಧರ್ಮ ಉಳಿಸಲು ನಡೆದ ಯುದ್ಧವದು. ಯುದ್ಧ ನಡೆದರೆ ಜನರೇ ಉಳಿಯುವುದಿಲ್ಲ. ಜನರೇ ಉಳಿಯದಿದ್ದರೆ ಧರ್ಮ ಉಳಿಯುತ್ತದಾ? ಅದು ಇಸ್ಲಾಮುಗಳಿಗೂ ಕಿರಿಸ್ತಾನಿಗಳಿಗೂ ಎಷ್ಟೋ ವರ್ಷಗಳ ಮೇಲೆ ಅರ್ಥವಾಯ್ತು. ಜನರು ಮೊದಲು ನ್ಯಾಯ ಮಾರ್ಗದಿಂದ ಹೊಟ್ಟೆ ತುಂಬಿಸಿಕೊಳ್ಳಲಿ. ಆಮೇಲೆ ಅವರವರ ನಂಬಿಕೆಗೆ ತಕ್ಕಂತೆ ಬದುಕಲಿ. ಒಬ್ಬರ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರುವುದು ತಪ್ಪು ಎಂದು ಒಪ್ಪಿಕೊಂಡು ಯುದ್ಧ ನಿಲ್ಲಿಸಿದರು. ಆದರೆ ಈಗ ಕೆಲವರು ಇಸ್ಲಾಮಿಗೆ ಸಂಕಟ ಬಂದಿದೆಯೆಂದು ಗುಂಪು ಕಟ್ಟಿಕೊಂಡು ಜಿಹಾದಿಗೆ ಹೊರಟಿದ್ದಾರೆ. ಎದುರಾದವರನ್ನೆಲ್ಲಾ ಕೊಂದು ಹಾಕುತ್ತಿದ್ದಾರೆ. ಅವರು ಭಯಂಕರ ಮನುಷ್ಯರು. ಅಲ್ಲಾ ಕೊಲೆಗಾರರನ್ನು ಕ್ಷಮಿಸುವುದಿಲ್ಲ. ಅವರು ಇಲ್ಲಿಗೆ ಬರಲಾರರು ಎಂದುಕೊಂಡಿದ್ದೇನೆ. ಹಾಗೆ ಬಂದರೂ ನೀನು ನಿನ್ನ ಪಾಡಿಗೆ ಇದ್ದರೆ ತೊಂದರೆಯೇನಿಲ್ಲ. ಅಲ್ಲದೆ ನಾವೆಲ್ಲಾ ಹಿರಿಯರು ಇರುವುದು ಯಾಕೆಂದುಕೊಂಡಿದ್ದಿ? ಹೆದರಬೇಡ ಎಂದು ಗುಜ್ಜರಿ ಅದ್ದಿಲಿಚ್ಚನ್ನು ಸಮಾಧಾನಿಸಿದ್ದ. ಅಂತಹ ಭಯಂಕರ ಹರಾಮಿಗಳು ಇಲ್ಲಿಗೆ ಬಾರದಿರಲಿ ದೇವರೇ ಎಂದುಕೊಂಡು ಮನೆಯತ್ತ ಹೊರಟ ಗುಜರಿ ಅದ್ದಿಲಿಚ್ಚನಿಗೆ ಈ ವಾರ ಮನೆಗೆ ಬಂದು ಹಳೇ ಪೇಪರು ಕೊಂಡು ಹೋಗೆಂದು ಬಿಳಿ ಮುಂಡಾಸಿನ ಮುಲ್ಲಾ ಹೇಳಿದ್ದು ನೆನಪಾಗಿ, ಮುಕ್ಕಾಲು ಭಾಗ ತುಂಬಿರುವ ಗುಜರಿ ಗೋಣಿಯು ಮುಲ್ಲಾನಲ್ಲಿ ಪುಲ್ಲು ಆಗಬಹುದೆಂದು ಆಸೆ ಹುಟ್ಟಿ, ದಾರಿ ಬದಲಾಯಿಸಿ ಮುಲ್ಲಾನ ಕಂಪವುಂಡು ಗೇಟು ತೆರೆದು, ಅಂಗಳ ದಾಟಿ, ಜಗಲಿ ಹತ್ತಿ ಬಾಗಿಲ ಬಳಿಯ ಕರೆಗುಂಡಿ ಒತ್ತಿ “ಎಂಡೆ ಅಲ್ಲಾ” ಎಂದು ಉದ್ಗರಿಸಿದನು.
ಎಷ್ಟು ಹೊತ್ತಾದರೂ ಒಳಗಿನಿಂದ ಯಾವುದೇ ಸವುಂಡೂ ಕೇಳದೆ, ಯಾರೂ ಬಾಗಿಲೂ ತೆಗೆಯದೆ ಇದ್ದುದನ್ನು ಕಂಡು ಮತ್ತೊಮ್ಮೆ ತುಂಬಾ ಹೊತ್ತು ಕರೆ ಗಂಟೆ ಒತ್ತಿದಾಗ ನಿಧಾನವಾಗಿ ಬಾಗಿಲು ತೆರೆದು ಬಿಳಿ ಮುಂಡಾಸಿನ ಮುಲ್ಲಾ ಒಮ್ಮೆ ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿ, ಅವನನ್ನು ರಪಕ್ಕನೆ ಒಳಗೆ ಎಳೆದುಕೊಂಡು ದಡಾಲನೆ ಬಾಗಿಲು ಹಾಕಿದಾಗ ಆಶ್ಚರ್ಯದಿಂದ ಸಲಾಮಲೈಕುಂ ಹೇಳಲಿಕ್ಕೂ ಮರೆತುಹೋಗಿ ಗುಜರಿ ಅದ್ದಿಲಿಚ್ಚನು ಮುಲ್ಲಾನ ಮುಖ ನೋಡಿದಾಗ ಅವನು ಸುಮ್ಮನಿರುವಂತೆ ತುಟಿಯ ಮೇಲೆ ಬೆರಳಿಟ್ಟು ಒಳ ಕೋಣೆಯ ಹಾದಿಯನ್ನು ತೋರಿಸಿದ್ದನು.
ಅಲ್ಲಿ ಮುಖವನ್ನು ಮರೆ ಮಾಡಿ ಕೆಂಪು ಕಣ್ಣು ಮಾತ್ರ ಗೋಚರಿಸುತ್ತಿರುವ ಮೂವರು ದಾಂಡಿಗರು ಅವನನ್ನೇ ದಿಟ್ಟಿಸಿ ನೋಡುತ್ತಿರಲು ಎದೆ ಧಸಕ್ಕೆಂದಂತಾಗಿ ಗುಜರಿ ಅದ್ದಿಲಿಚ್ಚನು ಬಿಳಿ ಮುಂಡಾಸಿನ ಮುಲ್ಲಾನ ಮುಖವನ್ನು ನೋಡಲು ಅಲ್ಲೂ ಭೀತಿ ಹೆಪ್ಪುಗಟ್ಟಿದ್ದು ಸ್ಪಷ್ಟವಾಗಿ ಗೋಚರಿಸಿ “ಯಾ ಅಲ್ಲಾ ಪೆಡಚ್ಚೋನೇ” ಎಂದು ದೊಡ್ಡ ದನಿಯಲ್ಲಿ ಗಾಬರಿಯಿಂದ ಉದ್ಗರಿಸಿಬಿಟ್ಟ. ಬಿಳಿ ಮುಂಡಾಸಿನ ಮುಲ್ಲಾನೊಡನೆ ಅಪರಿಚಿತರು ಹೇಳುತ್ತಿರುವುದೇನೆಂಬುದು ಸ್ವಲ್ಪವೂ ಅರ್ಥವಾಗದಿದ್ದರೂ, ಅವರು ಮಾತಾಡುತ್ತಿರುವುದು ಅರಬ್ಬಿಯಲ್ಲೇ ಎನ್ನುವುದು ಖಚಿತವಾಗಿ ಎಳೆಯವನಿರುವಾಗ ತಾನು ಅದನ್ನು ಮದರಸದಲ್ಲಿ ಕಲಿಯಲು ಯತ್ನಿಸಿ ಸಂಪೂರ್ಣ ಸೋತು ಹೋದದ್ದು ಮತ್ತು ಅದು ಮತ ಪಂಡಿತರ ಭಾಷೆಯೆಂದು ಮುಲ್ಲಾ ಹಿಂದೊಮ್ಮೆ ಹೇಳಿದ್ದು ನೆನಪಾಗಿ ಇವರು ಮತ ಪಂಡಿತರಾಗಿದ್ದರೆ ಹೀಗೆ ಮುಖ ಮುಚ್ಚಿಕೊಳ್ಳುವ ಅಗತ್ಯವಿರಲಿಲ್ಲವಲ್ಲಾ ಎನ್ನುವುದು ಹೊಳೆದು ತೊಡೆಗಳು ಗಡಗಡ ಗಡಗಡ ನಡುಗ ತೊಡಗಿದವು.
