ಆಗಸ್ಟ್ ತಿಂಗಳು ಮುಗಿಯಿತು; ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ನಡೆಯಿತು; ಕೆಂಪುಕೋಟೆಯ ಮುಂದೆ ಪ್ರಧಾನಿಗಳ ಭಾಷಣ, ಆಯಾ ರಾಜ್ಯಗಳಲ್ಲಿ ರಾಜ್ಯಪಾಲರು-ಮುಖ್ಯಮಂತ್ರಿ ಭಾಷಣಗಳು ಬಿರುಮಳೆಯಲ್ಲಿ ನೆಲದ ಬೀಜಗಳು ಮೊಳಕೆಯೊಡೆಯುವ ಬದಲು ಮಣ್ಣು ಮುಕ್ಕಿದ ಅನುಭವ; ಭಾಷಣಗಳಲ್ಲೇ ಬೇರು ಬಿಡುವ ದೇಶದ ನಾಯಕರು ಪ್ರಜೆಗಳನ್ನೆಲ್ಲ ಪರದೇಸಿ ಮಾಡುತ್ತಿದ್ದಾರೆಂಬ ಆತಂಕ, ವಿದೇಶಿ ಹುನ್ನಾರಗಳಿಗೆ ತಲೆಕೊಟ್ಟು ಸ್ವಾತಂತ್ರದ ಪಾಠ ಒಪ್ಪಿಸುವ ‘ದೇಶ ನಾಯಕರು’ ನಿಜವಾದ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯವನ್ನು ನೆಲೆಗೊಳಿಸುವುದು ಕನಸೇನೋ ಎಂಬ ನಿರಾಶೆ ಆವರಿಸುತ್ತಿದೆ. ವಿದೇಶಿ ಸಾಲ, ವಿದೇಶಿ ಆರ್ಥಿಕ ನಿಯಂತ್ರಣ, ಉದಾರೀಕರಣದ ನೆಪದಲ್ಲಿ ಉಳ್ಳವರನ್ನು ಓಲೈಸುತ್ತ ಬಡಬಗ್ಗರಿಗೆ ಮುಳ್ಳಾಗುತ್ನ ಮುಕ್ತ ಮಾರುಕಟ್ಟೆಯ ಮಾತಾಡುವ ವ್ಯವಸ್ಥೆಗೆ ಮನಸೋಲುತ್ತಿರುವ ನಾಯಕಮಣಿಗಳಿಗೆ ನೆಲದ ಗುಣ ಉಳಿದಿಲ್ಲ. ಜನರೇ ನಾಯಕರಾಗಿ ನ್ಯಾಯ ಪಡೆಯುವ ದಿನಕ್ಕಾಗಿ ಎಷ್ಟು ಕಾಯಬೇಕೊ ಗೊತ್ತಿಲ್ಲ.
ಅಂತೂ ಈ ವರ್ಷವೂ ಆಗಸ್ಟ್ ಹದಿನೈದು ಬಂತು; ಮುಂದಿನ ವರ್ಷವೂ ಬರುತ್ತದೆ. ಧ್ವಜಾರೋಹಣ ಮಾಡುವುದನ್ನು ನಾವು ನೋಡುತ್ತೇವೆ. ಮಾತುಗಳಲ್ಲಿ ಹೂತು ಹೋಗುತ್ತೇವೆ. ಮೂಕವೇದನೆಯಲ್ಲಿ ಇತಿಹಾಸವಾಗುತ್ತೇವೆ.
ಈ ಸಾರಿಯ ಆಗಸ್ಟ್ ಹದಿನೈದರಂದು ನಾನು ಸ್ವತಂತ್ರವಾಗಿ ಮೂಕವಾಗಿರಬಯಸಿದೆ. ಮಕ್ಕಳೊಂದಿಗೆ ಕೃಷ್ಣರಾವ್ ಪಾರ್‍ಕಿಗೆ ಹೋದೆ, ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ ನನ್ನ ಮನೆಗೆ ಹತ್ತಿರವಾಗಿರುವ ಈ ಪಾರ್ಕ್ ನನ್ನ ಬಾಡಿಗೆ ಮನೆಗೆ ತೀರ ಸಮೀಪದಲ್ಲಿದೆ. ಹಿಂದೆ ವಾರಕ್ಕೊಮ್ಮೆಯಾದರೂ ನನ್ನ ಮಕ್ಕಳೊಂದಿಗೆ ಈ ಪಾರ್ಕಿಗೆ ಬಂದು ಕೂತು, ಹೋಗುತ್ತಿದ್ದ ನನಗೆ ಇತ್ತೀಚೆಗೆ ಅದು ಸಾಧ್ಯವಾಗಿರಲಿಲ್ಲ. ಈಗ ನನ್ನ ಮಕ್ಕಳು ತೀರಾ ಚಿಕ್ಕವರು ಅಲ್ಲ; ನಿಜವಾದ ಮಾನಸಿಕ ಸ್ವಾತಂತ್ರ್ಯಕ್ಕೆ ಹವಣಿಸುತ್ತಿರುವ ಅವರನ್ನು ಪಾರ್ಕಿಗೆ ಬರಲು ಒತ್ತಾಯಿಸಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದೇನೆಂದು ಅನ್ನಿಸಿದರೂ ಅವರು ಇಲ್ಲವೆನ್ನಲಾಗದೆ ನನ್ನೊಂದಿಗೆ ಬಂದಾಗ ಏನೋ ಒಂದು ರೀತಿ ಸಮಾಧಾನವಾಯಿತು. ಅವರಿಗೂ ನಾನು ಜೊತೆ ಸಿಕ್ಕಿದ್ದಕ್ಕೆ ಸಮಾಧಾನವಾದಂತೆ ಕಾಣಿಸಿತು. ಅಥವಾ ನಾನು ಹಾಗೆಂದುಕೊಂಡು ಸಮಾಧಾನ ಗೊಂಡೆನೊ ಏನೋ!
ಒಟ್ಟಿನಲ್ಲಿ ಆಗಸ್ಟ್ ಹದಿನೈದರ ಸಾಯಂಕಾಲ ಕೃಷ್ಣರಾವ್ ಪಾರ್‍ಕಿಗೆ ಬಂದೆ. ನಗರದ ಇಕ್ಕಟ್ಟಿನ ವಾತಾವರಣದಿಂದ ಪಾರಾಗಿ ನಿರಾಯಾಸ ಉಸಿರು ಬಿಡಲು ಇರುವ ಯಾತ್ರಾ ಸ್ಥಳಗಳೆಂದರೆ ಈ ಪಾರ್ಕುಗಳೆಂದೇ ಹೇಳಬೇಕು. ಬೆಂಗಳೂರಿನ ಕೆಲವು ಪಾರ್ಕುಗಳು ಹಸಿರು ಹೊದ್ದು, ರಂಗು ರಂಗಿನ ನಗೆಮುಗುಳಲ್ಲಿ, ಬೆಂದ ಮನಸ್ಸಿಗೆ ಆಹ್ಲಾದಕರವಾಗಿಯೂ, ವಿಚಿತ್ರ ವಾಗಿಯೂ, ವ್ಯಂಗ್ಯವಾಗಿಯೊ ಕಾಣಿಸುವುದುಂಟು. ಆದರೆ ಕೃಷ್ಣರಾವ್ ಪಾರ್ಕ್ ಇನ್ನೊಂದು ರೀತಿಯದು. ಬಹುಪಾಲು ಬಟಾಬಯಲಾಗಿದ್ದ ಇದಕ್ಕೆ
‘ಪಾರ್ಕ್’ ಎಂದು ಕರೆಯುವುದೇ ಒಂದು ಕಾಲದಲ್ಲಿ ಕಷ್ಟವಾಗಿತ್ತು. ಅಲ್ಲೊಂದು ಇಲ್ಲೊಂದು ಗಿಡ ಮರ ಹೂಗಳ ಉದಾಹರಣೆ ಮಾತ್ರ ಸಿಕ್ಕುತ್ತಿತ್ತು, ಈಗ ಎಷ್ಟೋ ವಾಸಿ. ಆದರೆ ಬಯಲು ಪ್ರದೇಶವೇ ಜಾಸ್ತಿ. ಆದರೇನಂತೆ ! ಬಯಲು ಸಿಕ್ಕಿಲ್ಲ!