ಗುಜರಿ ಅದ್ದಿಲಿಚ್ಚನನ್ನು ನೋಡಿ ಮುಖ ಮುಚ್ಚಿದ ಅಪರಿಚಿತ ದಾಂಡಿಗರು ಹೇಳಿದ ಮಾತುಗಳಿಂದ ಮುಖದ ಬಣ್ಣ ಕಳಕೊಂಡ ಬಿಳಿ ಮುಂಡಾಸಿನ ಮುಲ್ಲಾ ಎಚ್ಚರಿಕೆಯ ದನಿಯಲ್ಲಿ ನೋಡು ಅದ್ದಿಲ್ಲಾ, ಇಲ್ಲಿ ನೀನು ಯಾರನ್ನು ನೋಡಿದ್ದೀ, ನಾನು ನಿನ್ನಲ್ಲಿ ಏನನ್ನು ಹೇಳಿದ್ದೇನೆ ಎನ್ನುವುದನ್ನು ನೀನು ಅಲ್ಲಾ ಪರವರ್ದಿಗಾರನಾಣೆಗೂ ಯಾರಿಗೂ ಹೇಳಬಾರದು. ನಿನ್ನ ಬೀಬಿ ಬೀಪಾತುಮ್ಮಳಿಗೂ. ನಿನ್ನೆ ನೀನು ಕೇಳಿದ್ದೀಯಲ್ಲಾ ಜಿಹಾದಿ ಗುಂಪಿನ ಬಗ್ಗೆ. ಅವರೇ ಇವರು. ಜಿಹಾದಿಗಾಗಿ ಬಹಳ ದೂರದಿಂದ ಬಂದವರು. ಇವರ ಕೈಯಲ್ಲಿರುವ ಕಪ್ಪು ಗನ್ನುಗಳನ್ನು ನೋಡು. ಒಮ್ಮೆ ಟ್ರಿಗರು ಒತ್ತಿದರೆ ನೂರು ಜನರನ್ನು ಖುಲ್ಲಂ ಖುಲ್ಲಾ ಖಲಾಸ್ ಮಾಡಬಹುದು. ನಾವೇನಾದರೂ ಎದುರು ಮಾತಾಡಿದರೆ, ಇವರು ಹೇಳಿದ್ದನ್ನು ಮಾಡುವುದಿಲ್ಲವೆಂದರೆ ಇಲ್ಲೇ ಸುಟ್ಟು ಹಾಕುತ್ತಾರೆ. ನಾವೇ ಸಾಯಲಿಕ್ಕೆ ಹೊರಟ ಮಂದಿಗಳು ಬೇರೆಯವರ ಪ್ರಾಣದ ಬಗ್ಗೆ ಯೋಚಿಸುವುದೇ ಇಲ್ಲ ಎಂದು ಆಗಿನಿಂದ ಹೇಳುತ್ತಿದ್ದಾರೆ. ಇವರ ಕಡೆಯವರು ಹೊರಗಡೆ ಅಲ್ಲಲ್ಲಿ ಇದ್ದಾರಂತೆ. ನೀನು ಇಲ್ಲಿಂದ ಹೊರ ಹೋದ ಮೇಲೆ ನಿನ್ನನ್ನು ಹೆಜ್ಜೆ ಹೆಜ್ಜೆಗೆ ಗಮನಿಸ್ತಾರೆ. ಇವರು ಹೇಳಿದ್ದನ್ನು ಮಾಡದಿದ್ದರೆ ಹೊರಗಿರುವ ಮಂದಿಗಳು ನಿನ್ನ ಮನೆಯವರನ್ನು ಹುಡುಕಿ ಹುಡುಕಿ ಸುಟ್ಟು ಹಾಕ್ತಾರೆ. ಅಪ್ಪಿ ತಪ್ಪಿಯೂ ನೀನು ಪೋಲೀಸು ಸ್ಟೇಶನ್ನಿಗೆ ಹೋಗುವಂತೆಯೇ ಇಲ್ಲ ಎಂದು ಹೇಳಿದನು.
ಹಿಂದಿನ ದಿನ ಬೀಡಿ ಸೇದಿ ಪುಸ್ಸ ಪುಸ್ಸ ಹೊಗೆ ಬಿಡುತ್ತಾ ಪೋಲೀಸು ರಫೀಕು ಹೇಳಿದ್ದು ಈಗ ನಿಜವಾಗಿ ಬಿಟ್ಟಿರುವುದು ಮತ್ತು ತನಗರಿವಿಲ್ಲದೆ ತಾನೊಂದು ಜಾಲದಲ್ಲಿ ಸಿಕ್ಕಿ ಬಿದ್ದಿರುವುದು ಖಚಿತವಾಗಿ ಗುಜರಿ ಅದ್ದಿಲಿಚ್ಚನ ಆಯಾಸ ಇನ್ನಷ್ಟು ಹೆಚ್ಚಾಗಿ ‘ಎಂಡೆ ಅಲ್ಲಾ’ ಎಂದು ಭೀತಿ ಮತ್ತು ಅಸಹಾಯಕತೆಗಳಿಂದ ದೊಡ್ಡ ಉದ್ಗಾರ ತೆಗೆದಾಗ ಮುಖ ಮುಚ್ಚಿಕೊಂಡ ದಾಂಡಿಗರಲ್ಲಿ ಒಬ್ಬ ಮುಂದಕ್ಕೆ ಬಂದು ಗುಜರಿ ಅದ್ದಿಲಿಚ್ಚನ ಕಪಾಳಕ್ಕೆ ರಪಕ್ಕನೆ ಒಂದು ಬಿಗಿದಾಗ ಸ್ವರ್ಗ, ನರಕ, ಪಾತಾಳ ಒಮ್ಮೆಲೇ ಕಂಡಂತಾಗಿ ತಲೆಗಿರ್ರನೆ ತಿರುಗಿ ಕೊಳೆತ ಹಲಸಿನ ಹಣ್ಣಿನಂತೆ ಗುಜರಿ ಅದ್ದಿಲಿಚ್ಚನು ಪಚಕ್ಕನೆ ಬಿದ್ದು ಬಿಟ್ಟನು. ಆಮೇಲೆ ತನ್ನನ್ನು ತಾನು ಸಂಬಾಳಿಸಿಕೊಂಡು ಹೇಗೋ ಮೇಲಕ್ಕೆದ್ದು ಕೈಕಟ್ಟಿ ತಲೆತಗ್ಗಿಸಿ ನಿಂತವನಿಗೆ ಸ್ಪಷ್ಟ ಮಾತುಗಳಲ್ಲಿ ಬಿಳಿ ಮುಂಡಾಸಿನ ಮುಲ್ಲಾ ಹೇಳತೊಡಗಿದನು.
“ಸರಿಯಾಗಿ ಕೇಳಿಸಿಕೋ ಅದ್ದಿಲಿಚ್ಚಾ. ಇನ್ನು ನಾಲ್ಕು ದಿನಕ್ಕೆ ಹೋಳಿ ಹಬ್ಬ. ಸಂಜೆ ಗಾಂಧಿ ಮೈದಾನದಲ್ಲಿ ಕಾಮದಹನ ನಡೆಯುತ್ತದೆ. ಊರಿಗೆ ಊರೇ ಒಟ್ಟಾಗಿ ಅಲ್ಲಿ ಸಂಭ್ರಮ ಪಡುತ್ತದೆ. ಆಗ ನೀನು ನಿನ್ನ ಕರಾಮತ್ತು ತೋರಿಸಬೇಕಾಗಿದೆ. ನಿನ್ನ ಲುಂಗಿಯ ಮೇಲೊಂದು ದಪ್ಪನೆಯ ಪಚ್ಚೆ ಬೆಲ್ಟು ಕಟ್ಟಿಕೊಳ್ಳುತ್ತೀಯಲ್ಲಾ? ಅದರಲ್ಲಿ ನಾಲ್ಕು ಬಾಂಬುಗಳನ್ನು ಸಿಕ್ಕಿಸುತ್ತಾರೆ. ಅದಕ್ಕೊಂದು ಸ್ವಿಚ್ಚು ಇರುತ್ತದೆ. ಕಾಮದಹನದ ಚಿತೆಯ ಹತ್ತಿರ ಬೆಲ್ಟು ಕಟ್ಟಿಕೊಂಡು ಹೋಗಿ ಸ್ವಿಚ್ಚನ್ನು ಅದುಮುವುದು ನಿನ್ನ ಕೆಲಸ. ಏನಿಲ್ಲವೆಂದರೂ ನಿನ್ನಿಂದಾಗಿ ಇನ್ನೂರು ಇನ್ನೂರೈವತ್ತು ಜನ ಸತ್ತು ಹೋಗುತ್ತಾರೆ. ಧರ್ಮಕ್ಕಾಗಿ ಬಲಿದಾನ ಮಾಡಿದ ಸಾರ್ಥಕತೆ ನಿನ್ನದಾಗುತ್ತದೆ.”
ಗುಜರಿ ಅದ್ದಿಲಿಚ್ಚನ ಹಣೆಯಲ್ಲಿ ಬೆವರ ಹನಿಗಳು ಕಾಣಿಸಿಕೊಂಡದ್ದಕ್ಕೆ ಅವನು ತಲೆಗೆ ಸುತ್ತಿದ್ದ ಟವೆಲ್ಲು ತೆಗೆದು ಹಣೆಯನ್ನು ಒರಸಿಕೊಂಡ. ಅಂಗೈ ಕೂಡಾ ಬೆವರುತ್ತಿದೆಯೆಂದು ಅವನಿಗನಿಸಿತು. ಜಿಹಾದಿಯೆಂದರೆ ಧರ್ಮ ಉಳಿಸಲು ಮಾಡುವ ಹೋರಾಟ ವೆಂದು ನಿನ್ನೆ ತಾನೇ ಬಿಳಿ ಮುಂಡಾಸಿನ ಮುಲ್ಲಾ ಹೇಳಿದ್ದ. ಅವನ ಊರಲ್ಲಿ ಮತಕ್ಕೆ ಸಂಬಂಧಿಸಿದ ಯಾವುದೇ ಜಗಳ ಗಳಿರಲಿಲ್ಲ. ಮೊಹರಂ ದಿನ ಹಿಂದೂಗಳು ಹುಲಿ ವೇಷ ಹಾಕಿ ಕುಣಿಯುತ್ತಿದ್ದರು. ಹಿಂದೂಗಳು, ಮುಸಲ್ಮಾನರು, ಕಿರಿಸ್ತಾನಿಗಳು ಒಟ್ಟಾಗಿ ಸೇರಿ ಗೌರಿಗಣೇಶ, ನವರಾತ್ರಿ, ರಾಜ್ಯೋತ್ಸವ, ಹೋಳಿ ಹಬ್ಬ, ಈದು ಮಿಲಾದು, ಕ್ರಿಸ್ಸುಮಸ್ಸು ಆಚರಿಸುತ್ತಿದ್ದರು. ಇಸ್ಲಾಮನ್ನು ಉಳಿಸುವುದಕ್ಕೇ ಜಿಹಾದಿ ಎಂದಾದರೆ ಬಾಂಬು ಸ್ಪೋಟ ವಾಗುವಾಗ ಇಸ್ಲಾಮಿಗಳೂ ಸಾಯುತ್ತಾರಲ್ಲಾ? ಜನ ಸತ್ತರೆ ಧರ್ಮ ಉಳಿಯಲು ಸಾಧ್ಯ ವಿಲ್ಲವೆಂದು ನಿನ್ನೆ ಬಿಳಿ ಮುಂಡಾಸಿನ ಮುಲ್ಲಾ ಹೇಳಿದ್ದ. ಧರ್ಮಕ್ಕಾಗಿ ಜನರಲ್ಲದ ಜನರಿಗಾಗಿ ಧರ್ಮವೆಂಬ ವಿವೇಕ ಈ ದಾಂಡಿಗರಿಗಿರುತ್ತಿದ್ದರೆ ಇವರು ಯಾವುದೋ ದೇಶದಿಂದ ಇಲ್ಲಿಗೆ ಬರುತ್ತಿರಲಿಲ್ಲ. ಇವರಂದಂತೆ ಕೇಳದಿದ್ದರೆ ತನ್ನನ್ನು, ಬೀಬಿ ಬೀಪಾತುಮ್ಮಳನ್ನು, ಹದಿಮೂರು ಮಕ್ಕಳನ್ನು ಕಣ್ಣಲ್ಲಿ ರಕ್ತವಿಲ್ಲದ ಈ ಮಂದಿ ಕೊಂದೇ ಬಿಡುತ್ತಾರೆ. ತಾನೊಬ್ಬ ಸತ್ತು ಹೋದರೆ ಪ್ರಪಂಚವೇನು ಮುಳುಗಿ ಹೋಗುವುದಿಲ್ಲ. ತಾನೀಗ ಸತ್ತು ಹೋದರೆ ಉಳಿದ ಮಕ್ಕಳು ಹೇಗಾದರೂ ಬದುಕಿಯಾರು. ಆದರೆ ಹೆತ್ತೂ ಹೆತ್ತೂ ನಲ್ವತ್ತರ ಹರೆಯದಲ್ಲಿ ಎಪ್ಪತ್ತರ ಮುದುಕಿಯಂತಾಗಿ ಹೋಗಿರುವ ಬೀಬಿ ಬೀಪಾತುಮ್ಮಳ ಮತ್ತು ಶಾಲೆಗೆ ಬಿಸಿಯೂಟಕ್ಕೆ ಹೋಗುತ್ತಿರುವ ಮಕ್ಕಳ ಗತಿಯೇನು? ಆ ಸೈತಾನ್ನ ಆಟವೆ? ಜಿನ್ನು ಹಿಡಿದವನಂತೆ ಇಲ್ಲಿಗೆ ಬಂದು ತಲೆಗೇ ತಂದು ಕೊಂಡೆನಲ್ಲಾ?