ನಮ್ಮಂಥ ಮಧ್ಯಮ ವರ್ಗದವರ ಮಕ್ಕಳಿಗೆ ಸ್ವಾತಂತ್ರ್ಯದ ಅನುಭವ ಇಂಥ ಪಾರ್ಕುಗಳಲ್ಲೇ ಆಗಬೇಕು. ಕೈ ಎತ್ತಿದರೆ, ಕಾಲು ರಾಡಿಸಿದರೆ, ರಭಸವಾಗಿ ನಡೆದರೆ, ಕಡೆಗೆ ಕಣ್ಣು ಹೊರಳಿಸಿದರು ಕಷ್ಟವೆಂಬಂಥ ಬಾಡಿಗೆ ಮನೆಯ ಇಕ್ಕಟ್ಟಿನಲ್ಲಿ ಇರುವ ಕಟ್ಟುಪಾಡುಗಳು ಮಕ್ಕಳಿಗೆ ವಿಚಿತ್ರ ‘ಶಿಸ್ತು’ ಕಲಿಸಿಬಿಡಬಹುದು! ಇದರಿಂದ ಬಿಡುಗಡೆ-ಹೀಗೆ ಯಾವಾಗಲೊ ಪಾರ್ಕೆ೦ಬ ಬಯಲಿಗೆ ಬಂದಾಗ.
ನನ್ನ ಮಕ್ಕಳಿಗೆ ಸಿಕ್ಕಿದ ‘ಸ್ವಾತಂತ್ರ್ಯ’ದಿಂದ ನನಗೂ ಸ್ವಾತಂತ್ರ್ಯ ಸಿಕ್ಕಿದಂತಾಗಿ ಸುತ್ತಮುತ್ತ ನೋಡಿದೆ. ನಾನಾ ತರಹ ಜನ. ಒಂದುಕಡೆ ವ್ಯಾಯಾಮದಲ್ಲಿ ತೊಡಗಿದ ಯುವಕರು; ವಾಲಿಬಾಲ್ ಹಾಗೂ ಕ್ರಿಕೆಟ್ ಆಡುವ ಆಟಗಾರರು; ಮಕ್ಕಳೊಂದಿಗೆ ಕೂತು ಏನೋ ತಿನ್ನುತ್ತಿರುವ ತಾಯಿ ತಂದೆಯರು ಇಂಥ ಸಾಮಾನ್ಯ ದೃಶ್ಯದ ನಡುವೆ ಸೀಳಿಕೊಂಡು ಬಂದ ಸದ್ದು – “ಕಳ್ಳೇಕಾಯ್, ಕಳ್ಳೇಕಾಯ್”.
ಒಬ್ಬಳು ಚಿಕ್ಕ ಹುಡುಗಿ; ಆಡುವ ವಯಸ್ಸಿನ ಬಾಲೆ. ಇಲ್ಲಿ ನನ್ನ ಮಕ್ಕಳಂತಹ ಅನೇಕರು ಆಡುತ್ತಿರುವಾಗ ಆಕೆ ದುಡಿಮೆಯಲ್ಲಿ ತೊಡಗಿದ್ದಾಳೆ. ಆಕೆಯ ಮುಖದ ಮೇಲೆ ಹುಟ್ಟಿ ಸಾಯುವ ಆಸೆ ನಿರಾಸೆಗಳು ನಮ್ಮ ಸ್ವಾತಂತ್ರ್ಯದ ವ್ಯಾಖ್ಯಾನಗಳಾಗುತ್ತಿರುವಂತೆ ಅನ್ನಿಸಿತು. ಯಾರಾದರೂ ಕರೆದಾಗ ಆಸೆಗಣ್ಣು, ಚೌಕಾಶಿ ಮಾಡಿ ಬೇಡವೆಂದಾಗ ನಿರಾಸೆ ಛಾಯೆ. ಇದಾವುದನ್ನು ಲೆಕ್ಕಿಸದೆ ತಮ್ಮ ಪಾಡಿಗೆ ತಾವು ಹರಟೆಯಲ್ಲಿ; ನಗುವಿನಲ್ಲಿ ಮಗ್ನರಾದಾಗ ಗುಂಪಿನ ನಡುವೆ ಒಂಟಿ ಜೀವವಾಗಿ ಹೋಗುತ್ತಿರುವ ಕಡಲೆಕಾಯಿಯ ಹುಡುಗಿ ಕಳೆದುಹೋಗುತ್ತಿರುವ ಆತ್ಮಸಾಕ್ಷಿಯಂತೆ ಕಂಡಳು.
ಕೂಡಲೇ ಆಕೆಯನ್ನು ಕರೆದೆ; ಬಂದಳು; ನಿಂತಳು; ಕಡ್ಲೆಕಾಯಿಯ ಬುಟ್ಟಿಯನ್ನು ಕೆಳಗಿಟ್ಟು ಕೂತಳು. ನಾನು ಮೊದಲು ಒಂದೆರಡು ಕಡ್ಲೆಕಾಯಿಯನ್ನು ಪರೀಕ್ಷಿಸಿ ನಂತರ ಬೇಕು ಅಥವಾ ಬೇಡವೆಂದು ಹೇಳಬಹುದೆಂದು ಭಾವಿಸಿ ಸ್ಯಾಂಪಲ್ ಕೊಡಬಂದಳು. ನಾನು ‘ಎರಡು ರೂಪಾಯಿ ಕಡ್ಲೆಕಾಯಿ ಕೊಡು’ ಎಂದೆ. ಉತ್ಸಾಹದಿಂದ ಕೊಟ್ಟಳು. ನಾನು ಕೂಡಲೇ ‘ಎರಡು ರೂಪಾಯಿ ಕೊಡಲಿಲ್ಲ. ಆಕೆಯೊಂದಿಗೆ ಮಾತನಾಡಬೇಕೆನ್ನಿಸಿ ಕೇಳಿದೆ:
‘ಯಾಕಮ್ಮಾ ಓದೋಕ್ ಹೋಗಲ್ವ ನೀನು ?’
‘ನಾನ್ ಓದೋಕೋದ್ರೆ ವೊಟ್ಟೆ ಎಂಗ್ ತುಂಬ್‌ತೈತೆ ?’
-ಮರುಪ್ರಶ್ನೆ ಹಾಕಿದಳು. ಹೊಟ್ಟೆಬಟ್ಟೆಗೂ ಓದಿಗೂ ಎಂಥ ಸಂಬಂಧ! ವಿದ್ಯೆ ಎನ್ನುವುದು ಕೇವಲ ಬೌದ್ಧಿಕ ಪ್ರಶ್ನೆಯಲ್ಲ; ಅದೊಂದು ಸಾಮಾಜಿಕ ಆರ್ಥಿಕ ಪ್ರಶ್ನೆಯೂ ಹೌದು. ಹೀಗೆ ಯೋಚಿಸುತ್ತ ಮತ್ತೆ ಕೇಳಿದೆ-
‘ಹಾಗಾದ್ರೆ ನಿನಗೆ ಅಕ್ಷರ ಬರೆಯೋಕೆ ಓದೋಕೆ ಸ್ವಲ್ಪಾನು ಬರಲ್ಲ?’