ಗುಜರಿ ಅದ್ದಿಲಿಚ್ಚನ ಮುಖ ಭಾವವನ್ನು ಬಿಳಿ ಮುಂಡಾಸಿನ ಮುಲ್ಲಾ ಗಮನಿಸುತ್ತಿದ್ದ: ಅದ್ದಿಲ್ಲಾ, ನಿನ್ನ ಬೀಬಿಯ ಬಗ್ಗೆ, ಮಕ್ಕಳ ಬಗ್ಗೆ ಯೋಚಿಸಬೇಡ. ನಾಳೆಯೇ ಅವರ ಹೆಸರಲ್ಲಿ ಬ್ಯಾಂಕು ಅಕವುಂಟು ಓಪನ್ನು ಮಾಡು. ಹಣ ಹಾಕಿಡುವ ವ್ಯವಸ್ಥೆಯನ್ನು ಇವರ ಕಡೆಯವರು ಮಾಡುತ್ತಾರೆ. ನಿನ್ನ ಖರ್ಚಿಗೆಂದು ಈ ನೋಟಿನ ಕಟ್ಟು ಕೊಟ್ಟಿದ್ದಾರೆ. ಗುಜರಿ ಗೋಣಿಯಲ್ಲಿ ಹಾಕಿಕೋ. ಯಾರಿಗೂ ಡವುಟ್ಟು ಬರುವುದಿಲ್ಲ. ಒಂದಲ್ಲಾ ಒಂದು ದಿನ ನಾವೆಲ್ಲಾ ಸಾಯಲೇ ಬೇಕಲ್ಲ ಅದ್ದಿಲಿಚ್ಚ? ನೀನು ಇಲ್ಲಿಗೆ ಬಾರದಿರುತ್ತಿದ್ದರೆ ನಾನು ಬಾಂಬು ಸಿಕ್ಕಿಸಿಕೊಂಡು ಹೋಳಿ ಹಬ್ಬದಂದು ಗಾಂಧಿ ಮೈದಾನಕ್ಕೆ ಹೋಗಬೇಕಾಗಿತ್ತು. ಈಗ ಏನು ನನ್ನನ್ನಿವರು ಬಿಟ್ಟು ಬಿಡುತ್ತಾರೆಂದು ಕೊಂಡಿದ್ದೀಯಾ? ಎಲ್ಲದಕ್ಕೂ ಸಾಕ್ಷಿಯಾಗಿರುವ ನನ್ನನ್ನು ಮುಗಿಸಿಯೇ ಬಿಡುತ್ತಾರೆ. ನಿಜಕ್ಕೂ ಈಗ ನಮ್ಮದು ನಾಲ್ಕೇ ದಿನದ ಬಾಳು.
* * *
ಗುಜರಿ ಅದ್ದಿಲಿಚ್ಚನ ಏಕೈಕ ಮಡದಿ ಬೀಬಿ ಬೀಪಾತುಮ್ಮಳು ಗಂಡನ ಮುಖದಲ್ಲಿ ಆತಂಕ ಮಡುಗಟ್ಟಿದ್ದನ್ನು ಕಂಡರೂ ಏನನ್ನೂ ಕೇಳಲಿಲ್ಲ. ಕಳೆದ ಹತ್ತು ವರ್ಷಗಳಿಂದ ಆ ಮುಖದಲ್ಲಿ ಒಂದು ಮುಕ್ತವಾದ ನಗುವನ್ನು ಅವಳು ಕಂಡವಳಲ್ಲ. ದೇವರು ಕೊಡುವುದು ಎಂದು ಕೊಂಡು ಹದಿಮೂರು ಆಗುವವರೆಗೂ ಮುಂದುವರಿಸಿದ್ದಕ್ಕೆ ಈಗ ಆತಂಕ ಅನುಭವಿಸುತ್ತಿದ್ದಾನೆ. ಅದಿನ್ನು ಅಲ್ಲಾ ಕರೆಯಿಸಿಕೊಳ್ಳುವವರೆಗೂ ತಪ್ಪಿದ್ದಲ್ಲ ಎಂದು ಅವಳು ಅವನ ಆತಂಕದ ಕಾರಣವನ್ನು ಕೇಳ ಹೋಗಲಿಲ್ಲ. ಆದರೆ ಅವನು ರಾತ್ರೆ ನಮಾಜು ಮಾಡದ್ದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಮರುದಿನ ಬೆಳಿಗ್ಗೆಯೂ ನಮಾಜು ಮಾಡದೆ ಎರಡೇ ಎರಡು ತುಂಡು ಕಲ್ತಪ್ಪದಲ್ಲಿ ತಿಂಡಿ ಮುಗಿಸಿದ್ದು ಅವಳ ಆತಂಕವನ್ನು ಹೆಚ್ಚಿಸಿತು.
ಗುಜರಿ ಅದ್ದಿಲಿಚ್ಚನು ಇಂದು ಗುಜರಿ ಕೆಲಸಕ್ಕೆ ಹೋಗದೆ, ಎಲ್ಲಾ ಮಕ್ಕಳನ್ನು ಕರೆದು ಇಂದು ಯಾರೂ ಕೆಲಸಕ್ಕೆ ಹೋಗಬಾರದೆಂದು ಆದೇಶಿಸಿ, ಯಾವುದೋ ಕಾಗದ ಪತ್ರಗಳಿಗೆ ಎರಡೆರಡು ಕಡೆ ಎಡಗೈ ಹೆಬ್ಬೆಟ್ಟು ಒತ್ತಿಸಿಕೊಂಡದ್ದು ಮತ್ತು ತನಗೂ ಹೆಬ್ಬೆಟ್ಟು ಒತ್ತಲು ಹೇಳಿದ್ದನ್ನು ಕಂಡು ಬೀಬಿ ಬೀಪಾತುಮ್ಮಳಿಗೆ ಕೇಳದಿರಲಾಗಲಿಲ್ಲ. ಗುಜರಿ ಅದ್ದಿಲಿಚ್ಚ ಬಾಯಿಬಿಟ್ಟ. ನಮ್ಮ ಬಿಳಿ ಮುಂಡಾಸು ಮುಲ್ಲಾ ಸಾಹೇಬರು ಒತ್ತಾಯ ಮಾಡಿ ಎಲ್ಲರ ಹೆಸರಲ್ಲಿ ಬ್ಯಾಂಕು ಅಕವುಂಟು ಆರಂಭಿಸಲು ಹೇಳಿದ್ದಾರೆ. ಅದಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡದ್ದು. ಇನ್ನು ಇದಕ್ಕೆ ನಿಮ್ಮ ಪಟೋ ಅಂಟಿಸಬೇಕಾಗುತ್ತದೆ. ಪಟೋ ತೆಗೆಯುವವನನ್ನು ಇಲ್ಲಿಗೇ ಬರ ಹೇಳಿದ್ದೇನೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಬಂದು ಬಿಡುತ್ತಾನೆ.
ಬೀಬಿ ಬೀಪಾತುಮ್ಮಳಿಗೆ ವಿಷಯ ಪೂರ್ತಿಯಾಗಿ ಅರ್ಥವಾಗದಿದ್ದರೂ ಪಟೋ ತೆಗೆಯುವವ ಬರುತ್ತಾನೆನ್ನುವ ಸಂಭ್ರಮದಿಂದ ಮಕ್ಕಳು ಕುಣಿದಾಡುತ್ತಿರುವುದನ್ನು ನೋಡಿ ಮನಸ್ಸು ಹಗುರಾಯಿತು. ಇರುವುದರಲ್ಲಿ ಚೆನ್ನಾಗಿರುವ ಡ್ರೆಸ್ಸನ್ನು ಮಕ್ಕಳು ಹಾಕಿಕೊಳ್ಳುತ್ತಿರುವಾಗ ಅವಳು ಅವಳ ಏಕೈಕ ಕಪ್ಪು ಬರುಕಾ ಹಾಕಿಕೊಂಡು ತಯಾರಾದಳು. ಪಟೋ ತೆಗೆಯುವಾಗಲೂ ಪೂರ್ತಿ ಮುಖ ಮುಚ್ಚಿಕೊಂಡದ್ದಕ್ಕೆ ಗುಜರಿ ಅದ್ದಿಲಿಚ್ಚನು ಒಳ್ಳೆ ಕಪ್ಪು ಹಂಡೆಯ ಹಾಗೆ ಕಾಣುತ್ತೀಯಾ, ಮುಖ ತೋರಿಸದಿದ್ದರೆ ಅದು ನಿನ್ನ ಪಟೋ ಅಂತ ಗೊತ್ತಾಗುವುದು ಹೇಗೆ? ಬ್ಯಾಂಕಲ್ಲಿ ನಿನ್ನ ಹೆಸರಲ್ಲಿ ಹಣ ಹಾಕಿಡುವುದು ಹೇಗೆ? ನನಗೇನಾದರೂ ಆಗಿ ಬಿಟ್ಟರೆ ನೀನು ಬದುಕುವುದು ಹೇಗೆ? ಎಂದು ಗದರಿದ್ದಕ್ಕೆ ಅವಳು ಹುಸಿ ಮುನಿಸಿನಿಂದ ಮುಖ ತೋರಿಸಿ ನಮ್ಮದೆಲ್ಲರದೂ ಒಟ್ಟಿಗಿರುವುದು ಒಂದಿರಲಿ, ನನ್ನದೂ ನಿಮ್ಮದೂ ಒಂದು ಬೇರೆಯೇ ಇರಲಿ ಎಂದು ಎರಡು ಬೇರೆ ಪಟೋ ಹೊಡೆಯಿಸಿಕೊಂಡಳು. ಪಟೋ ಹೊಡಿಯುವವನೊಟ್ಟಿಗೆ ಮನೆ ಬಿಡುವಾಗ ಗುಜರಿ ಅದ್ದಿಲಿಚ್ಚನು ಎಲ್ಲಾ ಮನೆಯಲ್ಲೇ ಇರಿ, ಈಗ ಬಂದು ಬಿಡುತ್ತೇನೆ ಎಂದವನು ಮಧ್ಯಾನ್ಹ ವಾಪಾಸಾಗುವಾಗ ಚಕ್ಕಲಿ, ಉಂಡೆ, ಬನ್ನು, ರಸ್ಕು, ಮೈಸೂರು ಪಾಕು, ಹೋಳಿಗೆ ಮತ್ತು ಆಪಲ್ಲು ಕಟ್ಟಿಸಿಕೊಂಡು ತಂದುದನ್ನು ನೋಡಿ ಬೀಬಿ ಬೀಪಾತುಮ್ಮಳಿಗೆ ಪರಮಾಶ್ಚರ್ಯವಾಗಿ “ಇದು ಏನು ನಿಮ್ಮ ಕಾರುಬಾರು? ಹಣವೇನು ಮರದಿಂದ ಉದುರಿ ಸಿಕ್ಕಿದೆಯಾ? ನೀವು ಖರ್ಚು ಮಾಡುವುದನ್ನು ನೋಡಿದರೆ ಡವುಟ್ಟು ಬರುತ್ತದೆ” ಎಂದದ್ದಕ್ಕೆ ಗುಜರಿ ಅದ್ದಿಲಿಚ್ಚನು ದೇಶಾವರಿ ನಗೆ ಬೀರಿ “ಆಶ್ಚರ್ಯ ಇನ್ನೂ ಇದೆ. ಇಂದು ಸಂಜೆ ನಾವೆಲ್ಲಾ ಪಸ್ಟುಸೋ ಸಿನಿಮಾಕ್ಕೆ ಹೋಗಲಿಕ್ಕಿದೆ. ಟಿಕೇಟು ತಂದಿದ್ದೇನೆ. ರಾತ್ರೆ ಊಟ ಹೋಟೆಲಲ್ಲೇ ಮಾಡುವಾ. ಕೊಡುವಾಗ ಅಲ್ಲಾ ಪರವರ್ದಿಗಾರ ಎರಡೂ ಕೈಗಳಿಂದ ಬಾಚಿ ಬಾಚಿ ಕೊಡುತ್ತಾನೆ” ಎಂದು ಹೇಳಿ ಅವಳನ್ನು ಮಾತಿಲ್ಲದಂತೆ ಮಾಡಿದ್ದ.
ನಲುವತ್ತು ವರ್ಷಗಳ ಸುದೀರ್ಘ ಜೀವನದಲ್ಲಿ ಒಮ್ಮೆಯೂ ಸಿನಿಮಾ ಟಾಕೀಸಿಗೆ ಕಾಲಿಡದ ಬೀಬಿ ಬೀಪಾತುಮ್ಮಳು ಗಂಡನೊಡನೆ ಮತ್ತು ಹದಿಮೂರು ಮಕ್ಕಳೊಡನೆ ಮೂವರು ಹೆಂಡಿರ ಮುದ್ದಿನ ಪೋಲೀಸು ಸಿನಿಮಾ ನೋಡಿ ಈ ಪ್ರಪಂಚದಲ್ಲಿ ಏನೆಲ್ಲಾ ಇದೆ ಎಂದು ಗುಜರಿ ಅದ್ದಿಲಿಚ್ಚನ ಕೈ ಹಿಡಿದು ಪಿಸುಗುಟ್ಟಿದಳು. ಸಿನಿಮಾ ನೋಡಿ ಬರುವಾಗ ಮಸ್ಕತ್ತು ಇಬ್ರಾಯಿಮ್ಮನ ಸ್ಟಾರುಹೋಟೆಲಲ್ಲಿ ನೆಯ್ಯಿಚೋರು, ಬಿರಿಯಾನಿ, ಮಟನ್ನು ಮತ್ತು ಕೋಳಿಕಬಾಬು ಹೊಟ್ಟೆ ಬಿರಿಯುವಂತೆ ಎಲ್ಲರಿಗೂ ತಿನ್ನಿಸುವಾಗ ಬೀಬಿ ಬೀಪಾತುಮ್ಮಳ ಕಾಂತಿಹೀನ ಮುಖದಲ್ಲಿ ಆಶ್ಚರ್ಯ ಸ್ಥಾಯಿ ಭಾವವಾಗಿ ಬೆಳಗುತ್ತಿತ್ತು.