‘ಬರ್‍ತಾ ಇತ್ತು. ಇವಾಗ ಅದಕ್ಕೆಲ್ಲ ಪುರ್‍ಸತ್ತಿಲ್ಲ. ಮೂರ್‍ನೇಕ್ಲಾಸ್‌ಗೇ ಎಲ್ಲಾ ಕೈಬಿಟ್ಟು ಕಡ್ಲೆಕಾಯ್ ಮಾರ್‍ತೀವ್ನಿ’
‘ನಿಮ್ಮ ಮನೇಲಿ ಇನ್ನಾರೂ ಓದ್ತಾ ಇಲ್ವಾ ?’
‘ನನ್ನ ತಮ್ಮ ಇಸ್ಕೂಲಿಗೆ ಸೇರ್‍ಅವ್ನೆ’
‘ದಿನಕ್ಕೆ ಎಷ್ಟ್ ದುಡೀತೀಯಮ್ಮ?’
‘ಎಲ್ಲಾ ನಿಮ್ಮಂಥೋರ್ ಕೈನಾಗೈತೆ ಸೋಮಿ. ನಿಮ್ಮಂತೋರ್ ಕೊಂಡ್ಕಂಡ್ರೆ ನಮ್ಗೂ ನಾಲಕ್‌ಕಾಸು. ಇಲ್ದಿದ್ರೆ ಒಣ ಗಣೇಸ. ಬರೀ ಮಾತಾಡ್ತಾ ಇದ್ರೆ ಮುಂದಿನ್ ಗಿರಾಕಿ ತಪ್‌ತೈತೆ. ದುಡ್ಕೊಡಿಸೋಮಿ
ಬ್ಯಾಗ’.
ನನ್ನ ಮಾತು ಕಟ್ಟಿತು. ಎರಡು ರೂಪಾಯಿ ಕೊಟ್ಟು ಆಕೆ ಯಥಾ ಪ್ರಕಾರ ‘ಕಡ್ಲೇಕಾಯ್’ ಎಂದು ಕೂಗುತ್ತಾ ಹೋಗುತ್ತಿರುವುದನ್ನು ನೋಡಿದೆ, ಕರುಳು ಕಡೆದಂತಾಯಿತು.
ಮತ್ತೆ ಪಾರ್ಕಿನಲ್ಲೊಮ್ಮೆ ಕಣ್ಣು ಹಾಯಿಸಿದೆ. ‘ಸ್ವಾತಂತ್ರ್ಯ’ ಸಿಕ್ಕಿದ ಸಂತೋಷದಲ್ಲಿ ನಲಿಯುತ್ತಿರುವ ಅನೇಕ ಮಕ್ಕಳು; ಬಾಡಿಗೆ ಮನೆ ಬಿಡುಗಡೆಯಿಂದ ಇಲ್ಲಿ ನಿರಾತಂಕ ಕ್ಷಣಗಳನ್ನು ಕಳೆಯುತ್ತಿರುವ ಗಂಡ-ಹೆಂಡತಿಯರು ; ಆಟದಲ್ಲಿ ತೊಡಗಿರುವ ಹುಡುಗರು; ಅಲ್ಲಲ್ಲಿ ಕೂತು ಲೋಕಾಭಿರಾಮದಲ್ಲಿರುವ ಮುದುಕರು ; ಇವರೆಲ್ಲರ ನಿರಾಳ ಸನ್ನಿವೇಶವನ್ನು ಬಳಸಿಕೊಳ್ಳಲು ಒದ್ದಾಡುತ್ತಿರುವ ಕಡಲೆಕಾಯಿ ಹುಡುಗಿಯ ಯಾತನೆ. ಎಲ್ಲವನ್ನೂ ನೋಡುತ್ತ ಹೋದಂತೆ ತಂತಿಯಿಂದ ಸುತ್ತುವರಿದ ಪಾರ್ಕಿನೊಳಗೆ ಮಧ್ಯಮ ವರ್ಗದ ‘ಸಂತೋಷ’ ಮತ್ತು ಅಷ್ಟಾದರೂ ಸಿಗದೆ ತಳಮಳಿಸುವ ಕೆಳವರ್ಗದ ಕಡಲೆಕಾಯಿ ಹುಡುಗಿಯ ‘ಸಂಕಟ’ – ಇಂಡಿಯಾದ ಸ್ವಾತಂತ್ರ್ಯದ ಬಗ್ಗೆಯೇ ಅನುಮಾನ ಹುಟ್ಟಿಸಿದವು. ಮಧ್ಯಮವರ್ಗವು ಪಾರ್ಕಿನೊಳಗೆ ಪಡೆಯುತ್ತಿರುವ ಸಂತೋಷದ ಸೀಮಿತತೆ ಮತ್ತು ಕೆಳವರ್ಗದ ಕಡಲೆಕಾಯಿ ಹುಡುಗಿಯ ಸಂಕಟದ ವ್ಯಾಪಕತೆಗಳು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಎಸೆದ ಸವಾಲುಗಳೆನ್ನಿಸಿ ನೀರು ಸುರಿದ ಸುಣ್ಣದ ಮನಸ್ಸಾದೆ. ಮಧ್ಯಮವರ್ಗದ ಈ ‘ಸಂಜೆ ಸ್ವಾತಂತ್ರ್ಯ’ ಆ ಹುಡುಗಿಯ ಹೊಟ್ಟೆ ಪಾಡಿಗೆ ಒಂದು ಅವಕಾಶವಾಗಬಹುದು. ಆದರೆ ಆಕೆಗೆ ಇವರಷ್ಟು ಸ್ವಾತಂತ್ರ್ಯವಿಲ್ಲವೆಂಬ ಸತ್ಯ, ಸಂಕಟದ ರೂಪ ತಾಳಿತು. ಈ ಹುಡುಗಿ ಜೊತೆ ನನ್ನ ಮನಸ್ಸಿಗೆ ಮೂಡುತ್ತ ಮುಳುಗುತ್ತ ಬಂದವರೆಂದರೆ ಲಾಟರಿ ಟಿಕೆಟ್ ಮಾರುವ ಹುಡುಗರು. ಹೋಟೆಲ್ ಕ್ಲೀನರ್‌ಗಳಾಗಿರುವ ಕಂದಮ್ಮಗಳು. ಬೀದಿಬದಿಯ ಕಾಗದದ ಚೂರುಗಳನ್ನು ಆಯ್ದುಕೊಳ್ಳುವ ವ್ಯಕ್ತಿಗಳು. ಭಿಕ್ಷೆ ಬೇಡುತ್ತ ಮೈಯೇ ಬಾಯಾಗಿ ನಿಂತ ಬಾಲಕ-ಬಾಲಕಿಯರು, ಕಂಕುಳಲ್ಲಿ ಕೂಸಿಟ್ಟು ಕೊಂಡು ಕಣ್ಣಲ್ಲಿ ಕಥೆ ಹೇಳುವ ಹೆಂಗಸರು- ಹೀಗೆ ಒಬ್ಬರಲ್ಲ, ಇಬ್ಬರಲ್ಲ, ಅವರೇ ಹರಿದ ಬಟ್ಟೆಗಳಲ್ಲಿ ಆಸೆ ಆಕಾಂಕ್ಷೆಗಳೆಲ್ಲಾ ಸೋರಿ ಹೋದ ಭಾರತದ ‘ಸತ್ಪ್ರಜೆಗಳು’.
ಒಳಗೆ ಉರಿಯುವ ವೇದನೆಯಿಂದ ಹೊರಬರಲು ಸುತ್ತಮುತ್ತ ನೋಡಿದೆ. ಕತ್ತಲು ಆವರಿಸುತ್ತಿತ್ತು. ಮಕ್ಕಳನ್ನು ಮನೆಗೆ ಕರೆದೊಯ್ಯಲು ಅಪ್ಪ ಅಮ್ಮಂದಿರು ಆಟ ನಿಲ್ಲಿಸುವ ಆಜ್ಞೆ ಮಾಡುತ್ತಿದ್ದಾರೆ. ಕೇಳದೆ ಇದ್ದಾಗ ಗದರಿಸುತ್ತಿದ್ದರು. ಇನ್ನೂ ಕೆಲವರ ಕೆನ್ನೆಗೆ ಕೊಟ್ಟು ಕಣ್ಣಲ್ಲಿ ಹನಿ ಬರಿಸಿ ಬೆದರಿಸುತ್ತಿದ್ದರು. ಕತ್ತಲೆಯೊಂದಿಗೆ ತಮ್ಮ ಸ್ವಾತಂತ್ರ್ಯ, ಸಂತೋಷಗಳು ಸತ್ತು ಹೋಗುತ್ತಿರುವ ಅನುಭವದಲ್ಲಿ ಮಕ್ಕಳು ಅಳುತ್ತಿದ್ದಾರೆ ; ದುಃಖವನ್ನು ಭಯದಲ್ಲಿ ಬತ್ತಿಸಲು ಪ್ರಯತ್ನಿಸುತ್ತ ಬಿಕ್ಕುತ್ತಿದ್ದವು. ನಾನು ನನ್ನ ಮಕ್ಕಳನ್ನು ಕೂಗಿ ಕರೆದೆ ; ಒತ್ತಾಯಪೂರ್ವಕವಾಗಿ ಗದರಿಸಿದೆ. ಹತ್ತಿರ ಹೋಗಿ ಆಟ ನಿಲ್ಲಿಸಲು ಹೇಳಿ ಪ್ರೀತಿಯಿಂದ ಕೈಹಿಡಿದು ಕರೆದೊಯ್ಯುತ್ತಿದ್ದಾಗ ಅವರು ಬಂಧನಕ್ಕೊಳಗಾದ ಭಾವದಲ್ಲಿರುವಂತೆ ಕಂಡು ಸ್ವಾತಂತ್ರದ ಅರ್ಥ ಹುಡುಕತೊಡಗಿದೆ.
ಕತ್ತಲಾಗುವವರೆಗೆ ಈ ಪಾರ್ಕಿನಲ್ಲಿ ಸಂಭ್ರಮಿಸಿ ಈಗ ‘ಬಂಧನ ಕೊಳಗಾದ’ ಮಕ್ಕಳೇ ಬೆಳಗಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಅಧ್ಯಾಪಕರು ಆಜ್ಞೆ ಮೀರಲಾಗದೆ ಇಸ್ತ್ರಿ ಮಾಡಿದ ಮನಸ್ಸಿನಿಂದ ಸ್ವಾತಂತ್ರ್ಯದ ಪಾಠ ಒಪ್ಪಿಸಿ ಬಂದಿದ್ದರು. ಹೀಗೆ ಯೋಚಿಸುವತ್ತಿರುವಾಗ ಸಂಜೆಗತ್ತಲು ಸೀಳಿಕೊಂಡು ‘ಕಡ್ಲೇಕಾಯ್’ ಎಂಬ ಕರೆ ಕೇಳಿ ಬಂತು. ಈ ಕರೆ ತ್ರಿವರ್ಣ ಧ್ವಜವನ್ನು ಗಡಗಡ ನಡುಗಿಸಿದಂತಾಗಿ ಮತ್ತೆ ಪಾರ್ಕಿನ ಕಡೆ ನೋಡಿದೆ. ಸ್ವಾತಂತ್ರ್ಯದ ಸಂಕಟಕ್ಕೆ ಸಂಕೇತವೆಂಬಂತೆ ಆ ಹುಡುಗಿ ರಪರಪನೆ ಅತ್ತಿಂದಿತ್ತ ಓಡಾಡುತ್ತಿದ್ದಳು.
*****
೧೧-೯-೧೯೯೪