ಅದೇ ಹೋಟೆಲಲ್ಲಿ ಬಿರಿಯಾನಿ ತಿಂದು ಕೈ ತೊಳೆಯುತ್ತಿದ್ದ ಪೋಲೀಸು ರಫೀಕು ಗುಜರಿ ಅದ್ದಿಲಿಚ್ಚನ ಪಟಾಲಮ್ಮು ನೋಡಿ “ಇದೇನು ಅದ್ದಿಲಿಚ್ಚಾ ಎಂದೂ ಇಲ್ಲದ್ದು ಇಂದು? ಒಳ್ಳೆ ಮದು ಮಗನ ಮೆರವಣಿಗೆ ಹೊರಟಂತಿದೆ. ಗುಜರಿ ತುಂಬಾ ಸಿಕ್ಕಿರಬೇಕಲ್ಲಾ? ಎಂದು ಹೇಳಿ ಅವನ ಭುಜದ ಮೇಲೆ ಕೈ ಹಾಕಿ ಮೂಲೆಗೆ ಕರಕೊಂಡು ಹೋಗಿ ಕಿವಿಗೆ ತುಟಿಯಿಟ್ಟು ಒಂದು ವಯರುಲೆಸ್ಸು ಮೆಸ್ಸೇಜು ಉಂಟು ಅದ್ದಿಲಿಚ್ಚಾ. ಅರಬು ದೇಶಗಳ ಜಿಹಾದಿ ಗುಂಪುಗಳು ನಮ್ಮ ರಾಜ್ಯಕ್ಕೆ ಬಂದಿವೆಯಂತೆ. ಹೋಳಿ ಹಬ್ಬದಂದು ಅವು ಅನಾಹುತ ಮಾಡಲಿವೆಯಂತೆ. ಇಲ್ಲಿಗೂ ಬರಬಹುದಂತೆ. ಏನಾದರೂ ಆದರೆ ನಮ್ಮ ಮೇಲೂ ಡವುಟ್ಟು ಪಡುತ್ತಾರೆ. ನಾವೀಗ ಮೈಯೆಲ್ಲಾ ಕಣ್ಣಾಗಿರಬೇಕು. ಹೆಚ್ಚು ಕಡಿಮೆಯಾದರೆ ನಾನು ಕೊಟ್ಟ ಮೊಬೈಲು ನಂಬರು ಉಂಟಲ್ಲಾ? ಬೀದಿ ಬದಿಯಲ್ಲಿ ಕಸದ ತೊಟ್ಟಿಯಲ್ಲಿ, ಬಸ್ಟ್ಯಾಂಡಿನಲ್ಲಿ ಏನಾದರೂ ಕಾಣ ಸಿಕ್ಕಿದರೆ ಮುಟ್ಟಬಾರದೆಂದು ಮಕ್ಕಳಿಗೂ ಹೇಳು ಯಾರೋ ಏನನ್ನೋ ಸಿಡಿಸಿ ನಮ್ಮವರನ್ನು ಕೊಂದರೂ ನಾವೇ ಅಪವಾದ ಹೊರಬೇಕಾಗುತ್ತದೆ. ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ. ಆ ಹರಾಮಿಗಳು ಅವರೂ ಬದುಕೋದಿಲ್ಲ, ನಮ್ಮನ್ನೂ ಬದುಕಲು ಬಿಡೋದಿಲ್ಲ. ಎಚ್ಚರವಾಗಿರಿ” ಎಂದು ಇವನ ಜೇಬಿಗೆ ಕೈ ಹಾಕಿದ. ಕೈಗೆ ಸಿಕ್ಕ ಸಿಗರೇಟು ಪ್ಯಾಕೇಟು ಹೊರತೆಗೆದು ಆಶ್ಚರ್ಯದಿಂದ ನೋಡುತ್ತಾ “ಇದೇನು ಅದ್ದಿಲಿಚಾ ನಸೀಬು ಖುಲಾಯಿಸಿದಂತಿದೆ? ಆಗಲಿ, ಆಗಲಿ” ಎಂದು ಇನ್ನೊಮ್ಮೆ ಗುಜರಿ ಅದ್ದಿಲಿಚ್ಚನ ಜೇಬಿಗೆ ಕೈ ಹಾಕಿ ಬೆಂಕಿ ಪೆಟ್ಟಿಗೆ ತೆಗೆದು, ಹೊಗೆಯುಗುಳಿ, ಗುಜರಿ ಅದ್ದಿಲಿಚ್ಚನ ಭುಜದ ಮೇಲೊಂದು ಏಟು ಹಾಕಿ ಹೊರ ನಡೆದ.
ಗುಜರಿ ಅದ್ದಿಲಿಚ್ಚನು “ಯಾ ಅಲ್ಲಾ” ಎಂಬ ಉದ್ಗಾರದೊಡನೆ ಟೇಬಲ್ ಬಳಿ ಬಂದು ಬಿಲ್ಲಿನ ಹಣಕ್ಕೆ ವೆಯಿಟರನಿಗೆ ಟಿಪ್ಸು ಎಂದು ಹತ್ತು ರೂಪಾಯಿ ಸೇರಿಸಿ ಕೊಟ್ಟು ಹೊರಡುವಾಗ ಗಲ್ಲಾದಲ್ಲಿ ಕೂತಿದ್ದ ಮಸ್ಕತ್ತು ಇಬ್ರಾಯಿಮ್ಮನು ನಗುತ್ತಾ “ನಿಮ್ಮ ಮಕ್ಕಳು ಇಂದು ಕೆಲಸಕ್ಕೆ ಬಾರದಿರುವುದನ್ನು ನೋಡಿ ಏನಾಯಿತಪ್ಪಾ ಎಂದು ಅಂದುಕೊಂಡಿದ್ದೆ. ಈಗ ನೋಡಿದರೆ ನೀವು ಹೊಸದಾಗಿ ಮದುವೆಯಾದವರ ಹಾಗೆ ಒಳ್ಳೆ ಜಾಲಿಯಾಗಿ ಹೊರಟಿದ್ದೀರಿ” ಎಂದವನೊಡನೆ ಹಲ್ಲು ಕಿಸಿದು ಸುಖದುಃಖ ಮಾತಾಡಿ ಹೊರಡುವಾಗ ಅದೇ ಹೋಟಲಲ್ಲಿ ಕೆಲಸಮಾಡುವ ತನ್ನ ಇಬ್ಬರು ಹುಡುಗರತ್ತ ನೋಡಿದ. ಪ್ರತಿ ದಿನ ಯಾರ್ಯಾರೋ, ಏನೇನೋ ತಿಂದ ಪ್ಲೇಟು, ಕುಡಿದ ಲೋಟಾ ತೊಳೆಯುವಾಗ ಲೋಷನ್ನು ಮತ್ತು ನೀರಲ್ಲಿ ಕೈ ಮುಳುಗಿಸಿ ಮುಳುಗಿಸಿ ಉಗುರುಗಳ ಸುತ್ತ ಬಿರುಕು ಬಿಟ್ಟು ಅಸಾಧ್ಯ ನೋವನ್ನು ಅನುಭವಿಸುತ್ತಿದ್ದ ಆ ಹುಡುಗರು, ಇಂದು ತಮ್ಮ ಲೋಟಾಪ್ಲೇಟನ್ನು ಬೇರೆಯವರು ತೊಳೆಯಲಿರುವುದನ್ನು ನೆನೆದೂ ನೆನೆದೂ ಹಿರಿ ಹಿರಿ ಹಿಗ್ಗುತ್ತಿದ್ದರು.
ರಾತ್ರಿ ಮಲಗುವಾಗ ಬೀಬಿ ಬೀಪಾತುಮ್ಮಳು ಅದು ಹೇಗೆ ದುಡ್ಡು ಜಮಾಯಿಸಿದಿರೋ ಏನೊ? ಜೀವನದಲ್ಲಿ ಈವರೆಗೆ ಇಷ್ಟೊಂದು ಖುಷಿ ಅನುಭವಿಸಿದ್ದೇ ಇಲ್ಲ. ಇನ್‌ಷಾನಲ್ಲಾ. ಹೀಗೆ ನಮಗೆ ದಿನಾಲೂ ಸಂತೋಷ ಪಡಲು ಸಾಧ್ಯವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು? ಎಂದಾಗ ಗುಜರಿ ಅದ್ದಿಲಿಚ್ಚನು ಸಂತೋಷವೆನ್ನುವುದು ಹಾಗೆ ದಿನಾಲೂ ಸಿಗುವಂತದ್ದಲ್ಲ. ನಾಳೆಯ ಬಗ್ಗೆ ಯೋಚನೆ ಯಾಕೆ? ಇಂದು ನಾವು ಸಂತೋಷವಾಗಿರುವುದು ಮುಖ್ಯ ಎಂದು ಬೀಬಿ ಬೀಪಾತುಮ್ಮಳನ್ನು ಪಕ್ಕಕ್ಕೆಳೆದುಕೊಂಡ. ಆಪ್ರೇಸನ್ನಾದ ಮೇಲೆ ಹಾಗೆ ಎಳೆದುಕೊಳ್ಳುವಾಗ ನೂರಾರು ಕಾಯಿಲೆ ಕಸಾಲೆಗಳ ಹೆಸರು ಹೇಳಿ ಹೆದರಿಸಿ ಅವನನ್ನು ಇನ್ನಿಲ್ಲದಂತೆ ನಿರಾಕರಿಸುತ್ತಿದ್ದ ಬೀಬಿ ಬೀಪಾತುಮ್ಮಳು ಅಂದು ತಾನೇ ತಾನಾಗಿ ಗುಜರಿ ಅದ್ದಿಲಿಚ್ಚನನ್ನು ತಬ್ಬಿಕೊಂಡು ಹಿತವಾಗಿ ಏದುಸಿರು ಬಿಡುತ್ತಾ ಪೂರ್ಣ ಮನಸ್ಸಿನಿಂದ ತನ್ನನ್ನು ಸಮರ್ಪಿಸಿ ಕೊಂಡವಳನ್ನು ಮನದಣಿಯ ಅನುಭವಿಸಿದ ಗುಜರಿ ಅದ್ದಿಲಿಚ್ಚನ ಕಣ್ಣುಗಳಿಂದ ತುರೀಯಾ ವಸ್ಥೆಯಲ್ಲಿ ಎರಡು ಹನಿಗಳು ಉದುರಿದ್ದು ಬೀಬಿ ಬೀಪಾತುಮ್ಮಳ ಗಮನಕ್ಕೆ ಬರಲೇ ಇಲ್ಲ.
* * *
ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು
ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು
ಕಾಮ ದಹನ ಮಾಡಲು ಗಾಂಧಿ ಮೈದಾನಕ್ಕೆ ಹೋಗುತ್ತಿದ್ದ ಜನರ ಬೊಬ್ಬೆ ಮೈದಾನ ದಿಂದ ಸುಮಾರು ಒಂದು ಫರ್ಲಾಂಗು ದೂರದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹಿಂಬದಿಯಲ್ಲಿದ್ದ ಗುಜರಿ ಅದ್ದಿಲಿಚ್ಚನ ಕಿವಿಗೆ ಬೀಳುತ್ತಿತ್ತು. ಅವನ ಎದುರಲ್ಲಿ ಬಿಳಿ ಮುಂಡಾಸಿನ ಮುಲ್ಲಾ ಪೇಲವ ಮುಖಭಾವದೊಡನೆ ನಿಂತಿದ್ದ. ಎದುರಲ್ಲಿ ಅರಬ್ಬಿ ಮಾತಾಡುವ ಮಂದಿಗಳು ಮತ್ತು ಜತೆಯಲ್ಲಿ ಉರ್ದು ಮಾತಾಡುವ ಹನ್ನೆರಡು ಜನರು. ಯಾವ ಊರಿನವರೊ?
ಮುಲ್ಲಾನ ಸ್ವರದಲ್ಲಿ ಜೀವ ಉಳಿದಿರಲಿಲ್ಲ. “ಇನ್ನು ಯೋಚಿಸಲು ನಮಗೇನೂ ಉಳಿದಿಲ್ಲ ಅದ್ದಿಲಿಚ್ಚ. ನೀನಿನ್ನು ಸ್ವಲ್ಪ ಹೊತ್ತಿನಲ್ಲಿ ಗಾಂಧಿ ಮೈದಾನದ ಮಧ್ಯದಲ್ಲಿ ಉರಿಯುತ್ತಿರುವ ಆ ಸೌದೆ ರಾಶಿಯ ಹತ್ತಿರ ಹೋಗುತ್ತೀಯಾ. ಅಲ್ಲಿಗೆ ಹೋಗಿ ನಿನ್ನ ಬೆಲ್ಟಿನ ಸ್ವಿಚ್ಚು ಅದುಮುವುದು ನಿನ್ನ ಕೆಲಸ. ಆಗ ನಿನ್ನ ಕತೆಯೊಂದಿಗೆ ಸುತ್ತಮುತ್ತ ಹತ್ತಡಿಯಲ್ಲಿ ಹರಡಿಕೊಂಡವರೆಲ್ಲರ ಕತೆ ಮುಗಿಯುತ್ತದೆ. ಆಗ ಉಂಟಾಗುವ ಗದ್ದಲದಲ್ಲಿ ಇವರು ಇಡೀ ಘಟನೆಯ ಪೂರ್ವಾಪರ ಗೊತ್ತಿರುವ ನನ್ನನ್ನು ಉಡಾಯಿಸಿ ಅವರ ವಾಹನಗಳಲ್ಲಿ ಜಾಗ ಖಾಲಿ ಮಾಡುತ್ತಾರೆ. ನಮ್ಮನ್ನು ಇನ್ನು ಆ ಅಲ್ಲಾ ಪರವರ್ದಿಗಾರನೂ ರಕ್ಷಿಸಲಾರ.”
ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು
ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು
ಜನರ ಬೊಬ್ಬೆ ಹತ್ತಿರವಾಗ ತೊಡಗಿದಂತೆ ಗುಜರಿ ಅದ್ದಿಲಿಚ್ಚ ಬೀಬಿ ಬೀಪಾತುಮ್ಮಳನ್ನು ಮತ್ತು ತನ್ನ ಮಕ್ಕಳನ್ನು ನೆನಪಿಸಿಕೊಂಡ. ಹದಿನಾಲ್ಕು ಪಾಸು ಪುಸ್ತಕಗಳಲ್ಲಿ ಈಗ ಸಾಕಷ್ಟು ಹಣವಿದೆ. ನಾಳೆ ಪೋಲೀಸರು ಅದರ ಮೂಲವನ್ನು ಕೆದಕುವಾಗ ತಾನಿರುವುದಿಲ್ಲ. ತನ್ನ ಕಾರ್ಯಕ್ಕೆ ಬೀಬಿ ಬೀಪಾತುಮ್ಮ ಮತ್ತು ಹದಿಮೂರು ಮಂದಿ ಮಕ್ಕಳು ಬಾಧ್ಯಸ್ಥರಾಗುವುದಿಲ್ಲ. ಬೆಳಿಗ್ಗೆ ಎರಡೆರಡು ಸಲ ಬಾಂಬಿನ ಸ್ವಿಚ್ಚನ್ನು ಅದುಮುವ ಅಭ್ಯಾಸ ನಡೆಸುವಾಗ ಬೆಲ್ಟಿನಲ್ಲಿ ನಿಜವಾದ ಬಾಂಬುಗಳನ್ನು ಇಟ್ಟಿರಲಿಲ್ಲ. ಈಗ ತಾನುಟ್ಟಿರುವ ಬಿಳಿ ಚೌಕುಳಿ ಲುಂಗಿಯನ್ನು ಸುತ್ತುವರಿದಿರುವ ತನ್ನ ಪ್ರೀತಿಯ ದಪ್ಪನೆಯ ಹಸಿರು ಬೆಲ್ಟಿನಲ್ಲಿ ನೂರಾರು ನಿಷ್ಟಾಪಿಗಳನ್ನು ಕಣಾರ್ಧದಲ್ಲಿ ಕೊಲ್ಲಬಲ್ಲ ನಾಲ್ಕು ಶಕ್ತಿಶಾಲೀ ಬಾಂಬುಗಳಿವೆ. ಸ್ವಿಚ್ಚನ್ನು ಒತ್ತಿದರೆ ಸಾಕು ತನ್ನ ದೇಹವೂ ಗುಜರಿಯಾಗಿ ಹೋಗುತ್ತದೆ. ಜೀವಮಾನವಿಡೀ ಗುಜರಿ ಆಯ್ದು ಬದುಕಿದವನಿಗೆ ಗುಜರಿಯಾಗಿ ಸತ್ತು ಹೋಗುವ ಯೋಗ. ಇದನ್ನು ಈ ಅರಬ್ಬಿಮಾತಾಡುವ ಮಂದಿ ಜಿಹಾದಿ ಅಂತಾರಲ್ಲಾ? ಎಳೆಯವನಿದ್ದಾಗ ಜುಮ್ಮಾ ಮಸೀದಿಯ ಮದರಸದಲ್ಲಿ ತಾನೂ ಓದು ಕಲಿತವನೇ. ಅಲ್ಲಿ ಒಬ್ಬನೇ ಒಬ್ಬ ಮುಕ್ರಿ ಇಂತಹ ಜಿಹಾದಿ ಬಗ್ಗೆ ಹೇಳಿರಲಿಲ್ಲ. ವರ್ಷಕ್ಕೊಮ್ಮೆ ನಡೆಯುವ ಉರೂಸು ಮುಬಾರಕಿನಲ್ಲಿ ಗಂಭೀರ ಮತ ಪ್ರಸಂಗ ನಡೆಸುವ ಮತ ಪಂಡಿತರ ಬಾಯಿಯಿಂದ ಇಂತಹ ಜಿಹಾದಿಯ ಪ್ರಸ್ತಾಪ ಇದುವರೆಗೆ ಬಂದಿರಲಿಲ್ಲ. ನರಕೊಯ್ಯುವುದನ್ನು ಬಲವಾಗಿ ವಿರೋಧಿಸುವ ಬಿಳಿ ಮುಂಡಾಸಿನ ಈ ಅಜ್ಜ ಮುಲ್ಲಾನೂ ಬೇರೆಯವರನ್ನು ದ್ವೇಷಿಸಲು ಹೇಳಿಕೊಟ್ಟಿರಲಿಲ್ಲ. ಇಲ್ಲೀಗ ತಾನು ಬಾಂಬು ಸ್ಫೋಟಿಸಿ ಒಂದಷ್ಟು ಮಂದಿಯನ್ನು ಕೊಂದು ಬಿಟ್ಟರೆ ಅದು ಜಿಹಾದಿ ಹೇಗಾಗುತ್ತದೆ?
ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು
ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು
ಅರಬ್ಬಿಗಳು ಬಿಳಿ ಮುಂಡಾಸಿನ ಮುಲ್ಲಾನನ್ನು ನೋಡಿ ಏನೋ ಗದರಿಕೊಂಡದ್ದಕ್ಕೆ ಅವನು “ಅದ್ದಿಲಿಚ್ಚಾ, ನಾವಿಬ್ಬರೂ ಒಟ್ಟಿಗೇ ಈಗ ಗುಂಪಿನ ನಡುವೆ ಹೋಗಬೇಕಂತೆ. ಒಟ್ಟಿಗೇ ಇರಬೇಕಂತೆ. ನೀನು ಸ್ವಿಚ್ಚು ಒತ್ತುವುದನ್ನು ನಾನು ಖಚಿತಪಡಿಸಬೇಕಂತೆ. ಹೇಗೂ ಸ್ವಲ್ಪ ಹೊತ್ತಿನ ಮೇಲೆ ಇವರು ನನ್ನನ್ನು ಕೊಲ್ಲುತ್ತಾರೆ. ಈಗ ನಿನ್ನೊಟ್ಟಿಗೇ ಸಾಯಲಿದ್ದೇನೆ. ಸಾವು ಖಚಿತ ಎಂದಾದ ಮೇಲೆ ಈಗ ಆದರೇನು? ಮತ್ತೆ ಆದರೇನು? ಬಾ ಹೋಗೋಣ” ಎಂದು ಅವಸರಿಸಿದವನೊಡನೆ ಗುಜರಿ ಅದ್ದಿಲಿಚ್ಚ ಹೆಜ್ಜೆ ಹಾಕಿದ.
ಸುಮಾರು ನೂರು ಹೆಜ್ಜೆ ಹಾಕಿದಾಗ ಗುಜರಿ ಅದ್ದಿಲಿಚ್ಚ “ಎಂಡೆ ಅಲ್ಲಾ, ಹೇಗೂ ಸಾಯುತ್ತಿದ್ದೇನೆ. ನೀರಿಲ್ಲದೆ ಸಾಯುವುದು ಬೇಡ. ನೀವಿಲ್ಲೇ ಇರಿ. ನಾನು ನೀರು ತಗೊಂಡು ಬರುತ್ತೇನೆ ಎಂದು ಅರಬ್ಬಿ ಮತ್ತು ಉರ್ದು ಮಾತಾಡುವವರ ಹತ್ತಿರ ಬಂದ. ಅವರು ಸಿಟ್ಟಿನಿಂದ ಕಣ್ಣು ಕೆಕ್ಕರಿಸಿದಾಗ ನೀರು ಬೇಕೆಂದು ಕೈ ಸನ್ನೆಯಲ್ಲಿ ಕೇಳಿದ. ಅವರಲ್ಲೊಬ್ಬನು ಓಡಿ ಹೋಗಿ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನದಿಂದ ನೀರಿನ ಬಾಟಲು ತೆಗೆದುಕೊಂಡು ಬಂದು ಗುಜರಿ ಅದ್ದಿಲಿಚ್ಚನ ಮುಂದೊಡ್ಡಿದ.
ಗುಜರಿ ಅದ್ದಿಲಿಚ್ಚ ಈಗ ಅರಬಿ ಮತ್ತು ಉರ್ದು ಮಾತಾಡುವ ಮಂದಿಗಳ ಮಧ್ಯದಲ್ಲಿದ್ದ. ಬಿಳಿ ಮುಂಡಾಸಿನ ಮುಲ್ಲಾನು ಸಾಕಷ್ಟು ದೂರದಲ್ಲಿ ಕ್ಷೇಮವಾಗಿರುವುದನ್ನು ಖಚಿತ ಪಡಿಸಿಕೊಂಡು ಬಲಗೈಯಲ್ಲಿ ಬಾಟಲಿಯಿಂದ ನೀರು ಕುಡಿಯುತ್ತಾ ಎಡಗೈಯನ್ನು ಪಚ್ಚೆ ಬೆಲ್ಟಿನತ್ತ ಸರಿಸಿ ನಾಲ್ಕು ಬಾಂಬುಗಳ ಬಟನ್ನು ಗಟ್ಟಿಯಾಗಿ ಅದುಮಿದ.
*****